ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣ ಬಲೂನು ಮಾರಿದ

-ಮತ್ತೂರು ಸುಬ್ಬಣ್ಣ

ಅದೊಂದು ಬೀದಿ ಬದಿಯ ಬಲೂನು ಮಾರುವ ಸಂಸಾರ. ಮನೆಯವರೆಲ್ಲ ರಸ್ತೆ ಬದಿಯಲ್ಲಿ ನಿಂತುಕೊ೦ಡು ಬಲೂನು ಮಾರುತ್ತಿದ್ದರು. ಆಕರ್ಷಕ ಬಲೂನುಗಳನ್ನು ಇಟ್ಟುಕೊಂಡು ʻಬಲೂನು ಕೊಳ್ಳಿ, ಬಲೂನು ಕೊಳ್ಳಿ, ಬಣ್ಣ ಬಣ್ಣದ ಬಲೂನುʼ ಎಂದು ಹೇಳುತ್ತ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದರು. ಕೆಲವು ಮಕ್ಕಳು ಬಲೂನು ಬಳಿ ಬಂದು ಆಸೆ ತೋರಿಸುತ್ತಿದ್ದರು. ಮಗುವಿನ ಅಪ್ಪ-ಅಮ್ಮ ಬಲೂನಿನಿಂದ ತಮ್ಮ ಮಕ್ಕಳನ್ನು ದೂರ ಎಳೆದುಕೊಂಡು ಹೋಗುತ್ತಿದ್ದರು. ಮತ್ತೆ ಕೆಲವು ತಾಯಂದಿರು ಬಲೂನಿನ ಬೆಲೆಯ ಬಗ್ಗೆ ಚೌಕಾಸಿ ಮಾಡುತ್ತಿದ್ದರು. ಅರ್ಧಬೆಲೆಗೆ ಕೇಳುತ್ತಿದ್ದರು. ಬಲೂನು ಮಾರುವವರಲ್ಲಿ ಮೊದಲು ಆಸೆ ಮೂಡಿಸಿ ನಂತರ ನಿರಾಶೆಗೊಳಿಸುತ್ತಿದ್ದರು. ಬಲೂನು ಮಾರುವ ಸಂಸಾರದ ಸದಸ್ಯರಲ್ಲಿ ಹದಿನೈದು ವರ್ಷದ ಬಾಲಕನೊಬ್ಬ ಹಾಗು ಹನ್ನೆರೆಡು ವರ್ಷದ ಆತನ ತಂಗಿ ಇದ್ದರು. ತಂಗಿ, ಬಲೂನು ಮಾರಾಟವಾಗದುದನ್ನು ಅಣ್ಣನಿಗೆ ಹೇಳುತ್ತ ಬೇಸರ ಪಟ್ಟು ಕೊಳ್ಳುತ್ತಿದ್ದಳು. ಬೀದಿಯ ಬಸ್‌ನಿಲ್ದಾಣದ ಬದಿಯಲ್ಲಿಯೇ ಅವರ ಬಲೂನು ಸಂಸಾರ. ಅಲ್ಲಿಗೆ ವಾಪಸು ಬಂದಾಗ ಅಣ್ಣ ಹೇಳಿದ, ʻನಾಳೆಯಿಂದ ನಾನು ಶಾಲೆಯ ಬಳಿ ಬಲೂನು ಮಾರುತ್ತೇನೆ. ಶಾಲೆಯಿಂದ ಹುಡುಗರು ಹೊರಡುವ ವೇಳೆಗೆ ಹೋಗುತ್ತೇನೆ.ʼ ಆಶ್ಚರ್ಯದಿಂದ ತಂಗಿ ಅಣ್ಣನತ್ತ ನೋಡಿದಳು.
ಮರು ದಿನದಿಂದ ಅಣ್ಣ ಶಾಲೆಯ ಬಳಿ ಹೋಗಿ ಬಲೂನು ಮಾರಲು ಆರಂಭಿಸಿದ. ಪ್ರತಿದಿನ ತಂಗಿ ಕೇಳುತ್ತಿದ್ದಳು. ʻಸ್ಕೂಲಿನ ಬಳಿ ಮಕ್ಕಳು ಬಲೂನು ಕೊಂಡರೇ? ಎಷ್ಟು ಖರ್ಚಾಯಿತುʼ ಎಂದು. ಅಣ್ಣನ ನಿರಾಶೆಯೇ ಉತ್ತರವಾಗಿರುತ್ತಿತ್ತು. ʻಏನೂ ಪ್ರಯೋಜನವಿಲ್ಲ ಪುಟ್ಟಿ, ಅವರು ಇಂಗ್ಲೀಷ್‌ನಲ್ಲಿ ಮಾತಾಡುತ್ತಾರೆ. ಬಲೂನು ಕೊಳ್ಳಿ ಅಂದರೆ ನಮ್ಮನ್ನು ಅಸಹ್ಯದಿಂದ ನೋಡುತ್ತಾರೆ.ʼ ʻಏನು ಮಾಡೋಣ ಈಗ?ʼಎಂದು ತಂಗಿ ಕೇಳಿದಳು. ʻನನಗೊಂದು ಉಪಾಯ ಹೊಳೀತಾ ಇದೆʼ. ʻಏನದು?ʼ ಎಂದು ತಂಗಿ ತಕ್ಷಣ ಕೇಳಿದಳು. ʻನಾವೂ ಅವರ ಭಾಷೆಯನ್ನೇ ಮಾತಾಡಿದರೆ?ʼ ʻಇಂಗ್ಲೀಷನ್ನು? ಅದು ಹೇಗೇ?ʼ ʻಈಗ ದಿವಸ ಶಾಲೆಯ ಬಳಿ ಹೋಗ್ತಾ ಇದೀನಲ್ಲ, ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತೇನೆ. ಅವರಂತೆ ಮಾತಾಡಲು ಕಲಿಯುತ್ತೇನೆ ಆ ಮೇಲೆ ನಮ್ಮ ಬಲೂನನ್ನು ಅವರಿಗೇ ಮಾರುತ್ತೇನೆ. ಹೇಗಿದೆ ನನ್ನ ಐಡಿಯಾ?ʼ

