ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಓದುಗನಿಗೆ ಚಿಂತನೆಗೆ ಹಚ್ಚುವ ಹೈಕುಗಳು

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 12

ಕೃತಿ –ಬಯಲಲಿ ಬಾನಾಡಿ – ಹೈಕುಸಂಕಲನ
ಲೇಖಕರು – ಡಾ. ವಿಜಯಕುಮಾರ್ ಜಿ ಪರುತೆ

ಹೈಕು ಎಂಬ ಆಧುನಿಕ ಕಾವ್ಯ ಪ್ರಕಾರ ಮೂಲತಃ ಜಪಾನಿನಿಂದ ಬಂದದ್ದು. ಇದೊಂದು ಸಣ್ಣ ಕಾವ್ಯ ಪ್ರಕಾರವಾಗಿದ್ದು,ಸಂಕ್ಷಿಪ್ತತೆಯೆ ಇದರ ಲಕ್ಷಣ. ಮೂರು ಸಾಲಿನ ಈ ಕಾವ್ಯ 6 ಸೆಕೆಂಡುಗಳಲ್ಲಿ ಓದಬಹುದು. ಐದು ಏಳು ಐದು ಅಕ್ಷರಗಳಲ್ಲಿ ಅಂದರೆ ಒಟ್ಟು 17 ಅಕ್ಷರಗಳ ಕಾವ್ಯ ಮಾಲೆ. ಭಾವನೆಗಳು,ವಿಚಾರಗಳು, ಅನುಭವಗಳು,ತಾತ್ವಿಕ ವಿಚಾರಗಳನ್ನು ಹೇಳುವುದೇ ಹೈಕುವಿನ ವೈಶಿಷ್ಟವಾಗಿದೆ. ಪ್ರಕೃತಿಯ ಸೊಬಗನ್ನು ಅಸ್ವಾದಿಸುವ ಮನಸ್ಸು, ನಂತರ ಅದಕ್ಕೆ ಅಕ್ಷರ ಭಾವ ನೀಡುವಲ್ಲಿ ಧ್ಯಾನಸ್ಥ ಮನಸ್ಸು ಬೇಕು, ಬದ್ಧತೆ ಬೇಕು ಅಂತಹ ಸೂಕ್ಷ್ಮ ಗ್ರಾಹಿಗಳಿಗೆ ಮಾತ್ರ ಈ ಕಾವ್ಯ ಪ್ರಕಾರ ದಕ್ಕುವುದು.

ಜಾಗತೀಕರಣದ ಪ್ರಭಾವದಿಂದ ಹಲವು ಹೊಸ ಕಾವ್ಯರೂಪಗಳು ಕನ್ನಡಕ್ಕೆ ಪರಿಚಯವಾದವು. ಅವುಗಳಲ್ಲಿ ಹನಿಗವನ, ಮುಕ್ತಕ,ತಂಕಾ, ಹೈಕು ಮತ್ತು ರೂಬಾಯಿ ಇತ್ಯಾದಿ. 16ನೇ ಶತಮಾನದಲ್ಲಿ ಹೈಕು ಪ್ರಕಾರ ಆರಂಭಗೊಂಡರೆ ಭಾರತಕ್ಕೆ ಪರಿಚಯವಾದದ್ದು 1919 ರಲ್ಲಿ ಅನುವಾದದ ಮೂಲಕ. ರವೀಂದ್ರನಾಥ್ ಟಾಗೋರ್ ಅವರು ಇದನ್ನು ಮೊದಲಿಗೆ ಪರಿಚಯಿಸಿದವರು. ನಂತರ ಕನ್ನಡಕ್ಕೆ 1960ರಲ್ಲಿ ಹೈಕು ಪ್ರಕಾರ ಪ್ರಚಲಿತವಾದರೆ, ಪ್ರಸ್ತುತ ದಿನಮಾನಗಳಲ್ಲಿ ಹಲವಾರು ಮಹತ್ವದ ಹೈಕು ಲೇಖಕರು ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೈಕು ಎಂದರೆ ದೀರ್ಘವಾದ ವಾಕ್ಯ ಬರೆದು ಕಟ್ಟುವುದಲ್ಲ, ಪ್ರತಿ ಪದವು ಪ್ರಮಾಣಬದ್ಧ ವಾಗಿರಬೇಕು. ಇದೊಂದು ಕ್ಲಿಷ್ಟಕರವಾದ ರಚನೆ ಎಂದೇ ಹೇಳಬಹುದು ಅದನ್ನು ವಿಜಯಕುಮಾರ ಪರುತೆ ಅವರು ಸಹಜವಾಗಿ ದಕ್ಕಿಸಿಕೊಂಡಿದ್ದಾರೆ. ಬಯಲಲಿ ಬಾನಾಡಿ ಅವರ ಜೀವನಾನುಭವದ ಮೂಲಕ ಹೊರಹೊಮ್ಮಿದೆ. ಈ ಸಂಕಲನದಲ್ಲಿ 449 ಹೈಕುಗಳಿವೆ. ಮಲ್ಲಿನಾಥ ಎಸ್ ತಳವಾರ್ ಅವರು ಕೃತಿಯ ಆರಂಭದಲ್ಲಿ ಹೈಕುವಿನ ಕುರಿತು ಒಂದು ಉತ್ತಮ ಪರಿಚಯಾತ್ಮಕ ಲೇಖನ ಬರೆದು ಹೊಸ ಓದುಗನಿಗೆ ಹೈಕು ಕಾವ್ಯ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಸ್ವತಃ ಹೈಕು ರಚನಾಕಾರರಾದ ಹೊನ್ಕಲ್ ಅವರು ಕೃತಿಗೆ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.

ಪರುತೆಯವರ 449 ಹೈಕುಗಳು ಪ್ರಕೃತಿ, ಪ್ರೀತಿ, ಪ್ರೇಮ, ವಿರಹದ ಜೊತೆಗೆ ಆಧ್ಯಾತ್ಮದ ಅಂಶಗಳನ್ನು ಇದರಲ್ಲಿ ಕಾಣಬಹುದು. ಕೃತಿಯ ಮೊದಲ ಹೈಕು ಹೀಗೆ ಸಾಗುತ್ತದೆ.

“ಎಲೆ ಮರೆಯ
ಕಾಯಿ, ಮೋಡ ಮರೆಯ ಚಂದ್ರ ಕ್ಷಣಿಕ “
ಕಾಲು ಚಕ್ರ ತಿರುಗುತ್ತಲೇ ಇರುತ್ತದೆ ಹಾಗೆಯೆ ಬದುಕಿನದು ಕೂಡ. ಇಲ್ಲಿ ಯಾವುದು ಶಾಶ್ವತವಲ್ಲ, ಬದಲಾವಣೆ ಪ್ರಕೃತಿಯ ನಿಯಮ ಎಂಬಂತೆ ಜೀವನದ ನೈಜ ಸತ್ಯವನ್ನು ಮೂರು ಸಾಲುಗಳ ಅಥವಾ 17 ಅಕ್ಷರಗಳ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
“ಕಾಮನಬಿಲ್ಲು
ಕರಗಿ ಹೋಗುವಂತೆ ವಯಸ್ಸು ಸಹ”
ಈ ಮೊದಲು ಹೇಳಿದಂತೆ ಕಾಮನಬಿಲ್ಲು ಮತ್ತು ಮನುಷ್ಯನ ಜೀವಿತಾವಧಿ ಎರಡು ಕ್ಷಣಿಕ. ಬಣ್ಣದ ಬದುಕಿನ ತೆರೆ ಯಾವಾಗ ಕಳಚಿಕೊಳ್ಳುವುದು ಎಂಬುದು ಯಾರು ಅರಿಯರು. ಬದುಕಿನ ನೈಜ ಸತ್ಯವನ್ನು ಸರಳವಾಗಿ ಮನಮುಟ್ಟುವಂತೆ ಬಿಂಬಿಸಿದ್ದಾರೆ.
“ಧರೆಗೆ ಮಳೆ
ಇಳೆಗೆ ಸ್ನಾನ, ರೈತ ಮುಖದ ಕಳೆ”
ಮಳೆ,ಇಳೆ, ಕಳೆ ಎಂಬ ಪ್ರಾಸಾಕ್ಷರದ ಜೊತೆಗೆ ಪ್ರಕೃತಿಯ ಚಿತ್ರಣವನ್ನು ನೀಡಿದ್ದಾರೆ. ಜೀವ ಜಲ ಇಲ್ಲದಿದ್ದರೆ ಭೂತಾಯಿ ಅದನ್ನು ನಂಬಿದ ಸಕಲ ಜೀವರಾಶಿಗಳು ಕಳಾಹೀನವಾಗುತ್ತವೆ ಎಂದಿದ್ದಾರೆ. ಸಾಕಷ್ಟು ಹೈಕುಗಳು ಮಳೆಯ ಕುರಿತಾಗಿಯೇ ಇವೆ.
“ಕಪ್ಪೆ ಮದುವೆ
ಮಳೆ ತರದು, ಬಂಜೆ ಹೆರಲಾಗದು”
ಇದೇ ಭಾವ ಮೂಡುವ ಇನ್ನೊಂದು ಹೈಕು ಹೀಗಿದೆ
“ಕಪ್ಪೆ ಮದುವೆ
ನಡೆದರು, ಮಳೆಯ
ಗೈರು ಹಾಜರು”
ಇಳೆಗೆ ಮಳೆ ಅವಶ್ಯಕ, ಅದರ ಬರುವಿಕೆಗಾಗಿ ಅನೇಕ ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ. ಪ್ರಕೃತಿಯನ್ನು ಕಾಪಿಟ್ಟುಕೊಳ್ಳದೆ ಏನೆಲ್ಲಾ ಹುಚ್ಚಾಟ ಮಾಡಿದರು ಮಳೆ ಬರುವುದಿಲ್ಲ. ಅದಕ್ಕಾಗಿ ಪ್ರಕೃತಿಯನ್ನು ರಕ್ಷಿಸಬೇಕು ಆರಾಧಿಸಬೇಕು ಎನ್ನುವರು.
“ಸಾಗರ ಸೇರಿ
ನದಿ ತನ್ನ ಹೆಸರು ಕಳಕೊಂಡಿತು”
ನದಿ ಸಮುದ್ರದಲ್ಲಿ ಲೀನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಅದರ ಉದ್ದೇಶವೂ ಕೂಡ ಸಾಗರದಲ್ಲಿ ಲೀನವಾಗುವುದೆ ಅಲ್ಲವೇ. ಎರಡು ಭಿನ್ನ ಸ್ವರೂಪಗಳು ಸೇರಿ ಒಂದಾಗುವುದು ಅಂದರೆ ದ್ವೈತವಲ್ಲದ ಅದ್ವೈತ ಎಂಬ ಭಾವ ಇಲ್ಲಿ ಕಾಣಬಹುದು.
“ಪ್ರೀತಿ ಎನ್ನುವುದು ಆಮ್ಲಜನಕ, ಅದು
ಬೇಕು ಎಲ್ಲೆಲ್ಲೂ”
ಪ್ರೀತಿ ಎಂಬ ಎರಡಕ್ಷರದ ಮೇಲೆ ಜಗವು ನಿಂತಿದೆ. ಪ್ರೀತಿ ಇಲ್ಲದಿದ್ದರೆ ಹೂವು ಅರಳುವುದು ಹೇಗೆ ಗೂಡು ಕಟ್ಟುವುದಾದರೂ ಹೇಗೆ ಎಂದು ಜಿ.ಎಸ್. ಶಿವರುದ್ರಪ್ಪನವರ ಪ್ರೀತಿ ಇಲ್ಲದ ಮೇಲೆ ಕವಿತೆಯ ಸಾಲು ನೆನಪಿಗೆ ತರುವಂತಿದೆ ಈ ಹೈಕು
“ಸಖಿ ತೊಟ್ಟಿದ
ಶ್ವೇತ ವಸ್ತ್ರ,ಸಖನ ಅಗಲುವಿಕೆ”
ಈ ಹೈಕುವಿನಲ್ಲಿ ಸೂಚ್ಯವಾಗಿ, ಸಾಂಕೇತಿಕವಾಗಿ ಪತಿಯನ್ನು ಕಳೆದುಕೊಂಡ ಪತ್ನಿಯ ಚಿತ್ರಣ ನೀಡಿದ್ದಾರೆ.
“ಕಿಟಕಿಗಳು
ತೆರೆದಿಡಿ ಬರಲಿ
ಗಾಳಿ ಬೆಳಕು”
ಇಲ್ಲಿ ಕಿಟಕಿ ಎಂದರೆ ಮನಸ್ಸು. ಅಂದರೆ ಮುಕ್ತವಾದ ಮನಸ್ಸಿನಿಂದ ಒಳ್ಳೆಯದೆಲ್ಲವನ್ನು ಸ್ವೀಕರಿಸೋಣ. ಜ್ಞಾನವೆಂಬ ಅರಿವು ಯಾವ ದಿಕ್ಕಿನಿಂದ ಬಂದರು ಒಪ್ಪಿಕೊಳ್ಳೋಣ. ಹೃದಯ ವೈಶಾಲ್ಯತೆಯನ್ನು ಮೆರೆಯೋಣ ಎನ್ನುವರು.
“ರಾತ್ರಿ ಹೋಟೆಲ್
ಊಟ,ಬೆಳಿಗ್ಗೆ ಯೋಗ ವಾಯುವಿಹಾರ”
ಇಲ್ಲಿ ಆರೋಗ್ಯದ ಕುರಿತಾದ ಎಚ್ಚರಿಕೆ ಇದೆ. ಆಧುನಿಕ ಧಾವಂತದ ಬದುಕಿನಲ್ಲಿ ಏನೆಲ್ಲಾ ಮರೆತು ಅನಾರೋಗ್ಯದ ಕಡೆ ಮುಖ ಮಾಡುವುದನ್ನು ಕಂಡು ಸೂಕ್ಷ್ಮವಾಗಿ ಎಚ್ಚರಿಸುತ್ತಾರೆ.
” ಕಟೆದ ಕಲ್ಲು ದೇವರಾಯಿತು, ಮನುಷ್ಯ ಕಲ್ಲಾಗುಳಿದ “
ಜಡ ವಸ್ತುವಿನಲ್ಲಿ ಜೀವ ತುಂಬಿ, ಜೀವಂತ ವ್ಯಕ್ತಿ ಜಡವಾಗಿದ್ದಾನೆ ಎಂಬ ವ್ಯಂಗ್ಯದ ನುಡಿ, ಸಾಕಷ್ಟು ಸಂಗತಿಯ ಬಗ್ಗೆ ಆಲೋಚಿಸಲು ಹಚ್ಚುತ್ತದೆ.
” ಮೊಬೈಲ್ ನಲ್ಲಿ
ಲೀನ, ಮನೆಯ ತುಂಬಾ ಸ್ಮಶಾನ ಮೌನ “
ಇಂದು ಇದು ಎಲ್ಲರ ಮನೆಯ ಚಿತ್ರಣವು ಆಗಿದೆ. ನಾವೆಲ್ಲ ತಂತ್ರಜ್ಞಾನದ ಅಡಿಯಾಳಾಗಿ ನಮ್ಮತನವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವ ಮಾರ್ಮಿಕವಾಗಿ ಬಂದಿದೆ.
” ಸೇತುವೆಗಳು
ಕುಸಿದು ಬೀಳುತ್ತಿವೆ ಸಂಬಂಧಗಳು “
ಈ ಸಾಲುಗಳು ಅತ್ಯಂತ ಹೃದಯಸ್ಪರ್ಶಿಯಾಗಿವೆ. ಇಂದು ನಾವೆಲ್ಲ ದ್ವೀಪಗಳಂತೆ ಬದುಕುತ್ತಿದ್ದೇವೆ. ದ್ವೀಪದಿಂದ ದ್ವೀಪಕ್ಕೆ ಸೇತುವೆ ನಿರ್ಮಿಸುವವರು ಯಾರು, ಸಂಬಂಧ ಕಲ್ಪಿಸುವವರು ಯಾರು ಎಂದಾಗ ಹೈಕುವಿನಂತಹ ಚಿಕ್ಕ ಸಾಲುಗಳು ಸಂಬಂಧಗಳನ್ನು ಬೆಸಯಬಹುದು ಎಂಬ ಆಶಾಭಾವನೆ ಮೂಡಿಸುತ್ತದೆ.
” ಕಡಿದ ಮರ
ಬಯಲಲಿ ಬಾನಾಡಿ ಬರದ ಛಾಯೆ “
ಎಂಬ ಕೊನೆಯ ಹೈಕು ಪರಿಸರದ ಕಾಳಜಿಯೊಂದಿಗೆ ಮುಕ್ತಾಯವಾಗುತ್ತದೆ. ಮರ-ಗಿಡಗಳ ನಾಶ, ಬಾನಾಡಿಗಳ ವಿನಾಶ ಎಂಬಂತೆ ಪ್ರಕೃತಿ ಸಂಪತ್ತು ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಹೇಳಿ ಮುಕ್ತಾಯಗೊಳಿಸಿದ್ದಾರೆ.

ಕೃತಿಯ ಮುಖಪುಟ ವಿನ್ಯಾಸ ಕೂಡ ಸೊಗಸಾಗಿದೆ. ಬಯಲಲಿ ಬಾನಾಡಿ ಹಾರಾಡುವುದನ್ನು ಕಾಣುತ್ತಾ, ಭವಿಷ್ಯತ್ತಿನ ನಿರೀಕ್ಷೆಯೊಂದಿಗೆ ಆಶಾದಾಯಕವಾಗಿ ಕುಳಿತ ವ್ಯಕ್ತಿ ಏನೆಲ್ಲಾ ಧ್ವನಿಸುವಂತಿದೆ. ಈ ಸಂಕಲನದ ಹೈಕುಗಳು ಓದುಗನಿಗೆ ಚಿಂತನೆಗೆ ಹಚ್ಚುವಂತಿವೆ. ಆದರೆ ಅಲ್ಲಲ್ಲಿ ಕೆಲವು ಹೈಕುಗಳು ವಾಚ್ಯವಾಗಿಯೂ ಮೂಡಿಬಂದಿವೆ. ಅವರೇ ಹೇಳುವಂತೆ
” ಹೈಕು ವಿಚಿತ್ರ
ನುಡಿಗಟ್ಟು, ತಲೆಯು ಕೊರೆಯುವ ಕಾವ್ಯ “
ಎಂಬಂತೆ ಓದುಗನಿಗೆ ಯೋಚನೆಗೆ ಹಚ್ಚಿ, ಕಿರಿದರಲ್ಲಿ ಹಿರಿದರ್ಥವನ್ನು ನೀಡುತ್ತವೆ. ಇಂತಹ ಒಂದು ಹೊಸ ಹೈಕು ಸಂಕಲನ ಸಹೃದಯಿಗಳು ಪ್ರೀತಿಯಿಂದ ಸ್ವೀಕರಿಸುತ್ತಾರೆ ಅಸ್ವಾದಿಸುತ್ತಾರೆ ಎಂಬ ಆಶಾಭಾವ ನನ್ನದು. ವಿಜಯ ಕುಮಾರ ಪರುತೆಯವರಿಂದ ಇನ್ನಷ್ಟು ಮೌಲಿಕ ಕಾವ್ಯಗಳು ಹೊರಹೊಮ್ಮಲಿ, ಕನ್ನಡ ಸಾರಸ್ವತ ಲೋಕ ಬೆಳಗಲಿ ಎಂಬ ಶುಭ ಹಾರೈಕೆ

‍ಲೇಖಕರು Admin

30 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading