ಕಾಡು ಹೇಳಿದ ಕಾನೂರಿನ ಕಥೆ

ಕಾಡು ಹೇಳಿದ ಕಾನೂರಿನ ಕಥೆ 

  ಗಂಗಾಧರ ಕೊಳಗಿ

ಮುಂಗಾರು ಮಳೆ ಶುರುವಾಗಲಿದ್ದ ಮುಂಚಿನ ದಿನಗಳು. ಇನ್ನೇನು ಒಂದು ವಾರದಲ್ಲಿ ಮಳೆ ಹಿಡ್ಕಬಹುದು ಎಂದು ರೈತಾಪಿ ಜನಗಳೆಲ್ಲ ಪರಸ್ಪರ ಭರವಸೆ ವ್ಯಕ್ತಪಡಿಸುತ್ತ ಅದನ್ನೆದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಇಬ್ಬನಿಯಂತೆ ಸೋನೆ ಮಳೆ ಆಗೀಗ ಉದುರುತ್ತ ನೆಲವನ್ನೆಲ್ಲ ಒದ್ದೆಯಾಗಿಸುತ್ತಿತ್ತು. ಕಡಲಂಚಿನಿಂದ ಧಾವಿಸಿಬರುತ್ತ ಆಕಾಶವೆಲ್ಲ ಆವೃತ್ತಗೊಂಡ ಕಪ್ಪನೆಯ ದಟ್ಟ ಮೋಡಗಳ ಹಿಂಡು, ಮಳೆ ಶುರುವಾಗುವ ಆಹ್ಲಾದವನ್ನು ಮಬ್ಬಾಗಿ, ಮ್ಲಾನವಾದ ಆ ವಾತಾವರಣ ಒರೆಸಿಹಾಕುತ್ತಿತ್ತು. ಜಾರು ನೆಲ, ಕೆಸರು, ನೆಲಕ್ಕೆ ಕಾಲಿಟ್ಟರೆ ಬೆನ್ನು ಡೊಂಕು ಮಾಡಿಕೊಂಡು ಗಡಿಬಿಡಿಯಲ್ಲಿ ಕಚ್ಚಿಕೊಳ್ಳುವ ಸಣ್ಣ, ದೊಡ್ಡ ಇಂಬಳಗಳ ಕಾಟ.. ಈ ಎಲ್ಲ ಕಿರಿಕಿರಿಗಳ ನಡುವೆಯೂ ಆ ಇಳಿದಾದ ,ಕಡಿದಾದ ಆ ವರ್ಷವಷ್ಟೇ ಮಾಡಿರಬಹುದಾದ ದಾರಿಯಲ್ಲಿ ನಡೆಯುತ್ತಿದ್ದೆವು ಎನ್ನುವದಕ್ಕಿಂತ ಜಾರುತ್ತಿದ್ದೆವು.

ಕಾಡು, ಬೆಟ್ಟಗಳನ್ನು ಸುತ್ತುವ ಹುಚ್ಚು ನನ್ನದು ಚಿಕ್ಕಂದಿನಿಂದಲೂ; ಅದನ್ನು ಹವ್ಯಾಸ ಎನ್ನುವದಕ್ಕಿಂತ ಹುಚ್ಚು ಎಂದರೆ ಸರಿಯೇನೋ? ಕೈ,ಕಾಲು ನೋಯಿಸಿಕೊಂಡು, ಶರೀರವನ್ನ ದಣಿಸಿಕೊಂಡು, ಹೊತ್ತು ಹಾಳುಮಾಡಿಕೊಳ್ಳುವದನ್ನ ಬಿಟ್ಟರೆ ನಯಾಪೈಸೆ ಪ್ರಯೋಜನವಿಲ್ಲದ ಆ ಕೆಲಸ ಹುಚ್ಚಲ್ಲದೇ ಮತ್ತೇನು? ಸಣ್ಣವನಿದ್ದಾಗಿನಿಂದಲೂ ನಮ್ಮೂರ ಸುತ್ತಲಿನ ಮಿಕನಗುಡ್ಡೆ, ಕೆಸಿನಗುಡ್ಡೆ, ಹಿರೇ ಗುಡ್ಡೆ, ಬಾಳೆಪಟ್ಟೆ ಗುಡ್ಡೆ, ಬಿಕ್ಕೆ ಗುಡ್ಡೆ ಮುಂತಾದ ಆ ವಯಸ್ಸಿನಲ್ಲಿ ನನಗೆ ಹಿಮಾಲಯ ಪರ್ವತದಂತೇ ಭಾಸವಾಗುತ್ತಿದ್ದ ಎತ್ತರದ ಗುಡ್ಡಗಳನ್ನ ಏರಿಳಿಯುತ್ತಿದ್ದೆ. ಅಜ್ಜಿಕಟ್ಟೆ ಕಾನು, ಕೊಳ್ಗಿ ಕಾನು ಮುಂತಾದ ಹತ್ತಾರು ಮೈಲಿ ವಿಸ್ತಾರದ ದಟ್ಟಡವಿಗಳ ಅಂಚಿನಲ್ಲಿ ಸುತ್ತುತ್ತಿದ್ದೆ. ಗುಡ್ಡಗಳಲ್ಲಿ ಕಾಡು ವಿರಳವಾಗಿರುತ್ತಿದ್ದ ಕಾರಣ ಅಷ್ಟೇನೂ ಭಯವಾಗುತ್ತಿರಲಿಲ್ಲ. ಕಾಡಿನಲ್ಲಿ ಮಾತ್ರ ಹಾಗಲ್ಲ; ಒಳನುಗ್ಗಲು ಹೆದರಿಕೆಯಾಗುತ್ತಿತ್ತು. ಮಳೆಗಾಲದಲ್ಲಿ ಬಿದಿರು ಕಳಲೆ(ಮೊಳಕೆ) ಕೊಯ್ಯಲೋ, ಬಿಕ್ಕೆ ಹಣ್ಣು ಆರಿಸಲೋ, ಬೇಸಿಗೆಯಲ್ಲಿ ಗುಡ್ಡೆಗೇರು ಹಣ್ಣು, ನೆಲ್ಲಿಕಾಯಿ ಕೊಯ್ಯಲೋ ನೆವ ಹೇಳಿ ಅಲೆದಾಡುತ್ತಿದ್ದೆ. ಅರ್ಧ ದಿನಗಟ್ಟಲೆ ಅಲೆಯಲು ಹೋಗಿ, ಅಪ್ಪ-ಅಮ್ಮನಿಗೆ ಗಾಭರಿ ಹುಟ್ಟಿಸುತ್ತಿದ್ದೆ. ಆಗಲೂ, ಈಗಲೂ ಒಂಟಿಯಾಗಿ ಅಲ್ಲೆಲ್ಲ ತಿರುಗಾಡುವದು ಇಷ್ಟ. ಜೊತೆಗೆ ಯಾರಾದರೂ ಇದ್ದರೆ ನಾನು ನೋಡುವದರಲ್ಲಿ, ಗ್ರಹಿಕೆಯಲ್ಲಿ ಕಚ್ಚಿಕೊಂಡಿರುವದು ಕಷ್ಟವಾಗಿಬಿಡುತ್ತದೆ.

ಹಲವು ವರ್ಷಗಳಿಂದ ಪಶ್ಚಿಮಘಟ್ಟದ ಮಡಿಲಲ್ಲಿರುವ ಕಾನೂರು ಕೋಟೆಯನ್ನು ನೋಡಬೇಕೆನ್ನುವ ಹಂಬಲ ಕಾಡುತ್ತಲೇ ಇತ್ತು. ಕಾನೂರು ಕೋಟೆಯ ಆಸುಪಾಸಿನಲ್ಲಿನಲ್ಲೇ ಇರುವ ಗೇರಸೊಪ್ಪಾ ಸಾಮ್ರಾಜ್ಯದ ಅವಶೇಷಗಳಿರುವ ನಗರಬಸ್ತಿಕೇರಿ, ಗುಡ್ಡಗಾಡಿನ ಜನಸಮುದಾಯವಿರುವ ಮೇಧಿನಿ ಮುಂತಾದೆಡೆಗಳಲ್ಲಿ ತಿರುಗಿ ಬಂದಿದ್ದರೂ ಗೇರಸೊಪ್ಪ ಕಡೆ ಹೋದಾಗೆಲ್ಲ ಕಣ್ಣಿಗೆ ಬೀಳುವ ಕಾನೂರು ಕೋಟೆಯ ಶಿಖರ ಸೆಳೆಯುತ್ತಲೇ ಇತ್ತು. ಇತ್ತ ಕೋಗಾರು ಕಡೆ ಹೋದಾಗಲೂ, ಅತ್ತ ಕರಾವಳಿ ಕಡೆ ಹೋದಾಗಲು ಒಮ್ಮೆ ಕಾನೂರು ಗುಡ್ಡವನ್ನು ಹತ್ತಬೇಕು ಎನ್ನುವ ತುಡಿತವಾಗುತ್ತಿತ್ತು. ನನ್ನ ದುರಾದೃಷ್ಟಕ್ಕೆ ಅದಕ್ಕೆ ಕಾಲ ಕೂಡಿ ಬಂದಿರಲೇ ಇಲ್ಲ.

ಸುಮಾರು ಮೂರು ವರ್ಷಗಳ ಹಿಂದಿನ ಮೇ ತಿಂಗಳ ಕೊನೆಯ ದಿನಗಳ ಆ ಸಮಯದಲ್ಲಿ ಸಾಗರದ ರೋಟರಿ ಕ್ಲಬ್‍ನವರು ಪಶ್ಚಿಮಘಟ್ಟದ ದಟ್ಟಾರಣ್ಯದ ಅತ್ಯಂತ ದುರ್ಗಮ ಪ್ರದೇಶದ ಹೆಬ್ಬಾನಕೆರೆ ಎನ್ನುವ ಊರಿನ ಕುಟುಂಬಗಳಿಗೆ ಸೋಲಾರ್ ಲ್ಯಾಂಪ್ ವಿತರಿಸಲಿದ್ದಾರೆ, ಅದನ್ನು ಆಗಿನ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನಡೆಸಿಕೊಡಲಿದ್ದಾರೆ, ಕಾರ್ಯಕ್ರಮದ ನಂತರ ಕಾನೂರುಕೋಟೆ ನೋಡಲು ತಿಮ್ಮಪ್ಪನವರು ಹೋಗುವ ಸಾಧ್ಯತೆ ಇದೆ, ಅಲ್ಲಿಗೆ ಬಂದರೆ ಕಾನೂರು ಕೋಟೆ ನೋಡಲು ಒಳ್ಳೇ ಅವಕಾಶ ಬರ್ರೀ ಎಂದು ಮಾಮೂಲಿನಂತೆ ಗೆಳೆಯ ಲಕ್ಷ್ಮೀನಾರಾಯಣ ಕರೆದರು.

ಪ್ರತಿವರ್ಷವೂ ಅಂದುಕೊಳ್ಳುತ್ತಿದ್ದರೂ ಸಾಧ್ಯವಾಗದೇ ನನಗೆ ಈ ವರ್ಷವೂ ಕಾನೂರಿಗೆ ಹೋಗಲಾಗಲಿಲ್ಲವಲ್ಲಾ ಎನ್ನುವ ಖೇದವಾಗುತ್ತಿತ್ತು. ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿರಲೇ ಇಲ್ಲ. ಇದೊಂದು ಅವಕಾಶ ಅನ್ನಿಸಿತು. ಇಂಥ ಎಷ್ಟೋ ಅವಕಾಶಗಳನ್ನ ಒದಗಿಸಿದ ಜೀವದ ಗೆಳೆಯ ಲಕ್ಷ್ಮೀನಾರಾಯಣ ಈಗಲೂ ಅಂಥದೊಂದು ಕೊಡುಗೆಯನ್ನ ನನ್ನ ಮುಂದಿಟ್ಟಿದ್ದರು. ಇನ್ನೇನು, ಅಬ್ಬರಿಸಿ ಮಳೆ ಹಿಡಿದುಬಿಟ್ಟರೆ ಅಲ್ಲಿ ಹೋಗುವದಿರಲಿ, ಹೆಜ್ಜೆಯೂರಲೂ ಸಾಧ್ಯವಾಗದು ಎನ್ನುವದು ಖಚಿತವಿತ್ತು. ಮುಂದೆ ನಾನು ಬದುಕಿರುತ್ತೇನೋ, ಇಲ್ಲವೋ ಯಾರಿಗೆ ಗೊತ್ತು. ಸಾಧ್ಯವಾದ್ರೆ ಈಗಲೇ ನೋಡಿಕೊಂಡು ಬರುವಾ ಎನ್ನುವ ವರ್ತಮಾನ,ಭವಿಷ್ಯಗಳ ಮಿಶ್ರಣದ ನಿರ್ಧಾರಕ್ಕೆ ಬಂದು ಆ ಸಂಚಾರಕ್ಕೆ ಸಿದ್ಧನಾಗಿಬಿಟ್ಟೆ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ತಿಮ್ಮಪ್ಪನವರು ಕೋಟೆ ನೋಡಲು ಬಾರದಿದ್ದರೂ ನಾವಂತೂ ಹೋಗೇ ಹೋಗುತ್ತೇವಲ್ಲ ಎನ್ನುವ ಭರವಸೆಯಂತೂ ಇತ್ತು.

ಆ ಕಾರ್ಯಕ್ರಮದ ದಿನದಂದು ಮುಂಜಾನೆಯೇ ಅತ್ತ ಹೊರಟುಬಿಟ್ಟೆವು. ಸಿದ್ದಾಪುರದ ಇಂಟೆಕ್ ಕಂಪ್ಯೂಟರ್ಸನ ಆತ್ಮೀಯ ಎಂ.ಆರ್.ಹೆಗಡೆ ಕೋಟೆಯನ್ನು ನೋಡುವ ಕುತೂಹಲದಿಂದ ಜೊತೆಗಿದ್ದರು. ಮತ್ತೊಬ್ಬ ಗೆಳೆಯರೂ ಜೊತೆಯಾದರು. ಹೊರಡುವಾಗಲೇ ಆಕಾಶವೆಲ್ಲ ಮಬ್ಬಾಗಿ ಎಷ್ಟು ಹೊತ್ತಿಗೂ ಮಳೆ ಬರಬಹುದು ಎನ್ನುವ ವಾತಾವರಣವಿತ್ತು.
ಸೋಲಾರ್ ಲ್ಯಾಂಪ್ ಕೊಡುವ ಕಾರ್ಯಕ್ರಮ ನಡೆಯಲಿರುವ ಹೆಬ್ಬಾನಕೆರೆ ಹತ್ತಿರದಲ್ಲೇ ಕಾನೂರು ಕೋಟೆ ಇರುವ ಕಾರಣ ನಾವು ಹೋಗುವ ಮಾರ್ಗ ಒಂದೇ ಆಗಿತ್ತು. ಜೋಗಫಾಲ್ಸ ಸಮೀಪದ ಕಾರ್ಗಲ್‍ನಿಂದ ಭಟ್ಕಳಕ್ಕೆ ಹೋಗುವ ಮಾರ್ಗದಲ್ಲಿ ಕೋಗಾರಿಗಿಂತ ಸ್ವಲ್ಪ ಮುಂದೆ ಬಲಕ್ಕೆ ಹೊರಳಿ ಹತ್ತಾರು ಕಿಮೀ. ದೂರದಲ್ಲಿರುವ ಊರು ಹೆಬ್ಬಾನಕೆರೆ.
ಶುರುವಿನಲ್ಲಿ ಮಾಮೂಲಿ ಮಲೆನಾಡಿನಂತೆ ಗುಡ್ಡ, ದಿನ್ನೆ, ಗದ್ದೆ, ತೋಟ,ಬಯಲುಗಳ ಆ ಪ್ರದೇಶ ರಸ್ತೆಯಲ್ಲಿ ಮುಂದೆ ಹೋದಂತೆ ಬದಲಾಗುತ್ತ ಬಂತು. ವಿಚಿತ್ರವೆಂದರೆ ನಾವು ಸಾಗುವ ರಸ್ತೆಯ ಒಂದೆಡೆ ಎರಡೂ ಪಕ್ಕದ ಸಣ್ಣ ಗುಡ್ಡಗಳಲ್ಲಿ ಗಿಡಗಳು ಬೆಳೆದದ್ದು. ಅವೆಷ್ಟು ಇದ್ದವೆಂದರೆ ಬೇರ್ಯಾವ ಸಸ್ಯಗಳೂ ಅಲ್ಲಿರಲೇ ಇಲ್ಲ. ಸಸ್ಯಶಾಸ್ತ್ರಜ್ಞರಿಗೆ ಖಂಡಿತಕ್ಕೂ ಅಧ್ಯಯನ ಯೋಗ್ಯ ವಿಷಯ ಇದು ಅನ್ನಿಸಿತು.

ನಿಧಾನಕ್ಕೆ ಕಾಡು ದಟ್ಟವಾಗುತ್ತ ಬಂತು. ಕಿರಿದಾದ, ಏರಿಳಿವಿನ ದಾರಿಯಲ್ಲಿ ನಾವು ಸಾಗಬೇಕಿತ್ತು. ತಿರುಮುರುವುಗಳ ಮೂಲಕ ಇಳಿಯುತ್ತಲೇ ಹೋಗುವ, ಇತ್ತೀಚೆಗಷ್ಟೇ ಸುಮಾರು ಹತ್ತು ಅಡಿಗಳಷ್ಟು ಅಗಲದ ಹೊಸದಾಗಿ ಮಾಡಿದ ರಸ್ತೆಯಲ್ಲಿ ಮುಂದಕ್ಕೆ ಹೋಗಲು ಅಸಾಧ್ಯ ಎಂದು ನಮ್ಮ ವಾಹನವನ್ನು ಅಲ್ಲೇ ಒಂದೆಡೆ ನಿಲ್ಲಿಸಿ ಇಳಿಜಾರಿನ ರಸ್ತೆಯಲ್ಲಿ ನಡೆಯುತ್ತಲೇ ಹೊರಟೆವು. ಸುತ್ತ ದಟ್ಟ ಕಾಡು; ಬೃಹದಾಕಾರದ ಮರಗಳು, ಅವನ್ನು ಬಳಸಿ ಆಕಾಶದೆತ್ತರ ಹಬ್ಬಿದ ಬೆತ್ತದ ಬಳ್ಳಿಗಳು. ಇಂಥ ವಾತಾವರಣದಲ್ಲಿ ಅಲೆದದ್ದು ಹಲವಾರು ಬಾರಿಯಾದರೂ ಪ್ರತಿ ಸಲದಂತೆ ಆಗಲೂ ಒಂದು ನಿಗೂಢವಾದ, ಅಲೌಕಿಕವಾದ ಬೆರಗು ನನ್ನಲ್ಲಿತ್ತು.

ಕೆಲವು ವರ್ಷದ ಹಿಂದೆ ಶಿವಾನಂದ ಕಳವೆಯವರ ನೇತೃತ್ವದಲ್ಲಿ ಮಾಡಿದ ಚಾರಣ ನೆನಪಿಗೆ ಬಂತು.
ಶಿರಸಿ- ಯಲ್ಲಾಪುರ ತಾಲೂಕುಗಳ ನಡುವಿನ, ಎರಡೂ ತಾಲೂಕುಗಳ ಕೇಂದ್ರಸ್ಥಾನದಿಂದ ಏನಿಲ್ಲವೆಂದರೂ 40-50 ಕಿಮೀ. ದೂರದ ಕಗ್ಗಾಡಿನ ನಡುವಿನ ಜಡ್ಡಿಗದ್ದೆ ಎನ್ನುವ ಪ್ರದೇಶದ ಹತ್ತಿರದ ಯಲ್ಲಾಪುರ, ಅಂಕೋಲಾ ಮತ್ತು ಶಿರಸಿ ತಾಲೂಕುಗಳ ಗಡಿಭಾಗದ, ಅಪ್ಪಟ ಪಶ್ಚಿಮಘಟ್ಟದ ತಪ್ಪಲಿನ ಕೊಂಕಿಕೋಟೆ ಎನ್ನುವಲ್ಲಿನ ಕಾಡಿಗೆ ಹೋದ ನೆನಪು ಬಂತು. ತುಂಬಾ ದಟ್ಟವಾದ ಕಾಡಾದ ಅಲ್ಲಿ ದಾರಿಯಿರಲಿ, ಕಿರುದಾರಿಯೂ ಇಲ್ಲದ ಶಿಥಿಲಗೊಂಡ ಏಳು ಸುತ್ತಿನ ಕೋಟೆ ನೋಡಲು ಹೋದ ನೆನಪೂ ಬಂತು. ಅಲ್ಲಿರುವ ಕಾಡು ತಾಳೆ ಮರಗಳ ತೋಪೇ ಹತ್ತಾರು ಮೈಲಿಗಳ ವಿಸ್ತಾರದ್ದಿರಬಹುದು. ಅಂಥ ದುರ್ಗಮ ಕಾಡು ನನ್ನ ಸೀಮಿತ ತಿರುಗಾಟದಲ್ಲಿ ಎಲ್ಲೂ ಕಂಡಿಲ್ಲ.

ಹೆಬ್ಬಾನಕೆರೆ ಹುಡುಕಿಕೊಂಡು ಹೋಗುತ್ತಿದ್ದ ನಮಗೆ ತಿಮ್ಮಪ್ಪನವರು ಕಾರ್ಯಕ್ರಮದ ಸ್ಥಳಕ್ಕೆ ಹೋಗಿದ್ದಾರೊ ಇಲ್ಲವೋ ಎನ್ನುವ ಪ್ರಶ್ನೆಯೂ ಕೊರೆಯುತ್ತಿತ್ತು. ಹೋಗಿದ್ದಕ್ಕೆ ಕುರುಹು ಸಿಗಬಹುದೇನೋ ಎಂದು ಬೇಟೆ ಮಾಡುವವರು ಪ್ರಾಣಿಗಳ ಹೆಜ್ಜೆ ಗುರುತು ಅರಸುವಂತೆ ಆ ತೇವದ ರಸ್ತೆಯಲ್ಲಿ ಅವರ ಕಾರಿನ ಟೈರ್ ಗುರುತನ್ನು ಹುಡುಕುತ್ತ, ಇನ್ನೆಷ್ಟು ದೂರವೋ? ಎನ್ಕತೆಯೋ? ಎಂದುಕೊಳ್ಳುತ್ತ ನಡೆಯುತ್ತಿದ್ದವರಿಗೆ ಹಠಾತ್ತನೆ ಹಿಂದಿನಿಂದ ವಾಹನಗಳ ಸದ್ದೂ, ಪೊಲೀಸ್ ಬೆಂಗಾವಲಿನ ಸೈರನ್ನೂ ಕೇಳಿಸಿತು. ನಿರ್ಮಾನುಷ್ಯವಾದ, ಸಣ್ಣಪುಟ್ಟ ಸದ್ದುಗಳನ್ನು ಬಿಟ್ಟರೆ ಬಹುತೇಕ ಮೌನವೇ ತುಂಬಿಕೊಂಡ ಆ ಕಗ್ಗಾಡಿನಲ್ಲಿ ಇಂಥ ಸದ್ದುಗಳಾದಾಗ ಆಗುವ ಅಚ್ಚರಿ, ಆಘಾತ ವರ್ಣನೆಗೆ ನಿಲುಕದ್ದು! ಅದರ ಅನುಭವವೇ ಬೇರೆ. ಸ್ಪೀಕರ್ ಬಂದ್ರೂ ಎಂದುಕೊಳ್ಳುತ್ತ ಅತ್ತಿತ್ತ ಸರಿಯುವಷ್ಟರಲ್ಲಿ ರಸ್ತೆಯ ತಿರುವನ್ನು ಮುಗಿಸಿ ಆ ವಾಹನಗಳು ನಮ್ಮನ್ನು ದಾಟಿದವು. ಆದರೆ ಮುಂದೆ ಹೋದ ಸ್ಪೀಕರ್ ಕಾರು ಹಠಾತ್ತನೆ ನಿಂತಿತು.

ಏನೂ ಅಂತಾ ಅರ್ಥವಾಗದೇ ಹತ್ತಿರ ಹೋದ ನಮ್ಮ ಬಳಿ ಕಾಗೋಡು ತಿಮ್ಮಪ್ಪ ‘ಕಾರ್ಯಕ್ರಮದ ಜಾಗ ಇನ್ನೂ ಸುಮಾರು ದೂರ ಇರಬೇಕ್ರೀ, ಒಂದಿಬ್ಬರು ಈ ಕಾರ್ ಹತ್ತಿ, ಉಳಿದವರು ಮುಂದಿದ್ದ ಪೊಲೀಸ್ ಜೀಪ್ ಹತ್ತಿಕೊಳ್ರಿ’ ಎಂದುಹೇಳಿ, ತಮ್ಮ ಕಾರಿನಲ್ಲಿದ್ದ ಜನಪ್ರತಿನಿಧಿಯೊಬ್ಬರನ್ನು ಪೊಲೀಸ್ ಸಿಬ್ಬಂದಿಗೆ ತಿಳಿಸಲು ಕಳುಹಿಸಿದರು. ಉನ್ನತಸ್ಥಾನದಲ್ಲಿರುವ ಹಿರಿಯ ಜನಪ್ರತಿನಿಧಿಯೊಬ್ಬರು ನಮ್ಮಂಥ ಸಾಮಾನ್ಯರನ್ನೂ ತಮ್ಮ ಜೊತೆಗೆ ಕರೆದೊಯ್ಯುವ ಸನ್ನಿವೇಶವನ್ನು ಈಗಿನ ತಲೆಮಾರಿನ ಜನಪ್ರತಿನಿಧಿಗಳಿಂದ ನಿರೀಕ್ಷಿಸುವದನ್ನ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಆಗ ನನಗೆ ನನ್ನ ಸೋದರತ್ತೆ ಹೇಳುತ್ತಿದ್ದ ಘಟನೆ ನೆನಪಾಯಿತು. ಸುಮಾರು 50ರ ದಶಕದಲ್ಲಿ ಜವಹರಲಾಲ್ ನೆಹರೂ ಅವರು ಸಿದ್ದಾಪುರಕ್ಕೆ ಕಾರ್ಯಕ್ರಮಕ್ಕೆಂದು ಬರುವರಿದ್ದರಂತೆ. ಸಹಜವಾಗಿಯೇ ಅವರನ್ನು ನೋಡಲು ಹಳ್ಳಿಗಾಡಿನ ಮೂಲೆ,ಮೂಲೆಯಿಂದ ಜನರು ಬಂದರು. ಅದರಂತೇ ನನ್ನ ಸೋದರತ್ತೆ ಹಾಗೂ ಇನ್ನೊಂದಿಷ್ಟು ಮಂದಿ ಶಿರಸಿ,ಸಿದ್ದಾಪುರ ರಸ್ತೆಯಲ್ಲಿನ ಹದಿನಾರನೇ ಮೈಲ್ ಕ್ರಾಸ್‍ನಿಂದ ಒಳಕ್ಕೆ ನಾಲ್ಕಾರು ಕಿಮೀ.ದೂರದ ಸಂಪಗೋಡ ಎನ್ನುವಲ್ಲಿಂದ ಸುಮಾರು 10-15 ಕಿಮೀ. ನಡೆದುಬಂದರು. ಸಂಜೆ ನಡೆಯಬೇಕಿದ್ದ ಸಭೆ ನೆಹರೂ ತಡವಾಗಿ ಬಂದದ್ದಕ್ಕೆ ಬೆಳಗಿನ ಜಾಮದಲ್ಲಿ ನಡೆಯಿತು. ಆಗೆಲ್ಲಿ ಬಸ್ ಸಂಚಾರ? ಸಭೆ ಮುಗಿಸಿಕೊಂಡು ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹೋಗುತ್ತಿದ್ದ ನನ್ನ ಸೋದರತ್ತೆ ಹಾಗೂ ಇನ್ನೊರ್ವ ಮಹಿಳೆಯನ್ನು ಶಿರಸಿಗೆ ಹೋಗುತ್ತಿದ್ದ ನೆಹರೂ ಕಂಡು ಅವರಿಬ್ಬರನ್ನೂ ತಮ್ಮ ಕಾರಿನ ಹಿಂದುಗಡೆ ಬರುತ್ತಿದ್ದ ಕಾರಿನಲ್ಲಿ ಕರೆದೊಯ್ದು ಹದಿನಾರನೇ ಮೈಲ್‍ಕಲ್‍ನಲ್ಲಿ ಬಿಟ್ಟರಂತೆ. ಸೋದರತ್ತೆಯಿಂದ ಕೇಳಿದ್ದ ಮಾತುಗಳು ಮತ್ತೆ ನೆನಪಾಯಿತು. ಘನತೆ, ವ್ಯಕ್ತಿತ್ವ ಎನ್ನುವದು ಹೃದಯ ವೈಶಾಲ್ಯದಿಂದ ಬರುತ್ತದೆ ಎನ್ನುವ ಮಾತು ಸತ್ಯವೆನ್ನಿಸಿತು.

ವಿದ್ಯುತ್ ಸಂಪರ್ಕವಿರಲಿ, ಸರಿಯಾದ ರಸ್ತೆಯೂ ಇರದ ಕಗ್ಗಾಡಿನ ನಡುವಿನ ಹೆಬ್ಬಾನಕೆರೆಯಲ್ಲಿ ಸೋಲಾರ್ ದೀಪದ ವಿತರಣಾ ಸಭೆ ಮುಗಿದು ಮಧ್ಯಾಹ್ನದ ಊಟಕ್ಕೆ ಮತ್ತಷ್ಟು ಕಡಿದಾದ ರಸ್ತೆಯಲ್ಲಿ ಸಾಗಿ ಮನೆಯೊಂದಕ್ಕೆ ಹೋದೆವು. ಅಲ್ಲೆಲ್ಲಾ ಕಾಡನ್ನ ಅತಿಕ್ರಮಿಸಿ, ತೋಟ, ಗದ್ದೆ ಮಾಡಿಕೊಂಡವರೇ ಎಲ್ಲ.

ನಾವು ಊಟಕ್ಕೆ ಹೋದ ಮನೆಯ ಹಿಂಭಾಗ ಎತ್ತರದ ಶಿಖರವಿದ್ದ ಗುಡ್ಡ ನೇರಾನೇರ ಇತ್ತು. ಎಷ್ಟೆಂದರೆ ಹೆಚ್ಚು ಕಡಿಮೆ 90 ಡಿಗ್ರಿ ಕೋನದಲ್ಲಿ. ಆ ಬೆಟ್ಟದ ಒಂದು ಕಲ್ಲು ಉರುಳಿದರೂ ಸೀದಾ ಈ ಮನೆಯ ನೆತ್ತಿಯಮೇಲೇ ಬೀಳುವಷ್ಟು. ಆ ಭಯದಲ್ಲೂ ನನಗೆ ಕಾನೂರು ಕೋಟೆಯದೇ ಚಿಂತೆ.

ಮಧ್ಯಾಹ್ನದ ವೇಳೆಗೆ ಕಪ್ಪನೆಯ ಮುಂಗಾರು ಮೋಡಗಳು ದಟ್ಟೈಸತೊಡಗಿತ್ತು. ಜೊತೆಗೆ ತುಂತುರು ಮಳೆ ಬೇರೆ. ಇನ್ನೇನು, ಮಳೆಗಾಲ ಶುರುವಾಗೇಬಿಟ್ಟಿತು ಎನ್ನುವ ಅಲ್ಲಿದ್ದವರ ಚರ್ಚೆ,ವ್ಯಾಖ್ಯಾನಗಳು ಬೇರೆ. ಕಾನೂರು ಕೋಟೆಗೆ ತಿಮ್ಮಪ್ಪನವರು ಬರುವದಿರಲಿ, ನಾವು ಹೋಗುವದೇ ಕಷ್ಟ ಎನ್ನುವ ಸ್ಥಿತಿ. ಮಳೆಯಾದ ಕಾರಣ ಅಲ್ಲಿನ ಕಾಡಿನ ಮಧ್ಯದ ದಾರಿ ಜಾರುತ್ತದೆ. ಅಲ್ಲದೇ ಕೋಟೆಯ ಮೆಟ್ಟಿಲುಗಳು ಜಾರುತ್ತವೆ. ಸ್ಪೀಕರ್‍ಗೆ ಅಲ್ಲಿ ಓಡಾಡಲು ಕಷ್ಟವಾಗಬಹುದು ಎಂದೆಲ್ಲ ತಿಮ್ಮಪ್ಪನವರ ಸಮೀಪವರ್ತಿಗಳು ಕೆಲವರು ಅಪಸ್ವರ ಹೊರಡಿಸತೊಡಗಿದರು.

ಅಷ್ಟರಲ್ಲಿ ಊಟ ಮುಗಿಸಿ ಹೊರಬಂದ ಕಾಗೋಡು ಅವರಿಗೆ ನಮಸ್ಕಾರ ಎಂದು ಮಾತನಾಡಿಸಿದೆ. ಅಲ್ಲೇ ಪಕ್ಕದಲ್ಲಿದ್ದವರೊಬ್ಬರು “ಸಾರ್, ಇವ್ರು ಹೋದ್ಸಾರಿ ಅರಲಗೋಡಿನಲ್ಲಿ ಕಾಡು ಸಸ್ಯಗಳ ಬೀಜ ಬಿತ್ತನೆ ಕಾರ್ಯಕ್ರಮ ಮಾಡಿದ್ರಲ್ಲಾ, ಅವ್ರು” ಎಂದು ಪರಿಚಯಿಸಿದರು. ಹಿಂದಿನ ವರ್ಷ ಅರಲಗೋಡಿನಲ್ಲಿ ತಾವೇ ಉದ್ಘಾಟಿಸಿದ ಕಾರ್ಯಕ್ರಮ ನೆನಪಾಗಿರಬೇಕು. ಕಿರುನಗುತ್ತ ” ಸಸಿ ಹುಟ್ಟಿದಾವೇನ್ರೀ?” ಎಂದು ಪ್ರಶ್ನಿಸಿದರು. ಆ ಕಾರ್ಯಕ್ರಮದಲ್ಲಿ ತಿಮ್ಮಪ್ಪನವರು ಅರಣ್ಯ, ಪರಿಸರದ ಬಗ್ಗೆ ನಾವೆಲ್ಲ ಆಶ್ಚರ್ಯಪಡುವಷ್ಟು ಉಪಯುಕ್ತವಾದ, ಮೌಲಿಕವಾದ ಮಾತುಗಳನ್ನು ಹೇಳಿದ್ದರು. ಗೆಳೆಯ ಗಣಪತಿ ಹೆಗಡೆ ವಡ್ಡಿನಗದ್ದೆ ಶ್ರಮಪಟ್ಟು ಸಂಗ್ರಹಿಸಿದ್ದ ಸುಮಾರು 25ಕ್ಕೂ ಹೆಚ್ಚು ವಿಧದ ಕಾಡು ಸಸ್ಯಗಳ ಬೀಜಗಳಲ್ಲಿ ಹಲವನ್ನು ತಾವೇ ಗುರುತಿಸಿ, ಗೊತ್ತಾಗದ್ದರ ಬಗ್ಗೆ ಕೇಳಿ ತಿಳಿದಿದ್ದರು. ಹಾಗೇ ಬೀಜಗಳನ್ನು ಊರುವದಕ್ಕಿಂತ ಅವನ್ನು ಸಸಿ ಮಾಡಿ ನೆಡುವದು ಸರಿಯಾದ ಕ್ರಮ ಎಂದು ಸೂಚಿಸಿ ಅಲ್ಲಿನ ಸ್ಥಳಿಯರಿಗೆ “ನೋಡ್ರಾ, ಇವ್ರು ಅಷ್ಟುದೂರದಿಂದ ಇಲ್ಲಿ ಬಂದು ಒಳ್ಳೇ ಕಾರ್ಯಕ್ರಮ ಮಾಡ್ತೀದಾರೆ. ಅದನ್ನು ಸರಿಯಾಗಿ ಬಳಸಿಕೊಳ್ರಾ” ಎಂದು ತಮ್ಮದೇ ಧಾಟಿಯಲ್ಲಿ ಚುರುಕು ಮುಟ್ಟಿಸಿದ್ದರು. ” ಬೀಜಗಳನ್ನು ನರ್ಸರಿಯಲ್ಲಿ ಬೆಳೆಸಿದ್ದು ಸಾಕಷ್ಟು ಸಸಿಗಳಾಗಿವೆ” ಎಂದು ನಾನು ಉತ್ತರಿಸಿದಾಗ ಖುಷಿಯಾಗಿದ್ದು ಅವರ ಮುಖದಲ್ಲಿ ಕಂಡಿತು.
ಅಲ್ಲಿಂದ ನಮ್ಮ ವಾಹನವಿದ್ದಲ್ಲಿ ನಡೆದುಬಂದದ್ದು ಒಂದು ಸಾಹಸವೇ, ಮಳೆ, ಕೆಸರು, ಜಾರು ದಾರಿಯಲ್ಲಿ ಪ್ರಯಾಸಪಟ್ಟು ಹತ್ತಿಬಂದೆವು. ತಿಮ್ಮಪ್ಪನವರ ಕಾರು ಜಬರದಸ್ತಾಗಿರುವದಕ್ಕೆ ಅದೇನೋ ಹತ್ತಿಬಂತು, ಉಳಿದವು ಕೊಯ್ಯೋ, ಮಯ್ಯೋ ಗುಟ್ಟುತ್ತ, ಅರಲಿನಲ್ಲಿ ಹೊರಳಾಡುತ್ತ, ನೂಕುವವರ ಮೈ,ಮುಖಕ್ಕೆಲ್ಲ ಕೆಸರು ಸಿಡಿಸುತ್ತ ಹತ್ತಿಬಂದವು.

ಅದಾದ ನಂತರ ಅಲ್ಲೇ ಸಮೀಪದಲ್ಲಿ ಕಿರುಸೇತುವೆಯೊಂದರ ಉದ್ಘಾಟನೆಗೆ ತಿಮ್ಮಪ್ಪನವರು ತೆರಳಿದರು. ನಮಗೆ ಹಠ, ಹೇಗಾದರೂ ಕೋಟೆಗೆ ಹೋಗಬೇಕು, ಅಷ್ಟು ದೂರದಿಂದ ಬಂದು ಹಾಗೇ ಹೋಗಲು ಮನಸ್ಸು ಒಡಂಬಡಲಿಲ್ಲ. ಕೋಟೆಗೆ ಹೋಗಲು ನಾವು ಏರಿ ಕುಳಿತದ್ದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಜೀಪ್. ರೇಂಜರ್ ವನ್ಯಜೀವಿ, ಕಾಡುಗಳ ಬಗ್ಗೆ ಕಾಳಜಿ ಇದ್ದ ವ್ಯಕ್ತಿ. ನಾವು ಅವರ ಜೀಪ್ ಹತ್ತಿ ಕೂತರೂ ಒಂದೊಮ್ಮೆ ಸ್ಪೀಕರ್ ಕೋಟೆಗೆ ಬಾರದಿದ್ದರೆ ಎನ್ನುವ ಪ್ರಶ್ನೆ ಕಾಡುತ್ತಿತ್ತು? ಎಷ್ಟೆಂದರೂ ರಾಜಕಾರಣಿಗಳು ದೇಶದ, ಜಗತ್ತಿನ ಜವಾಬ್ದಾರಿಯನ್ನ ತಲೆಮೇಲೆ ಹೊತ್ತುಕೊಂಡವರಲ್ಲವಾ, ಎಷ್ಟೊತ್ತಿಗೆ ಯಾವ ರಾಜಕಾರ್ಯ ಬಂದುಬಿಟ್ಟರೆ? ಅವರಾದರೂ ಏನು ಮಾಡೀಯಾರು? ಅಲ್ಲದೇ ತಿಮ್ಮಪ್ಪನವರಿಗೆ ಹತ್ತಿರ ಹತ್ತಿರ 80ರ ಸನಿಹದ ವರ್ಷ. ಆ ವೃದ್ದಜೀವ ಇಷ್ಟೆಲ್ಲ ತಾಪತ್ರಯ ತಡೆದುಕೊಂಡಿತೇ? ಎನ್ನುವ ಸಂದೇಹ. ತಿಮ್ಮಪ್ಪನವರು ಕೋಟೆಗೆ ಬಂದರೆ ಮಾತ್ರ ನಮಗೂ ಅಲ್ಲಿಗೆ ಹೋಗುವ ಭಾಗ್ಯ. ಯಾವುದಕ್ಕೂ ಇರಲಿ ಎಂದು ಸೇತುವೆ ಉದ್ಘಾಟನೆ ಮುಗಿಸಿ ಸ್ಪೀಕರ್ ಬರುವ ರಸ್ತೆಯ ಕ್ರಾಸಿನಲ್ಲಿ ಕಾದು ನಿಂತೆವು.

ಸ್ವಲ್ಪ ಸಮಯದಲ್ಲಿ ಕಾರ್ಯಕ್ರಮ ಮುಗಿಸಿ ಬಂದ ಅವರು ನಾವು ನಿಂತಿದ್ದನ್ನು ಕಂಡು ಕಾರು ನಿಲ್ಲಿಸಿದರು. ಕೋಟೆಯ ಭೇಟಿಯ ಬಗ್ಗೆ ಮರುಬೇಡಿಕೆ ಸಲ್ಲಿಸಿದ್ದೇ ‘ಮಳೆ ಬರ್ತಾ ಇದೆ, ಹೋಗೋಕೆ ಆಗುತ್ತೇನ್ರೀ’ ಎಂದು ತಮಗೆ ತಾವೇ ಪ್ರಶ್ನಿಸಿಕೊಂಡವರು ‘ ನಡೀರ್ರಾ, ಕೋಟೆ ನೋಡಿ ಬರೋಣ’ ಎಂದು ಕಾರು ತಿರುಗಿಸಿಯೇ ಬಿಟ್ಟರು.

ಎದುರಿನ ಆಳ ಪ್ರಪಾತದಲ್ಲಿ ಏಕಾಂಗಿಯಾಗಿ ಮೇಲೆದ್ದುನಿಂತ ಬೃಹತ್ ಪರ್ವತ. ದಟ್ಟವಾದ ಕಾಡು ಬೆಳೆದಿದ್ದ ಆ ಗುಡ್ಡದ ಸುತ್ತ ಅಂಚಿನಲ್ಲಿ ಪಾಗಾರದಂತೆ ಕಾಣುವ ಗೋಡೆ ಸಾಲು ಚಕ್ಕನೆ ಗಮನ ಸೆಳೆಯಿತು. ತಿರುವುಮುರುವುಗಳ ಆ ಮಣ್ಣಿನ ರಸ್ತೆಯಲ್ಲಿ ಜೀಪಿನ ಚಕ್ರ ಜಾರುತ್ತಿತ್ತು. ಎಲ್ಲಿ ಆ ಪ್ರಪಾತದೊಡಲಲ್ಲಿ ಬೀಳುತ್ತೇವೆಯೋ ಎನ್ನುವ ಆತಂಕದಲ್ಲೂ ನಮಗೆ ದೃಷ್ಟಿ ಹೊರಗೆ ಚಾಚಿ ಆ ಸೃಷ್ಟಿ ವಿಸ್ಮಯವನ್ನು ನೋಡುವ ತವಕ.

ಆ ಆಳದಲ್ಲಿ ಎದ್ದುನಿಂತ ಗೋಪುರದಂಥ ಶೃಂಗ ಕಾನೂರು ಕೋಟೆಯ ಗುಡ್ಡ. ನಾವು ಕಾರ್ಗಲ್, ಭಟ್ಕಳ ರಸ್ತೆಯಿಂದ ಒಳಕ್ಕೆ 10-12 ಕಿಮೀ ದೂರದ ಕಾನೂರು ಭಾಗದಿಂದ ಕೋಟೆಯತ್ತ ಹೋಗುತ್ತಿದ್ದೆವು. ಹಲವು ವರ್ಷಗಳಿಂದ ನೋಡಬೇಕೆಂದು ಕಾತರಿಸಿದ್ದ ಕಾನೂರು ಕೋಟೆ ಕೊನೆಗೂ ಕಣ್ವಶವಾಗುತ್ತಿದೆ ಎನ್ನುವ ಸಂತೋಷ ಒಂದೆಡೆಯಾದರೆ, ನಾವೆಲ್ಲ ಪ್ರೀತಿಸುವ, ಗೌರವಿಸುವ, ಅಭಿಮಾನಪಡುವ ಕಾಗೋಡು ತಿಮ್ಮಪ್ಪನವರೂ ನಮ್ಮೊಂದಿಗೆ ಕೋಟೆಯನ್ನು ನೋಡಲು ಬಂದಿದ್ದಾರೆ ಎನ್ನುವದು ಖುಷಿಯ,ಅಚ್ಚರಿಯ, ಒಂಚೂರು ಭಯದ ಸಂಗತಿಯೂ ಆಗಿತ್ತು.

ಮುಂದೆ ಬೆಂಗಾವಲಿನ ಪೊಲೀಸ್ ಜೀಪ್, ಅದರ ಹಿಂದೆ ತಿಮ್ಮಪ್ಪನವರ ಕಾರು, ಅದರ ಹಿಂದೆ ಶರಾವತಿ ಅಭಯಾರಣ್ಯದ ರೇಂಜರ್ ಜೊತೆ ನಾವಿದ್ದ ಜೀಪ್. ನಾವು ಘಟ್ಟದ ಮೇಲಿನಿಂದ ಕೆಳಕ್ಕಿಳಿಯುತ್ತಿದ್ದೆವು. ಘಟ್ಟವಿಳಿಯುವ ತಿರುವು ರಸ್ತೆ ಮುಗಿದು, ಕಿರಿದಾದ ಕೆಸರಿನ, ಒಮ್ಮೆ ಏರು, ಹಾಗೇ ಸಡನ್ನಾಗಿ ಇಳುಕಲು ದಾರಿಯಲ್ಲಿ ಅತ್ತಿತ್ತ ಜಾರುವ ಚಕ್ರಗಳನ್ನು ಹಿಡಿತಕ್ಕೆ ತರುತ್ತ, ವಾಹನ ಚಲಾಯಿಸುವ ಚಾಲಕರ ಬಗ್ಗೆ ಎಲ್ಲರಿಗೂ ಬೆರಗು. ವಾಹನದ ತಾಕತ್ತು ಜಬರ್‍ದಸ್ತಾಗಿರುವಷ್ಟೇ ಚಾಲಕರ ನೈಪುಣ್ಯತೆಯೂ ಅಂಥ ದಾರಿಗಳಲ್ಲಿ ತುಂಬ ಮುಖ್ಯ. ದೊಡ್ಡ ದಿನ್ನೆಗಳನ್ನೂ ನಿರಾಯಾಸ ಹತ್ತಿ, ಜಾರು ಇಳುಕಲನ್ನೂ ಸಲೀಸಾಗಿ ಇಳಿದು, ಎಲ್ಲೂ ಜಾರದೇ, ಕೆಸರಲ್ಲಿ ಹೂಳದೇ ಕಾಡಿನೊಡಲಲ್ಲಿ ತೂರಿಕೊಂಡು ಹೋದ ದಾರಿಯಲ್ಲಿ ಸಾಗಿದ ವಾಹನಗಳು ದೊಡ್ಡ ಏರನ್ನು ಹತ್ತಿ ಗಕ್ಕನೆ ಬ್ರೇಕ್ ಒತ್ತಿದಾಗ ಎದುರಿಗೆ ಕಂಡದ್ದು ಎತ್ತರದ ಕಲ್ಲಿನ ಗೋಡೆ ಸಾಲಿನ ನಡುವಿನ ಭರ್ಜರಿ ಮಹಾದ್ವಾರ! 14ರಿಂದ 16ನೇ ಶತಮಾನದವರೆಗೆ ವಿಜೃಂಭಿಸಿದ ಗೇರಸೊಪ್ಪೆ ರಾಜ್ಯದ ಕೋಟೆ. ಹತ್ತಿರದಲ್ಲೇ ಈ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದು ಈಗ ನಗರಬಸ್ತಿಕೇರಿ ಎಂದು ಕರೆಯಿಸಿಕೊಳ್ಳುವ ಕಾಡು ಬೆಳೆದು ಅವಶೇಷಗಳಷ್ಟೇ ಉಳಿದ ಊರು.

ಇನ್ನೂರಕ್ಕೂ ಹೆಚ್ಚು ಕ್ಷೇತ್ರಾಧಿಪತಿಗಳ ಮುಖ್ಯಸ್ಥ ನಮ್ಮಂಥ ಚಿಲ್ಲರೆ ಕಾಲಾಳುಗಳ ದಂಡಿನೊಡನೆ ಕೋಟೆಯನ್ನು ನೋಡಲು ಬಂದ ಸಂಭ್ರಮವೋ? ಜೀಪ್‍ನಿಂದ ನೆಲಕ್ಕೆ ಕಾಲಿಡುತ್ತಿದ್ದಂತೇ ಆವರೆಗಿನ ಜಿಟಿಜಿಟಿ, ಅಬ್ಬರದ ಮಳೆಯಾಗಿ ಸುರಿಯತೊಡಗಿತು. ಆ ಮಳೆಗೆ ಕೋಟೆಯ ಮಹಾದ್ವಾರವೇ ನಮಗೆಲ್ಲ ಆಸರೆಯಾಯಿತು. ಹತ್ತಡಿಗಿಂತಲೂ ದಪ್ಪನಾದ, ಎತ್ತರದ ಬಿಳಿಕಲ್ಲಿನ ಆ ಮಹಾದ್ವಾರದ ಮುಂಡಿಗೆಗಳನ್ನು ನೋಡುತ್ತ ತಿಮ್ಮಪ್ಪನವರು ಮೊದಲಿಗೆ ಉದ್ಗರಿಸಿದ್ದು “ ಆಗಿನ ಕಾಲದಲ್ಲೇ ಇದನ್ನೆಲ್ಲ ಮಾಡೀದ್ರಲ್ಲಾ! ಏನು ಸಸಾರಾನಾ? ಈಗಿನಾಂಗೇ ಟೆಕ್ನಾಲಜಿನೂ ಇರ್ಲಿಲ್ಲ. ಹ್ಯಾಂಗ ತಂದ್ರೋ?ಹ್ಯಾಂಗೆ ನಿಲ್ಲಿಸಿದ್ರೋ?” ನಮ್ಮೆಲ್ಲರಂತೇ ತಿಮ್ಮಪ್ಪನವರೂ ಆ ಮಹಾದ್ವಾರವನ್ನು ಕಂಡು ಚಕಿತರಾಗಿದ್ದರು. ಅದರ ಅಕ್ಕಪಕ್ಕ ಚೌಕಾಕಾರದ ಕಲ್ಲುಗಳನ್ನು ಚೂರು ಪದರವಿರದಂತೆ ಜೋಡಿಸಿ ಕಟ್ಟಿದ ಎತ್ತರದ ಕೋಟೆ; ಮೇಲ್ಭಾಗದಲ್ಲಿ ಕಾವಲಿನ ಬುರುಜು. ಗತಕಾಲಕ್ಕೆ ಸೇರಿಹೋದ ಸಾಮ್ರಾಜ್ಯವೊಂದರ ಇತಿಹಾಸದ ಮುನ್ನುಡಿಯಂತೆ ಅವು ನನಗೆ ಭಾಸವಾದವು.

ಮಳೆ ನಿಲ್ಲುವಷ್ಟೂ ಕಾಲವೂ ಅಗಲವಾದ ಆ ದ್ವಾರದ ಕೆಳಗೆ ನಿಂತು ರೇಂಜರ್ ತೋರಿಸಿದ ಇಡೀ ಕಾನೂರು ಕೋಟೆಯ ಮ್ಯಾಪ್ ನೋಡಿದ ನಂತರದಲ್ಲಿ ನಮ್ಮ ಕೋಟೆ ನೋಡುವ ಕಾರ್ಯಕ್ರಮ ಶುರುವಾಯ್ತು.
ಕ್ವಚಿತ್ತಾಗಿ ಗಮನಿಸಿದ್ದರೂ ಕಾನೂರು ಕೋಟೆಯ ವಿಸ್ತೀರ್ಣ, ಅದರ ವಿನ್ಯಾಸ, ಎಷ್ಟೇ ಪರಿಚಿತವಿದ್ದರೂ ದಿಕ್ಕು ತಪ್ಪಿಸುವಂತಿದ್ದ ದಾರಿಗಳು ನಮ್ಮಲ್ಲಿ ಅಚ್ಚರಿ ಹುಟ್ಟಿಸಿದ್ದವು. ಅದನ್ನೇ ಮಾತನಾಡುತ್ತ ಬಿಳಿಕಲ್ಲಿನ ಅಗಲವಾದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪಾವಟಿಗೆಗಳನ್ನು ಹತ್ತುತ್ತ ಹೋದೆವು. ಗೇರಸೊಪ್ಪಾ ಸಾಮ್ರಾಜ್ಯದ ಅರಸರು, ರಾಣಿಯರು ಅದೆಷ್ಟು ಬಾರಿ ಆ ಪಾವಣಿಗೆಗಳಿಗೆ ಪಾದ ಸೋಕಿಸಿದ್ದರೋ? ಅದೆಷ್ಟು ಅಶ್ವಗಳು, ಅದೆಷ್ಟು ಸೈನಿಕರು ಆ ಮೆಟ್ಟಿಲುಗಳನ್ನು ಹತ್ತಿಳಿದಿದ್ದರೋ? ಆ ಪಾದಾಘಾತಕ್ಕೆ ಸವೆದಿರಬಹುದಾದ ಪಾವಟಿಗೆ ಮಳೆಗೆ ಒದ್ದೆಯಾಗಿ ಜಾರುತ್ತಿತ್ತು.

ಕೆಲವು ಮೆಟ್ಟಿಲುಗಳನ್ನು ತ್ರಾಸುಪಡದೇ ತಿಮ್ಮಪ್ಪನವರು ಹತ್ತಿಬಂದರು. ನಂತರ ಎರಡೂ ಪಕ್ಕದಲ್ಲಿ ಎತ್ತರದ ಗೋಡೆಗಳಿದ್ದ ಗಿಡಗಂಟಿ ಬೆಳೆದ ಕಿರಿದಾದ ಉದ್ದನೆಯ ಓಣಿಯನ್ನು ದಾಟಿದ ನಂತರ ಹಿಂದೊಮ್ಮೆ ಸಧೃಡವಾಗಿದ್ದು ಈಗ ಕುಸಿಯುತ್ತಿರುವ ಕೋಟೆಯ ಸಾಲುಗಳು ಎರಡೂ ಪಕ್ಕದಲ್ಲಿಯೂ ಆರಂಭಗೊಂಡವು. ಮಾರಗಲದ, ನಾಲ್ಕಾರು ಆಳು ಎತ್ತರದ ಗೋಡೆಗಳು ಗುಡ್ಡದ ಅಂಚಿನಲ್ಲಿದ್ದ ಕೋಟೆ ಕಟ್ಟಲು ಬಳಸಿದ್ದು ಪದರಶಿಲೆಗಳು; ಅಷ್ಟೊಂದು ಕಲ್ಲುಗಳನ್ನು ಎಲ್ಲಿಂದ ತಂದರೋ? ಹೇಗೆ ಸಂಗ್ರಹಿಸಿದರೋ?. ಜಿನುಗುತ್ತಿದ್ದ ಮಳೆಯಲ್ಲೇ ಕುಸಿದು ಬಿದ್ದ ಕೋಟೆ, ಶಿಥಿಲಗೊಂಡ ಕಟ್ಟಡಗಳು,ಪಾಳುಬಿದ್ದ ಬಾವಿಗಳನ್ನ ನೋಡುತ್ತ ಬಂದೆವು. ಮಳೆಯ ಹನಿಗೆ ಮರುಹುಟ್ಟು ಪಡೆದ ಉಂಬಳಗಳು ಅದೆಷ್ಟು ಸಹಸ್ರ ಸಂಖ್ಯೆಯಲ್ಲಿದ್ದವೋ? ಕಡ್ಡಿಯಷ್ಟು ಚಿಕ್ಕದರಿಂದ ಹೆಬ್ಬೆರಳು ಗಾತ್ರದ ಉಂಬಳಗಳು ಕಾಲನ್ನು ಮುತ್ತಿಕೊಳ್ಳುತ್ತಿದ್ದವು. ಅವನ್ನು ಕಿತ್ತು ಹಾಕುವ, ಕಾಲಿಗೆ ಹತ್ತದಂತೆ ಜಾಗ್ರತೆ ವಹಿಸುವ ಪಡಿಪಾಟಲೇ ನಮಗೆ ಮುಖ್ಯವಾಯಿತು. ನಾವು ತಕಪಕ ಕುಣಿಯುತ್ತ ನಡೆಯುತ್ತಿದ್ದರೆ ತಿಮ್ಮಪ್ಪನವರು ಮಾತ್ರ ಆ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದಂತಿದ್ದರು.

ನಿಧಾನಕ್ಕೆ ಅತ್ತಿತ್ತ ಅವಲೋಕಿಸುತ್ತ, ಇತಿಹಾಸದ ಬಗ್ಗೆಯೇ ಮಾತನಾಡುತ್ತ ಬರುತ್ತಿದ್ದರು. ಸುತ್ತಲಿನದನ್ನು ಕಂಡು ಬೆರಗು, ಕುತೂಹಲ, ಅಚ್ಚರಿ, ವಿಷಾದ ಪ್ರಾಯಶ: ನಮ್ಮಂತೇ ಅವರಿಗೂ ಆಗುತ್ತಿದ್ದಿರಬೇಕು. ಅವತ್ತು ತುಂಬಾ ಲವಲವಿಕೆ, ಕುಷಾಲು ಮಾಡುವ ಮೂಡ್ ಅವರದ್ದಿತ್ತು. ಅವರೆಲ್ಲಿಯಾದರೂ ಜಾರಿಬಿಟ್ಟಾರೆಂದು ಅವರ ಕಾರ್ ಚಾಲಕ ರಾಮಕೃಷ್ಣ ಹಾಗೂ ಮತ್ತೊಬ್ಬರು ಅವರ ಕೈಗಳನ್ನು ಹಿಡಿದುಕೊಂಡಿದ್ದರು. ಕೋಟೆಯ ನಡುವಿನ ಪುಟ್ಟ ಗುಡ್ಡವೊಂದರ ಮೇಲೆ ಹಳೆಯ ದೇವಾಲಯವಿದೆಯೆಂದು ಜೊತೆಗಿದ್ದ ಫಾರೆಸ್ಟ ಗಾರ್ಡ ಹೇಳಿದರು. ಆಗಲೇ ಸಾಕಷ್ಟು ದೂರ ನಡೆದಿದ್ದ ತಿಮ್ಮಪ್ಪನವರು ‘ಹೂಂ. ನಡೀರಿ, ಅದ್ನೂ ನೋಡಿದ್ರಾಯ್ತು’ ಎಂದು ತಮಗಾದ ಆಯಾಸವನ್ನು ಮರೆಸಿ, ನಮಗೆ ಹುಮ್ಮಸ್ಸು ತುಂಬಿದರು. ನಿಧಿಕಳ್ಳರ ಆಕ್ರಮಣಕ್ಕೆ ತುತ್ತಾದ ಆ ಎರಡೂ ದೇವಾಲಯಗಳು ಜೀರ್ಣಾವಸ್ಥೆಗೆ ತಲುಪಿದ್ದವು. ಬಿಳಿಕಲ್ಲಿನಲ್ಲಿ ಕಟ್ಟಿದ ಆ ದೇವಾಲಯಗಳ ಒಳಗೆ ಮೂರ್ತಿಗಳ ಬದಲಾಗಿ ದೊಡ್ಡ ಕಂದಕ ತೋಡಲಾಗಿತ್ತು. ನೆಲದೊಳಗೆ ನಿಧಿಯಿರುವ ಶಂಕೆಯಿಂದ ಮೂರ್ತಿಗಳನ್ನು ಕಿತ್ತು ಅವುಗಳ ಬುಡ ಶೋಧಿಸಿದ್ದರು. ಸುಮಾರು ಇಪ್ಪತೈದು ಅಡಿಗೂ ಉದ್ದದ ಧ್ವಜಸ್ಥಂಭವನ್ನು ಉರುಳಿಸಿದ್ದರು.

ಒಂದು ಅಪೂರ್ವವಾದ ಕಲಾಕೃತಿ ಮನುಷ್ಯನ ಹಣದಾಸೆಗೆ ಬಲಿಯಾಗಿತ್ತು. ನಾವು ಆಗಲೇ ಕನಿಷ್ಠ 4-5 ಕಿಮೀ.ಸುತ್ತಾಡಿದ್ದೆವು. ಉಂಬಳಗಳು ಕಚ್ಚಿ,ರಕ್ತ ಹೀರಿ ಉದುರಿದ ಜಾಗದಲ್ಲಿ ರಕ್ತ ಸೋರುತ್ತಿತ್ತು. ಕಾಲ ಬುಡದಲ್ಲಿ ಹತ್ತಿದ ಉಂಬಳಗಳು ಮೇಲಕ್ಕೂ ಹತ್ತುತ್ತಿದ್ದವು. ನಮಗೆ ಸುಸ್ತಾಗುತ್ತಿದೆ ಅನ್ನಿಸುವಾಗ ತಿಮ್ಮಪ್ಪನವರ ಪಾಡು ಏನಾಗಿರಬಹುದು? ಅವರ ಕಾಲ್ಗಳಿಗೂ ಉಂಬಳಗಳು ಕಚ್ಚಿಕೊಂಡಿದ್ದವು.

ಹೊರಟ ಜಾಗಕ್ಕೆ ವಾಪಸ್ಸು ಬಂದಾಗ ಸಂಜೆಯಾಗುತ್ತಲಿತ್ತು. ಅಲ್ಲಿ ನಿಂತ ತಿಮ್ಮಪ್ಪನವರು ತಮ್ಮೊಳಗಿನ ತುಮುಲವನ್ನು ಹತ್ತಿಕ್ಕಲಾಗದೇ “ ನೋಡ್ರಾ, ಹೆಂಗಿದ್ದ ಸಾಮ್ರಾಜ್ಯ ಹೆಂಗಾಗೋಯ್ತು. ಹೆಸರು ಹೇಳಕೂ ಒಬ್ರಿಲ್ಲದಂಗೇ ನಾಶವಾಗಿ ಹೋಯ್ತಲ್ರಾ” ಎಂದರು. ಈ ನೆಲದ ಸಾರವನ್ನು ಉಂಡ ಕಾಳುಮೆಣಸು, ಯಾಲಕ್ಕಿಗಳ ಖ್ಯಾತಿಯನ್ನು ದೂರದ ನಾಡಿಗೂ ಪಸರಿಸಿದ, ಈ ಸಾಂಬಾರುಪಧಾರ್ಥಗಳ ಮೂಲವನ್ನರಸಿ ಸಾವಿರಾರು ಮೈಲಿಯಿಂದ ವಿದೇಶಿಯರೂ ಬರುವಂತಾದ, ಒಂದು ಕಾಲದಲ್ಲಿ ವೈಭವದಿಂದ ಮೆರೆದ ನೆಲದಲ್ಲಿ ನಾವು ನಡೆದಾಡಿದ್ದೆವು. ಈಗ ಗತವನ್ನು ನೆನಪಿಸುವ, ಕುಸಿದುಹೋದ, ಶಿಥಿಲಗೊಂಡ ಪಳೆಯುಳಿಕೆಗಳಷ್ಟೇ ನಮ್ಮೆದುರಿಗಿದ್ದವು. ಎಲ್ಲರಲ್ಲೂ ಸಣ್ಣದಾದ ನೋವು, ವಿಷಾದ. ಅದು ತಿಮ್ಮಪ್ಪನವರಲ್ಲೂ ಖಂಡಿತಾ ಮಿಡುಕುತ್ತಿತ್ತು. ಒಂದು ಕ್ಷಣ ಕಣ್ಣುಮುಚ್ಚಿ ಮೂರ್ನಾಲ್ಕು ಶತಮಾನಗಳ ಹಿಂದಿನ ಆ ದಿನಗಳನ್ನು ಊಹಿಸಿಕೊಳ್ಳಲೆತ್ನಿಸಿದೆ. ಕುದುರೆಗಳ ಕೆನೆತ, ಖುರಪುಟಗಳ ಸದ್ದು, ಸೈನಿಕರ ಘೋಷ, ಕಹಳೆಯ ಧ್ವನಿ, … ನನ್ನೊಳಗೆಲ್ಲೋ ಕೇಳಿದಂತಾಯಿತು. ತಲೆ ಕೊಡವಿ ಮತ್ತೆ ವಾಸ್ತವಕ್ಕೆ ಬರಲೆತ್ನಿಸಿದೆ.

ಈ ಎಲ್ಲದರ ನಡುವೆ ನನಗೆ ತಿಮ್ಮಪ್ಪನವರು ಕೌತುಕ, ಅಚ್ಚರಿ ಮೂಡಿಸಿದ್ದರ ಜೊತೆಗೆ ಪ್ರಶ್ನಾರ್ಥಕ ಚಿನ್ಹೆಯಾಗಿಯೂ ಕಂಡಿದ್ದರು. ಈ ಇಳಿವಯಸ್ಸಿನಲ್ಲಿ ನಮ್ಮಂಥ ಯುವಕರು ಬರಲು ಹಿಂದೇಟು ಹಾಕುವ ದಟ್ಟಾರಣ್ಯದ ನಡುವೆ ಅವರು ಓಡಾಡಿದ್ದರು. ನಮಗಿಂತ ಚುರುಕಾಗಿ ನಡೆದಾಡಿದ್ದರು. ನಮ್ಮಷ್ಟೇ ಕುತೂಹಲ, ವಿಸ್ಮಯದಿಂದ ಕೋಟೆಯನ್ನು, ಅಲ್ಲಿರುವ ಎಲ್ಲವನ್ನೂ ನೋಡಿದ್ದರು. ಬೆರಗು, ಆಶ್ಚರ್ಯ, ವಿಷಾದ ಹಲವು ಭಾವಗಳನ್ನು ಅನುಭವಿಸಿ, ಹೊಮ್ಮಿಸಿದ್ದರು. ಈ ವಯಸ್ಸಿನಲ್ಲೂ ಇವರಿಗಿರುವ ದೈಹಿಕ, ಮಾನಸಿಕ ಶಕ್ತಿ ಎಂಥದ್ದಿರಬಹುದು? ಅದನ್ನು ಪಡೆದ ಬಗೆ ಏನಿರಬಹುದು? ನನ್ನ, ನನ್ನ ನಂತರದ ತಲೆಮಾರಿಗೆ ಸಾಧ್ಯವೇ ಆಗದ ಈ ಬಗೆಯ ಸಾಮಥ್ರ್ಯ ಬಂದದ್ದಾದರೂ ಎಲ್ಲಿಂದ?

ಒಂದು ಕನಸಿನಂತೇ ನಡೆದುಹೋದ ಘಟನೆ ಇದು; ಒಂದು ಉನ್ನತ ಸ್ಥಾನದಲ್ಲಿರುವ ಹಿರಿಯ ರಾಜಕಾರಣಿ ಸರಳವಾಗಿ ನಮ್ಮೊಂದಿಗೆ ನಡೆದಾಡಿದ್ದು, ಚರಿತ್ರೆಯ ಬಗ್ಗೆ ಆಸಕ್ತಿ, ಅದಕ್ಕೆ ಸ್ಪಂದಿಸುವ ಗುಣಗಳನ್ನು ವ್ಯಕ್ತಪಡಿಸಿದ್ದು, ಸ್ವಲ್ಪವೂ ದರ್ಪ, ಅಹಂಕಾರಗಳನ್ನು ತೋರಿಸದೇ ಗಂಭೀರವಾಗೇ ತಮಾಷೆ ಮಾಡುತ್ತಿದ್ದುದು ಎಲ್ಲವೂ. ಆದರೆ ಈ ಸಂದರ್ಭ ನನಗಂತೂ ಬಹುಮುಖ್ಯ ಪಾಠ ಮತ್ತು ಅನುಭವ. ಬಹುತೇಕ ರಾಜಕಾರಣಿಗಳಲ್ಲಿ, ಅದರಲ್ಲೂ ಇತ್ತೀಚಿನವರಲ್ಲಿ- ಕಾಣಲಾಗದ ಅಪರೂಪದ ವ್ಯಕ್ತಿತ್ವ ಕಾಗೋಡು ತಿಮ್ಮಪ್ಪನವರದ್ದು ಎಂದು ಧೃಡಪಡಿಸಿದೆ. ಆ ಕಾರಣಕ್ಕಾಗೇ ಅವರ ಬಗ್ಗೆ ಇದ್ದ ಪ್ರೀತಿ, ಗೌರವ, ಅಭಿಮಾನ ಮತ್ತಷ್ಟು ಹೆಚ್ಚಿದೆ. ಮತ್ತು ಅದೊಂದು ಸ್ಮøತಿಯಾಗಿ ಕಾನೂರು ಕೋಟೆಯಂತೆ ನನ್ನಲ್ಲಿರುತ್ತದೆ.

ಕಾನೂರಿನ ದಟ್ಟ ಕಾಡು, ಕುಸಿದ ಗೋಡೆಗಳ ಕೋಟೆ, ಮಣ್ಣಾದ ಕಟ್ಟಡಗಳು, ನಿಧಿಗಳ್ಳರಿಂದ ನಾಶವಾದ ದೇವಾಲಯ, ಹಿಂದೆ ಇದ್ದಿರಬಹುದಾದ, ಈಗ ಕದ್ದೊಯ್ದ ಮೂರ್ತಿಗಳು, ಪುರಾತನಕಾಲದಲ್ಲಿ ಎಲ್ಲಿಂದ ತಂದರೋ? ಕೆಳಗಡೆ ನಿಧಿ ಇರಬಹುದು ಎನ್ನುವ ಊಹೆಯಲ್ಲಿ ಉರುಳಿಸಿದ ಸುಮಾರು 20 ಅಡಿಗೂ ಉದ್ದದ್ದ ಧ್ವಜಸ್ಥಂಭ, ಎತ್ತರೆತ್ತರದ ದ್ವಾರದ ಮೆಟ್ಟಿಲುಗಳು, ಭವ್ಯಾಕಾರದ ಮಹಾದ್ವಾರ .. ಇವೆಲ್ಲವನ್ನ ಮತ್ತೊಮ್ಮೆ ಬಿಡುವಾಗಿ ನೋಡಬೇಕು. ಗತಕಾಲವನ್ನು ವಾಸ್ತವಕ್ಕೆ ಜೋಡಿಸಿಕೊಳ್ಳುತ್ತ ಸುತ್ತಾಡಬೇಕು. ಕಾಡು ಪಿಸುದ್ವನಿಯಲ್ಲಿ ಹೇಳುವ ಕಥೆಯನ್ನ ಕೇಳಬೇಕು. ಕಾಲ ಮತ್ತು ಕಾಡು ಒಟ್ಟಾಗಿ ಬರೆದ ಗತದಿನದ ಮಹಾಕಾವ್ಯವನ್ನ ಗ್ರಹಿಸಬೇಕು .. ಯಾವಾಗಲೋ ಗೊತ್ತಿಲ್ಲ?

‍ಲೇಖಕರು Avadhi Admin

August 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Srikanth Rao H S

    ‘ಕಾಲು ನೋಯಿಸಿಕೊಂಡು, ಶರೀರವನ್ನ ದಣಿಸಿಕೊಂಡು, ಹೊತ್ತು ಹಾಳುಮಾಡಿಕೊಳ್ಳುವದನ್ನ ಬಿಟ್ಟರೆ ನಯಾಪೈಸೆ ಪ್ರಯೋಜನವಿಲ್ಲದ ಆ ಕೆಲಸ ಹುಚ್ಚಲ್ಲದೇ ಮತ್ತೇನು?’ ಇದು ನಿಮ್ಮ ದೃಷ್ಟಿಕೋನವನ್ನು ತೋರಿಸುತ್ತದೆ. ವನ್ಯಜೀವಿಗಳ ಜ್ಞಾನವಿಲ್ಲದ ಜನ ಪೇಟೆಯ ಜನ ಸುಮ್ಮನೆ ಕಾಡು ಸುತ್ತುವುದರಿಂದಲೇ ಇಂದು ಪಶ್ವಿಮಘಟ್ಟದಲ್ಲಿ ಎಲ್ಲಿನೋಡಿದರಲ್ಲಿ ಕಸದ ರಾಶಿ ಸೃಷ್ಟಿಯಾಗಿರುವುದು.

    ಪ್ರತಿಕ್ರಿಯೆ
  2. Sagar

    ಸರ್ ಕಾಗೋಡು ರವರ ಜೊತೆ ಕಾನೂರು…ಚಾರಣ….ಅದ್ಬುತವಾಗಿ ಮೂಡಿಬಂದಿದೆ…
    ಶುಭಾಷಯಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: