ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಕಣ – 2
ಕ್ರಶ್ ಕವಿತೆಗಳು – ಸುನಿಲ್
ಕ್ರಶ್ ಎನ್ನುವ ಪದ ಆಂಗ್ಲಭಾಷೆಯದಾದರೂ, ಈ ಪದ ಭಾವಲೋಕವನ್ನು ಕೆಣಕುವ ತುಂಟತನವನ್ನು ತನ್ನೊಳಗೆ ಕಾಪಿಟ್ಟುಕೊಂಡಿದೆ. ಆಧುನಿಕ ಕಾಲಘಟ್ಟದ ಭಾವಲೋಕವನ್ನು ಆವರಿಸಿಕೊಂಡಿರುವ ಜಾಗತೀಕರಣವೆಂಬ ಬಿಸಿತುಪ್ಪವು ತಂದೊಡ್ಡುತ್ತಿರುವ ಆಕರ್ಷಣೆಗಳು, ವಿಕರ್ಷಣೆಗಳು, ಕೊಳ್ಳುಬಾಕ ಸಂಸ್ಕೃತಿಯ ಪ್ರದರ್ಶನ, ಹೀಗೆ ಎಲ್ಲಾ ಸಂವೇದನೆಗಳು ಜಾಹೀರಾತು ಆಗುತ್ತಿರುವ ಈ ದಿನಮಾನಗಳಲ್ಲಿ ಪ್ರೇಮವೆಂಬುದು ವ್ಯಾಪಾರದ ಲೇಪನದೊಂದಿಗೆಯೇ ನಮ್ಮ ಕಣ್ಣು ಹಾಗೂ ಮೈ-ಮನಗಳನ್ನು ಆವರಿಸಿಕೊಳ್ಳುತ್ತಿದೆ.
ಕೃತಕತೆಯೊಂದಿಗೆ ನಮ್ಮ ಭಾವಲೋಕವನ್ನು ಕ್ರಶ್ ( ಹಿಂಡುವ) ಮಾಡುವ ಕಾವ್ಯದ ಮಾದರಿಗಳೂ ಕೂಡ, ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿ ಬರುತ್ತಿರುವುದು, ಕನ್ನಡವು ಹೊಸಕಾಲದ ಪ್ರೇಮಸ್ವರೂಪವನ್ನು ತನ್ನೊಳಗೆ ಮತ್ತೊಮ್ಮೆ ಮಗದೊಮ್ಮೆ ಹಡೆಯುವ ಪ್ರಸವದಂತೆ ಎಂದರೆ ತಪ್ಪಾಗಲಾರದು.
ಪ್ರೇಮ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ಪ್ರೇಮವೆಂದರೆ, ಪ್ರಕೃತಿ ಮನುಷ್ಯನಾದಿಯಾಗಿ ಸಕಲ ಚರಾಚರ ಜೀವರಾಶಿಗಳಲ್ಲಿಯೂ ಹೃದಯದ ಬಡಿತದ ಲಯದಲ್ಲಿ ತುಂಬಿಸಿಟ್ಟಿರುವ ಅಮೃತ ಕಳಶ. ಪ್ರೇಮವಿಲ್ಲದೇ ಸಂತೋಷವಿಲ್ಲ, ದುಃಖವೂ ಸಹ. ಎಂಬ ಮಾತು ದಿನನಿತ್ಯದ ನಮ್ಮ ಮಾನಸಿಕ ವ್ಯಾಪಾರಗಳಲ್ಲಿ ಸಾಬೀತಾಗುತ್ತಲೇ ಇರುತ್ತದೆ. ಮಾತು ಬಾರದ ಪ್ರಾಣಿ ಪಕ್ಷಿಗಳಲ್ಲಿ ತನ್ನ ಸಂತಾನದ ಕುರಿತು ಇರುವ ಕಾಳಜಿಯನ್ನೇ ಗಮನಿಸಿದರೆ, ಕೋಳಿ ತನ್ನ ಮರಿಗಳಿಗೆ ಆಹಾರವನ್ನು ಹುಡುಕಿಕೊಡುವ ಪರಿಯನ್ನು ನೋಡಿ, ಅಲ್ಲಿ ತಾಯಿಯ ಪ್ರೇಮ ಎಂತಾದ್ದು ಎಂಬುದನ್ನು ಅರ್ಥಮಾಡಿಕೊಳ್ಳಲು ಮಾತುಗಳ ಸಹಾಯ ಬೇಕಾಗಿರುವುದಿಲ್ಲ. ಪ್ರೀತಿ ಇಲ್ಲದ ಮೇಲೆ ಜಗತ್ತು ಮತ್ತೆ ಮೆತ್ತೆ ಹೊಸದಾಗಿ ಸೃಜಿಸುತ್ತಾ,ಪಯಣಿಸುತ್ತಾ, ಪಲ್ಲವಿಸುತ್ತಾ, ತನ್ನ ಪಯಣವನ್ನು ಮುಂದುವರೆಸುತ್ತಿರಲಿಲ್ಲ ಇಂತಹ ಪ್ರೇಮವು ಸಹಜವಾಗಿ ಎಲ್ಲರೊಳಗೆ ಈ ಜಗತ್ತನ್ನು ಆವರಿಸಿರುವ ಗಾಳಿಯಂತೆ, ನೀರಿನಂತೆ, ಆಗಸದಂತೆ ಇರಬೇಕು. ಆದರೆ ಪ್ರೇಮದ ಹೆಸರಿನಲ್ಲಿ ನಡೆಯುವ ಹಿಂಸೆ, ಕ್ರೌರ್ಯ ಸಹಿಸಲು ಅಸಾಧ್ಯವಾಗಿದೆ.
ಪ್ರೇಮ ಎಂಬ ಮಾತನ್ನು ಕೇಳಿಸಿಕೊಂಡಾಗಲೆಲ್ಲಾ ನನಗೆ ಬುದ್ಧಗುರುವಿನ ‘ಮೈತ್ರಿ’ ಎಂಬ ಮಾತು ನೆನಪಾಗುತ್ತದೆ. ಮೋಡ ಕಟ್ಟಿ ಮಳೆ ಸುರಿದು, ಭೂಮಿ ತಣ್ಣಗಾಗುತ್ತದೆ. ಸುರಿದ ಮಳೆ ಸಕಲ ಜೀವರಾಶಿಗೂ ಚೈತನ್ಯದಾಯಿನಿಯಾಗಿ ಹರಿದು ಕೆರೆ,ಹಳ್ಳ, ಬಾವಿಗಳೆನ್ನದೆ ಎಲ್ಲೆಲ್ಲಿಯೂ, ಕಸ-ಕಡ್ಡಿ ಕಲ್ಮಶಗಳೆನ್ನದೆ ತನ್ನ ಅಗಾಧತೆಯನ್ನು ಮನಗಾಣಿಸಿ ಆವಿಯಾಗಿ ಮತ್ತೆ ಮಳೆಯಾಗಿ ಮೋಡಕಟ್ಟುವ ಕ್ರಿಯೆ ಇದೆಯಲ್ಲ ಇದು ಬುದ್ಧಗುರು ಹೇಳಿದ ಮೈತ್ರಿ ಭಾವ. ಎಲ್ಲರೊಳಗೊಂದಾಗುವ ದೈವೀ ಭಾವವೇ ಪ್ರೇಮ.
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದು ಇದಕು ಎದಕು
ಆತ ಕೊಟ್ಟ ವಸ್ತು ವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು
– ಬೇಂದ್ರೆ
ಬೇಂದ್ರೆಯವರ ಈ ಕಾವ್ಯದಲ್ಲಿ ಒಂದು ಸಹಜ ಆನಂದದ ನೆಲೆಯಿದೆ. ಅನೂಹ್ಯ ಪ್ರೇಮದ ಹುಡುಕಾಟವಿದೆ. ಪ್ರೇಮದ ಸ್ವರೂಪವೇ ಅಂತದ್ದು ಸದಾ ಸಹಜತೆಯಲ್ಲಿಯೇ ಜನಿಸಿ ಸಹಜತೆಯಲ್ಲಿಯೇ ತನ್ನನ್ನು ಪೂರ್ಣಗೊಳಿಸಿಕೊಳ್ಳುವ ಜೀವಶಕ್ತಿ ಅದಕ್ಕಿದೆ. ಹಾಗಾಗಿ ಬೇಂದ್ರೆ “ಆತ ಕೊಟ್ಟ ವಡವೆ ವಸ್ತು ನನಗೂ ಅವಗೂ ಗೊತ್ತು” ಎನ್ನುತ್ತಾರೆ. ಪ್ರೇಮ ವ್ಯಾಪಾರವಲ್ಲ ಆದರೂ ಅಲ್ಲಿ ಕೊಟ್ಟು ತೆಗೆದುಕೊಳ್ಳುವ ಒಂದು ಜೀವ ಸಂವಾದ ಏರ್ಪಡುತ್ತದೆ ಅದೇ ಪ್ರೇಮ. ಅಂತಹಾ ಪ್ರೇಮ ಎಂದಿಗೂ ಪ್ರಚಾರ ಬಯಸುವುದಿಲ್ಲ. ಒಲವು ಮಾತ್ರವೇ ಜಗತ್ತಿನ ಸಮಸ್ಯೆಗಳಿಗೆ ಜೀವದ್ರವ್ಯವಾಗುತ್ತದೆ ಎಂಬ ಮಾತು ಬೇಂದ್ರೆಯವರು ಈ ಜಗಟತ್ತಿಗೆ ಹಾಕಿಕೊಟ್ಟ ಒಲವಿನ ಸಂವಿಧಾನ.
ದೇವ ಲೀಲೆಯೊ ಕಾಣೆ
ಕರ್ಮ ಜಾಲವೋ ಕಾಣೆ
ಅದು ನಮ್ಮ ಬುದ್ದಿಯಾಚೆಗಿನ ಮಾತು
ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು
ಭವದಲ್ಲಿ ಕಾಣೆ ಮನಗಂಡ ಮಾತು
– ಮಧುರಚೆನ್ನ
ಬೇಂದ್ರೆಯವರು ಒಲವನ್ನು ಪ್ರಚಾರ ಬಯಸದ ಸಹಜ ಕ್ರಿಯೆ ಎಂದರೆ, ಮಧುರಚೆನ್ನರು ಪ್ರೇಮವೆಂಬುವುದು ಬುದ್ಧಿಯಾಚೆಗಿನ ಮಾತು ಎನ್ನುವ ಮೂಲಕ ಪ್ರೇಮವು ಹೃದಯ ಸಂವಾದಿ ಎನ್ನುವ ಸತ್ಯವನ್ನು ನಮಗೆ ದರ್ಶನಮಾಡಿಸಿದ್ದಾರೆ. ಪ್ರೇಮವೆಂಬುದು ಈ ಜಗದಲ್ಲಿ ಅವತರಿಸಿ ಮನೋಗೋಚರವಾಗುವ ಲೀಲೆ ಎಂಬುದನ್ನು ತಮ್ಮ ಅನುಭಾವದ ನೆಲೆಯಲ್ಲಿ ವಿಷದೀಕರಿಸಿದ್ದಾರೆ.
ಕನ್ನಡ ಕವಿಗಳು, ಬರಹಗಾರರು, ತಾವು ಕಂಡ ಪ್ರೇಮದ ಸ್ವರೂಪವನ್ನು ಹೀಗೆ ವಿವರಿಸಿ, ತಮ್ಮದೇ ಆದ ವ್ಯಾಖ್ಯೆಗಳನ್ನು ನೀಡುತ್ತಾ ಹೋಗಿದ್ದಾರೆ. ಸುಡು ಬಿಸಿಲಿನಲ್ಲಿ ನಡೆವಾಗ, ಎಲ್ಲೋ ದೂರದಲ್ಲಿ ಕಾಣುವ ಒಂದು ನೆರಳು ಬಲಳಿದ ಮನಸ್ಸಿಗೆ ಎರೆಯುವ ತಂಪಿನ ಅನುಭವವೂ ಪ್ರೇಮವೇ ಆಗುತ್ತದೆ. ಹೀಗೆ ಬದುಕಿನ ಪ್ರತಿಯೊಂದೂ ಘಟನೆಗಳಲ್ಲೂ ಪ್ರೇಮದ ಸಾನಿಧ್ಯವು ಪೂರ್ಣದಂತೆ ಪೂರ್ಣವನ್ನು ಒಳಗೊಂಡಿದೆ.
ಗೆಳೆಯ ಸುನಿಲ್ ಅವರ ಈ ಕ್ರಷ್ ಕವಿತೆಗಳಲ್ಲಿ ಪ್ರೇಮದ ಅಂತರಗವು ಅನಾವರಣಗೊಂಡಿರುವುದನ್ನು ಕಾಣಬಹುದು. ನನಗೆ ಇವರ ಕವಿತೆಗಳಲ್ಲಿ ತುಂಬಾ ಸಂತೋಷ ಕೊಟ್ಟಿದ್ದು, ಈ ಕವಿತೆಗಳ ಮೊದಲ ಪುಟದಲ್ಲಿ “ಬೇಸರದ ಸಂಜೆಗಳಲ್ಲಿ ಗುನುಗಿಕೊಳ್ಳಲು ಬದುಕಿಗಾಗುವಷ್ಟು ಆತ್ಮ ಕವಿತೆಗಳನ್ನು ಕೊಟ್ಟ ಕಲ್ಪನೆಗಳ ಕಥಾ ನಾಯಕಿಗೆ” ಎಂಬ ಅರ್ಪಣೆ ನುಡಿಗಳು. ಈ ಮಾತುಗಳಲ್ಲಿ ಅವರ ಪ್ರೇಮದ ಸ್ವರೂಪ ಬೇಸರದ ಸಂಜೆಗಳಲ್ಲಿಯೂ ಕೈ ಹಿಡಿದು ನಡೆಸುವ ಭಾವಲೋಕದ ಸಾರಥಿ “ ಅವಳು” ಎನ್ನುವ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ. ಅವಳು ಯಾರು ? ಎನ್ನುವುದನ್ನು ಕವಿಯು ಹೇಳುವುದಿಲ್ಲ, ನೀವು ಕೇಳಲೂ ಬಾರದು.
ಹೇಳಲಾರನು ಕವಿ, ತಾಳಲಾರನು ಓದುಗ. ಈ ಇಬ್ಬರ ನಡುವೆ ನಡೆಯುವ ಕುತೂಹಲದ ವ್ಯಾಪರವನ್ನು ಬಿಟ್ಟು ನಾವು ಪ್ರೇಮದ ಸವಿಯನ್ನು ಉಂಡು ನಮ್ಮೊಳಗಿನ ಪ್ರೇಮದ ಸೆಲೆಯನ್ನು ಬತ್ತದಂತೆ ಕಾಪಾಡಿಕೊಳ್ಳಬೇಕು ಎಂಬುದು ನನ್ನ ಅನಿಅಸಿಕೆ.
ಮಾಂಕುರವಾಗುವ ಘಳಿಗೆಯು ಎಷ್ಟು ಅನೂಹ್ಯವೋ ಪ್ರೇಮವನ್ನು ಬಿಟ್ಟು ದೂರಾಗುವ ಸಂದರ್ಭವೂ ಅಷ್ಟೇ ದುಃಖದ ಪ್ರಯಾಣ
ಜೀವನಾಡಿ ಪ್ರೇಯಸಿಯೊಂದಿಗೆ
ಗರಿಗೆದರಿ ಕುಣಿದ ನೂರಾರು
ಭಾವ ಬುತ್ತಿಯನ್ನು ಅವಳಲ್ಲಿಯೇ ಬಿಟ್ಟು
ದೂರ ಸರಿಯುವ ಪ್ರತೀ ಘಳಿಗೆಯು
ಗೂಡು ತೊರೆದ ಹಕ್ಕಿಯ ಅವ್ಯಕ್ತ ಖಾಲಿತನ
ಗಕ್ಕನೆ ಆವರಿಸುತ್ತದೆ.
– ಸುನಿಲ್
ಇಲ್ಲಿ ಕವಿಯು ತಾನು ಅನುಭವಿಸಿದ ಅವ್ಯಕ್ತ ಖಾಲಿತನಗಳನ್ನು ಗೂಡು ತೊರೆದ ಹಕ್ಕಿಯ ಪರಿಸ್ಥಿತಿಗೆ ಹೋಲಿಸಿದ್ದಾರೆ. ಇಲ್ಲಿನ ಪ್ರತಿಮೆ ಮತ್ತು ರೂಪಕ ಕಾವ್ಯದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಪ್ರೇಮವೇ ಹಾಗೆ ಆನಂದದ ಆಲಿಂಗನವನ್ನು ಕೆಲವೇ ಹೊತ್ತು ಕೊಟ್ಟರು ದುಃಖವನ್ನು ಹಾಸಿ ಹೊದ್ದು ಮಲಗುವಷ್ಟು ತರುತ್ತದೆ. ಈ ಕ್ರಷ್ ಕವಿತೆಗಳ ಒಳಾಂಗಣದಲ್ಲಿ ಈ ದುಃಖ ದುಮಾನಗಳು ತೊರೆಗಳಂತೆ ಕಂಡರೂ ಇಳಿಸಂಜೆಯ ಬೇಸರವನ್ನು ನೀಗುವ ಅವಳ ಪ್ರೇಮದ ಮಹಾ ಸರೋವರದಲ್ಲಿ ಲೀನವಾಗಿ ದುಃಖಗಳೂ ಸಹ ಪ್ರೇಮದ ಸಾಂತ್ವನವನ್ನು ಪಡೆಯುತ್ತವೆ.
ಈ ಸಂಕಲನದಲ್ಲಿ ಕವಿತೆಗಳು ಚುಟುಕಾಗಿದ್ದರೂ ಅರ್ಥಕ್ಕೆ, ಭಾವ ಕೋಶದ ವಿಸ್ತರಣೆಗೆ ಯಾವುದೇ ತೊಡಕುಮಾಡುವುದಿಲ್ಲ, ಓದುಗನ ಎದೆಯೊಳಗೆ ಮಿಂಚಿಮರೆಯಾದ ಪ್ರೇಮದ ತೊರೆಗಳನ್ನು ಮತ್ತೆ ಪುಟಿಯುವಂತೆ ಮಾಡುವ ಶಕ್ತಿ ಸುನಿಲ್ ಅವರ ಈ ಕ್ರಷ್ ಕವಿತೆಗ¼ಲ್ಲಿ ಇದೆ. ಜಗತ್ತು ಒಳಿತು ಕೆಡಕುಗಳಿಂದ ತುಂಬಿ ಹೋಗಿದೆ, ಒಳಿತನ್ನು ನೋಡಿದಾಗ ಒಳಿತು ಎಂದು ಹೇಳುವ ನಿಸ್ವಾರ್ಥ, ಕೆಡುಕನ್ನು ನೋಡಿದಾಗ ಕೆಡುಕು ಎಂದು ಹೆಳುವ ಧೈರ್ಯದ ಮನಸ್ಸು ಎಲ್ಲರದಾಗಲಿ, ಕಾವ್ಯದ ಸೊಲ್ಲನ್ನು ಮೆಚ್ಚುವ ನಿಮ್ಮೊಳಗೆ ಪ್ರೇಮದ ಶಕ್ತಿ ಸದಾ ಜಿನುಗುತ್ತಿರಲಿ. ಗುಣಪೂರ್ಣವಾದದ್ದನ್ನು ಆರಿಸಿಕೊಳ್ಳುವ ಮನಸ್ಸು ಎಲ್ಲರಲ್ಲೂ ಒಡಮೂಡಿದರೆ ಎಷ್ಟು ಹಿತವಲ್ಲವೇ






0 Comments