ಬಾಗಿಲು ಹಾಕದ ಮನೆ

ರಾತ್ರಿ ಮಲಗುವ ಮುನ್ನ ಮನೆಯ ಮುಂಭಾಗಿಲನ್ನು ಭದ್ರವಾಗಿ ಹಾಕಿಕೊಂಡು ಮಲಗಬೇಕೆಂಬುದು ಎಲ್ಲ ಮನೆಗಳಲ್ಲೂ ಸಾಮಾನ್ಯವಾಗಿ ಜಾರಿಯಲ್ಲಿರುವ ಅಲಿಖಿತ ನಿಯಮ.

ಇದನ್ನು ದೊಡ್ಡ ದೊಡ್ಡ ಬಂಗಲೆಗಳಿಂದ ಹಿಡಿದು ಚಿಕ್ಕ ಗುಡಿಸಲುಗಳಲ್ಲೂ ಚಾಚೂ ತಪ್ಪದೆ ಪಾಲಿಸಲಾಗುತ್ತದೆ. ಇದೊಂದು ಕಂಡೀಷನ್ ಲರ್ನಿಂಗ್ . ಎಷ್ಟೋ ವರ್ಷಗಳಿಂದ ಎಲ್ಲರೂ ಹೀಗೆ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿಯೇ ಇದೊಂದು ಪ್ರಶ್ನಾತೀತ ಸಂಗತಿಯಾಗಿ ಪಾಲಿಸಲ್ಪಡುತ್ತದೆ.‌

ಪ್ರಶ್ನಿಸದೇ, ಪರೀಕ್ಷಿಸದೇ  ಏನನ್ನೂ ಒಪ್ಪಿಕೊಳ್ಳಬಾರದು ಎಂಬುದನ್ನು ನಿಷ್ಠುರವಾಗಿ ಚಾಲ್ತಿಯಲ್ಲಿಟ್ಟಿದ್ದ ರಾಜಾರಾಂ ಅವರಿಗೆ ಅರವತ್ತು ಆಗುತ್ತಿದ್ದಂತೆ ಈ ಬಾಗಿಲು ಹಾಕಿಕೊಂಡು ನಿದ್ರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಜ್ಞಾಸೆ ಶುರುವಾಯಿತು. ಒಂದು ದಿನ ರಾತ್ರಿ ಮನೆಮಂದಿಯೆಲ್ಲ ಊಟ ಮುಗಿಸಿ ಮಲಗುವ ಸಮಯದಲ್ಲಿ ಎಂದಿನಂತೆ ಮನೆಯ ಮುಂಬಾಗಿಲು ಹಾಕಿಕೊಂಡು ಬರಲೆಂದು ಬಂದವರು ‘ಏತಕ್ಕೆ ಬಾಗಿಲು ಹಾಕಬೇಕು ?’ ಹಾಗೆಯೇ ಬಿಟ್ಟರೆ ಏನಾಗುತ್ತದೆ ಎಂದುಕೊಂಡು ಹೆಚ್ಚು ಯೋಚಿಸದೆ ಬಾಗಿಲನ್ನು ಹಾಗೆಯೇ ತೆರೆದಿಟ್ಟು ಬಂದು ಮಲಗಿದರು. ಕೆಲ ಸಮಯ ಚಿಂತೆಗೊಳಗಾದರೂ ನಂತರದಲ್ಲಿ ನಿದ್ದೆಗೆ ಜಾರಿದರು.

ಬೆಳಗ್ಗೆ ಎಲ್ಲರಿಗಿಂತ ಬೇಗ ಏಳುವವರೂ ಅವರೇ. ಆ ದಿನ ಕೊಂಚ ತಡವಾಗಿ ಎದ್ದು ಜಗುಲಿ ದಾಟಿ ಬಂದು ಬಾಗಿಲ ಕಡೆ ಗಮನಹರಿಸುವಷ್ಟರಲ್ಲಿ‌ ಅವರ ಸೊಸೆ‌ ಆಗಲೇ ಬಾಗಿಲಿಗೆ‌ ನೀರು ಹಾಕಿ, ರಂಗೋಲಿಯನ್ನೂ ಬಿಡಿಸಿ ಬಂದಿದ್ದಳು. ಕೆಲವೊಮ್ಮೆ ಮಾವನವರೇ ಹೀಗೆ ಬೇಗ‌ ಎದ್ದು ಬಾಗಿಲು ತೆಗೆದು  ಒಂದು ಸಣ್ಣ ವಾಕ್ ಮಾಡಿಕೊಂಡು ಬಂದು ಮಲಗುವುದೂ ಉಂಟು.‌‌ ಆದ್ದರಿಂದ ಅವರ ಸೊಸೆ ತಾನು ಬಂದಾಗ ಬಾಗಿಲು ತೆರೆದೇ ಇದ್ದುದ್ದರ ಬಗ್ಗೆ ಯಾವುದೇ ಗೊಂದಲಕ್ಕೀಡಾಗಲಿಲ್ಲ. ಆದರೆ ರಾಜಾರಾಂಗೆ  ಮಾತ್ರ ಒಳಗೊಳಗೇ ಭಯ.‌ ಇಡೀ ಮನೆಯನ್ನು, ಮನೆಯಲ್ಲಿ‌ನ ಎಲ್ಲಾ ವಸ್ತುಗಳನ್ನು ಒಮ್ಮೆ ನೋಡಿಕೊಂಡು ಬಂದರು. ಯಾವುದೂ ಕಳುವಾಗದೆ, ಎಲ್ಲವೂ ಇದ್ದಲ್ಲೇ ಇದ್ದವು.‌ ರಾತ್ರಿ ಮಲಗುವಾಗ ಬಾಗಿಲು ಹಾಕದೇ ಇದ್ದ ತಮ್ಮ ನಿರ್ಧಾರದ ಬಗ್ಗೆ ಮನದೊಳಗೇ ಹೆಮ್ಮೆ ಪಟ್ಟು, ತಮ್ಮ ಜಿಜ್ಞಾಸೆ ಸರಿಯಾಗಿದೆ‌ ಎಂದು ತಿಳಿದರು.

ಮರುದಿನವೂ ಹಾಗೇ ಮಾಡಿದರು.‌‌ ಅವರ ಸೊಸೆಯೂ‌ ಈ ಹಿಂದಿನಂತೆಯೇ ಯೋಚಿಸಿ, ಹಾಗೆಯೇ ನಡೆದುಕೊಂಡರು. ಹೀಗೆ ರಾಜಾರಾಂ ಅವರು ಪ್ರತಿ ರಾತ್ರಿ ಮನೆಯ ಬಾಗಿಲನ್ನು ತೆಗೆದಿಟ್ಟು ಮಲಗಲು ಪ್ರಾರಂಭ ಮಾಡಿದರು.‌ ಈ ಸುದ್ದಿ ಊರಲ್ಲಿ ಯಾರಿಗೂ ತಿಳಿದಿರಲಿಲ್ಲ. ಅಷ್ಟೇ ಯಾಕೆ ಸ್ವತಃ ಅವರ ಮನೆಯಲ್ಲಿಯೇ ಯಾರಿಗೂ ಅದರ ಸುಳಿವಿರಲಿಲ್ಲ.
ಹೀಗಿರುವಾಗ ಒಂದು‌ ದಿನ ಶೇವಿಂಗ್ ಮಾಡಿಸಲೆಂದು ಊರ ಹೊರಗಿನ ಕಟಿಂಗ್ ಶಾಪ್ ಗೆ ಬಂದ ರಾಜಾರಾಂರಿಗೆ ಅಲ್ಲಿದ್ದ ದಿನಪತ್ರಿಕೆಯೊಂದರ ಸುದ್ದಿ ತಕ್ಷಣಕ್ಕೆ ಗಮನ ಸೆಳೆಯಿತು.

“ಶನಿ ಸಿಂಗನಾಪುರದಲ್ಲೂ ಕಳ್ಳತನ ಆಗಿತ್ತು

ಎಂಬುದು ತಡವಾಗಿ ಬೆಳಕಿಗೆ ಬಂದಿದೆ “

ಎಂಬ ತಲೆಬರಹವಿದ್ದ ಸುದ್ದಿಯ ಕಡೆ ಗಮನ ಹರಿದು ಅದನ್ನು ಪೂರ್ತಿಯಾಗಿ ಓದಿದರು: “ಊರಿನ ಯಾವ ಮನೆಗಳಿಗೂ ಬಾಗಿಲೇ ಇಲ್ಲದಿದ್ದರೂ ಯಾವುದೇ ಕಳ್ಳತನ  ಆಗದಿರುವ  ಕಾರಣಕ್ಕಾಗಿ ದೇಶಾದ್ಯಂತ ಪ್ರಸಿದ್ದಿ ಪಡೆದಿರುವ ಮಹಾರಾಷ್ಟ್ರದ ಶನಿ ಸಿಂಗನಾಪುರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಊರು ಶನಿ ದೇವಸ್ಥಾನಕ್ಕೆ ಎಷ್ಟು ಪ್ರಸಿದ್ಧವಾಗಿದೆಯೋ ಅದಕ್ಕಿಂತ ಹೆಚ್ಚು ಸುದ್ದಿಯಾಗಿರುವುದು ಈ ಊರಿನಲ್ಲಿರುವ ಯಾವ ಮನೆಗಳಿಗೂ ಬಾಗಿಲುಗಳಿಲ್ಲ ಎಂಬ ಕಾರಣಕ್ಕೆ.

ಬಾಗಿಲುಗಳೇ ಇಲ್ಲದ ಊರಲ್ಲಿ ಕಳ್ಳತನಗಳೇ ಆಗಿಲ್ಲ ಎಂಬ ಹಿರಿಮೆಯಿಂದ ಇಡೀ ರಾಷ್ಟ್ರಕ್ಕೆ ಪರಿಚಿತವಾಗಿರುವ ಈ ಊರಿನಲ್ಲಿ‌ ಅಧಿಕೃತವಾಗಿ ಯಾವುದೇ ಕಳ್ಳತನದ ದೂರುಗಳು ದಾಖಲಾಗಿಲ್ಲ ಎಂದೇ ನಂಬಲಾಗಿತ್ತು. ಆದರೆ ಇತ್ತೀಚಿನ ಕೆಲವು ಮಾಹಿತಿಗಳ ಪ್ರಕಾರ  2010 ಮತ್ತು 2011 ರಲ್ಲಿ ಇಲ್ಲಿಯ ಮನೆಗಳಲ್ಲಿ ಕಳ್ಳತನವಾಗಿದ್ದು, ಅದು ಎಲ್ಲೂ ವರದಿಯಾಗಿಲ್ಲ ಮತ್ತು ಬಹಿರಂಗವಾಗಿಲ್ಲ. ಈಗ ಇಂತಹ ಸುದ್ದಿಗಳನ್ನು ಹರಿಬಿಡುತ್ತಿರುವವರಾದರೂ ಯಾರು ಮತ್ತು ಇದರ ಉದ್ದೇಶವಾದರೂ ಏನು ಎಂಬುದು ಇನ್ನಷ್ಟೇ ಖಾತರಿಯಾಗಬೇಕಿದೆ.”

ಈ ಸುದ್ದಿ ಓದಿ ಬಂದ ರಾಜಾರಾಂ ಅವರು ಆ ದಿ‌ನವಿಡೀ ಗಲಿಬಿಲಿಯಲ್ಲಿರುವಂತೆ ಕಂಡರು. ರಾತ್ರಿ ಊಟ ಆದಮೇಲೆ ಮಲಗಲು ಅಣಿಯಾದವರು ಮುಂಬಾಗಿಲ ಬಳಿ ಬಂದು ಬಾಗಿಲನ್ನು ಭದ್ರವಾಗಿ ಹಾಕಿ ಮಲಗಿದರು. ಹತ್ತು ನಿಮಿಷಗಳ ನಂತರ ಅವರಿಗೆ ಮತ್ತೇನನ್ನಿಸಿತೋ ಏನೋ ಎದ್ದು ಬಂದು ಮುಂಬಾಗಿಲಿಗೆ ಮನೆಯೊಳಗಿನಿಂದ ಬೀಗ ಹಾಕಿಕೊಂಡು ಬಂದು ಹಾಸಿಗೆಗೆ‌ ಒರಗಿದರು. ಮನೆ ಬಾಗಿಲ ತೆರೆದಿಟ್ಟು ಮಲಗುತ್ತಿದ್ದಾಗಲಾದರೂ ಎಷ್ಟೋ ನಿರಾಳವಾಗಿ ಮಲಗುತ್ತಿದ್ದರು. ಆದರೆ ಇವತ್ಯಾಕೋ ಹಾಗೆ ನೆಮ್ಮದಿಯಾಗಿ ಮಲಗಲು ಅವರಿಗೆ ಸಾಧ್ಯವಾಗಲಿಲ್ಲ. ಮತ್ತು ಬೆಳಗ್ಗೆ ಅವರ ಸೊಸೆ ಏಳುವ ಮುನ್ನವೇ ಬಾಗಿಲು ತೆಗೆದಿಟ್ಟಿದ್ದರಿಂದ ಯಾರಿಗೂ ಈ ಬಗ್ಗೆ ಏನೂ ತಿಳಿಯಲಿಲ್ಲ.

ಯಾವ ಮನೆಯಲ್ಲಿ ಯಾರ್ಯಾರು ಇಂಥ ನಿಗೂಢ ಕತೆಗಳನ್ನು ಬಚ್ಚಿಟ್ಟುಕೊಂಡಿರುತ್ತಾರೋ ಯಾರಿಗೆ ಗೊತ್ತು ?

‍ಲೇಖಕರು Avadhi Admin

August 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: