ಸದಾಶಿವ್ ಸೊರಟೂರು ಕಥಾ ಅಂಕಣ- ಸನ್ನಡತೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

6

ಚಾಪೆಯ ಮೇಲೆ ಮೈಚೆಲ್ಲಿದ. ಬೆಳಗ್ಗೆ ಜೈಲಿನ ತೋಟದಲ್ಲಿ  ಒಂದಷ್ಟು  ಕೆಲಸ ಹಾಗೂ ಮಧ್ಯಾಹ್ನ ಖೈದಿಗಳಿಗೆ  ತೆಗೆದುಕೊಂಡು ಎರಡು ಗಂಟೆಯ ನಿರಂತರ ತರಗತಿ ಅವನನ್ನು ಸುಸ್ತು ಮಾಡಿತ್ತು. ಕಣ್ಣು ಮುಚ್ಚಿದರೆ ಅರೆಕ್ಷಣಕ್ಕೆ ನಿದ್ರೆ ಖಾತ್ರಿ ಇತ್ತು. ಜೈಲಿನಾಚೆಗಿನ ಬದುಕು ಅವನಿಗೆ ಎಂದೊ ಸತ್ತು ಹೋಗಿತ್ತು. ಒಮ್ಮೊಮ್ಮೆ ‘ಅರೆ ಇಲ್ಲಿ ಎಲ್ಲವೂ ಸರಿಯಿದೆಯಲ್ಲಾ’ ಅನಿಸುತ್ತಿತ್ತು.

ಒಂಟಿಯಾಗಿದ್ದದ್ದು. ಕೈಗೆ ಕೆಲಸ ಇಲ್ಲದ್ದು. ತನ್ನ ಒಳ್ಳೆತನ ಹೊಟ್ಟೆ ತುಂಬಿಸದೆ ಇದ್ದದ್ದು. ಖಾಯಿಲೆ ಬಿದ್ದಾಗ ಒಂದು ಮಾತ್ರೆಯೂ ದುರ್ಭರವಾದದ್ದು. ಜನ ತನ್ನನ್ನು ದೂರ ಇಟ್ಟದ್ದು ಎಲ್ಲವನ್ನೂ ಯೋಚಿಸಿಕೊಂಡು ಈ ಕಾಂಪೌಂಡಿನ ಆಚೆ ಇರುವುದು ಜೈಲು, ಇಚೆ ಇರುವುದೇ ಬಿಡುಗಡೆ ಅಂದುಕೊಂಡಿದ್ದ.  ಜೈಲಿನೊಳಗೆ ಬಂದು ಎಷ್ಟೊ ದಿನಕ್ಕೆ ಆಚೆ ಜಗತ್ತಿನಲ್ಲಿ ಅಂಟಿಸಿಕೊಂಡು ಬಂದ ಕೀಳರಿಮೆ ಹೊರಟು ಹೋಗಿತ್ತು.

ಇನ್ನೇನು ಕಣ್ಣಿಗೆ ನಿದ್ದೆ ಮೆತ್ತಬೇಕು ಯಾರೊ ಹತ್ತಿರಬಂದ ಸದ್ದು. ‘ಏನ್ರೀ ಮಲಗಿಬಿಟ್ರಾ ಹೇಳಿ ಹೇಳಿ. ನಿಮಗೊಂದು ಒಳ್ಳೆ ಸುದ್ದಿ ಇದೆ’ ಜೈಲರ್ ಮಾತಿನಲ್ಲಿ ಖುಷಿ ಇತ್ತು. ಅವನನ್ನು ಇಡೀ ಜೈಲು ಬಹುವಚನದಲ್ಲಿಯೇ ಕರೆಯುತ್ತಿತ್ತು. ಇಷ್ಟೊಂದು ಒಳ್ಳೆ ವ್ಯಕ್ತಿ ಇಲ್ಲಿ ಜೈಲೊಳಗೆ ಬರಲು ಹೇಗೆ ಸಾಧ್ಯವೆಂಬುದೇ ಅವರೆಲ್ಲರ ಯೋಚನೆ. ತಾನೇಕೆ ಬಂದೆ ಅಂತ ಅವನೆಂದೂ  ಹೇಳಿಕೊಂಡಿರಲಿಲ್ಲ.

ಮಲಗಿದ್ದವನು ಎದ್ದು ಕೂತ. ಖೈದಿ ನಂಬರ್ ಬರೆದುಕೊಂಡ ಬಿಳಿ ಅಂಗಿ, ಬಿಳಿ ಚಡ್ಡಿಯಲ್ಲಿ ಅವನು ಲಕ್ಷಣವಾಗಿ ಕಾಣುತ್ತಿದ್ದ.

‘ನೋಡಿ ಇವ್ರೆ, ನಿಮ್ಮ ಜೀವಾವಧಿ ಶಿಕ್ಷೆ ಮುಗಿದು ಹೊಯಿತು. ನೀವು ಲಕ್ಕಿ. ಮುಂದಿನವಾರ ಜನವರಿ 26 ನೇ ತಾರೀಖು ನಿಮ್ಮ ಬಿಡುಗಡೆಯಿದೆ. ಸನ್ನಡತೆ ಹಿನ್ನೆಲೆಯಲ್ಲಿ ನಿಮ್ಮನ್ನು ಬಿಡುಗಡೆಗೆ ಪರಿಗಣಿಸಲಾಗಿದೆ.. ಇನ್ನೊಂದು ವಾರವಷ್ಟೆ ಅಮೇಲೆ ಎಲ್ಲವೂ ಒಳ್ಳೆಯದು ನಿಮಗೆ..’ ಎಂದು ಖುಷಿಯಿಂದ ಹೇಳಿ ಜೈಲರ್ ಹೊರಟು ಹೋದ.

ಕಣ್ಣಿಗೆ ಬಂದು ಆತು ಕೂತಿದ್ದ ನಿದ್ದೆ ಹೊರಟು ಹೊಯಿತು. ಇಡೀ ರಾತ್ರಿ ನಿದ್ದೆ ಇಲ್ಲದೆ ಹೊರಳಾಡಿದ. ಎದ್ದು ಕೂತು ಏನನ್ನೊ ಯೋಚಿಸಿದ.

‘ಸನ್ನಡತೆ’ ಅನ್ನುವ ಪದ ಅವನನ್ನು ತುಂಬಾ ಕಾಡತೊಡಗಿತು.

ಒಂದು ವಾರ ಅವನಿಗೆ ಬಹಳ ಸಂಕಟದ ಕ್ಷಣಗಳೇ ಆದವು. ಎಲ್ಲರೂ ಅಭಿನಂದಿಸಿದರೂ ಬರೀ ನಗುವನ್ನಷ್ಟೆ ಕೊಟ್ಟು ಸುಮ್ಮನಾದ. ಎಲ್ಲರೂ ಅವನ ಅದೃಷ್ಟವನ್ನು  ಹೊಗಳ ತೊಡಗಿದರು. ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸಿದರು.

ಆ ದಿನ ಬಂದೆ ಬಿಟ್ಟಿತು. ಒಂದು ಚಿಕ್ಕ ಕಾರ್ಯಕ್ರಮವೂ ಆಯ್ತು. ಸಭ್ಯರಾಗಿಯೇ ಬದುಕಿ ಎಂದೂ ಹಿತ ವಚನ ಹೇಳಿದರು. ಅವನು ಜೈಲಿನಿದ್ದ ಹೊರಡುವಾಗ ಅವನಿಗೆ ಒಂದು ಜೊತೆ ಹೊಸ ಬಟ್ಟೆ ಹಾಗೂ ಜೈಲಿನಲ್ಲಿ‌ ದುಡಿದ ಹಣ ಮತ್ತು ಅವನು ಇಷ್ಟ ಪಡುತ್ತಿದ್ದ ಲೇಖಕರ ಹತ್ತು ಪುಸ್ತಕಗಳನ್ನು ಕೊಡಲಾಯಿತು.

ಅವನನ್ನು ಹೊರಗೆ ಕಳುಹಿಸಿ ಜೈಲು ತನ್ನ ಬಾಗಿಲು ಮುಚ್ಚಿಕೊಂಡಿತು. ಹೊರಗೆ ಬಂದು ನಿಂತವನಿಗೆ ಭಯವಾಗ ತೊಡಗಿತು. ತಾನು ಈಗ ಹೇಗೆ ಬೇಕಾದರೂ ಬದುಕಬಹುದು ಎನ್ನುವ ಭಾವವೇ ಅವನನ್ನು ಭಯ ಪಡಿಸಲು ಕಾರಣವಾಯಿತು.

ತನ್ನ ಊರಿಗೆ ಹೊರಡಲು ಯೋಚಿಸಿದ. ಊರು ಅವನನ್ನು ಸ್ವೀಕರಿಸಲಾರದು ಅನಿಸಿತು. ಎಲ್ಲಿ ಹೋಗಬೇಕು ಅನ್ನುವುದು ಕೂಡ ತೋಚಲಿಲ್ಲ.‌ ಸುಮ್ಮನೆ ರಸ್ತೆಯಲ್ಲಿ ನಡೆಯತೊಡಗಿದ. ಊರು ಮುಂದ-ಮುಂದಕ್ಕೆ ಬದಲಾಗಿ ಹೋಗಿದೆ ಅನಿಸಿತು. ಜನರು ಬದಲಾಗಿದ್ದರು. ಎಲ್ಲವೂ ಅವನ ಅರಿವಿಗೆ ಬರತೊಡಗಿತು.

ಕಾಲು ಸೋಲುವವರೆಗೂ ನಡೆದ. ಎಲ್ಲವನ್ನೂ ಕಣ್ಣಿನಲ್ಲಿ ಓದುತ್ತಾ ಓದುತ್ತಾ ನಗರದ ಅಂಚೆಗೆ ಬಂದು ಸೇರಿದ. ಈಗ ಊರು ಇಲ್ಲ, ಪೊರೆಯಲು ಜೈಲೂ ಇಲ್ಲ.‌ ಅನಾಥ ಪ್ರಜ್ಞೆ. ಅಲ್ಲೊಂದು ಕಡೆ ಕೂತ ಯೋಚಿಸ ತೊಡಗಿದ. ಹಸಿವಿದ್ದರೂ ಊಟ ಮಾಡುವ ಮನಸಾಗಲಿಲ್ಲ. ವಾಪಸು ಜೈಲಿಗೆ ಹೋಗುಬೇಕು ಅನಿಸಿತು.

ಜೀವ ಉಳಿಸಲು ಹೋದದ್ದು, ಆದರೂ ಜೀವ ಹೋದದ್ದು, ಆದರೆ ಆ ಜೀವ ನೀನೆ ತೆಗೆದ ಎಂಬ ಆರೋಪ ತನಗೆ ಬಂದದ್ದು, ಅದು ಸಾಬೀತಾದ್ದು ಎಲ್ಲವೂ ನೆನಪಾಯಿತು.‌..

ತಲೆ‌ಚಿಟ್ಟು ಹಿಡಿದಂತಾಗಿ ಎದ್ದು ಭರಭರ ಹೆಜ್ಜೆ ಹಾಕತೊಡಗಿದ. ಜೈಲಿನ ಮುಂದೆ ಬಂದು ನಿಂತ. ‌ಬಾಗಿಲಾಕಿತ್ತು.

ತಾನು ಮತ್ತೆ ಜೈಲಿನೊಳಗೆ ಹೋಗಲು ಇನ್ನೆಷ್ಟು ಸಭ್ಯನಾಗಬೇಕೊ, ತನ್ನ ನಡತೆ ಇನ್ನಷ್ಟು ಒಳ್ಳೆಯದಾಗಬೇಕೊ..

ಅವತ್ತು ಜೈಲು ಸೇರಿಸಿದ್ದು ಇದೆ ಸನ್ನಡತೆ

ಇಂದು ಜೈಲಿನಿಂದ ಹೊರ ಹಾಕಿದ್ದು ಅದೆ ಸನ್ನಡತೆ..

ದ್ವಂದ್ವದಲ್ಲಿ ಯೋಚಿಸುತ್ತಾ ನಿಂತ.‌

ಹಗಲು ಸತ್ತು ಇಷ್ಟಿಷ್ಟೆ ಕತ್ತಲಾವರಿಸತೊಡಗಿತು.

ಹಿಂದಿನಿಂದ ಬಂದ‌ ಕಾರೊಂದು ಗುದ್ದಿ ನಿಲ್ಲದೆ ಹೊರಟೆ ಹೊಯಿತು. ಜೈಲಿನ ಆಚೆ ಇದೆ ಎನ್ನಲಾದ ಸನ್ನಡತೆಯ ಜಗತ್ತು ಅವನು ಒದ್ದಾಡುವುದನ್ನು ನೋಡುತ್ತಾ ತನ್ನ ಪಾಡಿಗೆ ತಾನಿತ್ತು..

‍ಲೇಖಕರು Admin

September 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: