ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನ ‘ಕೆಂಪು ಸ್ವೆಟರ್’

‘ಪಲ್ಲವಿ ಪ್ರಕಾಶನ’ ಬೀಳಗಿ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿ ಕುರಿತು ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ಬರಹ ಇಲ್ಲಿದೆ.

-ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು

ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’

ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಹೆಸರುವಾಸಿಯಾದ ವಿಜಯಪುರ ಜಿಲ್ಲೆಯ ಮೂಲದವರಾದ ಸೋಮಲಿಂಗ ಬೇಡರ ಅವರು ೧೯೯೮ ರಲ್ಲಿ ಮೊದಲ ಬಾರಿಗೆ ಚುಟುಕುಗಳನ್ನು ಬರೆದು ಪತ್ರಿಕೆಗೆ ಕಳಿಸಿದಾಗ ಪ್ರಕಟಗೊಂಡ ನಂತರ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ. ಪತ್ರಿಕೆಯನ್ನು ಕೈಯಲ್ಲಿಡಿದು ಬಂದವರಿಗೆ ಹೋದವರಿಗೆಲ್ಲ ತೋರಿಸಿದ್ದೇ ತೋರಿಸಿದ್ದು ಎಂದು ಲೇಖಕರ ನುಡಿಯಲ್ಲಿ ಅವರೇ ಹೇಳಿಕೊಂಡ ಹಾಗೆ, ಒಬ್ಬ ತಾಯಿ ತನ್ನ ಗರ್ಭದಲ್ಲಿ ಮಗುವನ್ನು ನವಮಾಸ ಹೊತ್ತು ಮಗು ಜನಿಸಿದಾಗ ಹೇಳಲಾಗದಂತಹ ನೋವನ್ನು ಮರೆತು ಮಗುವನ್ನು ನೋಡಿ ಖಷಿಪಡುವಂತೆ ಬರಹಗಾರನಿಗೆ ತನ್ನ ಬರಹ ಪತ್ರಿಕೆಯಲ್ಲಿ ಪ್ರಕಟವಾದಗ ಅದರಷ್ಟೇ ಸಂತಸವಾಗುತ್ತದೆ. ಅಲ್ಲಿಂದ ಆರಂಭಗೊಂಡ ಅವರ ಸಾಹಿತ್ಯದ ಕೃಷಿ ಮಕ್ಕಳೊಂದಿಗಿನ ಒಡನಾಟದ ಶಿಕ್ಷಕ ವೃತ್ತಿಯಿಂದ ಮಕ್ಕಳ ಸಾಹಿತ್ಯದೆಡೆಗೆ ಅವರನ್ನು ಸೆಳೆಯುತ್ತದೆ. ಆದ್ದರಿಂದ ಮುದ್ದಿನ ಹಕ್ಕಿ, ಹಕ್ಕಿ ಗೂಡು ಮತ್ತು ಬಂಗಾರ ಬಣ್ಣದ ಹಕ್ಕಿ ಎಂಬ ಮೂರು ಮಕ್ಕಳ ಕವನ ಸಂಕಲನಗಳನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಅರ್ಪಿಸಿ, ಮಕ್ಕಳ ಕಥಾ ಲೋಕಕ್ಕೆ ಅಡಿಯಿಟ್ಟು   ಹನ್ನೆರಡು ಕಥೆಗಳನ್ನೊಳಗೊಂಡ ಈ ಸಂಕಲನ ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡಿದೆ.

ಒಂದು ಸಮಯದಲ್ಲಿ ಮಕ್ಕಳ ಸಾಹಿತ್ಯ ಪ್ರಾಣಿ, ಪಕ್ಷಿ ಮತ್ತು ನಿಸರ್ಗದಲ್ಲಿರುವ ಚಂದ್ರ, ಸೂರ್ಯ, ಮಳೆ, ಕಾಮನಬಿಲ್ಲು, ಗಿಡ-ಮರ, ಮುಂತಾದ ವಿಷಯವಸ್ತುವನ್ನಿಟ್ಟುಕೊಂಡು ರಚನೆಯಾಗುತ್ತಿತ್ತು ಆದರೆ ಇತ್ತಿಚಿಗೆ ಮಕ್ಕಳ ಸಾಹಿತ್ಯ ವಾಸ್ತವದೆಡೆಗೆ ತೆರೆದುಕೊಂಡಿದೆ. ಅಂತೆಯೇ ಸೋಮಲಿಂಗ ಬೇಡರ ಅವರ ಕೆಂಪು ಸ್ವೆಟರ್ ಎನ್ನುವ ಈ ಕೃತಿಯಲ್ಲಿನ ವಿಷಯಗಳು ಕೆಲವು ವಾಸ್ತವತೆಗೆ ಸಂಬಂಧಿಸಿದ್ದರೆ, ಇನ್ನು ಕೆಲವು ಪೌರಾಣಿಕ ವಿಷಯಗಳಿಗೆ ಸಂಬಂಧಿಸಿವೆ, ಮತ್ತೆ ಕೆಲವು ರಮ್ಯತೆಗೆ ಸಂಬಂಧಿಸಿದ ಕಥೆಗಳಿವೆ. ಅದರಲ್ಲಿ ಕೃತಿಯ ತಲೆಬರಹವನ್ನು ಒಳಗೊಂಡ ಮೊದಲ ಕಥೆ ಕೆಂಪು ಸ್ವೆಟರ್ ಮಕ್ಕಳ ಮನಸ್ಸಿನಾಳದಲ್ಲಿ ಸುಪ್ತವಾಗಿರುವ ಮಾನವೀಯತೆಯ ಅನಾವರಣ ಮಾಡುತ್ತದೆ. ಈ ಕಥೆಯ ನಾಯಕಿಯಾದ ಗೌರಿ ಎನ್ನುವ ಬಾಲಕಿ ತನ್ನ ಅಚ್ಚುಮೆಚ್ಚಿನ ಕೆಂಪು ಸ್ವೆಟರ್ ಧರಿಸಿಕೊಂಡು ಶಾಲೆಗೆ ಹೋಗುವಾಗ ಬೀದಿಯಲ್ಲಿ ಒಬ್ಬ ಅಜ್ಜಿ ಚಳಿಯಿಂದ ನಡುಗುತ್ತಿರುವುದನ್ನು ಕಂಡು ತನ್ನ ಕೆಂಪು ಸ್ವೆಟರ್ ಆ ಅಜ್ಜಿಗೆ ಕೊಟ್ಟು ನಿನಗೆ ಯಾರು ಇಲ್ವಾ? ಎಂದು ಕೇಳುತ್ತಾಳೆ. ಆದರೆ ಆ ಅಜ್ಜಿ ಅವಳ ಸ್ವಂತ ಅಜ್ಜಿಯಾಗಿದ್ದು, ತನ್ನ ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಗೌರಿಯ ತಂದೆ ತನ್ನ ತಾಯಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬರುವುದು ತುಂಬಾ ಮನೋಜ್ಞವಾಗಿದೆ.

ಸಂಗೀತ ಹಾಡುವ ಹಕ್ಕಿ ಕಥೆಯು ರಮ್ಯತೆಯ ಗುಣವನ್ನು ಹೊಂದಿದ್ದು ಈ ಕಥೆಯ ನಾಯಕಿಯಾದ ಸಂಗೀತ ತನ್ನ ಗೆಳತಿಯ ಹುಟ್ಟು ಹಬ್ಬಕ್ಕೆ ಕೆಂಪು ಗುಲಾಬಿ ಉಡುಗೊರೆಯಾಗಿ ನೀಡಲು ಮಾತು ಕೋಟ್ಟಿದ್ದರಿಂದ ಎಲ್ಲಿ ಹುಡುಕಿದರೂ ಕೆಂಪು ಗುಲಾಬಿ ಸಿಗದಿದ್ದಾಗ ತೋಟವೊಂದರಲ್ಲಿ ಅಳುತ್ತಾ ಕುಳಿತಾಗ ಹಕ್ಕಿಯೊಂದು ಇವಳೊಂದಿಗೆ ಗೆಳೆತನ ಬೆಳೆಸಿಕೊಂಡು ಕೆಂಪು ಗುಲಾಬಿ ತರಲು ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತದೆ. ಹೀಗೆ ಪ್ರಾಣಿ ಪಕ್ಷಿಗಳು ಮಾನವರ ದು:ಖಕ್ಕೆ ಯಾವ ರೀತಿಯಾಗಿ ಸ್ಪಂದಿಸುತ್ತವೆ ಮತ್ತು ಇನ್ನೊಬ್ಬರ ಒಳಿತಿಗಾಗಿ ಪರೋಪಕಾರದಿಂದ ತಮ್ಮ ಜೀವನವನ್ನೇ ಹೇಗೆ ತ್ಯಾಗ ಮಾಡುತ್ತವೆ ಎನ್ನುವ ಸಂದೇಶವನ್ನು ನೀಡುತ್ತದೆ.

ಬೆಳ್ಳಿ ಕಾಲುಂಗುರ ಕಥೆಯಲ್ಲಿ ರಾಮಾಯಣದ ಪೌರಾಣಿಕ ವಿಷಯವನ್ನು ಹೇಳುತ್ತಾ  ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಸೀತೆ ಕುರುಹುಗಾಗಿ ತನ್ನ ಒಡವೆಗಳನ್ನು ಪುಷ್ಪಕವಿಮಾನದಿಂದ ಕೆಳೆಗೆ ಎಸೆದಿದ್ದಳು. ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಬರುವಾಗ ಕಿಷ್ಕೆಂದೆಗೆ ಆಗಮಿಸಿದಾಗ ಸುಗ್ರೀವನು ಒಡವೆಗಳನ್ನು ರಾಮಲಕ್ಷ್ಮಣರಿಗೆ ತೋರಿಸಿದಾಗ ಲಕ್ಷ್ಮಣ ಬೆಳ್ಳಿಯ ಕಾಲುಂಗುರಗಳನ್ನು ನೋಡಿ ಖಂಡಿತಾ ಇವು ನನ್ನ ಅತ್ತಿಗೆಯಾದ ಮಾತೆ ಸೀತೆಯ ಕಾಲುಂಗುರ ಎಂದಾಗ ಶ್ರೀರಾಮನು ಲಕ್ಷ್ಮಣ ಇಷ್ಟೆಲ್ಲ ಆಭರಣಗಳಲ್ಲಿ ಕೇವಲ ಕಾಲುಂಗುರ ಮಾತ್ರ ಹೇಗೆ ಗುರ್ತಿಸಿದೆ ಎಂದಾಗ ಮಾತೃ ಸ್ವರೂಪಿಯಾದ ಸೀತಾ ಅತ್ತಿಗೆ ಕಾಲಿಗೆ ದಿನಾಲು ನಮಸ್ಕರಿಸುವಾಗ ನಾನು ಕಾಲುಂಗುರವನ್ನು ಮಾತ್ರ ನೋಡಿದ್ದೇನೆ ಬೇರೆ ಒಡವೆಗಳ ಬಗ್ಗೆ ನನಗೆ ತಿಳಿದಿಲ್ಲ ಎನ್ನುತ್ತಾನೆ. ಅಂದರೆ ಅತ್ತಿಗೆಯನ್ನು ಮಾತೃ ರೂಪದಲ್ಲಿ ಕಾಣಬೇಕೆಂಬ ಸಂದೇಶ ಒಂದುಕಡೆಯಾದರೆ ಪರನಾರಿಯರನ್ನು ಮಾತೃ ಭಾವದಿಂದ ಕಾಣಬೇಕೆಂಬ ಸಂದೇಶವನ್ನು ಸಾರುತ್ತದೆ.

ಪಂಚ್ ಪಾಂಡವರು ಕಥೆಯಲ್ಲಿ ಐದು ಜನ ಸ್ನೇಹಿತರ ಶಾರೀರಿಕ ಲಕ್ಷಣಗಳು ಪಾಂಡವರಂತೆ ಹೋಲುವುದರಿಂದ ಎಲ್ಲರೂ ಅವರನ್ನು ಪಂಚ್ ಪಾಂಡವರು ಎನ್ನುತ್ತಿದ್ದರು. ಅವರು ಶಾಲೆಯ ಕೈತೋಟದಲ್ಲಿ, ಮೈದಾನದಲ್ಲಿ ಮತ್ತು ಶಾಲಾ ಒಳಾಂಗಣ ಸ್ವಚ್ಛತೆಯಲ್ಲಿ ಸೇವೆ ಮಾಡುತ್ತಿದ್ದರೆ ಉಳಿದ ವಿದ್ಯಾರ್ಥಿಗಳು ಹೋಂವರ್ಕ ಮಾಡದಿರುವುದರಿಂದ ಆ ರೀತಿ ಮಾಡುವರೆಂದು ತಿಳಿದು ಅವರನ್ನು ಹೀಯಾಳಿಸುತ್ತಿದ್ದರು. ಆದರೆ ಅವರು ಓದುವುದುರೊಂದಿಗೆ ಸೇವೆಯಲ್ಲಿ ತೊಡಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ತಿಳಿಯದೆ ಯಾರ ಬಗ್ಗೆಯೂ ಮಾತಾಡಬಾರದೆಂಬ ವಿಷಯ ತಿಳಿಸುತ್ತದೆ.

ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಮಕ್ಕಳು ಸಾಮಾಜಿಕ ಮಾಧ್ಯಮಗಳ ಮೊರೆಹೋಗಿ ಬಾಲ್ಯದ ಸೊಬಗನ್ನು ಸವಿಯಲು ಆಗುತ್ತಿಲ್ಲ. ಅಂತಹ ಬಾಲ್ಯದ ಜಾನಾಪದ ಆಟ ಮರಕೋತಿ ಆಟದ ಬಗ್ಗೆ ಪರಿಚಯಿಸುವುದರೊಂದಿಗೆ ಮಹಾಭಾರತದ ಪಾಂಡವರು ಮತ್ತು ಕೌರವರ ಬಾಲ್ಯವನ್ನು ಮೆಲುಕು ಹಾಕಿದ್ದಾರೆ. ಶರೀಫನ ಸ್ವಾತಂತ್ರೋತ್ಸವದಲ್ಲಿ ಮಕ್ಕಳಲ್ಲಿ ದೇಶಭಕ್ತಿಯ ಬೀಜ ಬಿತ್ತಿದರೆ, ದೇವರು ಕೊಟ್ಟ ತಂಗಿ ಕಥೆಯಲ್ಲಿ ಅಣ್ಣ ತಂಗಿಯ ಬಾಂಧವ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಆರು ಬೆರಳಿನ ಬಾಲಕ ಕಥೆಯೂ ಮನೋವಿಕಾಸದ ಈಡಿಪಸ್ ಕಾಂಪ್ಲೆಕ್ಸಗೆ ಸಂಬಂಧಿಸಿದ ರೋಮನ್ ಕಥೆಯನ್ನು ಹೋಲುತ್ತದೆ. ಹೀಗೆ ಹನ್ನೆರಡು ಕಥೆಗಳ ಗುಚ್ಛವಾದ ಕೆಂಪು ಸ್ವೆಟರ್ ಸಂಕಲನ ವಿಭಿನ್ನವಾದ ವಿಷಯವಸ್ತುಗಳನ್ನ ಒಳಗೊಂಡಿದ್ದು ಶಾಲಾ ಶಿಕ್ಷಕರು, ಪಾಲಕರು ಮತ್ತು ಮಕ್ಕಳು ಓದಲೇಬೇಕಾದ ಕೃತಿಯಾಗಿದೆ.

‍ಲೇಖಕರು Admin

28 May, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading