ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಇತಿಹಾಸದ ದುರಂತಗಳನ್ನು ಮತ್ತೆ ನೆನಪಿಸುವ ಕೃತಿ..

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 4

ಕೃತಿ – ‘ದೇಹವೇ ದೇಶ’
ಲೇಖಕರು (ಮೂಲ -ಹಿಂದಿ) – ಪ್ರೊ ಗರೀಮಾ ಶ್ರೀವಾಸ್ತವ
ಕನ್ನಡಕ್ಕೆ – ವಿಕ್ರಮ ವಿಸಾಜಿ
ಪ್ರಕಾಶಕರು – ಛಂದ ಪ್ರಕಾಶನ
ಬೆಲೆ – 250


“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಮಾಯೆ ಅಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ “

ಆದರೆ ಹೆಣ್ಣು ಎಂದರೆ ಕೇವಲ ಹೆಣ್ಣು ಮಾತ್ರ.ಅವಳನ್ನು ಕಾಲಾತೀತವಾಗಿ, ಸೀಮಾತೀತವಾಗಿ ಗಮನಿಸಿದಾಗ, ಅವಳನ್ನು ಎಲ್ಲರ ಅನುಕೂಲಕ್ಕಾಗಿ ಬಳಸಿದ್ದಾರೆಯೇ ವಿನಃ, ಅವಳಿಗೆ ಅವಳದೇ ಆದ ಅಸ್ತಿತ್ವವಾಗಲಿ, ಅಸ್ಮಿತೆಯಾಗಲಿ ಕಾಣಸಿಗುವುದಿಲ್ಲ. ಮನುಷ್ಯ ಜಗತ್ತಿನಲ್ಲಿ ಏನೇ ಬದಲಾವಣೆ ಆದರೂ ಕೂಡ ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ಅದರ ಪರಿಣಾಮ ಅವಳ ಮೇಲೆ ಬೀರದೇ ಇರದು. ಅದರಲ್ಲೂ ಯುದ್ಧ ಎಂಬ ವಿನಾಶಕಾರಿ ಸಂಗತಿಗಳು ಘಟಿಸಿದಾಗ ಅದರ ನೇರ ಪರಿಣಾಮ ಹೆಣ್ಣಿನ ಮೇಲೆ ಆಗುವುದು . ಅವಳು ಮನೆ, ಮಕ್ಕಳು,ಗಂಡ ಎಲ್ಲಾ ಸಂಬಂಧವನ್ನು ಕಳೆದುಕೊಳ್ಳುವುದರೊಂದಿಗೆ, ತನ್ನ ದೇಹ, ಮನಸ್ಸು, ಕನಸುಗಳನ್ನು ಕೂಡ ಮುರುಟಿಕೊಂಡು ಜೀವಂತ ಶವವಾಗುತ್ತಾಳೆ. ಅಂತಹ ಅನೇಕ ಶೋಷಿತ ಮಹಿಳೆಯರ ಕಥನ ಕ್ರೊವೇಷಿಯಾ, ಬೋಸ್ನಿಯಾದ ನೆಲದಲ್ಲಿ ನಡೆದಿದ್ದು, ಅಂತಹ ನೋವಿನ ಎಳೆಗಳನ್ನು ಅರಸಿಕೊಂಡು ಹೊರಟಿದ್ದು ಗರಿಮಾ ಶ್ರೀ ವಾಸ್ತವರವರು.
ಹೆಣ್ಣುಮಕ್ಕಳ ದೇಹ ಮತ್ತು ಮನಸ್ಸುಗಳ ಮೇಲಾದ ಗಾಯದ ಗುರುತುಗಳನ್ನು ಗರಿಮಾ ರವರು ಯಥಾವತ್ತಾಗಿ ಅಕ್ಷರರೂಪಕ್ಕಿಳಿಸಿದರೆ, ಅದನ್ನು ಅಷ್ಟೇ ಸಮರ್ಥವಾಗಿ ಮೂಲ ಸೊಗಡಿಗೆ ಧಕ್ಕೆ ಬಾರದಂತೆ ಡಾ. ವಿಕ್ರಮ ವಿಸಾಜಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಗರಿಮಾ ಶ್ರೀವಾಸ್ತವ ರವರು ಕ್ರೊವೇಷಿಯಾಕ್ಕೆ ಎರಡು ವರ್ಷಗಳ ಕಾಲ ಹಿಂದಿ ಭಾಷೆಯನ್ನು ಬೋಧಿಸಲು ಹೋದಾಗ , ಇನ್ನೂ ಇತಿಹಾಸದ ಪುಟಗಳಲ್ಲಿ ಕರಗಿ ಹೋಗದ, ರಕ್ತದ ಕಲೆಗಳು ಮಾಸಿ ಹೋಗದ ಹಲವು ನೖಜ ಘಟನಾವಳಿಗಳನ್ನು ಹೆಕ್ಕಿಕೊಂಡು, ತಮ್ಮದೇ ಆದ ದಾಟಿಯಲ್ಲಿ, ಡೈರಿಯ ಟಿಪ್ಪಣಿಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಅವರ ಪ್ರವಾಸ ಕಥನವೂ ಹೌದು, ಅನುಭವ ಕಥನವೂ ಹೌದು ಜೊತೆಗೆ ಆತ್ಮಕಥನದ ಕೆಲವು ತುಣುಕುಗಳು ಕೂಡ ಸೇರಿವೆ. ಲೇಖಕಿ ಸಂತ್ರಸ್ತರನ್ನು ಅರಸಿ, ಅವರಿಗೆ ಆಪ್ತರಾಗಿ, ಅವರ ಅನುಭವಗಳನ್ನು ನೈಜವಾಗಿ ಬಿಚ್ಚಿಟ್ಟಿದ್ದಾರೆ.

ಕೃತಿಯುದ್ದಕ್ಕೂ ಹೊರದೇಶದ ಅನುಭವ, ಅಲ್ಲಿ ಕಾಡಿದ ಒಂಟಿತನ, ಅಲ್ಲಿನ ಪರಿಸರ, ಆಹಾರ ವಿಹಾರ ಆ ನೆಲದ ಇತಿಹಾಸ ಎಲ್ಲವನ್ನೂ ಹೇಳುತ್ತಾ, ಕೆಲವೊಮ್ಮೆ ಆಪ್ತರೊಂದಿಗೆ ಪತ್ರ ಮುಖೇನ ಹಂಚಿಕೊಂಡಿರುವ ಬಗೆಯು ಕೂಡ ಹೊಸ ತಂತ್ರಗಾರಿಕೆಯಿಂದ ಕೂಡಿದೆ.

1992 -1995 ರ ಕಾಲಘಟ್ಟದಲ್ಲಿ ಪೂರ್ವ ಯುರೋಪಿನ ದೇಶಗಳಾದ ಕ್ರೊವೇಷಿಯಾ, ಸರ್ಬಿಯಾ, ಹರ್ಜೆಗೋವಿನಾ ಮತ್ತು ಬೋಸ್ನಿಯಾ ದೇಶಗಳ ನಡುವೆ ನಡೆದ ಜನಾಂಗೀಯ ಸಂಘರ್ಷದ ಚಿತ್ರಣ, ಅದರ ಪರಿಣಾಮ ಅದರಲ್ಲೂ ಮಹಿಳೆಯರ ಮೇಲಾದ ಅತ್ಯಾಚಾರ, ದೌರ್ಜನ್ಯಗಳ ನರಕ ಸದೃಶ್ಯ ಸಂಗತಿಗಳಿಗೆ ಸಾಕ್ಷಿಯಾದವರ ಸಂಕಥನ ಇದಾಗಿದೆ . ಕ್ರೊವೇಷಿಯಾದ ಮೇಲೆ ನೆರೆದೇಶವಾದ ಸರ್ಬಿಯನ್ನರು ಮಾಡಿದ ಅಮಾನುಷ ಕಾರ್ಯಚರಣೆ, ಜನಾಂಗೀಯ ಶುದ್ಧತೆಗಾಗಿ ಮತ್ತು ಶುದ್ಧನಾಡನ್ನು ಕಟ್ಟಬೇಕೆಂಬ ಹುಚ್ಚುದೋರಣೆಯಿಂದ 20 ಲಕ್ಷ ಜನರು ಮನೆ ಮಠ ಕಳೆದುಕೊಂಡರು. ಅದರಲ್ಲಿ ಹೆಚ್ಚು ಬೆಂದವರು ಮಕ್ಕಳು ಮತ್ತು ಹೆಣ್ಣು ಮಕ್ಕಳು. ಯುದ್ಧದ ಕಾರ್ಯಾಚರಣೆಯಲ್ಲಿ ಸಾಮೂಹಿಕ ಅತ್ಯಾಚಾರಗಳು ಒಂದು ಭಾಗವಾಗಿಯೇ ಪರಿಣಮಿಸಿತ್ತು. ಅದು ರಾಜಕೀಯ ಕುತಂತ್ರವೂ ಕೂಡ ಹೌದು. ಹೆಣ್ಣಿನ ಮೇಲೆ ದೌರ್ಜನ್ಯ ವೆಸಗುವುದರ ಮೂಲಕ ಅವರನ್ನು ದುರ್ಬರನ್ನಾಗಿಸುವುದು. ಅಲ್ಲಿನ ಜನರನ್ನು ದೇಶ ಬಿಡುವಂತೆ ಮಾಡುವುದು ಮತ್ತು ಸೈನಿಕರನ್ನು ಹುರಿದುಂಬಿಸುವುದು ಹೀಗೆ ಮಾಡುತ್ತಾ, ಹದ್ದಿನ ರೂಪದಲ್ಲಿ ಹೆಣ್ಣಿನ ಮೇಲೆ ಆಕ್ರಮಣ ಮಾಡುವುದೇ ಅವರ ಗುರಿಯಾಗಿಸಿಕೊಂಡಿದ್ದರು.ಮಕ್ಕಳ ಎದುರು ತಾಯಿಯ ಮೇಲೆ ಅತ್ಯಾಚಾರ, ಮಗು ಗರ್ಭಿಣಿ ಎಂದು ನೋಡದೆ,ಏಕಕಾಲಕ್ಕೆ ಹತ್ತಾರು ಸೈನಿಕರ ಅಕ್ರಮಣ,ಪ್ರಾಪ್ತ ಅಪ್ರಾಪ್ತ ಎಂಬ ವ್ಯತ್ಯಾಸವಿಲ್ಲದೆ ಮನುಷ್ಯತ್ವವನ್ನು ಮರೆತು ಕಾಮುಕ ಪಿಶಾಚಿಗಳಂತೆ ವರ್ತಿಸಿದ ನೂರಾರು ಘಟನೆಗಳನ್ನು ಇಲ್ಲಿ ಬಿಂಬಿಸಿದ್ದಾರೆ . ಹೆಣ್ಣು ಎಂಬ ಜೀವಿಯ ಮೇಲೆ ಎರಗುವ, ತಮ್ಮ ಪುರುಷ ಅಹಂಕಾರ ಮೆರೆಯುವ ಸಂಕಟ ಸಂದರ್ಭಗಳ ದೊಡ್ಡಪಟ್ಟಿಯನ್ನೇ ನೀಡಿದ್ದಾರೆ.ಯುದ್ಧ ಯಾವ ದೇಶಗಳ ನಡುವೆ ನಡೆದರೂ ಕೂಡ ಅಲ್ಲಿ ನೋವು, ಅಪಮಾನ ಅನುಭವಿಸುವಳು ಹೆಣ್ಣು ಮಾತ್ರ ಎನ್ನುವಳು ಲೇಖಕಿ.

‘ಹೂತು ಹಾಕಲ್ಪಟ್ಟ ಹೆಣಗಳನ್ನು ಹೆಕ್ಕಿ ಮತ್ತೆ ದಾರಿಗೆ ಹಾಕುವಂತೆ’ ಹಳೆಯ ನೆನಪುಗಳನ್ನು ಕೆದಕಿ ಅಥವಾ ಒಣಗಿದ ಗಾಯವನ್ನು ಕೆರೆದು ಹಸಿ ಮಾಡಿಕೊಂಡಂತೆ, ಕಾಲದ ತೆಕ್ಕೆಯಲ್ಲಿ ಕರಗಿ ಹೋದಂತಹ ನೋವಿನ ಎಳೆಗಳಗೆ ಲೇಖಕಿ ಮರು ಜೀವ ನೀಡಿದ್ದಾರೆ. ಮರೆತು ಹೋದ ಕಹಿ ನೆನಪನ್ನು, ಸಂತ್ರಸ್ತ ಮಹಿಳೆಯರು ಮತ್ತೆ ಮೆಲಕು ಹಾಕುವಂತೆ ಮಾಡಿದ್ದು ಅವಶ್ಯವೇ ಎಂಬ ಪ್ರಶ್ನೆ ಕಾಡುವುದು. ಆದರೆ ನೋವಿನ ಇತಿಹಾಸ ದಾಖಲಾಗಬೇಕೆಂಬ ಕಳಕಳಿ ಇಲ್ಲಿ ಎದ್ದು ಕಾಣುತ್ತದೆ.

ಕ್ರೊವೇಷಿಯಾದ ಸಹಸ್ರಾರು ಹೆಣ್ಣು ಮಕ್ಕಳ ಮೇಲಾದ ಅತ್ಯಾಚಾರ, ಅದಕ್ಕಿರುವ ಪುರುಷನ ಮನಸ್ಥಿತಿ, ಸಮಾಜದ ಧೋರಣೆ, ಮಹಿಳೆಯರು ಅನುಭವಿಸಿದ ಮಾನಸಿಕ ವೇದನೆ ಎಲ್ಲವನ್ನೂ ಸಾದ್ಯಾಂತವಾಗಿ ಕ್ರೊಢೀಕರಿಸಿ ಕಟ್ಟಿಕೊಟ್ಟಿದ್ದಾರೆ. ಯುದ್ಧದ ನಂತರದಲ್ಲಿ ನಡೆದ ಘಟನಾವಳಿಗಳನ್ನು ಕೂಡ ಹೇಳುತ್ತಾ ಹೆಣ್ಣು ಮಕ್ಕಳಿಗೆ ನ್ಯಾಯ ದಕ್ಕಲೆ ಇಲ್ಲ ಎಂಬ ಸಂಗತಿ ತಿಳಿದಾಗ ವಿಷಾದತೆ ಮೂಡುವುದು.

ಸರ್ಬಿಯನ್ ರು ಮಾಡಿದ ಹಿಂಸೆ ಮತ್ತು ಅತ್ಯಾಚಾರವನ್ನು’ಜೆನೊಸಾಯಿಡ್’ ಎಂದು ಘೋಷಿಸಲಾಯಿತು. ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೋರ್ಟಿನಲ್ಲಿ ವಿಚಾರಣೆ ನಡೆದರೂ ಕೂಡ ಸರಿಯಾದ ಸಾಕ್ಷಾಧಾರಗಳಿಲ್ಲದೆ ಹಲವರಿಗೆ ನ್ಯಾಯ ಸಿಗಲಿಲ್ಲ. ಆದರೆ ಕೆಲವು ಮಹಿಳೆಯರು ಮೌನಕ್ಕೆ ಶರಣಾದರು, ಇನ್ನು ಕೆಲವರು ಕಾಣೆಯಾದರೆ, ಮತ್ತೆ ಕೆಲವು ಮಹಿಳೆಯರು ವೇಶ್ಯಾವಾಟಿಕೆಯಲ್ಲಿಯೇ ಶಾಶ್ವತವಾಗಿ ನೆಲೆ ಕಂಡರು. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಮಾಸಿಕ ವೇತನ ಪಡೆಯಲು ಪ್ರತಿ ವರ್ಷ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ನಿಯಮವಿತ್ತು . ಇಂತಹ ವಿಪರ್ಯಾಸದ ಕಾನೂನಿನ ತೊಡಕು ಕಂಡಾಗ, ಜಗತ್ತಿನ ಯಾವ ಮೂಲೆಗೆ ಹೋದರು ಕಾನೂನು ಕರಳು ಕತ್ತರಿಸುತ್ತದೆಯೇ ಹೊರತು ಕರುಳಿನ ಕೂಗನ್ನು ಕೇಳಿಸಿಕೊಳ್ಳುವುದಿಲ್ಲ ಎಂಬ ಮಾತು ಸತ್ಯವೆನಿಸುತ್ತದೆ. ಇನ್ನೂ ಕೆಲವರು ಅತ್ಯಾಚಾರವೆ ಆಗಿಲ್ಲ ಅದು ಪರಸ್ಪರ ಸಹಕಾರದ ಮೂಲಕ ನೆರವೇರಿದ ಸಂಗತಿ ಎಂದು ಹೇಳಿದಾಗ ಸಂತ್ರಸ್ತರು ಕೈಚೆಲ್ಲಿ ಕೂಡದೆ ಅನ್ಯಮಾರ್ಗವಿರಲಿಲ್ಲ.

ಲಿಲಿಯಾನಾ,ಹಾಸೆಸಿಸ್, ಇಮೋಜಿನಾ, ಬೊಲ್ಕೊವೆಬ್……. ಎಂಬ ಹಲವಾರು ಮಹಿಳೆಯರ ಧಾರುಣ ಕಥೆಗಳು ಇಲ್ಲಿ ಕಾಣಬಹುದು. ಎಂದೂ ಕಂಡು ಕೇಳರಿಯದ ನೋವನ್ನು ಅನುಭವಿಸಿದ ಮಹಿಳೆಯರು ಮತ್ತೆ ಫಿನಿಕ್ಸ್ ನಂತೆ ಪುಟಿದೆದ್ದು, ಜೀವನ್ಮುಖಿ ಆದವರ ಕಥೆಗಳು ಇಲ್ಲಿವೆ.ಅವರಲ್ಲಿ ಹಾಸೆಸಿಸ್ ಎಂಬ ಮಹಿಳೆ, ಅವಳನ್ನು ಸರ್ಬಿಯಾದ ಸೈನಿಕರು ಪೊಲೀಸ್ ಠಾಣೆಗೆ ಕರೆದೊಯ್ದು ಅತ್ಯಾಚಾರ ವೆಸಗಿದರು, ಅವರಲ್ಲಿ ನೆರೆಮನೆಯಾತ ಕೂಡ ಸೇರಿದ್ದ. ಪರಿಚಿತರಿಂದಲೇ ಆಕ್ರಮಣವಾದಾಗ ಅವಳು ದಿಗ್ಬ್ರಮೆಗೊಂಡಳು. ಪ್ರತಿನಿತ್ಯ ಅವಳ ಮೇಲೆ ದೌರ್ಜನ್ಯ ಆಗುತ್ತಲೇ ಇತ್ತು. ಸೈನಿಕರ ಹೆಜ್ಜೆಗಳ ಸಪ್ಪಳವನ್ನು ಕೇಳಿಯೇ ಬಟ್ಟೆಯನ್ನು ಕಳಚುತ್ತಿದ್ದಳು, ಇಲ್ಲವಾದರೆ ಒದೆ ತಿನ್ನಬೇಕಾಗುತ್ತಿತ್ತು. ಇದೆಲ್ಲವನ್ನು ಸಹಿಸಲು ಅವಳಿಗೆ ಒಂದೇ ಕಾರಣ ಮನೆ ಮತ್ತು ಮಕ್ಕಳನ್ನು ಮರಳಿ ಸೇರುವ ಹಿರಿದಾಸೆ. ಯುದ್ಧ ಮುಗಿದ ನಂತರ ಮನೆಗೆ ಬಂದಾಗ ಗಂಡ ತಿರಸ್ಕರಿಸಿದ,ಆದರೆ ಶ್ರಮದಿಂದ ದುಡಿದು ಮಕ್ಕಳಿಗೆ ಒಳ್ಳೆಯ ಬದುಕು ನೀಡಿದೆ ಎಂದು ಅಭಿಮಾನದಿಂದ ನುಡಿಯುವಳು ಹಾಸೆಸಿಸ್. ಇಂದು ಸ್ವಾಭಿಮಾನದ ಬದುಕನ್ನು ಅವಳು ಕಟ್ಟಿಕೊಂಡಿದ್ದಾಳೆ ಒಂದು ರೆಸ್ಟೋರೆಂಟ್ ನ ಒಡತಿಯಾಗಿದ್ದಾಳೆ. ಇಂತಹ ಹತ್ತು ಹಲವು ಘಟನೆಗಳನ್ನು ಲೇಖಕಿ ದಾಖಲಿಸಿದ್ದಾಳೆ. ಇನ್ನು ಅರಿಜೋನಾ ಎಂಬ ಮಾರುಕಟ್ಟೆಯಲ್ಲಿ ಹೆಣ್ಣನ್ನು ಸರಕಾಗಿ ಕಾಣುವ ರೀತಿ, ಅಲ್ಲಿಂದ ಗಡಿಯಾಚೆಗೂ ಕೂಡ ಅವರನ್ನು ರಫ್ತು ಮಾಡುವ ವ್ಯಾಪಾರ ಪದ್ಧತಿ ಓದಿದಾಗ, ಹೆಣ್ಣು ಕೇವಲ ಸರಕೇ ಎಂಬ ಪ್ರಶ್ನೆ ಕಾಡುವುದು.

ಕೃತಿಯುದ್ದಕ್ಕೂ ಕ್ರೋವಾತಿ ಭಾಷೆಯಲ್ಲಿ ಬರೆದ ಯುದ್ಧದ ಕುರಿತಾದ ಹಾಡುಗಳು, ಹೆಣ್ಣು ಮಕ್ಕಳ ಹಳವಂಡಗಳು ಹಾಸು ಹೊಕ್ಕಾಗಿ ಸೇರಿಕೊಂಡಿವೆ.

‘ಸಹೃದಯ ಸಿಕ್ಕರೆ ಮಾತನಾಡುವೆ, ಇಲ್ಲವಾದರೆ ತೆಪ್ಪಗೆ ನನ್ನ ಪಾಡಿಗೆ ನಾನಿರುವೆ ‘

‘ದಿನದ ಬೆಳಕು ರಾತ್ರಿಯ ಕತ್ತಲೆಯಲ್ಲಿ ಬರಿ ರಕ್ತವಿದೆ
ಸಂತ್ರಸ್ತರೊಂದಿಗೆ’
ಇಂತಹ ಸಾಲುಗಳು ಕೃತಿ ಇದ್ದಕ್ಕೂ ಸಿಗುತ್ತವೆ.

ಲೇಖಕಿ ಶೋಷಿತ ಮಹಿಳೆಯರ ಅಂತರಂಗವನ್ನು ಅರಿತು , ಅವರು ಅನುಭವಿಸಿದ ನೋವು ,ಅಪಮಾನದ ಕುಲುಮೆಯಲ್ಲಿ ಬೆಂದು ಹೋದವರ ಧ್ವನಿಯನ್ನು ಆಲಿಸಿ ಎಲ್ಲವನ್ನು ಹಸಿಹಸಿಯಾಗಿ ದಾಖಲಿಸಿದ್ದಾರೆ . ಆದರೆ ಇನ್ನೂ ಅಕ್ಷರಗಳಿಗೆ ಸಿಗದ ಏನೆಲ್ಲಾ ಸಂಗತಿಗಳು ಸಾಗರ ಸೇರಿರಬಹುದು.

ದೇಹವೇ ದೇಶ ಕೃತಿಯನ್ನು ಓದಿದ ನಂತರ ಓದುಗನಿಗೆ ಖಾಲಿ ತನ, ಸಂಕಟ ಹೆಣ್ಣುಮಕ್ಕಳ ಆರ್ಥ ದ್ವನಿ ಕಾಡದೇ ಇರದು. ಹಾಗೆಯೇ ನಮ್ಮ ನೆಲದಲ್ಲಿ ನಡೆದ ದೇಶ ವಿಭಜನೆಯ ಸಂದರ್ಭ, ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ನಡೆದ ಅತ್ಯಾಚಾರ ದೌರ್ಜನ್ಯ ಇತಿಹಾಸದ ದುರಂತದ ಘಟನಾವಳಿಗಳನ್ನು ಉಲ್ಲೇಖಿಸಿ, ಮತ್ತೆ ಎಲ್ಲವನ್ನೂ ನೆನಪಿಸುವಂತೆ ಮಾಡುತ್ತದೆ ಈ ಕೃತಿ.

ಗರಿಮಾ ಅವರು ಹಿಂದಿ ಭಾಷೆ ಬೋಧನೆಗೆಂದು ಜಾಗ್ರೇಬ್ ವಿಶ್ವವಿದ್ಯಾಲಯಕ್ಕೆ ತೆರಳಿ, ಅಲ್ಲಿ ಸಂತ್ರಸ್ತ ಮಹಿಳೆಯರನ್ನು ಅರಸುತ್ತ ಅವರ ನೋವನ್ನು ಆಲಿಸುತ್ತಾ ಮಾಗಿದ ಗಾಯಗಳಿಗೆ ಕನ್ನಡಿ ಹಿಡಿದಿದ್ದಾರೆ. ಜೊತೆಗೆ ವಿದೇಶಿಯರ ದೃಷ್ಟಿಯಲ್ಲಿ ಭಾರತವನ್ನು ಕೂಡ ಕೇಳಿ ಚಿತ್ರಿಸಿದ್ದಾರೆ. ನಮ್ಮ ನೆಲದ ಗಾಯಗಳನ್ನು ಕೂಡ ಎತ್ತಿ ತೋರಿಸಿದ್ದಾರೆ. ದೇಶ, ಭಾಷೆ, ಜನಾಂಗ ಮತ್ತು ಸಂಪ್ರದಾಯ ಏನೆಲ್ಲಾ ವ್ಯತ್ಯಾಸವಿದ್ದರೂ ಕೂಡ ಹೆಣ್ಣು ಮಾತ್ರ ಕೇವಲ ಹೆಣ್ಣು, ಅವಳೊಂದು ಮಾಂಸದ ಮುದ್ದೆ ಎಂಬ ಭಾವ ಮೂಡದೆ ಇರದು.

ಕ್ರೊವೇಷಿಯಾ ಸುಂದರ ನಾಡು, ಕಡಲತಟದ ಸ್ವಚ್ಛ ಶಾಂತ ಪರಿಸರ, ಪ್ರವಾಸಿಗರ ಆಕರ್ಷಣೀಯ ತಾಣ ಎಂಬ ಏನೆಲ್ಲಾ ಪೂರ್ವಾಗ್ರಹ ಪೀಡಿತ ಓದುಗನಿಗೆ, ಆ ಸೌಂದರ್ಯದ ಹಿಂದಿನ ಕರಾಳ ಛಾಯೆಯನ್ನು, ಅದರ ಇನ್ನೊಂದು ಸ್ವರೂಪವನ್ನು ಇಲ್ಲಿ ಬಿಂಬಿಸಿದ್ದಾರೆ.

ಗರಿಮಾ ಅವರು ತಮ್ಮ ಟಿಪ್ಪಣಿಯಲ್ಲಿ ಹೆಸರಿಸಿದ ನೂರಾರು ಹೆಣ್ಣು ಮಕ್ಕಳ ಹೆಸರುಗಳು ಸ್ಮರಣೆಯಲ್ಲಿ ಉಳಿಯುವುದಿಲ್ಲ.ಆದರೆ ಉಳಿಯುವುದು ಕೇವಲ ದೌರ್ಜನ್ಯದ ಅಟ್ಟಹಾಸ, ಪುರುಷ ಅಹಂಕಾರ, ಜನಾಂಗದ ಶ್ರೇಷ್ಠತೆ, ಗಡಿ ಸೀಮೆಗಳ ತಿಕ್ಕಾಟ ಈ ಎಲ್ಲದರ ಮಧ್ಯೆ ನಲಗುವ ಹೆಣ್ಣು ಜೀವದ ಮೂಕ ರೋದನ ಮಾತ್ರ ಕೇಳಿಸುವುದು. ದೇಹವೇ ಉತ್ಪಾದನೆಯ ಆಗರ, ದೇಹವೇ ಸರ್ವದಕ್ಕೂ ಮೂಲಕ ಕಾರಣ, ದೇಹವೇ ದೇಶವು ಹೌದು
ಆದರೆ ನಡುವೆ ಸುಳಿವ ಆತ್ಮ ಯಾವುದು?

‍ಲೇಖಕರು Admin

20 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading