-ಗೊರೂರು ಶಿವೇಶ್
ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ಕ್ರಿಸ್ಟೋಫರ್ ನೋಲನ್ ಚಿತ್ರಣದ ‘ಒಡಿಸ್ಸಿ’
ವಿಶ್ವದ ಅತ್ಯಂತ ಪ್ರಸಿದ್ಧ ಮಹಾಕಾವ್ಯಗಳಾದ ಭಾರತದ ರಾಮಾಯಣ, ಮಹಾಭಾರತ ಹಾಗೂ ಗ್ರೀಕ್ ಸಂಸ್ಕೃತಿಯ ಇಲಿಯಡ್, ಒಡಿಸ್ಸಿ—ಇವುಗಳ ಮೂಲ ಸೆಲೆ ಅಥವಾ ಸಾಮಾನ್ಯ ಎಳೆ ಎಂದರೆ ಹೆಣ್ಣು ಮತ್ತು ಮಣ್ಣಿಗಾಗಿ ನಡೆಯುವ ಹೋರಾಟ. ಆದರೆ ಈ ಹೋರಾಟದ ಹಿನ್ನೆಲೆಯಲ್ಲಿ ಇರುವುದು ಕೇವಲ ಭೌತಿಕ ವಸ್ತುವಿನ ಆಸೆಯಷ್ಟೇ ಅಲ್ಲ; ಬದಲಿಗೆ ವ್ಯಕ್ತಿಯ ಘನತೆ, ಮರ್ಯಾದೆ, ಛಲ ಮತ್ತು ಹಠ. ಮಹಾಭಾರತದಲ್ಲಿ ದುರ್ಯೋಧನನ “. ನೆಲಕಿರಿವೆನೆಂದು ಬಗೆವಿರೆ ಛಲಕಿರಿವೆಂ” ಎನ್ನುವ ಮಾತುಗಳು ನೆಲದಾಸೆಗಿಂತ ಛಲವೇ ಪ್ರಧಾನ ಎಂಬ ಸತ್ಯವನ್ನು ಸಾರುತ್ತವೆ.
ರಾಮಾಯಣ ಮತ್ತು ಮಹಾಭಾರತಗಳು ಗ್ರೀಕ್ ಮಹಾಕಾವ್ಯಗಳಿಗಿಂತ ಕಾಲಮಾನದಲ್ಲಿ ಪ್ರಾಚೀನವಾದವು. ಭಾರತೀಯ ಮಹಾಕಾವ್ಯಗಳ ಸಾರವು ಜನಪದರ ಮೂಲಕ ಹರಡಿ, ವಿದೇಶಗಳಿಗೂ ತಲುಪಿರಬಹುದು ಎಂಬುದಕ್ಕೆ ಗ್ರೀಕ್ ಕಥಾನಕಗಳಲ್ಲಿ ಬರುವ ಕೆಲವು ಘಟನೆಗಳೇ ಸಾಕ್ಷಿ. ಉದಾಹರಣೆಗೆ, ಒಡಿಸ್ಸಿಯಸ್ ಕಥನದಲ್ಲಿ ಬರುವ ಧನುಸ್ಸನ್ನು ಎತ್ತುವ ಪ್ರಸಂಗ ಹಾಗೂ ಚಲಿಸುವ ಗುರಿಗೆ ಬಾಣ ನೆಡುವ ಸನ್ನಿವೇಶಗಳು, ಶ್ರೀರಾಮ ಸೀತೆಯನ್ನು ವರಿಸಲು ಬಿಲ್ಲು ಮುರಿದದ್ದು ಮತ್ತು ಅರ್ಜುನ ದ್ರೌಪದಿಯನ್ನು ಗೆಲ್ಲಲು ಮತ್ಸ್ಯಯಂತ್ರಕ್ಕೆ ಗುರಿ ಇಟ್ಟ ಪ್ರಸಂಗಗಳನ್ನು ನೆನಪಿಸುತ್ತವೆ.

ಮೊದಲಿನಿಂದಲೂ ಇಂತಹ ಮಹಾಕಾವ್ಯಗಳು ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರ ಆಸಕ್ತಿಯ ವಸ್ತುವಾಗಿವೆ. ಭಾರತದಲ್ಲಿ ರಾಮಾಯಣ-ಮಹಾಭಾರತಗಳ ಆಧಾರಿತ ಅಪಾರ ಸಿನಿಮಾಗಳು ಬಂದಂತೆ, ಹಾಲಿವುಡ್‌ನಲ್ಲಿ ಮಹಾಕವಿ ಹೋಮರನ ‘ಇಲಿಯಡ್’ ಮತ್ತು ‘ಒಡಿಸ್ಸಿ’ ಆಧರಿಸಿ ಹಲವು ಚಿತ್ರಗಳು ಮೂಡಿಬಂದಿವೆ. ಅವುಗಳಲ್ಲಿ ಅತ್ಯಂತ ಇತ್ತೀಚಿನ ಹಾಗೂ ಗಮನಾರ್ಹ ಪ್ರಯತ್ನ ಕ್ರಿಸ್ಟೋಫರ್ ನೋಲನ್ ಅವರ ನಿರ್ದೇಶನದ ‘ಒಡಿಸಿ’.
ಚಿತ್ರವು ಕಥಾನಾಯಕ ಒಡಿಸ್ಸಿಯಸ್ ಇಲ್ಲದ ‘ಇಥಾಕಾ’ ನಗರದ ಚಿತ್ರಣದೊಂದಿಗೆ ಆರಂಭವಾಗುತ್ತದೆ. ಟ್ರಾಯ್ ಯುದ್ಧಕ್ಕೆ ತೆರಳಿದ ಒಡಿಸ್ಸಿಯಸ್, 20 ವರ್ಷಗಳಾದರೂ ಹಿಂದಿರುಗದಿರುವುದು ಆತ ಬದುಕಿರುವನೇ ಎಂಬ ಅನುಮಾನ ಮೂಡಿಸಿರುತ್ತದೆ. ಯುದ್ಧಕ್ಕೆ ತೆರಳುವ ಮುನ್ನ ಆತ ತನ್ನ ಪತ್ನಿ ಪೆನೆಲೋಪೆಗೆ “ನಾನು ಮರಳಿ ಬಾರದಿದ್ದರೆ ಮರುಮದುವೆಯಾಗು” ಎಂದು ವಾಗ್ದಾನ ನೀಡಿರುತ್ತಾನೆ. ಇದನ್ನೇ ಕಾಯುತ್ತಿದ್ದ ಸಾಮಂತ ರಾಜರು ಪೆನೆಲೋಪೆಯನ್ನು ವರಿಸಲು ಕಾತರರಾಗಿದ್ದಾರೆ. ಇನ್ನೊಂದೆಡೆ, ಮಗ ಟೆಲಿಮಾಕಸ್‌ಗೆ ತಂದೆ ಬದುಕಿದ್ದಾನೆ ಎಂಬ ಬಲವಾದ ನಿರೀಕ್ಷೆ. ಹೀಗಾಗಿ ಆತ ತಂದೆಯನ್ನು ಹುಡುಕಿ ಹೊರಡುತ್ತಾನೆ. ಮೂಲ ಮಹಾಕಾವ್ಯದಲ್ಲಿದ್ದಂತೆ ಸಿನಿಮಾದಲ್ಲೂ ಒಂಟಿ ಕಣ್ಣಿನ ದೈತ್ಯ, ಮಾಟಗಾತಿ ಹಾಗೂ ಸಮುದ್ರ ಸುಳಿಯಲ್ಲಿ ಸಿಲುಕುವ ರೋಚಕ ಪ್ರಸಂಗಗಳನ್ನು ದೃಶ್ಯೀಕರಿಸಲಾಗಿದೆ.
ಸಾಮಾನ್ಯ ಪ್ರೇಕ್ಷಕ ಇಂತಹ ಸಿನಿಮಾಗಳಿಂದ ಪರದೆಯ ಮೇಲಿನ ಅದ್ಭುತ ದೃಶ್ಯ ವೈಭವವನ್ನು ನಿರೀಕ್ಷಿಸುತ್ತಾನೆ. 20 ವರ್ಷಗಳ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಇದೇ ಕಥಾಹಂದರದ ಟ್ರಾಯ್, ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಸಂಚಲನ ಮೂಡಿಸಿದ ಬಾಹುಬಲಿ ಯುದ್ಧದ ದೃಶ್ಯಗಳು, ಕಣ್ತಣಿಸುವ ಅದ್ದೂರಿ ದೃಶ್ಯಗಳನ್ನು ನೆನಪಿಸಿಕೊಂಡು ಭರ್ಜರಿ ಬಾಡೂಟದ ನಿರೀಕ್ಷೆಯಲ್ಲಿ ಹೋದವರಿಗೆ, ಈ ಚಿತ್ರ ‘ಬೇಳೆ ಸಾರಿನ ಊಟ’ದಂತೆ ಭಾಸವಾದರೆ ಅಚ್ಚರಿಯಿಲ್ಲ. ಆದರೆ, ನೋಲನ್ ಸಿನಿಮಾಗಳ ಅಸಲಿ ಶಕ್ತಿ ಇರುವುದು ಪಾತ್ರಗಳ ಅಂತರಂಗದ ತುಮುಲಗಳು, ಅಪರಾಧ ಪ್ರಜ್ಞೆ ಹಾಗೂ ಪಾತ್ರಗಳ ಒಳಹರಿವಿನ ಶೋಧನೆಯಲ್ಲಿ.
ಚಿತ್ರದಲ್ಲಿ ಪಾಪ ಮತ್ತು ಪಾಪಪ್ರಜ್ಞೆಯ ಕುರಿತಾದ ಜಿಜ್ಞಾಸೆಯನ್ನು ಪಾತ್ರಗಳು ಪದೇಪದೇ ಚರ್ಚಿಸುತ್ತವೆ. ಈ ಚರ್ಚೆಗೆ ಮುಖ್ಯ ಚೌಕಟ್ಟನ್ನು ಒದಗಿಸುವುದು “Zeus’s Law” (ಝ್ಯೂಸ್‌ನ ನಿಯಮ). ಪ್ರಾಚೀನ ಗ್ರೀಕ್ ಸಂಸ್ಕೃತಿಯಲ್ಲಿ ಇದು ಅತ್ಯಂತ ಪವಿತ್ರವಾದ ‘ಅತಿಥಿ ಸತ್ಕಾರದ ನಿಯಮ’ (Xenia). ಅಪರಿಚಿತ ವ್ಯಕ್ತಿಯು ಮಾನವ ರೂಪದಲ್ಲಿ ಬಂದ ಸ್ವತಃ ದೇವತೆಯೇ ಇರಬಹುದು; ಆದ್ದರಿಂದ ಪ್ರತಿಯೊಬ್ಬ ಅಭ್ಯಾಗತನನ್ನೂ ಗೌರವಿಸಬೇಕು ಎಂಬುದು ಗ್ರೀಕರ ನಂಬಿಕೆ.
ನೋಲನ್ ಈ ಪುರಾತನ ನಿಯಮವನ್ನು ಸಿನಿಮಾದಲ್ಲಿ ಮಾನವೀಯತೆ, ನಾಗರಿಕತೆ ಮತ್ತು ಯುದ್ಧದ ಪರಿಣಾಮಗಳನ್ನು ವಿಶ್ಲೇಷಿಸುವ ಮುಖ್ಯ ಕಥಾವಸ್ತುವನ್ನಾಗಿ ಬಳಸಿಕೊಂಡಿದ್ದಾರೆ ಮೊದಲನೆಯದುಒಡಿಸ್ಸಿಯಸ್ನ ಅಪರಾಧ ಪ್ರಜ್ಞೆ. ಒಡಿಸ್ಸಿಯಸ್ (ಮ್ಯಾಟ್ ಡೇಮನ್) ಟ್ರಾಯ್ ಯುದ್ಧವನ್ನು ಗೆಲ್ಲಲು ‘ಟ್ರೋಜನ್ ಹಾರ್ಸ್’ (ಮರದ ಕುದುರೆ) ಎಂಬ ಕುತಂತ್ರ ಬಳಸುತ್ತಾನೆ. ಕುದುರೆಯನ್ನು ‘ಆತಿಥ್ಯದ ಉಡುಗೊರೆ’ಯಾಗಿ ಟ್ರಾಯ್ ನಗರದೊಳಗೆ ಕಳುಹಿಸಿ, ರಾತ್ರಿ ಶತ್ರುಗಳನ್ನು ಸಂಹರಿಸುತ್ತಾನೆ. ಪವಿತ್ರವಾದ ಆತಿಥ್ಯದ ನಿಯಮವನ್ನು ಯುದ್ಧಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕೆ “ನಾನು ದೇವತೆಗಳ ಆಶೀರ್ವಾದ ಕಳೆದುಕೊಂಡೆ, ನಾಗರಿಕತೆಯನ್ನು ನಾನೇ ನಾಶಮಾಡಿದೆ” ಎಂಬ ತೀವ್ರ ಅಪರಾಧ ಪ್ರಜ್ಞೆ ಆತನನ್ನು ಕಾಡುತ್ತದೆ.
ಎರಡನೆಯದುಇಥಾಕಾದಲ್ಲಿ ಆತಿಥ್ಯದ ದುರ್ಬಳಕೆ. ಒಡಿಸ್ಸಿಯಸ್ ಇಲ್ಲದಾಗ ಆತನ ಪತ್ನಿ ಪೆನೆಲೋಪ್ (ಆನ್ ಹ್ಯಾಥ್‌ವೇ) ಹಾಗೂ ಮಗ ಟೆಲಿಮಾಕಸ್ (ಟಾಮ್ ಹಾಲೆಂಡ್) ಅರಮನೆಗೆ ಬರುವ ಸಾಮಂತ ರಾಜರನ್ನು ‘ಝ್ಯೂಸ್‌ನ ನಿಯಮ’ಕ್ಕೆ ಬದ್ಧರಾಗಿ ಸಲಹುತ್ತಾರೆ. ಆದರೆ ಈ ಅತಿಥಿಗಳು ನಿಯಮವನ್ನು ದುರ್ಬಳಕೆ ಮಾಡಿಕೊಂಡು ಅರಮನೆಯ ಸಂಪತ್ತನ್ನು ಕೊಳ್ಳೆಯ ಹೊಡೆಯುತ್ತಾರೆ. ಅತಿಥಿ ತನ್ನ ಮಿತಿಯನ್ನು ಮೀರಿದಾಗ ಧರ್ಮ ಮತ್ತು ನಾಗರಿಕತೆ ಹೇಗೆ ಕುಸಿಯುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ.
ಇಲ್ಲಿ ಜಗತ್ತಿನ ಕಾವ್ಯ ಚರಿತ್ರೆಯ ಅತ್ಯಂತ ಪ್ರಮುಖ ತಿರುವುಗಳನ್ನು ಗಮನಿಸಬೇಕಾಗುತ್ತದೆ. ರಾಮಾಯಣದ ‘ಸೀತಾಪಹರಣ’ ಮತ್ತು ಇಲಿಯಡ್‌ನ ‘ಹೆಲನ್-ಪ್ಯಾರಿಸ್’ ಅಪಹರಣದ ಘಟನೆಗಳು ಸಾಮ್ರಾಜ್ಯಗಳ ಪತನಕ್ಕೆ ದಾರಿಮಾಡಿಕೊಟ್ಟ ಪ್ರಮುಖ ಸಾಂಸ್ಕೃತಿಕ ನೆಲೆಗಳು. ರಾವಣ ಸನ್ಯಾಸಿಯ ವೇಷ ಧರಿಸಿ ಪರ್ಣಕುಟೀರಕ್ಕೆ ಬಂದು ಸೀತೆಯನ್ನು ಅಪಹರಿಸಿ ಭಾರತೀಯ ಕಲ್ಪನೆಯ ‘ಅತಿಥಿ ಧರ್ಮ’ವನ್ನು ಉಲ್ಲಂಘಿಸಿದರೆ, ಗ್ರೀಕ್ ಮಹಾಕಾವ್ಯದಲ್ಲಿ ಪ್ಯಾರಿಸ್ ಸ್ಪಾರ್ಟಾದ ಅರಮನೆಗೆ ಅತಿಥಿಯಾಗಿ ಬಂದು ಮೆನೆಲಾಸ್‌ನ ಪತ್ನಿ ಹೆಲನ್‌ನನ್ನು ಕರೆದೊಯ್ಯುವ ಮೂಲಕ ‘ಝ್ಯೂಸ್‌ನ ಆತಿಥ್ಯ ನಿಯಮ’ಕ್ಕೆ (Zeus’s Law) ಮಹಾಪರಾಧ ಎಸಗುತ್ತಾನೆ.
ಆದರೆ, ಇವೆರಡೂ ಘಟನೆಗಳಲ್ಲಿ ಒಂದು ಸೂಕ್ಷ್ಮ ಸಾಂಸ್ಕೃತಿಕ ವ್ಯತ್ಯಾಸವಿದೆ. ಹೆಲನ್‌ನ ಪ್ರಸಂಗದಲ್ಲಿ ಸ್ವಮೋಹ, ಆಕರ್ಷಣೆ ಹಾಗೂ ವಿಧಿಯ ಪ್ರಭಾವ ಪ್ರಧಾನವಾದರೆ, ಸೀತೆಯ ಪ್ರಸಂಗದಲ್ಲಿ ಅಧರ್ಮದ ವಿರುದ್ಧದ ಸಾತ್ವಿಕ ಪ್ರತಿರೋಧ ಮತ್ತು ನೈತಿಕ ಶಕ್ತಿ ಪ್ರಧಾನವಾಗಿ ಎದ್ದು ಕಾಣುತ್ತದೆ. ರಾವಣನ ದರ್ಪ ಸಂಪದ್ಭರಿತ ಲಂಕೆಯನ್ನು ಭಸ್ಮ ಮಾಡಿದರೆ, ಪ್ಯಾರಿಸ್‌ನ ಸಾಹಸ ಭವ್ಯ ಟ್ರಾಯ್ ಸಾಮ್ರಾಜ್ಯವನ್ನೇ ಮಣ್ಣುಪಾಲು ಮಾಡುತ್ತದೆ. ಒಟ್ಟಾರೆಯಾಗಿ, ನೋಲನ್ ಅವರ ‘ಒಡಿಸಿ’ಯಲ್ಲಿ ಈ “Law” ಎನ್ನುವುದು ಕೇವಲ ಕಾಯಿದೆಯಲ್ಲ; ಅದು ಮಾನವೀಯತೆ ಮತ್ತು ನಾಗರಿಕತೆಯ ಸಂಕೇತವಾಗಿದೆ.
ಚಿತ್ರವು ಐಮ್ಯಾಕ್ಸ್ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿರುವುದರಿಂದ, ಇದನ್ನು ಐಮ್ಯಾಕ್ಸ್ ಥಿಯೇಟರ್‌ನಲ್ಲೇ ನೋಡಬೇಕೆಂಬ ಪ್ರಚಾರ ಜೋರಾಗಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಪ್ರವೇಶ ದರ 2000 ರೂಪಾಯಿಗಳವರೆಗೂ ಇದ್ದು, ಕುಟುಂಬ ಸಮೇತ ನೋಡಲು ಹತ್ತು ಸಾವಿರ ರೂಪಾಯಿಯಷ್ಟು ವೆಚ್ಚವಾಗುತ್ತಿದೆ. ಆದರೂ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಇಂದಿನ ಸಿನಿಸಂಸ್ಕೃತಿಗೆ ಹಿಡಿದ ಕನ್ನಡಿ.
ಆದರೆ ವಾಸ್ತವವೆಂದರೆ, ತಾಂತ್ರಿಕ ಮಾಹಿತಿಯ ಪ್ರಕಾರ ಭಾರತದಲ್ಲಿ ಸಂಪೂರ್ಣ ಪ್ರಮಾಣದ (1.43:1 Aspect Ratio) ನೈಜ ಐಮ್ಯಾಕ್ಸ್ ಪರದೆ ಇರುವುದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾತ್ರ. ಉಳಿದೆಡೆ ಇರುವುದು ಡಿಜಿಟಲ್ ಐಮ್ಯಾಕ್ಸ್ ಸ್ಕ್ರೀನ್‌ಗಳು. ಸಾಮಾನ್ಯ ಚಿತ್ರಮಂದಿರಗಳಿಗಿಂತ ಇವುಗಳಲ್ಲಿ ಧ್ವನಿ ಮತ್ತು ದೃಶ್ಯದ ಸ್ಪಷ್ಟತೆ ಹೆಚ್ಚಿರಬಹುದಾದರೂ, ಪ್ರೇಕ್ಷಕರು ನಿರೀಕ್ಷಿಸುವಂತಹ ಬ್ರಹ್ಮಾಂಡ ಮಟ್ಟದ ವ್ಯತ್ಯಾಸವೇನೂ ಸಿಗಲಾರದು. ಏಕೆಂದರೆ, ನೋಲನ್ ಅವರ ಪ್ರಸ್ತುತ ಚಿತ್ರವು ಭವ್ಯ-ರಮ್ಯ ಅನುಭವ ನೀಡುವಂತಹುದಲ್ಲ, ಬದಲಿಗೆ ಕಥೆಯ ತಾತ್ವಿಕತೆ ಹಾಗೂ ಆಧ್ಯಾತ್ಮಿಕ ತುಮುಲಗಳನ್ನು ಕಟ್ಟಿಕೊಡುವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದೆ.






0 Comments