ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – 1
ಬಾಂಬೆ ಹೈಕೋರ್ಟಿನ ಅಪೆಲೇಟ್ ವಿಭಾಗದ ಬಾರ್ ಅಸೋಸಿಯೇಷನ್‌ನಲ್ಲಿ ಈ ಹಿಂದೆ ಅಲ್ಲಿನ ಅತಿ ಹೆಚ್ಚು ಸದಸ್ಯರು ವಿಚಾರಣಾ ನ್ಯಾಯಾಂಗದಿಂದ ನಿವೃತ್ತರಾದ ನಂತರ ಸಕ್ರಿಯವಾಗಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸುತ್ತಿದ್ದರು. ಅವರುಗಳಲ್ಲಿ ಹೆಚ್ಚಿನವರಿಗೆ ನ್ಯಾಯಾಲಯದಲ್ಲಿ ಯಾವುದೇ ಕೆಲಸವಿರುತ್ತಿರಲಿಲ್ಲ. ಆದರೆ, ಒಂದು ದಿನವೂ ಬಿಡುವಿಲ್ಲದಂತೆ ಬಾರ್ ರೂಮಿನಲ್ಲಿ ತಮ್ಮ ನಿಗದಿತ ಕುರ್ಚಿಗಳಲ್ಲಿ ಗಾಂಭೀರ್ಯವಾಗಿ ಕುಳಿತುಕೊಂಡು ಕಾರ್ಯನಿರತ ವಕೀಲರಿಗೆ ಎಂದಿಗೂ ಸಾಧ್ಯವಾಗದ ಟೈಮ್ ಪಾಸ್ ಅನ್ನು ಅವರು ಮಾಡುತ್ತಿದ್ದರು.
ನಮ್ಮ ವೃತ್ತಿಯ ಆರಂಭದ ದಿನಗಳಲ್ಲಿ ಹಾಗು ನಾವೂ ವೃತ್ತಿಯಲ್ಲಿ ಸಕ್ರಿಯರಾಗುವ ಮೊದಲು, ಈ ಹಿರಿಯರು ನಮ್ಮನ್ನು ತಮ್ಮ ಪ್ರೇಕ್ಷಕರನ್ನಾಗಿ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದರು. ಜತೆಗೆ ವಿಚಾರಣಾ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ತಮ್ಮ ಹಳೆಯ ದಿನಗಳ ಕತೆಗಳನ್ನು ಹೇಳಿ ನಮ್ಮನ್ನು ರಂಜಿಸುತ್ತಿದ್ದರು. ಸಾಮಾನ್ಯವಾಗಿ ಆ ಕತೆಗಳು 1960ರ ದಶಕದ ಆಸುಪಾಸಿನವು. ಹೀಗೆ ಹೇಳಿದ ಕತೆಗಳಲ್ಲಿ ನನಗೆ ನೆನಪಿರುವಂತಹ ಅದ್ಭುತವಾದ ಕತೆಯೊಂದು ಇಲ್ಲಿದೆ.
ನಗರದಲ್ಲಿ ಹುಟ್ಟಿ ಬೆಳೆದ ಯುವ ನ್ಯಾಯಾಧೀಶರಿಗೆ “ದೇವರಿಗೂ ಬೇಡವಾದ” (ಅವರದೇ ವರ್ಣನೆಯಲ್ಲಿ) ಕಿರಿಯ ಶ್ರೇಣಿ ನ್ಯಾಯಾಲಯವೊಂದಕ್ಕೆ ಸಿವಿಲ್ ಜಡ್ಜ್ ಜೂನಿಯರ್ ಡಿವಿಷನ್ ಆಗಿ ನೇಮಕಗೊಂಡಿರುತ್ತಾರೆ. ಅದು ಅವರ ವೃತ್ತಿ ಜೀವನದ ಮೊದಲ ನೇಮಕಾತಿ. ಅಲ್ಲಿ ತಮಗಾಗಿ ಕಾಯುತ್ತಿದ್ದ ವ್ಯವಸ್ಥೆಗಳು ಹೇಗಿರಬಹುದೆಂದೂ ಊಹಿಸಿರಲಿಲ್ಲ. ಅವರ ವಸತಿ ಗೃಹವೆಂದರೆ (ಕ್ವಾರ್ಟರ್ಸ್) ಒಂದು ಹಳೆ ಬಾವಿ ಪಕ್ಕದಲ್ಲಿರುವ ದನದ ಕೊಟ್ಟಿಗೆಯಂತಿತ್ತು. ಇನ್ನೂ ನ್ಯಾಯಾಲಯವೆಂದರೆ, ಬಂಜರು ಭೂಮಿಯಲ್ಲಿ ಅರ್ಧಂಬರ್ಧ ಕಟ್ಟಿ, ನಿಂತು ಹೋಗಿದ್ದ ಕೊಠಡಿಗೆ ಪ್ಲಾಸ್ಟರಿಂಗ್ ಮಾಡದ ಕಟ್ಟಡವಾಗಿತ್ತು.
ಆ ನ್ಯಾಯಾಲಯದಲ್ಲಿನ ಮೊದಲ ದಿನ, ಮಧ್ಯಾಹ್ನ ಊಟದ ವಿರಾಮದ ಸಮಯದಲ್ಲಿ, ನ್ಯಾಯಾಧೀಶರು ತಮ್ಮ ಸಹಾಯಕನಿಗೆ ಶೌಚಾಲಯಕ್ಕೆ ಹೋಗುವ ಬಗ್ಗೆ ಕೇಳಿದರು. ಸಹಾಯಕ ನಸುನಕ್ಕು ಕಚೇರಿಯ ಕಿಟಕಿಯಿಂದ ಹೊರಗಿದ್ದ ಖಾಲಿ ಮೈದಾನವನ್ನು ತೋರಿಸಿ: “ನೀವು ಆಯ್ಕೆ ಮಾಡಿದ ಯಾವುದೇ ಜಾಗವನ್ನು ಆರಿಸಿಕೊಳ್ಳಬಹುದು.” ಎಂದ.
ನ್ಯಾಯಾಧೀಶರಿಗೆ ಇವನ ಮಾತನ್ನು ನಂಬಲಾಗಲಿಲ್ಲ.
ಅವರು, “ನಾನು ನನ್ನ ಕ್ವಾರ್ಟರ್ಸ್‌ಗೆ ಹೋಗಿ ಬರುತ್ತೇನೆ,” ಎಂದರು. ಆದರೆ, ಅಲ್ಲಿಯೂ ಹೇಳಿಕೊಳ್ಳುವಂತಹ “ವಿಶೇಷ ಸೌಲಭ್ಯ” ಇಲ್ಲವೆಂದೂ, ಮುಂಜಾನೆ ಬೇಗ ಎದ್ದು ಚೊಂಬು ಹಿಡಿದುಕೊಂಡು ಹತ್ತಿರದ ಕಬ್ಬಿನ ಗದ್ದೆಗಳಿಗೆ ಹೋಗಬೇಕೆಂದು ಸಹಾಯಕ ಅವರಿಗೆ ತಿಳಿಸಿದ.
ನ್ಯಾಯಾಧೀಶರಾಗಿದ್ದರಿಂದ, ಅವರು ಸಾಮಾನ್ಯ ಜನರಿಗಿಂತ ದೂರವಿರುವ ಮತ್ತು ತಮಗೆ ಇಷ್ಟವಾದ ಗದ್ದೆಯನ್ನು ಆರಿಸಿಕೊಳ್ಳಬಹುದಾದ ಅವಕಾಶವಿತ್ತು ಅಷ್ಟೇ ಎಂದ.
ಸಮಯ ಕಳೆದಂತೆ ಅವರ ಶೌಚಾಲಯಕ್ಕೆ ಹೋಗಬೇಕಾದ ಅವಸರವನ್ನು ತಡೆಯಲಾಗದೆ, ನ್ಯಾಯಾಧೀಶರು ತಮ್ಮ ಸಹಾಯಕನಿಗೆ ತಾನು ಶೌಚಕ್ಕೆ ಹೋಗುವುದಾಗಿಯೂ ಆದರೆ ಅಲ್ಲಿ ಓಡಾಡುತ್ತಿರುವ ಕಕ್ಷಿದಾರರೂ ಮತ್ತು ವಕೀಲರನ್ನು ಮೊದಲು ಆ ಜಾಗದಿಂದ ದೂರ ಹೋಗಬೇಕೆಂದು ತಿಳಿಸಿದರು. ಸಹಾಯಕನು ನೀವು ನನ್ನನ್ನು ಹಿಂಬಾಲಿಸಿದರೆ ನಾನು ಆ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ತಿಳಿಸಿದ.
ಹೊರಗಿದ್ದ ಜನರೆಲ್ಲ ಮಧ್ಯಾಹ್ನದ ವಿರಾಮ ಮುಗಿಯುತ್ತಿದ್ದ ಸಮಯವನ್ನು ನೋಡಿಕೊಂಡಿದ್ದ ಹೊತ್ತಿನಲ್ಲಿ ಅವರನ್ನೆಲ್ಲ ದಾಟಿ ಒಂದು ಬಯಲು ಜಾಗಕ್ಕೆ ನ್ಯಾಯಾಧೀಶರು ಬಂದು ತಲುಪಿದರು. ಆದರೆ ಸೋಜಿಗವೆನ್ನುವಂತೆ ಅಲ್ಲಿ ಕುಳಿತು, ನಿಂತಿದ್ದ ಜನರೆಲ್ಲ ಏಕಕಾಲಕ್ಕೆ ತಮ್ಮ ಸ್ಥಳದಿಂದಲೇ ನ್ಯಾಯಾಧೀಶರನ್ನು ದಿಟ್ಟಿಸಿ ನೋಡಲು ಯಾವುದೇ ಅಡೆ-ತಡೆಗಳಿರಲಿಲ್ಲ. ಆ ಬಯಲು ಮೈದಾನ ಎಲ್ಲರನ್ನು ಎಲ್ಲರಿಗೂ ಕಾಣಿಸುವಂತಿತ್ತು.
ನ್ಯಾಯಾಧೀಶರಿಗೆ ಅಲ್ಲಿನ ದೃಶ್ಯ ಮತ್ತು ಒಳಗಿನ ಸಂಕಟ ಪ್ರತಿ ನಿಮಿಷವೂ ಕಿರಿಕಿರಿಗೊಳ್ಳಿಸುತ್ತಿತ್ತು. ತಮ್ಮ ಸಹಾಯಕನಿಗೆ “ಜನರೆಲ್ಲ ನನ್ನನ್ನೇ ದಿಟ್ಟಿಸಿ ನೋಡುತ್ತಿರುವಾಗ ನನಗೆ ಅಂಜಿಕೆಯಾಗುತ್ತಿದೆ. ಶೌಚ ಮಾಡಲು ಸಾಧ್ಯವಾಗುತ್ತಿಲ್ಲ” ಎಂದರು. ಅದಕ್ಕೆ ಸಹಾಯಕನು “ಸರ್, ನೀವು ಯಾವಾಗ ರೆಡಿ ಎಂದು ಹೇಳುತ್ತೀರೋ ಆಗ ನಾನು ಅನೌನ್ಸ್‌ಮೆಂಟ್ ಮಾಡುತ್ತೇನೆ” ಎಂದು ಉತ್ತರಿಸಿದ.
ನ್ಯಾಯಾಧೀಶರು: “ಏನು ಅನೌನ್ಸ್‌ಮೆಂಟ್?”
ಸಹಾಯಕ: “ನಿಮಗೆ ಮೂತ್ರ ವಿಸರ್ಜನೆ ಮಾಡಲು ಏಕಾಂತ ಬೇಕೆಂದು ನಾನು ಅನೌನ್ಸ್ ಮಾಡುತ್ತೇನೆ.”
ನ್ಯಾಯಾಧೀಶರು (ನಂಬಲಾಗದೆ): “ಹಾಗಂತ ಅನೌನ್ಸ್ ಮಾಡ್ತಿರಾ!”
ಸಹಾಯಕ: “ಅವರಿಗೆ ಇದು ಅಭ್ಯಾಸವಾಗಿದೆ. ನೋಡಿ ಅಷ್ಟೇ!”
ನಂತರ ಅವನು ತನ್ನ ಪೂರ್ಣ ಧ್ವನಿಯಲ್ಲಿ, “ಎಲ್ಲರೂ ಆ ಕಡೆ ತಿರುಗಿಕೊಳ್ಳಿ, ನಾನು ಸಿಗ್ನಲ್ ಕೊಡುವವರೆಗೂ ಯಾರೂ ಈ ಕಡೆ ನೋಡಬೇಡಿ. ಜಡ್ಜ್ ಸಾಹೇಬರು ಶೌಚಕ್ಕೆ ಹೋಗಬೇಕಾಗಿದೆ.” ಎಂದು ಕೂಗಿದ.
ನ್ಯಾಯಾಧೀಶರು ನಮಗೆ ಹೇಳಿದಂತೆ, ಅವರು ಎಷ್ಟು ಪ್ರಯತ್ನಿಸಿದರೂ ಬಹಳ ಹೊತ್ತಿನವರೆಗೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಲಿಲ್ಲ. ಎಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರು. ಸಹಾಯಕ ಕೊನೆಗೆ “ತಮ್ಮ ಹಿಂದಿನ ಹಲವು ಅಧಿಕಾರಿಗಳಿಗೂ ಆರಂಭದಲ್ಲಿ ಇದೇ “ತೊಂದರೆ ಇತ್ತು” ಎಂದು ಹೇಳಿದ ನಂತರ ವಿಸರ್ಜನೆವಾಯಿತು” ಎಂದು ಹೇಳಿದರು.
ಅದೊಂದು ಎಂತಹ ನಿರಾಳವಾಗಿತ್ತು! ಬಿಡುಗಡೆಯಲ್ಲಿರುವ ಮಜದ ಅನುಭವವಾದಂತ್ತಿತ್ತು. ಅವರೀಗ ಪುನಃ ನ್ಯಾಯಾಲಯಕ್ಕೆ ಹೋಗಿ ಇನ್ನಿತರೆ ‘ರಿಲೀಫ್’ ಕೇಳುವವರ ಕಡೆ ಆರಾಮವಾಗಿ ಗಮನ ಹರಿಸಲು ಅನುಕೂಲವಾಗಿತ್ತು..
ನ್ಯಾಯಾಧೀಶರ ಶೌಚದ ಕೆಲಸ ಮುಗಿಸಿದ ನಂತರ, ಸಹಾಯಕ “ಎಲ್ಲವೂ ಸರಿಹೋಯಿತು, ನಿಮ್ಮ-ನಿಮ್ಮ ಕೆಲಸ ಮುಂದುವರಿಸಬಹುದು,” ಎಂದು ಕೂಗಿ ಹೇಳಿದನು. ಬಂಜರು ಭೂಮಿಯಲ್ಲಿ ಹರಡಿಕೊಂಡಿದ್ದ ಜನರ ಸಾಮೂಹಿಕ ಹರ್ಷೋದ್ಗಾರ ಕೇಳಿಬಂದಿತು.
ನ್ಯಾಯಾಧೀಶರಿಗೆ ಹಿಂತಿರುಗುವಾಗ, ದಾರಿ ಮಾಡಿಕೊಡಲು ಜನರ ಗುಂಪು ಇಬ್ಬದಿಗೆ ಸರಿಯಿತು. ಅದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ವಂದನೆಯನ್ನು ವೀಕ್ಷಿಸಿದಂತೆಯೇ ಇತ್ತು ಎಂದು ಹೇಳಿ ಹೆಮ್ಮೆ ಪಟ್ಟರು.
ಇದಾದ ಮರುದಿನವೇ, ನಮ್ಮ ನ್ಯಾಯಾಧೀಶರು ಆ ಬಯಲು ಮೈದಾನದ ಒಂದು ಮೂಲೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿಯೇ ನಾಲ್ಕು ತಗಡಿನ ಶೀಟ್‌ಗಳನ್ನು ಹಾಕಿಸಿ ಶೌಚಾಲಯದ ವ್ಯವಸ್ಥೆ ಮಾಡಿಕೊಟ್ಟರು.
ಬಹುಶಃ ಅವರಿಗೆ ಮನವರಿಕೆಯಾಗಿದ್ದು ನ್ಯಾಯವು ಕೇವಲ ಸಿಕ್ಕರೆ ಸಾಲದು, ಅದು ದೊರೆಯುತ್ತಿದೆ ಎನ್ನುವುದು ಕಾಣಿಸಬೇಕು ಎನ್ನುವ ಪರಮ ಸತ್ಯವನ್ನು ಅವರು ಅರಿತುಕೊಂಡಿದ್ದರು.
| ಮುಂದುವರೆಯುವುದು |






0 Comments