-ಎಂ.ವಿ. ಶಶಿಭೂಷಣ ರಾಜು
ಪ್ರೇಮವೂ ಕಳಚಿಕೊಳ್ಳುವುದಂತೆ
ಪ್ರೇಮವೂ ಕಳಚಿಕೊಳ್ಳುವುದಂತೆ
ತಟಕ್ಕನೆ ತೊಟ್ಟುಕಳಚಿ ಬೀಳುವ ಹೂವಿನ ಹಾಗೆ.
ಕಳೆದುಹೋಗುವ ಪ್ರೇಮ ನಿರಾಸೆಯೊಂದನು
ಹೊತ್ತು ಹೊರಡುವುದು;
ಕಳಚಿಕೊಂಡ ಪ್ರೇಮ ಅವಶೇಷ
ಸಮೇತ ಆತುಕೊಳ್ಳುವುದು.
ಹೂವು ಉದುರುವಾಗ
ಹೂವಿಗೋ, ರೆಂಬೆಗೂ ಭಾವಕಸಿವಿಸಿ.
ಪದಗಳು ಚದುರುವಾಗ
ಕವಿಗೂ, ಕವಿತೆಗೂ ಕಳವಳ.
ಉಲ್ಕೆ ಉದುರುವಾಗ ಆಗಸಕ್ಕಾಗುವ
ಉದ್ವೇಗ,
ಮೋಡ ತೊರೆದ ನೀರಿನ ಭಾವ!
ಪ್ರೇಮವೂ ಮಾಗುವುದೇ?
“ಮಾಗಿದ ಹಣ್ಣು ಉದುರುವುದಲ್ಲೇನು ವಿಶೇಷ?” ಅನ್ನುವಿರಾ?
ಹಣ್ಣು ಉದುರಿದರೆ ಮೊಳಕೆಗೆ ಸಿದ್ಧವಾದಂತೆ,
ಆದರೆ ಪ್ರೇಮ… ಅದು ಸಶೇಷ.
ಮಾಗಿದಷ್ಟೂ ಪ್ರೇಮ ಉತ್ಕಟವಾಗಬೇಕಲ್ಲವೇ?
ಅಥವಾ
ಕಳಚಿಕೊಳ್ಳಲು ತಯಾರಿಯೇ?
“ಮಾಗಿದ ಮೇಲೆ
ಉದುರುವುದೇ ಮೇಲು” ಎಂದರೆ
ನಾನೇನು ಹೇಳಲಿ?
ಕೊನೆಯವರೆಗೂ ಪ್ರೇಮ ಸಾಗಿ
ಮಾಗಿದರೆ ಸಿಹಿ,
ಅರ್ಧದಾರಿಯಲಿ ಮುಗಿದರೆ
ಅದೊಂದು ಸದಾ ಜಾಗೃತ…!!!
ಪ್ರೇಮವಿರುವುದು ಪ್ರೇಮಿಸಲಷ್ಟೇ ಅಲ್ಲ,
ಹೊಸತೊಂದು ಮೈತಾಳಲು,
ಪಸರಿಸಲು ಜಗಕೆ,
ಸ್ವಪ್ರೇಮದಿಂದ ವಿಶ್ವಪ್ರೇಮವಾಗಲು!
ಆಗ
ಪ್ರೇಮ ಪ್ರೀತಿಯಾಗಿ, ಎಲ್ಲೆಡೆ ಶಾಂತಿ ಮೂಡಬಹುದು.






0 Comments