ಹೋಗಿ ಕೆಲ್ಸಾ ನೋಡ್ಕಳಿ!

ದೇಶದೊಳಗೆ ಸ್ಕಿಲ್ ಡೆವಲಪ್ಮೆಂಟ್ ಯಾರದಾದರೂ ಆಗಬೇಕಾದದ್ದಿದ್ದರೆ ಅದು ನಮ್ಮನ್ನಾಳುವ ರಾಜಕಾರಣಿಗಳದು ಮತ್ತು ಅವರ ತಲೆಗೆ ಯೋಜನೆಗಳ ರಂಗು ತುಂಬುವ ಅಧಿಕಾರಿ ವರ್ಗದ್ದು.

ಮಾತೆತ್ತಿದರೆ “ಇದು ಮೆಕಾಲೆಯ ಶಿಕ್ಷಣ ಪದ್ಧತಿಯ ಫಲ” ಎಂದು ಅರಬಾಯಿ ಇಡುವ ಈ ಮೆಕಾಲೆಯ ಪುತ್ರರತ್ನಗಳು  “ಸ್ಕಿಲ್ ಇಂಡಿಯಾ” ಹೆಸರಿನಲ್ಲಿ ಮತ್ತದೇ ಗಲ್ಲೆ ಹತ್ತಿ ಕುಳಿತುಕೊಳ್ಳುವ ‘ಸೇವಾ ಕೌಶಲ’ ಕಲಿಸುತ್ತಿವೆಯೇ ಹೊರತು ಗ್ರಾಮೀಣ ಭಾರತದ ‘ಶ್ರಮ ಕೌಶಲ’ವನ್ನಲ್ಲ. ಪಿ. ಸಾಯಿನಾಥ್ ಅವರು ಸರಿಯಾಗಿಯೇ ಗುರುತಿಸಿರುವಂತೆ ಪಾರಂಪರಿಕವಾಗಿ ರೇಶ್ಮೆ ಸೀರೆ ನೇಯುತ್ತಿದ್ದವರಿಗೆ ರಿಕ್ಷಾ ಚಾಲನೆ ಕೌಶಲ ಕಲಿಸುವ ಬುದ್ಧಿವಂತಿಕೆ ಇದು!

ನೂರ ಮೂವತ್ತು ಕೋಟಿ ಭಾರತೀಯರಿಗೆ ಉದ್ಯೋಗ ಒದಗಿಸುವುದು ಬಹು ಅಲುಗಿನ ಕತ್ತಿ. ಒಂದೆಡೆ  ಉತ್ಪಾದಕ ವಯೋವರ್ಗದಲ್ಲಿ ಬರುವ ದೇಶದ ಜನರಲ್ಲಿ ಉದ್ಯೋಗ ದೊರೆಯದವರ ಮೊರೆಯಾದರೆ ಇನ್ನೊಂದೆಡೆ ಉದ್ಯೋಗಕ್ಕೆ ಅರ್ಹರಾಗಿರುವ, ಅಗತ್ಯ ಕೌಶಲಗಳನ್ನು ಪಡೆದಿರುವ (employable) ಜನರ ಕೊರತೆ. ಇವೆರಡನ್ನೂ ಮೀರಿ, ಯಾವುದೇ ಸರ್ಕಾರಿ ಲೆಕ್ಕಾಚಾರಗಳೊಳಗೆ ಇನ್ನೂ ಬರದಿರುವ ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಕ್ರಷಿಕರು ಕೂಡ ದೊಡ್ಡ ಪ್ರಮಾಣದಲ್ಲಿದ್ದಾರೆ.

ಕೇಂದ್ರ ಸರ್ಕಾರ ಕೊಡುವ ಲೆಕ್ಕಾಚಾರಗಳ ಪ್ರಕಾರ ಇಂಗ್ಲಂಡಿನಲ್ಲಿ 68%, ಜರ್ಮನಿಯಲ್ಲಿ 75%, ಅಮೆರಿಕದಲ್ಲಿ 52%, ಜಪಾನಿನಲ್ಲಿ 80%, ದಕ್ಷಿಣ ಕೊರಿಯಾದಲ್ಲಿ 96% ಜನ ಕೌಶಲಭರಿತರು. ಆದರೆ, ಭಾರತದಲ್ಲಿ ಕೌಶಲ ಹೊಂದಿರುವ ಜನರ ಸಂಖ್ಯೆ ಕೇವಲ 2. 3%!

ಭಾರತೀಯ ಕೈಗಾರಿಕೆಗಳ ಮಹಾಸಂಘ (CII) ಸಿದ್ಧಪಡಿಸಿದ 2017ನೇ ಸಾಲಿನ ಇಂಡಿಯಾ ಸ್ಕಿಲ್ ರಿಪೋರ್ಟ್ ಹೊರಬಂದಿದ್ದು, ಅದು ಹೇಳುವ ಪ್ರಕಾರ ದೇಶದಲ್ಲಿ ವಿದ್ಯಾಭ್ಯಾಸ ಹೊಂದಿದ್ದು, ಉತ್ಪಾದಕ ವಯೋವರ್ಗದಲ್ಲಿ ಬರುವ ನೂರಕ್ಕೆ 60 ಮಂದಿ ಉದ್ಯೋಗಕ್ಕೆ ಅಗತ್ಯ ಕೌಶಲಗಳನ್ನು ಹೊಂದಿಲ್ಲ! (ಅಂದರೆ ಎಂಪ್ಲಾಯೆಬಲ್ ಅಲ್ಲ). ಅಂದರೆ, ಹಲವು ಉದ್ಯೋಗಗಳು ಖಾಲಿ ಇದ್ದರೂ ಅ ಜಾಗ ತುಂಬಬಲ್ಲ ಕೌಶಲಗಳನ್ನು ಹೊಂದಿರುವವರ ಸಂಖ್ಯೆ ತೀರಾ ಕಡಿಮೆ ಇದೆ. 2016ರಲ್ಲಿ ಈ ಪ್ರಮಾಣ 66.88%  ಇತ್ತು.

2016 ನವೆಂಬರಿನಲ್ಲಿ ನೋಟು ರದ್ಧತಿಯ ಬಳಿಕ ಉಂಟಾಗಿರುವ ಅಲ್ಲೋಲ ಕಲ್ಲೋಲದ ಪರಿಣಾಮ ಇನ್ನೊಂದೆಡೆ ಢಾಳಾಗಿ ಕಾಣಿಸುತ್ತಿದೆ. ದೇಶದೊಳಗೆ ಉತ್ಪಾದಕ ವಯೋವರ್ಗದಲ್ಲಿ ಬರುವ ಜನಸಂಖ್ಯೆ 2016ರಲ್ಲಿ 95.03 ಕೋಟಿ ಇದ್ದುದು 2017 ಎಪ್ರಿಲ್ ವೇಳೆಗೆ 96 ಕೋಟಿಗೆ ಏರಿದೆ. ಆದರೆ, ಅದೇ ವೇಳೆಗೆ ದುಡಿಯುವ ಕೈಗಳ ಸಂಖ್ಯೆ ಏರಿದ್ದು 40.01 ಕೋಟಿಯಿಂದ 40.50 ಕೋಟಿಗೆ ಎಂದು CMIE  ಅಂಕಿಅಂಶಗಳು ಹೇಳುತ್ತವೆ.

ಇರುವ ಉದ್ಯೋಗಗಳೂ ಕೂಡಮೂಲಭೂತ ಸೌಕರ್ಯ (ತೈಲ, ಅನಿಲ ವಿದ್ಯುತ್, ಕಬ್ಬಿಣ, ಖನಿಜಗಳು) ಹೊರತುಪಡಿಸಿದರೆ ಐಟಿ, ಟೆಲಿಕಾಂನಂತಹ ಸೇವಾ ಕ್ಷೇತ್ರಗಳಲ್ಲೇ ತುಂಬಿಕೊಂಡಿವೆ.  ಆ ಕ್ಷೇತ್ರಗಳೆಲ್ಲ ತಮ್ಮ ಅತಿಯಾದ ಬೆಳವಣಿಗೆಯ ಭಾರಕ್ಕೆ ತಾವೇ ಕುಸಿಯತೊಡಗಿದ್ದು, ಅಲ್ಲಿನ ಉದ್ಯೋಗಗಳು ತೀರಾ ಅಸುರಕ್ಷಿತ ಆಗಿಬಿಟ್ಟಿವೆ.

ಹಿಂದೆ ಮನಮೋಹನ್ ಸಿಂಗ್ ಸರಕಾರದಲ್ಲೇ ಚಾಲ್ತಿ ಇದ್ದ ಸ್ಕಿಲ್ ಡೆವಲಪ್ಮೆಂಟ್ ಪ್ರಯತ್ನಗಳಿಗೆ ಚೆಂದದ “ಸ್ಕಿಲ್ ಇಂಡಿಯಾ” ಅಂಗಿ ತೊಡಿಸಿ ಮಾರಾಟಕ್ಕೆ ಯತ್ನಿಸಿದ ಪ್ರಧಾನಿ ಮೋದಿಯವರ ಪ್ರಯತ್ನಗಳು, ಆ ಯೋಜನೆಯ ಖಾಲಿತನ ಮತ್ತು ಅದನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳ ಅಸಡ್ಢೆಯ ಕಾರಣದಿಂದಾಗಿ ಮುಂದೂ ಹೋಗದೇ ಹಿಂದೂ ಹೋಗದೇ ಅಟಕಾಯಿಸಿಕೊಂಡಿದೆ ಎಂಬುದನ್ನು ಅಂಕಿಸಂಖ್ಯೆಗಳು ಸಾರಿಹೇಳುತ್ತಿವೆ. ದೇಶದೊಳಗೆ ಇರುವ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ, ಅಲ್ಲಿ ಕೌಶಲ ತುಂಬುವ ಮೂಲಕ ಅಲ್ಲಿಂದ ಬರುವ ಮುಂದಿನ ಪೀಳಿಗೆ ಉತ್ಪಾದಕವಾಗುವಂತೆ ಪ್ರಯತ್ನಿಸುವ ಬದಲು, ಆ ಇಡಿಯ ವ್ಯವಸ್ಥೆಯನ್ನು ಖಾಸಗಿಗೆ ಮಾರಿ ಕೈತೊಳೆದುಕೊಂಡು, ಖಾಸಗಿಯವರ ಕೈಯಾಳು-ಕಾಲಾಳುಗಳು, ಬಗಲು ಬಂಟರನ್ನು ತಯಾರಿಸುವ ಕಾರ್ಖಾನೆಗಳನ್ನಾಗಿ ಮಾಡುವುದೇ ಸರಕಾರದ ಪರಮೋದ್ಧೇಶ ಆಗಿರುವಂತಿದೆ.

ಒಬ್ಬ ವಿದ್ಯಾರ್ಥಿ ಪಾಲಿಟೆಕ್ನಿಕ್, ಐಟಿಐ, ಡಿಗ್ರಿ ಕಾಲೇಜಿನಲ್ಲಿ ಒಂದಿಷ್ಟು ವರ್ಷ ಸವೆಸಿ ಡಿಗ್ರಿ ಪಡೆದು ಬಂದ ಬಳಿಕ, ಆತನಿಗೆ ಮತ್ತೆ ಕೌಶಲ ಕಲಿಸಿ, ಉದ್ಯೋಗಕ್ಕೆ ಅರ್ಹಗೊಳಿಸುವುದು ಅಂದರೆ ಏನರ್ಥ? ಇದನ್ನು ಆ ವಿದ್ಯಾರ್ಥಿಯ ಕಲಿಕೆಯ ದಿನಗಳಲ್ಲೇ ಅಳವಡಿಸುವುದಕ್ಕೆ ಅಡ್ಡಿ ಆಗಿರುವುದು ಏನು? ಇಂತಹ ಮೂಲಭೂತ ಪ್ರಶ್ನೆಗಳನ್ನೂ ಎತ್ತಲಾಗದ ದಾರುಣ ಪರಿಸ್ಥಿತಿ ನಮ್ಮದು. 11ನೇ ಪಂಚವಾರ್ಷಿಕ ಯೋಜನೆ (2007-2012)ಯಿಂದಲೇ ಚಾಲ್ತಿ ಇರುವ ಈ ಯೋಜನೆ ಈಗ ಸ್ಕಿಲ್ ಇಂಡಿಯಾ ಎಂಬ ಹೊಸ ಬಟ್ಟೆ ತೊಟ್ತ ಮೂರು ವರ್ಷಗಳ ಬಳಿಕವೂ ತನ್ನ ಫಲಿತಾಂಶ ಕೊಟ್ಟಿರುವುದು ಕಾಣಿಸುತ್ತಿಲ್ಲ ಎಂದಾದರೆ, ಅದನ್ನು ಮರುಪರಿಶೀಲಿಸಬೇಕಾದ ಅಗತ್ಯ ಇದೆ ಅನ್ನಿಸುವುದಿಲ್ಲವೇ?

ಹೆಚ್ಚಿನ ಓದಿಗಾಗಿ:

೧. ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2017 ಪೂರ್ಣಪಾಠ:

https://wheebox.com/static/ wheebox_pdf/india-skills- report-2017.pdf

೨. ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಮಿಷನ್ ಬಗ್ಗೆ ವಿವರ:

http://www.skilldevelopment. gov.in/assets/images/Mission% 20booklet.pdf

೩. ಮೇ- ಆಗಸ್ಟ್ 2017 ಭಾರತದಲ್ಲಿ ನಿರುದ್ಯೋಗದ ಅಂಕಿಸಂಖ್ಯೆಗಳ ವಿವರ:

file:///C:/Users/Admin/ Downloads/May-Aug2017.pdf

‍ಲೇಖಕರು avadhi

October 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: