ಶ್ರೀನಿವಾಸ ಪ್ರಭು ಅಂಕಣ: ‘ರಂಗ ಶಂಕರ’ದಲ್ಲೂ ನಾಟಕ ತಡವಾಯ್ತು!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 129
——————
‘ಭಾವರಂಜನಿ’ ಧ್ವನಿಸುರುಳಿ ಲೋಕಾರ್ಪಣೆಗೊಂಡ ಮೇಲೆ ರಂಜಿನಿಯ ಉತ್ಸಾಹ ಗರಿಗೆದರಿತ್ತು. ‘ಜೋಗಿ ಕಾಡತಾನ’, ‘ನೀನು ನನಗೆ’ ಮೊದಲಾದ ಹಾಡುಗಳು ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿದ್ದವು. ಇದು ಸಹಜವಾಗಿಯೇ ಹೆಚ್ಚು ತೀವ್ರತೆ—ತನ್ಮಯತೆಗಳಿಂದ ಕಾವ್ಯರಚನೆಯಲ್ಲಿ ತೊಡಗಿಕೊಳ್ಳಲು ರಂಜಿನಿಗೆ ಸ್ಫೂರ್ತಿ ನೀಡಿದ್ದವು. ಜೊತೆಗೆ ಉಪಾಸನಾ ಮೋಹನ್ ಅವರು, ‘ಹಾಡುಗಳನ್ನು ಬರೆದುಕೊಡಿ..ನಾನು ಸಂಗೀತಕ್ಕೆ ಅಳವಡಿಸುತ್ತೇನೆ..ಒಳ್ಳೆಯ ಭಾವಗೀತೆಗಳ ಕೊರತೆ ಈ ಸಮಯದಲ್ಲಿ ಕಾಡುತ್ತಿದೆ’ ಎಂದು ಬರೆಯಲು ರಂಜಿನಿಗೆ ಮತ್ತಷ್ಟು ಸ್ಫೂರ್ತಿ ತುಂಬುತ್ತಿದ್ದರು.

ವಾಸ್ತವವಾಗಿ ಆ ಒಂದು ಕಾಲಘಟ್ಟದಲ್ಲಿ ಭಾವಗೀತೆಗಳಿಗೆ ಕೆಲ ಖ್ಯಾತನಾಮರಿಂದ ಮನ್ನಣೆ ಸಿಗದೆ ಕೊಂಚ ಹಿನ್ನಡೆಯಾದದ್ದೂ ಸತ್ಯವೇ. ಭಾವಗೀತೆಗಳನ್ನು ರಚಿಸುವವರನ್ನು ‘ಕ್ಯಾಸೆಟ್ ಕವಿಗಳು’ ಎಂದು ಕೆಲವು ಸಾಹಿತಿಗಳು ತಾತ್ಸಾರ ದೃಷ್ಟಿಯಿಂದ ನೋಡಿ ಆಡಿಕೊಳ್ಳುತ್ತಿದ್ದುದೂ ಉಂಟು. ಆದರೂ ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು, ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು, ಬಿ.ಆರ್. ಲಕ್ಷ್ಮಣರಾವ್ ಅವರು ಹಾಗೂ ಮತ್ತೂ ಕೆಲ ಕವಿಗಳು ಭಾವಗೀತೆಗಳನ್ನೂ ತಮ್ಮ ಕಾವ್ಯರಚನೆಯ ಒಂದು ಪ್ರಮುಖ ಅಂಗವಾಗಿ ಸ್ವೀಕರಿಸಿದ್ದಷ್ಟೇ ಅಲ್ಲ, ರಂಜಿನಿಯಂತಹ ಹೊಸ ಕವಿಗಳಿಗೆ ಭಾವಗೀತೆಗಳನ್ನು ರಚಿಸಲು ಉತ್ತೇಜನವನ್ನೂ ನೀಡುತ್ತಿದ್ದರು.

ಇಂಥ ಎಲ್ಲಾ ಉತ್ತೇಜನ—ಪ್ರೋತ್ಸಾಹಗಳ ಫಲಶೃತಿಯೇ ‘ಅಗೋಚರ’—ರಂಜನಿಯ ಎರಡನೆಯ ಧ್ವನಿಸಾಂದ್ರಿಕೆ. ರಂಜಿನಿ ಹೊಸದಾಗಿ ಬರೆದ ಎಂಟು ಹಾಡುಗಳಿಗೆ ಉಪಾಸನಾ ಮೋಹನ್ ಅಪೂರ್ವವಾದ ರೀತಿಯಲ್ಲಿ ಸ್ವರ ಸಂಯೋಜನೆ ಮಾಡಿದ್ದರು. ಅದರಲ್ಲಿಯೂ ‘ಚಿಗುರು ಮಾವಿನ ಕೆಳಗೆ’ , ‘ವಿರಹದುರಿಗೆ ಉರಿದುಬಿಡಲಿ’ , ‘ಮಧುಚಂದ್ರನಾ ಬೆಳದಿಂಗಳು’ ಹಾಗೂ ‘ದೇವಲೋಕದಿಂದ ಬಂದ ಪಾರಿಜಾತವೇ’ಹಾಡುಗಳಂತೂ ಅತ್ಯಂತ ಸೊಗಸಾಗಿ ಮೂಡಿಬಂದಿದ್ದವು. ನಾಡಿನ ಪ್ರಸಿದ್ಧ ಗಾಯಕ—ಗಾಯಕಿಯರಾದ ಅರ್ಚನಾ ಉಡುಪ, ಎಂ.ಡಿˌ ಪಲ್ಲವಿ, ಪಂಚಮ್ ಹಳಿಬಂಡಿ , ಉಪಾಸನಾ ಮೋಹನ್ ಹಾಗೂ ಅಪರ್ಣಾ ಅವರುಗಳು ತಮ್ಮ ಇನಿದನಿಯ ಗಾಯನದಿಂದ ಹಾಡುಗಳಿಗೆ ಜೀವ ತುಂಬಿದ್ದರು

‘ಅಗೋಚರ’ ಧ್ವನಿಸಾಂದ್ರಿಕೆಯ ಲೋಕಾರ್ಪಣೆಯನ್ನು ‘ರವೀಂದ್ರ ಕಲಾಕ್ಷೇತ್ರ’ದಲ್ಲಿ ಏರ್ಪಡಿಸಿದೆ. ಶ್ರೇಷ್ಠ ವಿದ್ವಾಂಸರೂ ಸಾಹಿತಿಗಳೂ ನಮಗೆ ಅತ್ಯಂತ ಆತ್ಮೀಯ ಬಂಧುಗಳೂ ಆದ ಡಾ॥ ಸಿ.ಎನ್. ರಾಮಚಂದ್ರನ್ ಅವರು ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಪ್ರಖ್ಯಾತ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಹಾಗೂ ಪ್ರಸಿದ್ಧ ನಿರ್ದೇಶಕ—ಕತೆಗಾರ—ಆತ್ಮೀಯ ಗೆಳೆಯ ಸೂರಿ (ಎಸ್. ಸುರೇಂದ್ರನಾಥ್) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಬರಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರು ಸಮಾರಂಭಕ್ಕೆ ಬರಲಾಗಲಿಲ್ಲ. ಅನೇಕ ಬಂಧು ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸಮಾರಂಭಕ್ಕೆ ಆಗಮಿಸಿ ಕಳೆಗಟ್ಟಿಸಿದರು.

ಡಾ॥ ರಾಮಚಂದ್ರನ್ ಅವರಿಗೆ ‘ಚಿಗುರು ಮಾವಿನ ಕೆಳಗೆ’ ಹಾಗೂ ‘ವಿರಹದುರಿಗೆ’ ಹಾಡುಗಳು ತುಂಬಾ ಇಷ್ಟವಾಗಿದ್ದವು. ತಾವು ಪದೇ ಪದೇ ಆ ಹಾಡನ್ನ ಕೇಳಿ ಕೇಳಿ ಆನಂದಿಸಿದ ಸಂಗತಿಯನ್ನು ಅವರು ನಮ್ಮೆಲ್ಲರೊಂದಿಗೆ ಹಂಚಿಕೊಂಡರು. ಲಚ್ಚಣ್ಣ ಅಲಿಯಾಸ್ ಬಿ ಆರ್ ಎಲ್ ಅವರಿಗೆ ‘ದೇವಲೋಕದಿಂದ ಬಂದ ಪಾರಿಜಾತವೇ’ ಹಾಡು ಮೋಡಿ ಮಾಡಿತ್ತು. ಸೂರಿಗೆ ‘ಮಾಗಿ ಹೋಗಿ ದೂರ ಸಾಗಿ’ ಬಹಳ ಇಷ್ಟವಾದ ಹಾಡಾಗಿತ್ತು. ಅದರಲ್ಲೂ ‘ಚಳಿಯ ಹೊದ್ದ ಗೂಡುಗಳಲಿ ಇತ್ತು ಬಿಳಿಯ ಮೌನ’ ಎಂಬ ಚಿತ್ರವತ್ತಾದ ಸಾಲು ತುಂಬಾ ವಿಶಿಷ್ಟ ಪ್ರಯೋಗವೆಂಬುದು ಅವನ ಅನಿಸಿಕೆಯಾಗಿತ್ತು. ಅಂದು ವೇದಿಕೆಯ ಮೇಲೂ ಹಲ ಗಾಯಕ ಗಾಯಕಿಯರು ಬಂದು ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಒಟ್ಟಿನಲ್ಲಿ ಮನಸ್ಸಿಗೆ ಮುದ—ತೃಪ್ತಿ ನೀಡಿದ ಸುಂದರ ಕಾರ್ಯಕ್ರಮವಾಗಿತ್ತು ಅದು. ರಂಜಿನಿಯ ಕಾವ್ಯ ಲೋಕ ಪಯಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದಂತಾಗಿತ್ತು ‘ಅಗೋಚರ’ ಧ್ವನಿಸುರುಳಿಯ ಲೋಕಾರ್ಪಣೆಯಿಂದ.

ಹತ್ತೆಂಟು ಧಾರಾವಾಹಿಗಳ ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಹೇಗೋ ಸಮಯ ಹೊಂದಿಸಿಕೊಂಡು ನಾನು ಮುಖ್ಯ ಪಾತ್ರ ನಿರ್ವಹಿಸಿದ ನಾಟಕವೆಂದರೆ ‘ನಾ ನೀನಾದ್ರೆ ನೀ ನಾನೇನಾ’. ಮಹಾಕವಿ ಶೇಕ್ಸ್ ಪಿಯರನ ನಿತ್ಯನೂತನ ಹಾಸ್ಯನಾಟಕ ‘ಕಾಮಿಡಿ ಆಫ್ ಎರರ್ಸ್’ ಅನ್ನು ಆಧಾರವಾಗಿಟ್ಟುಕೊಂಡು ನನ್ನ ಆತ್ಮೀಯ ಮಿತ್ರ—ಎನ್ ಎಸ್ ಡಿ ಯ ಸಹಪಾಠಿ ಎಸ್ ಸುರೇಂದ್ರನಾಥ್ ಅಲಿಯಾಸ್ ಸೂರಿ ಅದ್ಭುತವಾಗಿ ರೂಪಾಂತರಿಸಿದ್ದ ಈ ನಾಟಕದಲ್ಲಿ ಮಾಲೀಕ ಹಾಗೂ ಸೇವಕರ ಮುಖ್ಯ ಪಾತ್ರಗಳನ್ನು ನಾನು ಹಾಗೂ ಸಿಹಿ ಕಹಿ ಚಂದ್ರು ನಿರ್ವಹಿಸಿದ್ದೆವು.

ನಮ್ಮಿಬ್ಬರದೂ ಎರಡೆರಡು ಪಾತ್ರಗಳು; ಎರಡೂ ವಿರುದ್ಧ ಸ್ವಭಾವದವು; ವಿಭಿನ್ನ ವಿಭಿನ್ನ ಹಾವ ಭಾವ ವಾಕ್ ಶೈಲಿಯವು. ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ನಗಿಸುತ್ತಾ ನಾಗಾಲೋಟದಲ್ಲಿ ಸಾಗುವ ಈ ನಾಟಕವನ್ನು ಸೂರಿ ಸೊಗಸಾಗಿ ನಮ್ಮ ವಾತಾವರಣಕ್ಕೆ ಅಳವಡಿಸಿಕೊಂಡು ರಚಿಸಿದ್ದ. ಉಳಿದ ಪಾತ್ರವರ್ಗದಲ್ಲಿ ಶ್ರೀನಾಥ್ ವಶಿಷ್ಠ, ಲಕ್ಷ್ಮಿ ಕಬ್ಬೇರಳ್ಳಿ, ಜಹಾಂಗೀರ್ , ವೆಂಕಟಾಚಲ , ಶ್ರೀವತ್ಸ ಮೊದಲಾದ ನುರಿತ ಕಲಾವಿದರಿದ್ದರು. ನಾನು ಹಾಗೂ ಚಂದ್ರು ತದ್ರೂಪಿಗಳೇ ಆದ ಎರಡೆರಡು ಪಾತ್ರಗಳನ್ನು ನಿರ್ವಹಿಸಬೇಕಾದ್ದರಿಂದ ಎರಡೂ ಪಾತ್ರಗಳನ್ನು ಭಿನ್ನ ಭಿನ್ನ ರೀತಿಯಲ್ಲಿ ಕಟ್ಟಿಕೊಡಬೇಕಾದ ಸವಾಲುಗಳು ನಮ್ಮೆದುರಿಗಿದ್ದವು. ಇಡೀ ನಾಟಕ ,ರೂಪ ಕಟ್ಟಿಕೊಂಡ ರೀತಿಯೇ ಆಹ್ಲಾದಕರವಾಗಿತ್ತು. ಪ್ರತಿನಿತ್ಯದ ರಿಹರ್ಸಲ್ ಒಂದು ಪಿಕ್ ನಿಕ್ ನಂತೆ ಭಾಸವಾಗುತ್ತಿತ್ತು!

ಚಂದ್ರು ಹಾಗೂ ನನ್ನ ನಡುವಣ ದೃಶ್ಯಗಳಂತೂ ಪ್ರೇಕ್ಷಕರಿಗೆ ಕಚಗುಳಿಯಿಟ್ಟು ಅವರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತಿದ್ದವು. ನಾಟಕದ ಕೊನೆಯ ಅರ್ಧತಾಸಿನಲ್ಲಿ ಬರುತ್ತಿದ್ದ ಜಹಾಂಗೀರ, ಅದುವರೆಗಿನ ರಂಗದ ಮೇಲಿನ ನಮ್ಮ ದೊಂಬರಾಟವನ್ನೆಲ್ಲಾ ಮರೆಸಿಬಿಡುವಷ್ಟು ಅದ್ಭುವಾಗಿ ನಟಿಸಿ ಪ್ರೇಕ್ಷಕರನ್ನೆಲ್ಲಾ ವಶೀಕರಿಸಿಕೊಂಡುಬಿಡುತ್ತಿದ್ದ! ಎಂ ಎಸ್ ಸತ್ಯು ಅವರು ಬಹಳ ವಿಶಿಷ್ಟವಾದ ರೀತಿಯಲ್ಲಿ ರಂಗಸಜ್ಜಿಕೆಯನ್ನು ವಿನ್ಯಾಸಗೊಳಿಸಿದ್ದರು. ‘ನಾ ನೀನಾದ್ರೆ ನೀ ನಾನೇನಾ’ ಆ ಸಂದರ್ಭದ ಅತ್ಯಂತ ಜನಪ್ರಿಯ ಹಾಸ್ಯನಾಟಕವೂ ಹೌದು. ಬಹಳ ಬೇಗ 25 ಪ್ರದರ್ಶನಗಳನ್ನು ಪೂರೈಸಿದ ಈ ನಮ್ಮ ನಾಟಕ 50 ನೇ ಪ್ರದರ್ಶನದತ್ತ ನಾಗಾಲೋಟದಿಂದ ಧಾವಿಸುತ್ತಿತ್ತು. ಹೀಗಿರುವಾಗ ಒಂದು ಪ್ರದರ್ಶನದ ಸಂದರ್ಭದಲ್ಲಿ ಒಂದು ಎಡವಟ್ಟಾಯಿತು. ‘ರಂಗ ಶಂಕರ’ದ ಇತಿಹಾಸದಲ್ಲೇ ಹಾಗೊಂದು ಘಟನೆ ಬಹುಶಃ ನಡೆದಿರಲಿಕ್ಕಿಲ್ಲವೇನೋ.

ವಿಷಯ ಏನೆಂದರೆ: ‘ರಂಗಶಂಕರ’ದಲ್ಲಿ ಮೊದಲಿನಿಂದಲೂ ಶಿಸ್ತಿಗೆ ಪ್ರಪ್ರಥಮ ಆದ್ಯತೆ. ನಾಟಕ ಪ್ರಾರಂಭಕ್ಕೆ ತುಸು ಮುನ್ನವೇ ಪ್ರೇಕ್ಷಾಗೃಹದ ಬಾಗಿಲುಗಳು ಬಂದ್. ಮಧ್ಯಂತರದ ತನಕ, ಅದಿಲ್ಲದಿದ್ದರೆ ಮುಕ್ತಾಯದ ತನಕವೂ ಯಾರೆಂದರೆ ಯಾರೂ ಒಳಬರುವಂತಿಲ್ಲ. ಅತ್ಯಂತ ಕಟ್ಟುನಿಟ್ಟಾಗಿಯೇ ಇದುತನಕ ಈ ನಿಯಮ ಪಾಲಿಸಿಕೊಂಡು ಬಂದಿರುವ ‘ರಂಗಶಂಕರ’ದ ಬಾಗಿಲುಗಳು ನಾಟಕ ಆರಂಭವಾದ ಮೇಲೆ ತಡವಾಗಿ ಬಂದ ಮಂತ್ರಿ ಮಹೋದಯರುಗಳಿಗೂ ಮುಚ್ಚಿದ ಬಾಗಿಲುಗಳೇ! ಎಷ್ಟೋ ಬಾರಿ ಅನೇಕರು ಮುಂಗಡವಾಗಿ ಟಿಕೇಟ್ ತೆಗೆದುಕೊಂಡಿದ್ದರೂ ಸಮಯಕ್ಕೆ ಸರಿಯಾಗಿ ರಂಗಶಂಕರ ತಲುಪಲಾಗದೆ ನಾಟಕ ನೋಡಲಾಗದೆ ನಿರಾಶರಾಗಿರುವುದುಂಟು. ಅನೇಕರು ಸಭೆ ಸಮಾರಂಭಗಳಲ್ಲಿ ರಂಗಶಂಕರದ ಈ ನಿಯಮವನ್ನು ಟೀಕಿಸಿರುವುದೂ ಉಂಟು. ನಾನೇ ಕೆಲಬಾರಿ ಅದಕ್ಕೆ ಸಾಕ್ಷಿಯಾಗಿದ್ದೇನೆ ಅಷ್ಟೇ ಅಲ್ಲ, ಒಮ್ಮೆ ಉಡುಪಿಯ ಒಂದು ಸಭೆಯಲ್ಲಿ ರಂಗಶಂಕರದ ನಿಲುವನ್ನು ಸಮರ್ಥಿಸಿಕೊಂಡು ರಂಗಭೂಮಿಯ ಶಿಸ್ತಿನ ಮಹತ್ವವನ್ನು ಜೋರುದನಿಯಲ್ಲಿಯೇ ಸಾರಿದ್ದೇನೆ. ಇರಲಿ.

ರಂಗಶಂಕರದಲ್ಲಿ 7.30 ಕ್ಕೆ ಸರಿಯಾಗಿ ನಾಟಕ ಆರಂಭವಾಗಬೇಕು. ಅದೂ ಸಹಾ ಕಡ್ಡಾಯವೇ.
ನಮ್ಮ ನಾಟಕದಲ್ಲಿ ಒಂದು ಮುಖ್ಯ ಪಾತ್ರವನ್ನು ಶ್ರೀವಾಣಿ ಎಂಬಾಕೆ ನಿರ್ವಹಿಸುತ್ತಿದ್ದರು. ಒಂದು ಪ್ರದರ್ಶನದ ದಿನ ಸಂಜೆ 7 ಗಂಟೆಯಾದರೂ ಆಕೆ ರಂಗಶಂಕರಕ್ಕೆ ಬಂದಿರಲಿಲ್ಲ. 7.30 ಕ್ಕೆ ನಾಟಕ ಆರಂಭವಾಗಬೇಕು! ˌ ಬಹುಶಃ ಎಲೆಕ್ಟ್ರಾನಿಕ್ ಸಿಟಿಯ ಭಾಗದಿಂದ ಬರುತ್ತಿದ್ದ ಆಕೆ ಅಂದು ಭಾರೀ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿದ್ದಾರೆ! ನಮಗೋ ಆತಂಕವೋ ಆತಂಕ! ಬೆಂಗಳೂರು ನಗರದ ಆ ಭಾಗದ ಜನ—ವಾಹನ ದಟ್ಟಣೆಯ ಪರಿಚಯವಿರುವವರಿಗೆ ನಮ್ಮ ಆತಂಕದ ಕಾರಣ ಚೆನ್ನಾಗಿ ಅರ್ಥವಾಗುತ್ತದೆ! ನಿಮಿಷಗಳು ಉರುಳುತ್ತಲೇ ಹೋದವು…ಫೋನ್ ಸಂಪರ್ಕಕ್ಕೆ ಸಿಕ್ಕಾಗಲೆಲ್ಲಾ ವಾಣಿಯವರು ‘ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ’ ಎನ್ನುತ್ತಿದ್ದರು. ಹತ್ತು ನಿಮಿಷಗಳು ಉರುಳಿದ ಮೇಲೆ ಮತ್ತೈದು ನಿಮಿಷ! ‘ಜಯನಗರ ನಾಲ್ಕನೇ ಬ್ಲಾಕ್ ಗೆ ಬಂದಾಗಿದೆ..ನೀವು ನಾಟಕ ಶುರುಮಾಡಿ..ನನ್ನ ಪ್ರವೇಶ ಹೇಗೂ ನಾಟಕ ಪ್ರಾರಂಭವಾದ ಇಪ್ಪತ್ತು ನಿಮಿಷಗಳ ನಂತರ…ಅಷ್ಟರೊಳಗೆ ನಾನು ಅಲ್ಲಿರುತ್ತೇನೆ’ ಎಂದಾಕೆ ಹೇಳಿದರೂ ನಾಟಕ ಪ್ರಾರಂಭಿಸಲು ನಮಗೇ ಧೈರ್ಯ ಸಾಲದು. ಮತ್ತೇನೋ ಎಡವಟ್ಟಾಗಿ ಪ್ರವೇಶದ ಸಮಯಕ್ಕೆ ಆಕೆ ಬಾರದೇ ಹೋದರೆ?

ಕೊನೆಗೂ ಸಮಯ ಮೀರಿಯೇ ಹೋಯಿತು! ಗಡಿಯಾರದ ಮುಳ್ಳುಗಳು ಭಾರೀ ಅವಸರದಿಂದ 7.30 ರ ಸಂಖ್ಯೆಯನ್ನು ದಾಟಿಯೇ ಬಿಟ್ಟವು! ಸುಮಾರು 7.40 ರ ವೇಳೆಗೆ ವಾಣಿಯವರು ರಂಗಶಂಕರಕ್ಕೆ ಆಗಮಿಸಿದರು. ಆ ವೇಳೆಗಾಗಲೇ ನಾನು ರಂಗದ ಮೇಲೆ ಹೋಗಿ ಆಗಿರುವ ಸಮಸ್ಯೆಯನ್ನು ಪ್ರೇಕ್ಷಕರಿಗೆ ವಿವರಿಸಿ ಸಹಕಾರ ನೀಡುವಂತೆ ಪ್ರಾರ್ಥಿಸಿಕೊಂಡಿದ್ದೆ. ಅಂತೂ 10—12 ನಿಮಿಷ ತಡವಾಗಿ ಅಂದು ನಾಟಕ ಪ್ರಾರಂಭವಾಗಿ ಅಪರೂಪದಲ್ಲಿ ಅಪರೂಪದ ಪ್ರಸಂಗವೊಂದು ರಂಗಶಂಕರದ ಇತಿಹಾಸದಲ್ಲಿ ದಾಖಲಾಯಿತು.

ಹಾಸ್ಯನಾಟಕಗಳಿಗೆ ಕೊಂಚ ಜನಪ್ರೀತಿ ಹೆಚ್ಚಾಗಿಯೇ ಲಭಿಸುತ್ತದೆಂಬುದು ನನ್ನ ಅನಿಸಿಕೆ. ನಮ್ಮ ನಾಟಕ ಅತಿ ಶೀಘ್ರವಾಗಿ 50 ಪ್ರದರ್ಶನಗಳನ್ನು ಪೂರೈಸಿದ್ದೂ ಈ ಮಾತಿಗೆ ಒಂದು ನಿದರ್ಶನವೇ. ಇದೇ ಸಂದರ್ಭದಲ್ಲಿಯೇ ಅಮೆರಿಕೆಯಿಂದ
ಆಗಮಿಸಿದ್ದ ಕೆಲ ರಂಗಮಿತ್ರರು ನಮ್ಮ ನಾಟಕವನ್ನು ನೋಡಿ ಅಮೆರಿಕೆಯಲ್ಲಿಯೂ ನಮ್ಮ ನಾಟಕದ ಹಲವಾರು ಪ್ರದರ್ಶನಗಳನ್ನು ಏರ್ಪಡಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಈ ಒಂದು ಆಹ್ವಾನವನ್ನು ಕೇಳಿ ಸಹಜವಾಗಿಯೇ ಎಲ್ಲ ಕಲಾವಿದರಿಗೂ ಪರಮಾನಂದವಾಗಿಹೋಯಿತು. ದೊಡ್ಡ ಗೌರವದ ಅವಕಾಶವಲ್ಲವೇ ಅದು!

ವಾಸ್ತವವಾಗಿ ಸಂದಿಗ್ಧಕ್ಕೆ ಸಿಕ್ಕಿಹಾಕಿಕೊಂಡವನು ನಾನು! ಅಣ್ಣನ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದ ಸಂಗತಿಯನ್ನು ಹೇಳಿದ್ದೇನಲ್ಲಾ.. ವೈದ್ಯರು ಹತಾಶೆಯತ್ತ ಜಾರತೊಡಗಿದ್ದರು. ಯಾವ ಚಿಕಿತ್ಸೆಗೂ ಅಣ್ಣ ಸ್ಪಂದಿಸುತ್ತಿರಲಿಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು. ಅಂಥ ಮಾತು ವೈದ್ಯರಿಂದಲೇ ಬಂದಮೇಲೆ ನಾನು ಯಾವ ಧೈರ್ಯದ ಮೇಲೆ 30—40 ದಿನಗಳ ಕಾಲ ಅಮೆರಿಕೆಗೆ ಹೋಗಿ ಕುಳಿತುಕೊಳ್ಳಲಿ? ತೀರಾ ತುರ್ತುಪರಿಸ್ಥಿತಿ ಎದುರಾಗಿಬಿಟ್ಟರೆ ನಾನು ಅಮೆರಿಕೆಯಿಂದ ಭಾರತಕ್ಕೆ ಮರಳಿ ಬರಲಾದರೂ ಆದೀತೇ? ಹಾಗೊಂದು ವೇಳೆ ಬಂದುಬಿಟ್ಟರೂ ನಾಟಕದ ಗತಿ ಏನು? ಮುಖ್ಯ ಪಾತ್ರವೇ ಇಲ್ಲದೇ ಪ್ರದರ್ಶನಗಳು ನಡೆಯುವುದಾದರೂ ಹೇಗೆ? ಇಡೀ ತಂಡವೇ ಮರಳಿ ಬಂದುಬಿಡಬೇಕಾಗುತ್ತದೆ ಅಷ್ಟೇ. ಆಗ ಎಷ್ಟು ಶ್ರಮ—ಹಣ—ಸಮಯ ಎಲ್ಲವೂ
ವ್ಯರ್ಥವಾದಂತಾಗಿಬಿಡುವುದಿಲ್ಲವೇ? ಹೀಗೆ ಎಲ್ಲ ದೃಷ್ಟಿಯಿಂದ ಆಲೋಚನೆ ಮಾಡಿ ನಾನು ತಂಡದೊಂದಿಗೆ ಹೋಗದಿರುವುದೇ ಸೂಕ್ತ ಎಂದು ನಿರ್ಧರಿಸಿದೆ. ಗೆಳೆಯ ಸೂರಿಯೊಂದಿಗೆ ಈ ಕುರಿತು ಚರ್ಚಿಸಿ ಬೇರೊಬ್ಬ ನಟನನ್ನು ನನ್ನ ಬದಲಿಗೆ ತಯಾರು ಮಾಡಿ ಪ್ರವಾಸ ಮುಂದುವರಿಸಲು ಸೂಚಿಸಿದೆ. ಸೂರಿಗೆ ಆ ಸಲಹೆ ಅಷ್ಟೇನೂ ರುಚಿಸಲಿಲ್ಲ. ಅಷ್ಟು ದೊಡ್ಡ ಪ್ರಮುಖ ಪಾತ್ರಕ್ಕೆ ಹೊಸಬನನ್ನು ತಯಾರು ಮಾಡುವುದು ಸುಲಭದ ಸಂಗತಿ ಏನಾಗಿರಲಿಲ್ಲˌ. ಜೊತೆಗೆ ಅಷ್ಟು ಸಮಯವೂ ಇರಲಿಲ್ಲವೆನ್ನಿ. ಇದೇ ವೇಳೆಯಲ್ಲಿ ನನ್ನ ಮನಸ್ಸಿಗೆ ವಿಪರೀತ ನೋವಾಗುವಂತಹ ಪ್ರಸಂಗವೊಂದು ಜರುಗಿತು.

ಈ ಪ್ರವಾಸದ ಆಯೋಜನೆಯ ಮುಂಚೂಣಿಯಲ್ಲಿದ್ದ ಮಹನೀಯರೊಬ್ಬರು ಒಮ್ಮೆ ನನ್ನನ್ನು ಭೇಟಿಯಾಗಿ ನಾನು ಅಮೆರಿಕೆಗೆ ಹೋಗುವ ಸಾಧ್ಯಾಸಾಧ್ಯತೆಗಳ ಕುರಿತಾಗಿ ವಿಸ್ತೃತವಾಗಿ ಚರ್ಚಿಸಿದರು. ನಾನು ಖಡಾಖಂಡಿತವಾಗಿ ಕಡ್ಡಿ ಎರಡು ತುಂಡು ಮಾಡಿದಂತೆ ‘ಸಾಧ್ಯವೇ ಇಲ್ಲ’ ಎಂದುಬಿಟ್ಟೆ. ಆ ದೊಡ್ಡಮನುಷ್ಯರು ಸುಮ್ಮನಾಗಲಿಲ್ಲ. ಅಣ್ಣನ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ವಿಚಾರಿಸತೊಡಗಿದರು. ನಾನು ಇದ್ದ ವಿಷಯವನ್ನೆಲ್ಲಾ ಇದ್ದ ಹಾಗೆಯೇ ಹೇಳಿ ವೈದ್ಯರ ಅಭಿಪ್ರಾಯಗಳನ್ನೂ ಪ್ರಾಸಂಗಿಕವಾಗಿ ಹೇಳಿ ಮತ್ತೊಮ್ಮೆ ‘ನಾನು ಬರಲು ಸಾಧ್ಯವೇ ಇಲ್ಲ ‘ಎಂದವರಿಗೆ ತಿಳಿಸಿದೆ.

ಒಂದು ಕ್ಷಣ ಯಾವುದೋ ಗಾಢ ಯೋಚನೆಯಲ್ಲಿ ಮುಳುಗಿದ ಆ ವ್ಯಕ್ತಿ ನಿಧಾನವಾಗಿ ಶಬ್ದಗಳನ್ನು ಜೋಡಿಸಿಕೊಂಡು, “ಪ್ರಭು, ನಾವು ಕೆಲ ದಿನಗಳು ಕಾಯಲು ಸಿದ್ಧ..ನಮ್ಮ ಶೆಡ್ಯೂಲ್ ಅನ್ನ ಒಂದು ತಿಂಗಳ ಮಟ್ಟಿಗೆ ಮುಂದೆ ಹಾಕಿಕೊಳ್ಳೋಣವೇ” ಎಂದರು. ಅವರ ಮಾತುಗಳು ತಕ್ಷಣಕ್ಕೆ ನನಗೆ ಅರ್ಥವಾಗದಿದ್ದರೂ ಕ್ರಮೇಣ ಅದರ ಪ್ರಕ್ಷಿಪ್ತ ಭಾವ ಅರಿವಿಗೆ ಬಂದು ನಾನು ತಲ್ಲಣಿಸಿಬಿಟ್ಟೆ. ಅಂದರೆ ಏನರ್ಥ? ಒಂದು ತಿಂಗಳು ಕಾಯುತ್ತೇವೆ ಎಂದರೆ ಏನರ್ಥ? ಅಷ್ಟರೊಳಗೆ ಅಣ್ಣನಿಗೆ ಮುಕ್ತಿ ದೊರಕಿಬಿಟ್ಟರೆ ನಾನು ಅವರೊಟ್ಟಿಗೆ ಅಮೆರಿಕೆಗೆ ಹೋಗಬಹುದು ಎಂದಲ್ಲವೇ! ಅಂದರೆ ಪರೋಕ್ಷವಾಗಿ—ಅಲ್ಲ, ನೇರವಾಗಿಯೇ ಈ ಮಹಾನುಭಾವ ಅಣ್ಣನ ಮುಕ್ತಿಯ ದಿನಗಳನ್ನು ಕಾಯುತ್ತಿದ್ದಾರೆ.

ಹೀಗೂ ಯೋಚನೆಗಳು ಬರಲು ಸಾಧ್ಯವೇ? ಒಬ್ಬರ ಸಾವನ್ನು ಬಯಸುವ—ನಿರೀಕ್ಷಿಸುವ ಮಟ್ಟಿಗೆ ಸಂವೇದನೆಗಳನ್ನು ಕಳೆದುಕೊಂಡು
ಬಿಡುವುದು ಸಾಧ್ಯವೇ? ಅಂಥ ಕೆಟ್ಟ ಆಲೋಚನೆಗಳು ಒಂದೊಮ್ಮೆ ಧುಮುಕಿದರೂ ಅವನ್ನು ಮುಚ್ಚಿಟ್ಟುಕೊಳ್ಳುವಷ್ಟಾದರೂ ಸಂಯಮ ಬೇಡವೇ? ತೀರಾ ಅಸಹ್ಯವೆನ್ನಿಸಿಬಿಟ್ಟಿತು. ಇನ್ನೊಂದು ಮಾತೂ ಆಡದೇ ಅಲ್ಲಿಂದ ನಡೆದುಬಿಟ್ಟೆ. ಯಾವುದೇ ಕಾರಣಕ್ಕೂ ಎಂಥದೇ ಸಂದರ್ಭದಲ್ಲೂ ನನ್ನ ನಿರ್ಧಾರ ಬದಲಾಗದು ಎಂಬ ಸಂದೇಶ ರವಾನಿಸಿಬಿಟ್ಟೆ. ಕೊನೆಗೆ ನಿರ್ದೇಶಕ ಸೂರಿಯೇ ಆ ಪಾತ್ರವನ್ನು ನಿರ್ವಹಿಸಲು
ಸಿದ್ಧತೆ ಮಾಡಿಕೊಂಡ.

ನಿಗದಿಯಾಗಿದ್ದ ಸಮಯದಲ್ಲಿಯೇ ಇಡೀ ತಂಡ ಅಮೆರಿಕೆಗೆ ಹೋಗಿ ಹತ್ತಾರು ಯಶಸ್ವೀ ಪ್ರದರ್ಶನಗಳನ್ನು ಮುಗಿಸಿಕೊಂಡು ಬಂದಿತು. ಅಲ್ಲಿಯವರೆಗೂ ಅಣ್ಣ ನಮ್ಮ ಜೊತೆಗೇ ಇದ್ದರು. ಆದರೂ ಒಂದು ಕ್ಷಣದ ಮಟ್ಟಿಗೂ ನನಗೆ ‘ಅಮೆರಿಕೆಗೆ ಹೋಗಲಾಗಲಿಲ್ಲವಲ್ಲಾ’ ಎಂದು ಖೇದವಾಗಲಿಲ್ಲ…ಅವಕಾಶ ತಪ್ಪಿತೆಂದು ನಿರಾಶೆಯಾಗಲಿಲ್ಲ. ಆ ದಿನಗಳಲ್ಲಿ ಅಣ್ಣನೊಟ್ಟಿಗೆ ಕೊಂಚ ಸಮಯ ಕಳೆಯಲು ಅವಕಾಶ ಸಿಕ್ಕಿದ್ದು ನನಗೆ ಸಮಾಧಾನವನ್ನೇ ತಂದಿತು. ತಂಡದವರು ಪ್ರವಾಸ ಮುಗಿಸಿಕೊಂಡು ಬಂದಮೇಲೆ ಮತ್ತೆ ಬೆಂಗಳೂರಿನಲ್ಲಿ ಹಲವಾರು ಪ್ರದರ್ಶನಗಳು ಏರ್ಪಾಡಾದವು. ಆದರೆ ಯಾಕೋ ಮತ್ತೆ ಆ ಪಾತ್ರ ನಿರ್ವಹಿಸಲು ಮನಸ್ಸಾಗಲಿಲ್ಲ. ‘ಆಗುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ.

‍ಲೇಖಕರು avadhi

April 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: