-ಮಹಮ್ಮದ್ ರಫೀಕ್ ಕೊಟ್ಟೂರು
ಕುಬ್ಜನಾದ ದೇವರು..!
ತುತ್ತು ಅನ್ನ, ಕಣ್ತುಂಬಾ ನಿದ್ದೆ
ಬಾಯ್ತುಂಬಾ ಸಿಹಿ ಮಾತು
ಬದುಕು ಹಗುರಾಗಿಸಿತ್ತು
ಅದೊಂದು ಕಾಲ
ಹಸಿದ ಹೊಟ್ಟೆಗೆ
ಹಕ್ಕಳೆಗಟ್ಟಿದ ಮುದ್ದೆ
ತಂಗಳು ರೊಟ್ಟಿಗಳೇ ನೈವೇದ್ಯವಾದರೂ
ದಿನ ದಿನವೂ ಹಬ್ಬ
ಇತ್ತೊಂದು ಕಾಲ
ಅಡುಗೆಗೊಂದು ಕೋಣೆ
ಉಂಡುಟ್ಟು ಮಲಗಲೊಂದು,
ಕೈ ಚಾಚಿದರೆ ಸಿಗುವ
ಕೊಟ್ಟಿಗೆ
ಜನ ಬಿಡಿ ದನಗಳೂ
ನಮ್ಮೊಂದಿಗಿದ್ದ ಸಮೃದ್ಧ ಕಾಲ
ಪ್ರಾಣಿ, ಪಕ್ಷಿ, ಕಲ್ಲು, ಮಣ್ಣು, ಮರ
ದೇವರಾಗಿ ಹರಿವೇ ನೀರೇ ಗಂಗೆಯಾಗಿ
ಬದುಕೂ ಸಾಕಾರವಾದ
ನೆಮ್ಮದಿಯ ಕಾಲ
ಈಗ ಒಬ್ಬರಿಗೊಂದು ಕೋಣೆ
ಹೊಟ್ಟೆಗಷ್ಟೇ ಸಾಲದೆಂದು
ಬಾಯಿಗೂ ಡಯಾಬಿಟೀಸ್
ದನಗಳಿರಲಿ
ಮನುಜರೂ ನಮ್ಮಿಂದ ದೂರ
ದೇವರೂ ಕುಬ್ಜನಾಗಿ
ತನ್ನದೇ ಕುಲಕೆ ಮಿಡಿಯುತಿರಲು
ಏನೆಂದು ಹೆಸರಿಡಲಿ ಈ ಕಾಲವ?






0 Comments