ರಾಜಕುಮಾರ ಮಡಿವಾಳರ ಅವರ ಕವನ ಸಂಕಲನ ‘ನೆಲದ ಕಾವು ಮುಗಿಲ ತಾಕಿ’
‘ಅಕ್ಷರ ಮಂಡಲ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಬರಹ ಇಲ್ಲಿದೆ.
-ಕೆ ಎನ್ ಲಾವಣ್ಯ ಪ್ರಭಾ
ತಮ್ಮ ಮೊದಲ ಸಂಕಲನ “ಹುರಿಗೆಜ್ಜಿ”ಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ರಾಜಕುಮಾರರ ಮೊದಲ ಸಂಕಲನದ ಕವಿತೆಗಳಲ್ಲದೇ ಫೇಸ್‌ಬುಕ್‌ನಲ್ಲಿ ಬರೆದ ಅನೇಕ ಕವಿತೆಗಳನ್ನು ಓದುತ್ತಲೇ ಬಂದಿದ್ದೇನೆ. ಮೊದಲ ಸಂಕಲನದ ಕವಿತೆಯೊಂದನ್ನು ನನ್ನ ಯೂಟ್ಯೂಬ್ ನಲ್ಲಿ ಸಹಾ ವಾಚಿಸಿದ್ದೇನೆ. ಅವರ ಮೊದಲ ಪ್ರಯತ್ನ ಕವಿಯ ಬಗ್ಗೆ ಹೊಸ ಭರವಸೆಯನ್ನು ಮೂಡಿಸಿದ್ದಂತೂ ಸತ್ಯ.
“ನೆಲದ ಕಾವು ಮುಗಿಲ ತಾಕಿ” ಸಂಕಲನದಲ್ಲಿ ಕಾವ್ಯದ ಹೊಲದ ತುಂಬಾ ಕಾವ್ಯಾತ್ಮಕ ಸೊಗಡಿನ ತೆನೆಗಳು ಪೌಷ್ಟಿಕಾಂಶ ಪಡೆದು ಇಡೀ ಹೊಲವೇ ಹಸಿರಾಗಿ ಕಂಗೊಳಿಸಿದೆ. ಸಂಕಲನದ ಹೆಸರೇ ಹೇಳುವಂತೆ ನೆಲದ ಕಾವು ಮುಗಿಲ ತಾಕಿ ಧೋ… ಎನ್ನುತ್ತಾ ಮಳೆಯಾಗಿದೆ. ಈ ಮಳೆಯಲ್ಲಿ ನೆಂದು ಶುಭ್ರವಾಗಿ ಪ್ರೇಮ, ಪ್ರಣಯ, ವಾತ್ಸಲ್ಯ, ಮಮತೆ, ಕರುಣೆ, ಅಂತಃಕರಣದ ತಾಜಾತನದಿಂದ ಕವಿತೆಗಳು ನಮ್ಮೊಳಗೆ ಮಿಡಿಯುತ್ತವೆ.
ಪ್ರಸಿದ್ಧ ಕವಿ ಶ್ರೀಯುತ ಸತೀಶ್ ಕುಲಕರ್ಣಿಯವರು ಮುನ್ನುಡಿಯಲ್ಲಿ ಬರೆದಿರುವಂತೆ ಕೆ.ಎಸ್.ನ. ಅವರ ದಾಂಪತ್ಯದ ಸವಿ, ಬೇಂದ್ರೆ ಅವರ ಒಳಗಣ್ಣ ಅಲೌಕಿಕ ಬೆರಗು, ಕಂಬಾರರ ಉತ್ತರ ಕರ್ನಾಟಕ ನೆಲದ ಜಾನಪದೀಯ ಸೊಗಡು ಎಲ್ಲವೂ ಇಲ್ಲಿ ಮಿಳಿತಗೊಂಡು ಕಾವ್ಯಾಸಕ್ತರಿಗೆ ಈ ನೆಲದ ಈ ಮಣ್ಣಿನ ಘಮದಲ್ಲಿ ಗಂಡು ಹೆಣ್ಣಿನ ಅದರಲ್ಲೂ ಗಂಡ ಹೆಂಡತಿಯರ ನಡುವಿನ ಸೂಕ್ಷ್ಮ ಸಂವೇದನೆಗಳು ಒಬ್ಬರಿಗೊಬ್ಬರಲ್ಲದೇ ಇಬ್ಬರ ಸಂಸಾರದ ಇತರೆ ಬಂಧುಗಳ ಬಗ್ಗೆಯೂ ಮಿಡಿಯುವ ಔದಾರ್ಯ ಇಲ್ಲಿದೆ.
ಮನುಷ್ಯ ಮನುಷ್ಯ ಸಂಬಂಧಗಳ ನಡುವೆ ಖಾಲಿ ಅವಕಾಶವೇ ಹೆಚ್ಚಾಗುತ್ತಿರುವಾಗ ಇಂತಹ ಸಂವೇದನೆ ಇಂದಿನ ಯಾಂತ್ರಿಕ ಬದುಕಿನ ಅಗತ್ಯ ತುರ್ತು ಎನಿಸಿದೆ.
ಕೇವಲ ಪ್ರೇಮ ಪ್ರಣಯ ಶೃಂಗಾರಕ್ಕಷ್ಟೇ ಸೀಮಿತವಾಗಿರದೆ ಇಡೀ ಬದುಕಿನಲ್ಲಿ ಬರುವ ಎಲ್ಲಾ ರೀತಿಯ ಸಂಬಂಧಗಳನ್ನು ನಿರ್ವಹಿಸುವಾಗ ಉಂಟಾಗಬಹುದಾದ ಮಾನವ ಸಂವೇದನೆಗಳು ಇಲ್ಲಿ ಕಾಲಕ್ಕನುಗುಣವಾಗಿ ಪ್ರಕೃತಿಯ ಸಂಗತಿಗಳ ಜೊತೆಗೇ ಕಾವ್ಯದೊಳಗೆ ತಂದಿದ್ದಾರೆ. ಪ್ರಕೃತಿಯಲ್ಲಿರುವ ದನ, ಕರು, ಗಿಡ, ಬಳ್ಳಿ, ಹೂವು, ಮಳೆ, ರಾತ್ರಿ, ಚುಕ್ಕಿ, ಎಳೆಬಿಸಿಲು, ಥಂಡಿಗಾಲ, ಕಬ್ಬು, ಹೋಳಿ ಹುಣ್ಣಿಮೆ, ನದಿ… ಪ್ರತಿಯೊಂದರ ಜೊತೆಗೂ ಕವಿ ತನ್ನನ್ನು ತಾನು ಬೆಸೆದುಕೊಂಡೇ ಮಾನವೀಯ ತುಡಿತಗಳನ್ನು ಕವಿತೆಗಳಲ್ಲಿ ತಂದಿರುವುದರ ಹಿಂದೆ ಇಂದಿನ ಕಾವ್ಯವೂ ಯಾಂತ್ರಿಕವಾಗಿ ಹೋಗಿರುವ, ಪ್ರಕೃತಿಯನ್ನು ನಿರ್ಲಕ್ಷಿಸಿರುವ ಮತ್ತು ದಾಂಪತ್ಯದಾಚೆಗಿನ ಪ್ರೇಮಿಗಳ ದೈಹಿಕ ಕಾಮನೆಗಳಿಗೆ ಪ್ರೇಮವೆಂಬುದು ಸೀಮಿತವಾಗಿ ಹೋಗಿರುವ ಈ ಸಂದರ್ಭದಲ್ಲಿ ಇದು ಬಹಳ ಗಮನಾರ್ಹ ಅಂಶ.
ಮಂಜ ಮಾರಿ ಸವರಿದ ಎಳೆ ಬಿಸಿಲು, ಬಂತು ಶ್ರಾವಣ, ತೋಂ..ತಕಿಟ ಥಾ, ಬಾರೆ ಬಾ ಸಖಿ ನೋಡೋಣ ಬಂದವನ್ಯಾವನ?, ಸಿಹಿದನಿ ಎದಯಾಕಿ, ಹುಡುಗಿ ನಿನ್ನ ಮೆರವಣಿಗೆ, ಬಂದಾ ಬರತಾನಂವಾ, ಒಲುಮ್ಯಾತು… ಮೊದಲಾದ ಕವಿತೆಗಳಲ್ಲಿ ಬೇಂದ್ರೆಯವರು ಪ್ರಕೃತಿಯ ಪ್ರತಿ ಸಂಗತಿಗಳಲ್ಲೂ ಹರೆಯದ ಭಾವಸ್ಪಂದನಗಳನ್ನು ಕಾಣುವ ಆ ದಿವ್ಯ ನೋಟ, ಕಂಬಾರರ ಉತ್ತರ ಕರ್ನಾಟಕದ ಭಾಷೆಯಲ್ಲಿ ಮನ ತಣಿಸುವ ತುಂಟತನ ತಾಜಾತನದ ಒಲ್ಮೆ ನಲ್ಮೆಯ ಭಾವಗಳಿಗೆ ಹೊದಿಸಿರುವ ವಿಶಿಷ್ಟ ಆಡುಭಾಷೆಯ ಶೈಲಿ,”ಮಡಚಿ – ಮುತ್ತಿಟ್ಟು” , ಇನ್ನೆರಡು ದಿನ ತಡದೇ ಬರಬೇಕಿತ್ತು”, “ಕಾಗದದ ಪಾದಕ್ಕೆ ಬೆಳ್ಳಿ ಕಿರುಗೆಜ್ಜೆ”, “ಸುಖವೆ ತೌರಿನೊಳಗೆ”, ” ಈ ರಾತ್ರಿಗೆ” ಮೊದಲಾದವುಗಳಲ್ಲಿ ಕಂಡು ಬರುವ ಮಲ್ಲಿಗೆ ಕವಿ ಕೆ.ಎಸ್.ನ. ಅವರ ಮನಸ್ಸು ಮುದಗೊಳಿಸುವ ಪತಿ ಪತ್ನಿಯರ ಸರಸ ಸಲ್ಲಾಪದ ಆಳದಲ್ಲೂ ಒಬ್ಬರ ಮನಸ್ಸನ್ನೊಬ್ಬರು ಅರಿತು ಬೆರೆತು ಒಬ್ಬರಿಗೊಬ್ಬರು ಪರಸ್ಪರ ಸುಖದುಃಖಗಳಿಗೆ ಮಿಡಿಯುವ ಅಂತಃಕರಣ ಇವೆಲ್ಲವೂ ಓದುಗರನ್ನು ಸೆಳೆದಿಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಬೇಂದ್ರೆ ಮತ್ತು ಕೆ.ಎಸ್.ನ. ಅವರ ಪದ್ಯದ ಅನುರಣವಾಗಿದೆಯೇನೋ ಎನಿಸಿದರೂ ಅದನ್ನು ಮೀರಿ ತಮ್ಮದೇ ಸ್ವಂತಿಕೆ ಬೆಳೆಸಿಕೊಳ್ಳುವತ್ತ ಹೆಜ್ಜೆ ಇಡುತ್ತಿರುವುದನ್ನು ಗಮನಿಸಬಹುದು.
ಭಾವತೀವ್ರತೆ ಇಲ್ಲಿ ಹುಚ್ಚುಹೊಳೆಯಾಗಿ ಕೊಚ್ಚಿಹಾಕದೆ ಒಂದಿಷ್ಟು ಸಾವಧಾನ ಸಂಯಮದ ತೋಳುಗಳ ನಡುವೆ “ಎಚ್ಚರ”ವಾಗಿದ್ದೇ ತನ್ನ ಕಾವ್ಯಾತ್ಮಕ ಗುಣಗಳನ್ನು ಪ್ರಭಾವಶಾಲಿಯಾಗಿಸಿರುವುದು ಕಾವ್ಯದ ಅತ್ಯುತ್ತಮ ಅಂಶ.
ಈ ಕವಿತೆಗಳಲ್ಲಿರುವ ಪ್ರೇಮದ ಹುಚ್ಚಿರುವ ಹುಡುಗನಂತೆಯೇ , ಪ್ರಬುದ್ಧ ಪ್ರೇಮಿಯೂ, ಜವಾಬ್ದಾರಿಯುತ ಅಳಿಯನೂ, ಅಂತಃಕರಣದ ಪತಿಯೂ , ಪ್ರಕೃತಿಯ ಅಚ್ಚರಿಗಳನ್ನು ನೋಡಿ ಚಕಿತನಾಗುವ ಪ್ರಕೃತಿ ಪ್ರೇಮಿಯೂ, ಹೆಣ್ಮನದ ಬಹುಸೂಕ್ಷ್ಮ ಕೋಮಲ ಭಾವಗಳ ತಾಯ್ತನದ ಹೃದಯ ಇವೆಲ್ಲವುಗಳ ಮಿಡಿತ ಈ ಕವಿತೆಯೊಳಗಿವೆ.
ಬಾಹ್ಯಾಚರಣೆಗಳಿಂದ ಹೊರತಾದ ಇಲ್ಲಿಯ ಶಿವ ಗುಡಿಯಲ್ಲಿರದೆ ಗುಡಿಯ ಹೊರಗಿನ ಹೂ ಮಾರುವ ಮುದ್ದು ಮಕ್ಕಳ ನಗೆಯಾಗಿ ಕವಿಗೆ ಕಾಣಿಸುವಲ್ಲಿ ಪ್ರತಿಜೀವಿಯೊಳಗೂ ದೇವನಿರುವ ಅರಿವನ್ನು ಪ್ರತಿಯೊಂದರ ಬಗ್ಗೆಯೂ ಕರುಣೆ ಗೌರವ ಮಮತೆ ಪ್ರೀತಿ ಕಾಳಜಿಯನ್ನು ಕವಿಹೃದಯ ಮಿಡಿದಿದೆ.
ಬಹುಪಾಲು ಎಲ್ಲಾ ಕವಿತೆಗಳೂ ಓದುಗರಿಗೆ ಕಾವ್ಯ ರಸದೌತಣವನ್ನೇ ನೀಡುತ್ತದೆ.
ಶಿವನ ಕಂಡಿರೇನು?, ಹೂವೆಂದರೆ, ಸುಖವೆ ತೌರಿನೊಳಗೆ?, ಮಡಚಿ- ಮುತ್ತಿಟ್ಟು, ನಾಳೆ, ಪ್ರೀತಿ ಕೂಡ ಬಲು ಅವಸರದ ಸರಕು, ಹುಲ್ಡಿಲ್ಲಲೇ, ಪ್ರಾಯಶ: – ಈ ಮೊದಲಾದ ಕವಿತೆಗಳು ವೈಯಕ್ತಿಕವಾಗಿ ನನ್ನನ್ನು ಸೆಳೆದವು.
ಹುಲ್ಡಿಲ್ಲಲೇ ಕವಿತೆಯ ಈ ಸಾಲುಗಳನ್ನು ನೋಡಿ.
“ಇದ್ದುದೆಲ್ಲವೂ ಚಂದ ಬಲು ಅಂದ
ಇದ್ರ ಅದರಾಗ ಜೀವ
ಬೆಳಕೇ ಬೆಳಕು ಮನಿ ತುಂಬ ಮನಿಹಣತಿ
ಹೊತ್ತೊತ್ತಿಗೆ ಹೊತ್ತಿ ಉರಿಯುವಾಗ
ಜೀವ ಹೋಗಿ ದೀಪ ಆರಿದ ಮ್ಯಾಲ
ಹುಲ್ಡಿಲ್ಲಲೇ ತಮ್ಮ ಸ್ವಂತ ಮನಿಯಾಗ”
( ಹುಲ್ಡಿಲ್ಲ= ಹುರುಳಿಲ್ಲ)
ಬದುಕಿನೊಳಗಾಟವನ್ನು ಉಲ್ಲಾಸದಿಂದಾಡುವ ಸಖೀಭಾವದ ಜೊತೆಗೆ ಬದುಕಿನಾಚೆ ನಿಂತು ನೋಡುವ ಸಾಕ್ಷಿಭಾವವೂ ಇರುವುದರಿಂದಲೇ
ಉತ್ಕಟ ಪ್ರೇಮ ಪ್ರಣಯ ಶೃಂಗಾರದಾಟದಷ್ಟೇ ಮಮತೆ ವಾತ್ಸಲ್ಯ ಅಕ್ಕರೆ ಅಂತಃಕರಣದಂತಹ ಮನುಷ್ಯ ಸಂಬಂಧಗಳ ಒಡನಾಟದ ನಡುವೆಯೂ ಮತ್ತು ಹುರುಳಿಲ್ಲದ ಜೀವನದ ನಶ್ವರತೆಯ ಬಗ್ಗೆಯೂ ಇರಬೇಕಾದ ಎಚ್ಚರ ಇಲ್ಲಿ ಕಾಣುತ್ತದೆ.
ವಿವಿಧ ಭಾವ ಸಂವೇದನೆಗಳು ಮತ್ತು ವಸ್ತುವೈವಿಧ್ಯತೆಗಳೊಂದಿಗೆ ಕೌಟುಂಬಿಕ ಮೌಲ್ಯಗಳು, ಪ್ರಕೃತಿಯ ಅಚ್ಚರಿಗಳ ಜೊತೆ ತಾದಾತ್ಮ್ಯತೆ, ನೋವು ನಲಿವಿಗೆ ಮಿಡಿಯುವ ಅಂತಃಕರಣ, ಅನನ್ಯ ಪ್ರೇಮ ಇವೆಲ್ಲವುಗಳನ್ನು ತನ್ನೊಡಲಲ್ಲಿರಿಸಿಕೊಂಡು ತುಂಬಾ ವಿಶಿಷ್ಟವಾಗಿ ನಿಲ್ಲುವ ಈ ಸಂಕಲನ ಮತ್ತಷ್ಟು ಮಗದಷ್ಟು ಕನ್ನಡದ ಕವಿ ಮನಸ್ಸುಗಳಿಗೆ ತಾಕಿ ಮಳೆ ಸುರಿಸಿ ಎದೆ ತಣಿಸಲಿ.
ಶುಭವಾಗಲಿ.






0 Comments