ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಿಗೂ ಒಂದು ಹೆಸರಿತ್ತು

-ದೀಪಿಕಾ ಬಾಬು

ಶೂರ್ಪಣಖಿ

ರಾಕ್ಷಸಿಯೆಂದು
ಕಥೆಗಳು ಕರೆಯುವ ಮುನ್ನ
ಅವಳಿಗೂ ಒಂದು ಹೆಸರಿತ್ತು.

ಮೀನಾಕ್ಷಿ.

ತಾಯಿಯ ಮಡಿಲಲಿ
ಅವಳು ಕೇವಲ ಮಗಳಾಗಿದ್ದಳು.
ವಿಶ್ರವನ ಆಶ್ರಮದಲಿ
ಒಂದು ನಗುವಾಗಿದ್ದಳು.

ಅಣ್ಣಂದಿರಿಗೆ
ಲಂಕೆ, ಶಾಸ್ತ್ರ, ಶೌರ್ಯ, ವರಗಳಿದ್ದವು.
ಅವಳ ಪಾಲಿಗೆ
ಕನ್ನಡಿಯ ಮುಂದೆ ನಿಂತ
ಒಂದು ಹೆಣ್ಣಿನ ಕಣ್ಣುಗಳಿದ್ದವು.

ಇಷ್ಟಪಟ್ಟಳು….

ಅಷ್ಟೇ,

ಅರಣ್ಯದ ಮಧ್ಯೆ
ಎದುರಾದ ಪುರುಷನನ್ನು ನೋಡಿ
“ನೀನು ನನಗಿಷ್ಟ” ಎಂದು
ಹೇಳಿಬಿಟ್ಟಳು.

ಯುಗಯುಗಗಳ ಮರ್ಯಾದೆ
ಹೆಣ್ಣಿನ ತುಟಿಗೆ ಹೊಲಿದ
ಮೌನದ ನೂಲನು
ಒಂದು ಕ್ಷಣ ಕತ್ತರಿಸಿದಳು

ಅವಳ ತಪ್ಪು
ಅಷ್ಟೇ ಇರಬಹುದೇ?

ತಿರಸ್ಕರಿಸಬಹುದಿತ್ತು,
ನಗೆಯಾಗಿ ದಾಟಬಹುದಿತ್ತು,
ಮರೆಯಬಹುದಿತ್ತು

ಆದರೆ,
ಅವಳ ಆಸೆಯ ಬೆಲೆಗೆ
ಮೂಗು ಕತ್ತರಿಸಲ್ಪಟ್ಟಿತು.

ಮುಖದ ಮೇಲೆ ಹರಿದ ರಕ್ತಕ್ಕಿಂತ
ಅವಮಾನವೇ ಹೆಚ್ಚು ಉರಿಯಿತು

ಮೂಗು ಕತ್ತರಿಸುವುದು
ಮಾಂಸದ ತುಂಡಂತಲ್ಲ
ಒಬ್ಬ ಹೆಣ್ಣಿನ
ಸ್ವಾಭಿಮಾನದ ರೂಪವನು

ಅಂದಿನಿಂದ
ಪುರಾಣಗಳು ಅವಳ ನಗುವನು ಮರೆತು
ಅವಳ ವಿಕಾರವನು ಮಾತ್ರ ನೆನಪಿಸಿಕೊಂಡವು.

ಯಾರೂ ಕೇಳಲಿಲ್ಲ

ಆ ದಿನದ ಬಳಿಕ
ಅವಳು ಕನ್ನಡಿಯ ಮುಂದೆ
ಹೇಗೆ ನಿಂತಳು?

ತನ್ನ ಮುಖವನು
ಮೊದಲ ಬಾರಿಗೆ ಕಂಡಾಗ
ಎಷ್ಟು ಬಾರಿ ಸತ್ತಳು?

ಯಾರೂ ಬರೆದಿಲ್ಲ
ಅವಳ ದುಃಖದ ಅಳತೆಯನು

ಯುದ್ಧಗಳು ಶುರುವಾಗುವುದು
ಕೆಲವೊಮ್ಮೆ ರಾಜ್ಯಗಳಿಗಾಗಿ,
ಕೆಲವೊಮ್ಮೆ ಧರ್ಮಕ್ಕಾಗಿ
ಕೆಲವೊಮ್ಮೆ,
ಅವಮಾನಿತ ಹೆಣ್ಣಿನ
ಒಂದು ನಿಟ್ಟುಸಿರಿಗಾಗಿ.

ಲಂಕೆ ಸುಟ್ಟಿತು.
ವಂಶಗಳು ಮುರಿದವು
ವೀರಗಾಥೆಗಳು ಹುಟ್ಟಿದವು

ಆದರೆ,
ಯುದ್ಧದ ಹೊಗೆಯ ಆಚೆ
ಒಬ್ಬ ಹೆಣ್ಣು
ತನ್ನ ಮುಖವನು ಸ್ಪರ್ಶಿಸುತ್ತಾ
ಕುಳಿತಿದ್ದಳು.

ಇತಿಹಾಸವು
ಅವಳನು ಖಳನಾಯಕಿಯೆಂದಿತು

ಆದರೆ,
ಕಥೆಗಳ ನಡುವಣ
ಮೌನದ ಜಾಗಗಳಲ್ಲಿ
ಶೂರ್ಪಣಖೆ ಇನ್ನೂ ಕೇಳುತ್ತಾಳೆ…

“ಪ್ರೀತಿ ಕೇಳಿದ ಹೆಣ್ಣಿಗೆ
ಶಿಕ್ಷೆ ಯಾಕೆ?

ನನ್ನ ಕಾಮನೆ ಪಾಪವಾದರೆ,
ಪುರುಷನ ಕಾಮನೆಗೆ
ಪುರಾಣಗಳಲ್ಲಿ ಪರಾಕ್ರಮವೆಂಬ
ಹೆಸರು ಬಂದದ್ದು ಹೇಗೆ?”

ಉತ್ತರಗಳಿಲ್ಲ.

ಅರಣ್ಯ ಮಾತ್ರ
ಇನ್ನೂ ಅವಳ ಹೆಜ್ಜೆ ಸದ್ದನು
ಬಚ್ಚಿಟ್ಟಿದೆ.

ಮಾಗುವುದೆಂದರೆ
ತಿರಸ್ಕಾರವನು ತಡೆದು ನಿಲ್ಲುವುದು

ಹೆಣ್ಣಾಗುವುದೆಂದರೆ
ಮೂಗು ಕತ್ತರಿಸಿದವರನ್ನಲ್ಲ,
ಮೂಗು ಕತ್ತರಿಸಲ್ಪಟ್ಟವಳ
ಮೌನವನು ಅರಿಯುವುದು.

ರಾಕ್ಷಸಿಯೆಂದು
ಕಥೆಗಳು ಕರೆಯುವ ಮುನ್ನ,

ಅವಳೂ
ಪ್ರೀತಿಸಲಿಚ್ಛಿಸಿದ
ಒಬ್ಬ ಹೆಣ್ಣಾಗಿದ್ದಳು.

‍ಲೇಖಕರು Admin

11 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading