ಯಾವ ಮೋಹನ ಮುರಳಿ…

ಶಿವ ಹಿತ್ತಲಮನಿ

ವಿಶ್ವನಾಥನು ತಂದೆಯಾದರೇ..
ವಿಶಾಲಾಕ್ಷಿ ತಾಯಿಯಲ್ಲವೇ
ಯಶೋದೆ ಕೃಷ್ಣನಾ ಬೆಳೆಸಿದರೇನು….

ಆಕಾಶವಾಣಿಯಲ್ಲಿ ಅಣ್ಣಾವ್ರ ಹಾಡು ಕೇಳಿದ ನೆನಪು. ಆಮೇಲೆ ಬರುತ್ತಿದ್ದ ವಾರ್ತೆಗಳಲ್ಲಿ ಒಂದಾದರೂ ಆ ದೇಶದ ಬಗ್ಗೆ ಇದ್ದ ಸುದ್ದಿ ಇದ್ದೇ ಇರುತ್ತಿತ್ತು.

ನಮ್ಮೂರಲ್ಲಿ  ಇಂಗ್ಲೀಷ್ ಪಿಕ್ಚರ್ ಬರ್ತಾ ಇದದ್ದು ಒಂದೋ ಎರಡು ಟಾಕೀಸ್ ಗಳಲ್ಲಿ . ಅಲ್ಲಿ ಟಾಕೀಸಿನ ಕತ್ತಲಲ್ಲಿ ಪರದೆಯ ಮೇಲೆ ಮೊದಲ ಸಲ ನೋಡಿದ್ದು ಈ ದೇಶದ ಝಲಕ್ ಗಳು. ವಿಭಿನ್ನ ಜನ, ಎಷ್ಟೊಂದು ಕಾರುಗಳು , ಏನೆಲ್ಲಾ ರಭಸ …ಯಾವುದು ಇದು ಸೋಜಿಗದ ಜಾಗ !

ಇಂಟರ್ನೆಟ್-ಯೂಟ್ಯೂಬ್ ಇರಲಿ, ಟಿವಿಯಲ್ಲಿ ಬೇರೆ ಚಾನೆಲ್ ಸಹ ಇಲ್ಲದಿರುವ, ದೂರದರ್ಶನ ಒಂದೇ ಇದ್ದ ಕಾಲ, ಪಕ್ಕದ ಓಣಿಯಲ್ಲಿದ್ದ ಒಂದೇ ಒಂದು ಟಿವಿಯಲ್ಲಿ ಸ್ಪೈಡರ್ ಮ್ಯಾನ್ ಕಾರ್ಟುನ್ ನೋಡುತ್ತಾ , ಆ ಸ್ಪೈಡರ್ ಮ್ಯಾನ್ ಒಂದು ಬಹುಮಹಡಿ ಕಟ್ಟಡಿಯಿಂದ ಇನ್ನೊಂದು ಕಟ್ಟಡಿಗೆ ಜಿಗಿಯುವುದನ್ನು ನೋಡಿ ಆನಂದಿಸುತ್ತಿರುವಾಗ , ನನಗೆ ಗೊತ್ತಾಗುವ ಮುಂಚೆ ಈ ಸೂಪರ್ ಹೀರೊಗಳಿರುವ ನಾಡು ಯಾವುದೆಂಬ ಬೀಜ ಮನಸ್ಸಲ್ಲಿ ನೆಟ್ಟಿದ್ದು

ಮುಂದೆ ಶಾಲೆಯಲ್ಲಿ ಓದುವಾಗ ಚಂದ್ರನ ಮೇಲೆ ಮೊದಲ ಮಾನವ ಕಳಿಸಿದ್ದು, ನೀಲ್ ಆರ್ಮಸ್ಟ್ರಾಂಗ್ ಎಂಬ ಹೀರೊ ಕಾಲಿಟ್ಟಿದ್ದು , ನಾಸಾ ಹೆಸರು ಕೇಳಿ ತಂತ್ರಜ್ಞಾನ-ಆವಿಷ್ಕಾರ -ಕಂಪ್ಯೂಟರ್-ರಾಕೆಟ್ -ಆ ದೇಶದ  ಬಗ್ಗೆ ಸಣ್ಣ ಆಸಕ್ತಿ ಬೆಳಿಸಿಕೊಂಡಿದ್ದು..

ಹಾಲಿವುಡ್ ಎಂಬ ಬೆರಗು , ಬೇವಾಚ್ ನಂತಹ ತಳಕು, ಬ್ರಿಟ್ನಿ ಸ್ಪಿಯರ್ಸ್ ಕನವರಿಕೆಗಳು …

*****

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ

ಅವತ್ತು ಭಾನುವಾರ…  

ವಿಮಾನದಿಂದ ಇಳಿದು ಏರ್ ಪೋರ್ಟ್ ನಿಂದ ಹೊರನಡೆದು ಮೊದಲ ಸಲ ಈ ದೇಶಕ್ಕೆ ಕಾಲಿಡುತ್ತಿದ್ದಂತೆ ಕಂಡ ಮೊದಲ ಫಲಕ !

ವೆಲ್ಕಮ್ ಟು ದಿ ಯುನೈಟೆಡ್ ಸ್ಟೇಟ್ಸ್ !

ಇಷ್ಟು ವರ್ಷ ಮಾತುಗಳಲ್ಲಿ, ಕತೆಗಳಲ್ಲಿ , ಮಾಧ್ಯಮದಲ್ಲಿ, ಕಲ್ಪನೆಗಳಲ್ಲಿ ಇದ್ದ ಅಮೇರಿಕಾ ದುತ್ತನೆ ಮುಂದೆ ನಿಂತಿತ್ತು ..
ಅಚ್ಚರಿ, ಭಯ ಮಿಶ್ರಿತ ಕಾತರದ ಕಣ್ಣುಗಳಲ್ಲಿ ಹೊಸ ನಾಡನ್ನು ನೋಡಿದ್ದೆ.

ಕೆಲಸದ ಮೇಲೆ ಮೊದಲ ಸಲ ಇಲ್ಲಿ ಇದದ್ದು ಮೂರು ತಿಂಗಳು. ಹೊಸ ಜಾಗ, ಹೊಸ ಕೆಲಸದ ವಾತಾವರಣ , ಹೊಸ ಅನುಭವಗಳು..
ಮತ್ತೆ ನಮ್ಮ ನಾಡಿಗೆ ಮರಳಿದಾಗ, ಇನ್ನು ಗಾಢವಾಗಿ ಕಾಡತೊಡಗಿತ್ತು ಈ ದೇಶ ..

ಮತ್ತೆ ಒಂದು ತಿಂಗಳಲ್ಲೇ ಕೆಲಸದ ಮೇಲೆ ವಾಪಸ್ ಬಂದಿದ್ದು, ಆಮೇಲೆ ತಿಂಗಳುಗಳು ಹೇಗೆ ವರ್ಷಗಳಾದವು.

*******

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲಿಗೆ
ಸೇರಬಲ್ಲೆ ನೀನು

ಚೆನ್ನೈ ನ ವೀಸಾ ಕಚೇರಿ…

ಜೀವನದ ಸಕಲ ಪಾರಗಳನ್ನು ಒಂದೇ ಸ್ಥಳದಲ್ಲಿ ಇಲ್ಲಿ ಕಲಿಸಿದಷ್ಟು ಬೇರೆಯಲ್ಲೂ ಕಲಿತದ್ದಿಲ್ಲ .
ಖುಷಿ, ಹಾತಾಶೆ, ತಾಳ್ಮೆ, ನಿರಾಶೆ, ಸ್ಥಿರತೆ ..ಎಲ್ಲವನ್ನೂ ಅನುಭವಿಸಿದ ಜಾಗವಿದು. ಎಷ್ಟೆಲ್ಲಾ ಭೇಟಿಗಳು , ಜೀವನದ ಎಷ್ಟೊಂದು ಪ್ರಮುಖ ಘಟನೆಗಳಿಗೆ ವೇದಿಕೆಯಾಗಿದ್ದು ಇದೇ ಕಚೇರಿ.  

ವರ್ಷಗಳು ಉರುಳಿದಂತೆ ವಯಸ್ಕನಾಗಿ, ವಿವಾಹಿತನಾಗಿ, ಪೋಷಕನಾಗಿ ..ಹೀಗೆ ಜೀವನದ  ಒಂದೊಂದೇ ಘಟ್ಟವೇರಿದ್ದು ಈ ದೇಶದಲ್ಲಿಯೇ ..
ಎರಡು ತೀರಗಳ ಮಧ್ಯೆ ಅಲೆಯುತ್ತಿದ್ದ ಹಡಗಿಗೆ  ಮಡದಿ- ಮಕ್ಕಳು ಲಂಗರಾಗಿ ನಿಂತರು. ಬದುಕು ಇಲ್ಲಿ ನೆಲೆ ನಿಲ್ಲಲಾರಂಭಿಸಿತು.

ಗ್ರೀನ್ ಕಾರ್ಡ್ ಎಂಬ ಮಂತ್ರದಂಡ ವೀಸಾದ ಭವಬಂಧನಗಳನ್ನು ಕಳಚಿ ಬದುಕನ್ನು ಬದಲಿಸಿಬಿಟ್ಟಿತ್ತು. ಹಸಿರು ಕ್ರಾಂತಿಯ ನಂತರ ವೀಸಾ ಕಚೇರಿ ಮತ್ತು ನಮ್ಮ ಭಾಂದವ್ಯ ಬದಲಾಗಿಬಿಟ್ಟಿತ್ತು. ವೀಸಾ ಕಚೇರಿ ಭೇಟಿಯೂ ನಿಂತಿತು.

ಯಾವಾಗ ಕಣ್ಣಿಂದ ದೂರವಾಗಿ ಇನ್ನೆಲ್ಲೋ ಇರುತ್ತಿವಿಯೋ ಆಗ ನಾವಿದ್ದ ದೇಶ-ನಮ್ಮ ಊರುಗಳು ನೆನಪಿನಲ್ಲಿ ಮೆರವಣಿಗೆ ಹೊರಡುವುದು  ನಮ್ಮ ಸಂಬಂಧಗಳು, ನಮ್ಮ ದೇಶದ ಅನುಭವಗಳ ಬೆಲೆ ನಿಖರವಾಗಿ ಅರ್ಥವಾಗುವುದು.  

ಅದ್ಯಾವುದೋ ಕಾಲದಲ್ಲಿ ಗೆಳಯರೊಟ್ಟಿಗೆ ಓಡಾಡಿದ ಗಲ್ಲಿಗಳು, ಅಲ್ಲೆಲ್ಲೋ ಕುಟುಂಬದವರೊಂದಿಗೆ ಹೋದ ಗುಡಿಗಳು. ಆ ಹೋಟೆಲ್ನಲ್ಲಿ ತಿಂದ ಬೆಣ್ಣೆ ದೋಸೆ-ಚಟ್ನಿ ರುಚಿ. ಎಲ್ಲಿದ್ದವು ಇಷ್ಟು ದಿನ ಈ ನೆನಪುಗಳು …. ಕೆಲವೊಮ್ಮೆ ತುಂಬಾ ಕಾಡಿ ಮನಸ್ಸು ಮುದುಡಿಹೋಗಿದ್ದು ಸುಳ್ಳಲ್ಲ.  

ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ ?

ಇದು ಸಾಲದೆಂಬಂತೆ ಬ್ರಿಟ್ನಿ ಸ್ಪಿಯರ್ಸ್ ನಂತಹ ಬ್ರಿಟ್ನಿ ಸ್ಪಿಯರ್ಸ್ ನಮ್ಮ ಕಣ್ಣೆದೆರು ನಮ್ಮಂತೆಯೇ  ವಯಸ್ಸಾಗುತ್ತ, ಒಂದೆರಡು ಮದುವೆ ಸಹ ಮಾಡಿಕೊಂಡು ಜೀವನದಲ್ಲಿ ಮಿನಿ ವೈರಾಗ್ಯ ಮೂಡಿಸಿಬಿಟ್ಟಿದ್ದಳು  !

ಇಲ್ಲಿ ತಿಂಗಳುಗಳು ವರ್ಷಗಳಾಗಿ ಉರುಳುತ್ತಿದ್ದಂತೆ , ಯಾವ ದೇಶವೂ  ಪರಿಪಕ್ವವಲ್ಲವೆಂಬ ನಿಜ ಇನ್ನೂ ಗಟ್ಟಿಯಾಗುತ್ತಾ ಸಾಗಿತು. ಆಯಾ ದೇಶಗಳಿಗೆ ಅವುಗಳದೇ ಆದ ವಿಶಿಷ್ಟ ಸಮಸ್ಯೆಗಳಿರುವುದು ಮತ್ತು ವಿಶೇಷ ಬಲಗಳಿರುವುದು ಅರಿವಾಗತೊಡಗಿತು.

ಈ ತೊಳಲಾಟಗಳ ಮಧ್ಯೆ ಈ ಎರಡು ಪ್ರಪಂಚಗಳ ಮಧ್ಯೆ ಸೇತುವೊಂದನ್ನು ಕಟ್ಟುವ ಪ್ರಯತ್ನ ನಡೆದೇ ಇತ್ತು.

ಹೊಸ ಕಾರು ಕೊಂಡಾಗ ಹತ್ತಿರದ ದೇವಾಲಯಕ್ಕೆ ಹೋಗಿ ನಮ್ಮ ಕನ್ನಡದವರೇ ಅದ ಅರ್ಚಕರಿಂದ ವಾಹನ ಪೂಜೆ ಮಾಡಿಸುವುದು, ಹಾಲೋವಿನ್ ಆಚರಿಸಿವುಷ್ಟೇ ಗಣಪತಿ-ದೀಪಾವಳಿ ಆಚರಿಸಿವುದು..ಹೀಗೆ ತುಂಬಾ ಚಿಕ್ಕ ಚಿಕ್ಕ ಹೆಜ್ಜೆಗಳು

ಇಲ್ಲೇ ಒಂದು ನಮ್ಮದೇ ಒಂದು ವಿಶಿಷ್ಟ ಜೀವನ ಪದ್ಧತಿ ಕಟ್ಟಿಕೊಳ್ಳುವ ಪ್ರಯತ್ನ …

ಗ್ರೀನ್ ಕಾರ್ಡ್ ಬಂದ ನಂತರ  ಪೌರತ್ವಕ್ಕೆ ಬೇಕಾದ ವರ್ಷಗಳನ್ನು ಕಳೆದ ಮೇಲೂ ತೊಳಲಾಟ ನಡೆದೇ ಇತ್ತು…

ಹುಟ್ಟಿದ ನಾಡು ಅಪ್ಪಿಕೊಂಡ ನಾಡು ..

ಪ್ರಾಯೋಗಿಕವಾಗಿ ಯೋಚಿಸಿ ಕೊನೆಗೂ ಪೌರತ್ವ ದಿಕ್ಕಿನಲ್ಲಿ ಹೊರಡುವುದೆಂದು ನಿರ್ಧಾರವಾಗಿತ್ತು. ಇಲ್ಲಿನ ಪೌರತ್ವ ಪರೀಕ್ಷೆ ಮತ್ತು ಇಂಟರ್ವ್ಯೂವ್ ಕೊಟ್ಟು , ಅದರಲ್ಲಿ ಉತ್ತೀರ್ಣರಾಗಿ, ಆಮೇಲೆ ಆ ದಿನ ಬಂದೇ ಬಿಟ್ಟಿತ್ತು.

ಅಮೆರಿಕಾದ ಪೌರತ್ವ ಪಡೆವ ದಿನ…  

ಎಷ್ಟೆಲ್ಲಾ ಮಾನಸಿಕ ತಯಾರಿ ಮಾಡಿಕೊಂಡರೂ ಅದೊಂದು ಮಿಶ್ರ ಮನಸ್ಥಿತಿ…

ಪೌರತ್ವ ವಚನ ಬೋಧಿಸಿ ‘ಅಭಿನಂದನೆಗಳು, ಈಗ ನೀವು ಅಮೇರಿಕಾದ ಪ್ರಜೆಗಳು’ ಅಂದಾಗಲೇ ಇದೊಂದು ಅಧ್ಯಾಯ ಸಮಾಪ್ತಿಯಾಗಿದೆ ಅನಿಸಿತು.
ಹಾಗೆ ಹೊಸ ಅಧ್ಯಾಯ ಪ್ರಾರಂಭವಾಗಿತ್ತು….

ಒಂದೆಡೆ ನಡೆದು ಬಂದ ದಾರಿ ಹಿಂದುರಿಗಿ ನೋಡಿದಾಗ ಮೈಲಿಗಲ್ಲೊಂದನ್ನು ಮುಟ್ಟಿದೆವು ಎನ್ನುವ ಸಂತಸ, ಮತ್ತೊಂದೆಡೆ ಇನ್ಮುಂದೆ ನಾವು ಹುಟ್ಟಿದ ನಾಡಿನ ಪೌರರಲ್ಲವೆಂಬ ದುಃಖ.

ನಾವು ಏನೇ ಆಗಿದ್ದರೂ ಅದಕ್ಕೆ ಕಾರಣ ನಾವು ಹುಟ್ಟಿದ ನಾಡು. ನಮ್ಮನ್ನು ಸಾಕಿ-ಸಲುಹಿದ ನೆಲ.  
ಬೇರು ಅಲ್ಲಿ ರೆಕ್ಕೆ ಇಲ್ಲಿ..

ಇದಾಗಿ ಮರುದಿನವೇ ಇಲ್ಲೊಂದು ಭಾರತೀಯ ಸಂಘ ಆಯೋಜಿಸಿದ್ದ ಓಟದ ಕಾರ್ಯಕ್ರಮ ,ಅಲ್ಲಿ ರಾಷ್ಟ್ರಗೀತೆಯಿಂದ ಕಾರ್ಯಕ್ರಮ ಶುರುವಾಯಿತು. ಮೊದಲಿಗೆ ಅಮೇರಿಕಾದ ರಾಷ್ಟ್ರಗೀತೆ ಹಾಡಿದರು, ನಿಂತು ಗೌರವ ಸೂಚಿಸಿವಾಗ ಹೆಮ್ಮೆಯಿತ್ತು . ನಂತರ ಜನಗಣಮನ ಶುರುವಾಗುತ್ತಿದಂತೆ ಯಾಕೋ ಕಣ್ಣಾಲಿ ತುಂಬಿಕೊಂಡವು. ಹುಟ್ಟಿದಾಗಿನಿಂದ ಹಾಡುತ್ತಿದ್ದ ಜನಗಣಮನ ಈಗ ತುಂಬಾ ಅಪ್ಯಾಯಮಾನವೆನಿಸಿತು.

ದ್ವಿಪೌರತ್ವ ನೀಡುವಂತಿದ್ದರೆ ಎಷ್ಟು ಚೆನ್ನಾಗಿತ್ತು …

ಈ ಎರಡು ವಿಭಿನ್ನ ಪ್ರಪಂಚಗಳಿಂದ ಉತ್ತಮವಾದದ್ದನ್ನು ಹೆಕ್ಕಿ ಅಳವಡಿಸಿಕೊಳ್ಳುವ , ದೇಶ ಭಾಷೆಗಳ ಎಲ್ಲೇ ಮೀರಿ ಪ್ರಯತ್ನಕ್ಕೆ ನಮ್ಮ ಕವಿಶ್ರೇಷ್ಠರು ಹೀಗೆ ಹೇಳಿದರೇ  ?

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಅದರ ಬಗ್ಗೆ ಯೋಚಿಸುತ್ತಾ ಕಾರ್ಯಕ್ರಮದಿಂದ ಮರಳಿ ಬರುವಾಗ ಅಣ್ಣಾವ್ರ ಮತ್ತದೇ ಹಾಡು ನೆನಪಾಗುತಿತ್ತು  

ಯಶೋದೆ ಕೃಷ್ಣನಾ ಬೆಳೆಸಿದರೇನು
ದೇವಕಿಗೆ ಅವನು, ಕಂದನಲ್ಲವೇ ?

‍ಲೇಖಕರು Admin

September 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sudhindra Deshpande

    ಪಾತರಗಿತ್ತಿ ಇದೀಗ ತನ್ನ ಪಕ್ಕಗಳನ್ನು ಮತ್ತೊಂದು ನಾಡಿನಲ್ಲಿ ಬೀಸುತ್ತಿದೆ. ಆದರೆ ಈ ಪಾತರಗಿತ್ತಿ ನಮ್ಮದೇ ಎನ್ನುವ ಹೆಮ್ಮೆ ಹಾಗು ಖುಶಿ ನನಗಿದೆ. ಶುಭವಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: