ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳಿದ್ದು ಸುಳ್ಳಾಗಬಹುದು 

-ತಿರುಪತಿ ಭಂಗಿ

“ಶಿವಲೋಕದಿಂದ ಒಬ್ಬ ಸಾದು ಬಂದಾನವ್ವಾ
ಒಬ್ಬ ಯೋಗಿ ಬಂದಾನವ್ವಾ
ಶಿವನಾಮ ಶಬುದಾ ಕೇಳಿ ಅಲ್ಲೇ ನಿಂತಾನವ್ವಾ”

ಏಕಾತಾರಿ ಹಿಡಿದುಕೊಂಡು ಶಿವಯೋಗ ಮಂದಿರದಲ್ಲಿ ಪರಶಿವನ ಅಭಿಮುಖವಾಗಿ ಕುಳಿತು ಭಕ್ತಿಪರವಶನಾಗಿ ಕಣ್ಣುಮುಚ್ಚಿ ಆಗಾಗ ಒಮ್ಮೊಮ್ಮೆ ಕಣ್ಣು ತೆರೆಯುತ್ತ ತನ್ನ ಕಂಚಿನ ಕಂಠದಿಂದ ರಾಘಪ್ಪ ಶಿವಪದ ಹಾಡುತ್ತಿದ್ದ. ಗುಡಿಗೆ ಬಂದ ಭಕ್ತರು ಶಿವನಿಗೆ ದೀರ್ಘದಂಡನಮಸ್ಕಾರ ಹಾಕಿ ರಾಘಪ್ಪನು ಹಾಡುವ ಶಿವಪದ ಕೇಳುತ್ತ ತಮ್ಮೇರಡೂ ಕೈಗಳನ್ನೇ ಸಂಗೀತವಾದ್ಯಗಾಳನ್ನಾಗಿಸಿಕೊಂಡು ರಾಗಬದ್ದವಾಗಿ,ಲಯಬದ್ದವಾಗಿ ಸುಶ್ರಾವ್ಯವಾಗಿ ಹಾಡುತ್ತಿರುವ ರಾಘಪ್ಪನ ಹಾಡು ಕೇಳುತ್ತ ಮೈಮರೆತು ತಮ್ಮ ಕೈಗಳನ್ನೇ ತಾಳವಾಗಿ ನುಡಿಸುತ್ತಿದ್ದರು.

ಬಿಳಿ ಪಂಚೆ ಮೇಲೊಂದು ನೇಹರು ಶರ್ಟ ತಲೆಯಮೇಲೊಂದು ಗಾಂಧೀ ಟೋಪಿ, ಹಣೆಗೆ ನಿಚ್ಚಳವಾಗಿ ಬಡೆದ ವಿಭೂತಿಯಲ್ಲಿಯೇ ಪರಶಿವ ಕಾಣುತ್ತಿದ್ದಾನೇನೋ ಅನ್ನುವಂತೆ ರಾಘಪ್ಪ ಕುಳಿತು ಹಾಡುವುದನ್ನು ಬಂದ ಭಕ್ತರೆಲ್ಲರೂ ಆಲಿಸುತ್ತಿದ್ದರು. ಆ ಹಾಡು ಮುಗಿಯುವ ಹೊತ್ತಿಗೆ ಅಲ್ಲಿದ್ದವರ ದುಗುಡು ದುಃಖ ದೂರವಾದಂತಹ ಭಾವ ಅವರ ಮನದಲ್ಲಿ ಮೂಡಿರುತ್ತಿತ್ತು. 

ಆಗುಡಿಗೆ ಬಂದ ಸಣ್ಣ ಸಣ್ಣ ಮಕ್ಕಳಿಗೆ ತಾವೂ ರಾಘಪ್ಪನಂತೆ ರಾಗಬದ್ದವಾಗಿ ಶಿವ ಪದ ಹಾಡಿ ಸೈ ಅನಿಸಿಕೊಳ್ಳಬೇಕು ಅನ್ನುವ ಭಾವ ಆ ಎಳೆಯರ ಎದೆಯಲ್ಲಿ ಮೂಡಿ ಮಿರಗುತ್ತಿತ್ತು. ರಾಘಪ್ಪ ನೋಡಲು ಕಪ್ಪಗಿದ್ದ ಅವನ ಹೊಟ್ಟೆ ಒಂದೀಟು ದಪ್ಪವಿತ್ತು, ಮೋತಿಯ ಮೇಲೆ ಸದಾ ಗಡ್ಡ ಅವನ ಸಾದು ಕಳೆ ಹೆಚ್ಚಿಸಿತ್ತು.. ತಲೆಗೂದಲು ಒಂದಿಷ್ಟು ನೀಳವಾಗಿಯೇ ಬಿಟ್ಟಿರುತ್ತಿದ್ದ. ಆ ಕೂದಲಿಗೆ ದಿನವೂ ಕೊಬ್ರಿ ಎಣ್ಣೆ ಹಚ್ಚಿ ನೀಟಾಗಿ ಬಾಚಿಕೊಳ್ಳುತ್ತಿದ್ದ.

ಇಂಥ ಶಿವಭಕ್ತ ರಾಘಪ್ಪ ಹುಟ್ಟಿದ್ದು ಶಿವನೂರಿನ ರಂಗಜ್ಜಿಯ ಹಾಳು ಮನೆಯಲ್ಲಿ.  ಮೊಮ್ಮಗ ಹುಟ್ಟಿದ ಸಂತಸದಲ್ಲಿ ರಂಗಜ್ಜಿ ದುಡುದುಡು ಹೋಗಿ ಅದೇ ಊರಿನ ಜೋತಿಷಿಯ ಬಳಿ ಮಗನ ಹುಟ್ಟಿನ ಸಮಯ,ಗಳಿಗೆ ಹೇಳಿ ಕಾತರದಿಂದ ಜೋತಿಷಿ ಏನು ಹೇಳುತ್ತಾನೋ ಎಂದು ಕೌತುಕದಿಂದ ಅವನ ಮರುಮಾತಿಗೆ ಕಾಯ್ದು ಕುಳಿತಿದ್ದಳು. ಈ ಹುಡುಗ ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಿ. ಈ ಕೆಟ್ಟ ನಕ್ಷತ್ರದಲ್ಲಿ ಮಕ್ಕಳು ಹುಟ್ಟಿದರೆ ಹೆತ್ತವರಿಗೆ ತೊಂದರೆ ಕಾಯ್ದಿಟ್ಟದ್ದು.  ನೋಡು ರಂಗವ್ವ ನಿನ್ನ ಮೊಮ್ಮಗ ಹುಟ್ಟಿದ ಗಳಿಗೆ ಸರಿ ಇಲ್ಲ, ನಿನ್ನ ಮಗಳಿಗೆ ಆಪತ್ತು ಐತಿ. ಅಕಿ ಜೀವಕ್ಕ ತೊಂದ್ರಿ ಬರಾಕ ಹತ್ತೈತಿ. ಈ ಮುಗು ಹುಟ್ಟಿದ ಆರ ವರಷದ ಒಳಗ ನಿನ್ನ ಮಗಳು ದುಂಡವ್ವ ಉಳಿಯಂಗಿಲ್ಲ. ನನ್ನ ಜೋತಿಷಿಶಾಸ್ತ್ರದ ಮೇಲಾಣೆ, ನನ್ನ ಮಾತು ಸುಳ್ಳಾಗಲ್ಲ” ಎಂದು ಜೋತಿಷಿ ನುಡಿದಾಗ ರಂಗಜ್ಜಿ ತತ್ತರಿಸಿದಳು. ಮಗಳು ತನ್ನ ಸಾವನ್ನೆ ಹೆತ್ತಳೇನು? ಮಂಕಾಗಿ ಗರಬಡಿದಂತೆ ಕುಳಿತಳು. ಅವಳ ಹೊಟ್ಟೆಯೊಳಗೆ  ನೂರೊಂದು ಚೋಳು ಕಡಿದಷ್ಟು ಸಂಕಟವಾಯಿತು.

ಸಣ್ಣ ವಯ್ಯಸ್ಸನ್ಯಾಗ ಹಕ್ಕಿ ಹಾರಿ ಹ್ವಾದಂಗ ಗಂಡನ ಪ್ರಾಣವೂ ತಟಗ್ನ ಹಾರಿ ಹೋಗಿತ್ತು. ಆಗ ಇನ್ನss ಕೂಸು ಹೊಟ್ಯಾಗ ಇತ್ತು. ಹೆಚ್ಚ ಉಣಲಿಲ್ಲ ತಿನಲಿಲ್ಲ ಯಾವ ಭಯಕಿನೂ ಪುಟ್ಟಾ ಪೂರಾ ತೀರಸ್ಕೊಳ್ಳಾರ್ದ ದುಂಡವ್ವಗ ಜನ್ಮಾ ಕೊಟ್ಟಿದ್ಳು. ಇದ್ದ ಒಬ್ಬಾಕಿ ಮಗಳ್ನ ಅಂಗೈಯಾಗ ಅರಮನಿ ಮಾಡಿ ಬೆಳಸಿದ್ಳು. ಇದ್ದ ಎರ್ಡ ಎಕರೆ ಜಮೀನ್ದಾಗ ಬಂದ ಕಾಳಾಕಡಿಯಾಗ ಹೆಂಗ ಜೀವ ಸಾಗಿತ್ತು? ನಿರ್ವಾ ಇಲ್ಲದ ಕೂಲಿ ಲೆಲಸಕ್ಕೂ ಹೊಕ್ಕಿದ್ಳು ಆದ್ರ ತನ್ನ ಮುದ್ದಿನ ಮಗಳಾದ ದುಂಡವ್ವನ ಒಂದ ದಿನಾನೂ ಕೂಲಿ ಕೆಲಸಕ್ಕ ಹಚ್ಚಲಿಲ್ಲ. “ಮನಿಗೆಲಸ ಮಾಡ್ಕೊಂಡ ಇರವ್ವಾ ನೀನು” ಅಂತ ಮಗಳಿಗೆ ಹೇಳಿ ತಾನೊಬ್ಬಕಿನss ದಾಸರ ಯಲ್ಲವ್ವನ ಮ್ಯಾಳಿನ ಜೋಡಿ ಊರಾಗಿದ್ದ ಸಾಹುಕಾರ ಹೊಲಕ್ಕ ಕಸಾಕಡ್ಡಿ ತಗ್ಯಾಕ ಹೊಕ್ಕಿದ್ಳು.

ದುಂಡವ್ವ ಏಳನೆಯಿಯತ್ತೆ ಸಾಲಿ ಅಷ್ಟ ಓದಿದ್ದಳು. ಏಳನೆಯಿಯತ್ತೆ ಮುಗಿದ ನಾಕ ತಿಂಗಳಿಗೆ ದುಂಡವ್ವ ದೊಡ್ಡಾಕಿ ಆಗಿದ್ಳು. ಆಗ ರಂಗಜ್ಜಿಗೆ ಚಿಂತಿ ಶುರುವಾಯಿತು. ಬರುಬುರು ಬೆಳದ ನಿಂತ ಮಗಳ ಅಂದಾ ಚಂದಾ ನೋಡಿ ತಾಯಿ ಕಳ್ಳಿಗೆ ಹಿಗ್ಗೋ ಹಿಗ್ಗು. ಮಗಳ ಮದವಿ ಮಾಡಿದ್ರ ನನ್ನ ತಲಿಮ್ಯಾಲಿನ ಭಾರ ಕಮ್ಮಿ ಅಕೈತಿ ರಾತ್ರಿ ಮಲಗಿದಾಗ ಎಷ್ಟೋ ಹೊತ್ತ ಮಗಳ ಮುಂದಿನ ಭಷ್ಯದ ಚಿಂತೆ ಮಾಡುತ್ತ ರಂಗಜ್ಜಿ ನಿದ್ರೆಗೆ ಜಾರುತ್ತಿದ್ದಳು.

ತನ್ನ ಸಂಬಂಧಿಕರ ಕಡೆಯಿಂದ ಒಂದು ಸಂಬಧ ಮಗಳಿಗೆ ಬಂದ್ರೂ ಅದನ್ನು ರಂಗಜ್ಜಿ ತಳ್ಳಿಹಾಕಿದಳು. ಹುಡುಗ ನೋಡಲು ಅವಳಿಗೆ ಸರಿ ಜೋಡಿ ಅನಿಸಲಿಲ್ಲ. ನನ್ನ ಮಗಳಿಗೆ ತಕ್ಕ ವರನಲ್ಲವೆಂದು ಆ ಸಂಬಂಧ ಕೈಬಿಟ್ಟಳು. ರಂಗವ್ವನ ಸಹೋದರ ಒಂದು ವರ ತಂದಿದ್ದ ಅದು ದುಂಡವ್ವಳಿಗೆ ಹಿಡಿಸಿಲ್ಲವೆಂದು ಅದನ್ನು ಕೈಬಿಟ್ಟಳು. ಮೂರನೆಯ ವರ ಮುತ್ತಿನಂತದ್ದು ಇಬ್ಬರಿಗೂ ಇಷ್ಟವಾಯಿತು ವರನಿಗೆ ಹತ್ತು ಎಕರೆ ನೀರಾವರಿ ಜಮೀನು, ಒಬ್ಬನೇ ಮಗ, ದುಂಡವ್ವನ ರೊಟ್ಟಿ ತುಪ್ಪದಾಗ ಬಿತ್ತು ಎಂದು ಊರತುಂಬ ರಂಗಜ್ಜಿ ಹೇಳಿಕೊಂಡು ತಿರುಗಿದಳು. 

ದುಂಡವ್ವ ಮದುವೆಯಾಗಿ ಗಂಡನ ಮನೆಗೆ ಹೋದ ಒಂದಿಷ್ಟು ದಿನ ರಂಗಜ್ಜಿ ಊಟ ನಿದ್ದಿ ಬಿಟ್ಟ ಮಗಳ ಚಿಂತೆಯಲ್ಲಿ ಕೊರಗಿದಳು. ಗಂಡು ಮಗನಿದ್ರೆ ನನ್ನೊಟ್ಟಿಗೆ ಇದ್ದು ನಾನು ಸತ್ತಾಗ ನನ್ನ ಹೆಣಕ್ಕೆ ಕೊಳ್ಳಿ ಇಡತಿದ್ದ, ಗಂಡ ಬದುಕಿದ್ರ ಗಂಡ ಮಗನನ್ನು ಹೆರುತ್ತಿದ್ದೆ. ಈಗ ಮಗಳು ಕೊಟ್ಟ ಮನೆಗೆ ಹೋದಳು. ಇದ್ದ ಹಳೆ ಜಂತಿ ಮನೆಯಲ್ಲಿ ನಾನು ಒಂದೇ ಗೂಗಿಯಂತೆ ತಾನೊಬ್ಬಳೇ ಜೀವ ಕಳೆಯುವುದು ರಂಗಜ್ಜಿಗೆ ಭಾಳ ಕಷ್ಟ ಅನಿಸಿತು. 

ಮಗಳು ಒಳ್ಳೆ ಮನೆಗೆ ಸೊಸೆಯಾಗಿ ಹೋದಳೆಂಬ ನೆಮ್ಮದಿ ಅವಳ ಜೀವನವನ್ನು ಚೈತನ್ಯಗೊಳಿಸುತ್ತಿತ್ತು. ಮದುವೆಯಾಗಿ ಹೋದ ಒಂದುವರೆ ವರುಷದಲ್ಲಿ ಮಗಳು ತಾಯಿಯಾಗುವ ಸಿಹಿ ಸುದ್ದಿ ನೀಡಿದಳು. ರಂಗಜ್ಜಿ ಅಂದಿನಿಂದ ಕಟ್ಟಿಗೆ ಕೂಡಿ ಇಡುವುದು, ಹೆಂಡಿ ಹಿಡಿದು ಕುಳ್ಳು ಹಚ್ಚಿ ವಣಗಿಸಿ ಕುಟರಿ ಒಟ್ಟಿದಳು. ಕಾಳು ಕಡಿ, ಕೊಬ್ರಿ, ಬೆಣ್ಣಿ, ತುಪ್ಪಾ ಮಗಳು ಹೆರೆಗೆಗೆ ಬರುವ ಮೊದಲೇ  ಸಂಗ್ರಹಿಸಿದಳು.  ಮಗಳ ಬರುವ ದಿನದ ಹಾದಿ ಕಾಯುತ್ತ ರಂಗಜ್ಜಿ ಹೊತ್ತು ದೂಡುತ್ತಿದ್ದಳು.

ಚೊಚ್ಚಲ ಹೆರೆಗೆಗೆ ಮಗಳನ್ನು ಅಳೆಯ ತವರಿಗೆ ಕಳಿಸಿ ಹೋದ. ಇದ್ದ ತನ್ನ ಹಾಳು ಜಂತಿ ಮನೆಯ ಕಿಡಕಿ ಸರಿಪಡಿಸಿ ಅದರಿಂದ ಗಾಳಿ ಬರದಂತೆ ಗೋಣಿ ಚೀಲಾ ಹಾಕಿ ಚಾಟು ಮಾಡಿದಳು. ಇದ್ದ ಹಳೆಯ ಕಾಲದ ಒಂದು ಕಾಟಾ ಸರಿ ಪಡಿಸಿ ಅದರ ಮೇಲೆ ನಾಲ್ಕಾರು ಹಾಸಿಗೆ ಹಾಸಿ ಮೇಲೊಂದು ದಪ್ಪನೆಯ ಕಂಬಳಿ ಹಾಸಿ ಮೆತ್ತನೆಯ ಗಾದಿಯಂತೆ ಮಾಡಿದಳು. ಸೂಲಗಿತ್ತಿ ಯಂಕವ್ವಳಿಗೆ ದಿನವೂ ನೆನಪು ಮಾಡಿ ಬರ್ತಿದ್ದಳು.  “ಯಕ್ಕಾ ದುಂಡಕ್ಕಗ ದಿಂದಾಗ ಬಿದ್ದಾವು ನೀ ಎಲ್ಲೆರ ಕೈಯ್ಯಾಗ ಚೀಲಾ ಹಿಡ್ಕೊಂಡ ಊರಗೀರಿಗೆ ಹ್ವಾದಗೀದಿಯವ್ವೋ” ಹೇಳಿ ತಾಕೀತು ಮಾಡಿದ್ಳು. “ನಿನ್ನ ಮಗಳ ಹೆರಗಿ ಆದಮ್ಯಾಲ ನೀ ಕೊಟ್ಟ ಚಾಜಾ ತಗೊಂದ ಚೈನಿ ಹೊಡಿಯಾಕ ಹೊಕ್ಕಿನಿ”ಎಂದು ಯಂಕವ್ವ ನಕಲಿ ಮಾಡಿ ನಕ್ಕು ಕಳಿಸಿದ್ಳು.

ಸೂರ್ಯಾ ತಾಯಿ ಹೊಟ್ಯಾಗ ಹೊಂಟಿದ್ದ ಇತ್ತಾಗ ದುಂಡವ್ವಗ ಹೆರಗಿನೋವಾ ಶುರು ಆತು. “ಯಂಕವ್ವಕ್ಕಾ ಯಂಕವ್ವಕ್ಕಾ ದುಂಡವ್ವ ಬ್ಯಾನಿ ತಿನ್ನಾಕತ್ಯಾಳವ್ವೋ” ಎಂದು ದೊಡ್ಡ ದನಿ ಮಾಡಿ ರಂಗಜ್ಜಿ ಗಾಬರಿಗೊಂಡು ಕೂಗತೊಡಗಿದ್ಳು. “ಏ ಯವ್ವಾ ಅಕಿ ಮನಿ ಇರೂದು ಅಚಿಕಡೆ ಓಣ್ಯಾಗ ನೀ ಇಲ್ಲೇ ನಿಂತ ಕೂಗಿದ್ರ ಅಕಿಗೆ ಹೆಂಗ ಕೇಳತೈತಿ, ಮಗ್ಗಲ ಮನಿ ಕರ್ಯಾಗ ಹೇಳಿ ಕಳಿಸು” ಬ್ಯಾನಿತಿನಕೋತ ದುಂಡವ್ವ ಅವರವ್ವಗ ಹೇಳತಿದ್ದಂಗ ಸಣ್ಣ ಹುಡಗೂರಗತೆ  ಓಡ್ಕೋತ ಹೋಗಿ ಕರ್ಯಾನ ಮನಿಮುಂದ ನಿಂತು “ಕರಿಯಾ ಲಾ ಮುಡದಾರಾ ಕರಿಯಾ ಎಲ್ಲಿ ಅದಿಯೋ” ಎಂದು ಕೂಗಿದಳು. ಒಳಗಿದ್ದ ಮುದುಕಿ “ಅಂವ ಚರಗಿತಗೊಂದ ಕೆಂಪಮಡ್ಡಿಕಡೆ ಹೊಗ್ಯಾನವೋ” ಅಂದ್ಳು. “ಈ ಹಾಟ್ಯಾಗ ಇದ ಹೊತ್ತನ್ಯಾಗ ಅದೊಂದ ಬರಬೇಕಾ” ವಟಾವಟಾ ವಟಗೂಡ್ಕೋತ ತಾನ ಒಂದ ಹೆಜ್ಜಿ ಮುಂದಕ ಹ್ವಾದ್ಳು. ಅಲ್ಲಿ ಎರಡು ಹುಡುಗರ ಆಟಾ ಆಡಕೋತ ಕುಂತಿದ್ರು. ಅವರನ್ನ ಕಳಸಬೇಕಂದ್ಳು. ಅದ್ಯಾಕೋ ಬ್ಯಾಡ ಅನಿಸಿ ತಾನೇ ಯಂಕವ್ವನ ಮನಿಕಡೆ ಬಿರಬಿರನೆ ಹೊಂಟಬಿಟ್ಟಳು.

ಯಂಕವ್ವ ತಮ್ಮ ಮನಿ ಮುಂದ ಮುಸರಿ ಕುಟರಿ ಹಾಕ್ಕೊಂಡು ತಿಕ್ಕೋತ ಕುಂತಿದ್ಳು. “ಯಕ್ಕಾ ದುಂಡವ್ವ ಬ್ಯಾನಿ ತಿನ್ನಾಕತ್ಯಾಳ” ಅಂಥ ರಂಗಜ್ಜಿ ಹೇಳೂದ ತಡ. ಯಂಕವ್ವ ಇದ್ದ ಬಾಂಡೆ ಅಲ್ಲೆ ಬಿಟ್ಟ ರಂಗವ್ವನ ಬೆನ್ನು ಹತ್ತಿ ಅವಸರಾ ಮಾಡಿ ನೆಡೆದಳು. ಮನ್ಯಾಗ ದುಂಡವ್ವ ಒಂದss ನರಳಾಡಕೋತ ಬಿದ್ದಿದ್ದಳು. “ಇಷ್ಟೋತನ ಎಲ್ಲಿ ಹೋಗಿದ್ದೇ ದೌಳಾಕಿನ” ಎಂದು ತಾಯಿನ್ನು ಆ ನೋವಿನಲ್ಲಿ ಕೇಳುವುದು ಮರೆಯಲಿಲ್ಲ.  “ಸಮಾಧಾನ ತಂಗಿ, ಏನೂ ಆಗಾಂಗಿಲ್ಲಾ, ಧೈರ್ಯದಿಂದ ಇರು” ಎಂದು ಯಂಕವ್ವ ತನ್ನ ಸಕಲ ವಿದ್ಯೆಯನ್ನು ಉಪಯೋಗಿಸಿ  ಯಾವತೊಂದೆರೆಯೂ ಆಗದಂತೆ ದುಂಡವ್ವನ ಹೆರಿಗೆ ಮಾಡಿಸಿಕೊಂಡಳು.

ಗಂಡ ಹುಡುಗ ಪುಟಚಂಡಿನಂತೆ ಇತ್ತು. ಆಗ ಆ ಕೂಸು ನೋಡಿ ರಂಗವ್ವಳಿಗೆ ಹಿಗ್ಗೋ ಹಿಗ್ಗು. ದನಿದ ಜೀವ ದುಂಡವ್ವ ಕಣ್ಣು ಮುಚ್ಚಿ ಮಲಗಿದಳು. ಗಂಡು ಹುಡುಗ ಅನ್ನುವ ಶಬುದ ಕಿವಿಗೆ ತಾಗಿದಾಗ ದುಂಡವ್ವ ಅಂತ ನೋವಿನಲ್ಲೂ ನಗುತ್ತ ಮಗುವನ್ನು ನೋಡಿ ಕಣ್ಣು ತುಂಬಿಕೊಂಡಳು. ಯಂಕವ್ವ ಖುಷಿ ಖುಷಿಯಿಂದ ತನ್ನ ಮನೆಗೆ ಮರಳಿದಳು. ಮರುದಿನ ರಂಗಜ್ಜಿ ಜೋತಿಷಿ ಹಂತೇಕ ಹ್ವಾದಾಗ ಅಂವ ಅಂದ ಮಾತು ಅಕಿ ಕಿವಿಯಾಗ ಗುಂಯ್‌ ಗುಟ್ಟುತ್ತಿತ್ತು.ಅದ ಗುಂಗನ್ಯಾಗ ಮನಿಗೆ ಹೆಂಗ ತಲುಪಿದ್ಳೂ ಅನ್ನುವ ಕಬರು ರಂಗವ್ವಗ ಇರಲಿಲ್ಲ. 

                                                                          *****

ಪುಟಚಂಡಿನಂತೆ ಆಡುವ ಮೊಮ್ಮಗನ ಮ್ಯಾಲ ಅದ್ಯಾಕೋ ಪ್ರೀತಿ ಸತ್ತು ಸುಡಗಾಡ ಸೇರಿತು. ಈ ಕೂಸು ನನ್ನ ಮಗಳ ಪಾಲಿಗೆ ಶನಿಯಾಗಿ ಬಂದಿದೆ. ಇದೊಂದು ಪೀಡೆ. ಇದರಿಂದ ತನ್ನ ಮಗಳು ಸಾಯುವುದು ಬೇಡ. ಮಗಳು ಬದುಕಿ ಉಳಿದ್ರೆ ಇಂಥ ಮಕ್ಕಳನ್ನು ಹತ್ತಾರು ಹೆರಬಲ್ಲಳು. ಹೆಂಗಾದ್ರೂ ಮಾಡಿ ಈ ಕೂಸಿಗೊಂದು ಗತಿ ಕಾಣಿಸಬೇಕೆಂದು ರಂಗಜ್ಜಿ ಮನದಲ್ಲಿ ಹೊಂಚು ಹಾಕತೊಡಗಿದಳು.

ಮಗಳಿಗೆ ಜ್ಯೋತಿಷಿ ಹೇಳಿದ  ಸತ್ಯವನ್ನು ಹೇಳದೆ. ಬದಲಿಗೆ ಮಾತು ತಿರುಗಿಸಿ “ಕೂಸಿನ ಒಂದು ವರುಷದವರೆಗೆ ಭಾಳ ಎಚ್ಚರಿಕೆಯಿಂದ ಜೋಪಾನ ಮಾಡಬೇಕು, ಉಸಿರಾಟದ ಸಮಸ್ಯೆಯಿಂದ ಜೀವಕ್ಕೆ ಅಪಾಯ ಬಂದರೂ ಬರಬಹುದು, ನೆಗಡಿ ಕೆಮ್ಮು ಬರದಂತೆ ಎಚ್ಚರ ವಹಿಸಿದರೆ ಮಗುವಿನ ಪ್ರಾಣಕ್ಕೆ ಯಾವ ಅಪಾಯ ವಿಲ್ಲವೆಂದು, ಮಗು ಉತ್ತಮವಾದ ಗಳಿಗೆಯಲ್ಲಿ ಜನಸಿದೆ, ಉಸಲಿನ ಏರುಪೇರಿನಿಂದ ಜೀವಕ್ಕ ಅಪಾಯ ಆಗುವ ಸಾದ್ಯತೆ ಐತಿ ಅಂದಾನ ಜೋತಿಷಿ” ಅಂತ ರಂಗಜ್ಜಿ ಮಗಳಿಗೆ ಹಸಿಬಿಸಿ ಮಾತು ಮಗಳಿಗೆ ಕಟ್ಟು ಕತೆ ಕಟ್ಟಿ ಹೇಳಿ ಅವಳನ್ನು ಖುಷಿಯಾಗಿಡಲು ಭಯಸಿದಳು. “ಅಯ್ಯೋ ಯವ್ವಾ ಆ ಜೋತಿಷಿಗಳ ಮಾತನ್ನೇನು ನಂಬತಿ, ಹೊಟ್ಟೆ ಉಪಜೀವಕ್ಕೆ ಏನೇನೋ ಹೇಳತಾವೆ. ಹುಟ್ಟು ಸಾವನ್ನು ತಪ್ಪಿಸುವುದು ಯಾರ ಕಡೆಯಿಂದ ಸಾದ್ಯವಾದೀತು” ಎಂದು ಜೋತಿಷಿಯ ಮಾತು ತಲೆಗೆ ಹಚ್ಚಿಕೊಳ್ಳದೆ ದುಂಡವ್ವ ತನ್ನ ಮಗುವಿಗೆ ಹಾಲುಣಿಸತೊಡಗಿದಳು. ಆದರೆ ರಂಗಜ್ಜಿ ಜೋತಿಷಿಗಳ ಮಾತಿನ ಮೇಲೆ ಹೆಚ್ಚು ನಂಬಿಕೆ ಇತ್ತು. ಅವರು ಹೇಳಿದ ಯಾವ ಮಾತೂ ಹುಷಿಗೊಂಡಿಲ್ಲ ಅನ್ನುವ ಊರ ಜನರು ನಿತ್ಯವೂ ಆಡುವ ಮಾತು ಅವಳ ಕಿವಿಯಲ್ಲಿ ಗುಂಯ್‌ ಅನ್ನುತ್ತಿತ್ತು. ಈ ಮಳ್ಳ ಹುಡುಗಿಗೆ ಏನು ತಿಳಿದಿತು ಶನಿಯಾಗಿ ಹುಟ್ಟಿದ ಮಗು, ನನ್ನ ಮಗಳ ಜೀವಕ್ಕೆ ಕುತ್ತಾಗಿರುವ ಮಗು,  ಭೂಮಿಯ ಮೇಲೆ ನಾನು ಈ ಮಗುವನ್ನು ಇರಲು ಬಿಡುವುದಿಲ್ಲ, ನನಗೆ ನನ್ನ ಮಗಳ ಜೀವ ಮುಖ್ಯ ಎಂದು ರಂಗಜ್ಜಿ ಮನದಲ್ಲೀಯೇ ಲೆಕ್ಕಬರೆಯತೊಡಗಿದಳು. ಮಗಳ ಕಣ್ಣು ತಪ್ಪಿಸಿ ಆ ಹಸುಗೂಸನ್ನು ಉಸುರು ಗಟ್ಟಿಸಿ ಸಾಯಿಸಬೇಕೆಂದು ಅವಳ ಕ್ರೂರ ಮನಸ್ಸು ಲೆಕ್ಕಾಚಾರ ಹಾಕುತ್ತಿತ್ತು.

ರಂಗಜ್ಜಿ ದಿನ ಕಳೆದಂತೆ ಕೂಸಿನ ಮ್ಯಾಲ ನಿಷ್ಕಾಳಜಿ ಮಾಡುತ್ತಿರುವುದು ಮಗಳಾದ ದುಂಡವ್ವಳಿಗೆ ತಿಳಿಯದೇ ಇರಲಿಲ್ಲ. ಒಂದಿ ದಿನ ಗಂಡ ಮಗುವನ್ನು ನೋಡಲು ಬಂದಾಗ “ನನ್ನ ಇಲ್ಲಿಂದ ಕರೆದುಕೊಂಡು ಹೋಗು ನನಗೆ ಇಲ್ಲಿ ಜೀವ ಗಮಿಸುತ್ತಿಲ್ಲ, ನಿನ್ನ ನೆನಪು ನನ್ನ ಹೆಚ್ಚು ಕಾಡುತ್ತದೆ, ಅಲ್ಲಿ ಅತ್ತೆ ಮಾವಂದಿರು ಇರ್ತಾರೆ ನನಗೆ ಅಲ್ಲಿ ಇದ್ರೆ ಹೊತ್ತು ಹ್ವಾದದ್ದೇ ತಿಳಿಯುದಿಲ್ಲ” ಎಂದು ಹೇಳುತ್ತ ದುಂಡವ್ವ ಸಣ್ಣಗೆ ಮೋತಿ ಮಾಡಿ ಗಂಡನ ಮುಂದೆ ನಾಕು ಹಿನಿ ಕಣ್ಣೀರು ಸುರಸಿದಳು.  ಹೆಂಡತಿ ಅಷ್ಟು ಹೇಳಿವುದೇ ಮಂಜಣ್ಣನಿಗೆ ಬೇಕಿತ್ತು. ಅವನು ಕೂಡಲೇ ಹೆಂಡತಿಯನ್ನು ಕರೆದುಕೊಂಡು ಹೋಗಲು ಸಜ್ಜಾದ. ರಂಗಜ್ಜಿ ಇವರ ಮಾತು ಕೇಳಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. “ಇರುವಾಕಿ ನಿನೊಬ್ಬಕಿನ ಮಗಳು ಅದು ಬ್ಯಾರೆ ಚೊಚ್ಚಲ ಹೆರಗಿ ಇನ್ನ ಪುಟ್ಟ ಪೂರ ಮೂರ ತಿಂಗಳೂ ಪೂರ್ಣಗೊಂಡಿಲ್ಲ. ನನ್ನ ಮನಿ ಜಂತಿ ಮನಿ  ಹಾಳಾಗಿ ಹೋಗಿದೆ ಅನ್ನುವ ಕಾರಣಕ್ಕ ನೀವು ಹಿಂಗ ನಿರ್ಧಾರ ಮಾಡಿರೇನು?” ಎಂದು ಗಂಗಜ್ಜಿ ಅಳುತ್ತಲೇ ನುಡಿದಳು.  “ನೀವು ಹಿಂಗ ಹ್ವಾದ್ರ ಊರ ಮಂದಿ ನನ್ನ ಬಗ್ಗೆ ಏನು ಅಂದುಕೊಂಡಾರು. ಇದ್ದ ಒಬ್ಬಾಕಿ ಮಗಳ ಬಾಣಿತನ ಮಾಡಲಾರ್ದ ಕಳಸಿದ್ಳು ಅಂತ ಊರಿಗೂರೆ ಆಡಕೋತಾರವ್ವಾ. ನಾನು ಬಡವಿ ಅಂತ ಹಿಂಗ ಅಂತಿರೇನು” ಅಂತ ರಂಗಜ್ಜಿ ಅಳುವುದನ್ನು ನೋಡಿದ ದುಂಡವ್ವನ ಹೊಟ್ಟೆಯಲ್ಲಿ ಕಾರಕಲಿಸಿದಂತೆ ಆಯಿತು. ಅಳಿಯ ಮಂಜಣ್ಣ ಅತ್ತಿಗೆಗೆ ಸಮಾಧಾನ ಹೇಳಿ “ನೀನು ಯಾವಗ ಕಳಸ್ತಿಯೋ ಅವಾಗ ಕರ್ಕೊಂಡು ಹೋಗುತ್ತೇನೆಂದು” ಹೇಳಿ ಹೊರಟು ಹೋದ. 

“ಯಾಕವ್ವಾ ನನ್ನ ಮಗಾ ಒಂದ ತಟಗ ಕಪ್ಪ ಅದಾನಂತ್ಹೇಳಿ ಅವನ ಮ್ಯಾಲ ನಿನಗ ಪ್ರೀತಿ ಕಮ್ಮಾಗೆತೇನು?” ದುಂಡವ್ವ ಹಸಿಗ್ವಾಡ್ಯಾಗ ಹಳ್ಳ ಒಗದ್ಹಂಗ ಮಾತಾಡಿದಳು.  ಮಗಳಾಡಿದ ಆ ಮಾತು ಕೇಳಿ ರಂಗಜ್ಜಿ ಎದಿಗೆ ಡಬ್ಬನ ಚುಚ್ಚಿದಂತಾಯಿತು. ಮಗಳಿಗೆ ತಾನು ಮಾಡುವುದು ಅರ್ಥವಾಗಿದೆ, ಅದಕ್ಕೆ ಅವಳು ಗಂಡನ ಮನೆಗೆ ಹೋಗಲು ನಿರ್ಧರಿಸದ್ದಳು ಅನ್ನುವ ಅರಿವು ಮೂಡಿತು. “ಈ ಕರಿಬಾಡ್ಯಾಗೇನ  ಹ್ವಾರೆ ಐತಿ ಹಾಲ ಕುಡಿಯಾಂವಾ ಬರಿಗುಂಡಿ ಬಿಟಗೊಂದ ತೊಟ್ಟಲದಾಗ ಬಿಳಾಂವಾ, ನನ್ನ ಮಗಳ ನೀ ಚೆಂದ ಇದ್ರ ಅಂವೂ ಚಂದ ಇರ್ತಾನವ್ವಾ” ಅಂತ ಏನೇನೋ ರಂಗಜ್ಜಿ ಹೇಳಲು ಪ್ರಯತ್ನಿಸಿ  ಅರ್ಥವಿಲ್ಲದ ಮಾತು ಹೇಳಿ ಮತ್ತೊಮ್ಮೆ ಮಗಳ ಮುಂದೆ ಸೋತಳು. ಆದರೂ ತನ್ನವ್ವನ ಮ್ಯಾಲ ದುಂಡವ್ವಗ ಅನುಮಾನ ಮೂಡಿತ್ತು. “ಯಾಕ ನಮ್ಮ ಅವ್ವ ನನ್ನ ಮಗನ ಜಾಗಜೂಗ ಮಾಡ್ತಿಲ್ಲಾ, ಯಾಕ ಮುದ್ದಾಡ್ತಿಲ್ಲಾ, ಅಕಿಗೆ ಮಕ್ಕಳಂದ್ರ ಭಾಳ ಪ್ರೀತಿ ಅಂತಾದರಾಗ ನನ್ನ ಹೊಟ್ಯಾಗ ಹುಟ್ಟಿದ ಮಗನ ಮ್ಯಾಲ ಅಕಿ ಪ್ರೀತಿ ತೋರಸತಿಲ್ಲಂದ್ರ ಏನು ಅರ್ಥ?” ದುಂಡವ್ವನ ತಲೆಯಲ್ಲಿ ನೂರೊಂದು ಪ್ರಶ್ನೆಗಳು ಬುಗುರಿಯಂತೆ ಗಿರಗಿರನೇ ಸುತ್ತತೊಡಗಿದವು.

“ಇದೊಂದ ಹೆರಗಿ ಚಂದ್ಹಂಗ ಮಾಡವ್ವ ಮುಂದಿನ ಹೆರಿಗೆಗೆ ನಾನು ಈ ಊರ ಸನಿಹಕ್ಕೂ ಬರಂಗಿಲ್ಲ” ಮಗಳಂದ ಮಾತು ಕೇಳಿ ರಂಗಜ್ಜಿ ಎದಿ ಛಿದ್ರವಾದಂತೆನಿಸಿತು. ಮಗಳು  ತನ್ನನ್ನು ತಿರಸ್ಕರಿಸುತ್ತಿದ್ದಾಳೆ ಅನ್ನುವ ಭಾವನೆ ಮೂಡಿದತು. ಜೋತಿಷಿ ಹೇಳಿದ ಮಾತು ಕೇಳಿ ರಂಗವ್ವ ಮಗಳನ್ನು ತಬ್ಬಿಕೊಂಡು  ಅಳಬೇಕೆಂದಳು.  ಜೋತಿಷಿ ಹೇಳಿದ ಮಾತು ಅವಳ ಕಿವಿಯಲ್ಲಿ ಹಾಕಿದ್ರೆ ಕೊನೆತನಕ ದುಂಡವ್ವ ಕೊರಗಿ ಕೊರಗಿ ಸವಿಯುತ್ತಾಳೆಂದು ರಂಗಜ್ಜಿ ಮಗಳಿಗೆ ಹೇಳದೇ ಆ ಮಾತನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ತಾನೂ ದಿನವೂ ಕೊರಗುತ್ತಿದ್ದಳು.

“ನಿನ್ನ ಇನ್ನೊಂದ ಹೆರಗೆ ಆಗುವರಿಗೂ ನಾನಿದ್ದರ ಮಾಡ್ತಿನಿ ನಾನೂ ನಿಮ್ಮಪ್ಪ ಹ್ವಾದ ಜಾಗಕ್ಕ ಹ್ವಾದ್ರ ನೀನು ಗಂಡನ ಮನೆಯಲ್ಲಿಯೇ ನಿನ್ನ ಎರಡನೇ ಹೆರಗೆ ಮಾಡಿಕೊ ಮಗಳೆ” ಎಂದು ಅವರವ್ವ ಆಡಿದ ಮಾತು ಕೇಳಿದ ದುಂಡವ್ವನ ದುಃಖದ ಕಟ್ಟೆ ಒಡೆದು ಬಿಕ್ಕತೊಡಗಿದಳು. “ಅವ್ವಾ ಹಿಂಗ್ಯಾಗ ಮಾಡಾಕತ್ಯಾಳ? ನನ್ನ ಮಗನ ಮ್ಯಾಲ ಯಾಕ ದ್ವೇ಼ಷಾ ಮಾಡ್ತಾಳಾ?” ಅನ್ನುವ ಪ್ರಶ್ನೆ  ದುಂಡವ್ವನ ಎದೆಯಲ್ಲಿ ಖಾಯಂ ಹಾಗೇ ಉಳಿದುಕೊಂಡು ಅಕಿಯ ನೆಮ್ಮದಿ ನಾಪತ್ತೆಯಾಗಲು ಕಾರಣವಾಯಿತು.

ದುಂಡವ್ವ ಒಂಬತ್ತು ತಿಂಗಳು ಆಗುವುದನ್ನೇ ಲೆಕ್ಕ ಹಾಕತೊಡಗಿದಳು. ಕಡೆಗೂ ಕಾದು ಕಾದು ದುಂಡವ್ವಳ ಪಾಲಿಗೆ ಆ ದಿನ ಬಂದೇ ಬಿಟ್ಟಿತು. ಗಂಡನ ಮನೆಗೆ ಹೋಗಿ ಅತ್ತೆ ಮಾವಂದಿರೊಡನೆ ಚೆಂದಾಗಿ ಇದ್ದರಾಯಿತು. ಅವ್ವ ಅದ್ಯಾಕೋ ಒಂದು ರೀತಿ ಇದ್ದಾಳೆ. ಇಲ್ಲಿಂದ ಮೊದಲು ಕಾಲ್ಕೀಳಬೇಕು ಅಂದುಕೊಂಡಳು. ರಂಗಜ್ಜಿ ಈ ಕೆಟ್ಟ ಹುಳು ಬಂಗಾರದಂತ ನನ್ನ ಮಗಳ ಜೀವಕ್ಕೆ ಮುಳ್ಳಾಗಿದೆ. ಒಂಬತ್ತು ತಿಂಗಳಿದ್ದರೂ ಅದನ್ನು ನನ್ನ ಕೈಯಿಂದ ಕೊಲ್ಲಲಾಗಲಿಲ್ಲ. ಈ ಅನಿಷ್ಟ ನನ್ನ ಮಗಳನ್ನು ನುಂಗಿ ನೀರು ಕುಡಿಯುತ್ತದೆ. ಈ ವಿಷಯ ಮಗಳಿಗೆ ಹೇಗೆ ಹೇಳಲಿ. ಮಗಳು ಜೋತಿಷಿಯ ಮಾತು ನಂಬುವುದಿಲ್ಲ. ನಂಬಿದರೂ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಯಾವ ತಾಯಿಯಾದರೂ ಕತ್ತು ಹಿಚಿಕಿ ಕೊಂದಾಳು? ಅಯ್ಯೋ ಏನು ಮಾಡಬೇಕು ಶಿವನೇ? ಎಂದು  ರಂಗಜ್ಜಿ ಎದೆಯಲ್ಲಿದ್ದ ತನ್ನ ನೋವಿನ ಮುಲಾಮುಗೆ ಔಷಧಿ ಹುಡುಕುತ್ತಿದ್ದಳು.

                                                             ******

ರಾಘಪ್ಪ ದಿನ ಕಳದಂಗ ಭಾಳ ಚುರುಕಾದ ಅವರಜ್ಜನ ಬಿಟ್ಟು ಕೆಳಗೆ ಇಳಿಯುತ್ತಿರಲಿಲ್ಲ. ಅವರಜ್ಜಿ ತಿನಿಸಿದ್ರೆ ಮಾತ್ರ ತಿನ್ನಾಂವಾ. ದುಂಡವ್ವ ಗಂಡನ ಮನಿಗೆ ಹೋದ ಮೇಲೆ ಆಗಾಗ ಅವರವ್ವ ತನ್ನ ಮಗನ ಮೇಲೆ ತೋರದ ಅಕ್ಕರೆಯನ್ನ ನೆನೆದು ಮರಗುತ್ತಿದ್ದಳು. ಒಳಗೊಳಗೆ ಕೊರಗುತ್ತಿದ್ದಳು. ಅವರತ್ತಿ ಮಾವರೊಂದಿಗೆ ಆಡುವ ಮಾತನ್ನು ಕೇಳಿಸಿಕೊಂಡಾಗ ಅವರವ್ವನ ಮೇಲಿನ  ದಿಮಿದಿಮಿ ಕೋಪ ಉಕ್ಕುತ್ತಿತ್ತು. 

ರಾಘವ ಐದು ವರುಷದ ಮೇಲೆ ಐದು ತಿಂಗಳದಾಂವ ಆದ. ಆಗಂತು ರಂಗಜ್ಜಿ ಒಂದೇ ಹೊತ್ತು ಉಂಡ್ರೇ ಉಂಡ್ಳು ಉಣದಿದ್ರೇ ಇಲ್ಲ. ಜೋತಿಷಿ ಹೇಳಿದ ಸಮಯ ಹತ್ತಿರಕ್ಕೆ ಬರತೊಡಗಿದೆ ಎಂದು ರಂಗಜ್ಜಿ ಗಾಬರಿಗೆಟ್ಟಳು. ಮಗಳಿಗೆ ಏನಾಗುತ್ತದೆಯೋ  ಏನೋ ಎಂದು ಹಳವಂಡಮಾಡಿಕೊಂಡಿದ್ದಳು. ಮಗಳ ಮನೆಗೆ ಹೋಗಿ ಅವಳನ್ನು ಕಾಣಬೇಕೆಂದು ಉಟ್ಟ ಬಟ್ಟೆಯಲ್ಲಿ ಹುಚ್ಚಿಯಂತೆ ಬಂದಿದ್ದಳು. ಸೊರಗಿದ ಅವ್ವನ ಗತಿ ಕಂಡು ಮಗಳಿಗೆ ಕಣ್ಣುತುಂಬಿದವು. ಮಗಳನ್ನು ಮಾತ್ರ ಚೌಕಾಸಿ ಮಾಡುತ್ತಿದ್ದಳು. ಮೊಮ್ಮಗನತ್ತ ತಿರಗಿಯೂ ನೋಡಲಿಲ್ಲ. ಮಗಳ ಕೈ ಮುಟ್ಟಿ ಮೈ ಮುಟ್ಟಿ ಚಂದ್ಹಂಗ ಊಟಾಮಾಡು ಚಲೋತಂಗಿರು, ನನ್ನ ಕಡೆ ಚಿಂತಿ ಮಾಡಬ್ಯಾಡ ಅಂತ ಹೇಳಿ ಮರಳಿ ಊರ ಹಾದಿ ತುಳಿದಳು. ದುಂಡವ್ವಳಿಗೆ ಅವರವ್ವ ಒಂದು ಉತ್ತರವಿಲ್ಲದ ಬರೀ ಪ್ರಶ್ನೆಯಾಗಿ ಕಾಣತೊಡಗಿದಳು.

ಜೋತಿಷಿ ಹೇಳಿದಂತೆ  ನಿನ್ನ ಮಗಳು ಆ ಹುಡುಗ ಆರು ವರುಷ ಆದ ಮೇಲೆ ಒಂದು ದಿನವವೂ ಹೆಚ್ಚು ಬದಕುವುದಿಲ್ಲ ಅಂದ ಮಾತು ರಂಗವ್ವನ ಎದೆಯಲ್ಲಿ ದಿನವೂ ಡಂಗುರ ಹೊಡೆದಂತೆ ಕೇಳಿಸುತ್ತಿತ್ತು. ಜೋತಿಷಿ ಹೇಳಿದಂತೆ ದುಂಡವ್ವನ ಮಗನಿಗೆ ಆರು ವರುಷಕ್ಕೇ ಆರೇ ದಿನ ಬಾಕಿ ಉಳದಿತ್ತು. ಆಗಂತು ರಂಗಜ್ಜಿ ಹಾಸಿಗೆ ಹಿಡಿದು ಮಲಗಿದ್ದಳು. ಊರ ಮಂದಿಯಿಂದ ಸುದ್ದಿ ತಿಳಿದ ಕೂಡಲೆ ಮಗಳು ಮತ್ತು ಅಳಿಯ ಬಾಗಲಕೋಟೆಯ ದವಾಖಾನಿಯಲ್ಲಿ ನಾಕು ದಿನ ಇದ್ದು ರಂಗಜ್ಜಿಯನ್ನು ನೀಟು ಮಾಡಿಕೊಂಡು ಮನೆಗೆ ಬಂದರು. ಆಗ ಆರು ವರುಷಕ್ಕೆ ಒಂದೇ ದಿನ ಬಾಕಿ ಇತ್ತು.  ಈ ಒಂದು ದಿನದಲ್ಲಿ ಮಗಳ ಪ್ರಾಣ ಪಕ್ಷಿ ಹಾರಿ ಹೋಗಬಹುದೇ? ಜೋತಿಷಿ ತನ್ನ ಶಾಸ್ತ್ರದ ಮೇಲೆ ಆಣೆ ಮಾಡಿ ಹೇಳಿದ್ದಾನೆ. ಮತ್ತೊಮ್ಮೆ ಆ ಮಾತು ನೆನೆಸಿಕೊಂಡು ರಂಗಜ್ಜಿಯ ಎದೆ ಬಡಿತ ಜೋರಾಯಿತು.

“ನೀವು ಇಂದೊಂದು ದಿನ ಇಲ್ಲೇ ಇರೀ ನಾಳೆ ಬೆಳಗಾದಮ್ಯಾಲ ಹೋಗಿರಂತೆ, ನನಗಿನ್ನು ಮೈಯ್ಯಾಗ ಪಾಡ ಅನಸಿಲ್ಲ” ಅಂತ ನೇವಾ ಹೇಳಿ ಅಳೆಯ ಮತ್ತು ಮಗಳಿಬ್ಬರನ್ನು ರಂಗಜ್ಜಿ ತನ್ನ ಮನೆಯಲ್ಲಿಯೇ ಉಳಿಸಿಕೊಂಡಳು. ಹಗಲು ಜಾರಿತು ರಾತ್ರಿ ಅಷ್ಟೇ ಬಾಕಿ ಉಳದಿತ್ತು. ಇಡೀ ರಾತ್ರಿ ರಂಗಜ್ಜಿ ಕಣ್ಣಿಗೆ ಕಣ್ಣು ಹಚ್ಚಲಿಲ್ಲ. ಅಳಿಯ ಮಗಳಿಬ್ಬರೂ ಮಲಗಿ ನಿದ್ದೆ ಮಾಡುತ್ತಿದ್ದರು. ಹಾವು ಕಚ್ಚಿ ಸಾಯುವಳೋ?, ಚೋಳು ಕಚ್ಚಿ ಸಾಯಿವಳೋ ಅಥವಾ ಹೃದಯಘಾತದಿಂದ ಸಾಯುವವಳೋ ? ಅಯ್ಯೋ ದೇವರೇ ನನ್ನ ಮಗಳಿಗೆ ಇದೆಂಥ ಪರೀಕ್ಷೆಯನ್ನು ಮಾಡುತ್ತಿರುವೆ?  ಎಂದು ದೇವರನ್ನು ಬೈಯ್ಯುತ್ತ ಅಲ್ಲೇ ವರಗಿದಳು. ಬೆಳಗ್ಗೆ ಎದ್ದಾಗ ಸೂರ್ಯ ನಾಕು ಮಾರು ದೂರ ಬಂದಿದ್ದ. ದುಂಡವ್ವ ಕಸ ಮುಸರಿ ಮಾಡಿ, ಅವರವ್ವಳಿಗೆ ಬಿಸಿನೀರು ಕಾಯಿಸಿ, ಗೊಡೆ ಮೇಲಿರುವ ಶಿವ ಪಾರ್ವತಿಯ ಪೋಟೋಗೆ ಊದಬತ್ತಿ ಬೆಳಗಿ ಪೂಜೆ ಮಾಡುತ್ತಿದ್ದಳು. ಅಳಿಯ ಹೊರಗಡೆ ಯಾರೊಂದಿಗೆ ಮಾತನಾಡುತ್ತ ಕುಳಿತಿದ್ದ. 

ದಿಗ್ಗನೆ ಎದ್ದ ರಂಗಜ್ಜಿ ಮಗಳು ಪೂಜೆ ಮಾಡುವುದು ಕಣ್ಣತುಂಬಿಕೊಂಡು ಹಾಸಗಿಯಿಂದಲೇ ಗೋಡೆಯ ಮೇಲೆ ಇದ್ದ ಪರಶಿವನಿಗೆ ಕೈಮುಗಿದಳು. ಜೋತಿಷಿಯ ಮಾತು ಸುಳ್ಳೆಂದು ಕಚಿತವಾದ ಮೇಲೆ ಹಾಸಗಿಯಿಂದೆದ್ದವಳೆ ಹೋಗಿ ಮಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದಳು. ಅಳೆಯ ಅವಳ ಅತ್ತೆಯ ಅಳುವ ದಿನಿ ಕೇಳಿ ಒಳ ಬಂದನು. ಏನಾಯಿತೆಂದು ಕೇಳಿದ .ರಂಗಜ್ಜಿ ಏನೊಂದನ್ನೂ ಹೇಳದೇ ಬರೀ ಅಳುತ್ತಿದ್ದಳು. ಮಗಳು “ಯಾಕಬೆ ಯವ್ವಾ ಹಿಂಗ್ಯಾಕ ಮಾಡಾಕತ್ತಿ ಏನಾದ್ರೂ ಕೆಟ್ಟ ಗನಸುಗಿನಸು ಬಿತ್ತೆ? ಹಿಂಗಾಕ ಹುಚ್ಚಿಗತೆ ಮಾಡಾಕತ್ತಿ?” ಮಗಳೂ ಕೂಡ ಅವರವ್ವನೊಂದಿಗೆ ಕಣ್ಣೀರಿಟ್ಟಳು. “ನನ್ನ ತಪ್ಪು ಕ್ಷಮಿಸವ್ವೋ ಮಗಳೇ” ಎಂದು ರಂಗಜ್ಜಿ  ಮಗಳ ಕಾಲ ಮೇಲೆ ಬಿದ್ದು ಹೊರಾಳಡತೊಡಗಿದಳು. “ಯಾಕಬೇ ಯವ್ವಾ ನೀನೇನು ಅಂತಾ ತಪ್ಪ ಮಾಡಿ” ಎಂದು ಅವಳ ಬುಜ ಹಿಡಿದು ಅಲುಗಿಸಿ ಅಲುಗಿಸಿ ಕೇಳತೊಡಗಿದಳು.  ರಂಗಜ್ಜಿ ಮಾಡುವ ಆಟ ಅಳಿಯ ಮಗಳಿಬ್ಬರಿಗೂ ಒಂದು ದೊಡ್ಡ ವಗಟಾಗಿ ಕಾಣತೊಡಗಿತು.  ಬಿಸಿನೀರು ತಂದು ಅವರವ್ವನ ಮೋತಿ ತೊಳೆದು ತನ್ನ ಸೆರಗಿನಿಂದ ಅವರವ್ವನ ಮೋತಿ ವರಸಿದಳು. ಕುಡಿಯಲು ಒಂದು ಲೋಟಾದಲ್ಲಿ ನೀರು ಕೊಟ್ಟಳು.

“ನಾನು ಮೊಮ್ಮಗಗ ಅನ್ಯಾ ಯ ಮಾಡಿದೆ” ಎಂದು ಒಂದು ವಾಕ್ಯ ಪೀಠಿಕೆ ಹಾಕಿದಳು. “ಯಾರಿಗೆ ಅನ್ಯಾಯ ಮಾಡಿದೆ?” ಅಚ್ಚರಿಯಿಂದ ದುಂಡವ್ವ ಅಲುಗಾಡಿಸಿ ಮತ್ತೆ ಕೇಳಿದಳು. “ಏನು ಮಾಡಿದೆ ಹೇಳವ್ವೋ” ಎಂದು ತಾಯಿ ಮಾಡುವ ಹುಚ್ಚಾಟ ನೋಡಿ  ಕಣ್ಣಿರಿಡುತ್ತ “ನನ್ನ ಮಗಾ ನಮ್ಮೂರಾಗ ಅದಾನ ಅಂವಗ ನೀ ಏನ್‌ ಮಾಡಿದೆ? ಹಿಂಗ್ಯಾಕ ಒಂದ ಬಿಟ್ಟ ಒಂದ ಮಾತಾಡಾಕತ್ತಿ. ನಿನ್ನ ತಲಿ ಸುದ್ದಿಲ್ಲ ನಡಿ ನಡಿ ಮೊದಲ ಒಂದ ಚರಗಿ ಜಳಕಾ ಮಾಡು ದವಾಖಾನಿಗೆ ಹೋಗೂನು” ಎಂದು ದುಂಡವ್ವ ಅವರವ್ವನಿಗೆ ಹೇಳಿದಳು. “ನನಗ ಹುಚ್ಚಗಿಚ್ಚ ಹಿಡದಿಲ್ಲವ್ವೋ ಆ ಜೋತಿಷಿ ಮಾತ ಕೇಳಿ ನನ್ನ ಮೊಮ್ಮಗನ್ನ ಮ್ಯಾಲ ಒಂದ ಗುಲಗಂಜಿಯಷ್ಟು ಪ್ರೀತಿ ತೋರಲಿಲ್ಲಾ. ಮುದ್ದ ಮಾಡಲಿಲ್ಲಾ, ಹಾಳಾದ ಜೋತಿಷಿ ಮನಿಗೆ ಬೆಂಕಿಬೀಳಲಿ” ಎಂದು ಕೈ ಲಟಗಿ ಮುರಿಯತುಡಗಿದಳು.

ಸಮಾಧಾನದಿಂದ ಜೋತಿಷಿ ಹೇಳಿದ ಮಾತನ್ನು ಅಳಿಯ ಮತ್ತು ಮಗಳಿಬ್ಬರಿಗೂ ಹೇಳಿ ಇಷ್ಟು ದಿನ ತಾನು ಮೊಮ್ಮಗನಿಗೆ ಮಾಡಿದ ಬೇದವನ್ನು ಅವರ ಮುಂದೆ ಬಿನೈಸಿಕೊಂಡಳು. ಆ ಹಾಳಾದ ಮನಿ ಮುರಕ ಜೋತಿಷಿ ಮಾತ  ಕೇಳಕೊಂಡ ನನ್ನ ಹಡದವ್ವ ನನ್ನ ಮಗನ ಮ್ಯಾಲ ಪ್ರೀತಿತೋರಲಿಲ್ಲವೆಂದು ಕಣ್ಣೀರಾದಳು. ಎಲ್ಲರಿಗೂ ಎಲ್ಲ ಅರಿವಾದ ಮೇಲೆ ತಾಯಿ ಮಗಳಿಬ್ಬರ ಮನಸ್ಸು ಹೂವಿನಷ್ಟು ಹಗುರವಾದವು. ನಾನೂ ನಿಮ್ಮ ಜೋಡಿ ಊರಿಗೆ ಬರ್ತಿನಿ ನನ್ನ ಮೊಮ್ಮಗನ ನೋಡತಿನಿ ಎಂದು ತುದಿಗಾಲಲ್ಲೆ ನಿಂತಿದ್ದ ರಂಗಜ್ಜಿಯನ್ನು ಕರೆದುಕೊಂಡು ದುಂಡವ್ವ ಅವರ ಊರಿಗೆ ಬಂದಳು.

                                                                            ****

ರಾಘಪ್ಪ ಅವರ ಅಜ್ಜಿ ರಂಗಜ್ಜಿಯನ್ನು ಕಂಡ ಕೂಡಲೆ ಮೊದಮೊದಲು ದೂರ ಸರೆದು ನಿಲ್ಲತೊಡಗಿದ. ದುಂಡವ್ವ “ನಿಮ್ಮ ಅಜ್ಜಿ ಅಕಿ, ಅಕಿ ಹಂತೇಕ ಹೋಗ್ಬೇಕಪಾ” ಎಂದು ತಿಳಿ ಹೇಳಿದಾಗ ಹುಡುಗ ಸಣ್ಣಗೆ ಸರಿದು ಹೋಗಿ ಅವರಜ್ಜಿ ತೊಡೆಯ ಮೇಲೆ ಕುಳಿತುಕೊಂಡ. ರಂಗಜ್ಜಿ ತನ್ನ ಮೊಮ್ಮಗನಿಗೆ ಆರು ವರುಷದ ಪ್ರೀತಿಯನ್ನು ಆರು ನಿಮಿಷದಲ್ಲಿ ಹಣಸಿದಳಿ. ಅವಳ ಮಮತೆಯ ಪರಿಗೆ ರಾಘವ ಅವರ ಅಜ್ಜಿಯ ಕೈಹಿಡಿದುಕೊಂಡು ಅಡ್ಡಾಡತೊಡಗಿದ. ಅಜ್ಜ ಮೊಮ್ಮಗನ ಪ್ರೀತಿ ಕಂಡು ಮಂಜಣ್ಣ ಹಿರಿಹಿರಿ ಹಿಗ್ಗಿದ. ತನ್ನ ಮಗನನ್ನು ಅವರ ಅಜ್ಜಿ ಹತ್ತಿರವೇ ಬೆಳಸಬೇಕು. ಶಿವನೂರಿನಲ್ಲಿ ಶಿವಶರಣರು ಹೆಚ್ಚು. ಶಿವಭಕ್ತರೂ ಹೆಚ್ಚು.  ಆ ಊರಲ್ಲಿ ಬೆಳದರೆ ಮಗಾ ಸಂಸ್ಕಾರ ಹೊಂದುವನೆಂದು ಮಂಜಣ್ಣನ ಮನಸ್ಸು ತಾಳೆ ಹಾಕತೊಡಗಿತು.

         “ನೀನು ಊರಾಗ ಒಬ್ಬಕಿ ಇರ್ತಿ ನಿನ್ನ ಜೋಡಿಗೆ ರಾಘವನೂ ಕರ್ಕೊಂಡ ಹೋಗು. ನಿನಗ ಅಂವ ಜೋಡಾಗಿರ್ತಾನೆಂದು” ಅಳೆಯ ಹೇಳಿದ್ದು ಕೇಳಿದ ರಂಗಜ್ಜಿಗೆ ತಂಬಿಗೆ ಹಾಲು ಕುಡಿದಷ್ಟು ಆನಂದವಾಯಿತು. ದುಂಡವ್ವಳನ್ನು ಒಂದು ತಿಂಗಳು ಕರೆದುಕೊಂಡು ಹೋಗು  ಎಂದು ಮಂಜಣ್ಣ  ಹೇಳಿದಾಗ ಗಂಡನ ಮಾತಿನಂತೆ ಮಗನ್ನು ಕರೆದುಕೊಂಡು ದುಂಡವ್ವ ಅವರವ್ವನ ಕೂಡಿ ಶಿವನೂರಿಗೆ ಹೋದಳು.

      ರಾಘವ  ಶಿವನೂರಿ ಶಾಲೆಯಲ್ಲಿ ಶ್ರದ್ಧೆಯಿಂದ ಓದತೊಡಗಿದ. ಹದಿನೆಂಟನೆ ವಯಸ್ಸಿಗೆ ಬರುವ ಹೊತ್ತಿಗೆ ವಚನ ಶಾಸ್ತ್ರ, ವೇದಶಾಸ್ತ್ರ, ಶಿವತತ್ವಸಾರ, ಓದಿಕೊಂಡು ಮೇದಾವಿಯಾಗಿದ್ದ. ರಾಘವ ಹಾಡುಗಾರಿಕೆಯಿಂದಲೂ ಜನಮನ ಗೆದ್ದು ಸುತ್ತೂರಲ್ಲಿ ಹೆಸರು ಮಾಡಿದ. 

      ಶ್ರಾವಣ ಮಾಸದಲ್ಲಿ ರಾಘವ ಹಾಡುವ ವಚನ, ತತ್ವಪದ, ಕೇಳಲು ಸುತ್ತ ಹತ್ತೂರಿನ ಜನರು ಕಿಕ್ಕಿರಿದು ಶಿವನೂರಿನ ಶಿವ ದೇವಾಲಯದಲ್ಲಿ ನೆರೆಯುತ್ತಿದ್ದರು. ರಾಘವ ಹಾಡಲು ತೊಡಗಿದರೆ ಇಡೀ ಸಭೆಯೇ ಸ್ತಬ್ದವಾಗುತ್ತಿತ್ತು. ಅದರಲ್ಲೂ ಅವನು ಹಾಡುವ ಶಿವಪದ ಹಾಡಿಗೆ ಎಲ್ಲರೂ ತಲೆ ದೂಗುತ್ತಿದ್ದರು.

 “ಶಿವಲೋಕದಿಂದ ಒಬ್ಬ ಸಾದು ಬಂದಾನವ್ವಾ 

ಒಬ್ಬ ಯೋಗಿ ಬಂದಾನವ್ವಾ

 ಶಿವನಾಮ ಶಬುದಾ ಕೇಳಿ ಅಂವ ಅಲ್ಲೆ ನಿಂತಾನವ್ವಾ”

ಹೀಗೆ ಭಕ್ತಿಪರವಶನಾಗಿ ರಾಘವ ಹಾಡುವ ಹಾಡನ್ನು ಕೇಳಿ ರಂಗಜ್ಜಿ ಗಳಗಳ ಅಳುತ್ತಿದ್ದಳು. ಹಿಂತಹ ಶಿವಭಕ್ತನನ್ನು ಕೊಂದು ನಾನು ನರಕ್ಕಕ್ಕೆ ಹೊಕ್ಕಿದ್ದೆ ಪಾಪಿ! ಜೋತಿಷಿ ಹೇಳಿದ ಮಾತನ್ನು ಮತ್ತೊಮ್ಮೆ ಮೆಲಕು ಹಾಕಿ ರಂಗಜ್ಜಿ ತನ್ನ ಮುದಿಗಣ್ಣಿಂದ ನಾಕು ಹನಿ ಕಣ್ಣೀರು ಉದರಿಸಿದಳು. ಹೇಳಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿದಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಅನ್ನುವ ಸತ್ಯ ಸಂದೇಶ ಅವಳ ಮನದಲ್ಲಿ ಮಿಂಚಿನಂತೆ ಮೂಡಿ ಮಾಯವಾಯಿತು.

‍ಲೇಖಕರು Admin

7 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading