-ನಂದಿನಿ ಹೆದ್ದುರ್ಗ
‘ನನ್ನ ಇಷ್ಟು ಕಾಲದ ಆಯಸ್ಸಿನಲ್ಲಿ
ಪ್ರತಿ ಋತುವಿಗೂ
ಹೊಸಹೊಸ ಪ್ರೇಮಿ
ಹೊಸಹೊಸ ವಿರಹ
ಹೊಸಹೊಸ ನೋವು
ಹೊಸಹೊಸ ಕವಿತೆ..
ಹೊಸಹೊಸ ಕಾವು..’
ಸರ್ಕಲ್ಲಿನಲ್ಲಿ ನಡೆದ ಕವಿಗೋಷ್ಟಿಯಲ್ಲಿ
ಸೆಂಟರ್ ಅಫ್ ಅಟ್ರ್ಯಾಕ್ಷನ್
ಆಗಬೇಕೆಂದು
ಮೇಲಿನ ಸಾಲು ಓದಿದ್ದೆ.
ಹಿಂದೆ ಮುಂದೆ ಕವಿತೆ ಇದ್ದಿದ್ದು ನಿಜವೇ.
ಓದಿ ಮುಗಿಸಿದ ನಂತರವೂ
ಜನ ಮೌನವಾಗಿಯೇ ಉಳಿದರು.
ಇಂತಹ ನೀರಸ ಸಮಾಜದಿಂದೇನು ಸುಖ.
ಮೂರು ದಾರಿ ಕೂಡುವಲ್ಲಿ
ಕವಿತೆಯ ಬಗ್ಗೆಯಾಗಲಿ
ಪ್ರೇಮಿಯ ಬಗ್ಗೆಯಾಗಲಿ
ಕೊನೆಪಕ್ಷ ಕವಿಯ ನಡತೆಯ ಬಗ್ಗೆಯಾಗಲಿ
ಮಾತನಾಡದ ಜನ
ನಾಶವಾಗಿಹೋಗಲಿ ಮುಂದೊಂದು ದಿನ.
—
ಕವಿಯೇ..ಕವಿತೆಯಲ್ಲಿ ಬರೆದಿದ್ದು
ಕೃತಿಗಳಲ್ಲಿ ಮಾತ್ರ ಉಳಿಯಲಿ
ಪದಗಳ ಕರೆದು
ಪದಗಳ ಸೋಸಿ ಪದಗಳ ಕಾಯಿಸಿ ಆರಿಸಿ
ಹೆಪ್ಪಿಟ್ಟು ಕಡೆದೆ
ಕವಿತೆ.. ನವನೀತೇ ಎಂದೆಲ್ಲಾ
ಕವಿಗೋಷ್ಟಿಗಳಲ್ಲಿ
ಏರಿಳಿತದ ಸ್ವರದಲ್ಲಿ
ವಾಚಿಸಲು ಹೋಗಬಾರದು.
ಅಸಲಿಗೆ ಅಲ್ಲಿ
ಜನ ಕುಳಿತಿರುವುದೇ ಆ ನಟಿಯ
ಜೊತೆಗೆ ಸೆಲ್ಫಿ ಪಡೆಯಲು.
—
ಮುಟ್ಟು ನಿಲ್ಲುವ ಕಾಲಕ್ಕೆ
ಮೈಕಟ್ಟು ದೃಢವಾಗುತ್ತದೆ
ಸೆಲೆ ಒಡೆಯುತ್ತದೆ
ಎಲೆ ತೊನೆಯುತ್ತದೆ
ಮೊಲೆಗಳು
ನಿಮಿರಿರುವುದನ್ನೂ ಹಿಡಿದಿಟ್ಟಿದ್ದಾರೆ
ಕಲೆಯಲ್ಲಿ ಕಲಾವಿದರು
ಗಂಡನಿಗೆ ಷಂಡತ್ವ
ಒದಗಿರುತ್ತದೆ
ಎಂದು ಯಾವ ವಿಜ್ಞಾನವೂ ಹೇಳುವುದಿಲ್ಲ.
ಕವಿಗಳೇ… ದಾಖಲಿಸಿ ಅದನ್ನೂ,
ಕವಿಗೋಷ್ಟಿಗಳು ಮನದಲ್ಲಿರಲಿ
—
ನನ್ನ ನಾಯಿ ಟಾಮಿ
ನಿನ್ನ ನಾಯಿ ನಾಯಿ
ಎನ್ನುವುದು ಈ ತನಕದ
ಲೋಕದ ನೀತಿ.
ಬಿದ್ದ ಆಳಿಗೊಂದು ಕಲ್ಲು ಒಗೆದು
ಏಳದಂತೆ ಮೂಳೆ ಮುರಿದು
ಮೇಲಕ್ಕಿಷ್ಟು ಮಣ್ಣು ಒಗೆದು
ಕ್ಯಾಮೆರಾ ಎದುರಾದಾಗ
ಕವಿಗೆ ಸೂಪು ಕುಡಿಸುತ್ತಾರೆ
ಖಾಲಿ ಬಟ್ಟಲಿನಲ್ಲಿ
ಸತ್ಯಾಗ್ರಹ ಮುಗಿಸಿದ ಮೇಲೆ
ಕವಿ ಬಾಲ ಬಗ್ಗಿದ ನಾಯಿ.
ಹಾಗಾಗಿ…
ನನ್ನ ಕವಿತೆಯೇ ಶ್ರೇಷ್ಠ
ಎಂದು ಅದರ ಪ್ರತಿ ಹಿಡಿದು ಅಡ್ಡಾಡಬಾರದು ಹೀಗೆ.
ನಿಮ್ಮ ಬಡಕಲು ನಾಯಿಯ ಬಾಲ ಕತ್ತರಿಸಿ
ಅವರ ಟಾಮಿಗೆ ಆಡಲು ನೀಡಿರಿ
ಕವಿಗಳೆ
ಹೇಳಿಕೆ ಕೊಡಬಲ್ಲಿರಿ ನೀವು
ಬಾಳಿಕೆ ಬರುವುದಕ್ಕೆ
ಕವಿಗೋಷ್ಠಿಗಳಿಂದ ಕರೆ ಬರುವಂತೆ ನೋಡಿಕೊಳ್ಳಿ.
—
ನೀವು ಬರೆಯದೆ ಉಳಿದರೆ
ಬಡವಾಗುವುದಿಲ್ಲ ಬ್ರಹ್ಮಾಂಡ
ಕವಿಸುವ ಕವಿತೆಗೇ ಕಾಯುತ್ತಿದ್ದಾರೆ ಮಂದಿ
ಎಂದು ತಪ್ಪು ತಿಳಿಯುವುದೇ ಕವಿಯ ಉಮೇದಿ
ಉಪಕೃತರಾದ ಕವಿತೆ ಹೊಸೆದವರೇ,
ತಿರಸ್ಕೃತರಾದ ಕವಿತೆ ಬರೆದವರೆದಿರು
ನಿಮ್ಮದು ಬೆಪ್ಪು ನಗೆಯಷ್ಟೆ.
ಕವಿಗೋಷ್ಟಿಗೆಂದೇ
ರಕ್ತದ ಒಗ್ಗರಣೆ ಕೊಟ್ಟ
ಹುರಿದ ನರಮಾಂಸದ ಕವಿತೆ
ಎತ್ತಿಡಿ.
ನೆಂಚಿಕೊಳ್ಳಲು
ಅವ್ವ
ಸುಟ್ಟ ಒಂದೇ ಒಂದು ರೊಟ್ಟಿಯಿರಲಿ.
—
ವಿಚಾರವಾದಿಗಳು ಓಡಾಡುವ ಜಾಗದಲ್ಲಿ
ಒಲವಿನ ಕವಿತೆ ಓದಿ
ನಗೆಪಾಟಲಿಗೀಡಾದವರೇ
ಬುದ್ದಿಜೀವಿಗಳು ಒಗ್ಗೂಡಿದಲ್ಲಿ
ಬಸವ ಬುದ್ದರನ್ನು
ಅಲಂಕರಿಸಿ ತೇರಿನಲ್ಲಿ ಕರೆತನ್ನಿ
ಸಾಧ್ಯವಾದರೆ
ಸನ್ನದ್ದು ಸಲೀಮಾ ಜೆಸ್ಸಿ ಪಾಂಡುರಂಗರನ್ನು
ಕವಿತೆಯಲ್ಲಿ ಕೂರಿಸಿಕೊಳ್ಳಿ
ಕಟ್ಟ ಕಡಕಡ ಕಟ್ಟಾ
ಕಟ್ಟ ಕಡಕಡ ಕಟ್ಟಾ
ಎನ್ನುವ ರಿಧಮ್ಮಿನಲ್ಲಿರಲಿ ಪದ್ಯ
‘ಒನ್ಸ್ ಮೋರ್… ಒನ್ಸ್ ಮೋರ್..’
ಬರದಿದ್ದೀತೆ ಕವಿಗೋಷ್ಟಿಯಲ್ಲಿ?
ಒಲವಿನ
ಕವಿತೆಗೆ ಹೋದ ಮಾನ
ಹುಸೇನರ ಕವಿತೆಯೊಂದಿಗೆ ಮರಳಬಹುದು
ಯತ್ನ ನಿಲ್ಲಿಸದಿರಿ
—
ಹಿರಿಯ ಕವಿಯಿಂದ ಕರೆ ಬಂದಾಗ
ಕವಿತೆ ಬರೆದಿಲ್ಲವೆಂಬ ತಹತಹ ಸಹಜ
ಹೊರಡುವಾಗಿನ ಗೋಳು
ದಾರಿಯ ಸೊಬಗು
ಪಕ್ಕದವನ ಹುರುಪು ಗಮನಿಸಿ
ಬಸ್ಸಾದರೆ
ಟಿಕೆಟ್ ಟಿಕೆಟ್ ಎನ್ನುವವನ ಸ್ವರ
ಡ್ರೈವರನ ಕೈ ರೋಮದ ವಿವರ
ಒಣಗಿದ ಹೂಹಾರ
ಇತ್ಯಾದಿಗಳನ್ನೂ ನೋಡಿ
ಪ್ಯಾಲೆಸ್ಟೈನ್ ಗಾಜಾಪಟ್ಟಿ
ಇಸ್ರೇಲು ರಷ್ಯಾಗಳನ್ನೊಮ್ಮೆ
ಗೂಗಲಿಸಿ ಟಿಪ್ಪಣಿ ಮಾಡಿಡಿ
ಪತ್ರಿಕೆಯಲ್ಲಿ ಸಿಕ್ಕ ಶೋಭಾಯಮಾನ
ಪದಗಳ ಹೆಕ್ಕಿಟ್ಟುಕೊಳ್ಳಿ
ಭರವಸೆಯಿರಲಿ ಕವಿತೆ ಹುಟ್ಟುವ ಕುರಿತು
ಎಷ್ಟೇ ದೊಡ್ಡ ಕವಿಗೂ
ಕವಿತೆ ಓದುವವರೆಗೆ ಕವಿಗೋಷ್ಟಿಯಲ್ಲಿ
ಚಡಪಡಿಕೆ ಇದ್ದದ್ದೆ…
—
ಬಿಗುಮಾನದಿಂದ ಕೂತಿರುತ್ತಾರೆ
ಬದಿಯವರು
ಮೊದಲ ಹೆಸರು ಅವರದ್ದೇ ಆದರಂತೂ
ಕೊನೆಯವರೆಗೂ ಕೊಸರು
ನಡೂವಿಗೆ ವಿರಾಜಮಾನರಾಗ
ಬಯಸುವವರು ಕೊಂಚ ಮುಂಚಿಂದಲೇ
ಎಚ್ಚರದಲ್ಲಿರುತ್ತಾರೆ
ಮುನ್ನಿನ ಗೋಷ್ಠಿ ಮುಗಿಯುವ ಮುನ್ನವೇ
ಮೆಟ್ಟಿಲ ಬಳಿ ನಿಲ್ಲುತ್ತಾರೆ
ರಹಸ್ಯ ಸಂಕೇತಗಳ ಕೊಡುವವರ
ಕಡೆಗೆ ನೋಡಬಾರದು ಎಂದಿಗೂ
ಫೋಟೊ ವಿಡಿಯೋ ಮಾಡುವ
ಚಾಕರಿ ವಹಿಸಬಹುದು
ಕೊನೆಯ ಗ್ರೂಪ್ ಫೋಟೊಕ್ಕೂ ಮುನ್ನ
ಇಳಿದು ಹೋದವನ
ಕುರಿತು ನಿಮ್ಮೊಳಗೇ ಮಾತಾನಾಡಿಕೊಳ್ಳಿ,
ನ್ಯಾಚುರಲ್ಲಾಗಿರುತ್ತಾದೆ ಫೋಟೋ
ಕಣ್ಣುಗಳು ಭೆಟ್ಟಿಯಾಗಲು ಬಯಸಿದರೆ
ಬಿಟ್ಟುಬಿಡುವುದೇ ಸೂಕ್ತ
ಅಲ್ಲೆ
ಸಿಕ್ಕಬಹುದೊಬ್ಬ ಆತ್ಮಸಖ
ಕವಿಗೋಷ್ಟಿ ನಿಜಕ್ಕೂ ಸುಖ






0 Comments