-ಡಾ.ಲಕ್ಷ್ಮಿಕಾಂತ ಮಿರಜಕರ
ಗಜಲ್
ದೂರದಿಂದ ನೋಡಿದರೆ ಜನ ಸುಂದರ ಹಕ್ಕಿಯಂತೆ ಕಾಣುವರು
ಮುಟ್ಟ ಹೋದರೆ ಹತ್ತಿರದಿಂದ ವಿಷದ ಹಾವಿನಂತೆ ಕಚ್ಚುವರು
ಕಾಣೋದೆಲ್ಲ ಸುಂದರವಲ್ಲ ಎಂದು ಅವರೇ ಕಲಿಸಿದ ಪಾಠ
ಅಮೃತ ಬಯಸಿ ಸಿಹಿಸ್ನೇಹ ಬೆಳೆಸಿದರೆ ಚೇಳಿನಂತೆ ಕುಟುಕುವರು
ದುರ್ಬಲರಿಗೆ ಇದು ಕಾಲವಲ್ಲ ಪ್ರಬಲರದೇ ದರ್ಬಾರು ಈಗ
ಸೋತು ಬಸವಳಿದ ಅಮಾಯಕರ ಮೇಲೆ ಹದ್ದಿನಂತೆ ಎರಗುವರು
ಸರಿ ತಪ್ಪುಗಳ ವಿಮರ್ಶೆ ಈಗ ಅನಾವಶ್ಯಕ ಎಲ್ಲದಕ್ಕೂ
ಮುಖವಾಡಗಳ ಧರಿಸಿಕೊಂಡು ನಯವಾಗಿ ನರಿಯಂತೆ ನಟಿಸುವರು
ಜನರನ್ನು ಅರ್ಥಮಾಡಿಕೊಳ್ಳುವುದೇ ಸಾಹಸದ ಕೆಲಸ “ಕಾಂತ”
ಮುಂದೆ ಹೊಗಳಿ ಹಿಂದೆ ತೆಗಳಿ ಸದಾ ಗೋಸುಂಬೆಯಂತೆ ಬದುಕುವರು






0 Comments