ಪುರುಷೋತ್ತಮ ಬಿಳಿಮಲೆ ಓದಿದ ‘ಮಧುಬಾಲ’

ರಮೇಶ್‌ ಅರೋಲಿ ಬರೆದ ಮಧುಬಾಲಾ ಜೀವನ ಕತೆ

ಪುರುಷೋತ್ತಮ ಬಿಳಿಮಲೆ

ದೆಹಲಿಯ ಕಮಲಾ ನೆಹರೂ ಕಾಲೇಜಿನಲ್ಲಿ ಪತ್ರಿಕೋದ್ಯಮ ಬೋಧಿಸುತ್ತಿರುವ ಗೆಳೆಯ ರಮೇಶ್‌ ಅರೋಲಿ ಹುಟ್ಟಿ ಬೆಳೆದದ್ದು ರಾಯಚೂರಿನಲ್ಲಿ. ಅಲ್ಲಿಯ ಬಡತನ, ಧೂಳು, ಬಿಸಿಲು, ಕಷ್ಟ-ಸುಖ ಬಹುಭಾಷಿಕತನ ಇತ್ಯಾದಿಗಳನ್ನು ಅವರು ಕವಿತೆ ಮಾಡಿ ಹಾಡುತ್ತಲೇ ಬಂದವರು. ಅವರ ಹೊಸ ಪುಸ್ತಕ ಮಧುಬಾಲಾ (ಸಂಗಾತ ಪುಸ್ತಕ, ೯೩೪೧೭೫೭೬೫೩) ಕೂಡಾ ಅವರ ಕವಿತೆಗಳ ಮುಂದರಿಕೆಯೇ ಹೌದು.

೧೯೩೩ರಲ್ಲಿ ಹುಟ್ಟಿದ ಮಧುಬಾಲಾ ೧೯೬೯ರಲ್ಲಿ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ತೀರಿಕೊಂಡಾಗ ಆಕೆಗೆ ಕೇವಲ ೩೬ ವರ್ಷ. ಆದರೆ ಅಷ್ಟರಲ್ಲಿಯೇ ಆಕೆ ೭೨ ಸಿನೇಮಾಗಳಲ್ಲಿ ನಟಿಸಿದ್ದಳು. ಅವಳ ಮೂಲ ಹೆಸರು ಮುಮ್ತಾಜ್ ಬೇಗಂ ಜೇಹನ್ ದೆಹ್ಲವಿ. ೧೯೫೦-೧೯೬೦ರ ನಡುವೆ ಆಕೆ ಅನೇಕ ಯಶಸ್ವೀ ಚಿತ್ರಗಳಲ್ಲಿ ನಟಿಸಿ, ಇಂದಿಗೂ ಮೋಹಕ ನೆನಪಾಗಿ ಉಳಿದವಳು. ಮುಘಲ್-ಎ-ಆಜಂ ನಲ್ಲಿ ಅವಳು ನರ್ತಿಸಿದ ʼಪ್ಯಾರ್‌ ಕಿಯಾ ತೋ ಡರ್ನಾ ಕ್ಯಾʼ ಹಾಡನ್ನು ನಾವು ಮರೆಯುವುದುಂಟೇ? ಅವಳ ಅಸಾಮಾನ್ಯ ಸೌಂದರ್ಯ, ನಗು ಮತ್ತು ಬಳುಕುವ ದೇಹಕ್ಕೆ ಮರುಳಾಗದವರೇ ಕಡಿಮೆ. ಆಕೆಯ ಪ್ರತಿಭೆಯ ಹಲವು ಮುಖಗಳನ್ನು ರಮೇಶ್‌ ತಮ್ಮದೇ ಆದ ಕಾವ್ಯಾತ್ಮಕ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆಕೆಯ ಬಗೆಗೆ ನಮಗೆ ಗೊತ್ತಿಲ್ಲದ ಅನೇಕ ವಿವರಗಳನ್ನು ಅವರು ವಿವಿಧ ಮೂಲಗಳಿಂದ ಸಂಗ್ರಹಿಸಿ, ಕನ್ನಡದ ಓದುಗರಿಗೆ ಉಪಕಾರ ಮಾಡಿದ್ದಾರೆ.

ಪುಸ್ತಕದಲ್ಲಿ ಆಕೆ ಮತ್ತು ಆಕೆಯ ತಂದೆ ಅತಾವುಲ್ಲಾ ಖಾನ್‌ರ ನಡುವಣ ಮೌನ ಸಂಘರ್ಷದ ಕಥನವು ಅನೇಕ ಕಾರಣಗಳಿಂದ ನಮಗಿವತ್ತು ಮುಖ್ಯವಾಗಿದೆ. ಮಗಳ ಯಶಸ್ಸನ್ನು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಮಾತ್ರ ಅವಳ ತಂದೆ ನೋಡಿದರೇ? ಹಾಗೆ ನೋಡಿದ್ದರಿಂದ ಮಧುಬಾಲಾಳ ಬದುಕಿನಲ್ಲಿ ಏನೇನು ಅವಸ್ಥಾಂತರಗಳಾದುವು ಎಂಬುದನ್ನು ರಮೇಶ್‌ ಬಹಳ ಸೂಕ್ಷ್ಮವಾಗಿ, ಎದೆಗೆ ತಟ್ಟುವ ಹಾಗೆ ಬರೆದಿದ್ದಾರೆ. ಪುಸ್ತಕದಲ್ಲಿನ ಇನ್ನೊಂದು ಕಾಡುವ ಸಂಗತಿಯೆಂದರೆ ದಿಲೀಪ್‌ ಕುಮಾರ್‌ ಮತ್ತು ಮಧುಬಾಲಾಳ ಪ್ರಣಯ ಪ್ರಸಂಗ.

ಈ ಜೋಡಿಯು ನಾಲ್ಕು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ʼಮನಮೋಹಕ ಪ್ರಣಯ ಜೋಡಿʼಯಾಗಿ ಪ್ರಸಿದ್ಧಿ ಪಡೆದು, ಪರಸ್ಪರ ಮದುವೆಯಾಗಲು ಇಚ್ಚಿಸಿದ್ದರೂ ಅತಾವುಲ್ಲಾ ಖಾನ್‌ರ ಹಠದಿಂದಾಗಿ ಮದುವೆಯಾಗದೆ ಉಳಿದರು. ದಿಲೀಪ್ ಕುಮಾರ್‌ರೊಂದಿಗೆ ಒಡನಾಟದ ಬದ್ಧತೆ ಇದ್ದಾಗ್ಯೂ, ಮಧುಬಾಲಾ ತನ್ನ ತಂದೆಗೆ ವಿಧೇಯಳಾಗಿದ್ದು ನಿಟ್ಟುಸಿರು ಬಿಡುತ್ತಲೇ ದಿಲೀಪ್‌ ಕುಮಾರನಿಂದ ದೂರವೇ ಉಳಿಯುತ್ತಾಳೆ. ಕೊನೆಗವಳು ಕಿಶೋರ್‌ ಕುಮಾರನನ್ನು ಅನಿವಾರ್ಯವಾಗಿ ಮದುವೆಯಾಗಿ ಇನ್ನಷ್ಟು ಕುಸಿಯುತ್ತಾಳೆ.

ಪ್ರಸ್ತುತ ಪುಸ್ತಕದ ೮೫ನೇ ಪುಟದಲ್ಲಿ ದಾಖಲಾದಂತೆ, ಅತಾವುಲ್ಲಾ ಖಾನ್‌ರನ್ನು ಬಿಟ್ಟು ತನ್ನೊಂದಿಗೆ ಬರುವಂತೆ ದಿಲೀಪ್‌ ಕುಮಾರ್‌ ಮಧುಬಾಲಾಳನ್ನು ಒತ್ತಾಯಿಸುತ್ತಾನೆ. ಆದರೆ ತಂದೆಯ ಕಡೆ ನಿಂತ ಮಧುಬಾಲಾಳು ʼ ನಾ ನಿನ್ನ ಮದುವೆ ಆಗ್ತೇನೆ, ಒಮ್ಮೆ ಮನೆಗೆ ಬಾ, ಅಬ್ಬಾಗೆ ಕ್ಷಮೆ ಕೇಳು, ನನ್ನನ್ನು ತಬ್ಬಿಕೋʼ . ಎನ್ನುತ್ತಾಳೆ. ಆದರೆ ಅದು ಸಂಭವಿಸುವುದೇ ಇಲ್ಲ.

ಅವನೆಂಥ ದಿಲೀಪ್‌ ಕುಮಾರನೋ ಏನೋ? ಅವನ ಜಾಗದಲ್ಲಿ ನಾನೇನಾದರೂ ಇದ್ದಿದ್ದರೆ ಅತಾವುಲ್ಲಾ ಖಾನ್‌ರ ಕಾಲು ಹಿಡಿದು, ಕ್ಷಮೆ ಕೇಳಿ ʼ ನಿನ್ನ ಮಗಳನ್ನು ನೀನು ಮದುವೆ ಮಾಡಿಕೊಡುವವರೆಗೆ ನಿನ್ನ ಕಾಲು ಬಿಡುವುದಿಲ್ಲʼ ಎಂದು ಹೇಳಿ ಮಧುಬಾಲಾಳನ್ನು ನೋಡಿಕೊಂಡು ಅಲ್ಲಿಯೇ ಕೂತಿರುತ್ತಿದ್ದೆ!

ಒಳ್ಳೆಯ ಪುಸ್ತಕ, ಬೇರೆ ಬೇರೆ ಕಾರಣಗಳಿಗಾಗಿ ಓದಬೇಕು.

‍ಲೇಖಕರು Admin

September 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: