-ವೀರೇಂದ್ರ ರಾವಿಹಾಳ್
ಸೋತವನು
ಹೌದು
ನಾನು ಸೋತವನು
ಸೋಲನ್ನೂ ಸಂಭ್ರಮಿಸುವವನು;
ಸೋತವರ ಪ್ರತಿನಿಧಿ!
ಸೋತವರ ಬೆನ್ನಿಗೆ
ವಂಧಿಮಾಗದರಿರುವುದಿಲ್ಲ
ಹಿಂಬಾಲಕರಂತೂ ಅಸಲೇ ಇಲ್ಲ
ಇರುವುದು ಜೊತೆಗಾರರು ಮಾತ್ರ
ಜೊತೆಯಾಗಿ ಸಾಗುವುದರಲ್ಲಷ್ಟೇ
ನನಗೆ ನಂಬಿಕೆ
ಒಪ್ಪಿಕೊಳ್ಳುವೆ
ಮುಕ್ತಮನಸ್ಸಿನಿಂದ
ಗೆದ್ದವರು ನೀವೇ
ಚಿನ್ನದ ಮೆಡಲು
ಹಾರ ತುರಾಯಿ
ಶಾಲು ಸನ್ಮಾನಗಳು
ಬಹುಪರಾಕುಗಳು
ಹಿಂಬಾಲಕರು
ಬಾಲಬಡುಕರು
ಏನೇ ಇದ್ದರೂ ನಿಮಗೇ ಇರಲಿ
ಆದರೆ ನೆನಪಿಡಿ
ಸೋತವರೇ ಬಹಳ ಈ
ಲೋಕದಲ್ಲಿ!
ಗೆದ್ದವರು ನೀವು ಕೇವಲ ಬೆರಳೆಣಿಕೆಯಷ್ಟು ಮಾತ್ರ!
ಗೆದ್ದವರ ಸಂಭ್ರಮಕಿಂತ
ಸೋತವರ ನೋವೇ ನನಗೆ ಆಪ್ಯಾಯಮಾನ.
ಮರೆಯದಿರಿ
ಸೋಲು ನಮ್ಮನ್ನು ಗಟ್ಟಿಗೊಳಿಸಿದಷ್ಟು
ಗೆಲುವು ನಿಮ್ಮನ್ನು ಎಂದಿಗೂ ಗಟ್ಟಿಗೊಳಿಸದು






0 Comments