ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿರಳೆಯ ಸ್ವಗತ

-ವೀರೇಂದ್ರ ರಾವಿಹಾಳ್

ಜಿರಳೆಯ ಸ್ವಗತ

ನಾನೊಂದು ಜಿರಳೆ.
ನಿಮ್ಮ ಮನೆಯ ಅತಿಥಿಯೇನೂ ಅಲ್ಲ,
ನಿಮ್ಮ ಸಹವಾಸಿ.
ನಿಮ್ಮ ಮನೆಯ ಮೇಲೆ
ನಿಮಗಿರುವಷ್ಟೇ ಹಕ್ಕು
ನನಗೂ ಇದೆ.

ನನ್ನನ್ನು ಕಂಡರೆ
“ಛೀ!” ಎಂದು ಮೂಗು ಮುರಿಯುವ ನೀವು,
ರಾತ್ರಿಯಾದಾಗ
ಮುಖವಾಡ ತೊಟ್ಟು
ನನಗಿಂತಲೂ ಚೆನ್ನಾಗಿ
ಕತ್ತಲ ಬದುಕಿಗೆ ಜಾರುತ್ತೀರಿ.

ನಾನು ಅಳಿದುಳಿದ ಆಹಾರವ ತಿಂದು ಬದುಕುವೆ
ನೀವು ಮನುಷ್ಯರು ಮತ್ತೊಬ್ಬರ ಕನಸು, ನಂಬಿಕೆ,
ಬದುಕುಗಳನ್ನೇ ತಿಂದು ಬದುಕುತ್ತೀರಿ.

ನಾನು ಗೋಡೆಯ ಬಿರುಕು, ಸಂದುಗೊಂದಲುಗಳಲ್ಲಿ ಅಡಗುವೆ.
ನೀವು ಅಧಿಕಾರದ ಬಿರುಕು,
ಅಹಂಕಾರದ ಅಮಲಿನಲ್ಲಿ ಅಡಗಿ
ಮನುಷ್ಯತ್ವವ ಕಳೆದುಕೊಳ್ಳುತ್ತೀರಿ.

ನನ್ನನ್ನು ಮುಗಿಸಲು
ವಿಷದ ಸ್ಪ್ರೇ ಖರೀದಿಸುತ್ತೀರಿ;
ಆದರೆ
ನಿಮ್ಮೊಳಗಿನ ದುರುಳತನ,
ದುರಾಸೆ, ಲೋಭ, ಕ್ರೌರ್ಯಗಳಿಗೆ
ಯಾವ ಔಷಧಿಯಿದೆ?

“ಜಿರಳೆ ರೋಗ ಹರಡಿಸುತ್ತದೆ” ಎನ್ನುತ್ತೀರಿ;

ಸುಳ್ಳು, ದ್ವೇಷ,
ಭ್ರಷ್ಟಾಚಾರ, ಹಿಂಸೆ,
ವಂಚನೆಯ ಸೋಂಕು
ಹರಡುವವರು ಯಾರು?

ನನ್ನನ್ನು ಅಸಹ್ಯವೆನ್ನುತ್ತೀರಿ…
ನಿಮ್ಮ ಕಚೇರಿ, ಸಭಾಂಗಣ,
ರಾಜಕೀಯದ ಹಾದಿಗಳಲ್ಲಿ
ಜಿರಳೆತನವನ್ನು ಮೈಗೂಡಿಸಿಕೊಂಡವರು
ಸೂಟು ಬೂಟುಗಳನುಟ್ಟು
ಗೌರವಾನ್ವಿತರಂತೆ ತಿರುಗಾಡುತ್ತಿದ್ದಾರೆ.

ನನ್ನನ್ನು ಕಾಲಿನಿಂದ ಹೊಸಕಿ ಸಾಯಿಸುವುದು ಸುಲಭದ ಮಾತು.

ನಿಮಗೆ ನೆನಪಿರಲಿ…
ಮಾನವನ ಸಂತತಿಯ ಉಳಿವಿಗಾಗಿ
ಪ್ರಯೋಗಾಲಯಗಳಲಿ
ನನ್ನ ಸಂತತಿಯು ಮೌನವಾಗಿ ನೀಡಿದ
ಅಸಂಖ್ಯ ಬಲಿದಾನಗಳ ಋಣ
ತೀರಿಸಲು
ನಿಮಗೆ ಎಷ್ಟು ಜನ್ಮಗಳು ಬೇಕೋ?

ಅಣುದಾಳಿಯನು ಮೀರಿ
ಬದುಕುಳಿಯುವ ಶಕ್ತಿ
ನಮ್ಮದು.

ನನಗೇನೂ ಕೋಪವಿಲ್ಲ…
ನನ್ನನ್ನು ಕೊಂದರೆ
ಒಂದು ಜೀವ ಅಂತ್ಯವಾಗುತ್ತದೆ.

ಆದರೆ –
ಮನುಷ್ಯನೊಳಗಿನ ಮನಷ್ಯತ್ವ ಸತ್ತಾಗ
ರಾಕ್ಷಸ ಮಾತ್ರ ಉಳಿಯುತ್ತಾನೆ.

‍ಲೇಖಕರು Admin

26 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading