ಎಸ್.ನಾಗಶ್ರೀ ಅಜಯ್ ಅವರ ಕಥಾ ಸಂಕಲನ ‘ಕಡೆ ಹಾಯ್ವ ದೋಣಿ’
‘ಅಜೇಯ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಭವ್ಯ ಟಿ ಎಸ್ ಅವರ ಒಂದು ಬರಹ ಇಲ್ಲಿದೆ.
–ಭವ್ಯ ಟಿ.ಎಸ್
ಕಥೆಗಳೇ ಬದುಕು; ಬದುಕೇ ಕಥೆಗಳು ಎಂಬ ಭಾವ ಮೂಡಿಸುವಂತಹ ನೈಜ,ಸಕಾಲಿಕ ಬದುಕಿನ ಹಲವು ವಿಭಿನ್ನ ಆಯಾಮಗಳನ್ನು ಮುಕ್ತವಾಗಿ ತೆರೆದಿಡುವ ಕಥೆಗಳ ಗುಚ್ಛವೇ ಎಸ್.ನಾಗಶ್ರೀ ಅಜಯ್ ಅವರ ಕಡೆ ಹಾಯ್ವ ದೋಣಿ ಕಥಾ ಸಂಕಲನ.ಇಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ.ನಗರದ ಆಧುನಿಕ ಯಾಂತ್ರಿಕ ಜಗತ್ತಿನಲ್ಲಿ ಸ್ತ್ರೀ ಎದುರಿಸಬೇಕಾದ ಸವಾಲುಗಳು, ತಮ್ಮ ನನಸಾಗದ ಕನಸುಗಳು, ಮಹತ್ವಾಕಾಂಕ್ಷೆಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಅವಸರಕ್ಕೆ ಬಿದ್ದ ಪೋಷಕರು,ಪ್ರೀತಿ,ದಾಂಪತ್ಯದ ಬದುಕಿನ ತಲ್ಲಣಗಳು, ಹಳ್ಳಿ ಬಿಟ್ಟು ಬಂದು ನಗರದಲ್ಲಿ ಬದುಕು ಕಟ್ಟಿಕೊಳ್ಳುವವರ ಹೆಣಗಾಟ,ಆಸ್ತಿ,ಸಂಪತ್ತಿಗಾಗಿ ಸಂಬಂಧಗಳ ನಡುವೆ ನಡೆಯುವ ತಾಕಲಾಟಗಳು,ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ, ಮಾನಸಿಕ ದೌರ್ಜನ್ಯಗಳು,ಭಾವನೆಗಳಿಲ್ಲದೆ ಹೊರಪ್ರಪಂಚದ ತೋರಿಕೆಗಾಗಿ ನಿಂತ ವೈವಾಹಿಕ ಸಂಬಂಧಗಳು,ಆಧುನಿಕತೆ ನಡುವೆಯೂ ರಾರಾಜಿಸುವ ಮೂಢನಂಬಿಕೆಗಳು,ಜೀವನದ ನಶ್ವರತೆ ಮತ್ತು ಲೋಲುಪತೆಗಳ ನಡುವಿನ ದ್ವಂದ್ವ, ಪರಸ್ಪರ ವಿರೋಧಾಭಾಸಗಳು,ಬಾಡಿ ಶೇಮಿಂಗ್ ನಿಂದಾಗುವ ಮಾನಸಿಕ ಕಿರುಕುಳ,ಆಧುನಿಕ ಶಿಕ್ಷಣವು ಮೌಲ್ಯಗಳಿಂದ ದೂರವಾಗುತ್ತಿರುವ ಅಪಾಯ ಹೀಗೆ ಪ್ರತಿಯೊಬ್ಬರೂ ಪ್ರಸ್ತುತ ಸನ್ನಿವೇಶದಲ್ಲಿ ಜಾಗೃತಿ ವಹಿಸಬೇಕಾದ,ತಮ್ಮನ್ನು ತಾವು ತಿದ್ದಿಕೊಳ್ಳಬೇಕಾದ ತುರ್ತನ್ನು ಇಲ್ಲಿನ ಕಥೆಗಳು ಮನವರಿಕೆ ಮಾಡಿಸುತ್ತವೆ.
ಹೆಣ್ಣೊಬ್ಬಳು ತನ್ನ ಸ್ವತಂತ್ರ ನಿಲುವು ವ್ಯಕ್ತಪಡಿಸಿ ಯಾರ ಹಂಗಿಗೂ ಒಳಗಾಗದೆ ಜೀವನ ನಡೆಸಿದರೆ ಆಕೆಯನ್ನು ಹಗುರಾಗಿಸಲು ಚಾರಿತ್ರ್ಯವಧೆಗೆ ಮುಂದಾಗುವ ಸಣ್ಣತನ ಮೊದಲ ಕತೆ ಶಮೀ ಶಮಯತೇ ಪಾಪಂ ಕತೆಯಲ್ಲಿ ಪ್ರಮಥನಾಥನ ಪಾತ್ರದಲ್ಲಿ ಚಿತ್ರಿತವಾಗಿದೆ.ಶಮೀಯ ಕೊನೆಯ ಮಾತುಗಳು ಇಂದಿನ ಮೋಸದ ಲೋಕದಲ್ಲಿ ಹೆಣ್ಣಿಗಿರಬೇಕಾದ ಎಚ್ಚರವನ್ನು ಸಾರಿ ಹೇಳುತ್ತವೆ.
ರಿಯಾಲಿಟಿ ಶೋಗಳು,ಯೂಟ್ಯೂಬ್ ಚಾನೆಲ್ ಗಳು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಗಳಾದರೂ ಎಷ್ಟೋ ಸಲ ಅವರ ಬಾಲ್ಯದ ಮುಗ್ಧತೆಯನ್ನು ಕಸಿದುಕೊಂಡು ಅವರ ಮಾನಸಿಕ ಆರೋಗ್ಯವನ್ನು ಹದಗೆಡಿಸುವ ಅಪಾಯವನ್ನು ಹೆಜ್ಜೆ ಮೂಡದ ಹಾದಿ ಕತೆ ವ್ಯಕ್ತಪಡಿಸುತ್ತದೆ.
ನಗರ ಜೀವನದ ಆಕರ್ಷಣೆಗೆ ಬಿದ್ದು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಬದುಕುವವರ ಬವಣೆಗಳನ್ನು ಕಾಂಟ್ರಾ ಕತೆಯ ಮಂಜಣ್ಣನ ಪಾತ್ರ ಸಮರ್ಥವಾಗಿ ವ್ಯಕ್ತಗೊಳಿಸುತ್ತದೆ.
ಕಷ್ಟದಲ್ಲಿ ಸಹಾಯಕ್ಕೆ ನಿಂತ ಕುಟುಂಬದ ಋಣ ತೀರಿಸಲು ತನ್ನ ಉಳಿತಾಯದ ಹಣ ಕೊಡುವುದರ ಬಗ್ಗೆ ತನ್ನ ಸೊಸೆಯೊಂದಿಗೆ ಚರ್ಚಿಸುವ ಕಾವ್ಯಾಳ ಅತ್ತೆ ಕಾಮಾಕ್ಷಿಯ ಉದಾತ್ತತೆ,ಅದನ್ನು ಸರಿಯಲ್ಲವೆಂದು ಹೇಳಿ ತಾನೇ ಆ ಹಣವನ್ನು ತೆಗೆದುಕೊಳ್ಳುವ ಕಾವ್ಯ ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು.ಒಳಗೆ ಅಸಮಾಧಾನವಿದ್ದರೂ ಇನ್ನೊಬ್ಬರ ಸಂತಸದಲ್ಲಿಯೇ ತೃಪ್ತಿ ಕಾಣುವ ಕಾಮಾಕ್ಷಿಯವರ ವ್ಯಕ್ತಿತ್ವ ಇಷ್ಟವಾಗುತ್ತದೆ.ಹಣದ ಕುರಿತ ಚಿಂತನೆ ಪೀಳಿಗೆಯಿಂದ ಪೀಳಿಗೆಗೆ ಬದಲಾದ ಚಿತ್ರಣವನ್ನು ಇಲ್ಲಿ ಕಾಣಬಹುದು.
ಆಧುನಿಕ ಕಾಲದಲ್ಲಿ ಶಿಕ್ಷಣವು ವ್ಯವಹಾರದ ಒಂದು ವಸ್ತುವಾಗಿರುವುದು,ವಿದ್ಯಾರ್ಥಿಗಳ ಏಳಿಗೆಗಾಗಿ ಪ್ರಯತ್ನಿಸುವ ಶಿಕ್ಷಕರ ನಡುವೆ ವಿದ್ಯಾರ್ಥಿಗಳನ್ನು ಅಪಹಾಸ್ಯ, ಅವಮಾನಕ್ಕೀಡು ಮಾಡುವ ಶಿಕ್ಷಕರೂ ಇದ್ದಾರೆ.ಇವರು ನಡೆಸುವ ಮಾನಸಿಕ ಕ್ರೌರ್ಯ ಮಗುವಿನ ಆತ್ಮವಿಶ್ವಾಸಕ್ಕೆ ನೀಡುವ ಪೆಟ್ಟು,ಇದರಿಂದ ಮಗುವಿನ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳನ್ನು ಕಾರ್ಯಕಾರಣ ಕತೆ ಪರಿಣಾಮಕಾರಿಯಾಗಿ ಚಿತ್ರಿಸಿದೆ.
ಈ ಕಾಲದ ಇನ್ನೊಂದು ಸಮಸ್ಯೆಯೆಂದರೆ ಬಾಡಿ ಶೇಮಿಂಗ್.ತೆಳ್ಳಗಿರುವವರು ಕಡ್ಡಿಗಳೆನಿಸಿದರೆ, ದಪ್ಪಗಿರುವವರು ಆನೆ ಇನ್ನೇನೋ ಎಂಬಂತೆ ಅವರ ಕುರಿತು ಅವಹೇಳನ ಮಾಡಿ ಅವರನ್ನು ಕೀಳರಿಮೆಗೆ ದೂಡುವುದು.ಇದು ನಮಗೆ ಹಾಸ್ಯವೆನಿಸಿದರೂ ಅದನ್ನು ಅನುಭವಿಸಿದವರ ಮಾನಸಿಕ ಸ್ಥಿತಿ ಹೇಗಿರುತ್ತದೆ ಎಂದು ಆಲೋಚಿಸಬೇಕಾಗುತ್ತದೆ.ಇಂತಹ ಸಮಸ್ಯೆಗೆ ಮುಖಾಮುಖಿಯಾಗುವ ಸೌಪರ್ಣಿಕಾ ಪಾತ್ರದ ಮೂಲಕ ಸಿಂಗಲ್ ಟಿಕ್ ಕತೆ ಬಾಡಿ ಶೇಮಿಂಗ್ ಸಮಸ್ಯೆಯ ಕುರಿತು ಕಣ್ದೆರುಸುವ ಪ್ರಯತ್ನ ಮಾಡುತ್ತದೆ.
ಒಟ್ಟಾರೆಯಾಗಿ ನಾಗಶ್ರೀ ಅವರ ಮನಮುಟ್ಟುವ ಕವಿತೆಗಳನ್ನು ಓದಿದ್ದ ನನಗೆ ಅವರ ಕಥಾಪ್ರಪಂಚದಲ್ಲಿ ವಿಹರಿಸುವ ಅವಕಾಶ ಈ ಪುಸ್ತಕದಿಂದ ಸಾಧ್ಯವಾಯಿತು. ನಾಗಶ್ರೀಯವರ ಜೀವನದ ಬಗ್ಗೆಗಿನ ಸೂಕ್ಷ್ಮ ಒಳನೋಟವನ್ನು ಪ್ರತಿ ಕಥೆಯು ಸಾಬೀತುಪಡಿಸುತ್ತದೆ.
ಕೆಲವು ಮುದ್ರಣದೋಷಗಳನ್ನು ಸರಿಪಡಿಸಿಕೊಂಡರೆ ಪುಸ್ತಕದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.ಈ ಪುಸ್ತಕದ ಮೂಲಕ ಪ್ರಬುದ್ಧ ಕತೆಗಾರ್ತಿಯೊಬ್ಬರು ಕನ್ನಡ ಸಾರಸ್ವತ ಲೋಕಕ್ಕೆ ಅಡಿಯಿಟ್ಟಂತಾಗಿದೆ.ನಾಗಶ್ರೀಯವರಿಂದ ಇನ್ನಷ್ಟು ಉತ್ತಮ ಕೃತಿಗಳು ಸಹೃದಯರಿಗೆ ಲಭಿಸುವಂತಾಗಲಿ ಎಂದು ಆಶಿಸುತ್ತೇನೆ.ಶುಭ ಹಾರೈಕೆಗಳೊಂದಿಗೆ….






0 Comments