ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೊಳಗೊಂದು ಬೆಂಗಳೂರು..

ಲಾವಣ್ಯ ಎಸ್ ಶಿರೂರ್ 

ಬಸವನಗುಡಿಯ ಅಜ್ಜಿ ಮನೆಯ ಮಹಡಿಯ ಮೇಲೆ ಏಣಿ ಹತ್ತಿ ಹೋಗಬೇಕಾದರೆ ಅಚಾನಕ್ಕಾಗಿ ಕಾಲು ಜಾರಿ ಕೆಳಗೆ ಬಿದ್ದೆ, ಮೊಣಕೈ, ಕಾಲು ಎಲ್ಲಾ ತರಚಿತ್ತು. ಏನಾಗಿದೆ ಎಂದು ನೋಡಿಕೊಳ್ಳಲು ಎದ್ದು ಕುಳಿತೆ, ಸುತ್ತಮುತ್ತಲೂ ಕತ್ತಲಾಗಿದೆ, ಸಮಯ ನೋಡಿದರೆ ಮಧ್ಯರಾತ್ರಿ ಸುಮಾರು ೩.೩೦, ಆಮೇಲೆ ಅರ್ಥ ವಾಯಿತು  ಅದೊಂದು ಕನಸು. 

ಮಕ್ಕಳು ನನ್ನ ಪಕ್ಕದಲ್ಲಿ  ನೆಮ್ಮದಿಯಾಗಿ ಮಲಗಿದ್ದಾರೆ, ಮೀನಿನ ಮಾರ್ಕೆಟ್ ನಂತೆ ಯಾವಾಗಲೂ ಗದ್ದಲವಿರುವ ನಮ್ಮ ಮನೆಯಲ್ಲಿ ಇದೀಗ ನೀರವವಾದ ಮೌನ.  ಹಾಗೆಯೇ ಕೆಳಗಿನ ಮಹಡಿಗೆ ಬಂದು ಒಂದು ಲೋಟ ಹಾಲು ಬಿಸಿ ಮಾಡಿಕೊಂಡು ಕುಡಿಯಲು ಕುಳಿತೆ. ಸಾಧಾರಣವಾಗಿ ನನಗೆ ಬೀಳುವ ಕನಸೆಲ್ಲಾ ಬೆಂಗಳೂರಿನಲ್ಲಿಯೇ ಶುರುವಾಗಿ ಅಲ್ಲಿಯೇ ಮುಗಿಯುತ್ತದೆ. ಅಮೆರಿಕಾಗೆ ಬಂದು ಎಂಟು ವರ್ಷವಾದರೂ ಇನ್ನೂ ಮನಸ್ಸೆಲ್ಲಾ ಬೆಂಗಳೂರಿನಲ್ಲಿ, ಬಸವನಗುಡಿಯಲ್ಲೇ ಇದೆ. 

ಗಾಂಧಿಬಜಾರ್ ನ ಮುಖ್ಯ ರಸ್ತೆಯಾದ ಡಿ. ವಿ. ಜಿ. ರಸ್ತೆಯಲ್ಲಿ ನನ್ನ ಅಜ್ಜಿ ತಾತನ ಮನೆಯಿತ್ತು, ನಾನು ಹುಟ್ಟಿಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ.  ಬಾಲ್ಯದ ದಿನಗಳೆಲ್ಲಾ ಬಸವನಗುಡಿಯಲ್ಲೇ ಕಳೆದಿದ್ದೇನೆ. ಗಾಂಧಿಬಜಾರ್ ನ ಮಾರ್ಕೆಟ್ ಗೆ ಒಮ್ಮೆ ಹೋಗಿಬಂದರೆ ಸಾಕು ಮನಸ್ಸೆಲ್ಲಾ ಒಂದು ರೀತಿ ಉಲ್ಲಾಸಭರಿತವಾಗುತ್ತದೆ.  ಅಲ್ಲಿನ ಹೂವಿನ ಗಾಡಿಗಳು, ತಾಜಾ ತರಕಾರಿಗಳು, ಉಪ್ಪಿನಕಾಯಿಗೆ ಬೇಕಾದ ಮಾಂಗಾಯಿ ಬೇರಿನ ಮಧುರವಾದ ಸುವಾಸನೆ, ಹಸಿ ಹುಣಸೇಕಾಯಿಯ ಹುಳಿ, ಚಿಕ್ಕ ಚಿಕ್ಕ ಮಾವಿನ ಕಾಯಿಗಳು ಇವೆಲ್ಲಾ ಒಂದು ಬದಿಗಾದರೆ,  ಸೊಗಡಿನ ಅವರೇಕಾಯಿ, ಘಮ್ ಎನ್ನುವ ಮಾವಿನ ಹಣ್ಣುಗಳ  ಗಾಡಿ ಮತ್ತೊಂದೆಡೆ.  

ತನ್ನ  ಸೌoದರ್ಯದಿಂದ, ಸುವಾಸನೆಯಿಂದ ಆಕರ್ಷಿಸುವ ಹೂವುಗಳ ಮಾಲೆಗಳು  ಇನ್ನೊಂದೆಡೆಗೆ. ಇದಷ್ಟೇ ಅಲ್ಲದೆ ನಾಲಿಗೆ ರುಚಿಗೂ ಮೋಸವಿಲ್ಲದಂತೆ ವಿದ್ಯಾರ್ಥಿ ಭವನ, ಉಪಹಾರ ದರ್ಶಿನಿಯ ಅದ್ಭುತ ಖಾದ್ಯಗಳು. ಹೀಗೆ ಎಲ್ಲಾ ಇಂದ್ರಿಯಗಳನ್ನೂ ಜಾಗೃತಗೊಳಿಸಿ ಸಂತಸಗೊಳಿಸುವ ಸುಂದರ ಜಾಗ ಬಸವನಗುಡಿ. 


ಮುಂದಿನ ವಾರ ಗೌರಿ – ಗಣೇಶ ಹಬ್ಬ, ಚಿಕ್ಕಂದಿನಲ್ಲಿ ಅಜ್ಜಿ ಮನೆಯ ಮುಂದೆ ಗಣೇಶನನ್ನು ಕೂರಿಸಿ ಸಂಭ್ರಮಿಸುತ್ತಿದ್ದ ಕ್ಷಣಗಳನ್ನು ನೆನೆದರೆ ಹಾಗೆಯೇ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮಕ್ಕಳೆಲ್ಲಾ ಸೇರಿ ಕೂಡಿಸುತ್ತಿದ್ದ ಗಣೇಶನನ್ನು ನೋಡಲು ಬಸವಗುಡಿಯ ಮಂದಿಯೆಲ್ಲಾ ಬರುತ್ತಿದ್ದರು. ಮೊದಲೆಲ್ಲಾ ಐದು ದಿನ ಗಣೇಶನನ್ನು ಕೂರಿಸುತ್ತಿದ್ದೆವು, ನಾವೆಲ್ಲಾ ಐದೂ ದಿನವೂ ಶಾಲೆಗೆ  ಚಕ್ಕರ್ ಹಾಕುತ್ತಿದ್ದೆವು, ಮನೆಯವರು ಕೇಳಿದರೆ, ‘ಅರೇ ಗಣೇಶನನ್ನು ಕೂರಿಸಿ ನಾವು ಶಾಲೆಗೆ ಹೋದರೆ ಪೆಂಡಾಲಿನಲ್ಲಿ ಗಣೇಶ ಒಬ್ಬನಿಗೇ ಬೇಜಾರಾಗುತ್ತದೆ’ ಎಂದು ಕಥೆ ಹೇಳುತ್ತಿದೆವು,

 ಮುಖ್ಯ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಚಂದಾ ತೆಗೆದುಕೊಂಡು, ಯಾರು ಎಷ್ಟು ಕೊಟ್ಟರು , ಯಾವ ಅಂಗಡಿಯವರು ಜುಗ್ಗರು ಎಂದೆಲ್ಲಾ ಮಾತಾಡಿಕೊಂಡು ಒಂದು ತಿಂಗಳೆಲ್ಲಾ ಕಳೆಯುತ್ತಿದ್ದೆವು. ಹಾಗೆಯೇ ನಿಯತ್ತಾಗಿ ಪ್ರತಿ ಅಂಗಡಿಗೂ ಪ್ರಸಾದವನ್ನು ವಿತರಿಸುತ್ತಿದ್ದೆವು.  ಜನರೂ ತುಂಬಾ ಧಾರಾಳವಾಗಿ ಧನ ಧಾನ್ಯವನ್ನು ದಾನ ಮಾಡುತ್ತಿದ್ದರು. 

