-ಇಂದಿರಾ ಮೋಟೆಬೆನ್ನೂರ
ನಂಜಿನ ಹೊರತಾಗಿ
ಪ್ರೀತಿಯಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ದ್ವೇಷದ ಕಾವಿನ ಹೊರತಾಗಿ
ಹೂವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಚುಚ್ಚುವ ಮುಳ್ಳಿನ ಹೊರತಾಗಿ
ನಗುವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕೊರೆವ ಅಳುವಿನ ಹೊರತಾಗಿ
ನಲಿವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಸುಡುವ ನೋವಿನಹೊರತಾಗಿ
ಬೆಳಕಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕತ್ತಲ ತಾವಿನ ಹೊರತಾಗಿ
ನಂಬಿಕೆಯಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಮೋಸದ ಸಾವಿನ ಹೊರತಾಗಿ
ಜೇನಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕಹಿ ಬೇವಿನ ಹೊರತಾಗಿ
ಅಮೃತವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಉರಿವ ನಂಜಿನ ಹೊರತಾಗಿ
ಬೆಳದಿಂಗಳಾಗುವೆ ಎಂದ ಶಶಿ ಬೇರೇನೂ ಕೊಡಲಿಲ್ಲ ಕಾರಿರುಳ ಕಾನನ ಹೊರತಾಗಿ
ಇಂದುವಿನ ಭರವಸೆಯಾಗುವೆ ಎಂದ ಶಶಿ ಬೇರೇನೂ ಕೊಡಲಿಲ್ಲ ಶೋಕ ಗಾಯನ ಹೊರತಾಗಿ






0 Comments