-ಕವಿತಾ ವಿರೂಪಾಕ್ಷ
ಅಂಬೆ…!
ನೆನಪಾಗುತ್ತಿರುವೆ ಅಂಬೆ..
ತನ್ನದಲ್ಲದ ತಪ್ಪಿಗೆ ಶಿಕ್ಷಿತಳಾಗಿ
ಸಮಾಜದ ವರ್ತುಲದಲ್ಲಿ ಸಿಕ್ಕಿ
ನರಳುವ ಪ್ರತಿ ಹೆಣ್ಣಿನ ರೂಪಕವಾಗಿ..
ಅದ್ಯಾವ ಕಡುಗತ್ತಲಿತ್ತ ಶಾಪವೋ?
ಯಾವ ಕನಸೂ
ಹೆಣ್ಣಿಗೆ ದಯೆ ತೋರವು.
ಯಾರೋ ಯಾರಿಗಾಗೋ
ಯುದ್ಧಮಾಡಿ ಒತ್ತು ತಂದಾಗ
ಸುಮ್ಮನೆ ನೀ ಒಪ್ಪಿಬಿಡಬೇಕಿತ್ತೇನೋ :
ಪ್ರಶ್ನಿಸಿದಿ ನೋಡು,
ಬದುಕು ಬದುಕಾಗದೆ ಕುರುಕ್ಷೇತ್ರವಾಯಿತು.
ಇಲ್ಲಿಂದ ಅಲ್ಲಿಗೆ
ಅಲ್ಲಿಂದ ಇಲ್ಲಿಗೆ
ನಿನ್ನ ಅಲೆಯಿಸಿ ಅಲೆಯಿಸಿ
ಅವರೆಲ್ಲಾ ಪುರುಷೋತ್ತಮರಾದರು
ನೀನೋ
ಎಲ್ಲದಕ್ಕೂ,ನ್ಯಾಯ ಪಡೆಯುವ ಭರದಲ್ಲಿ ಹೆಣ್ಣಾಗಿಯೂ ಉಳಿಯಲಿಲ್ಲ.
ಕೊನೆಗೆ ನಿನ್ನದೂ ಕುರುಕ್ಷೇತ್ರ
ಹಾಗೆ ಅವರದ್ದೂ …
ಹಕ್ಕು ಕಿತ್ತುಕೊಂಡವರೆಲ್ಲಾ
ದುರಂಧರರು,ಕಳೆದುಕೊಂಡ ನೀನು
ಪ್ರತೀಕಾರಿ…!
ನೋಡು
ಯಾರಯಾರದೋ ಪುರುಷಾರ್ಥಕ್ಕೆ ನಿನ್ನ ತಾಳ್ಮೆ,ಸಹನೆ,ಒಲವು
ಇಡೀ ಬದುಕೇ ಬೆಂಕಿಗಾಹುತಿಯಾದರೂ
ಮಹಾಭಾರತದಲ್ಲಿ ನಿನ್ನದೊಂದು
ಇಷ್ಟೇ ಇಷ್ಟು ಚಿಕ್ಕಪಾತ್ರ…!
ಅವರು ತೊಡಿಸುವ ಪೋಷಕುಗಳ ತೊಟ್ಟು ಶೋಕೇಸಿನಲ್ಲಿ ಬಂಧಿಯಾಗಿದ್ದಿದ್ದರೆ
ಯಾವುದಾದರೂ
ದೇವತೆಗಳ ಸಾಲಿನಲ್ಲಿ
ಜಾಗ ಇಲ್ಲವಾದರೆ ಹಣೆ ಪಟ್ಟಿ….!
ಇಲ್ಲಿ ಹೆಣ್ಣು
ಕೇವಲ ಹ್ಮ್., ಎನ್ನಬೇಕು
ಎನ್ನುವ ನಿಯಮವಿದೆಯೇನೋ
ನನಗಂತೂ ಗೊತ್ತಿಲ್ಲ….






0 Comments