ಮಾಗಡಿಗೆ ಹೋಗಿ, ಅಲ್ಲಿ ತಯಾರಿಸಿಟ್ಟಿರುತ್ತಿದ್ದ ನೂರಾರು ದೊಡ್ಡ ದೊಡ್ಡ ಗಣೇಶನನ್ನು ನೋಡಿ ದಿಬ್ಬೆರಗಾಗುತ್ತಿದ್ದೆವು. ಪ್ರತಿ ವರ್ಷವೂ ಹೊಸ ಹೊಸ ವಿಶೇಷವಾದ ಗಣೇಶನ ಮೂರ್ತಿಗಳು, ನಮ್ಮ ನೆಚ್ಚಿನ ಗಣೇಶನನ್ನು ಬುಕ್ ಮಾಡಿ ಬಂದು, ಹೇಗೆಲ್ಲಾ ಅಲಂಕಾರ ಮಾಡಬಹುದು ಎಂದು ಯೋಚಿಸುತ್ತಿದ್ದೆವು. 

ಹಿಂದಿನ ದಿನವೆಲ್ಲಾ ಅಲಂಕಾರ ಮಾಡಿ, ಹಬ್ಬದ ದಿನ ಅರ್ಚಕರನ್ನು ಕರೆಸಿ, ಪೂಜೆ ಮಾಡಿದರೆ ಮನಸ್ಸಿಗೆ ಏನೋ ಸಂತೋಷ, ಗಣೇಶ ಇದ್ದಷ್ಟು ದಿನವೂ ನಾವು ಪೆಂಡಾಲಿನಲ್ಲಿಯೇ ಇರುತ್ತಿದ್ದೆವು.  ಐದನೇ ದಿನ ಯಡಿಯೂರಿನಲ್ಲಿ ಗಣೇಶನ ವಿಸರ್ಜನೆ ಮಾಡಿ ಮನೆಗೆ ಬಂದರೆ ಏನೂ ಬೇಜಾರು. ನಮ್ಮಲ್ಲೇ ಒಬ್ಬ ಗೆಳೆಯನನ್ನು ಬಿಟ್ಟು ಬಂದಂತೆ  ಭಾವನೆ.  

ಇಂತಹ ಊರಿನಲ್ಲಿ ಹುಟ್ಟಿ ಬೆಳೆದ ನಾವು ಅದೃಷ್ಟವಂತರು. ಸಂಕ್ರಾಂತಿಗೆ ನೆಟ್ಕಲಪ್ಪ ಸರ್ಕಲ್ ನ ಮೈದಾನದಲ್ಲಿ ಹಸುವನ್ನು ಸಿಂಗರಿಸುವುದನ್ನು ನೋಡಲು ಹೋಗುತ್ತಿದ್ದೆವು , ನಂತರ ಯುಗಾದಿಗೆ ಗವಿ ಗಂಗಾದೇಶ್ವರನ ಮೇಲೆ ಸೂರ್ಯ ಕಿರಣ ಬೀಳುವುದನ್ನು ನೋಡುತ್ತಿದ್ದೆವು, ಬಿ. ಎಂ. ಎಸ್ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹೋಗಿ ಕುಣಿದಾಡುತ್ತಿದ್ದೆವು, ಹಾಗೆಯೇ ವಿದ್ಯಾಪೀಠಕ್ಕೆ ಚಾತುರ್ ಮಾಸಕ್ಕೆ ಸ್ವಾಮಿಗಳು ಬಂದಾಗ ಅಲ್ಲಿಯೂ ಹೋಗುತ್ತಿದ್ದೆವು, ಎ,ಪಿ,ಎಸ್ ಕಾಲೇಜಿನ ಮೈದಾನದಲ್ಲಿ ಗಣೇಶೋತ್ಸವಕ್ಕೆ ದೊಡ್ಡ ತಾರಾಗಣವೇ ಬರುತ್ತಿತ್ತು. ಹತ್ತು ದಿನ ಪೂರ್ತಿ ಮನೋರಂಜನೆ,  ಕಡಲೇಕಾಯಿ ಪರಿಷೆ ಶುರುವಾದರೆ ನಾಲ್ಕು ದಿನವೂ ಮನೆಗೆ ಬರುವುದಕ್ಕೇ ಮನಸ್ಸಾಗುತ್ತಿರಲಿಲ್ಲ, ಇನ್ನೆರಡು ವಾರಕ್ಕೆ ಸುಬ್ರಮಣ್ಯ ಬೆಳ್ಳಿ ತೇರಿಗೆ ಹೋಗಿ, ತಿಂಡಿಬೀದಿಯಲ್ಲಿ ಇಷ್ಟವಾದದ್ದನ್ನೆಲ್ಲಾ ತಿಂದು ಬರುತ್ತಿದ್ದೆವು.  ಬಸವನಗುಡಿಯಲ್ಲಿದ್ದರೆ ಹೀಗೆಯೇ, ಒಂದು ದಿನವೂ ಬೇಸರ ಎಂಬುದೇ ಇರುವುದಿಲ್ಲ. 

ಇಂದಿಗೂ ಕೂಡ ಬೆಂಗಳೂರಿಗೆ ಹೋದರೆ ಮೊದಲು ಬಸವನಗುಡಿಗೆ ಹೋಗಿ ದೊಡ್ಡ ಗಣೇಶನಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಬಂದು, ಗಾಂಧಿ ಬಜಾರ್ ಗೆ ಹೋಗಿ ಬಂದರೆ ಮನಸ್ಸಿಗೆ ಸಮಾಧಾನ. ಎಷ್ಟೇ ಸಾವಿರ ಮೈಲಿಗಳಷ್ಟು ದೂರದಲ್ಲಿದ್ದರೂ ಮನಸ್ಸು ಮನೆಯೆಡೆಗೇ ಸೆಳೆಯುತ್ತದೆ. 

ಸಣ್ಣ ಪುಟ್ಟ ತೊಂದರೆಗಳೂ ಬೆಂಗಳೂರಿನಲ್ಲಿ ಇದ್ದೇ ಇವೆ. ಗಂಟೆಗಟ್ಟಲೆಯ ಟ್ರಾಫಿಕ್,  ಬೇಸಿಗೆಯ ಸಮಯದಲ್ಲಿ ನೀರಿನ ಸಮಸ್ಯೆ, ಯಾವಾಗಲೂ ಕರೆಂಟ್ ಕಟ್ ಮಾಡುವ ಸಮಸ್ಯೆ, ಮಳೆ ಬಂದರೆ ಮರದ ಕೊಂಬೆ ಬಿದ್ದು ರಸ್ತೆ ಬಂದಾಗುವುದು. ಹೀಗೆ ಎಲ್ಲಾ ಮಹಾನಗರದಲ್ಲಿರುವ ಸಮಸ್ಯೆ ಬೆಂಗಳೂರಿನಲ್ಲೂ ಇದ್ದೇ ಇದೆ. ಆದರೆ ಜನರೂ ಅವೆಲ್ಲಕ್ಕೂ ಹೊಂದಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಸಂತೋಷವಾಗಿ ಬದುಕುತ್ತಿದ್ದಾರೆ. 

ನಮಗೆ ಒಳ್ಳೆಯ ವಿದ್ಯಾಭಾಸ ಕೊಟ್ಟು, ಉದ್ಯೋಗ ಕೊಟ್ಟು, ಬಾಲ್ಯದ ದಿನಗಳನ್ನು ಸುಂದರವಾಗಿಸಿದ ಬೆಂಗಳೂರಿಗೆ ದೊಡ್ಡ ಧನ್ಯವಾದಗಳು. ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ ಎಂಬಂತೆ ಬೆಂಗಳೂರಿನ ನೆನೆಪುಗಳನ್ನು ಮೆಲಕು ಹಾಕಿಕೊಂಡು ಇಂದಲ್ಲಾ ನಾಳೆ ಅಲ್ಲಿಯೇ ಹೋಗಿ ವಾಸಿಸಬೇಕು ಎಂಬುದು ನನ್ನಂತೆಯೇ  ಹಲವಾರು ಅನಿವಾಸಿ ಭಾರತೀಯರ ಆಸೆ.  

‍ಲೇಖಕರು Admin

11 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading