ಶಶಿಧರ ಹಾಲಾಡಿ ಅವರ ಕಾದಂಬರಿ ‘ನದಿ ದಾಟಿ ಬಂದವರು’
ಈ ಕೃತಿಯ ಕುರಿತ ಟಿ ಎಸ್ ಶ್ರವಣ ಕುಮಾರಿ ಅವರ ಬರಹ ಇಲ್ಲಿದೆ.
–ಟಿ ಎಸ್ ಶ್ರವಣ ಕುಮಾರಿ
ಶ್ರೀಯುತ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ *ನದಿ ದಾಟಿ ಬಂದವರು* ಈಗಾಗಲೇ ಎರೆಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. *ದ್ವಾರನಕುಂಟೆ ಪಾತಣ್ಣ* ಪ್ರಶಸ್ತಿಯನ್ನು, ಅದರೊಂದಿಗೇ *ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ*ಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಅವರ ಮತ್ತೆರೆಡು ಕಾದಂಬರಿಗಳಾದ ‘ಕಾಲಕೋಶ’ ಮತ್ತು ‘ಅಬ್ಬೆ’ ಕೃತಿಗಳಂತೆ ಈ ಕಾದಂಬರಿಯನ್ನೂ ಒಂದು ಕೌಟುಂಬಿಕ ಕಾದಂಬರಿಯ ಗುಂಪಿಗೆ ಸೇರಿಸಲಾಗುವುದಿಲ್ಲ. ಇದರಲ್ಲಿ ಪ್ರಮುಖವಾಗಿ ಎರೆಡು ಕುಟುಂಬಗಳ ಕತೆಯಿದ್ದರೂ, ಮುಖ್ಯ ಕತೆ ಸ್ವತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಸರಿ ಸುಮಾರು ಐವತ್ತು ವರ್ಷಗಳಲ್ಲಿ ಭಾರತದ ಕೃಷಿಕ ಸಮಾಜದಲ್ಲಿ ಆದ ಬದಲಾವಣೆಗಳ ಹೆಜ್ಜೆಗುರುತುಗಳನ್ನು ಗಮನಿಸುತ್ತಾ ಹೋಗುತ್ತದೆ.
ಸ್ವಾತಂತ್ರ್ಯಪೂರ್ವದಲ್ಲಿದ್ದ ಭೂ ಒಡೆತನ ಮತ್ತು ಚಾಲಗೇಣಿ ಪದ್ದತಿಯಲ್ಲಿ ಜಮೀನ್ದಾರರಷ್ಟೇ ಅಲ್ಲದೆ ಸಣ್ಣಪುಟ್ಟ ಕೃಷಿಕ ಭೂಮಿಗಳನ್ನು ಹೊಂದಿದವರೂ ಸಹಾ ಕೆಳವರ್ಗದವರಿಗೆ ಚಾಲಗೇಣಿ ಪದ್ಧತಿಯಲ್ಲಿ ಕೆಲವು ಗುಂಟೆ/ಎಕರೆ ಭೂಮಿಗಳನ್ನು ಸಾಗುವಳಿ ಮಾಡಲು ನೀಡಿ, ಕೊಯಿಲಿನ ನಂತರ ಇಂತಿಷ್ಟು ಮುಡಿ ಭತ್ತವನ್ನು ಭೂಮಾಲೀಕರಿಗೆ ಕೊಡಬೇಕೆಂಬ ಕರಾರು ಮಾಡಿಕೊಳ್ಳುವ ಪದ್ಧತಿಯಿತ್ತು. ಅದರೊಂದಿಗೆ ವರ್ಷಕ್ಕೆ ಇಂತಿಷ್ಟು ದಿನ ಒಡೆಯರ / ಊರ ಮುಖಂಡರ ಭೂಮಿಯಲ್ಲಿ ಬಿಟ್ಟಿ ಚಾಕರಿಯನ್ನು ಮಾಡಬೇಕಿತ್ತು. ಸಹಜವಾಗಿಯೇ ಇದು ಭೂ ಒಡೆಯರಿಗೆ ಅನುಕೂಲಕರವಾಗಿದ್ದು, ಕೃಷಿ ಮಾಡುವವರಿಗೆ ನಷ್ಟ ಸಂಭಾವ್ಯತೆಯೇ ಹೆಚ್ಚಾಗಿದ್ದು, ಅವರು ಸಾಲದ ಕುಣಿಕೆಯಿಂದ ಹೊರಬರಲು ಸಾಧ್ಯವಾಗುತ್ತಲೇ ಇರಲಿಲ್ಲ.
ಕಾದಂಬರಿಕಾರರು ಈ ಕಾದಂಬರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಪರಿಸರವನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಕಥಾರಂಭದಲ್ಲಿ ಆ ಜಿಲ್ಲೆಯ ಒಂದು ಚಿಕ್ಕ ಹಳ್ಳಿ ಕರ್ಜೆಯ ಪರಿಸರಕ್ಕೇ ಓದುಗನನ್ನು ಕರೆದೊಯ್ದು ಕತೆ ಹೇಳಲು ಆರಂಭಿಸುತ್ತಾರೆ. ಜಮೀನ್ದಾರ ನಾರಾಯಣ ಭಂಡಾರಿಯವರ ಬಳಿ ಚಾಲಗೇಣಿ ಮಾಡಿಕೊಂಡಿದ್ದ ಕುಯಿರ ನಾಯಕನೆಂಬ ಗೇಣಿದಾರ ತಾನು ಒಪ್ಪಿಕೊಂಡಷ್ಟು ಭತ್ತವನ್ನು ಕೊಡಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ತನ್ನ ಗುಡಿಸಿಲಿನ ಬಾಗಿಲನ್ನು ಹಾರುಹೊಡೆದು ಮುಂದೆ ಒಂದು ಮಣ್ಣಿನ ಹರಿಯನ್ನು ಕವುಚಿ ಹಾಕಿ, ತಾನು ಒಪ್ಪಿಕೊಂಡಿದ್ದಷ್ಟು ಮುಡಿ ಭತ್ತವನ್ನು ಕೊಡಲು ಸಾಧ್ಯವೇ ಇಲ್ಲವೆಂದೂ, ತನ್ನನ್ನು ಮನ್ನಿಸಬೇಕೆಂದೂ ಆ ಮೂಲಕ ಸೂಚಿಸಿ ನಿಶ್ಶಬ್ದವಾಗಿ ತನ್ನ ಕುಟುಂಬದವರೊಡನೆ ಪರಾರಿಯಾಗುತ್ತಾನೆ. ರಾತ್ರೋರಾತ್ರಿ ಸೀತಾ ನದಿಯನ್ನು ದಾಟಿ ಆ ದಡಕ್ಕೆ ಹೋಗಿಬಿಟ್ಟರೆ ಈ ದಡದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಂತೆಯೇ. ಇಲ್ಲಿಂದ ನದಿ ದಾಟಿ ಬಂದವರ ಕಥಾರಂಭವಾಗುತ್ತದೆ.
ಹೆಂಡತಿ ಶೇಷಿಬಾಯಿಯ ಅಣ್ಣನಿಂದ ಯಾವುದೇ ಆಶ್ರಯ ಸಿಗದಿದ್ದರೂ ಅವನು ತೋರಿದ ನೆಲ್ಯಾಡಿಯ ಕೂಲಿಯಾಳುಗಳ ತುರ್ತು ಅವಶ್ಯಕತೆಯಿದ್ದ ವೆಂಕಣ್ಣಯ್ಯನವರ ಮನೆ ಸಿದ್ಧ ನಾಯಕನಿಗೆ ನೆಲೆ ನೀಡುತ್ತದೆ. ವೆಂಕಣ್ಣಯ್ಯನವರದ್ದು ಕಾದಂಬರಿಯಲ್ಲಿ ಒಂದು ಮೇರು ವ್ಯಕ್ತಿತ್ವ. ಅವರು ದೇವಸ್ಥಾನದ ಮೊಕ್ತೇಸರರಾಗಿದ್ದಷ್ಟೇ ಅಲ್ಲದೆ ದೀಪೋತ್ಸವದ ದಿನ ಊರಿಗೇ ಸಂತರ್ಪಣೆ ಮಾಡಿಸುತ್ತಿದ್ದರು. ಅಂತೆಯೇ ತಾಳಮದ್ದಳೆಯ ಅರ್ಥಧಾರಿಗಳು ಕೂಡಾ.
ಆದರೆ ಭಂಡಾರಿಯವರ ನೆರಳು ಕುಯಿರ ನಾಯಕನನ್ನು ಹಿಂಬಾಲಿಸುತ್ತಾ ಬಂದು ಇಲ್ಲಿನ ಬಲ್ಲಾಳರ ಮಧ್ಯಸ್ಥಿಕೆಯಿಂದಾಗಿ ವೆಂಕಣ್ಣಯ್ಯನವರಿಗೆ ಕೂಲಿಯಾಳು, ಕುಯಿರ ನಾಯಕನಿಗೆ ನೆಲ್ಯಾಡಿಯಲ್ಲಿ ಆಸರೆ ದೊರೆಯುವಂತಾಗುತ್ತದೆ. ಆರಂಭದಲ್ಲಿ ಕೂಲಿಯಾಳುಗಳಾಗಿಯೇ ದುಡಿದ ಕುಯಿರ ನಾಯಕನ ಕುಟುಂಬ ಮುಂದೆ ವೆಂಕಣ್ಣಯ್ಯನವರ ಮನೆಯ ವಿಶ್ವಾಸ ಗಳಿಸಿ ಒಂದಷ್ಟು ಗುಂಟೆ ಭೂಮಿಯನ್ನು ಚಾಲಗೇಣಿಗೆ ಪಡೆಯುವುದರಲ್ಲಿ ಯಶಸ್ವಿಯಾಗುತ್ತದೆ.
ಕತೆಯ ಓಟದಲ್ಲಿ ನದಿಗೆ ಸೇರುವ ಉಪನದಿಗಳಂತೆ ಯುದ್ಧದಿಂದಾಗಿ ಬೆಲೆಗಳ ಏರಿಕೆ, ಬೆಲ್ಲದ ಡಬ್ಬವನ್ನು ಘಟ್ಟದಿಂದ ಹೊತ್ತು ತರುವುದು, ಅಲ್ಲಿನವರೆಗೂ ಕಂಡಿರದಿದ್ದ ಕಾಫಿ ಪುಡಿಯ ಘಮಲು ಇಲ್ಲಿನ ಅಡುಗೆಮನೆಯನ್ನು ಆವರಿಸುವುದು, ಗ್ರಹಣ, ಮುಷ್ಠದ ಆಚರಣೆ, ಮೇಲ್ ಕೊಡಿಗೆಯ ಭಾಗೇರ್ತಿ, ಕೃಷ್ಣಯ್ಯ ಮತ್ತು ಅವರಕ್ಕ ವೆಂಕಮ್ಮನ ಕತೆ, ಹೊನ್ನಮ್ಮನ ಶಾಪ ಇಂತವು ಮೂಲ ಕತೆಯನ್ನು ಸೇರತೊಡಗುತ್ತವೆ. ಇನ್ನೂ ಹಲವು ಸಣ್ಣ ಪುಟ್ಟ ಸಂಗತಿಗಳು ಉಪನದಿಗೆ ಸೇರುವ ಝರಿಗಳಂತೆ ಕತೆಗೆ ಕೂಡಿಕೊಳ್ಳುತ್ತವೆ.
ಕುಂದಾಪುರಕ್ಕೆ ಗಾಂಧೀಜಿ ಬಂದದ್ದು ಕತೆಯ ಮುಖ್ಯ ತಿರುವಿಗೆ ಕಾರಣವಾಗುತ್ತದೆ. ವೆಂಕಣ್ಣಯ್ಯನವರೂ ಸೇರಿದಂತೆ ಅಲ್ಲಿನ ಜನಸಮೂಹವೆಲ್ಲಾ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಮಾರುಹೋಗುವುದು, ತಮ್ಮ ಬಳಿಯಲ್ಲಿರುವ ದುಡ್ಡು-ಕಾಸು-ಒಡವೆಗಳನ್ನು ಚಳುವಳಿಯ ನಿಧಿಗಾಗಿ ನೀಡುವುದು ಇವೆಲ್ಲಾ ಆ ಕಾಲದಲ್ಲಿ ನಡೆದಿದ್ದ ಘಟನೆಗಳಾಗಿ ದಾಖಲುಗೊಂಡಿವೆ. ಅಂದು ಗಾಂಧೀಜಿಯವರನ್ನು ಕಂಡುಬಂದಿದ್ದ ವೆಂಕಣ್ಣಯ್ಯನವರು ನಂತರದಲ್ಲಿ ಸಂದರ್ಭ ಸಿಕ್ಕಾಗೆಲ್ಲಾ ಎಲ್ಲರಲ್ಲೂ ಆ ಸಂಗತಿಯನ್ನು ಹೇಳುತ್ತಾ ಜೊತೆಜೊತೆಗೇ ‘ಕೆಂಪು ಮೂತಿಯ ಬ್ರಿಟಿಷರು ತೊಲಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಲಷ್ಟೇ ನಮ್ಮ ದೇಶ ಉದ್ಧಾರವಾಗುವುದು’ ಎನ್ನುವ ವಿಷಯವನ್ನು ಒತ್ತಿ ಹೇಳುತ್ತಾ ತಲೆತಿನ್ನುತ್ತಿರುತ್ತಾರೆ. ಅಷ್ಟೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಕನಸುತ್ತಿದ್ದ ವೆಂಕಣ್ಣಯ್ಯನವರು ಅದೇ ದಿನ ಖಾಯಿಲೆ ಬಿದ್ದವರು ಸ್ವಾತಂತ್ರ್ಯದ ಪರಿಣಾಮವನ್ನು ಕಾಣದೆಯೇ ತೀರಿಕೊಳ್ಳುತ್ತಾರೆ. ನೆಚ್ಚಿನ ಭಂಟ ಕುಯಿರ ನಾಯಕನೂ ದಣಿಯನ್ನು ಹಿಂಬಾಲಿಸುವುದರೊಂದಿಗೆ ಆ ತಲೆಮಾರಿನ ಮೌಲ್ಯಗಳ ಅಂತ್ಯವೂ ಆಗಿಹೋಗುತ್ತದೆ.
ಸ್ವಾತಂತ್ರ್ಯದ ಫಲಶ್ರುತಿಯಾಗಿ *ಉಳುವವನೇ ಒಡೆಯ* ಕಾನೂನು ಬಂದು, ಸಿದ್ದ ನಾಯಕನೂ ಬೇರೆಯವರ ಕುಮ್ಮಕ್ಕಿನಿಂದ ಸಾಕಮ್ಮನವರ ವಿರುದ್ಧ ತಿರುಗಿಬಿದ್ದು ವೆಂಕಣ್ಣಯ್ಯನವರ ಭೂಮಿಯನ್ನು ತನ್ನದಾಗಿಸಿಕೊಳ್ಳುತ್ತಾನೆ.ಸಾಕಮ್ಮ ತಾವು ಕೂಲಿಯಾಳುಗಳನ್ನಿಟ್ಟು ಕೃಷಿ ಮಾಡುತ್ತಿದ್ದ ಭೂಮಿಗೂ ಸಿದ್ದ ನಾಯಕ ಹೇಳದೆ ಕೇಳದೆ ತನ್ನ ಎತ್ತುಗಳನ್ನಿಳಿಸಿದಾಗ ಸಾಕಮ್ಮ ಕೆಸರುಗದ್ದೆಯಲ್ಲಿಯೇ ಕುಳಿತು ಅವನು ಕೆಲಸ ಮುಂದುವರೆಸದಂತೆ ಪ್ರತಿಭಟಿಸುವ ಭಾಗ ಸಶಕ್ತವಾಗಿ ಮೂಡಿಬಂದಿದೆ. ಆದರೆ ಆ ಒಂಟಿ ಧ್ವನಿಗೆ ಯಾರ ಬೆಂಬಲವೂ, ಕಡೆಗೆ ಮಗನ ಬೆಂಬಲವೂ ಸಿಗದೆ ಅವಳು ಅಸಹಾಯಳಾಗಿ ಕೈಚೆಲ್ಲಬೇಕಾಗುತ್ತದೆ. ಇದಕ್ಕೂ ಮೊದಲೇ ವೆಂಕಣ್ಣಯ್ಯನವರ ಹಿರಿಮಗ ಬೆಂಗಳೂರಿನ ಹೋಟೆಲ್ ಉದ್ಯಮದಲ್ಲಿ ನೆಲೆಯೂರಿರುತ್ತಾನೆ. ಎರಡನೆಯ ಮಗ ಮೇಳದವರ ಹಿಂದೆ ತಿರುಗುತ್ತಿರುತ್ತಾನೆ. ಹಾಗಾಗಿ ಇಡಿಯ ಕುಟುಂಬವೇ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತದೆ.
ಕತೆಯು ಸಂಪೂರ್ಣವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಲ ದಿಕ್ಕಿನ ಮಲೆನಾಡಿನಲ್ಲಿ ನಡೆಯುತ್ತಾ ಅಲ್ಲಿನ ವಾತಾವರಣವನ್ನು ಸಶಕ್ತವಾಗಿ ಕಟ್ಟಿಕೊಟ್ಟಿದೆ. ಕತೆಯ ಪ್ರತಿಯೊಂದು ಚೌಕಟ್ಟಿನಲ್ಲಿಯೂ ಪರಿಸರದ ಸಂಗತಿಗಳನ್ನು ತರುತ್ತಾ ಸಾಗುತ್ತದೆ. ಆರಂಭದಲ್ಲಿ ಓದುಗನನ್ನು ದಟ್ಟ ಕಾನನದ ನಡುವೆ ಕರೆದೊಯ್ಯುವ ಲೇಖಕರು, ಅವನು ಆ ಪರಿಸರದ ಹೊರಗೆ ಹೋಗದಂತೆ ಎಚ್ಚರಿಕೆಯಿಂದ ಕತೆಯನ್ನು ನಡೆಸುತ್ತಾರೆ. ‘ಪ್ರಕೃತಿಯೊಂದಿಗೆ ಸಹಜವಾಗಿ ಬೆರೆತು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದ ಅಲ್ಲಿನ ಜನಸಮೂಹದ ಮೇಲೆ ದೇಶದ ಸ್ವಾತಂತ್ರ್ಯ ಬೀರಿದ ಪರಿಣಾಮವೇನು?’ ಎನ್ನುವುದರ ಬಗ್ಗೆ ಲೇಖಕರು ಯಾವ ನಿಲುವಿಗೂ ಬರದೆ ತಟಸ್ತ ನೀತಿಯನ್ನು ಅನುಸರಿಸುತ್ತಾ ವಸ್ತು ಸ್ಥಿತಿಯ ಚಿತ್ರಣವನ್ನು ಮಾತ್ರಾ ನೀಡುತ್ತಾರೆ. ತಮ್ಮ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಜಮೀನನ್ನು ಮಾತ್ರಾ ಹೊಂದಿದ್ದ ವೆಂಕಣ್ಣಯ್ಯನವರ ಜಮೀನು ಒಕ್ಕಲಿನ ಪಾಲಾಗುತ್ತದೆ. ಆದರೆ ಜಮೀನ್ದಾರರಾಗಿಯೇ ಮೆರೆದ ಬಲ್ಲಾಳರು, ಲಂಪಟ ಕೃಷ್ಣಯ್ಯನಂತವರಿಗೆ ಯಾವ ಲುಕ್ಸಾನೂ ಆಗದೆ ಗೂಂಡಾಗಿರಿಯಿಂದ ಅವರು ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತಾರೆ.
ಸ್ವಲ್ಪ ಗೊಂದಲವಾಗುವುದು ಕತೆ ನಡೆಯುವ ಅವಧಿಯಲ್ಲಿ. ಆರಂಭದಲ್ಲಿಯೇ ವೆಂಕಣ್ಣಯ್ಯನವರಿಗೆ ಮೂವರು ಮಕ್ಕಳಿದ್ದು ಹಿರಿಯವನಾದ ಸತ್ಯನಾರಾಯಣನಾಗಲೇ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ. ವೆಂಕಣ್ಣಯ್ಯನವರು ಗಾಂಧೀಜಿಯವರನ್ನು ನೋಡಿ ಬಂದ ಪ್ರಸಂಗವು ಕತೆಯ ಮಧ್ಯಭಾಗದಲ್ಲಿ ಬಂದು ಅವರು ಅದರ ಬಗ್ಗೆ ಎಲ್ಲರ ತಲೆ ತಿನ್ನುತ್ತಿರುತ್ತಾರೆ ಎನ್ನುವಾಗಲೇ ಹತ್ತು ವರ್ಷಗಳು ಕಳೆದು ಹೋಗಿ, ಸ್ವಾತಂತ್ರ್ಯ ಬಂದರೂ ಮೊದಲ ಮಗ ಸತ್ಯನಾರಾಯಣ ಇನ್ನೂ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ, ಎರಡನೆಯ ವಾಸುದೇವ ಇನ್ನೂ ಆರು ವರ್ಷದವನು
ಎನ್ನುವ ಅಂಶವು ತುಸು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಮೊದಮೊದಲಲ್ಲಿಯೇ ಅವರು ಗಾಂಧೀಜಿಯವರನ್ನು ಕಂಡುಬಂದದ್ದನ್ನು, ದೇಶಕ್ಕೆ ಸ್ವಾತಂತ್ರ್ಯ ಬರುವ ಬಗ್ಗೆ ತಮ್ಮ ಸಕಾರಾತ್ಮಕ ಧೋರಣೆಯನ್ನು ತಮ್ಮ ತಾಳಮದ್ದಳೆಯ ಅರ್ಥದಾರಿಕೆಯಲ್ಲಿಯೂ ಹೇಳುತ್ತಿದ್ದರು ಎಂದರೂ, ನಿರೂಪಣೆಯಲ್ಲಿ ಹಿಂದು ಮುಂದಾದದ್ದು ಓದುಗನ ಗ್ರಹಿಕೆಗೆ ತೊಡಕಾಗುತ್ತದೆ. ಇದ್ದಕ್ಕಿದ್ದಂತೆ ಸತ್ಯನಾರಾಯಣ ಹೋಟೆಲ್ ಉದ್ಯಮಕ್ಕೆ ಬೆಂಗಳೂರಿಗೆ ಹೋಗುವುದು, ವಾಸುದೇವ ಮೇಳದ ಹಿಂದೆ ತಿರುಗುವುದು, ಜಮೀನು ಸಿದ್ದ ನಾಯಕನ ಪಾಲಾಗುವುದು, ಬ್ಯಾಂಕುಗಳ ರಾಷ್ಟ್ರೀಕರಣವಾಗುವುದು… ಇವೆಲ್ಲವೂ ಸುಮಾರು ಇಪ್ಪತ್ತು ವರ್ಷಗಳ ಕಾಲಮಾನದಲ್ಲಿ ನಡೆದಿದ್ದರೆ, ಕತೆಯ ಆರಂಭದಲ್ಲಿಯೇ ಕಟ್ಟುಮಸ್ತಾದ ಯುವಕನಾಗಿದ್ದ ಸಿದ್ದ ನಾಯಕ ಕತೆಯ ಕೊನೆಯಲ್ಲಿನ್ನೂ ತನಗೆ ಹುಟ್ಟುವ ಮಗುವಿನ ನಿರೀಕ್ಷೆಯಲ್ಲಿರುತ್ತಾನೆ. ‘ಕಥಾರಂಭದಲ್ಲಿದ್ದ ಅವನ ತಮ್ಮಂದಿರು ಏನಾದರು?’ ಎನ್ನುವ ಬಗ್ಗೆ ಕತೆ ಏನನ್ನೂ ಹೇಳುವುದಿಲ್ಲ. ತಾರ್ಕಿಕವಾಗಿ ಈ ಮೇಲಿನ ಅಂಶಗಳ ನಿರೂಪಣೆಯಲ್ಲಿ ಸ್ವಲ್ಪ ಮಟ್ಟಿಗಿನ ಗೊಂದಲ ಕಾಣಿಸಿದರೂ ಸುಮಾರಾಗಿ 1937ರಿಂದ ಮುಂದಿನ ಐವತ್ತು ವರ್ಷಗಳ ಕಾಲದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಲ ಭಾಗದ ಜನಜೀವನವನ್ನು ಕಟ್ಟಿಕೊಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ.
ನದಿ ಒಂದು ಸಂಸ್ಕೃತಿಯ ಸಂಕೇತ. ಆರಂಭದಲ್ಲಿಯೇ ಕುಯಿರ ನಾಯಕನ ಕುಟುಂಬ ಸೀತಾ ನದಿಯನ್ನು ದಾಟಿ ಮೂಡಲ ದಿಕ್ಕಿಗೆ ಬರುತ್ತಾ ಮೊದಲು ಅವರಿದ್ದ ನೆಲದ ಸಂಪರ್ಕವನ್ನೂ, ಅಲ್ಲಿನ ಕಾನೂನು ಕಟ್ಟಲೆಯನ್ನೂ ದಾಟಿಕೊಂಡೇ ಬರುತ್ತಾರೆ. ಬರುವಾಗಲೇ ‘ತಮ್ಮಲ್ಲಿ ಏನೂ ಇಲ್ಲ, ಸಾಲ ತೀರಿಸುವ ಯಾವ ದಾರಿಯೂ ಇಲ್ಲ’ ಎನ್ನುವುದನ್ನು ಸೂಚಿಸಲೆಂದೇ ಅಂದಿನ ಪದ್ಧತಿಯಂತೆ ಮಣ್ಣಿನ ಹರಿಯನ್ನು ಗುಡಿಸಲ ಮುಂದೆ ಕವುಚಿ ಹಾಕಿ ಬಂದಿರುತ್ತಾರೆ. ಹಾಗಾಗಿ ಅವರು ಶೂನ್ಯದಿಂದ ಬದುಕನ್ನು ಕಟ್ಟಿಕೊಂಡವರು. ವೆಂಕಣ್ಣಯ್ಯನವರ ಮನೆಯವರು ಇದ್ದ ಭೂಮಿ ಕಾಣಿಯನ್ನೆಲ್ಲಾ ಕಳೆದುಕೊಂಡರೂ ನಿರ್ಗತಿಕರಾಗುವುದಿಲ್ಲ. ಅವರ ಜೀವನ ವಿಧಾನ ಬದಲಾಗಿರುತ್ತದೆಯಷ್ಟೇ.
ಸ್ವಾತಂತ್ರ್ಯದ ನಿಜವಾದ ಆಶಯವೇನು? ‘ಪ್ರತಿಯೊಬ್ಬರೂ ದಾಸ್ಯದಿಂದ ಮುಕ್ತರಾಗಿ ಸ್ವತಂತ್ರವಾಗಿ ಜೀವಿಸಬೇಕು; ಯಾರು ಯಾರಿಗೂ ಆಳಲ್ಲ; ಅರಸರೂ ಅಲ್ಲ’ ಎನ್ನುವುದು. ಈ ಆಶಯ ಸ್ವತಂತ್ರ ಭಾರತದಲ್ಲಿ ಸ್ಥಾಪಿತವಾಗಿದೆಯೇ? ಇಂದಿಗೂ ಭಂಡಾರಿಯಂತವರು, ಬಲ್ಲಾಳರಂತವರು ಇದ್ದೇ ಇದ್ದಾರೆ; ಸಣ್ಣ ಪುಟ್ಟ ರೈತರು ದಾಸ್ಯದಿಂದ, ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆಯೇ? ಎಲ್ಲವೂ ಪ್ರಶ್ನಾರ್ಥಕ ಚಿಹ್ನೆಗಳಾಗಿಯೇ ಉಳಿದುಕೊಳ್ಳುತ್ತದೆ.
ಕಥಾ ಚೌಕಟ್ಟು, ನಿರೂಪಣೆಯ ಸೌಂದರ್ಯ, ಒಮ್ಮೆ ಶುರುವಾದರೆ ಬಿಡದೆ ಓದಿಸಿಕೊಂಡು ಹೋಗುವ ಹಿಡಿತ, ಆಸಕ್ತಿಕರವಾದ, ಕುತೂಹಲಕರವಾದ ದಕ್ಷಿಣ ಕನ್ನಡದ ಜನಜೀವನದ ಆಚರಣೆಗಳು ಎಲ್ಲವೂ ಕಾದಂಬರಿಯನ್ನು ಹೆಚ್ಚು ಆಕರ್ಷಣೀಯವಾಗಿ ಮಾಡಿದೆ. ಎರೆಡು ಪ್ರಶಸ್ತಿಗಳು ಈಗಾಗಲೇ ಬಂದಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇನ್ನೂ ಹಲವು ಪ್ರಶಸ್ತಿಗಳನ್ನು ಈ ಪುಸ್ತಕ ಗಳಿಸುವಂತಾಗಲಿ.






0 Comments