ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡ ದೇಶದ ಕುರಿತು ಪುಟ್ಟ ಪುಟ್ಟ ಕಥನಗಳು

ಶಶಿಧರ ಹಾಲಾಡಿ ಅವರ ಕೃತಿ ‘ಇಲ್ಲಿ ಶಾಸ್ತ್ರ ಹೇಳಲಾಗುವುದು’

‘ಸ್ನೇಹ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಪಾರ್ವತಿ ಜಿ ಐತಾಳ್ ಅವರ ಬರಹ ಇಲ್ಲಿದೆ.

-ಡಾ.ಪಾರ್ವತಿ ಜಿ.ಐತಾಳ್

‘ಇಲ್ಲಿ ಶಾಸ್ತ್ರ ಹೇಳಲಾಗುವುದು’ ಶಶಿಧರ ಹಾಲಾಡಿಯವರ ಹೊಸ ಪುಸ್ತಕ. ಅವರ ಈ ಹಿಂದಿನ ೨೦ ಕೃತಿಗಳಿಗಿಂತ ಪೂರ್ತಿ ಭಿನ್ನವಾದ ಒಂದು ಸ್ವಾರಸ್ಯಕರ ಕಥನ ಪ್ರಕಾರವಿದು. ಅಮೆರಿಕಾಕ್ಕೆ ಹೋಗಿ ಅಲ್ಲಿ ಮೂರು ತಿಂಗಳ ಕಾಲ ಕಂಡ, ಕೇಳಿದ, ಅನುಭವಿಸಿದ ವಿದ್ಯಮಾನಗಳ ಕುರಿತು ಇಲ್ಲಿ ೭೫ ಪುಟ್ಟ ಪುಟ್ಟ ಲೇಖನಗಳಿವೆ. Brevity is the soul of wit’ ಅನ್ನುವಂತೆ ನೋಡಿದ ವಿಶೇಷ ಸ್ಥಳಗಳ ಸ್ಥೂಲವಾದ ಬಾಹ್ಯ ನೋಟಗಳ ಜತೆಗೆ ಅವು ತಮ್ಮ ಮನಸ್ಸಿನ ಮೇಲೆ ಬೀರಿದ ಪರಿಣಾಮ, ಚಿಂತನೆಗೆ ಪ್ರೇರಿಸಿದ ಪರಿ ಮತ್ತು ಎಬ್ಬಿಸಿದ ಪ್ರಶ್ನೆಗಳನ್ನಷ್ಟೇ ಅವರಿಲ್ಲಿ ಜಾಣತನದಿಂದ ಸಂಕ್ಷೇಪವಾಗಿ ದಾಖಲಿಸುತ್ತಾರೆ.

ಮೂರು ತಿಂಗಳ ಸಣ್ಣ ಅವಧಿಯಲ್ಲಿ ಅಮೆರಿಕಾದಂತಹ ದೊಡ್ಡ ದೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಥಳಗಳನ್ನು ಲೇಖಕರು ನೋಡಿದ್ದಾರೆ. ಮಗುವಿನ ಬೆರಗುಗಣ್ಣುಗಳಿಂದ ಎಲ್ಲವನ್ನೂ ನೋಡುವ ಅವರಿಗೆ ಪ್ರತಿಯೊಂದರ ಬಗೆಗೂ ತಿಳಿದುಕೊಳ್ಳುವ ಕುತೂಹಲವಿದೆ. ನಮ್ಮ ದೇಶದಲ್ಲಿ ಇಲ್ಲದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕಾತರ, ನಮ್ಮ ದೇಶದಲ್ಲಿ ಇರುವ ವಿಷಯಗಳಾದರೆ ತೌಲನಿಕವಾಗಿ ತೂಗಿ ನೋಡುವ  ಹಂಬಲ, ಅವು ನಮ್ಮಲ್ಲಿದ್ದರೆ ಹೇಗಿರುತ್ತಿತ್ತು ಅನ್ನುವ ರಮ್ಯ ಕಲ್ಪನೆ-ಹೀಗೆ ಅವರ ಕಥನ ಸಾಗುತ್ತದೆ.

ಅಮೆರಿಕಾದಲ್ಲಿ ಆರು ತಿಂಗಳುಗಳ ಕಾಲ ಚಳಿಗಾಲದಲ್ಲಿ ಮನೆಯೊಳಗೆಯೇ ಕುಳಿತುಕೊಳ್ಳುವ ಶ್ವೇತವರ್ಣೀಯರು ಬೇಸಿಗೆ ಬಂದ ಕೂಡಲೇ ಎಲ್ಲೆಂದರಲ್ಲಿ ಬಿಸಿಲಿನ ಸವಿಯನ್ನು ಎಂಜಾಯ್ ಮಾಡುವುದು ಲೇಖಕರಿಗೆ ವಿಶೇಷವೆನ್ನಿಸುತ್ತದೆ. ಚರ್ಮ ಸುಡುವ ಬಿಸಿಲ ನಾಡಿನಿಂದ ಹೋದವರಿಗೆ ಬಿಸಿಲೆಂದರೆ ಇಷ್ಟು ಬೆಲೆ ಬಾಳುವಂಥದ್ದೇ ಅನ್ನಿಸುವುದು ಸಹಜ. ಹಾಗೆಯೇ ೨೦ನೆಯ ಶತಮಾನದ ಆರಂಭಕಾಲದಲ್ಲಿಯೇ ಅಗಲವಾದ ಹೆದ್ದಾರಿಗಳನ್ನು ದೇಶದೆಲ್ಲೆಡೆ ನಿರ್ಮಿಸಿದ ಅವರು ಸಾವಿರಾರು ಮೈಲಿಗಳನ್ನು ನಮ್ಮ ದೇಶದ ಇಮ್ಮಡಿ -ಮುಮ್ಮಡಿ ವೇಗದಲ್ಲಿ ಕ್ರಮಿಸುವುದನ್ನು ನೋಡಿ ನಮ್ಮ ದೇಶದಲ್ಲೂ ಹೀಗಿರಬೇಕಿತ್ತು ಅನ್ನಿಸುತ್ತದೆ. ಅಲ್ಲಿ ರಸ್ತೆ ಬದಿಯಲ್ಲೂ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆಯನ್ನು ಪಾಲಿಸುವ ವ್ಯವಸ್ಥೆಯನ್ನು ನೋಡಿದಾಗಲೂ ನಮ್ಮ ದೇಶವನ್ನೆಣಿಸಿ ಕೀಳರಿಮೆಯ ಭಾವನೆ ಹುಟ್ಟಿಕೊಳ್ಳುತ್ತದೆ. ನಗರದೆಲ್ಲೆಡೆ ತುಂಬಿಕೊಂಡಿರುವ ಗಗನಚುಂಬಿ ಕಟ್ಟಡಗಳ ಕಾಂಕ್ರೀಟ್ ಕಾಡನ್ನು ನೋಡಿದಾಗ ಅವರಿಗೆ ಆ ದೇಶ ಎಷ್ಟು ಮುಂದುವರಿದಿದೆ ಅನ್ನಿಸುತ್ತದಷ್ಟೆ ಹೊರತು ಅವರು ಕಾಡು ಕಡಿದು ನಾಡು ಮಾಡಿದ್ದಕ್ಕೆ ಬೇಸರವೆನ್ನಿಸುವುದಿಲ್ಲ. ಯಾಕೆಂದರೆ ಸಾಕಷ್ಟು ಕಾಡುಗಳನ್ನೂ ಹುಲ್ಲುಗಾವಲುಗಳನ್ನೂ ನಾಡಿನೊಳಗೆ ಗಿಡ-ಮರ-ಪಾರ್ಕುಗಳನ್ನೂ, ಕೆರೆ-ಸರೋವರಗಳನ್ನೂ ಬೆಳೆಸಿ ಹಸಿರನ್ನುಳಿಸಿಕೊಳ್ಳುವ ಕಾಳಜಿಯನ್ನು ಅವರು ತೋರಿಸಿದ್ದಾರೆ.

ಲೇಖಕರು ಮೊದಲಿನಿಂದಲೂ ಪರಿಸರ ಪ್ರೇಮಿಯೆಂದು ತಮ್ಮ ಹಿಂದಿನ ಎಲ್ಲಾ ಕೃತಿಗಳಲ್ಲಿ ತೋರಿಸಿಕೊಂಡವರು. ಸಹಜವಾಗಿಯೇ ಪ್ರಕೃತಿಯ ದೃಶ್ಯಗಳನ್ನು ನೋಡಿದಾಗ ಅವರ ಮನಸ್ಸು ಗರಿಗೆದರುತ್ತದೆ. ಮಿಚಿಗನ್ ಸರೋವರದುದ್ದಕ್ಕೂ ಕ್ರೂಸ್ ನಲ್ಲಿ ಹೋಗುವ ಅನುಭವವನ್ನು ಅವರು ತುಂಬಾ ಖುಷಿಯಿಂದ ಸವಿಯುತ್ತಾರೆ. ನದಿಗಳಿಗೆ ಅಡ್ಡಲಾಗಿ ಕಟ್ಟಿದ, ಅದ್ಭುತ ತಂತ್ರಜ್ಞಾನವನ್ನುಪಯೋಗಿಸಿ ದೋಣಿಗಳಿಗೆ ದಾರಿಮಾಡಿಕೊಡಲು ತೆರೆದುಕೊಳ್ಳುವಂತೆ  ಮಾಡಿದ ಸೇತುವೆಗಳು ಅವರಲ್ಲಿ ಆಶ್ಚರ್ಯ ಹುಟ್ಟಿಸುತ್ತವೆ. ಬೇರೆ ಬೇರೆ ಸಂದರ್ಭಗಳಲ್ಲಿ ಅವರಲ್ಲಿರುವ ಮೂಢನಂಬಿಕೆಗಳನ್ನು ನೋಡಿ ಅವರಿಗೆ ಅಚ್ಚರಿಯಾಗುತ್ತದೆ. ನಮ್ಮ ದೇಶದಲ್ಲಿರುವಂತೆ ಜ್ಯೋತಿಷ್ಯ ಕೇಳುವ ಹುಚ್ಚು ಇರುವವರು ಅಲ್ಲೂ ಇದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಕಂಡ ‘ಇಲ್ಲಿ ಶಾಸ್ತ್ರ ಹೇಳಲಾಗುವುದು’ ಅನ್ನುವ ಬೋರ್ಡು ತಮಾಷೆ ಎನ್ನಿಸುತ್ತದೆ. ಇಂಥದ್ದೇ ನೂರಾರು ವಿಚಾರಗಳು ಕೃತಿಯುದ್ದಕ್ಕೂ ತುಂಬಿಕೊಂಡಿವೆ.

ಅಮೆರಿಕಾಕ್ಕೆ ಯೂರೋಪಿಯನ್ನರು ಪದೇ ಪದೇ ವಲಸೆ ಬಂದು ಅಲ್ಲಿನ ಮೂಲನಿವಾಸಿಗಳನ್ನು ಓಡಿಸಿ ಅವರದ್ದಾಗಿದ್ದ ಪ್ರದೇಶಗಳನ್ನು ಆಕ್ರಮಿಸಿಕೊಂಡ ಬಗ್ಗೆ ಲೇಖಕರು ಹೇಳುತ್ತಾರೆ, ಹೊರತು ಅದರ ಬಗ್ಗೆ ಏನೂ ಕಮೆಂಟ್ ಮಾಡುವುದಿಲ್ಲ. ಅದನ್ನು ಬಹುಶಃ ಓದುಗರಿಗೇ ಬಿಟ್ಟಿದ್ದಾರೆ. ರಸ್ತೆಬದಿಗಳಲ್ಲೂ ಎಲ್ಲೆಲ್ಲೂ ಮನುಷ್ಯರ ಭಯವಿಲ್ಲದೆ ತಿರುಗಾಡುವ ಜಿಂಕೆಗಳ ಮೇಲೆ ನಿರ್ಭಾವುಕರಾಗಿ ವಾಹನಗಳನ್ನು ಓಡಿಸಿ ಅವುಗಳ ಸಾವಿಗೆ ಕಾರಣವಾಗುವ ಮತ್ತು ವಿನೋದಕ್ಕಾಗಿ ಎಂಬಂತೆ ಬೇಟೆಯಾಡಿ ಮೂಕಪ್ರಾಣಿಗಳನ್ನು ಕೊಲ್ಲುವ ಕ್ರೌರ್ಯದ ಬಗೆಗೂ ಅಷ್ಟೆ. ಪ್ರತಿಕ್ರಿಯೆ ಓದುಗರದ್ದೇ ಆಗಿರಬೇಕು. ಆದರೆ ಅಲ್ಲಿನ ಜನರು ವಿದೇಶದವರು ಪರಿಚಯವಿಲ್ಲದವರೇ ಆದರೂ ನೋಡಿದ ಕೂಡಲೇ ಮುಗುಳುನಕ್ಕು ‘ಹಾಯ್, ಹಲೋ’ ಅನ್ನುವುದು, ಅಗತ್ಯ ಬಂದರೆ ಸಹಾಯ ಮಾಡುವುದು (ಅಲ್ಲಿ ಕಾಣುವ ಭಾರತೀಯರೇ ಇದನ್ನು ಮಾಡುವುದಿಲ್ಲ) ಲೇಖಕರು ಅವರಲ್ಲಿ ಮೆಚ್ಚುವ ಅಂಶ. ಆದರೆ ಪದೇ ಪದೇ ಅದನ್ನು ‘ದೊಡ್ಡ ದೇಶ’ವೆಂದು ಕರೆಯುವುದರ ಉದ್ದೇಶ ಅರ್ಥವಾಗುವುದಿಲ್ಲ. ನಿಸ್ಸಂಶಯವಾಗಿಯೂ ಅದು ಶ್ರೀಮಂತ ದೇಶ ಹೌದು. ಭೌಗೋಳಿಕವಾಗಿ ದೊಡ್ಡದೂ ಹೌದು. ನಾಗರಿಕತೆಯಲ್ಲಿ ಮುಂದುವರಿದ ದೇಶವೂ ಹೌದು. ಆದರೆ ‘ದೊಡ್ಡತನ’ ಇರುವ ದೇಶ ಹೌದೇ?

ಕೃತಿಯಲ್ಲಿ ಲೇಖಕರು ನೋಡಿದ  ಸ್ಥಳ ಮತ್ತು ವಿದ್ಯಮಾನಗಳ ವಿವರಗಳು ಮಾತ್ರವಲ್ಲದೆ ಅವರ ವೈಯಕ್ತಿಕ ಸಂಬಂಧಗಳ -,ಮಗಳು, ಮಡದಿ, ಸ್ನೇಹಿತರು ವಿಚಾರಗಳೂ ಅಲ್ಲಲ್ಲಿ ಬರುತ್ತವೆ. ಅವರು ಬಹಳವಾಗಿ ಇಷ್ಟಪಡುತ್ತಿದ್ದ ಪಾರ್ಲೆ ಜಿ ಬಿಸ್ಕಿಟ್ ಅಲ್ಲೆಲ್ಲೂ ಸಿಗದಿದ್ದಾಗ ಅದಕ್ಕಾಗಿ ಪರದಾಡಿದ್ದೂ ಕಥನದಲ್ಲಿ ಒಂದು ಜಾಗ ಪಡೆಯುತ್ತದೆ. ಈ ರೀತಿಯ ಕಥನಗಳ ನಡುವೆ ವೈಯಕ್ತಿಕ ಸ್ಪರ್ಶ ಕೊಡುವುದೂ ಓದುಗರ ಆಸಕ್ತಿಯನ್ನು ಹಿಡಿದಿಡುವ ದೃಷ್ಟಿಯಿಂದ ಬಹಳ ಮುಖ್ಯ. ‌ಪ್ರತಿ ಎರಡು ಪುಟಗಳಲ್ಲಿ ಹಾಕಿರುವ ಸುಂದರ ಫೋಟೋಗಳು ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಗಡಿಬಿಡಿಯಲ್ಲಿ ಬರೆದು ಮುದ್ರಣಕ್ಕೆ ಕೊಟ್ಟದ್ದೆಂದು ಅವರೇ ಹೇಳಿಕೊಂಡಿದ್ದಾರೆ. ಸಹಜವಾಗಿಯೇ ಕರಡು ತಿದ್ದುವಿಕೆಯಲ್ಲಿ ಕೆಲವು ತಪ್ಪುಗಳು ಉಳಿದುಕೊಂಡಿವೆ.

‍ಲೇಖಕರು Admin

29 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading