ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರಿಬ್ಬರ ಆದರ್ಶ ಸಂಸಾರ!

-ವಿಜಯಶ್ರೀ ಹಾಲಾಡಿ

ಅವರಿಬ್ಬರ ಆದರ್ಶ ಸಂಸಾರ!

ಬಚ್ಚಲುಮನೆಯ
ಬಾಗಿಲೂ ಮುಚ್ಚದೆ
ಮೂತ್ರ ಮಾಡಿ
ಕಮೋಡಿನ ಮೇಲೆಲ್ಲ ಸಿಡಿಸಿ
ಕೆಲವೊಮ್ಮೆ ಫ್ಲಷ್
ಮಾಡುವುದನ್ನೂ ಮರೆತು
ಅವನು ನಿರಾಳವಿರುತ್ತಾನೆ..
ಬೋಲ್ಟ್ ಬಿದ್ದಿದೆಯೇ?
ಎರಡೆರಡು ಸಲ ಖಚಿತಪಡಿಸಿ
ಗಸಗಸ ಉಜ್ಜಿ, ಗೋಡೆ
ಟೈಲ್ಸ್ ಹೊಳೆಯುವಂತೆ
ತೊಳೆ ತೊಳೆದು
ಸ್ನಾನ ಇತ್ಯಾದಿ ಮುಗಿಸಿ
ಪರಿಮಳದ ಫಿನಾಯಿಲ್
ತಳಿದು ಘಮಘಮಿಸುವಂತೆ
ಅಚ್ಚುಕಟ್ಟುಗೊಳಿಸಿ
ಹೊರ ಬರುತ್ತಾಳೆ!

ಸೆಕೆಸೆಕೆಯೆಂದು
ದೊಗಳೆ ಚಡ್ಡಿ ಸಿಕ್ಕಿಸಿ
ಅರೆ ಮೈ ಬಿಟ್ಟುಕೊಂಡು
ಅವನು ಊರೆಲ್ಲ
ಅಲೆದಾಡಿ ಬರುವಾಗ
ಬಟ್ಟೆಗಳ ಮೇಲೆ ಬಟ್ಟೆ
ಧರಿಸಿ ಬೆವರು ಸುರಿಸುತ್ತ
ದುಗುಡದ ಮುಖಕ್ಕೆ
ನಗು ಸಿಂಪಡಿಸಿ
ತಣ್ಣನೆಯ ಪಾನಕ
ನೀಡುತ್ತಾಳೆ!

ದಾಂಪತ್ಯದ ಹೊರಗೆ
ಅವನಿಗೆ ಪ್ರೇಮವಿದೆಯೆಂಬ
ಗುಟ್ಟನ್ನು ಸಂಬಂಧಿಕರೆದುರು
ಮುಚ್ಚಿಡುವಲ್ಲಿ ಅವಳು
ಗೆಲುವು ಸಾಧಿಸಿದ್ದಾಳೆ!
ಬಾಲ್ಯದ ಗೆಳೆಯನೊಂದಿಗೆ
ಪದೇ ಪದೇ ಮಾತಾಡುತ್ತಾಳೆಂದು
ತವರಿಗೆ ದೂರು ಒಯ್ದು
ಪಂಚಾಯ್ತಿ ನಡೆಸಿ
ಅವನು ಸರಿಪಡಿಸಿದ್ದಾನೆ!

ಮೂಲೆ ಮೂಲೆ
ತಿಕ್ಕಿ ಒರೆಸಿ ಚಂದಗಾಣಿಸಿ
ಅಡುಗೆ ತಿಂಡಿ ಮಾಡಿ ಬಡಿಸಿ
ಎದೆಯೆತ್ತರ ಬೆಳೆದ ಮಕ್ಕಳು
ಅತ್ತೆ ಮಾವ- ಬಂದು ಹೋಗುವ
ನೆಂಟರಿಷ್ಟರನ್ನು ಸಂಭಾಳಿಸಿ
ಅವಳು ಮನೆ
ನಿಭಾಯಿಸುತ್ತಾಳೆ..
ಆಗಾಗ ಬಯ್ದು ತಿದ್ದಿ
ಜಬರ್ದಸ್ತು ತೋರಿಸಿ
ಯಜಮಾನಿಕೆ ವಹಿಸಿ
ಅವನೂ ಸಹಕರಿಸುತ್ತಾನೆ!

ಲೋಕದ ಬಾಯಿಗೆ ಬೀಳದೆ
ಅವರಿಬ್ಬರ ಸಂಸಾರ;
ಮನೆತನ- ಮರ್ಯಾದೆ
ಆದರ್ಶವಾಗಿಯೇ
ಸಾಗುತ್ತಿದೆ
ಎಂದಿನಂತೆ!

‍ಲೇಖಕರು Admin

29 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading