ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 174
ಕೊರೋನಾ ನಂತರದ ದಿನಗಳಲ್ಲಿ ಚಲನಚಿತ್ರಗಳ ನಿರ್ಮಾಣ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿ ಹೋಯಿತು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ನಿರ್ಮಾಪಕರು ಹೇಗೋ ಹಣ ಹೊಂದಿಸಿಕೊಂಡು ಕಡಿಮೆ ವೆಚ್ಚದ ಚಿತ್ರಗಳನ್ನು ನಿರ್ಮಿಸುತ್ತಿದ್ದರು.
ಈ ಸಮಯದಲ್ಲಿ ನಾನು ನಟಿಸಿದ ಒಂದು ಮುಖ್ಯ ಧಾರಾವಾಹಿ “ಬೆಟ್ಟದ ಹೂ”. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯ ನಿರ್ದೇಶಕರು ಸತೀಶ್ ಕೃಷ್ಣ. ಸತೀಶ ನನಗೆ ಅತ್ಯಂತ ಪ್ರೀತಿ ಪಾತ್ರರಾದವರು. ಎಂಥ ಕಠಿಣ ಸನ್ನಿವೇಶವೇ ಇದ್ದರೂ ಕೊಂಚವೂ ತಲೆ ಕೆಡಿಸಿಕೊಳ್ಳದೆ ಕೆರಳದೆ ಸಿಡಿಮಿಡಿಗೊಳ್ಳದೆ ಉಪಾಯವಾಗಿ ಸಮಸ್ಯೆ ಬಗೆಹರಿಸಿ ಪ್ರಶಾಂತವಾಗಿ ಕೆಲಸ ಮುಂದುವರಿಸಿಕೊಂಡು ಹೋಗುವ ಇವರ ಕಾರ್ಯ ವೈಖರಿ ನನಗೆ ತುಂಬಾ ಮೆಚ್ಚುಗೆ.
ಈ ಧಾರಾವಾಹಿಯ ಸಂದರ್ಭದಲ್ಲಿ ಮತ್ತೂ ಒಬ್ಬ ವ್ಯಕ್ತಿಯನ್ನು ನಾನು ಸ್ಮರಿಸಬೇಕು. ಮೊದಲು ನನಗೆ ಈ ಧಾರಾವಾಹಿಯಲ್ಲಿ ನಟಿಸಲು ಕರೆ ಬಂದಾಗ ಯಥಾಪ್ರಕಾರವಾಗಿ ನಾನು ಮ್ಯಾನೇಜರ್ ಅವರಿಗೆ “ನಾನು ಯಾವುದೇ ಆಡಿಷನ್ ಗೆ ಬರುವುದಿಲ್ಲ” ಎಂದು ತಿಳಿಸಿದ್ದೆ. ಆದರೆ ಯಥಾಪ್ರಕಾರವಾಗಿಯೇ ಛಾನಲ್ ಕಡೆಯಿಂದ ಪ್ರತಿಯೊಬ್ಬ ಕಲಾವಿದರೂ ಅವರು ನೀಡುವ ಪರೀಕ್ಷೆಗೆ ಒಳಪಡಲೇಬೇಕಿತ್ತು. ಈ ತಾತ್ವಿಕ ಹಗ್ಗ ಜಗ್ಗಾಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಸುವರ್ಣ ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕೊಟೇಚಾ! “ನಾನು ಪ್ರಭು ಅವರನ್ನು ಸಾಕಷ್ಟು ಸಮಯದಿಂದ ಬಲ್ಲೆ..ಅವರು ಯಾವುದೇ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ..ಅವರು ನಮ್ಮ ಧಾರಾವಾಹಿಯಲ್ಲಿ ಅಭಿನಯಿಸಿದರೆ ನಮಗೂ ಸಂತೋಷವಾಗುತ್ತದೆ” ಎಂದು ಶಿಲ್ಪಾ ನುಡಿದರೆಂದು ಮ್ಯಾನೇಜರ್ ನನಗೆ ತಿಳಿಸಿದರು.
ವಾಸ್ತವವಾಗಿ ಶಿಲ್ಪಾ ಅವರು ಈ ಟಿವಿ ಕನ್ನಡ ವಾಹಿನಿಯ ದಿನಗಳಿಂದಲೇ ನನಗೆ ಚಿರಪರಿಚಿತರು. ಈ ಟಿವಿ ಕನ್ನಡ ವಾಹಿನಿ ಆರಂಭವಾದಾಗ ನಾವು ಧಾರಾವಾಹಿಗಳ ಶೂಟಿಂಗ್ ಗಾಗಿ ಹೈದರಾಬಾದ್ ನ ರಾಮೋಜಿ ರಾವ್ ಸ್ಟುಡಿಯೋಗೆ ಆಗಾಗ್ಗೆ ಹೋಗುತ್ತಿದ್ದೆವಷ್ಟೇ. ಆ ಸಮಯದಲ್ಲಿ ಈ ಟಿವಿ ಕನ್ನಡ ವಾಹಿನಿಯಲ್ಲಿ ಸಹಾಯಕ ನಿರ್ಮಾಪಕರ ಹುದ್ದೆಯಲ್ಲಿ ಶಿಲ್ಪಾ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮ ಧಾರಾವಾಹಿಗಳ ಮೇಲುಸ್ತುವಾರಿಯೂ ಅವರದೇ ಆಗಿತ್ತು. ಅವರ ಕರ್ತವ್ಯನಿಷ್ಠೆ, ಒಂದಿಷ್ಟೂ ಗೊಣಗದೆ ತನ್ಮಯತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿ, ಎಲ್ಲರೊಂದಿಗೆ ಸ್ನೇಹದಿಂದ ನಡೆದುಕೊಳ್ಳುತ್ತಿದ್ದ ಅವರ ಸರಳತೆ ಎಲ್ಲವನ್ನೂ ಗಮನಿಸಿದ್ದ ನನಗೆ ಆಗಲೇ ಖಾತ್ರಿಯಾಗಿತ್ತು: ಈ ಹುಡುಗಿ ತನ್ನ ಸಾಮರ್ಥ್ಯದ ಬಲದಿಂದಲೇ ಬಲುಬೇಗ ಮೇಲೆ ಬರುತ್ತಾಳೆಂದು. ಈಗ ಕಣ್ಣೆದುರಿಗೇ ಅದು ಸಾಧ್ಯವಾದದ್ದು ಗೋಚರಿಸುತ್ತಿತ್ತು! ಅವರ ಮಧ್ಯಸ್ತಿಕೆಯಿಂದಾಗಿ ನಾನು ನನ್ನ ತೀರ್ಮಾನಗಳನ್ನು ಸಡಿಲಿಸದೆ ಯಾವುದೇ ರಾಜಿಯಿಲ್ಲದೆ ಧಾರಾವಾಹಿಯಲ್ಲಿ ಅಭಿನಯಿಸುವಂತಾಯಿತು.
“ಬೆಟ್ಟದ ಹೂ” ಧಾರಾವಾಹಿಯ ತಾರಾಗಣದಲ್ಲಿ ಹಲ ಹೊಸ ಮುಖಗಳೊಂದಿಗೆ ಹಳೆಯ ಹಿರಿಯ ಕಲಾವಿದರೂ ಸೇರಿದ್ದು ವೈವಿಧ್ಯತೆಯನ್ನು ತಂದಿತ್ತು. ನನ್ನ ಜತೆಗೆ ಪ್ರಸಿದ್ಧ ಅಭಿನೇತ್ರಿ ಪದ್ಮಜಾ ರಾವ್ , ನನ್ನ ಸೋದರನ ಪಾತ್ರದಲ್ಲಿ ಪ್ರಸಿದ್ಧ ಸಂಗೀತಗಾರ ಪ್ರವೀಣ್ ಡಿ ರಾವ್ , ಅವರ ಪತ್ನಿಯಾಗಿ ಮತ್ತೋರ್ವ ನುರಿತ ಕಲಾವಿದೆ ಸ್ವಾತಿ, ಯುವ ಪ್ರೇಮ ತ್ರಿಕೋಣದಲ್ಲಿ ದರ್ಶಕ್ , ಪ್ರಕೃತಿ ಪ್ರಸಾದ್ ಹಾಗೂ ಶ್ರೀವಿದ್ಯಾ; ಜೊತೆಗೆ ಸುನೇತ್ರಾ ಪಂಡಿತ್ , ಅಂಬರೀಶ್ ಸಾರಂಗಿ, ಸುನಿಲ್ ಹಾಗೂ ನಾರಾಯಣ ಸ್ವಾಮಿ. ಈ ಧಾರಾವಾಹಿಯ ಚಿತ್ರೀಕರಣಕ್ಕೆ ಹೋಗುವುದೆಂದರೇ ಖುಷಿಯಾಗುತ್ತಿತ್ತು! ಸತೀಶ್ ಕೃಷ್ಣರ ದಕ್ಷ ನಿರ್ದೇಶನದಲ್ಲಿ ಸುಲಲಿತವಾಗಿ ಸಾಗುತ್ತಿದ್ದ ಚಿತ್ರೀಕರಣದಿಂದಾಗಿ ಒಂದಿಷ್ಟೂ ಆಯಾಸವಾಗುತ್ತಿರಲಿಲ್ಲ. ವಿಠ್ಠಲ್ ಅವರ ಸಮರ್ಥ ನಿರ್ವಹಣೆಯಲ್ಲಿ ಊಟ ತಿಂಡಿ ಮತ್ತಿತರ ಮೂಲಭೂತ ಸೌಕರ್ಯಗಳ ಅಚ್ಚುಕಟ್ಟಾದ ವ್ಯವಸ್ಥೆ ಆಗುತ್ತಿತ್ತು. ಬಿಡುವಿನ ವೇಳೆಯಲ್ಲಿ ಸಹ- ಕಲಾವಿದರೊಂದಿಗೆ ಅರ್ಥಪೂರ್ಣ ಹರಟೆ…ಶೇರ್ ಶಾಯರಿಗಳ, ಕವಿತೆಗಳ ವಾಚನ ಗಾಯನ…ಪ್ರವೀಣ್ ಡಿ ರಾವ್ ಅಂತಹ ಮೇರು ಸಂಗೀತ ಪ್ರತಿಭೆ ಜೊತೆಗಿದ್ದಮೇಲೆ ಹೇಳುವುದಾದರೂ ಏನಿದೆ? ಅಂತಹ ಸದವಕಾಶವನ್ನು ನಾನಾದರೂ ಬಿಟ್ಟೇನೆಯೇ? ಅನೇಕ ಗಜ಼ಲ್ ಗಳ ತಾಳ ವಿನ್ಯಾಸವನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು ಪ್ರವೀಣ್ ರಾವ್. ಹೀಗೆ ಹಲವು ಕಾರಣಗಳಿಗೆ ನೆನಪಿನಲ್ಲಿ ಹಸಿರಾಗಿರುವ ಧಾರಾವಾಹಿ “ಬೆಟ್ಟದ ಹೂ”.
ಇದೇ ಸಮಯದಲ್ಲಿ ನಾನು ಅಭಿನಯಿಸಿದ್ದ ಮತ್ತೊಂದು ಮುಖ್ಯ ಧಾರಾವಾಹಿ “ಜೊತೆಜೊತೆಯಲಿ”.
ನಾನು ಈ ಧಾರಾವಾಹಿಯಲ್ಲಿ ಸೇರ್ಪಡೆಯಾಗುವ ವೇಳೆಗಾಗಲೇ ಜೊತೆಜೊತೆಯಲಿ ಒಂದು ಅತಿ ಜನಪ್ರಿಯ ಧಾರಾವಾಹಿಯೆಂದು ಹೆಸರು ಪಡೆದಿತ್ತು. ಅನಿರುದ್ಧ ಜತ್ಕರ್ , ಮೇಘಾ ಶೆಟ್ಟಿ, ವಿಜಯಲಕ್ಷ್ಮಿ ಸಿಂಗ್ , ಬಿ.ಎಂ.ವೆಂಕಟೇಶ್ , ದೇವ್ ದೇವಯ್ಯ, ಮಾನಸ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು. ಕಥಾನಾಯಕನ ತಂದೆಯಾಗಿ ನನ್ನ ಪಾತ್ರ ಪ್ರವೇಶ ತಡವಾಗಿ ಆಗಿತ್ತು. ಮತ್ತೆ ಇಲ್ಲಿ ನನಗೆ ಜತೆಯಾದವರು ಪದ್ಮಜಾ ರಾವ್! ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ..ವೇಷ ಭೂಷಣಗಳು! ಏನೇ ಹೇಳಿ, ಉತ್ತರ ಕರ್ನಾಟಕ ಪ್ರದೇಶದ ಪಾತ್ರಗಳನ್ನು ನಿರ್ವಹಿಸುವುದು, ಆ ಪ್ರಾಂತದ ಸತ್ವಭರಿತ ಭಾಷೆಯ ಸಂಭಾಷಣೆಗಳನ್ನು ಸಾಧ್ಯವಾದಷ್ಟೂ ತಪ್ಪಿಲ್ಲದಂತೆ..ಆ ಭಾಷೆಯ ದನಿ ಬನಿಗಳ ಹದ ತಪ್ಪದಂತೆ ಮಾತಾಡುವುದು ದೊಡ್ಡ ಸವಾಲು..ಅಷ್ಟೇ ಖುಷಿಯ ಸಂಗತಿ!
ನಿರ್ದೇಶಕ ಆರೂರ್ ಜಗದೀಶ್ ಕೂಡಾ ಸುಮಾರು ವರ್ಷಗಳಿಂದ ನನಗೆ ಪರಿಚಿತರೇ. ನಾನು “ಗುಪ್ತ ಗಾಮಿನಿ” ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾಗ ಜಗದೀಶ್ ಸಹ ನಿರ್ದೇಶಕರಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಹಂತಹಂತವಾಗಿ ಬೆಳೆದು ಮೇಲೆ ಬಂದು ಇಂದು ಕನ್ನಡ ಧಾರಾವಾಹಿ ಕ್ಷೇತ್ರದ ಒಬ್ಬ ಪ್ರಮುಖ ನಿರ್ಮಾಪಕ—ನಿರ್ದೇಶಕರಾಗಿ ರೂಪುಗೊಂಡಿದ್ದಾರೆ.
ವಿಷಾದದ ಸಂಗತಿ ಏನೆಂದರೆ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿದ್ದ ‘ಜೊತೆ ಜೊತೆಯಲಿ’ ಹಲವಾರು ವೈಮನಸ್ಯಗಳ, ತಪ್ಪು ತಿಳುವಳಿಕೆಗಳ, ಹಮ್ಮು ಬಿಮ್ಮು ಬಿಗುಮಾನಗಳ ಕಾರಣಕ್ಕೆ ಲಯ ತಪ್ಪಿ ಹದ ತಪ್ಪಿ ನೆಲ ಕಚ್ಚಿಬಿಟ್ಟಿತು.
ತ.ಸು.ಶಾಮರಾಯರ ಸುಪುತ್ರರಾದ ಟಿ.ಎಸ್. ಛಾಯಾಪತಿ ಅವರು ತಮ್ಮ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯ ವತಿಯಿಂದ ರಂಜನಿಯ ‘ಬಾನಜಗಲಿ’ ಕವನ ಸಂಕಲನವನ್ನು ಪ್ರಕಟಿಸಿದ ಕುರಿತಾಗಿ ಈಗಾಗಲೇ ಹೇಳಿದ್ದೇನಷ್ಟೇ. ಆಗಾಗ್ಗೆ ಛಾಯಾಪತಿಗಳ ಭೇಟಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗುತ್ತಿದ್ದುದುಂಟು. ಭೇಟಿಯಾದಾಗಲೆಲ್ಲಾ ನಮ್ಮಿಬ್ಬರನ್ನೂ, “ಹೊಸತೇನನ್ನಾದರೂ ಬರೆದಿರಾ? ಕೊಡಿ..ನಾನು ಪ್ರಕಟಿಸುತ್ತೇನೆ” ಎಂದು ಆತ್ಮೀಯತೆಯಿಂದ ಕೇಳುತ್ತಿದ್ದರು. ನಾನೂ ಒಮ್ಮೆ ಹಾಗೇ ಅವರೊಟ್ಟಿಗೆ ಮಾತಾಡುತ್ತಿದ್ದ ಸಂದರ್ಭದಲ್ಲಿ, “ನಾನು ರಚಿಸಿರುವ-ಅನುವಾದಿಸಿರುವ-ರೂಪಾಂತರಿಸಿರುವ ಹಲವಾರು ನಾಟಕಗಳಿವೆ. ಅವನ್ನು ಪ್ರಕಟಿಸುವ ಧೈರ್ಯವಿದೆಯೇ?” ಎಂದು ಛಾಯಾಪತಿಗಳಿಗೆ ಸವಾಲೆಸೆದೆ! ಕ್ಷಣಮಾತ್ರವೂ ವಿಳಂಬಿಸದೆ ಛಾಯಾಪತಿಗಳು,”ನಾಳೆಯೇ ನನಗೆ ಹಸ್ತಪ್ರತಿ ತಲುಪಿಸಿ ಪ್ರಭು…ಇನ್ನೆರಡು ತಿಂಗಳಲ್ಲಿ ಪುಸ್ತಕ ಲೋಕಾರ್ಪಣೆ ಸಮಾರಂಭ ಏರ್ಪಡಿಸುತ್ತೇನೆ” ಎಂದು ಮರು ಸವಾಲೆಸೆದರು! ಅಂದು ನಾನು ನಕ್ಕು ಸುಮ್ಮನಾದರೂ ಅವರು ಸುಮ್ಮನಾಗಲಿಲ್ಲ! ಪದೇ ಪದೇ ಫೋನ್ ಮಾಡಿ ಹಸ್ತಪ್ರತಿ ಕಳುಹಿಸಿಕೊಡಿ ಎಂದು ಹಿತವಾಗಿ ಪೀಡಿಸತೊಡಗಿದರು. ಅಷ್ಟು ವರ್ಷಗಳ ಕಾಲವೂ ಎಂದೂ ನಾನು ನನ್ನ ನಾಟಕಗಳನ್ನು ಪ್ರಕಟಿಸುವ ನಿಟ್ಟಿನಲ್ಲಿ ಯೋಚಿಸಿದವನೇ ಅಲ್ಲ. ಈಗ ನಾಡಿನ ಪ್ರಸಿದ್ಧ ಪ್ರಕಾಶಕರು ತಾವಾಗಿ ನನ್ನ ನಾಟಕಗಳ ಪ್ರಕಟಣೆಗೆ ಮುಂದೆ ಬಂದಿದ್ದಾರೆ! ನಾನೂ ಹೆಚ್ಚು ತಡಮಾಡದೇ ಹಸ್ತ ಪ್ರತಿಗಳನ್ನು ಸಿದ್ಧಪಡಿಸತೊಡಗಿದೆ. ಇಪ್ಪತ್ತಕ್ಕೂ ಹೆಚ್ಚು ನಾಟಕಗಳಿದ್ದರೂ ಅಷ್ಟನ್ನೂ ಒಟ್ಟಿಗೆ ಅವರ ಮೇಲೆ ಹೇರಲಾದೀತೇ? ಮೊದಲಿಗೆ ಐದು ನಾಟಕಗಳನ್ನು ಎರಡು ಸಂಪುಟಗಳಾಗಿ ಹೊರತರಬಹುದೇ ಎಂದು ಛಾಯಾಪತಿಯವರನ್ನು ಕೇಳಿದಾಗ ಅವರು ಅಗತ್ಯವಾಗಿ ಆಗಲಿ ಎಂದು ಒಪ್ಪಿಕೊಂಡರು. ಬೆನ್ ಜಾನ್ಸನ್ ನ “volpone” ನಾಟಕವನ್ನು ನಾನು “ಗುಳ್ಳೆನರಿ” ಎಂಬುದಾಗಿ ರೂಪಾಂತರಿಸಿ ರಂಗಕ್ಕೂ ಅಳವಡಿಸಿದ್ದೆ ಹಾಗೂ ಅದು ಅತ್ಯಂತ ಯಶಸ್ವೀ ಪ್ರಯೋಗವೂ ಆಗಿತ್ತು. ಅಷ್ಟೇ ಯಶಸ್ವಿಯೂ ಜನಪ್ರಿಯವೂ ಆದ ನನ್ನ ಮತ್ತೊಂದು ನಾಟಕವೆಂದರೆ ವುಡ್ ಹೌಸ್ ರ ಸ್ಫೂರ್ತಿಯಿಂದ ರಚಿಸಿದ “ಪರಮೇಶಿ ಪ್ರೇಮಪ್ರಸಂಗ” ಹಾಸ್ಯನಾಟಕ. ಈ ಎರಡೂ ನಾಟಕಗಳನ್ನು ಒಂದು ಸಂಪುಟದಲ್ಲಿ ಸೇರಿಸಬಹುದು ಅನ್ನಿಸಿತು. “ಸಿಕ್ಕು” ನಾಟಕವನ್ನು ಪ್ರಕಟಿಸಲೇಬೇಕೆಂಬುದು ನನ್ನ ಮಹದಾಸೆಯಾಗಿದ್ದರೂ ದುರದೃಷ್ಟವಶಾತ್ ನಾಟಕದ ಮೂಲ ಹಸ್ತಪ್ರತಿಯನ್ನು ನಾನು ಕಳೆದುಕೊಂಡುಬಿಟ್ಟಿದ್ದೆ! ಮತ್ತೆ ನೆನಪಿನ ಬಲದಿಂದ ಸದಾಶಿವರ ಕಥೆಯನ್ನು ನಾಟಕರೂಪಕ್ಕೆ ತರುವುದು ಕಷ್ಟವಲ್ಲದಿದ್ದರೂ ಸಮಯ ಬೇಡುವ ಕಾರ್ಯವಾಗಿತ್ತು. ಹಾಗಾಗಿ “ಸಿಕ್ಕು” ನಾಟಕವನ್ನು ಬದಿಗಿರಿಸಿ ಉಳಿದ ನಾಟಕಗಳ ಬಗ್ಗೆ ಗಮನ ಹರಿಸತೊಡಗಿದೆ. ಸಾಕಷ್ಟು ಯೋಚಿಸಿ ರಂಜಿನಿಯೊಂದಿಗೆ ಚರ್ಚಿಸಿ ಎರಡನೆಯ ಸಂಪುಟಕ್ಕೆ ಮೂರು ನಾಟಕಗಳನ್ನು ಆರಿಸಿದೆ: ಹೆಚ್ ಎಸ್ ವಿ ಅವರ ಸಣ್ಣಕಥೆ ಆಧಾರಿತ ನಾಟಕ “ತಲೆಗೊಂದು ಕೋಗಿಲೆ”, ಶಾಮಲಾ ಭಾವೆ ಅಕ್ಕನ ಕೋರಿಕೆಯ ಮೇರೆಗೆ ರಚಿಸಿದ್ದ “ಭಾವಾನುಭಾವೆ ಮಹಾನುಭಾವೆ ಗೋವಿಂದ ವಿಠಲಭಾವೆ”; ನಾಟಕಕಾರ ಸಂಸರ ಬದುಕು ಬರಹಗಳ ಸುತ್ತ ಹೆಣೆದ ನಾಟಕ “ಬಿಂಬ—ಆ ತೊಂಬತ್ತು ನಿಮಿಷಗಳು”. ಐದೂ ನಾಟಕಗಳ ಹಸ್ತಪ್ರತಿಗಳನ್ನು ಸಿದ್ಧಪಡಿಸಿ ಛಾಯಾಪತಿಯವರಿಗೆ ಕಳಿಸಿಕೊಟ್ಟೆ.
ಎಲ್ಲಕ್ಕಿಂತ ಮುಖ್ಯವಾಗಿ ನಾಟಕಗಳಿಗೆ ಮುನ್ನುಡಿಯನ್ನು ಬರೆಸುವ ಕೆಲಸ ಉಳಿದಿತ್ತು! “ಪರಮೇಶಿ ಪ್ರೇಮಪ್ರಸಂಗ” ನಾಟಕಕ್ಕೆ ಕವಿಗುರು, ನಾಟಕಕಾರ ಹೆಚ್ ಎಸ್ ವಿ ಅವರು ಮುನ್ನುಡಿ ಬರೆದುಕೊಡಲು ಪ್ರೀತಿಯಿಂದ ಒಪ್ಪಿಕೊಂಡರು. ರಂಜನಿಯ ‘ಭಾವರಂಜನಿ’ ಧ್ವನಿಸುರುಳಿಯ ಲೋಕಾರ್ಪಣೆ ಹಾಗೂ ನನ್ನ 50 ನೇ ಹುಟ್ಟುಹಬ್ಬದ ಸಮಾರಂಭದ ಸಂದರ್ಭದಲ್ಲಿ ಗೆಳೆಯ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ‘ಗುಳ್ಳೆನರಿ’ ನಾಟಕದ ಬಗ್ಗೆ ಸೊಗಸಾಗಿ-ವಿಸ್ತೃತವಾಗಿ ಮಾತನಾಡಿದ್ದರು. ಆ ಭಾಷಣದ ಪಠ್ಯವನ್ನೇ ನಾಟಕ ಕೃತಿಯ ಮುನ್ನುಡಿಯಾಗಿ ಬಳಸಿಕೊಳ್ಳಲು ಬಾಲು ಸಂತೋಷದಿಂದ ಒಪ್ಪಿಕೊಂಡರು. ಸಂಸರನ್ನು ಕುರಿತ ‘ಬಿಂಬ ಆ ತೊಂಬತ್ತು ನಿಮಿಷಗಳು’ ನಾಟಕಕ್ಕೆ ಆತ್ಮೀಯ ಗೆಳೆಯ-ಗುರು ಟಿ.ಎನ್. ಸೀತಾರಾಂ ಅವರ ಮುನ್ನುಡಿಯ ಕೊಡುಗೆ ದಕ್ಕಿತು! ‘ಭಾವಾನುಭಾವೆ’ ನಾಟಕಕ್ಕೆ ಮುನ್ನುಡಿ ಬರೆಯಲು ಭಾವೆ ಕುಟುಂಬಕ್ಕೆ ಅತ್ಯಾಪ್ತರೂ ಶಾಮಲಾ ಭಾವೆಯವರ ಪ್ರಿಯ ಶಿಷ್ಯರೂ ಆದ ನಾದೋಪಾಸಕ ವಾಗೀಶ್ ಭಟ್ ಅವರಿಗಿಂತ ಅರ್ಹರು ಯಾರಿದ್ದಾರೆ ಎನಿಸಿ ಅವರನ್ನು ವಿನಂತಿಸಿಕೊಂಡೆ. ನಾಟಕ ರೂಪುಗೊಳ್ಳುವ ಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ವಾಗೀಶ್ ಜೀ ಅತ್ಯಂತ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟರು. ‘ತಲೆಗೊಂದು ಕೋಗಿಲೆ’ ನಾಟಕದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದ ಆತ್ಮೀಯ ಗೆಳೆಯ, ಶ್ರೇಷ್ಠ ನಟ—ನಿರ್ದೇಶಕ ಬಿ.ವಿ.ರಾಜಾರಾಂ ಆ ನಾಟಕಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದುಕೊಟ್ಟ. ಹೀಗೆ ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರ ಮೌಲಿಕ ಮುನ್ನುಡಿಗಳಿಂದ ಎರಡೂ ನಾಟಕ ಸಂಪುಟಗಳು ಸಿಂಗರಗೊಂಡವು.

ಇದೇ ಸಮಯದಲ್ಲಿ ಗೆಳೆಯ ಬಿ.ವಿ.ರಾಜಾರಾಮನಿಂದ ಕರೆ ಬಂತು. “ಇದು ನಮ್ಮ ಕಲಾಗಂಗೋತ್ರಿ ತಂಡದ 50ನೇ ಸುವರ್ಣ ರಂಗವರ್ಷ. ಈ ವಿಶೇಷ ಸಂದರ್ಭಕ್ಕೆ ನಮ್ಮ ತಂಡಕ್ಕೆ ನೀನೊಂದು ನಾಟಕ ಮಾಡಿಸು” ಎಂದ ಗೆಳೆಯ ರಾಜಾರಾಮ. ಹೊಸ ನಾಟಕವನ್ನು ಹುಡುಕಿ ಸಿದ್ಧಪಡಿಸಿ ಮಾಡಿಸುವಷ್ಟು ಸಮಯಾವಕಾಶವಿರಲಿಲ್ಲವಾಗಿ ಹಿಂದೆ ಮಾಡಿಸಿದ—ಆದರೆ ಬಹಳ ಸಮಯದಿಂದ ಪ್ರದರ್ಶನ ಕಾಣದ ನಾಟಕವನ್ನೇ ಮಾಡಿಸುವುದೆಂದು ತೀರ್ಮಾನಿಸಿದೆವು. ತಕ್ಷಣಕ್ಕೆ ಇಬ್ಬರಿಗೂ ಹೊಳೆದ ಹೆಸರು “ಗುಳ್ಳೆನರಿ”! ವಿಡಂಬನಾತ್ಮಕ ಹಾಸ್ಯ ನಾಟಕ; ಜತೆಗೆ ಹಾಡು ಕುಣಿತಗಳ ಭರಪೂರ ಮನರಂಜನೆ! ಮರುದಿನದಿಂದಲೇ ತಾಲೀಮು ಆರಂಭವಾಗಿಯೇ ಹೋಯಿತು. ಮುಖ್ಯಪಾತ್ರವಾದ ನರಿಯಣ್ಣನಾಗಿ ಮೊದಲಿನ ಪ್ರದರ್ಶನಗಳಲ್ಲಿ ಅಭಿನಯಿಸಿದ್ದವರು ರಂಗಕರ್ಮಿಗಳೆಲ್ಲರಿಗೂ ಪ್ರೀತಿಪಾತ್ರರಾದ ಶ್ರೀನಿವಾಸ ಮೇಷ್ಟ್ರು. ಈಗಲೂ ಅವರೇ ಆ ಪಾತ್ರಕ್ಕೆ ಸೂಕ್ತರು ಎಂಬುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿತ್ತು. ನರಿಯಣ್ಣನಷ್ಟೇ ಮುಖ್ಯವಾದ ಮತ್ತೊಂದು ಮುಖ್ಯ ಪಾತ್ರವನ್ನು ಮಂಜುನಾಥ ಹೆಗ್ಡೆ ನಿರ್ವಹಿಸುವುದೆಂದು ತೀರ್ಮಾನವಾಯಿತು. ಇರುವ ಒಂದೇ ಸ್ತ್ರೀ ಪಾತ್ರಕ್ಕೆ ಖ್ಯಾತ ಗಾಯಕಿ ಪದ್ಮಿನಿ ಓಕ್ ಆಯ್ಕೆಯಾದರು. ಮಿಕ್ಕೆಲ್ಲಾ ಪಾತ್ರಗಳನ್ನು ನಿರ್ವಹಿಸಲು ಕಲಾಗಂಗೋತ್ರಿ ತಂಡದ ನುರಿತ ನಟವರ್ಗ ಸಿದ್ಧವಾಗಿತ್ತು. ಹಿನ್ನೆಲೆ ಸಂಗೀತ—ಗಾಯನದ ಜವಾಬ್ದಾರಿ ಹೊತ್ತವರು ಪ್ರಸಿದ್ಧ ಗಾಯಕ ಶ್ರೀನಾಥ್. ಎಲ್ಲವೂ ಸರಿಹೋಯಿತೆಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಸಂಕಷ್ಟವೊಂದು ಧಿಡೀರನೆ ಎದುರಾಯಿತು: ಶ್ರೀನಿವಾಸ ಮೇಷ್ಟ್ರು ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಯಿತು. ಅವರ ಆರೋಗ್ಯ ಸುಧಾರಿಸಿದ ಮೇಲೆ ತಾಲೀಮು ಪ್ರಾರಂಭಿಸಿ ಪ್ರದರ್ಶನಕ್ಕೆ ಸಿದ್ಧರಾಗುವುದು ತೀರಾ ಕಷ್ಟಸಾಧ್ಯವೆಂಬುದು ಮನವರಿಕೆಯಾದ ಮೇಲೆ ಪಾತ್ರವರ್ಗದಲ್ಲಿ ಬದಲಾವಣೆ ಮಾಡಲೇಬೇಕಾಯಿತು. ನರಿಯಣ್ಣನ ಪಾತ್ರಕ್ಕೆ ಮಂಜುನಾಥ ಹೆಗ್ಡೆಯವರನ್ನು ನಿಗದಿ ಪಡಿಸಿ ಪತಂಗಿಯ ಪಾತ್ರಕ್ಕೆ ಶ್ರೀನಿವಾಸ ಕೈವಾರ ಎಂಬ ಕಲಾವಿದರನ್ನು ಆರಿಸಲಾಯಿತು.15—20 ದಿನಗಳ ಸತತ ತಾಲೀಮಿನ ನಂತರ ನಾಟಕ ಒಂದು ಹದಕ್ಕೆ ಬಂದಿತು.
ಏತನ್ಮಧ್ಯೆ ಛಾಯಾಪತಿಗಳು ನಾಟಕಗಳ ಎರಡೂ ಸಂಪುಟಗಳು ಸಿದ್ಧವಾಗಿವೆಯೆಂದು ಕರೆ ಮಾಡಿದರು!
ಅರೆ! ನಾಟಕಗಳು ಪುಸ್ತಕರೂಪದಲ್ಲಿ ಸಿದ್ಧವಾಗಿವೆ ಎಂದಾದರೆ “ಗುಳ್ಳೆನರಿ” ನಾಟಕದ ಪ್ರದರ್ಶನದ ವೇಳೆಯಲ್ಲೇ ನಾಟಕ ಸಂಪುಟಗಳ ಲೋಕಾರ್ಪಣೆಯನ್ನೂ ನಡೆಸಿಬಿಡಬಹುದಲ್ಲಾ ಎಂಬ ಆಲೋಚನೆ ಧುಮುಕಿತು! ಪ್ರಕಾಶಕ ಛಾಯಾಪತಿಗಳು ಹಾಗೂ ರಾಜಾರಾಂ—ಇಬ್ಬರೂ ಅಸ್ತು ಎಂದೇಬಿಟ್ಟರು!
29/12/2021 — ರಂಗಶಂಕರದಲ್ಲಿ ಗುಳ್ಳೆನರಿ ನಾಟಕ ಪ್ರದರ್ಶನ; ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ರಂಗಶಂಕರದ ಹೊರ ಆವರಣದಲ್ಲಿ ನಾಟಕ ಕೃತಿಗಳ ಲೋಕಾರ್ಪಣೆ! ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಸಿ.ಎನ್. ರಾಮಚಂದ್ರನ್ ಹಾಗೂ ಟಿ.ಎನ್. ಸೀತಾರಾಂ ಅವರು ಆಗಮಿಸಿ ಕೃತಿಗಳ ಬಗ್ಗೆ ಸೊಗಸಾಗಿ ಮಾತನಾಡಿದರು.

ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಒಳಗೆ ನಾಟಕದ ಪ್ರದರ್ಶನ. ಸಭಾಂಗಣ ರಂಗಾಸಕ್ತ ಸಹೃದಯರಿಂದ ತುಂಬಿಹೋಗಿತ್ತು. ಕೊರೋನಾದ ಪ್ರಭಾವದಿಂದ ಇನ್ನೂ ಪೂರ್ಣ ಮುಕ್ತಿ ದೊರೆಯದ ಕಾರಣಕ್ಕೆ ಕೋವಿಡ್ ಸಂದರ್ಭದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಿತ್ತು. ಅಂದು ರಂಗದ ಮೇಲೆ ನಾಟಕ ಸೊಗಸಾಗಿ ಮೂಡಿಬಂದಿತು. ನರಿಯಣ್ಣನಾಗಿ ಮಂಜುನಾಥ್ ಹೆಗ್ಡೆ ಅದ್ಭುತವಾಗಿ ಅಭಿನಯಿಸಿದರು. ಇವರೊಂದಿಗೆ ನಾನು ಹಲವಾರು ನಾಟಕಗಳಲ್ಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ಯಾವುದೇ ಪಾತ್ರವಿರಲಿ ಅದರ ನಾಡಿ ಹಿಡಿದು ಅದರೊಳಗೇ ಹೊಕ್ಕು ಜೀವ ತುಂಬಿ ಅಭಿನಯಿಸುವ ಮಂಜು, ನಾನು ಬಹುವಾಗಿ ಮೆಚ್ಚುವ ಅಪರೂಪದ ಕಲಾವಿದ.
ಪತಂಗಿಯಾಗಿ ಶ್ರೀನಿವಾಸ್ ಕೈವಾರ, ಹದ್ದಪ್ಪನಾಗಿ ಪ್ರದೀಪ್ ನಾಡಿಗ್, ಕಾಕಾರಾಯನಾಗಿ ಸುರೇಶ್, ಗಿಡುಗಯ್ಯನಾಗಿ ಸಿದ್ಧಾರ್ಥ ಭಟ್, ಹರಿಣಿಯಾಗಿ ಪದ್ಮಿನಿ ಓಕ್ ಹಾಗೂ ಚಂದ್ರನಾಗಿ ಅರವಿಂದ ಕುಲಕರ್ಣಿ ಚೇತೋಹಾರಿಯಾದ ಅಭಿನಯವನ್ನು ನೀಡಿ ಕಿಕ್ಕಿರಿದು ನೆರೆದಿದ್ದ ಸಹೃದಯರಿಗೆ ಮುದ ನೀಡಿದರು. ಶ್ರೀನಾಥ್ ಅವರ ಇನಿದನಿಯ ಗಾಯನ, ಪಕ್ಕವಾದ್ಯ ಕಲಾವಿದರ ಸಂದರ್ಭೋಚಿತ ನುಡಿಸಾಣಿಕೆಗಳು ಪ್ರದರ್ಶನವನ್ನು ಮತ್ತಷ್ಟು ಚಂದಗಾಣಿಸಿದವು. ಕಲಾಗಂಗೋತ್ರಿ ರಂಗತಂಡ ಕನ್ನಡ ರಂಗಭೂಮಿಯಲ್ಲಿ 50 ವರ್ಷಗಳನ್ನು ಪೂರೈಸಿದ ಸುವರ್ಣ ರಂಗವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿ ‘ಗುಳ್ಳೆನರಿ’ ನಾಟಕವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ಗೆಳೆಯ ರಾಜಾರಾಮನಿಗೆ ಹೃದಯಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.






0 Comments