ಅಂದಿನಿ೦ದ ಅಣ್ಣ ಶಾಲೆಯ ಬಳಿ ಬಲೂನು ಮಾರಲು ಹೋಗುತ್ತಿದ್ದರೂ ವಿಶೇಷವಾಗಿ ಮಕ್ಕಳ ಮಾತನ್ನು ಆಲಿಸುತ್ತಿದ್ದ. ಅದನ್ನು ಅನುಕರಣೆ ಮಾಡುತ್ತಿದ್ದ. ಸಾಧಾರಣವಾಗಿ ಮಕ್ಕಳಾಡುವ ಮಾತುಗಳನ್ನು ಅಣ್ಣ ಕಂಠಗತ ಮಾಡಿಕೊಂಡ. ಆಶ್ಚರ್ಯದಂತೆ ಅಣ್ಣ ಚೆನ್ನಾಗಿಯೇ ಇಂಗ್ಲೀಷ್ ಮಾತನಾಡಲು ಕಲಿತ. ತನ್ನಲ್ಲಿರುವ ಉಡುಪನ್ನೇ ರಸ್ತೆ ಬದಿಯ ಕಲ್ಲಿನ ಮೇಲೆ ಒಗೆದ. ಮಡಿಚಿ ದಿಂಬಿನಡಿ ಇಟ್ಟುಕೊಂಡು ಇಸ್ತ್ರೀ ಮಾಡಿಕೊಂಡ.

ಅದು ಶನಿವಾರ. ಶಾಲೆಯಲ್ಲಿ ಪರೀಕ್ಷೆಯ ಫಲಿತಾಂಶ. ಶಾಲೆಯಲ್ಲಿ ಸಡಗರವೋ ಸಡಗರ. ಮಕ್ಕಳೆಲ್ಲ ರಂಗು-ರ೦ಗಿನ ಬಟ್ಟೆ ಧರಿಸಿ ಅಪ್ಪ ಅಮ್ಮರೊಡನೆ ಶಾಲೆಗೆ ಬರುತ್ತಿದ್ದರು. ಶಾಲೆಯ ಗೇಟಿನ ಬಳಿ ಅಣ್ಣ ಒಂದು ಜಾಗವನ್ನು ಆರಿಸಿಕೊಂಡ. ಶುಭ್ರವಾದ ಬಟ್ಟೆ ಧರಿಸಿ ಬಲೂನನ್ನು ಮಾರುತ್ತಿದ್ದ. ಅವನು ಬಳಸಿದ ಭಾಷೆ ಮಕ್ಕಳದ್ದೇ ಆಗಿತ್ತು. ಇಂಗ್ಲೀಷ್‌ನಲ್ಲಿ ಮಾತಾಡುತ್ತಿದ್ದ ಅವನನ್ನು ಮಕ್ಕಳು, ತಾಯ್ತಂದೆಯರು ಆಶ್ಚರ್ಯದಿಂದ ನೋಡುತ್ತಿದ್ದರು. ಮಕ್ಕಳಲ್ಲಿ ಆಸೆಮೂಡಿಸುತ್ತ ಅಣ್ಣ ಮಾತಾಡುತ್ತಿದ್ದ. ತಂಗಿ ಕೂಡ ದೂರದಿಂದ ನೋಡುತ್ತಿದ್ದಳು. ನಗುಮುಖದಿಂದ ಪುಟ್ಟ ಮಕ್ಕಳನ್ನು ಮಾತಾಡಿಸುತ್ತಿದ್ದ. ಅಣ್ಣನ ನಿರೀಕ್ಷೆಗೆ ಮೀರಿ ಬಲೂನು ಖರ್ಚಾಗುತ್ತಿತ್ತು. ಮಕ್ಕಳ ಭಾಷೆಯನ್ನೇ ಆಡುತ್ತಿದ್ದುದರಿಂದಲೋ ಏನೋ, ಪೋಷಕರೂ ಹೆಚ್ಚು ಚೌಕಾಸಿ ಮಾಡುತ್ತಿರಲಿಲ್ಲ. ʻಯು ವಿಲ್ ಬಿ ಹ್ಯಾಪಿ, ಇಫ್ ಯುವರ್ ಚೈಲ್ಡ್ ಈಸ್ ಹ್ಯಾಪಿ ಮೇಡಂʼ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಿದ್ದ!
ನೋಡು ನೋಡುತ್ತಿದ್ದಂತೆ ಬಲೂನುಗಳೆಲ್ಲ ಖಾಲಿಯಾದವು. ನಿರೀಕ್ಷಣೆಗಿಂತ ಹೆಚ್ಚು ಹಣ ಜೇಬು ಸೇರಿತು.

ಮನೆಗೆ ವಾಪಸು ಬರುತ್ತ ತಂಗಿ ಹೇಳಿದಳು, ʻಅಣ್ಣ, ನನಗೂ ಸ್ಕೂಲಿಗೆ ಸೇರಬೇಕೆಂದೆನಿಸುತ್ತಿದೆ.ʼ ʻನನಗೂ ಅಷ್ಟೆʼ ಅಂದ ಅಣ್ಣ, ಜೇಬಿನಲ್ಲಿದ್ದ ಹಣದ ಮೇಲೆ ಕೈ ಆಡಿಸುತ್ತ.

‍ಲೇಖಕರು Admin

29 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading