The whole attire is swadeshi, Why only the shoe is videshi?

ವಿಜಯೇಂದ್ರ 

27 ವರ್ಷಗಳ ಕಡತ ಹೆಕ್ಕಿ ಇದನ್ನು ಬರೆದಿದ್ದೇನೆ-

1991 ಮೇ 21 “ಮಿಸ್ಟರ್ ಕ್ಲೀನ್” ಎಂದು ಹೆಸರಾಗಿ, ಇಂದಿರಾಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟದಲ್ಲಿ ಮಿಂಚಿ ಮರೆಯಾಗಿ ಮಾಜಿಯಾಗಿದ್ದ  ರಾಜೀವ್ ಗಾಂಧಿ ಹಿಂದಿನ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.  ಕುಮಾರ ಕೃಪ ದಲ್ಲಿ ವಾಸ್ತವ್ಯ ಹೂಡಿದ್ದರು.

ಬೆಳಗ್ಗೆ ಬೆಂಗಳೂರು ಪತ್ರಕರ್ತರೊಂದಿಗೆ ಉಭಯ ಕುಶಲೋಪರಿಯ ನಂತರ ತಮಿಳುನಾಡು ಚುನಾವಣಾ ಪ್ರವಾಸಕ್ಕೆ ತೆರಳುತ್ತಾರೆ ಎಂಬ ಮಾಹಿತಿಯೂ ಆಹ್ವಾನವೂ ಕೆ.ಪಿ.ಸಿ.ಸಿ. ಕಛೇರಿಯಿಂದ ಲಭಿಸಿತ್ತು.  “ಬೆಂಗಳೂರು ಇವಿನಿಂಗರ್” ಆಂಗ್ಲ ಸಂಜೆ ಪತ್ರಿಕೆಯ ಏಕಮಾತ್ರ ವರದಿಗಾರನಾಗಿ ನಾನು ಕುಮಾರಕೃಪಾ ಸಭಾಂಗಣಕ್ಕೆ ತಲುಪುವ ವೇಳೆಗಾಗಲೇ ರಾಜೀವ್ ಗಾಂಧಿ ಆಗಮಿಸಿಬಿಟ್ಟಿದ್ದರು.

ಪತ್ರಕರ್ತರೂ, ಅರೆ ಪತ್ರಕರ್ತರೂ, ಹವ್ಯಾಸಿ ಪತ್ರಕರ್ತರೂ ಅಲ್ಲದೇ ಬಹು ಸಂಖ್ಯೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರೂ ತುಂಬಿ ತುಳುಕಾಡುತ್ತಿತ್ತು.  ನನಗೆ ಕೂರಲು ಎಲ್ಲೂ ಸ್ಥಳವಿಲ್ಲದೆ ಒಂದೆರಡು ನಿಮಿಷ ಬಾಗಿಲಲ್ಲೇ ನಿಂತು ರಾಜೀವ್ ಗಾಂಧಿ ಅವರ ಮಾತುಗಳನ್ನು ಆಲಿಸುತ್ತಿದ್ದೆ.  ಮಾತಿನ ಭರದಲ್ಲಿ ರಾಜೀವ್ ಗಾಂಧಿ ಅವರಿಗೆ ನಾನು ಬಾಗಿಲ ಬಳಿ ನಿಂತಿದ್ದು ಕಂಡಿತು.  ಕೂಡಲೇ ನನ್ನನ್ನು ಉದ್ದೇಶಿಸಿ “please come here” ಇದರ್ ಬೈಟಿಯೇ” ಎಂದು ಆಹ್ವಾನಿಸಿದರು.  ತಮ್ಮ ಮುಂದೆ ಇದ್ದ ಕಿರು ಜಾಗ ತೋರಿಸಿದರು.  ಎಲ್ಲಿಂದಲೋ ಕುರ್ಚಿಯೊಂದನ್ನು ತಂದು ಆ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.  ಅಂದಿನ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯೂ ಮಾಜಿ ಮುಖ್ಯಮಂತ್ರಿಗಳೂ ಆದ ಆರ್. ಗುಂಡೂರಾವ್ ಬದಿಗೆ ಸರಿದು ನನಗೆ ಸ್ಥಳಾವಕಾಶ ಮಾಡಿಕೊಟ್ಟರು.

ತೀರಾ ಸನಿಹದಲ್ಲಿ ಕೂತಿದ್ದ ಕಾರಣ, ಜೊತೆಗೆ ಈಗಾಗಲೇ ಪತ್ರಿಕಾಗೋಷ್ಠಿ ಆರಂಭವಾಗಿದ್ದರಿಂದ ನಾನು ಯಾವುದೇ ಪ್ರಶ್ನೆ ಕೇಳುವ ಗೋಜಿಗೆ ಹೋಗದೆ ರಾಜೀವ್ ಗಾಂಧಿ ಅವರನ್ನು ಕೂಲಂಕೂಷವಾಗಿ ವೀಕ್ಷಿಸುವ ಕಾಯಕದಲ್ಲಿ ತೊಡಗಿದೆ.
ಅದೇ ತಾನೆ ಕ್ಲೀನಾಗಿ ಶೇವ್ ಮಾಡಿಕೊಂಡ ಬಿಳಿ ವದನ, ಬಿಳಿ ಪೈಜಾಮ, ಬಿಳಿ ಜುಬ್ಬಾ, ಜುಬ್ಬಾದ ಮೇಲೆ ಕಂದು ಬಣ್ಣದ ಶೇರ್ವಾನಿಯ ದಿರಿಸಿನಲ್ಲಿ ಅತಿ ಪ್ರಫುಲ್ಲಿತರಾಗಿ ಪ್ರೆಶ್ ಆಗಿ ಕಾಣುತ್ತಿದ್ದರು.

ನಾನು ಅವರನ್ನು ಕಾಣುತ್ತಿದ್ದು ಅದೇ ಮೊದಲ ಸಲವಲ್ಲ.  ಸಂಜಯಗಾಂಧಿ ಅವರು ವಿಮಾನ ದುರ್ಘಟನೆಯಲ್ಲಿ ಅಸು ನೀಗಿದ ನಂತರ ವಿಮಾನ ಚಾಲಕ ಹುದ್ದೆಗೆ ರಾಜೀನಾಮೆ ನೀಡಿ ಅಮ್ಮನ ಯೋಗಕ್ಷೇಮಕ್ಕೆ ನಿಯುಕ್ತಿಗೊಂಡ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳ ಛಾಯಾಗ್ರಾಹಕ, ಆತ್ಮೀಯ ಗೆಳೆಯ  ಡಿ.ಎಸ್. ನವಾಜ್ ಅರಮನೆ ಆವರಣದಲ್ಲಿ ಸಂಜಯಗಾಂಧಿ ಕುರಿತ ಚಿತ್ರ ಪ್ರದರ್ಶನವೊಂದನ್ನು ಏರ್ಪಡಿಸಿದ್ದರು.

ಪ್ರದರ್ಶಿತಗೊಂಡ ನೂರಾರು ಭಾವಚಿತ್ರಗಳಿಗೆ ಇಂಗ್ಲೀಷ್ ಅಡಿಬರಹ ನೀಡುವ ಜವಾಬ್ದಾರಿ ನವಾಜ್ ನನಗೆ ಕೊಟ್ಟಿದ್ದರು.  ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಜೊತೆಗೂಡಿ ರಾಜೀವ್ ಗಾಂಧಿ ದಂಪತಿಗಳು ಪ್ರದರ್ಶನ ಉದ್ಘಾಟಿಸಿ ಒಳಬಂದಾಗ ಅವರಿಗೆ ಭಾವಚಿತ್ರಗಳ ಬಗ್ಗೆ ವಿವರಿಸಿ ಹೇಳುವ ಕೆಲಸವನ್ನೂ ನನಗೇ ವಹಿಸಿದ್ದರು. ಪ್ರತಿ ಭಾವಚಿತ್ರದ ಬಳಿಯೂ ಸಾಕಷ್ಟು ಸಮಯ ಕಳೆದು ಅಡಿಬರಹಗಳನ್ನು ಸವಿವರ ಓದಿ ಅನುಮಾನ ಬಂದಾಗ ನನ್ನನ್ನು ಪ್ರಶ್ನಿಸುತ್ತಾ ನಡೆದ ದಂಪತಿಗಳು ಇಡೀ ಪ್ರದರ್ಶನವನ್ನು ವೀಕ್ಷಿಸಲು ಒಂದು ಘಂಟೆಗೂ ಹೆಚ್ಚು ಕಾಲ ತೆಗೆದುಕೊಂಡಿದ್ದರು. ಸಂದರ್ಶಕರ ಪುಸ್ತಕದಲ್ಲಿ ಪ್ರದರ್ಶನದ ಬಗ್ಗೆ ವಿಶೇಷವಾಗಿ ನಾನು ನೀಡಿದ್ದ ಅಡಿಟಿಪ್ಪಣಿಗಳ ಬಗ್ಗೆ ಅತೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆನಂತರ ಇಂದಿರಾಗಾಂಧಿ ಅವರ ಅನಿರೀಕ್ಷಿತ ನಿರ್ಗಮನದ ನಂತರ ಪ್ರಧಾನಿಯಾಗಬೇಕಾಗಿ ಬಂದ ರಾಜೀವ್ ಗಾಂಧಿ ಆನಂತರವೂ ಹಲವು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದರು. ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಹೊರದೂಡಿ ಸರ್ವಾಧಿಕಾರಿ ಮನೋಭಾವ ತೋರಿಸಿದಾಗ ಅದನ್ನು ಪ್ರತಿಭಟಿಸಿ ಲೇಖನ ಕೂಡ ಬರೆದಿದ್ದೆ. ಇಷ್ಟಾಗಿಯೂ ನಾನು ಅವರ ಯಾವುದೇ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.

ಇಂತಹ ರಾಜೀವ್ ಗಾಂಧಿ ಕೇವಲ 5 ವರ್ಷಗಳಲ್ಲಿ ಅಧಿಕಾರ ವಂಚಿತರಾಗಿ ವಿರೋಧ ಪಕ್ಷದಲ್ಲಿ ಕೂರಬೇಕಾಗಿತ್ತು. ತಮ್ಮ ಜೊತೆಗಿದ್ದವರೇ ತಮ್ಮನ್ನು ತ್ಯಜಿಸಿ ಭ್ರಷ್ಟಾಚಾರದ ಆರೋಪಗಳನ್ನು ಸುರಿಸುತ್ತಾ ತೇಜೋವಧೆ ಮಾಡುತ್ತಿದ್ದರೂ ರಾಜೀವ್ ಗಾಂಧಿಯವರು ಮಾತ್ರ ಯಾವುದೇ ವೈಯಕ್ತಿಕ ನಿಂದೆಗಿಳಿಯದೆ, ವ್ಯಕ್ತಿಗತ ಚಾರಿತ್ರ್ಯ ಹರಣ ಮಾಡದೇ ವಿಷಕಂಠನಂತೆ ಎಲ್ಲವನ್ನೂ ಭರಿಸಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಂಡೇ ಬಂದಿದ್ದರು. 1991ರಲ್ಲಿ ಮತ್ತೊಮ್ಮೆ ಚುನಾವಣೆ ಎದುರಾಗಿತ್ತು. ಉತ್ತರ ಭಾರತದಲ್ಲಿ ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಮುಗಿದು ರಾಜೀವ್ ಗಾಂಧಿ ದಕ್ಷಿಣ ಭಾರತದಲ್ಲಿ ಪ್ರಚಾರಕ್ಕಾಗಿ ಬೆಂಗಳೂರಿಗೆ ಕಾಲಿರಿಸಿದ್ದರು.

ರಾಜೀವ್ ಗಾಂಧಿ ಅವರು ಧರಿಸಿದ ವೇಷಭೂಷಣಗಳಲ್ಲಿ ನನ್ನ ಕಣ್ಣು ಸೆಳೆದಿದ್ದು ಎಂದರೆ ಅವರು ಧರಿಸಿದ್ದ ಷೂ, ಬಿಳಿ ಬಣ್ಣದ ನೀಲಿ ಅಡ್ಡಗೆರೆಗಳ ವಿದೇಶಿ ಷೂ ಅವರ ವ್ಯಕ್ತಿತ್ವಕ್ಕೆ ಅನುರೂಪವಾಗಿತ್ತು.  ಆದರೆ ಅವರು ತೊಟ್ಟಿದ್ದ ಸ್ವದೇಶಿ ದಿರುಸಿಗೆ ಸ್ವಲ್ಪವೇ ಅಭಾಸವೆನಿಸುತ್ತಿತ್ತು.  ಪ್ರಶ್ನೆಗಳ ಭರಾಟೆ ಮುಗಿಯಲಿ. ಈ ವೈರುದ್ಯದ ಬಗ್ಗೆ ರಾಜೀವ್ ಅವರನ್ನೇ ಕೇಳಿ ಬಿಡೋಣವೆಂದು ನಿಶ್ಚಯಿಸಿ ಮನಸ್ಸಿನಲ್ಲೇ question frame ಕೂಡಿಕೊಳ್ಳುತ್ತಾ ಕುಳಿತೆ.

ಆ ವೇಳೆಗಾಗಲೇ ನಾನು ಅವರ ಷೂವನ್ನೇ ತದೇಕಚಿತ್ತನಾಗಿ ನೋಡುತ್ತಿದ್ದ ವಿದ್ಯಮಾನ ರಾಜೀವ್ ಗಾಂಧಿ ಅವರ ಗಮನಕ್ಕೂ ಬಂದಿತ್ತು. ಅಂತೆಯೇ ಅವರೂ ಪತ್ರಿಕಾಗೋಷ್ಠಿಯನ್ನು ಮುಗಿಯುವುದನ್ನೇ ಕಾಯುತ್ತಿದ್ದರೇನೋ ಎಂಬಂತೆ ಪತ್ರಕರ್ತರನ್ನು ಉಪಹಾರಕ್ಕೆ ಆಹ್ವಾನಿಸಿದ ಕೂಡಲೇ ನನ್ನ ಮೇಲೆ ನಗೆಯ ಮಿಂಚನ್ನು ಹರಿಸಿದರು. ನಾನು ಕೇಳಿಯೇ ಬಿಟ್ಟೆ “the whole attire is swadeshi, why only the shoe is videshi? ನನ್ನ ಮಾತಿಗೆ ರಾಜೀವ್ ಗಾಂಧಿ ಅವರ ಪ್ರತಿಕ್ರಿಯೆ ಮಾತ್ರ ದೊಡ್ಡ ದನಿಯ ತಡೆಯಿಲ್ಲದ ನಗು ಮಾತ್ರ. ಕಕ್ಕಾಬಿಕ್ಕಿಯಾದ ನಾನು ನಗುವಿಗೆ ಬದಲಾಗಲು ಸ್ವಲ್ಪ ಸಮಯವೇ ಹಿಡಿಯಿತು.  ಶ್ರೀ ಗುಂಡೂರಾವ್ ಅಲ್ಲದೆ ಅಂದಿನ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಶ್ರೀ  ಆಸ್ಕರ್ ಫರ್ನಾಂಡೀಸ್ ಅವರೂ ಕೂಡ ತಮ್ಮ ಸಶಬ್ದ ನಗುವಿನಿಂದಾಗಿ, ಹಾಲಿನಲ್ಲಿದ್ದ ಇತರರೆಲ್ಲರೂ ನಮ್ಮತ್ತ ಕಣ್ಣು ಹಾಯಿಸುವಂತೆ ಮಾಡಿತು.

ಪ್ರಾಯಶ: ಕಾಲಪುರುಷ ಕೂಡ ನಮ್ಮನ್ನು ನೋಡಿ ನಮ್ಮೊಂದಿಗೇ ಗಹಗಹಿಸಿ ನಕ್ಕಿರಬೇಕು.

ಅದೇ ದಿನ ರಾತ್ರಿ ತಮ್ಮ ಬಿರುಸಿನ ಪ್ರಚಾರ ನಡೆಸಿ ಅಂತಿಮ ಸಭೆಯಲ್ಲಿ ಪಾಲುಗೊಳ್ಳಲು ಚೆನ್ನೈ ಸಮೀಪದ ಶ್ರೀ ಪೆರಂಬದೂರು (ಇದು ರಾಮಾನುಜಾ ಚಾರ್ಯರ ಜನ್ಮಸ್ಥಳವೂ ಒಂದು) ಅಪರಾತ್ರಿಯಲ್ಲಿ ಬಂದು ರಕ್ಷಣಾ ವಲಯವನ್ನೂ ಭೇಧಿಸಿ ಜನ ಸಮೂಹದತ್ತ ನುಗ್ಗಿ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದಾಗ ಮಾನವ ಬಾಂಬ್ ಒಂದು ಸ್ಪೋಟವಾಗಿ ಕ್ಷಣಾರ್ಧದಲ್ಲಿ ರಾಜೀವ್ ಗಾಂಧಿ ಅವರನ್ನು ಧರಾಶಾಯಿಯನ್ನಾಗಿಸಿತ್ತು. ಅವರ ಸುತ್ತಲೂ ಇದ್ದ ಹಂತಕಿಯೂ ಸೇರಿದಂತೆ ಹತ್ತಾರು ಮಂದಿ ಸ್ಪೋಟಕ್ಕೆ ಸಿಲುಕಿ ಅಸುನೀಗಿದ್ದರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಶೇಷಗಳಲ್ಲಿ ರಾಜೀವ್ ಗಾಂಧಿಯವರ ಶವ ಯಾವುದು ಎಂದು ಗುರುತಿಸುವುದೇ ಪ್ರಯಾಸಕರವಾಗಿತ್ತು.  ಆಗ ಕಾಂಗ್ರೆಸ್ ನಾಯಕರಾದ ಶ್ರೀ ವಿ. ರಾಮಮೂರ್ತಿ ಹಾಗೂ ಶ್ರೀಮತಿ ಮರಗತಂ ಚಂದ್ರಶೇಖರ್ ಅವರ ನೆರವಿಗೆ ಬಂದ್ದದ್ದು ಬೆಳ್ಳಂಬೆಳಗ್ಗೆ ನನ್ನ ಗಮನವನ್ನು ಸೆಳೆದು ನನ್ನ ಮೂರ್ಖ ಪ್ರಶ್ನೆಯಿಂದ ರಾಜೀವ್ ಗಾಂಧಿ ಅವರ ನಗುವಿಗೆ ಕಾರಣೀಭೂತವಾಗಿದ್ದ ಅವರ ವಿಶೇಷ ಷೂ.

ರಾಜೀವ್ ಹಂತಕರನ್ನು ಪತ್ತೆ ಹಚ್ಚಲು ಬೆಂಗಳೂರಿನವರೇ ಆದ ಡಿ.ಆರ್.ಕಾರ್ತೀಕೇಯನ್ ನಾಯಕತ್ವದಲ್ಲಿ SIT ರಚನೆಯಾಯಿತು. ತಂಡದಲ್ಲಿದ್ದ ನನ್ನ ಸುದ್ದಿಮೂಲಗಳಿಂದ ಪಡೆದ ಮಾಹಿತಿಯನ್ನು ಆಧರಿಸಿ ರಾಜೀವ್ ಹಂತಕರು ಬೆಂಗಳೂರು ನಗರದಲ್ಲಿ ಕನಕಪುರ ರಸ್ತೆಯ ಆಸುಮಾಸಿನಲ್ಲಿ ಅಡಗಿರಬಹುದೆಂಬ ಊಹಾತ್ಮಕ ವರದಿಯನ್ನು ಪ್ರಕಟಿಸಿದ್ದೆ. ಅದಾದ ಕೆಲವೇ ದಿನಗಳಲ್ಲಿ ಮುತ್ತತ್ತಿ ಮತ್ತು ಕೋಣನಕುಂಟೆ  ಹಂತಕರ ಅಡಗುದಾಣಗಳು ಪತ್ತೆಯಾದವು. ಪೋಲೀಸ್  ದಾಳಿಯಲ್ಲಿ ಶುಭಾ- ಶಿವರಸನ್ ಸಹಿತ ಹತ್ತಾರು ಮಂದಿ ಎಲ್ ಟಿ ಟಿ ಈ ಕಾರ್ಯಕರ್ತರು ಸಯನೇಡ್ ನುಂಗಿ ಅಸುನೀಗಿದ್ದರು ಎಂಬುದು ಈಗ ಇತಿಹಾಸ.

‍ಲೇಖಕರು Avadhi Admin

August 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: