ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ- ಕನಸು, ಕನವರಿಕೆಗಳು ದೃಶ್ಯದ ಮೂಲಕ ಅನಾವರಣ..

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 6

ಕೃತಿ – ರಾಮ್ ಗೋಪಾಲ್ ವರ್ಮಾ ಸಿನಿಮಾಯಾನ ‘ನನ್ನಿಷ್ಟ’
ಲೇಖಕರು – ಕನ್ನಡಕ್ಕೆ ಅನುವಾದ – ಸೃಜನ್
ಪ್ರಕಾಶಕರು – ಪಲ್ಲವ ಪ್ರಕಾಶನ
ಬೆಲೆ – 220

RGV ಎಂದೇ ಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರ ಸಿನಿ ಬದುಕಿನ ಅನುಭವ ಕಥನವನ್ನು “ನಾ ಇಷ್ಟಂ” ಎಂದು ತೆಲುಗಿನಲ್ಲಿ ಬರೆದರೆ, ಅದನ್ನು ಕನ್ನಡಕ್ಕೆ ಸೃಜನ್ ಅವರು ಅನುವಾದಿಸಿದ್ದಾರೆ. ಚಲನಚಿತ್ರ ಜಗತ್ತು ಎಂಬುದು ವರ್ಣರಂಜಿತವಾದದ್ದು ಅದಕ್ಕೆ ಮನಸೋಲದವರೇ ಇಲ್ಲ. ಅಬಾಲವೃದ್ಧರಿಗೂ ಮನರಂಜನೆ ನೀಡುವ, ನಮ್ಮತನವನ್ನು ಮರೆಸುವ ಮೋಹಕ ಮಾಧ್ಯಮ. ಆದರೆ ಮೂರು ಗಂಟೆ ಚಲನಚಿತ್ರ ನಿರ್ಮಾಣದ ಹಿಂದಿನ ಶ್ರಮ ಸಂಕಷ್ಟ, ಎಷ್ಟೆಲ್ಲಾ ಮನಸ್ಸುಗಳು ಒಂದಾಗಿ ದುಡಿಯುವುದು, ಅದಕ್ಕೆ ಮಾರ್ಗದರ್ಶನ ಮಾಡುವ ನಿರ್ದೇಶಕನ ಪಾತ್ರ ಅತ್ಯಮೂಲ್ಯ. ಅಂತಹ ಗುರುತರವಾದ ಜವಾಬ್ದಾರಿಯನ್ನು ಹೊಂದುವ ಕನಸು ಕಂಡವರು ರಾಮ್ ಗೋಪಾಲ್ ವರ್ಮಾ.

ರಾಮ್ ಗೋಪಾಲ್ ಅವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಆದರೆ ಅವರು ಆಯ್ಕೆ ಮಾಡಿಕೊಂಡ ವೃತ್ತಿಯೇ ಬೇರೆಯಾಗಿತ್ತು. ಎಲ್ಲಾ ತಂದೆ ತಾಯಿಗಳಂತೆ ಅವರ ಪಾಲಕರು ಕೂಡ ಮಗ ಓದಿ ವಿದ್ಯಾವಂತನಾಗಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಿ ಸುಗಮವಾದ ಬದುಕು ಅವನದಾಗಲಿ ಎಂಬ ಅಭಿಲಾಷೆ ಅವರಿಗಿತ್ತು. ಆದರೆ ರಾಮ್ ಅವರಿಗೆ ಬಾಲ್ಯದಿಂದಲೂ ಸಿನಿಮಾದ ಗೀಳು. ಅವರ ಈ ಅಭ್ಯಾಸ ಅಮ್ಮನಿಗೆ ಇರಿಸು ಮುರಿಸು ತಂದಿದ್ದು ಸಹಜ. ಓದಿನ ಕಡೆ ಮುಖ ಮಾಡಲು ಏನೆಲ್ಲ ಪ್ರಯತ್ನಿಸಿದ್ದು ಅವರಮ್ಮ.ಮುಂದೆ ವಿಜಯವಾಡದ ಸಿದ್ದಾರ್ಥ್ ಇಂಜಿನಿಯರಿಂಗ್ ಕಾಲೇಜನಲ್ಲಿ ಪ್ರವೇಶ ಪಡೆಯುತ್ತಾರೆ. ಆದರೆ ಅವರು ಕ್ಲಾಸಿನಲ್ಲಿ ಕೂತದ್ದಕ್ಕಿಂತ, ಥಿಯೇಟರ್ ಗೆ ಹೋಗಿದ್ದೆ ಹೆಚ್ಚು. ಒಂದೇ ಫಿಲ್ಮ್ ಅನ್ನು 10-12 ಬಾರಿ ನೋಡುತ್ತಿದ್ದರು. ಒಮ್ಮೆ ಚಿತ್ರಕಥೆ ಗಮನಿಸಲಿಕ್ಕೆ ಹೋದರೆ, ಇನ್ನೊಮ್ಮೆ ಹಿನ್ನೆಲೆ ಸಂಗೀತ ಆಲಿಸುವುದಕ್ಕೆ, ಮತ್ತೊಮ್ಮೆ ಅಂತಹ ಸಂಗೀತವನ್ನು ರೆಕಾರ್ಡ್ ಮಾಡಿಕೊಳ್ಳಲಿಕ್ಕೆ ಹೀಗೆ ಹತ್ತು ಹಲವು ಬಾರಿ ಭಿನ್ನ ಭಿನ್ನ ದೃಷ್ಟಿಕೋನಗಳಿಂದ ಒಂದೇ ಚಲನಚಿತ್ರವನ್ನು ಗಮನಿಸುತ್ತಿದ್ದರು. ಕೆಲವೊಮ್ಮೆ ಫಿಲಂ ನೋಡಲು ಹಣವಿಲ್ಲದಿದ್ದಾಗ ಪೋಸ್ಟರ್ ನೋಡುತ್ತಾ ನಿಲ್ಲುತ್ತಿದ್ದರು. ಹಾಗಾಗಿ ಕ್ಯಾಂಟೀನ್ ಮಾಲೀಕನ ಬಳಿ ಸಾಲ ಕೂಡ ಮಾಡುತ್ತಿದ್ದರು. ಇಂತಹ ಹುಚ್ಚು ಆವರಿಸಿಕೊಂಡ ರಾಮ ಗೋಪಾಲ್ ವರ್ಮರಿಗೆ ಮುಂದೆ ಸಿವಿಲ್ ಇಂಜಿನಿಯರಿಂಗ್ ವೃತ್ತಿ ಮಾಡುವುದು ಕಷ್ಟಕರವಾಗಿತ್ತು. ತಾತನ ಸಹಾಯದಿಂದ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡಿದರು ಕೂಡ ಅದು ಮನಸ್ಸಿಗೆ ಹಿಡಿಸದೆ ಮರಳಿ ಮನೆ ಸೇರಿದರು. ಮುಂದೆ ನೈಜೀರಿಯಾದಲ್ಲಿ ಉತ್ತಮ ಸಂಬಳದ ಉದ್ಯೋಗ ದೊರೆತರೂ ಕೂಡ ಅಲ್ಲಿಗೆ ಹೋಗಲು ಇಚ್ಚಿಸದೆ, ಹೈದರಾಬಾದ್ ನಲ್ಲಿ ವಿಡಿಯೋ ಲೈಬ್ರರಿ ತೆಗೆದು ಅದರಲ್ಲಿ ಯಶ ಕಂಡರು. ವಿಡಿಯೋ ಕ್ಯಾಸೆಟ್ ತೆಗೆದುಕೊಳ್ಳಲು ಬಂದವರಿಗೆ ರೋಚಕವಾಗಿ ಕಥೆ ಹೇಳುತ್ತಾ ಎಲ್ಲರ ಗ್ರಾಹಕರನ್ನು ಸೆಳೆಯುತ್ತಿದ್ದರು. ಹಾಗೆಂದು ಅಷ್ಟಕ್ಕೇ ತೃಪ್ತರಾಗದೆ ಮತ್ತೆ ಅವರ ಮನದಾಳದ ಮಾತಿಗೆ ಮುನ್ನುಡಿ ಬರೆದರು ‘ಶಿವ’ ಎಂಬ ಚಲನಚಿತ್ರದ ಮೂಲಕ. 90ರ ದಶಕದಲ್ಲಿ ಅದು ಹೊಸ ಅಲೆಯನ್ನೇ ಎಬ್ಬಿಸಿತು. ಅದು ಕೇವಲ ತೆಲುಗು ಚಿತ್ರ ಜಗತ್ತಿಗೆ ಮಾತ್ರ ಮೀಸಲಾಗದೆ ಬಾಲಿವುಡ್ ನಲ್ಲೂ ಕೂಡ ಹೆಸರು ಮಾಡಿತು. ಆದರೆ ಶಿವ ಚಲನಚಿತ್ರ ನಿರ್ಮಾಣದ ಹಿಂದಿನ ಅವರ ತಯಾರಿ, ಶ್ರಮ, ಎಲ್ಲರನ್ನೂ ಒಗ್ಗೂಡಿಸುವಿಕೆಯಲ್ಲಿ ಅವರು ಪಟ್ಟ ಪರದಾಟ ಮತ್ತೊಂದು ಚಲನಚಿತ್ರಕ್ಕೆ ಕಥಾ ವಸ್ತು ವಾಗುವಂತಿದೆ. ಒಟ್ಟಾರೆ ಎರಡು ದಶಕಗಳ ಕಾಲ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಚಾಪನ್ನು ಮೂಡಿಸಿದರು. ಸಾಲು ಸಾಲಾಗಿ ವಿಭಿನ್ನ ಚಲನಚಿತ್ರಗಳನ್ನು ತೆರೆಗೆ ತಂದರು. ಉದಾಹರಣೆ ಶಿವ, ಕ್ಷಣ ಕ್ಷಣಂ, ಸರ್ಕಾರ್, ರಂಗೀಲಾ, ಕಂಪನಿ, ದೌಡ್, ಆಗ್…… ಹೀಗೆ ಕೆಲವು ಸೂಪರ್ ಡೂಪರ್ ಹಿಟ್ ಆದರೆ ಇನ್ನೂ ಕೆಲವು ಮಖಾಡೆ ಮಲಗಿದವು. ಆದರೆ ಯಾವುದಕ್ಕೂ ಚಿಂತಿಸದೆ ತಮ್ಮ ಕನಸು ಕನವರಿಕೆಗಳನ್ನು ದೃಶ್ಯದ ಮೂಲಕ ಅನಾವರಣ ಗೊಳಿಸಿದರು.

ಕಟ್ಟಡ ಕಟ್ಟುವ ಕಾಯಕ ತೊರೆದು, ಸಿನಿಮಾ ಮಾಡುವ ಜವಾಬ್ದಾರಿ ಹೊತ್ತು ಆಕ್ಷನ್ ಕಟ್ ಹೇಳುತ್ತಾ ನೋಡುಗರನ್ನು ಬೆರಗುಗೊಳಿಸಿದರು. ಅವರು ಏನೇ ಮಾಡಿದರು ಅದರಲ್ಲೊಂದು ಹೊಸತನವಿರುತ್ತಿತ್ತು. ಏನೇ ನೋಡಿದರೂ ಅದನ್ನು ನಿರ್ದೇಶಕನ ದೃಷ್ಟಿಯಲ್ಲಿಯೇ ನೋಡುತ್ತಿದ್ದರು. ಉದಾಹರಣೆಗೆ ರೈಲು ದುರಂತದಲ್ಲಿ ತಾವು ಸಿಲುಕಿ ಕೊಂಡಾಗ, ತಂದೆ ತೀರಿದಾಗ ಇನ್ನೊಮ್ಮೆ ಪರಿಚಿತರ ಕೊಲೆಯಾದಾಗ ಯಾವುದೇ ಸಂದರ್ಭವಿರಲಿ ಅದನ್ನು ದೃಶ್ಯ ಮಾಧ್ಯಮಕ್ಕೆ ಹೇಗೆ ತರಬೇಕೆಂಬ ಯೋಚನೆಯಲ್ಲಿ ಇರುತ್ತಿದ್ದ ಭಿನ್ನ ದೃಷ್ಟಿಕೋನದ ನಿರ್ದೇಶಕರಾಗಿದ್ದರು. ತಾವು ಎಂದೂ ಹಣದ ಬೆನ್ನು ಬಿದ್ದಿಲ್ಲ ಎಂದು ತುಂಬಾ ಫಿಲಾಸಫಿಕಲ್ ಆಗಿ ಹೇಳುತ್ತಾರೆ. ಕೆಲವು ಚಲನಚಿತ್ರ ಹಣ ಹೆಸರು ತಂದು ಕೊಟ್ಟರೆ ಇನ್ನೂ ಕೆಲವು ಅನುಭವವನ್ನು ದಕ್ಕಿಸಿವೆ ಎಂದು ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಂದು ಸಿನಿಮಾ ತಯಾರಿ ಮಾಡುವುದು ಸರಳ ಸಂಗತಿಯಲ್ಲ, ಎಲ್ಲರನ್ನೂ ಒಲೈಸುತ್ತಾ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ಒಂದು ಚಲನಚಿತ್ರ ಯಶ ಕಂಡರೆ ಅದರ ಯಶಸ್ಸು ಎಲ್ಲರೂ ಪಡೆಯುತ್ತಾರೆ ಆದರೆ ಅದು ಸೋತರೆ ಎಲ್ಲಾ ಭಾರವನ್ನು ನಿರ್ದೇಶಕನ ಮೇಲೆ ಹಾಕುತ್ತಾರೆ ಎಂದು ನೇರವಾಗಿ ಹೇಳುತ್ತಾರೆ. ಅವರು ತಮಗೆ ತೋಚಿದ ವಿಷಯವನ್ನು ನಿರ್ಬಿಡೆಯಿಂದ ಹೇಳುತ್ತಾ ಅನೇಕ ಬಾರಿ ವಾದ ವಿವಾದಕ್ಕೆ ಗ್ರಾಸರಾಗಿದ್ದಾರೆ. ಹಾಗೆಂದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ “ನಿಮ್ಮ ಜಗತ್ತಿನಲ್ಲಿ ನೀವಿರಿ, ನನ್ನ ಜಗತ್ತಿನಲ್ಲಿ ನಾನಿರುತ್ತೇನೆ” ಎನ್ನುತ್ತಾರೆ

ವರ್ಮಾ ಅವರಿಗೆ ಚಲನಚಿತ್ರ ನಿರ್ದೇಶಿಸುವುದು ಅದೊಂದು ವೃತ್ತಿಯಲ್ಲ ಅದು ಅವರ ಉಸಿರು, ಅದುವೇ ಎಲ್ಲವೂ ಆಗಿತ್ತು. ಹಾಗಾಗಿ ಫಿಲಂ ಮಾಡುವಾಗ ಪೋಸ್ಟರ್ ಮೇಕಿಂಗ್ ನಿಂದ ಹಿಡಿದು, ಚಿತ್ರದ ಶೀರ್ಷಿಕೆ, ಅವುಗಳ ಅಕ್ಷರ ಜೋಡಣೆ, ಹಿನ್ನೆಲೆ ಸಂಗೀತ ಹೀಗೆ ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಸೂಕ್ಷ್ಮವಾಗಿ ಗಮನಿಸುತ್ತಾ ಎಲ್ಲದರಲ್ಲೂ ಹೊಸತನ ತರವ ಪ್ರಯತ್ನ ಅವರದು ಹಾಗಾಗಿ ಹೊಸ ತನ್ನು ಅರಿಯಲು ಎಲ್ಲಾ ಭಾಷೆಯ ಚಲನಚಿತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಸೂಕ್ಷ್ಮಮತಿ ಅವರದ್ದು. ನಿರ್ದೇಶಕನ ಪಾತ್ರ ಮಾಡುತ್ತಾ ಅದರಲ್ಲಿಯೇ ಪರಕಾಯ ಪ್ರವೇಶ ಮಾಡುತ್ತಿದ್ದರು. ಒಮ್ಮೆ ಒಂದು ಭೂತದ ಚಲನಚಿತ್ರ ನಿರ್ದೇಶಿಸಿ ಮನೆಗೆ ಬಂದಾಗ, ಆ ಭೂತ ತಮ್ಮ ಮನೆಯಲ್ಲಿಯೇ ಕಂಡ ಅನುಭವ ಅವರಿಗಾದದ್ದು, ನಂತರ ಭೂತದ ಪಾತ್ರ ಮಾಡಿದ ನಾಯಕಿಯ ಜೊತೆ ಮಾತನಾಡಿದ ನಂತರ ನಿರಾಳ ಭಾವ ಮೂಡಿದ್ದು ಎಂದು ನೆನಪಿಸಿಕೊಳ್ಳುತ್ತಾರೆ.

ರಾಮ್ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೂ ರೌಡಿಸಂ, ರೌಡಿಗಳ ಬಗ್ಗೆ ಆಸಕ್ತಿ. ಹಾಗಾಗಿ ವಿಜಯವಾಡದ ರೌಡಿಗಳ ಜೊತೆ ಸ್ನೇಹ ಬೆಳೆಸಿದ್ದಾಗಿ ಹೇಳುತ್ತಾರೆ. ಅವರ ಬದುಕನ್ನೇ ತಮ್ಮ ಹಲವು ಚಲನಚಿತ್ರಗಳಲ್ಲಿ ಬಿಂಬಿಸಿದ್ದಾರೆ. ಎಲ್ಲದರಲ್ಲೂ ನೈಜತೆ ಮತ್ತು ಹೊಸತನವನ್ನು ಕಾಣುವ ಕನಸುಗಾರನಾದ ರಾಮ್ ಅವರಿಗೆ ಶ್ರೀದೇವಿ ಎಂದರೆ ಹುಚ್ಚು ಮೋಹ. ಅವಳ ಬಗ್ಗೆ ಇರುವ ಆರಾಧನೆಯ ಭಾವವನ್ನು ನೋಡಿದಾಗ ಹೀಗೂ ಉಂಟೆ ಎಂಬ ಅನಿಸಿಕೆ ಮೂಡದೆ ಇರದು. ಒಟ್ಟಾರೆ “ನಾ ಇಷ್ಟಂ” ಎಂಬ ಬರವಣಿಗೆಯ ಮೂಲಕ ತಮಗಿಷ್ಟದ ಸಿನಿ ಜಗತ್ತಿನ ಅನುಭವ, ಆ ಕ್ಷೇತ್ರದ ಪ್ರವೇಶಿಕೆ, ಅಲ್ಲಿನ ಸಂಘರ್ಷ ಎಲ್ಲವನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದು, ಅದನ್ನು ಕನ್ನಡಕ್ಕೆ ಸಹಜವಾಗಿ ಸೃಜನ್ ಅವರು ಅನುವಾದಿಸಿದ್ದಾರೆ. ಕೃತಿಯ ಕೊನೆಯಲ್ಲಿ ಅವರ ಆಪ್ತರು ರಾಮ್ ಗೋಪಾಲ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಆ ಲೇಖನಗಳಲ್ಲಿ ಅವರ ತಾಯಿ, ಸ್ನೇಹಿತರು ಮತ್ತು ಕನ್ನಡದ ಸುದೀಪ್ ಕೂಡ ಸೇರಿದ್ದು ವಿಶೇಷ.

ನನ್ನಿಷ್ಟ ಇದು ಕೇವಲ ರಾಮ್ ಗೋಪಾಲ್ ವರ್ಮಾ ಅವರ ರಿಯಲ್ ಬದುಕು ಮಾತ್ರವಲ್ಲ. ರೀಲ್ ಜಗತ್ತು ಹೇಗಿರುತ್ತದೆ,ತೆರೆ ಹಿಂದಿನ ಲೋಕ, ದೊಡ್ಡವರ ಸಣ್ಣತನ, ಸಣ್ಣವರ ಉದಾರತೆ, ಮುಂತಾದ ಸೂಕ್ಷ್ಮತೆಗಳನ್ನು ಇಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಆತನಿಗಿರುವ ಬದ್ಧತೆ, ತಾಳ್ಮೆ, ಸತತ ಪ್ರಯತ್ನ ಮತ್ತು ಲೋಕ ಏನೇ ಹೇಳಿದರೂ ತಾನಂದುಕೊಂಡಂತೆ ನಡೆಯುವ ದೃಢತೆ ಇದ್ದರೆ ಏನೆಲ್ಲಾ ಸಾಧಿಸಬಹುದು ಎಂಬ ಸಂಗತಿ ನನ್ನಿಷ್ಟದಲ್ಲಿ ಕಾಣಬಹುದು

‍ಲೇಖಕರು Admin

10 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading