-ರುಕ್ಮಿಣಿ ನಾಗಣ್ಣವರ
ಅಹಂಕಾರದ ಗೆಜ್ಜೆ
ಮಗುವಿನ ಪುಟ್ಟ ಕೈ
ಮೊದಲು ಹಿಡಿಯುವುದು
ತಾಯಿಯ ಬೆರಳನ್ನು
ಮತ್ತು
ಬಣ್ಣದ ಆಟಿಕೆಯನ್ನು
ಆದರೆ
ಆ ಕೈಗಳಿಗೆ
ಅಸ್ತ್ರ ಹಿಡಿಯಲು ಗೊತ್ತಿಲ್ಲ
ಅದರ ಬೆರಳುಗಳನ್ನು
ಮುಷ್ಟಿಯಾಗಿಸುವುದು ನಾವೇ
ಆ ಪುಟ್ಟ ಬೆರಳುಗಳು
ನಮ್ಮಿಂದಲೇ
ಈ ಜಗತ್ತನ್ನು
ಅರ್ಥಮಾಡಿಕೊಳ್ಳುತ್ತವೆ
ಕಣ್ಣೀರು ನುಂಗಲು
ಆಜ್ಞೆ ವಿಧಿಸಿದೆವು
ಬೆದರಿದ ಉಸಿರಿಗೆ
ಭಯದ ಬೇಲಿ ಹಾಕಿದೆವು
ಬಲಶಾಲಿಯಾಗು ಎನ್ನುವ ಶಿಕ್ಷಣದಲ್ಲಿ
ಅನುಕಂಪವನ್ನೂ ಮರೆಯಿಸಿದೆವು
ಆದರೆ
ನಿಜವಾದ ಬಲವೆಂದರೆ
ಮತ್ತೊಬ್ಬರ ರೆಕ್ಕೆ ಕತ್ತರಿಸುವುದಲ್ಲ
ಜೊತೆಗೆ ಹಾರಲು
ಆಸರೆಯಾಗುವುದು
ಎನ್ನುವುದನ್ನು ಹೇಳಿಕೊಡಲಿಲ್ಲ
‘ಬೇಡ’ ಎನ್ನುವ
ಸಣ್ಣ ನಿರಾಕರಣೆಯೊಳಗೆ
ಆತ್ಮಗೌರವವಿದೆ
ಪರರ ದೇಹ
ಬಯಲ ದಾರಿಯಲ್ಲ
ಅಲ್ಲೊಂದು ಗಡಿಯಿದೆ
ಒಪ್ಪಿಗೆಯೇ
ಅದರ ಬಾಗಿಲೆಂಬುದನ್ನು
ಬಿದ್ದವರ ಕಣ್ಣೀರಿಗೆ
ಹಾದಿ ಬಿಟ್ಟು ನಿಲ್ಲುವುದು
ಕುಸಿದ ಜೀವಕ್ಕೆ
ಕೈಚಾಚುವುದು
ಮನುಷ್ಯರಾಗುವ ಮೊದಲ ಹೆಜ್ಜೆ
ಎಂಬುದನ್ನು ನಾವು ಕಲಿಸಲೇ ಇಲ್ಲ
ಆದರೆ ನಾವೋ
ಆ ಮುಗ್ಧ ಕಾಲಿಗೆ
ಅಹಂಕಾರದ ಗೆಜ್ಜೆ ಕಟ್ಟಿ
ಅಖಾಡಕ್ಕೆ ತಳ್ಳುತ್ತಿದ್ದೇವೆ
ಗೆಲ್ಲಲು
ಮೀರಲು
ಮೇಲೇರಲು
ಆ ಓಟದ ಭರದಲ್ಲಿ
ಒಮ್ಮೆ ಹೆಜ್ಜೆ ನಿಲ್ಲಿಸಿ
ಪಕ್ಕದವನ ಉಸಿರು
ಕೇಳುವುದನ್ನೂ
ಮರೆತುಬಿಡುತ್ತೇವೆ
ದೊಡ್ಡವರಾಗುವ ಮುನ್ನ
ಜಗತ್ತನ್ನು ಗೆಲ್ಲುವುದಕ್ಕಿಂತ
ಒಬ್ಬರ ನೋವಿನಲ್ಲೊಬ್ಬರು
ನೆರಳಾಗುವುದನ್ನು
ಕಲಿಯಬೇಕಿದೆ
ಏಕೆಂದರೆ
ಕ್ರೌರ್ಯ ದಿಢೀರನೆ ಅಪ್ಪಳಿಸುವ
ಸಿಡಿಲಲ್ಲ
ಅದರ ಕರಾಳ ಬೀಜಗಳು
ಕಂಡೂ ಕಾಣದಂತೆ ನಕ್ಕ
ವಿಕೃತ ನಗುವಿನಲ್ಲಿ
ತಪ್ಪನ್ನು ಕಂಡೂ
ಮೌನವಾಗಿರುವುದರಲ್ಲಿ
ಸರಿಪಡಿಸದ ತಪ್ಪು ಕಲ್ಪನೆಗಳಲ್ಲಿ
ಸಣ್ಣದೆಂದು ಕಡೆಗಣಿಸಿದ ಸಂಗತಿಗಳಲ್ಲಿ
ನೋಡಿದರೂ ನೋಡದಂತೆ
ದಾಟಿಹೋದ ಹೆಜ್ಜೆಗಳಲ್ಲಿ
ಮಣ್ಣಿನೊಳಗೆ ಹೂತುಹೋಗಿ
ಒಂದು ದಿನ
ನೆರಳನ್ನೇ ನುಂಗುವ
ಮರವಾಗಿ ಎದ್ದು ನಿಲ್ಲುತ್ತವೆ
ಮಕ್ಕಳು
ತಮ್ಮ ಕೈಯಲ್ಲಿ
ಏನನ್ನೂ ಹಿಡಿದು ಹುಟ್ಟುವುದಿಲ್ಲ
ಆ ಪುಟ್ಟ ಬೆರಳುಗಳಿಗೆ
ನಾವು ಕೊಡುವುದೇನು
ಹೂವಿನ ಸ್ಪರ್ಶವೋ?
ಕೈ ಹಿಡಿಯುವ ಧೈರ್ಯವೋ?
ಅಥವಾ
ಎತ್ತಿದ ಮುಷ್ಟಿಯೋ?
ಒಮ್ಮೆ
ನಮ್ಮನ್ನೇ ನಾವು ಕೇಳಿಕೊಳ್ಳಬೇಕಿದೆ






0 Comments