ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿಹರ, ಅರ್ಜೆಂಟೀನಾ ಮತ್ತು ವಿಶ್ವಕಪ್ !

-ಶಿವ ಹಿತ್ತಲಮನಿ

ಒಂದೊಂದು ಸ್ಟೇಷನ್ ಬಂದಾಗಲೂ  ವಿವಿಧ ಜರ್ಸಿಗಳನ್ನು ತೊಟ್ಟ ಜನ ಹತ್ತಿಕೊಳ್ಳುತ್ತಿದ್ದರು. ಟ್ರೈನ್ ತುಂಬಿಕೊಳ್ಳುತ್ತಾ ಹೋಯ್ತು. ಮುಂದಿನ ನಿಲ್ದಾಣದಲ್ಲಿ ಬಾವುಟಗಳನ್ನು ಹಿಡಿದುಕೊಂಡವರಿದ್ದರು, ಅದರ ಮುಂದಿನ ನಿಲ್ದಾಣದಲ್ಲಿ ಅನೇಕ ಕುಟುಂಬಗಳು ಪುಟ್ಟಮಕ್ಕಳೊಂದಿಗೆ ಹತ್ತಿದರು. ಮಕ್ಕಳ  ಮುಖದ ಮೇಲೆ  ಬಾವುಟದ ಫೇಸ್ ಪೇಂಟಿಂಗ್. ಕೊನೆ ನಿಲ್ದಾಣ ಬಂದಾಗ ಇಡೀ ಜನ ಸಮೂಹ ಇಳಿದು ಹೊರಟಿತು. ಮಗಳ ಜೊತೆ ನಾನು ಗುಂಪಿನೊಂದಿಗೆ ಹೆಜ್ಜೆ ಹಾಕಿದೆ..

ಕೊನೆಗೆ ನಾವು ಬಂದು ನಿಂತದ್ದು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂ ಮುಂದೆ. ಸ್ಟೇಡಿಯಂ ಹೊರಗೆ ಹಬ್ಬದ ವಾತಾವರಣ. ಡ್ರಮ್ ತಾಳಕ್ಕೆ ಕುಣಿಯುತ್ತಾ, ತಮ್ಮ ದೇಶದ ಬಾವುಟಗಳನ್ನು ಹಿಡಿದು ಅಭಿಮಾನದಿಂದ ತಮ್ಮ ದೇಶಗೀತೆಗಳನ್ನು ಹಾಡುತ್ತಿದ್ದರು. ಹಲವರು ತಮ್ಮ ಸಾಂಪ್ರಾದಾಯಿಕ ಉಡುಗೆ ತೊಡಗೆಗಳಲ್ಲಿದ್ದರು.

ಎಲ್ಲರ ಮುಖದಲ್ಲಿ ಅಮಿತ ಅತ್ಯುತ್ಸಾಹ. ಅವರೆಲ್ಲಾ ವಿಶ್ವಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದವರು…

ಏರಪೋರ್ಟ್ ನಂತಹ ತಪಾಸಣೆ ನಂತರ ಸ್ಟೇಡಿಯಂ ಒಳಗೆ ಹೋಗಬೇಕಿತ್ತು. ನನ್ನ ಮುಂದೆ ಇದ್ದವರ ಕೈಯಲ್ಲಿ ಒಂದು ಬೃಹದಾಕಾರದ  ಬಾವುಟವಿತ್ತು. ಆ ಬಾವುಟ ಸ್ಟೇಡಿಯಂ ಒಳಗೆ ತರುವ ಆಯಾಮದಲ್ಲಿದೆಯೇ ಎನ್ನುವುದನ್ನು ಪರೀಕ್ಷಿಸಿಲು ಇನ್ನೊಂದೆಡೆಗೆ ಸೆಕ್ಯೂರಿಟಿ ಅವರನ್ನು ಕಳುಹಿಸಿದರು. ನಮ್ಮ ಕೈಯಲ್ಲಿ ಬ್ಯಾಗ್ ಗಳು ಇಲ್ಲದ ಕಾರಣ, ನಮ್ಮ ತಪಾಸಣೆ  ಕೆಲವೇ ಕ್ಷಣದಲ್ಲಿ ಮುಗಿದಿತ್ತು. ಈಗ ಫೋನಿನಲ್ಲಿದ್ದ ಪಂದ್ಯದ ಟಿಕೇಟ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಂತೆ  ಗೇಟ್ ತೆಗೆದಿತ್ತು .ಸ್ಟೇಡಿಯಂ ಹೊಕ್ಕು ನಮ್ಮ ಆಸನಗಳನ್ನು ಹುಡುಕಿ ಕುಳಿತುಕೊಂಡೆವು. ಸುತ್ತ ಕಣ್ಣಾಡಿಸಿದೆ , ನಿಧಾನವಾಗಿ ಜನ ತುಂಬಿಕೊಳ್ಳುತ್ತಿದ್ದರು.

೪ ವರ್ಷಗಳಿಗೊಮ್ಮೆ ನಡೆಯುವ ಫುಟ್ಬಾಲ್ ಮಾಂತ್ರಿಕರ ಸಮರವೇ ಈ ಫೀಫಾ ವಿಶ್ವಕಪ್ ಫುಟ್ಬಾಲ್. ಬಹುಷಃ ಒಲಂಪಿಕ್ ನಷ್ಟೇ ಜಗತ್ತಿನಾದ್ಯಂತಹ ನೂರಾರು ದೇಶಗಳಲ್ಲಿ ಜನ ನೋಡುವ  ಪಂದ್ಯಾವಳಿಯೆಂದರೆ ಇದೇ . ೨೦೦ ಕ್ಕೂ ಹೆಚ್ಚು ದೇಶಗಳು ಪೂರ್ವಭಾವಿ ಸುತ್ತುಗಳಲ್ಲಿ ಸೆಣಿಸಿ, ಅದರಲ್ಲಿ  ೪೮ ದೇಶಗಳಷ್ಟೇ ಮುನ್ನೆಡೆದು ಈ ಹಂತಕ್ಕೆ ತಲುಪಿರುವುದು.

ಇದು ಕನಸೇ-ನನಸೇ ? ಅಂತಹ ವಿಶ್ವಕಪ್ ಫುಟ್ಬಾಲ್ ಪಂದ್ಯವನ್ನು ನೇರ ವೀಕ್ಷಣೆ ಮಾಡುತ್ತಿದ್ದೇನೆ ಎನ್ನುವ  ಭಾವನೆ ಆಗ ನಿಧಾನವಾಗಿ ಮನಸ್ಸಿನಲ್ಲಿ ಇಳಿಯತೊಡಗಿತು. ಮನಸ್ಸಿನ ಸ್ಮೃತಿ ಪಟಲದ ಮೇಲೆ ಹಲವಾರು ನೆನಪುಗಳು ಆಗಲೇ ಚೆಂಡಾಡತೊಡಗಿದ್ದವು.

ರಾಜಕೀಯ ರ್ಯಾಲಿಗಳು, ಸಿನಿಮಾ ತಾರೆಯರ ಕಾರ್ಯಕ್ರಮ , ಗಣರಾಜ್ಯೋತ್ಸವ-ಸ್ವಾತಂತ್ರೋತ್ಸವ ..ಹೀಗೆ ನಮ್ಮೂರು ಹರಿಹರದಲ್ಲಿ ಎಲ್ಲದಕ್ಕೂ ಇದ್ದದ್ದು ಗಾಂಧಿ ಮೈದಾನ. ಏನಾದರಾಗಲಿ ಸಂಜೆ ೫ ಆಗುತ್ತಿದ್ದಂತೆ ಅದು ಫುಟ್ಬಾಲ್ ಮೈದಾನವಾಗಿ ಬಿಡುತಿತ್ತು. ಟೌನ್ ಸ್ಪೋರ್ಟ್ಸ್ ಕ್ಲಬ್ ಹೆಸರಿನ ಫುಟ್ಬಾಲ್ ತಂಡ ದಿನ ಸಂಜೆ ಆ ಮೈದಾನದಲ್ಲಿ ಅಭ್ಯಾಸ ಮಾಡುತಿತ್ತು. ಆಕಾಶ ನೀಲಿ ಮತ್ತು ಬಿಳಿ ಪಟ್ಟೆಗಳ ಜರ್ಸಿ, ಕಪ್ಪು ಚಡ್ಡಿ ಮತ್ತು ಫುಟ್ಬಾಲ್ ಶೂಗಳಲ್ಲಿ ನಮ್ಮ ಊರಿನ ಆಟಗಾರರು ಆಡುತ್ತಿದ್ದರೆ, ನಮ್ಮಂತಹ ಚಿಕ್ಕ ಮಕ್ಕಳಿಗೆ ಅದೊಂದು ಬೆರಗಿನ ಲೋಕ.  ಅವರ ಅಭ್ಯಾಸ ನೋಡಲು ದಿನ ಸಂಜೆ ಮೈದಾನಕ್ಕೆ ಹೋಗಿ ನೋಡುತ್ತಿದ್ದೆವು. ಎಲ್ಲದಕ್ಕಿಂತ ನಮ್ಮ ಹೆಚ್ಚು ಕುತೂಹಲವಿದ್ದದ್ದು ಅವರು ಹಾಕಿಕೊಳ್ಳುತ್ತಿದ್ದ ಚೂಪಾದ ಮೊಳೆಗಳ ಅಂಗಾಲಿನ ಆ   ‘ಸ್ಪೈಕ್ ಶೂ’.  

ಟೌನ್ ಸ್ಪೋರ್ಟ್ಸ್ ಕ್ಲಬ್ ಹಿರಿಯ ಆಟಗಾರರು , ಬೆರಗಿನ ಕಣ್ಣುಗಳಿಂದ ನೋಡುತ್ತಿದ್ದ ನಮ್ಮಂತಹ ಹುಡುಗರನ್ನು ಕರೆದು ನಮ್ಮನ್ನು ಗೋಲ್ ಪೋಸ್ಟ್ ಹಿಂದೆ ನಿಲ್ಲಿಸಿ , ಅವರುಗಳು ಚೆಂಡು ಒದೆಯುವುದನ್ನು ಮತ್ತು ಆಟದ  ವಿಧಾನವನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಮಾಡಿಕೊಟ್ಟಿದ್ದರು . ಆಟಗಾರರು ಒದೆಯುವ ಚೆಂಡು ನಮ್ಮ ಹತ್ತಿರ ಬಂದಾಗ ಅದನ್ನು ನಿಲ್ಲಿಸಿ ಮತ್ತೆ ಅಲ್ಲಿಂದಲೇ ಗೋಲ್ ಕೀಪರ್ ಕಡೆಗೆ ಒದೆಯುವುದು ನಮ್ಮ ಕೆಲಸ. ಒಂಥರ ಬಾಲ್ ಬಾಯ್ ಕೆಲಸ. ಕೆಲವೊಮ್ಮೆ  ಆಟಗಾರರು ಒದ್ದ ಫುಟ್ಬಾಲ್ ಮೈದಾನದ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಾಗ, ಅಲ್ಲಿ ಇಳಿದು ಚೆಂಡನ್ನು ಹೊರತೆಗೆಯುತ್ತಿದ್ದು ನಾವು ಬಾಲ್ ಬಾಯ್ ಗಳು  !

ಟೌನ್ ಸ್ಪೋರ್ಟ್ಸ್ ಕ್ಲಬ್ ಸೇರಿ ಕೆಲ ಸಮಯದಲ್ಲೇ ಮೊದಲ ಬಾರಿಗೆ ಆತನ ಹೆಸರು ಕೇಳಿದ್ದು. ಅವನು ಎದುರಾಳಿ ತಂಡದ ಎಲ್ಲ ಪ್ರತಿಸ್ಪರ್ಧಿ ಆಟಗಾರರಿಂದ ನುಣುಚಿಕೊಂಡು ಗೋಲ್ ಹೊಡೆದಿದ್ದು , ಅವನು ಹೇಗೆ ಅದ್ಭುತವಾಗಿ  ಡ್ರಿಬಲಿಂಗ್ ಮಾಡುತ್ತಿದ್ದದ್ದು ಮತ್ತು ಅವನು ಅದೇಗೆ ಒಬ್ಬಂಟಿಯಾಗಿ ಅವನ ದೇಶಕ್ಕೆ ವಿಶ್ವಕಪ್ ಗೆಲ್ಲಿಸಿದ್ದು. ಒಂದೇ ಎರಡೇ ದಂತಕಥೆಗಳು !  ಅವನೇ ಡಿಯಾಗೋ ಮರಡೋನಾ . ನಾವು ಹುಡುಗರಿಗೆ ಅವನು ಅಕ್ಷರಶಃ ಪುಟ್ಬಾಲ್ ದೇವರು. ಅರ್ಜೆಂಟೀನಾ ಎಂಬ ದೇಶದ ಹೆಸರು ಕೇಳಿದ್ದೆ ಅವಾಗ, ನಮ್ಮ ಮರಡೋನಾ ಅದೇ ದೇಶದವನಂತೆ.

ಹೀಗೆ ಮರಡೋನಾ ಎನ್ನುವ ಫುಟ್ಬಾಲ್ ಮಾಂತ್ರಿಕನನ್ನು ಗುರುವನ್ನಾಗಿ ಸ್ವೀಕರಿಸಿ ನಾವು ಹುಮ್ಮಸ್ಸಿನಿಂದ ಗಾಂಧೀ ಮೈದಾನದಲ್ಲಿ ಫುಟ್ಬಾಲ್ ಅಭ್ಯಾಸ ಮಾಡುವ ಸಮಯದಲ್ಲಿ ೧೯೯೦ರ ವಿಶ್ವಕಪ್ ಫುಟ್ಬಾಲ್ ಮತ್ತೆ ಮರಳಿಬಂದಿತ್ತು. ಈ ಸಲ ಅದು ಇಟಲಿಯಲ್ಲಿ ನಡೆಯುತಿತ್ತು. ಫುಟ್ಬಾಲ್ ಹುಚ್ಚು ತಲೆಗೆ ಹತ್ತಿದ್ದರಿಂದ ಹೇಗಾದಾರೂ ಮಾಡಿ ವಿಶ್ವಕಪ್ ಫುಟ್ಬಾಲ್ ಪಂದ್ಯಗಳನ್ನು ಟಿವಿಯಲ್ಲಿ ನೋಡುವ  ಗುಂಗು. ಅದು ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾಲ ಬೇರೆ. ನನ್ನ ಹುಚ್ಚು ಗೊತ್ತಿದ್ದ ನನ್ನ ಅಪ್ಪ ಅವರ ಕಾರ್ಖಾನೆಯ ಸೂಪರ್ವೈಸರ್ ಮಾರ್ಟಿನ್ ಅವರ ಮನೆಯಲ್ಲಿ ಟಿವಿ ಇರುವುದನ್ನು ಗೊತ್ತು ಮಾಡಿಕೊಂಡು , ಅದೇಗೋ ನನ್ನನ್ನು ವಿಶ್ವಕಪ್ ಪಂದ್ಯ ನೋಡಲಿಕ್ಕೆ ಅವರ ಮನೆಗೆ ಕರೆದುಕೊಂಡು ಹೋಗುವ ಏರ್ಪಾಡು ಮಾಡಿದರು. ಎಲ್ಲಾ ಪಂದ್ಯ ನೋಡಲಿಕ್ಕೆ ಮಾರ್ಟಿನ್ ಅವರಿಗೆ ತೊಂದರೆಯಾದೀತು ಎನ್ನುವ ಕಾರಣಕ್ಕೆ ಮುಖ್ಯವಾದ ಪಂದ್ಯಗಳು, ಅದರಲ್ಲೂ ಮರಡೋನಾ ಆಡುವ ಪಂದ್ಯಗಳಿಗೆ ಹೋಗುವ ತೀರ್ಮಾನವಾಯಿತು.

ನಾನು ಮತ್ತು ನನ್ನ ಅಪ್ಪ ರಾತ್ರಿ ಊಟದ ನಂತರ ಮಾರ್ಟಿನ್ ಅವರ ಮನೆಯ ಕಡೆಗೆ ಹೊರಡುತಿದ್ದೆವು . ಪಂದ್ಯ ಶುರುವಾಗುತ್ತಿದ್ದು ಭಾರತದ ರಾತ್ರಿ ೧೦ ಅಥವಾ ೧೧ ಘಂಟಿಗೆ . ಪಂದ್ಯ ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ೧೨ ಗಂಟೆ ಕೆಲವೊಮ್ಮೆ ೧ ಘಂಟೆ. ಆ ನಡುರಾತ್ರಿಯಲ್ಲಿ ಮನೆಗೆ ಮರುಳುವಾಗ ಪಂದ್ಯದ ಪೂರ್ತಿ ವಿಶ್ಲೇಷಣೆ ಅಪ್ಪನೊಂದಿಗೆ ದಾರಿಯುದ್ದಕ್ಕೂ ಮಾಡಿದ್ದೆ ಮಾಡಿದ್ದು. ಅವರಾದರೋ ಬಹಳ ತಾಳ್ಮೆಯಿಂದ ನನ್ನ ಎಲ್ಲ ಮಾತುಗಳನ್ನು ಕೇಳಿಸಿಕೊಂಡು ಅವರಿಗೆ ತೋಚಿದ್ದನ್ನು ಹೇಳುತ್ತಿದ್ದರು. ಮರುದಿನ ಮತ್ತೆ ಗಾಂಧಿ ಮೈದಾನಕ್ಕೆ ಇಳಿದಾಗ ತಂಡದ ಎಲ್ಲರೊಂದಿಗೆ ಫುಟ್ಬಾಲ್ ಪಂದ್ಯದ ವಿವರಗಳನ್ನು ಹಂಚಿಕೊಳ್ಳುವ ತವಕ. ನೆನ್ನೆ ಮಾರ್ಟಿನ್ ಅವರ ಟಿವಿಯಲ್ಲಿ ನೋಡಿದ ಮರಡೋನಾ ಇವತ್ತು ನನ್ನ ಮೈಮೇಲೆ ಬಂದಂತೆ ಆಟವಾಡಲು ಹೋಗಿ ಹಿರಿಯ ಆಟಗಾರಿಂದ ಬೈಯಿಸಿಕೊಂಡಿದ್ದು ಆಯಿತು ! ಆಗ ಹೊಳೆದಿದ್ದು ನಮ್ಮ ಹರಿಹರದ ಟೌನ್ ಸ್ಪೋರ್ಟ್ಸ್ ಕ್ಲಬ್ ಆಟಗಾರರ ಆಕಾಶ ನೀಲಿ ಮತ್ತು ಬಿಳಿ ಪಟ್ಟೆಗಳ ಜರ್ಸಿ ಮತ್ತು ಮರಡೋನಾ ಹಾಕಿಕೊಂಡಿದ್ದ ಜರ್ಸಿ ಒಂದೇ ತರದವು. ಅಂದರೆ ಅರ್ಜೆಂಟೀನಾ ದೇಶದ ಜರ್ಸಿಯನ್ನು ನಮ್ಮ ಹರಿಹರದ ಟೌನ್ ಸ್ಪೋರ್ಟ್ಸ್ ಕ್ಲಬ್ ಅಭಿಮಾನದಿಂದ ತಮ್ಮ ತಂಡದ ಜರ್ಸಿಯಾಗಿ ಸ್ವೀಕರಿಸಿತ್ತು ! ಎಲ್ಲಿಯ ಅರ್ಜೆಂಟೀನಾ ಎಲ್ಲಿಯ ಹರಿಹರ !

ಸ್ಟೇಡಿಯಂನಲ್ಲಿ ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮಗಳು ನನ್ನನ್ನು ಏನೋ ಕೇಳಿದಾಗ ಮರಳಿ ಬಂದದ್ದು. ಈಗ ಸ್ಟೇಡಿಯಂ ಬಹುತೇಕ ಭರ್ತಿಯಾಗಿತ್ತು.  ಆಗಲೇ ಎರಡು ದೇಶದ ಆಟಗಾರರು ಮೈದಾನಕ್ಕೆ ಬಂದು ಅಭ್ಯಾಸ ಮಾಡುತ್ತಿದ್ದರು. ಇಂಗ್ಲೀಷ್ ಪ್ರೀಮಿಯರ್ ಲೀಗ್ ಅಲ್ಲಿ ಆಡುವಾಡುತ್ತಿದ್ದ ರಿಯಾದ್ ಮೆಹ್ರೇಜ್  ನನ್ನು  ಟಿವಿಯಲ್ಲಿ ನೋಡಿ ಆತನ ಆಟವನ್ನು ಮೆಚ್ಚಿದ್ದು, ಆತ ಲೀಸೆಸ್ಟರ್ ಸಿಟಿ ಮತ್ತು ಮ್ಯಾಂಚೆಸ್ಟರ್ ಸಿಟಿ ಎಂಬ ಎರಡೂ ತಂಡಗಳಲ್ಲಿ ಆಡಿ ಇಂಗ್ಲೀಷ್ ಪ್ರೀಮಿಯರ್ ಲೀಗ್ ಗೆದ್ದದ್ದನ್ನು ಮಗಳಿಗೆ ಹೇಳುತ್ತಿದ್ದೆ . ಇವತ್ತು ಅದೇ  ಮೆಹ್ರೇಜ್ನನ್ನ  ಅಲ್ಲೇ ಕಣ್ಣಳತೆಯ ದೂರದಲ್ಲಿ ನೋಡುತ್ತಿದ್ದು ಖುಷಿಯ ವಿಚಾರ.  ಮಗಳಿಗೆ ಮೆಹ್ರೇಜ್, ಪ್ರೀಮಿಯರ್ ಲೀಗ್, ವಿಶ್ವಕಪ್ ತಂಡಗಳು …ಹೀಗೆ ಹಲವಾರು ವಿಷಯಗಳ ಬಗ್ಗೆ ವಿಫುಲವಾಗಿ ಹೇಳುತ್ತಲೇ ಇದ್ದೆ.  ಮಗಳು ಸ್ಟೇಡಿಯಂ ಮತ್ತು ಆಟಗಾರರ ಫೋಟೋ ತೆಗೆಯತೊಡಗಿದಳು.

ಫುಟ್ಬಾಲ್ ಹುಚ್ಚು ಕೇವಲ ಗಾಂಧೀ ಮೈದಾನದಲ್ಲಿ ಅಷ್ಟೇ ಸೀಮಿತವಾಗಿ ಇರುತ್ತಿರಲಿಲ್ಲ .ಆಗ ನಾನು ಓದುತ್ತಿದ್ದ ಎಂ ಕೆ ಟಿ ಶಾಲೆಯಲ್ಲಿ ಸ್ವಲ್ಪ ಬಿಡುವಿನ ಸಮಯ ಸಿಕ್ಕರೂ ಫುಟ್ಬಾಲ್ ಆಡುವುದು ಸಾಮಾನ್ಯವಾಗಿತ್ತು. ಆದರೆ ನಮ್ಮ ಫುಟ್ಬಾಲ್ ವಿಶೇಷವೆಂದರೆ ನಾವು ಟೆನಿಸ್ ಬಾಲಿನಲ್ಲಿ ಫುಟ್ಬಾಲ್ ಆಡುತ್ತಿದ್ದೆವು. ನಮ್ಮ ಶಾಲಾ ಬ್ಯಾಗ್ ಗಳನ್ನ ಗೋಲ್ ಪೋಸ್ಟ್ ತರ ಪೇರಿಸಿ ಆಡುತ್ತಿದ್ದೆವು. ಕಿರಣ, ಬಸು, ರಾಘು, ಧರಣಿ, ವಿನಯ್, ರುದ್ರು, ಅಮೃತ್, ಶಾನ್ ಮತ್ತು ನಾವು ಅನೇಕ ಗೆಳೆಯರು, ತರಗತಿ ಇಲ್ಲದಿದ್ದರೆ ಆಡುತ್ತಿದ್ದು ಈ ಟೆನಿಸ್ ಬಾಲ್ ಫುಟ್ಬಾಲ್ !

ಹೈಸ್ಕೂಲ್ ಬರುವಷ್ಟರಲ್ಲಿ ಶಾಲೆಯ ತಂಡದಲ್ಲಿ ಆಡತೊಡಗಿದ್ದೆ. ಅಲ್ಲಿ ಚಿಂತಾಮಣಿ, ರಿಚರ್ಡ್, ಹಾಲಸ್ವಾಮಿ  ಮತ್ತು ಇನ್ನು ಹಲವಾರು ಗೆಳೆಯರ ಜೊತೆ ಮೂರು ವರ್ಷ ಶಾಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾಯಿತು.. ತಾಲ್ಲೂಕು ಮಟ್ಟ ಗೆದ್ದು ನಮ್ಮ ಶಾಲೆ ಚಿತ್ರದುರ್ಗಕ್ಕೆ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಹೋಗಿದ್ದು, ಅಲ್ಲಿ ಪಂದ್ಯ ಸೋತು ನಂತರ ದುರ್ಗದ ಕೋಟೆ ಸುತ್ತಿದ್ದು …

ಮುಂದಿನ ವಿಶ್ವಕಪ್ ಬರುವಷ್ಟರಲ್ಲೇ ನಾನು ಹರಿಹರ ಬಿಟ್ಟಾಗಿತ್ತು. ಧಾರಾವಾಡದಲ್ಲಿದ್ದ ಕೆಲವು ವರ್ಷ ಅಲ್ಲಿನ ಸ್ಥಳೀಯ ತಂಡದೊಂದಿಗೆ  ಆಡಿದ್ದು. ಆಗ ನಡೆದ ೧೯೯೪ ರ ಯು ಎಸ್  ವಿಶ್ವಕಪ್ ನೆನಪು ಎಂದರೆ ಫೈನಲ್ ಪಂದ್ಯದಲ್ಲಿ ಇಟಲಿಯ ರೊಬೆರ್ಟೋ ಬಾಗಿಯೋ ಬ್ರೆಜಿಲ್ ವಿರುದ್ಧ ಪೆನಾಲಿಟಿ ಶೂಟೌಟ್ ನಲ್ಲಿ ಗೋಲ್ ಮಿಸ್ ಮಾಡಿಕೊಂಡಿದ್ದು.
ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ  ೧೯೯೮ ರ ಫ್ರಾನ್ಸ್ ವಿಶ್ವಕಪ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ೨೦೦೨ ರ ದಕ್ಷಿಣ ಕೊರಿಯಾ ವಿಶ್ವಕಪ್ , ಭಾರತದಲ್ಲಿದ್ದಾಗ ನೋಡಿದ ಕೊನೆಯ ವಿಶ್ವಕಪ್.  ೨೦೦೬ ರ ಜರ್ಮನಿ ವಿಶ್ವಕಪ್ ಹೊತ್ತಿಗೆ ಜೀವನದ ಬೆನ್ನತ್ತಿ ಸಪ್ತ ಸಾಗರದಾಚೆ ಬಂದಾಗಿತ್ತು. ಹಾಗೆಯೇ  ಮೆಸ್ಸಿ ಎಂಬ ಹೆಸರಿನ ಹೊಸ ಫುಟ್ಬಾಲ್ ಮಾಂತ್ರಿಕ ಹೆಸರು ಕೇಳಲು ಶುರುವಾಗಿದ್ದು. ೨೦೧೦ ರ ದಕ್ಷಿಣ ಆಫ್ರಿಕಾ ವಿಶ್ವಕಪ್ ಹೆಚ್ಚು ನೆನಪಿನಲ್ಲಿರುವುದು ವುವುಝೆಲಾ ಎಂಬ ಪೀಪಿಯ ಸದ್ಧಿಗೆ  , ೨೦೧೪ ರ ಬ್ರೆಜಿಲ್ ವಿಶ್ವಕಪ್ ಫೈನಲ್ನಲ್ಲಿ ಮೆಸ್ಸಿ ಮತ್ತು ಅರ್ಜೆಂಟೀನಾ ಸೋತದ್ದು. ೨೦೧೮ ರ ರಷ್ಯಾ ವಿಶ್ವಕಪ್ ಅಲ್ಲಿ  ಫ್ರಾನ್ಸ್ ತಂಡ ಪಾರುಪತ್ಯ  ಮೆರೆದಿದ್ದು . ೨೦೨೨ ರಲ್ಲಿ ಮೆಸ್ಸಿ ವಿಶ್ವಕಪ್ ಗೆದ್ದದ್ದು , ಆ ವಿಜಯವನ್ನು ಮಗಳ ಜೊತೆ ಆಚರಿಸಿದ್ದು.  ಹೀಗೆ ಪ್ರತಿ ಫುಟ್ಬಾಲ್ ವಿಶ್ವಕಪ್, ಜೀವನದ ಅನೇಕ ಘಟ್ಟಗಳಲ್ಲಿ ತಳಕು ಹಾಕಿಕೊಂಡಿರುವುದು ನೆನಪಾಗಿ ಸೋಜಿಗವೆನಿಸಿತು.

ಈಗ ಸ್ಟೇಡಿಯಂನೊಳಗೆ  ಎರಡು ದೇಶಗಳ ಧ್ವಜ ಹೊತ್ತು ತಂದಾಗ ಎಲ್ಲೆಡೆ ಚಪ್ಪಾಳೆ. ಅದರ ನಂತರ ದೇಶಗಳ ರಾಷ್ರ್ಟಗೀತೆ ಮೊಳಗತೊಡಗಿದಾಗ, ಇಡೀ ಸ್ಟೇಡಿಯಂ ಎದ್ದು ನಿಂತು ಗೌರವ ತೋರಿತ್ತು. ನಮ್ಮ ಪಕ್ಕದಲ್ಲಿದ್ದ ಆ ದೇಶದವರು ಹೆಮ್ಮೆಯಿಂದ ರಾಷ್ಟ್ರ ಗೀತೆ ಹಾಡುವುದನ್ನು ಕೇಳುವುದೇ ರೋಮಾಂಚನವೆನಿಸಿತ್ತು. ರಾಷ್ರ್ಟಗೀತೆ ಹಾಡುವಾಗ ಕೆಲವರ ಕಣ್ಣಂಚಿನಲ್ಲಿ ನೀರು. ಇದೆ ರೀತಿ ನಮ್ಮ ಭಾರತದ ಜನಗಣಮನ ಎಂದಾದರೂ ಫುಟ್ಬಾಲ್ ವಿಶ್ವಕಪ್ ನಲ್ಲಿ ಮೊಳಗಿದರೆ ಹೇಗಿರುತ್ತೆ ಎನ್ನುವ ಒಂದು ಕ್ಷಣದ  ಕಲ್ಪನೆಯೇ ಅದ್ಭುತವೆನಿಸಿತ್ತು.

ರೆಫ್ರೀ ಸಿಟಿ ಹೊಡೆದಾಗ ಪಂದ್ಯ ಆರಂಭವಾಯ್ತು . ಯಾವ ವಿಶ್ವಕಪ್ ಪಂದ್ಯ ನೋಡಲು ಮನೆಮನೆಗೆ ಹೋಗುತ್ತಿದ್ದ, ಯಾವ ಆಟಗೋಸ್ಕರ ಚರಂಡಿಯಲ್ಲಿ ಬಿದ್ದ ಫುಟ್ಬಾಲ್ ಹೆಕ್ಕುತ್ತಿದ್ದ ನಾನು..ಇಂದು ಅದೇ ವಿಶ್ವಕಪ್ ಪಂದ್ಯವನ್ನು ನೇರವಾಗಿ ನೋಡುವ ಭಾಗ್ಯ..

ಅಲ್ಲಿ ವಿಶ್ವಕಪ್ ಪಂದ್ಯ ನೋಡುವಾಗ ನಾನು ಒಬ್ಬನೇ ಅಲ್ಲಿರಲಿಲ್ಲ. ನಮ್ಮ ಹರಿಹರದ ಟೌನ್ ಸ್ಪೋರ್ಟ್ಸ್ ಕ್ಲಬ್ ಹಿರಿಯ ಕಿರಿಯ ಆಟಗಾರರು,  ನನ್ನೊಂದಿಗೆ ಟೆನ್ನಿಸ್ ಬಾಲ್ನಲ್ಲಿ ಫುಟ್ಬಾಲ್ ಆಡುತ್ತಿದ್ದ ಸ್ನೇಹಿತರು,  ಎಂ ಕೆ ಟಿ ಶಾಲೆಯ ಹೈಸ್ಕೂಲ್ ಫುಟ್ಬಾಲ್ ತಂಡದ ಗೆಳಯರು,  ನನ್ನ ಮೊದಲ ವಿಶ್ವಕಪ್ ಟಿವಿಯಲ್ಲಿ ತೋರಿಸಿದ ಮಾರ್ಟಿನ್ ಅವರು ಮತ್ತು ಕೊನೆಯದಾಗಿ ನನ್ನ ಎಲ್ಲಾ ಫುಟ್ಬಾಲ್ ಕತೆ-ವ್ಯಥೆಗಳನ್ನು ಗೊತ್ತಿದ್ದ ನನ್ನ ಅಪ್ಪ. ..ಎಲ್ಲರೂ ನನ್ನೊಂದಿಗೆ ಅಲ್ಲೇ ವಿಶ್ವಕಪ್ ಪಂದ್ಯ ನೋಡುತ್ತಿದ್ದರು ಎನ್ನುವ ಅವಚನೀಯ ಭಾವನೆ…

ಪಕ್ಕದಲ್ಲಿದ್ದ ಮಗಳು ಪಂದ್ಯವನ್ನು ಮನಸಾರೆ ಆಸ್ವಾದಿಸುತ್ತಿದ್ದಳು .ಅಲ್ಲೊಂದು ಸುಂದರ ಫುಟ್ಬಾಲ್ ನೆನಪು ರೂಪಗೊಳ್ಳುತ್ತಿ

‍ಲೇಖಕರು Admin

19 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading