-ಕುಸುಮ ಪಟೇಲ್
ಮನೆಯ ಮುಂದಿನ ಬೆಂಕಿ, ಬಂದು ಹೋಗುವ ಜನ, ನೀರವ ಮೌನದ ನಡುವೆ ಕೇಳುವ ಪಿಸುಮಾತು ಆ ಮನೆಯಲ್ಲಿ ಸಾ ವಾಗಿರುವುದನ್ನು ಸಾರಿಸಾರಿ ಹೇಳುತ್ತಿತ್ತು. ಮನೆಯ ಪಕ್ಕದಲ್ಲೇ ಇದ್ದ ಕಾರಿನ ಶೆಡ್ ನಲ್ಲಿ ದೇಹವನ್ನು ಇರಿಸಲಾಗಿತ್ತು. ಅಲ್ಲಿಯೇ ಪಕ್ಕದಲ್ಲಿ ಮಾತಿಲ್ಲದೆ ಕೂತಿದ್ದಳು ಸಿರಿ ಒಂದೇ ಸಮನೆ ಅಳುವ ಅಮ್ಮನನ್ನು ನೋಡುತ್ತಾ… ಅತ್ತು ಅತ್ತು ಆಕೆಯ ಕಣ್ಣುಗಳು ಕೆಂಡದ ಉಂಡೆಗಳಾಗಿದ್ದವು. ಆಗೊಮ್ಮೆ ಈಗೊಮ್ಮೆ ಮಗಳು ಸಿರಿಯನ್ನು ತಬ್ಬಿ ಅಳುತ್ತಿದ್ದಳು ವಸಂತ.ಆದರೆ ಸಿರಿ ಮಾತ್ರ ದಂಗು ಬಡಿದವಳಂತೆ ಶೂನ್ಯವನ್ನೆ ನೋಡುತ್ತಿದ್ದಳು.ಅವಳ ತೊಡೆಯ ಮೇಲೆ ಒಂದು ಪುಟ್ಟ ಮಗು.ಅದು ಇನ್ನೂ ಎಳೆಯ ಕೂಸು. ಹೆಚ್ಚೆಂದರೆ ಒಂದು ತಿಂಗಳಿನದಿರಬಹುದು.”ಸಿರಿ, ಪಾಪುನ್ಯಾಕವ್ವ ಕರ್ಕಂಡ್ ಬಂದೆ, ಒಳಗ್ ಕರ್ಕೊಂಡು ಹೋಗು.ಆಮೇಲೆ ಬರಿವಂತೆ” ಎಂದು ಅವಳನ್ನು ಎಬ್ಬಿಸಿ ಒಳಗೆ ಕರೆದು ಕೊಂಡು ಹೋಗುವ ಪ್ರಯತ್ನದಲ್ಲಿದ್ದಳು ಮಂಗಳ. ಅವಳೊಡನೆ ಸುತ್ತಲಿದ್ದ ಕೆಲ ಹೆಂಗಸರು ಅವಳನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವಳು ಮಾತ್ರ ಜಗ್ಗಲೇ ಇಲ್ಲ.ಮಾತಾಡದೆ, ಕಲ್ಲಂತೆ ಅಲ್ಲಾಡದೆ ಕುಳಿತಿದ್ದ ಅವಳನ್ನುಎಬ್ಬಿಸುವ ಹರ ಸಾಹಸದಲ್ಲಿದ್ದರು ಅಲ್ಲಿನ ಕೆಲ ಹೆಂಗಸರು.ಇದನ್ನು ಕಂಡ ಅವಳ ಗಂಡ ಬಂದು ಮಗುವನ್ನು ಎತ್ತಿಕೊಳ್ಳಲು ಹೋದ.ಸಿರಿ ಮಗುವನ್ನು ಬಿಗಿಯಾಗಿ ಹಿಡಿದುಕೊಂಡಳು.“ಅದ್ಯಾಕಂಗೆ ಮಾಡ್ತೀಯೋ, ನಿನ್ ಗಂಡ ಕಣೋ,ಪಾಪು ಎತ್ತ್ಕೊಳ್ಳಿ ಬಿಡು” ಎಂದಳು ಅಲ್ಲೇ ಇದ್ದ ಮಂಗಳ. ಸಿರಿ ಮಾತನಾಡಲಿಲ್ಲ. ಮಗುವನ್ನು ಇನ್ನೂ ಬಿಗಿಯಾಗಿ ಹಿಡಿದುಕೊಂಡಳು. “ಇದ್ಯಾಕೋ ವಿಪರೀತ ಆಯ್ತು ಬಿಡು, ನೀ ಬೇಜಾರು ಮಾಡ್ಕೋಬೇಡ ಚಂದ್ರು ಅದ್ಯಾಕಂಗ್ ಆಡ್ತಿದಳೋ ಗೊತ್ತಾಗ್ತಿಲ್ಲ ನೋಡು,ಬಾಣಂತಿ ಸನ್ನಿ ಗಿನ್ನಿ ಏನಾರ ಆಗೆತೇನೋ ಗೊತ್ತಾಗ್ತಿಲ್ಲ. ಈಗೇನು ಮಾಡೋದು ಹೇಳು ಹೇಳಿಕೇಳಿ ಸಾವಿನ ಮನೆ. ಇದು ಎಲ್ಲಾ ಮುಗಿಲಿ ಆಮೇಲೆ ಸರಿಯಾದ ಡಾಕ್ಟ್ರುತವ ತೋರಿಸಿದ್ರಾಯ್ತು “ಎಂದ ಮಂಗಳ “ರೂಮ್ ಗೆ ಹೋಗಾಣ ನಡಿ ಮಗ, ತುಂಬಾ ಹೊತ್ತು ಕುಂತ್ರೆ ಸೊಂಟ ನೋವು ಬಂದಾತು” ಎಂದು ಸಮಜಾಯಿಷಿ ನೀಡಿ ಅವಳನ್ನು ಕೋಣೆಗೆ ಕರೆದೊಯ್ದಳು.
ಅಪ್ಪ ಸತ್ತ ಗಳಿಗೆಯಿಂದ ಸಿರಿ ಒಂದೂ ಮಾತಾಡಿಲ್ಲ. ಒಂದು ಹನಿ ಕಣ್ಣೀರು ಹಾಕಿಲ್ಲ. ಏನಾಯ್ತೋ ಮಗುಗೆ ಎಂದು ಕೊಂಚ ಆತಂಕವಾಯಿತು ಮಂಗಳೆಗೆ.ಆದರೂ ತೋರಿಸಿಕೊಳ್ಳದೆ “ಸಿರಿ ಮನಸ್ಸಿಗೆ ಹಚ್ಹ್ಕೊಬೇಡ ಕಣಪ್ಪ, ಎಲ್ಲಾರು ಒಂದಿನ ಹೋಗದೇ ಅಲ್ವ ಮನಸ್ಸ್ನಲ್ಲೇ ಇಟ್ಕೋಬೇಡ ಅತ್ಬಿಡು… ಅದೆಲ್ಲಾ ಬಿಡು ಈಗ ಮಗುಗೆ ಹಾಲು ಕುಡ್ಸಿ ಮಲ್ಗ್ಸು ಎಂದು ಅಳುತ್ತಿದ್ದ ಮಗುವಿನ ಕಡೆಗೆ ಗಮನ ಸೆಳೆದಳು”. ಸಿರಿ ಒಮ್ಮೆ ಪ್ರೀತಿಯಿಂದ ಮಗುವಿನ ತಲೆ ಸವರಿ ಎದೆಗೆ ಅಪ್ಪಿಕೊಂಡಳು. ಮಗು ಅವಳ ಪಾಲಿನ ಅಮೂಲ್ಯವಾದ ಸಿರಿ.”ರೂಮ್ನ ಬಾಗ್ಲು ಮುಂದ್ಮಾಡ್ಕೊಂಡು ಹೋಗ್ತೀನಿ ಪುಟ್ಟಿ, ನೀ ಪಾಪುಗೆ ಹಾಲು ಕುಡ್ಸಿ ಸ್ವಲ್ಪ ಮಲಗಿರು ಬರ್ತೀನಿ” ಎಂದು ಹೋದಳು ಮಂಗಳ. ಸಿರಿ ಮಂಗಳಳ ತಂಗಿಯ ಮಗಳು. ಅವಳನ್ನು ಚಿಕ್ಕಂದಿನಿಂದಲೂ ಪ್ರೀತಿಯಿಂದ ನೋಡಿದ್ದಾಳೆ ಆಕೆ. ಅವಳ ವರ್ತನೆ ಒಮ್ಮೊಮ್ಮೆ ಅವಳಿಗೆ ಗಾಬರಿ ಮಾಡುತ್ತದೆ. ಏನೋ ಈಗಿನ ಕಾಲದ ಮಕ್ಕಳು, ಅವು ನಮ್ಮಂಗಲ್ಲ ಬಿಡು ಎಂದು ತನಗೇ ತಾನೇ ಸಮಾಧಾನ ಮಾಡಿಕೊಳ್ಳುತ್ತಾಳೆ ಆಕೆ.
ಮಗುಗೆ ಹಾಲು ಕುಡಿಸಿ, ಮಗುವಿನ ಪಕ್ಕದಲ್ಲೇ ಮಲಗಿ ಕಣ್ ಮುಚ್ಚಿದಳು ಸಿರಿ. ಮನಸ್ಸು ನೆನಪಿನ ಓಣಿಯಲ್ಲಿ ಓಡತೊಡಗಿತು. ನೆನಪುಗಳು …ಕಾಡುವ ನೆನಪುಗಳು .. ಮನದ ಮೇಲಿನ ಕಲೆಗಳು….ಕರುಣೆಯಿಲ್ಲದ ಕಲೆಗಳು… ಬೇಡವೆಂದರೂ ಬಿಡದವು… ಮನಸ್ಸು ಬಾಲ್ಯಕ್ಕೆ ಓಡಿತ್ತು. ಅಮ್ಮನ ತಣ್ಣನೆಯ ಮಡಿಲಿನ ನೆನಪು, ಆಟಿಕೆ ಹಿಡಿದು ಆಡಿದ ನೆನಪು, ಅವನ ಕೈಯ್ಯ ಆಟಿಕೆ ಆದ ನೆನಪು, ಕಾಯುವವನೇ ಕಾಡಿದ ನೆನಪು … ಎಂತಹ ವಯಸ್ಸದು.. ಏನೊಂದೂ ಅರ್ಥವಾಗದ ,ಹೇಳಲೂ ಬಾರದ ವಯಸ್ಸು. ಆದರೆ ಘಾಸಿ…ಭಯಂಕರ …ಅಂದೇ ಪ್ರಿಯವಾದದ್ದು ಬಯಲು …. ಅಂದು ಪ್ರಿಯವಾದ ಬಯಲು ಇಂದಿಗೂ ಹಿತವೇ. ಅಮ್ಮನ ಬೈಗುಳ ಹಾಗೇ ತೇಲಿ ಬಂತು.. “ ಏನ್ ಹುಡುಗಿನೇ ನೀನು ಯಾವಾಗ್ಲೂ ಬೀದಿ ಸುತ್ತಿರ್ತಿಯಾ, ಮನೇಲಿರೋಕೆ ಏನ್ ರೋಗ ನಿಂಗೆ”.. ಹೇಗೆ ಹೇಳುವುದು ಅಮ್ಮನಿಗೆ ಆಲಯಕ್ಕಿಂತ ಬಯಲೇ ಲೇಸೆಂದು. ಸಲೀಸಾಗಿ ಉಸಿರಾದರು ಆಡಬಹುದು. ಬೆಳೆಯುತ್ತಾ ಹೋದಂತ ಎಲ್ಲರೂ ಹೊಗಳುವವರೇ ನನ್ನ ರೂಪದ ಬಗ್ಗೆ… ಶಾಲೆಯ ಓದು ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ್ದಷ್ಟೆ ಮದುವೆಯಾಯಿತು. ಮದುವೆಯೂ ಎಂತಹ ವಿಲಕ್ಷಣ ಸ್ಥಿತಿಯಲ್ಲಿ ನಡೆದದ್ದು. ಆತ ಸಮಾಜದ ಬಗ್ಗೆ ದೊಡ್ಡ ದೊಡ್ಡ ಮಾತಾಡುತ್ತಿದ್ದ. ಅವನ ಮಾತಿಗೆ ನಾನು ಮರುಳಾದದ್ದು ನಿಜ. ಎಲ್ಲಕ್ಕಿಂತ ಮೇಲೆ ನನಗೆ ಬಿಡುಗಡೆ ಬೇಕಿತ್ತು. ಅವನೋ ಸರಳ ವಿವಾಹದ ಪ್ರತಿ ಪಾದಕ. ನನಗೂ ಅದೇ ಬೇಕಿತ್ತು.ಹೀಗೆ ಒಂದು ಸರಳ ಸಮಾರಂಭದಲ್ಲಿ ನಾನು ಅವನ ಪತ್ನಿಯಾದೆ..ಜಾತಿ, ಅಂತಸ್ತುಗಳನ್ನು ಧಿಕ್ಕರಿಸಿ.. ನನ್ನ ಈ ನಡೆಯಿಂದ ಎಲ್ಲರಿಗೂ ಸ್ವಲ್ಪ ಬೇಸರವಾಯ್ತು. ಈಗ ನನಗೊಬ್ಬ ಮಗಳು, ಅವಳ ಮೇಲೆ ಯಾವ ಕೆಟ್ಟ ಕಣ್ಣೂ ಬೀಳದಂತೆ ರಕ್ಷಿಸ ಬೇಕು. ಯಾವ ಗಂಡಿನ ದೃಷ್ಟಿಯೂ ಅವಳ ಮೇಲೆ ಬೀಳದಂತೆ ಕಾಯ ಬೇಕು. ಕನಿಷ್ಠ ಅವಳು ದೊಡ್ದವಳಾಗುವವರೆಗೂ…ಬುದ್ಧಿ ಬರುವವರೆಗೂ. ಯಾರಿಗೆ ಗೊತ್ತು ಯಾವ ಹುತ್ತದಲ್ಲಿ ಯಾವ ಹಾವೋ? ಗೆಳತಿಯಾ ಅತ್ತೆ ಫಾತಿಮಾ ತಮ್ಮನ್ನು ಎಚ್ಚರಿಸುತ್ತಿದ್ದದ್ದು ಜ್ಞಾಪಕಕ್ಕೆ ಬಂತು. “ ಹುಡ್ಗೀರು ನೀವು.. ನಿಮ್ ಹುಷಾರ್ ನಿಮ್ಗಿರ್ಲಿ …ನಮ್ಮ ಮುಲ್ಲಾ ಅಲ್ಲ, ನಿಮ್ ಪುಜಾರಿ ಅಲ್ಲ ಎಲ್ಲಾ ಒಂದೆ. ಎಂತದಾ ಮುಟ್ಟಿ ಮುಟ್ಟಿ ಮಾತಾಡೋದು, ಯಾಕೆ ಹಂಗೇ ಮಾತಾಡಾಕೆ ಆಗಾಕಿಲ್ಲ…ಎಲ್ಲಾ ಒಂದೇ ಜಾತಿ ತಥ್ “ ಎಂದು ಆಕೆ ಅಂದಾಗ ತಾವುಗಳು “ಹೌದು ನೋಡಿ ಆಂಟಿ,ಈ ಹೆಣ್ಣು ಗಂಡು ಅಂತ ದೇವರು ಸೃಷ್ಟಿ ಮಾಡದೆ ಇದ್ರೆ ಎಷ್ಟು ಚೆನ್ನಾಗಿತ್ತಲಾ…ಇದೆಲ್ಲಾ ಇರ್ತಾನೇ ಇರಲಿಲ್ಲ ಆಲ್ವಾ ಆಂಟಿ..ಎಷ್ಟು ಚೆನ್ನಾಗಿರ್ತಿತ್ತು?ಮನುಷ್ಯನು ಅಮಿಬಾದ ಹಾಗೆ ಇರಬೇಕಿತ್ತು ನೋಡಿ ಈ ಎಲ್ಲಾ ಕರ್ಮಾನೆ ಇರ್ತಿರಲಿಲ್ಲ. ಪ್ರಾಣಿಗಳಲ್ಲಿ ಮನುಷ್ಯ ಇದಾನೋ ಇಲ್ವೋ ಆದರೆ ಮನುಷ್ಯನಲ್ಲಿ ಮಾತ್ರ ಪ್ರಾಣಿ ಇದೆ..ಪ್ರಾಣಿಯಲ್ಲ, ಪ್ರಾಣಿಗಳು. ಈ ವಿಕೃತ ಮನಸ್ಸಿನವರು ಯಾರೂ ಮನುಷ್ ರೇ ಅಲ್ಲಾ ..ಮನುಷ್ ರಲ್ಲ ಪ್ರಾಣಿಗಳು” ಎಂದು ಮಾತು ಜೋಡಿಸುತ್ತಿದ್ದದ್ದು ನೆನಪಿಗೆ ಬಂತು. ಹೀಗೆ ನೆನಪಿನ ಓಣಿಯಲ್ಲಿ ಓಡುತ್ತಿತ್ತು ಸಿರಿಯ ಮನಸ್ಸು.
ಇತ್ತ ಕೋಣೆಯಿಂದ ಹೊರ ಬಂದ ಮಂಗಳ ತನ್ನ ಗೆಳತಿಯ ಮುಂದೆ ಬೇಸರ ಹೇಳಿಕೊಳ್ಳುತ್ತಿದ್ದಳು. “ ಏನಾಗಿದೋ ಏನೋ ಶೋಭಾ, ಈ ಹುಡುಗಿ ಆಡೋದ್ ಯಾಕೋ ವಸಿ ವಿಚಿತ್ರ ಅನ್ಸುತ್ತೆ, ಏನ್ ಮಾಡಾದು ಅವರ ಅಮ್ಮನ್ ತಾವ ಮಾತಾಡನ ಅಂದ್ರೆ ಅವಳೇ ಗಂಡನ ಕಳ್ಕೊಂಡ್ ನೋವಲ್ಲಿದಾಳೆ..ಏನ್ ಮಾಡೋದೋ ತಿಳಿತಾನೆ ಇಲ್ಲ…ಅಪ್ಪ ಸತ್ತ್ ದುಃಖಕ್ಕೆ ಎಲ್ಡ್ ಹನಿ ಕಣ್ಣೀರು ಹಾಕ್ತಿಲ್ಲ ಈ ಹುಡುಗಿ …ಯಾಕೋ ಬಾಳ ಬೇಜಾರಾಗ್ತದೆ ಶೋಭಾ”….
“ಬೇಜಾರ್ ಮಾಡ್ಕೋಬೇಡ ಮಂಗಳ ಎಲ್ಲಾ ಸರಿ ಹೋಯ್ತದೆ…ನೀ ಸ್ವಲ್ಪ ಸಮಾಧಾನ ತಗೋ..ಚಿಕ್ ಹುಡುಗಿ ಪಾಪ ಅದರ ಮನಸ್ನಾಗೆ ಏನಯ್ತೋ”….ಹೀಗೆ ಇವರ ಪಿಸು ಮಾತು ಮುಂದುವರೆಯಿತು.
ಅತ್ತ ಕೋಣೆಯಲ್ಲಿ ಯೋಚನೆಯಲ್ಲಿ ಮುಳುಗಿದ್ದ ಸಿರಿಗೆ ನಿಧಾನವಾಗಿ ನಿದ್ದೆ ಹತ್ತಿತು. ಹಾಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಅವಳು ಚಂದದ ಹುಲ್ಲು ಗಾವಲಿನಲ್ಲಿ ಒಂದು ಮರದ ಕೆಳಗೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿಯೇ ಒಂದು ಕುರಿ ಮಂದೆ ಮೇಯುವುದು ಕಾಣುತ್ತಿತ್ತು. ತಣ್ಣಗೆ ಬೀಸುವ ಗಾಳಿ, ಅದು ಹೊತ್ತು ತರುವ ಹೂವಿನ ಪರಿಮಳ, ಪಕ್ಕದಲ್ಲೇ ಹರಿಯುವ ನೀರಿನ ಜುಳು ಜುಳು ಸದ್ದು… ಹಾಗೇ ಕಣ್ಣು ಮುಚ್ಚಿದಳು ಸಿರಿ. ಸ್ವಲ್ಪ ಹೊತ್ತಿನಲ್ಲೇ ಯಾರೋ ಹತ್ತಿರ ಸರಿದಂತಾಗಿ ಕಣ್ಣು ತೆರೆದಳು. ಕುರಿಗಳು ನಿಧಾನವಾಗಿ ಅವಳನ್ನು ಸಮೀಪಿಸುತ್ತಿದ್ದವು. ಹತ್ತಿರ ಹತ್ತಿರ ಬರುತ್ತಾ ಕುರಿ ಚರ್ಮ ಕಳಚಿ ಕೋರೆ ಹಲ್ಲು ಬಿಟ್ಟ ಕ್ರೂರ ತೋಳಗಳು ಕಾಣ ತೊಡಗಿದವು. ಸಿರಿ ಎದ್ದು ಗಾಬರಿಯಿಂದ ಓಡತೊಡಗಿದಳು. ತೋಳಗಳ ಸದ್ದಿನ ಜೊತೆ ಗಹಗಹಿಸುವ ಗಂಡು ದನಿಗಳು. ಹಿಂತಿರುಗಿ ನೋಡುವ ಸಾಹಸ ಮಾಡಲಿಲ್ಲ ಸಿರಿ.. ಓಡುತ್ತಲೇ ಇದ್ದಳು. ಎಷ್ಟು ಹೊತ್ತು ಓಡಿದಳೋ ಗೊತ್ತಿಲ್ಲ. ಹೀಗೆ ಓಡುತ್ತ ಓಡುತ್ತಾ ಕಡೆಗೆ ಮನೆ ತಲುಪಿದಳು ಸಿರಿ. ಏದುಸಿರು ಬಿಡುತ್ತಾ ಒಳ ಹೊಕ್ಕು ಚಿಲಕ ಹಾಕಿ, ಬಾಗಿಲಿಗೆ ಬೆನ್ನು ಹಾಕಿ ಸುಧಾರಿಸಿಕೊಳ್ಳಲು ಕುಳಿತಳು. ಮನೆ ನಿಶ್ಯಭ್ಧ ವಾಗಿತ್ತು. ಅವಳ ಉಸಿರಿನ ಸದ್ದು ಬಿಟ್ಟು ಇನ್ನೇನೂ ಕೇಳಿಸುತ್ತಿರಲಿಲ್ಲ. ತಟ್ಟನೆ ಅಲ್ಲೊಂದು ತೋಳ ಕಾಣಿಸಿತು. ಸಿರಿ ಕಿರುಚಲು ಬಾಯಿ ತೆಗೆದಳು. ದನಿ ಆಚೆ ಬರಲೇ ಇಲ್ಲ..ಅದು ಹತ್ತಿರ ಬರಲಾರಂಭಿಸಿತು. ಮತ್ತದೇ ತೋಳ ಕೋರೆ ಹಲ್ಲು ಚಾಚಿ ಸದ್ದು ಮಾಡುತ್ತಾ ಹತ್ತಿರ ಹತ್ತಿರ ಬರತೊಡಗಿತು. ಹಾಗೆಯೇ ತೋಳದ ಮುಖ ಬದಲಾಗಿ ಅಪ್ಪ ಕಾಣಿಸತೊಡಗಿದ. ಸಿರಿ “ಅಮ್ಮಾ, ಅಮ್ಮಾ ಅಪ್ಪಾ, ಅಪ್ಪಾ” ಎಂದು ಜೋರಾಗಿ ಕಿರುಚ ತೊಡಗಿದಳು. ಕಾರ್ ಶೆಡ್ ನಲ್ಲಿದ್ದ ಹೆಂಗಸರೆಲ್ಲರೂ ಓಡುತ್ತಾ ಬಂದರು.
ಸಿರಿ ಮಾತ್ರ ದೆವ್ವ ಮೆಟ್ಟಿದಂತೆ ಕಿರುಚುತ್ತಲೇ ಇದ್ದಳು. ಅವಳ ಕಿರುಚಾಟಕ್ಕೆ ಬೆಚ್ಚಿದ ಮಗು ಅಳತೊಡಗಿತು. ಸಿರಿ ಮಾತ್ರ ಕಣ್ಣು ಬಿಡದೆ ಕೂಗುತ್ತಲೇ ಇದ್ದಳು…






0 Comments