ಕಳಚಿದ ಮತ್ತೊಂದು ಕೊಂಡಿಯ ನೆನೆಯುತ್ತಾ

ಅಗಲಿದ ಜೀವಗಳು ನಮ್ಮೊಳಗೆ ಉಳಿಸುವ ನೆನಪುಗಳಿಗೆ ಒಡಗೂಡಿ ಇಟ್ಟ ಹೆಜ್ಜೆಗಳೇ ಇಂಧನ

ನಾ ದಿವಾಕರ

**

ಬರೆಯುವ ಮುನ್ನ :

ಒಂದು ವಾರದ ಹಿಂದೆ, ಕೇವಲ ಹತ್ತು ವರ್ಷಗಳ ಒಡನಾಟವಿದ್ದು ಮೂವತ್ತು ವರ್ಷಗಳ ಹಿಂದೆ ಅಗಲಿದ ಆಪ್ತರ ಬಗ್ಗೆ ಲೇಖನ ಬರೆದಿದ್ದೆ. ಕಣ್ಣುಗಳಲ್ಲಿ ಅಲ್ಲದಿದ್ದರೂ ಎದೆಯಾಳದಲ್ಲಿ ಒಂದು ಕಂಬನಿ ಬತ್ತದೆ ಉಳಿದಿದೆ. ಅದು ಬತ್ತಿಹೋಗಬಾರದು ಎಂದೋ ಏನೋ ಮತ್ತೊಂದು ಆತ್ಮೀಯ ಜೀವ, ನಾನೂ ಹೋಗ್ತಿದೀನಿ, ನೀನು ಹೀಗೇ Obituary̧  Memoirs ಇತ್ಯಾದಿಗಳನ್ನು ಬರೆಯುತ್ತಲೇ ಇರು ಎಂದು ಹೇಳಿ, ಹೊರಟುಹೋಗಿದೆ. ಬಾಲ್ಯದ ಗೆಳೆಯ ಕೋಲಾರದ ಶಾಸ್ತ್ರಿ “ಚಿಕ್ಕವರಾಗಿ ಅಥವಾ ಕುಟುಂಬದ ಕೊನೆಯವರಾಗಿ ಹುಟ್ಟಬಾರದಯ್ಯಾ, ಹುಟ್ಟಿದರೂ ಕಳೆದುಕೊಳ್ಳುವುದನ್ನು ಸಹಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು” ಎಂದು ಆಗಾಗ್ಗೆ ಹೇಳ್ತಿರ್ತಾನೆ. ಅವನ ಮಾತನ್ನು ಸಾಕ್ಷೀಕರಿಸಲೋ ಏನೋ ನನ್ನ ಮೂರೂವರೆ ದಶಕಗಳ ಒಡನಾಡಿ, ಸಂಗಾತಿ, ಮೇಷ್ಟ್ರು ಡಾ. ವಿ. ಲಕ್ಷ್ಮೀನಾರಾಯಣ್‌ (ಆಪ್ತವಾಗಿ ಲಕ್ಷ್ಮೀ) ಹೋಗೇಬಿಟ್ಟರು. ಹೇಳಿಹೋಗಬೇಕಿತ್ತು ಎನ್ನಲಾದೀತೇ ? ಹೋದರು, ಹೋಗೇಬಿಟ್ಟರು ಮರಳಿ ಬಾರದ ಕಡೆಗೆ.

ಹೀಗೇ ಸ್ವಗತ :

ಆದರೆ ಹೀಗೆ ಸದ್ದಿಲ್ಲದೆ ನೀರಿನ ಗುಳ್ಳೆಯಂತೆ ಟಪ್‌ ಎಂದು ಒಡೆದುಹೋಗಬಾರದಿತ್ತು, ಅಲ್ಲವೇ ಲಕ್ಷ್ಮೀ ? ಏನು ಅವಸರವಾಗಿತ್ತು ನಿಮಗೆ ? ಮುಂದಿನ ವಾರ ಬನ್ರೀ  ಬಹಳಷ್ಟು ಮಾತಾಡೋದಿದೆ ಎಂದು ಹೇಳಿದ್ರಲ್ಲಾ, ಮಂಗಳವಾರ ಬರಬೇಕೆಂದಿದ್ದೆ. ಆದರೆ ನೀವು, ಏನೋ ಕಾಲ ಮಿಂಚಿಹೋಗಿದೆ ಅನ್ನೋ ರೀತಿ ಸೋಮವಾರ ರಾತ್ರಿಯೇ ಹೊರಟುಬಿಟ್ಟಿದ್ದೀರ ! ಇದು ನ್ಯಾಯಾನಾ ಮೇಷ್ಟ್ರೇ ? ಆ ಪುಸ್ತಕ ಓದಿದ್ರೇನ್ರೀ , ಅದನ್ನು ಚರ್ಚೆ ಮಾಡಬೇಕ್ರೀ, ಯಾವಾಗ ಮಾಡೋಣ ? Excellent analysis ಇದೆ. ಗುಂಪು ಓದು ಮಾಡೋಣ, ಎಲ್ಲಾರಿಗೂ ಓದಿಕೊಂಡು ಬರೋಕೆ ಹೇಳೋಣ ! ಏನ್ಮಾಡೋದು ದಿವಾಕರ್‌, ಬಹಳಷ್ಟು ಜನ ಓದ್ಕೊಂಡು ಬರೋಲ್ಲ !!! ನೀವು ಓದಿ ನೋಟ್ಸ್‌ ಮಾಡ್ಕೊಳ್ಳಿ ನಾನು Schedule ಮಾಡ್ತೀನಿ ! ಹೀಗೆ ವಾರಕ್ಕೊಮ್ಮೆಯಾದರೂ ಮಾತನಾಡುತ್ತಿದ್ದ ನಿಮಗೆ, ಓದುವುದೆಲ್ಲಾ ಮುಗಿದುಹೋಗಿತ್ತೇ ಲಕ್ಷ್ಮೀ !

ಏನೋ ಅವಸರದಲ್ಲಿದ್ದಂತೆ ಹೊರಟುಬಿಟ್ರಲ್ಲಾ, ನಿಮ್ಮ ʼಎಡತೊರೆʼ ಬತ್ತಿದ ತೊರೆಯಾಯಿತಲ್ಲಾ ಲಕ್ಷ್ಮೀ. ಕೆಳಮಹಡಿಯಲ್ಲಿದ್ದ ʼಅರಿವುʼ ಗ್ರಂಥಾಲಯದ ಸಾವಿರಾರು ಪುಸ್ತಕಗಳೆಲ್ಲವೂ ಖಾಲಿ ಹಾಳೆಗಳಂತೆ ಕಾಣ್ತಿದೆಯಲ್ಲಾ ಲಕ್ಷ್ಮೀ. Now any body can sit on that chair ಅಂತ ನಿಮ್ಮ ಆರು ವರ್ಷದ ಮುದ್ದಿನ ಮೊಮ್ಮಗು ಹೇಳ್ತಿತ್ತು. ಹೌದು ಲಕ್ಷ್ಮೀ ಯಾರು ಬೇಕಾದರೂ ಕೂರಬಹುದು, ಆದರೆ ನಿಮ್ಮ ಅನುಪಸ್ಥಿತಿ ಸೃಷ್ಟಿಸಿರುವ ಶೂನ್ಯವನ್ನು ಯಾರು ತುಂಬಲು ಸಾಧ್ಯ ? ಅಲ್ಲವೇ. ದೇಹವಷ್ಟೇ ಧಡೂತಿಯಲ್ಲ, ಆ ವ್ಯಕ್ತಿತ್ವವೇ ಅಂತಹುದು. ಎದೆಯಷ್ಟೇ ವಿಶಾಲವಲ್ಲ ಅ ಹೃದಯ ಇನ್ನೂ ವಿಶಾಲ ಹೌದಲ್ಲವೇ ಮೇಷ್ಟ್ರೇ ? “ ಗಡಸು ಧ್ವನಿಯ ಮೃದು ಹೃದಯಿ” ಎಂದಷ್ಟೇ ಹೇಳಿದರೆ ನಿಮ್ಮನ್ನು ಬಣ್ಣಿಸಿದಂತಾಗುವುದೇ ಲಕ್ಷ್ಮೀ ? ಆ Tone ಹಿಂದೆ ಅಡಗಿರುತ್ತಿದ್ದ ಶಿಸ್ತು, ಸಮಯಪಾಲನೆಯ ಪ್ರಜ್ಞೆ, ವಿಷಯಗ್ರಹಿಕೆಯ ಮನಸ್ಸು ಮತ್ತು ಮಾತುಗಳಲ್ಲಿ ಗುರುತಿಸಬಹುದಾಗಿದ್ದ ಸೂಕ್ಷ್ಮ ಸಂವೇದನೆ, ಓಹ್‌ ! ಲಕ್ಷ್ಮೀ ಏನೆಂದು ಬರೆಯಲಿ.

ವಣಕ್ಕಂ, ವಾಂಗೋ, ಆದಾಬ್‌ ಹೀಗೆ ತಮಿಳು, ಪರ್ಷಿಯನ್‌, ಉರ್ದು ಭಾಷೆಗಳ ಸಮ್ಮಿಶ್ರಣದ ಹಿಂದೆ ಇದ್ದ ಆ ಸೆಕ್ಯುಲರ್‌ ಧ್ವನಿಗೆ ಅಸ್ಮಿತೆಯಾದರೂ ಏನು ? ಎದೆಯಾಳದಿಂದ ಬರುತ್ತಿದ್ದ ಭಾವನಾತ್ಮಕ ಮಾತುಗಳಲ್ಲಿ ಮನುಜ ಸೂಕ್ಷ್ಮತೆ ಇತ್ತು. ಲಿಂಗ ಸೂಕ್ಷ್ಮತೆ ಇತ್ತು. ಕಾಳಜಿ, ಕಳಕಳಿ, ಸಹಾನುಭೂತಿ, ಅನುಕಂಪ ಎಲ್ಲವೂ ಇರುತ್ತಿತ್ತು. ಹಾಗೆಯೇ ಸಿಟ್ಟು, ಸೆಡವೂ ಸಹ ಇರುತ್ತಿತ್ತು. ಫ್ಯಾಸಿಸಂ ವಿರುದ್ಧ, ಕೋಮುವಾದ ಮತಾಂಧತೆಯ ವಿರುದ್ಧ, ಪಿತೃಪ್ರಧಾನತೆಯ ವಿರುದ್ಧ, ಜಾತೀಯತೆ-ಅಸ್ಪೃಶ್ಯತೆಯ ವಿರುದ್ಧ. ಅತಿರೇಕಕ್ಕೆ ಹೋಗದ ಸಿಟ್ಟಿನಲ್ಲೇ ಫ್ರೆಂಚ್‌ ಕ್ರಾಂತಿಯಿಂದ 2024ರವರೆಗಿನ ಚರಿತ್ರೆಯನ್ನು ಮೆಲುಕು ಹಾಕುತ್ತಲೇ, ಫ್ಯಾಸಿಸಂ ಹೋಗಬೇಕ್ರೀ, ನಕ್ಸಲ್‌ಬಾರಿಯ ಚಿಲುಮೆ ಬತ್ತಬಾರ್ದು ದಿವಾಕರ್‌, ಅಂಬೇಡ್ಕರ್‌ ವಾರಸುದಾರರು ನಾವಾಗಬೇಕು, ಅಂದರೆ ಕಮ್ಯುನಿಸ್ಟರು ಆಗಬೇಕ್ರೀ, We are/should be the true inheritors of Ambedkar and his thoughts ಎಂದು ಹೇಳುತ್ತಿದ್ದ ನಿಮ್ಮ ಧ್ವನಿಯ ಹಿಂದೆ ಇದ್ದುದು ಮಾನವತೆ, ಸಾಮಾಜಿಕ ಕಳಕಳಿ, ಪರಿಶುದ್ಧ ಮಾನವೀಯತೆ.

ಸಂಗಾತಿಯೊಡನೆ ಒಂದಿಷ್ಟು

ಹೌದು ಲಕ್ಷ್ಮೀ 35 ವರ್ಷಗಳ ಹಿಂದೆ ಮೊಟ್ಟಮೊದಲು ನಿಮ್ಮನ್ನು, ರತಿರಾವ್‌ ಅವರನ್ನು ಭೇಟಿಯಾದದ್ದು ಪಿಯುಸಿಎಲ್‌ ಸಭೆಯೊಂದರಲ್ಲಿ, ಬೆಂಗಳೂರಿನಲ್ಲಿ. 1988-90ರ ನಡುವೆ. ನಮ್ಮ ಹೆಚ್ಚಿನ ಭೇಟಿಯಾಗುತ್ತಿದ್ದುದು ಸಭೆಗಳಲ್ಲೇ. ಮೈಸೂರು ಜಿಲ್ಲಾ ಪಿಯುಸಿಲ್‌ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ, ನಿಮ್ಮೊಡನೆ ಪಾಲ್ಗೊಂಡ ಚಟುವಟಿಕೆಗಳು  ಚಿರಸ್ಮರಣೀಯ. ಸಿಪಿಐ ಎಂಎಲ್‌ ಲಿಬರೇಷನ್‌ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡ ನಂತರ, ಪಕ್ಷದ ಕಾರ್ಯಾಗಾರಗಳಲ್ಲಿ, ಅಧ್ಯಯನ ಶಿಬಿರಗಳಲ್ಲಿ, ಸಂಗಾತಿಗಳೊಡಗಿನ ಸಂವಾದ, ಚರ್ಚೆಗಳಲ್ಲಿ ಭಾಗವಹಿಸಿದ ದಿನಗಳು ವ್ಯಕ್ತಿಗತ ನೆಲೆಯಲ್ಲಿ ನನ್ನ ಬೌದ್ಧಿಕ ಅರಿವು, ಜ್ಞಾನ ಮತ್ತು ಗ್ರಹಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗಿತ್ತು. 2002ರಲ್ಲಿ ಮೈಸೂರಿಗೆ ಬಂದ ಮೇಲೆ ನಿಮ್ಮ ಮನೆ ಒಂದು ರೀತಿಯಲ್ಲಿ ಹೋರಾಟ-ಚಿಂತನ-ಮಂಥನಗಳ ಶಾಲೆಯಾಗಿಬಿಟ್ಟಿತು.

ಈಗ ‌ʼ ಎಡತೊರೆ ʼ ಆಗಿರುವ ಆಗಿನ ʼ LARAP ʼ ಒಂದು ರೀತಿಯಲ್ಲಿ ಓದು, ಅಧ್ಯಯನ, ಚರ್ಚೆ, ಹರಟೆ, ಗಂಭೀರ ಸಂವಾದಗಳಿಗೇ ಸೃಷ್ಟಿಯಾದ ಒಂದು ಬೌದ್ಧಿಕ ಸ್ಥಾವರ. ಕೆಲವು ವರ್ಷಗಳ ಹಿಂದೆ ಅಸ್ತವ್ಯಸ್ತವಾಗಿದ್ದ ಪುಸ್ತಕಗಳನ್ನೆಲ್ಲಾ ಒಪ್ಪಮಾಡಿ ʼಅರಿವುʼ ತೆರೆದಾಗ ಅದೊಂದು ಹೊಸ ಪರ್ವ. ಅಗತ್ಯವಿದ್ದವರಿಗೆ ಅರಿವು ವಿಸ್ತರಿಸಿಕೊಳ್ಳಲು ಸದಾ ತೆರೆದಿರುತ್ತಿದ್ದ/ಈಗಲೂ ತೆರೆದೇ ಇರುವ ಒಂದು ಪುಸ್ತಕ ಲೋಕ. ಗಾಂಧಿ, ಮಾರ್ಕ್ಸ್‌, ಪೆರಿಯಾರ್‌, ಅಂಬೇಡ್ಕರ್‌, ಲೋಹಿಯಾ, ಲೆನಿನ್‌, ಮಾವೋ ಹೀಗೆ ಚರಿತ್ರೆ, ತತ್ವಶಾಸ್ತ್ರ ಹಾಗೂ ಸಾಹಿತ್ಯ ಲೋಕದ ಮಹತ್ತರವಾದ ಕೃತಿಗಳು ʼ ಅರಿವು ʼ ಎಂಬ ಮನೆಯಲ್ಲಿ ಲಭ್ಯ. ಓದುವುದು, ಓದುವುದನ್ನು ವಿಮರ್ಶಾತ್ಮಕವಾಗಿ ಚರ್ಚೆ ಮಾಡುವುದು ನೀವು ಅನುಸರಿಸುತ್ತಿದ್ದ ವಿಧಾನ. ವೈಯುಕ್ತಿಕವಾಗಿ ಕೋಲಾರದ ಗೆಳೆಯ ಶಾಸ್ತ್ರಿ ನನ್ನೊಳಗೆ ಬಿತ್ತಿದ ತತ್ವ ಸಿದ್ಧಾಂತಗಳ ಬೀಜ ಮೊಳಕೆಯೊಡೆಯುತ್ತಿದ್ದಾಗ ನೀರೆರೆದು ಪೋಷಿಸಲು ನೆರವಾಗಿದ್ದು ನೀವೇ ಅಲ್ಲವೇ ? ಅದಕ್ಕೇ ನಿಮ್ಮನ್ನು  ಮೇಷ್ಟ್ರು ಅನ್ನೋದು.

ಪುಸ್ತಕ-ಸಿದ್ದಾಂತಗಳಿಂದಾಚೆಗೂ ನನ್ನ ಬದುಕಿನ ಹೆಜ್ಜೆಗಳಲ್ಲಿ ನಿಮ್ಮ (ಹಾಗೂ ರತಿಯ) ಗುರುತುಗಳು ಇರುವುದನ್ನು ಹೇಗೆ ಮರೆಯಲಾದೀತು ಲಕ್ಷ್ಮೀ. “ ಲಕ್ಷ್ಮೀ ಇವತ್ತು FBS 180 BP 160 ಇದೆ ” ಈ ಮೆಸೇಜ್‌ ಹೋದಕೂಡಲೇ ಅಲ್ಲಿಂದ ಕರೆ ಅಥವಾ ಮೆಸೇಜ್‌ ಬರುತ್ತಿದ್ದುದು, No problem Relax ಅಂತ. ನನ್ನ ಹಾಗೂ ನನ್ನ ಮಡದಿಯ ಆರೋಗ್ಯದ ಏನೇ ಸಮಸ್ಯೆಯಾದರೂ ಕೂಡಲೇ ಸ್ಪಂದಿಸುತ್ತಿದ್ದ ನಿಮ್ಮ ವೈದ್ಯ ಹೃದಯದ ಋಣಸಂದಾಯ ಹೇಗೆ ಮಾಡಲಿ ಲಕ್ಷ್ಮೀ. “ ನಿಮ್ಮ ಹೆಂಡತಿಯ ಸಮಸ್ಯೆ ಬಿಗಡಾಯಿಸಲೂ ಬಹುದು, ನೀವು ಧೈರ್ಯವಾಗಿರಿ ” ಎಂದು ಆತ್ಮವಿಶ್ವಾಸ ತುಂಬುತ್ತಿದ್ದಿರಿ. ಮಗಳ ವಿವಾಹ ಸಂದರ್ಭದಲ್ಲಿ ನಾನು Depressionಗೆ ಹೋಗಿದ್ದಾಗ, ಬಹುಶಃ ಲಕ್ಷ್ಮೀ-ರತಿ ಇಲ್ಲದೆ ಹೋಗಿದ್ದರೆ, ನೀವೇ ನನ್ನ Obituary ಬರೆಯಬೇಕಾಗುತ್ತಿತ್ತೇನೋ. ಪ್ರತಿ ಹೆಜ್ಜೆಗೂ ಆತ್ಮಸ್ಥೈರ್ಯ ತುಂಬಿ, ವಿಶ್ವಾಸ ಹೆಚ್ಚಿಸುವ ಮೂಲಕ ನನ್ನ ಭಾವನಾತ್ಮಕತೆಯನ್ನು ಬದಿಗಿಟ್ಟು, ವಸ್ತುನಿಷ್ಠವಾಗಿ ಬದುಕು ನೋಡಲು ಕಲಿಸಿದ ನಿಜವಾದ Family Doctor ನೀವಲ್ಲವೇ  ಲಕ್ಷ್ಮೀ ?

ಏಪ್ರಿಲ್‌ 7ರಂದು ನಿತ್ಯೋತ್ಸವದಲ್ಲಿ ಔತಣಕೂಟ ಏರ್ಪಡಿಸಿದ್ದಾಗ ನನ್ನ ಮನದಾಳದ ಮಾತೊಂದು ನನಗೆ ಅರಿವಿಲ್ಲದಂತೆ ಹೊರಬಂದಿತ್ತು – “ಈ ಲಕ್ಷ್ಮೀ-ರತಿ ನನಗೆ ಅಣ್ಣ ಅತ್ತಿಗೆ ಇದ್ದಂತೆ ” ಅಂತ. ಅದು ಕೇವಲ ಅಕ್ಷರ ನುಡಿ ಅಲ್ಲ ಲಕ್ಷ್ಮೀ, ಅಕ್ಷರಶಃ ಆತ್ಮಸಾಕ್ಷಿಯ ನುಡಿಗಳು. ನನ್ನ ಸೈದ್ಧಾಂತಿಕ-ತಾತ್ವಿಕ-ಸಾಮಾಜಿಕ ಚಿಂತನೆಗಳಿಗೆ ಸ್ಪಂದಿಸುವ ಮೂಲಕ ಅರಿವಿನ ಕಣಜವನ್ನು ಶ್ರೀಮಂತಗೊಳಿಸಿದ ನೀವು ನನ್ನ ಬದುಕಿನ ವೈಯುಕ್ತಿಕ ನೋವು, ತಲ್ಲಣ, ವೇದನೆ, ಚಿಂತೆಗಳಿಗೂ ಸ್ಪಂದಿಸುತ್ತಾ ಸಾಂತ್ವನದ ಮಾತುಗಳೊಂದಿಗೆ, ಸೂಕ್ತ ಮಾರ್ಗದರ್ಶನದೊಂದಿಗೆ, ಬದುಕನ್ನು ಧೈರ್ಯವಾಗಿ ಎದುರಿಸಲು ಕಲಿಸಿದವರ ಪೈಕಿ ನೀವು ಪ್ರಮುಖರು ಲಕ್ಷ್ಮೀ (ಮತ್ತೊಬ್ಬರು ಗೆಳೆಯ ಶಾಸ್ತ್ರಿ). ಕೆಲವು ಸಂದರ್ಭಗಳಲ್ಲಿ ತೊಟ್ಟಿಕ್ಕುವ ನನ್ನ ಕಂಬನಿಯನ್ನು ಒರೆಸಿದವರು ನೀವು. ದುಃಖವನ್ನು ಭರಿಸುವ ಶಕ್ತಿ ಕೊಟ್ಟವರು ನೀವು. ಅಣ್ಣ ಎಂದು ಭಾವಿಸಲು ರಕ್ತದ ನಂಟು ಅಗತ್ಯವೇ ಇಲ್ಲ ಎಂದು ನಿರೂಪಿಸಲು ನೆರವಾದವರಲ್ಲಿ ನೀವೂ ಒಬ್ಬರು, ಪ್ರಮುಖರು.

ಮತ್ತೆ ಸ್ವಗತ :

ಹೀಗೆ ನನ್ನ ಸೈದ್ಧಾಂತಿಕ ಹೆಜ್ಜೆಗಳ ನಡುವೆ, ಬದುಕಿನ ಜಂಜಾಟಗಳ ನಡುವೆ, ವ್ಯಕ್ತಿಗತ ತೊಳಲಾಟಗಳ ನಡುವೆ ಹೆಗಲಾಗಿ ನಿಂತಿದ್ದ ಈ ʼಆಲʼ ಒಮ್ಮೆಲೆ ಸದ್ದಿಲ್ಲದೆ ಚಿರನಿದ್ರೆಗೆ ಜಾರಿಬಿಟ್ಟರೆ ಹೇಗೆ ಅರಗಿಸಿಕೊಳ್ಳುವುದು ? ಇಂದು ಬೆಳಿಗ್ಗೆ ಶುಗರ್‌ ಚೆಕ್‌ ಮಾಡಿದ ಕೂಡಲೇ, FBS 144 ಸಂದೇಶ ಯಾರಿಗೆ ಕಳಿಸುವುದು ಎಂಬ ಯೋಚನೆ ಬಂದಾಗ ನೀವು ನನ್ನ ಬದುಕಿನಲ್ಲೂ ಸೃಷ್ಟಿಸಿಹೋಗಿರುವ ಶೂನ್ಯದ ಅರಿವಾಯಿತು. ಹೌದು ಲಕ್ಷ್ಮೀ ನಿಮ್ಮಿಂದ ತಿಳಿದುಕೊಳ್ಳುವ ವಿಷಯಗಳೆಷ್ಟು ಇದ್ದವು. ನಿಮ್ಮೊಡನೆ ಚರ್ಚೆ ಮಾಡುವುದು ಎಷ್ಟೊಂದಿತ್ತು. ಇಬ್ಬರೂ ಹಂಚಿಕೊಂಡು ಓದುವ ಪುಸ್ತಕಗಳು ಎಷ್ಟಿದ್ದವು. ರೂಪಿಸಬೇಕಾದ ಕಾರ್ಯಕ್ರಮ/ಚಟುವಟಿಕೆಗಳು ಎಷ್ಟೊಂದಿದ್ದವು. ನಿಮ್ಮ ಆ ದೊಡ್ಡ ಅಬ್ಬರದ ನಗೆಯನ್ನು ಹೇಗೆ ಮರೆಯಲಿ ಲಕ್ಷ್ಮೀ. ಯಾರಿಗೇ, ಎಲ್ಲಿಯೇ ಆಗಲಿ ನನ್ನನ್ನು ಪರಿಚಯಿಸುವಾಗ ʼ Most prolific Writer ʼ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ನಿಮ್ಮ ಆ ನಲ್ಮೆಯ ಧ್ವನಿಗಾಗಿ ಯಾರನ್ನು ಅಂಗಲಾಚಲಿ ಲಕ್ಷ್ಮೀ ?  ಮನೆಯಲ್ಲಿ ಹರಟೆಯ ನಡುವೆ ನಿಮ್ಮೊಡನೆ ಚಹಾ ಸವಿಯುತ್ತಿದ್ದಾಗಲೆಲ್ಲಾ  “ Rati̧  Give Divakar  something to eat he needs glucose  ” ಎಂದು ಹೇಳುತ್ತಿದ್ದ ನಿಮ್ಮ ಕಾಳಜಿಯನ್ನು ಯಾರಲ್ಲಿ ಕಾಣಲಿ ಲಕ್ಷ್ಮೀ ? “ನಾವು ಹೋದಮೇಲೂ ಜನಮಾನಸದಲ್ಲಿ ಉಳಿಯಬೇಕಾದರೆ ಬರೆಯಬೇಕ್ರೀ, You are doing it ” ಎಂದು ಇತ್ತೀಚೆಗೆ ತಾನೇ ಬೆನ್ನು ತಟ್ಟಿ ಆಡಿದ ಮಾತುಗಳು, ನಿಮ್ಮ ಅಗಲಿಕೆಯ ನಂತರ ಎದೆಯನ್ನೇ ಕೊರೆಯುತ್ತಿದೆ ಲಕ್ಷ್ಮೀ.

ಯಾಕೆ ಲಕ್ಷ್ಮೀ, ಇಷ್ಟೊಂದು ಅವಸರ ಏನಿತ್ತು ನಿಮಗೆ ? ನಿಮ್ಮ ಅಂತಿಮ ದರ್ಶನಕ್ಕೆ ಬಂದ ಜನಸಾಗರ ನಿಮ್ಮ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತಲ್ಲವೇ ಲಕ್ಷ್ಮೀ. ನನ್ನ ಎದೆಯ ಮೂಲೆಯಲ್ಲಿ ಹುದುಗಿದ್ದ ಒಂದೆರಡು ಹನಿ ಕಂಬನಿಯನ್ನು ಸಾಗರ ಮಾಡಿ ಹೋಗಿಬಿಟ್ಟಿರಲ್ಲಾ ಕಾಮ್ರೇಡ್.‌ ಬಹುಶಃ ಅದು ಇನ್ನು ಬತ್ತಲಾರದು. ಈಗಲೂ ಇಣುಕಿಣುಕಿ ನೋಡುತ್ತಿದೆ, ಹೊರಬರಲೇ ಎಂದು ಕೇಳುತ್ತಿದೆ, ಕೈ ಬೆರಳುಗಳು ನಡುಗಲಾರಂಭಿಸಿವೆ. ಎದೆಯಾಳದ ವೇದನೆ ಬೆರಳತುದಿಯ ಬೆವರಗುಳ್ಳೆಗಳಲ್ಲಿ ಕಾಣುತ್ತಿದೆ. ಈ ಮನದಾಳದ ಮಾತುಗಳನ್ನು ಏನೆಂದು ಕರೆಯಲಿ ಲಕ್ಷ್ಮೀ. ಶ್ರದ್ಧಾಂಜಲಿ ಎನ್ನಲೇ, ಭಾಷ್ಪಾಂಜಲಿ ಎನ್ನಲೇ ? ಗೊತ್ತಿಲ್ಲ ಕಾಮ್ರೇಡ್.‌

ಒಂದಂತೂ ನಿಜ, ಬದುಕಿನಲ್ಲಿ ಆತ್ಮೀಯರನ್ನು ಕಳೆದುಕೊಳ್ಳುವುದು ಒಂದು ರೀತಿ ಅಭ್ಯಾಸವೇ ಆಗಿಹೋಗಿರುವ ಹೊತ್ತಿನಲ್ಲಿ, ಹೀಗೆ ಅಗಲಿಕೆಯನ್ನು ಸಹಿಸಿಕೊಳ್ಳುವ ಧಾರಣ ಶಕ್ತಿಯನ್ನೂ ಅಗಲಿದವರೇ ನೀಡುತ್ತಾರೇನೋ ? ಗೊತ್ತಿಲ್ಲ. ನಿಮ್ಮಿಂದ ಆ ಜೀವನೋತ್ಸಾಹದ ಶಕ್ತಿಯನ್ನು ಪಡೆಯಲಿಚ್ಚಿಸುತ್ತೇನೆ ಕಾಮ್ರೇಡ್.‌ ನಿಮಗೆ ಹೋಗಿಬನ್ನಿ ಎನ್ನಲಾರೆ ನೀವು ಮತ್ತೆ ಬರುವುದಿಲ್ಲ, ಹೋಗಿ ಎನ್ನಲಾರೆ, ಕಳಿಸಲು ಇಚ್ಚೆಯಿಲ್ಲ, ನಮ್ಮ ನಡುವೆ, ನನ್ನ ಎದೆಯಾಂತರಾಳದಲ್ಲಿ ಒಂದು ಬೌದ್ಧಿಕ ಶಕ್ತಿಯಾಗಿ, ಸೈದ್ಧಾಂತಿಕ ಚೇತನವಾಗಿ ಉಳಿದುಬಿಡಿ ಲಕ್ಷ್ಮೀ, ನಾನು ಇರುವವರೆಗೂ.

ಇನ್ನೇನು ಹೇಳಲಿ ಕಾಮ್ರೇಡ್‌ ! ಕಂಬನಿಗಳೊಂದಿಗೆ.. ಲಾಲ್‌ ಸಲಾಂ !!!!

‍ಲೇಖಕರು avadhi

April 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: