-ಗೀತಾ ನಾರಾಯಣ್
ಜೀವನ…
ಪಾರಿಜಾತ ಆಯಲು ಹೋದೆ
ಒಂದು ಹೂ ಇರದಂತೆ ಆದಿದ್ದರು ಯಾರೊ?
ಮಲ್ಲಿಗೆ ಗಮಲು ಕೈಗಳಲ್ಲಿ ಮಲಗಿದೆ!
ಮೂರು ದಶಕಗಳ ಹಿಂದೆ ದೊಡ್ಡ ಜಗಲಿಗೆ ಅಂಟಿಕೊಂಡು
ದಿನದಿನವೂ ಅರಳರಳಿ ಕೈಗಿಳಿದು
ಮುಡಿಗೇರಿದ ಮಾಲೆ ಮಾಲೆ ಹೂಗಳಿಗೆ
ಮಾಗಿಯ ನಸುಕು ಒಲಿದಿತ್ತು!
ಚೈತ್ರದ ಹುಣ್ಣಿಮೆ ಮೌನವ ಧ್ಯಾನಿಸುವಾಗ
ಅಂತರಗಂಗೆಯ ಮುಳ್ಳು ಸೇದಬಾವಿಯೊಳಗೆ
ಕುಣಿಕೆ ಸಡಿಲಗೊಂಡು ಬಿದ್ದ ಬಿಂದಿಗೆಯ
ಪೊರೆದು ಮೇಲಿತ್ತಿದ್ದು ಮಲ್ಲಿಗೆಯ ಆತ್ಮದಂತಿತ್ತು!
ಅಲ್ಲೇ ಬಾವಿಯ ವರಿಸಿ ಬಿರಿದ ಮದುಮಾಲತಿಯ ಗುದಿಗಳು ಎಲೆಬಳ್ಳಿಯನೂ ತೆಕ್ಕೆಗೆ ಇಳಿಸಿಕೊಂಡು
ಮತ್ತೂ ಅಂಗಳದಲ್ಲಿ ಹೂಗಳ ಪರಿಮಳದುಣ್ಣಿಮೆ!!
ಸಣ್ಣ ಹಜಾರದ ಗೂಡಿನಲ್ಲಿ ಅಚ್ಚ ಕರಿಯಾಟೆ
ತನ್ನವೇ ತತ್ತಿಗಳಿಗೆ ಕಾವುಕೊಡುವಾಗ
“ಜೀವನ” ದುಡಿಮೆಯ ಪೂಜಿಸಿ
ಕೊಯ್ಲಿಗೆ ಬಂದ ಗದ್ದೆಗೆ ಹಾಲು ತುಪ್ಪ ಬಿಟ್ಟು
ನೀರು ಕಟ್ಟುವುದ ನಿಲ್ಲಿಸಿದಾಗ ದೊಡ್ಡಪ್ಪ ಅರ್ವಾಳೆ ಕುಡ್ಲಿಗಾಗಿ ಅಯ್ಯಣ್ಣನ ಕುಲುಮೆಯ ಗೌರವಿಸಿದರು
ಬದುವಿನ ಮೇಲೆ ನಾಗರು! ಎಂದೂ ಹೆಡೆ ಎತ್ತಿ ಕುಟುಕಲಿಲ್ಲ
ಅನ್ನವಿಟ್ಟ ಹುತ್ತದಲ್ಲಿ ಹಾವುಗಳೆಂದೂ ಕಾಣಲಿಲ್ಲ
ಮನೆಯಲ್ಲಿ ಮಧುಮಗಳು ನಾಗರಿಗೆ ಕೈಮುಗಿವಾಗ
ಶ್ರಾವಣದಲ್ಲಿ ಬರುವ ಗಂಡಿಗೇಕೆ ಅಹಂಕಾರ?
ಜೀವನಕ್ಕೆ ಜೀವದೊಲುಮೆ ಕಾದು ಪಡೆದವಳು
ಸಣ್ಣ -ದೊಡ್ಡ ಹಜಾರಗಳಲ್ಲಿ ಸದಾ ಮಲ್ಲಗೆಯ ಕಟ್ಟಿದವಳು
ಯಾರೋ ಗದರಿಸಿ ಕಾರ್ತಿಕದ ಹಣತೆಗಳಿಗೆ ಮದ್ದಿಟ್ಟರು
ಸೇದಿದ ನೀರು,ಕಟ್ಟಿದ ಹೂವು, ನೆಟ್ಟ ಹೂಗಿಡ
ಹಬ್ಬಿದ ಬಳ್ಳಿ,ಕೊಯ್ದ ಗದ್ದೆ,ಹಳೇತೋಟದ ಆಲದಮರ
ಊರ ತಾಯಂದಿರು ಪೂಜಿದ ಏಳುಮಂದಕ್ಕ
ಎಲ್ಲೆಲ್ಲೂ ಜೀವರಾಗವೇ ಎದೆಗಿಳಿದು ಬದುಕ ವ್ಯಾಪಿಸಿದ್ದು
ಲೋಕಕ್ಕೆ ಯಾಕೆ ಹೆಣ್ಣು ಕೆಡುಕಳೆನ್ನುವ ಚಾಳಿ???!!
ಭಕ್ತಿ ಇರಲಿ ಬಾಳಿನ ಮೇಲೆ ಪ್ರೀತಿಯೊಂದರದು…..
ಅಳಿದೇ ಹೋಗುವ ಜೀವನದ ಮೇಲೇಕೆ ಮದ್ದೆಸೆಯುವಿರಿ
ಮರಳಿ ಮರಳಿ ಮರಳಿ ಅಚಲ ಪ್ರೀತಿ ಬೆಳಗಲಿ ಬಿಡಿ!






0 Comments