ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಕ್‌ಫ್ರೂಟ್ 2026

ಜಾಕ್‌ಫ್ರೂಟ್ 2026 ಮತ್ತೊಮ್ಮೆ ಬೆಂಗಳೂರಿನಲ್ಲಿ ಸಂಗೀತದ ಅಲೆ ಎಬ್ಬಿಸಲಿದೆ
ದೇಶದಾದ್ಯಂತದಿಂದ ಬಂದ 200ಕ್ಕೂ ಹೆಚ್ಚು ಪ್ರತಿಭಾವಂತ ಯುವ ಸಂಗೀತಗಾರರ ಸಮ್ಮಿಲನ

ಬೆಂಗಳೂರು, ಜುಲೈ 2026: ಮಕ್ಕಳ ಸಂಗೀತಕ್ಕೆಂದೇ ಮೀಸಲಾದ ಭಾರತದ ಅಗ್ರಗಣ್ಯ ಉತ್ಸವ, ಭೂಮಿಜಾ ಟ್ರಸ್ಟ್‌ನ ಜಾಕ್‌ಫ್ರೂಟ್ 2026 ರ ಆಗಸ್ಟ್ 21 ರಿಂದ 23ರವರೆಗೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಸಂಗೀತದ ಅಲೆ ಎಬ್ಬಿಸಲಿದೆ. ದೇಶದ ಮೂಲೆಮೂಲೆಯಿಂದ ಬರುವ ಪ್ರತಿಭಾವಂತ ಪುಟಾಣಿ ಸಂಗೀತಗಾರರು, ಅವರಿಗೆ ಮಾರ್ಗದರ್ಶನ ನೀಡಲಿರುವ ದಾರ್ಶನಿಕ ಗುರುಗಳು, ಮತ್ತು ಸಂಗೀತ ಲೋಕದ ಘಟಾನುಘಟಿಗಳು, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ, ಮೂರು ದಿನಗಳ ಸಂಗೀತ ಕಾರ್ಯಕ್ರಮಗಳು, ಕಮ್ಮಟಗಳು, ಸಮುದಾಯ ಚಟುವಟಿಕೆಗಳು ಮತ್ತು ಹೃದಯಸ್ಪರ್ಶಿ ಸಂಗೀತಾನುಭವಗಳ ಸಂಭ್ರಮ ಸೃಷ್ಟಿಸಲಿದ್ದಾರೆ.

ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (PCPA) ಮತ್ತು ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ (IME) ಜೊತೆಗೂಡಿ ನಡೆಯುವ ಈ ಉತ್ಸವ, ಪುಟಾಣಿ ಪ್ರತಿಭೆಗಳ ಕಲಾ ಪಯಣಕ್ಕೆ ರೆಕ್ಕೆ ಕಟ್ಟುವ ತನ್ನ ಧ್ಯೇಯಕ್ಕೆ ಎಂದಿನಂತೆ ಬದ್ಧವಾಗಿದೆ. ಭಾರತದ ಶ್ರೇಷ್ಠ ಕಲಾವಿದರೊಂದಿಗೆ ಕಲಿಯುವ, ಒಟ್ಟಿಗೆ ಹಾಡುವ, ಅವರಿಂದ ಸ್ಫೂರ್ತಿ ಪಡೆಯುವ ಅಪರೂಪದ ಅವಕಾಶವನ್ನು ಈ ಯುವ ಸಂಗೀತಗಾರರಿಗೆ ಜಾಕ್‌ಫ್ರೂಟ್ ತೆರೆದಿಡುತ್ತದೆ. ಇಲ್ಲಿ ಹಾಡುವ, ವಾದ್ಯ ನುಡಿಸುವ ಪ್ರತಿ ಪುಟ್ಟ ಕಲಾವಿದನೂ 16 ವರ್ಷದೊಳಗಿನವರೇ.

ಉತ್ಸವ ನಿರ್ದೇಶಕಿ ವಿದುಷಿ ಶುಭಾ ಮುದ್ಗಲ್ ಅವರ ಕಲಾತ್ಮಕ ನಾಯಕತ್ವದಲ್ಲಿ, ಜಾಕ್‌ಫ್ರೂಟ್ ಇಂದು ಯುವ ಪ್ರತಿಭೆಗಳ ಪಾಲಿಗೆ ಭಾರತದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ವೇದಿಕೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಇದುವರೆಗಿನ ಎಲ್ಲ ಉತ್ಸವಗಳನ್ನೂ ಮೀರಿ ಈ ವರ್ಷ ಅತ್ಯಂತ ಮಹತ್ವಾಕಾಂಕ್ಷೆಯ ಆವೃತ್ತಿ ಅನಾವರಣಗೊಳ್ಳಲಿದೆ ಎನ್ನುವ ಭರವಸೆ ಜಾಕ್ ಫ್ರೂಟ್ 2026 ನೀಡುತ್ತದೆ.

ಉತ್ಸವದ ಕಿರೀಟಪ್ರಾಯ ನಿರ್ಮಾಣ, ಜಾಕ್‌ಫ್ರೂಟ್ ಸಾಂಗ್‌ಸ್ಟರ್ಸ್, ಭಾರತದ ಮೂಲೆಮೂಲೆಯಿಂದ 150 ಮಕ್ಕಳ ದನಿಗಳನ್ನು ಒಂದೇ ವೇದಿಕೆಗೆ ತಂದು, ಜನಪ್ರಿಯ ಹಾಡುಗಳ ಅದ್ಭುತ ಸಮೂಹಗಾನವಾಗಿ ಅರಳಲಿದೆ. ಶುಭಾ ಮುದ್ಗಲ್ ಮತ್ತು ಅನೀಶ್ ಪ್ರಧಾನ್ ಅವರ ಸಮರ್ಥ ನಿರ್ದೇಶನದಲ್ಲಿ ಮೂಡಿಬರುವ ಈ ಪ್ರಸ್ತುತಿಗೆ, ಬಿ ಜಯಶ್ರೀ, ವಾಸುಕಿ ವೈಭವ್, ಮೊಹಮ್ಮದ್ ಮುನೀಮ್ ನಜೀರ್/ ಅಲಿಫ್, ರಾಜೀಬ್ ದಾಸ್, ಧಮ್ಮರಕ್ಷಿತ್ ರಾಂದಿವೆ, ಅಸಿಂತಾ ಅಸುರ್, ರೋಶ್ನಿ ಅಸುರ್ ಮತ್ತು ಲತಾ ಕುಂಜ್ವಾಲ್ ಅವರಂತಹ ಅದ್ಭುತ ಸಂಗೀತಗಾರರ ಮಾರ್ಗದರ್ಶನವಿದೆ. ಇವರು ಯುವ ಸಂಗೀತಗಾರರಿಗೆ  ತರಬೇತಿ ನೀಡುವುದು ಮಾತ್ರವಲ್ಲದೇ ವೇದಿಕೆಯಲ್ಲಿ ಅವರನ್ನು ನಿರ್ದೇಶಿಸಲಿದ್ದಾರೆ. ಶಾಂತನು ಹರ್ಲೇಕರ್ ಸಂಗೀತ ಸಂಯೋಜನೆ, ಪ್ರವೀಣ್ ಡಿ ರಾವ್ ಅವರ ಆರ್ಕೆಸ್ಟ್ರಾ, ಎಂಡಿ ಪಲ್ಲವಿ ಕಥೆ ಹೆಣೆದು ಸಾಂಗ್‌ಸ್ಟರ್ಸ್‌ಗೆ ಜೀವ ತುಂಬಲಿದ್ದಾರೆ.

ಮತ್ತೊಂದು ಆಕರ್ಷಣೆ, ಮ್ಯೂಸಿಕಿಂಗ್ ಇಂಟು ದಿ ಫ್ಯೂಚರ್.  ಹದಿನಾಲ್ಕು  ವರ್ಷದೊಳಗಿನ  ಅದ್ವಿತೀಯ ಬಾಲ ಪ್ರತಿಭೆಗಳಿಂದ ಶುಭಾ ಮುದ್ಗಲ್ ಅವರು ಜ್ಯಾಕ್ ಫ್ರೂಟ್ ಗಾಗಿಯೇ ವಿಶೇಷವಾಗಿ ಸಂಯೋಜಿಸಿದ ಪ್ರದರ್ಶನ. ಅದಿತಿ ಗೊಗೊಯ್ ಅಸ್ಸಾಮಿ ಜಾನಪದ ಸಂಗೀತದ ಅದ್ಭುತ ಗಾಯನದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಲಿದ್ದಾರೆ. ದೇವಿಕಾ ಶರ್ಮಾ, ಯಶ್ ರಾಜ್ ಮತ್ತು ನಿಶಾಂತ್ ಗುಪ್ತಾ  ಮೂವರೂ ಕಲಾವಿದರು ಹಿಂದಿನ ಕಾಲದ ದಿಗ್ಗಜರು ಹಾಡಿದ್ದ ಅಮರ ಗಜಲ್‌ಗಳನ್ನು ತಮ್ಮದೇ ಶೈಲಿಯಲ್ಲಿ ಮರುಸೃಷ್ಟಿಸಲಿದ್ದಾರೆ. ಈ ಸಂಗೀತ ಸಂಜೆಗೆ ವಿನಯ್ ವಾರಣಾಸಿ ರೂವಾರಿ.

‘ಕಮಾಲ್ ಧಮಾಲ್‌’ನಲ್ಲಿ, ತಾಳವಾದ್ಯ ಪ್ರಪಂಚದ ಮಾಂತ್ರಿಕ ಅನೀಶ್ ಪ್ರಧಾನ್, ದೇಶದ 40 ಮಂದಿ ಪುಟಾಣಿ ಡ್ರಮ್ಮರ್‌ಗಳನ್ನು ಒಟ್ಟುಗೂಡಿಸಿ ಭಾರತದ ಜೀವಂತ ಜಾನಪದ ತಾಳವಾದ್ಯ ಪರಂಪರೆಗಳ ಸಂಭ್ರಮವನ್ನು ಸ್ಫೋಟಿಸಲಿದ್ದಾರೆ. ಪ್ರಸಿದ್ಧ ಕಥೆಗಾರ ಗೋಪಾಲ್ ದತ್ ಅವರ ಆಕರ್ಷಕ ನಿರೂಪಣೆಯಲ್ಲಿ ಪೋಣಿಸಲ್ಪಡುವ ಈ ಪ್ರದರ್ಶನ, ರಂಗಭೂಮಿ ಮತ್ತು ಸಂಗೀತದ ರೋಮಾಂಚಕ ಸಂಗಮವಾಗಲಿದೆ. ದೊಳ್ಳು ಕುಣಿತದಿಂದ ಮಂಗಣಿಯಾರ್ ಢೋಲ್‌ವರೆಗೆ, ಮಹಾರಾಷ್ಟ್ರ, ಜಾರ್ಖಂಡ್, ಗೋವಾ ಮತ್ತು ಮಣಿಪುರದ ತಾಳಗಳವರೆಗೆ—’ಕಮಾಲ್ ಧಮಾಲ್’ ಭಾರತದ ಲಯದ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತದೆ.

ಪ್ರದರ್ಶನಗಳು ಮಾತ್ರವಲ್ಲದೇ, ಜಾಕ್‌ಫ್ರೂಟ್ ಸಂಗೀತ ಶಿಕ್ಷಣಕ್ಕೆ ತನ್ನನ್ನು ಗಂಭೀರವಾಗಿ ಸಮರ್ಪಿಸಿಕೊಂಡಿದೆ. ಅಭಿಷೇಕ್ ರಘುರಾಮ್, ಅನಂತ ಆರ್. ಕೃಷ್ಣನ್, ದತ್ತಾತ್ರೇಯ ವೇಲಂಕರ್ ಮತ್ತು ವಿವೀಕ್ ರಾಜಗೋಪಾಲನ್ ಅವರಂತಹ ದಿಗ್ಗಜರ ನೇತೃತ್ವದಲ್ಲಿ ನಾಲ್ಕು ಕಮ್ಮಟಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಗುರುಗಳೊಂದಿಗೆ ಮುಖಾಮುಖಿಯಾಗುವ ಅಪರೂಪದ ಅವಕಾಶ ಸಿಗಲಿದೆ.

ವೇದಿಕೆಯ ಆಚೆಗೂ ಜಾಕ್‌ಫ್ರೂಟ್‌ನ ಸ್ಪರ್ಶ ವಿಸ್ತರಿಸುತ್ತದೆ. ಔಟ್‌ರೀಚ್ ಕಾರ್ಯಕ್ರಮದ ಮೂಲಕ, ಎಂಡಿ ಪಲ್ಲವಿ, ಗಿರಿಧರ್ ಉಡುಪ, ಬೀಟ್ ಗುರುಗಳು ಮತ್ತು ರೋಹಿಣಿ ರಘುನಂದನ್ ಅಂತಹ ಸಂಗೀತಗಾರರು ಬೆಂಗಳೂರಿನಾದ್ಯಂತದ ಶಾಲೆಗಳು ಮತ್ತು ಆರೈಕೆ ಕೇಂದ್ರಗಳಲ್ಲಿ, ಭಿನ್ನ ಹಿನ್ನೆಲೆಯ ಮಕ್ಕಳಿಗೆ ಸಂಗೀತದ ಸಂತಸವನ್ನು ದೊರಕಿಸುತ್ತಾರೆ. 

“ಸಂಗೀತ ಶಿಕ್ಷಣ ಮತ್ತು ಪ್ರದರ್ಶನದ ವಿಚಾರದಲ್ಲಿ ಜಾಕ್‌ಫ್ರೂಟ್ ಒಂದು ವಿಶಿಷ್ಟ ಪ್ರಯೋಗವೇ ಸರಿ. ಗಂಭೀರ ಕಲಾತ್ಮಕ ಜವಾಬ್ದಾರಿಯನ್ನು ವಹಿಸಿಕೊಟ್ಟಾಗ ಮಕ್ಕಳು ವೇದಿಕೆಗೆ ತರುವ ಕುತೂಹಲ, ಶಿಸ್ತು ಮತ್ತು ಕಲ್ಪನಾಶಕ್ತಿ ನಮ್ಮನ್ನು ಪ್ರತಿ ಬಾರಿಯೂ ಅಚ್ಚರಿಗೊಳಿಸುತ್ತದೆ, ಹೊಸದನ್ನೂ ಕಲಿಸುತ್ತದೆ. ಈ ಬಾರಿ ಕಮಾಲ್ ಧಮಾಲ್ ಮತ್ತೆ ಬರುತ್ತಿರುವುದು ನನಗೆ ವಿಶೇಷ ಖುಷಿ ಕೊಟ್ಟಿದೆ. ಅದರ ಲವಲವಿಕೆ, ಭಾರತದ ತಾಳವಾದ್ಯ ಪರಂಪರೆಗಳ ಸಂಭ್ರಮ, ಬೇರೆಲ್ಲದಕ್ಕಿಂತ ಹೆಚ್ಚು ವಿಶೇಷ. ಅಷ್ಟೇ ಸಂತೋಷ ಕೊಡುವ ಸಂಗತಿ ಎಂದರೆ, ದೇಶದ ಮೂಲೆಮೂಲೆಯ ಮಕ್ಕಳನ್ನು ಒಟ್ಟುಗೂಡಿಸಿ ಸಾಂಗ್‌ಸ್ಟರ್ಸ್ ಇನ್ನಷ್ಟು ದೊಡ್ಡದಾಗಿ, ಇನ್ನಷ್ಟು ಮಹತ್ವಾಕಾಂಕ್ಷೆಯ ಸಹಯೋಗದ ಪ್ರಸ್ತುತಿಯಾಗಿ ಬೆಳೆಯುತ್ತಿರುವುದು. ಇನ್ನು ಮ್ಯೂಸಿಕಿಂಗ್ ಇಂಟು ದಿ ಫ್ಯೂಚರ್ ಪ್ರತಿ ಬಾರಿಯೂ ವಯಸ್ಸನ್ನು ಮೀರಿದ ಪ್ರತಿಭೆಯುಳ್ಳ, ಅಚ್ಚರಿ ಹುಟ್ಟಿಸುವ ಪುಟಾಣಿ ಸಂಗೀತಗಾರರನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಲೇ ಇದೆ. ಜಾಕ್‌ಫ್ರೂಟ್ ಯಾವಾಗಲೂ ಮಕ್ಕಳಿಗಾಗಿ ಅರ್ಥಪೂರ್ಣ ಸಂಗೀತ ಅನುಭವ ಸೃಷ್ಟಿಸುತ್ತದೆ. ಒಂದೇ ಬಾರಿ ಮಾಡಿ ಮುಗಿಸುವ ಕಾರ್ಯಕ್ರಮವಾಗಿ ಅಲ್ಲ, ನಿರಂತರ ಪಯಣವಾಗಿ. ಈ ಕನಸು ಪ್ರತಿ ವರ್ಷವೂ ಇನ್ನಷ್ಟು ಆಳವಾಗುತ್ತಿರುವುದನ್ನು ನೋಡುವುದೇ ನನಗೊಂದು ಸೌಭಾಗ್ಯ.”

— ಶುಭಾ ಮುದ್ಗಲ್, ಉತ್ಸವ ನಿರ್ದೇಶಕಿ, ಜಾಕ್‌ಫ್ರೂಟ್

“ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಕಲಾ ಅನುಭವಗಳು ಸಿಗಬೇಕು, ಮತ್ತು ಅಸಾಧಾರಣ ಪ್ರತಿಭೆಯುಳ್ಳ ಪುಟಾಣಿ ಸಂಗೀತಗಾರರಿಗೆ ತಮ್ಮ ಸಂಗೀತ ಕೇಳಿಸಿಕೊಳ್ಳುವ, ಗುರುತಿಸುವ ಮತ್ತು ಪ್ರೋತ್ಸಾಹಿಸುವ ಅವಕಾಶ ಸಿಗಬೇಕು ಎಂಬ ನಂಬಿಕೆಯ ಮೇಲೆಯೇ ಜಾಕ್‌ಫ್ರೂಟ್ ಹುಟ್ಟಿಕೊಂಡಿದೆ” ಎನ್ನುತ್ತಾರೆ ಭೂಮಿಜಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಗಾಯತ್ರಿ ಕೃಷ್ಣ. “ಪ್ರೀತಿಯಿಂದ ಪೋಷಿಸಿ, ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಕೊಟ್ಟಾಗ ಯುವ ಪ್ರತಿಭೆ ಇಡೀ ಸಾಂಸ್ಕೃತಿಕ ಪರಿಸರವನ್ನೇ ಶ್ರೀಮಂತಗೊಳಿಸುತ್ತದೆ ಎಂಬುದನ್ನು ಪ್ರತಿ ಆವೃತ್ತಿಯೂ ನಮಗೆ ಮತ್ತೆ ಮತ್ತೆ ಸಾಬೀತುಪಡಿಸುತ್ತದೆ.”

ಕಳೆದ ಹಲವು ವರ್ಷಗಳಲ್ಲಿ, ಜಾಕ್‌ಫ್ರೂಟ್ ಯುವ ಸಂಗೀತಗಾರರಿಗಾಗಿ ಭಾರತದ ಅತ್ಯಂತ ಗೌರವಾನ್ವಿತ ವೇದಿಕೆಗಳಲ್ಲಿ ಒಂದಾಗಿ ಬೆಳೆದಿದೆ.  ಕಲಾವಿದರು, ಶಿಕ್ಷಣ ತಜ್ಞರು, ಕುಟುಂಬಗಳು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸಿ ಕುತೂಹಲ, ಸೃಜನಶೀಲತೆ ಮತ್ತು ಸಂಗೀತ ಶ್ರೇಷ್ಠತೆಯನ್ನು ಸಂಭ್ರಮಿಸುತ್ತಿದೆ.

ಜಾಕ್‌ಫ್ರೂಟ್ 2026 ಅನ್ನು ಭೂಮಿಜಾ ಟ್ರಸ್ಟ್, ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (PCPA) ಮತ್ತು ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ (IME) ಸಹಯೋಗದೊಂದಿಗೆ ಪ್ರಸ್ತುತಪಡಿಸುತ್ತಿದೆ.

ಉತ್ಸವದ ದಿನಾಂಕಗಳು: 21–23 ಆಗಸ್ಟ್ 2026

ಸ್ಥಳಗಳು: ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (PCPA) ಮತ್ತು ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ (IME), ಬೆಂಗಳೂರು

ಟಿಕೆಟ್ ಸಂಪರ್ಕ BookMyShow.com

‍ಲೇಖಕರು Admin

6 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading