ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇರಣಾದಾಯಕ ಹೊತ್ತಿಗೆ..

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 5

ಕೃತಿ – ‘ಹಾದಿಗಲ್ಲು’
ಲೇಖಕರು – ಕೆ.ಎ.ದಯಾನಂದ
ಪ್ರಕಾಶಕರು – ಸಮನ್ವಿತ ಪ್ರಕಾಶನ
ಬೆಲೆ – 250

ಕೆ.ಎ.ದಯಾನಂದ ಅವರ “ಹಾದಿಗಲ್ಲು” ಅವರ ಬದುಕಿನ ಪಯಣದ ಹೆಜ್ಜೆ ಗುರುತು ದಾಖಲಿಸುವ ಮೈಲುಗಲ್ಲೆ ಸರಿ.ಒಬ್ಬ ಸಾಮಾನ್ಯ ಬಾಲಕ ಏನೆಲ್ಲಾ ಸಾಧಿಸುವ ಪರಿ,ಆತ ಆಡಳಿತ ಚುಕ್ಕಾಣಿ ಹಿಡಿದು ದಕ್ಷವಾಗಿ ಕಾರ್ಯ ನಿರ್ವಹಿಸಿದ ಕ್ರಮ, ಅಸಾಧ್ಯ ಎಂಬ ಪದವೆ ಆತನ ಪದಕೋಶದಲ್ಲಿ ಕಾಣಸಿಗುವುದಿಲ್ಲ ಎಂಬ ಸಂಗತಿ ಸೋಜಿಗ. ಒಬ್ಬ ಪ್ರಾಮಾಣಿಕ ಅಧಿಕಾರಿ ತನ್ನ ಮಿತಿಯಲ್ಲಿ ಏನೆಲ್ಲಾ ಸಾಧಿಸಿ ತೋರಿಸಬಹುದು, ಹೇಗೆ ಜನಮುಖಿಯಾಗಿ ಸೇವೆ ಸಲ್ಲಿಸಬಹುದು ಎಂಬುದಕ್ಕೆ ದಯಾನಂದ ಅವರ ಹಾದಿಗಲ್ಲು ಆತ್ಮಕಥನ ಸಾಕ್ಷಿಯಾಗಿದೆ.

ದಯಾನಂದ ಅವರು ಬಡತನ, ಬವಣೆಗಳ ಮದ್ಯ ಹುಟ್ಟಿಬಂದರು, ಸಾಧಿಸಬೇಕೆಂಬ ಮನಸ್ಸಿಗೆ ಯಾವುದು ಅಡ್ಡಿಯಾಗದು ಎಂಬಂತೆ ,ಬಾಲ್ಯದ ಹಸಿವು ದಾರಿದ್ರ್ಯದ ಮದ್ಯೆ ಓದು ಮಾತ್ರ ತನ್ನಪಾಡಿಗೆ ತಾನು ಸಾಗಿತ್ತು. ಅವರೇನು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಅಲ್ಲ.ಸಾಮಾನ್ಯ ಬಾಲಕ ಆದರೆ ಬದುಕಿನ ಪಾಠ ಅವರಿಗೆ ಬಹಳಷ್ಟು ಕಲಿಸಿತ್ತು.ತಂದೆ- ತಾಯಿಯರ ಸಂಘರ್ಷಮಯ ಬದುಕು,ಗ್ರಾಮೀಣ ಪರಿಸರ, ಪ್ರಾಣಿ ಪಕ್ಷಿಗಳ ಒಡನಾಟ ಅವರನ್ನು ತಮ್ಮ ನೆಲದ ಕಸುವನ್ನು ಅರಿಯಲು ಸಾಧ್ಯವಾಯಿತು. ದಯಾನಂದರು ಓದುತ್ತಾ,ಕೆಲಸ ಮಾಡುತ್ತಾ ಎರಡಕ್ಕೂ ನ್ಯಾಯ ಒದಗಿಸುತ್ತಾ ಅಭ್ಯಾಸ ಮುಂದುವರೆಸಿದವರು.

ಅವರಿಗೆ ಆಗ ಸಹಾಯ ನೀಡಿದ್ದು ಹುಚ್ಚಮ್ಮತ್ತೆ.ಎಲ್ಲರ ಕುಟುಂಬದಲ್ಲಿ ಒಬ್ಬ ಹುಚ್ಚಮ್ಮ ಇದ್ದರೆ ಹಲವರ ಬದುಕು ಹಸನಾಗಬಹುದು.
ಅವರು ಓದಿಸಿದ ಮಕ್ಕಳ ಸಂಖ್ಯೆ ನೋಡಿದರೆ ಅಚ್ಚರಿ ಆಗುತ್ತದೆ. ಕೇವಲ ಸಂಬಂಧಿಗಳಿಗಷ್ಟೇ ಅಲ್ಲ, ಅವಶ್ಯಕತೆ ಇದ್ದ ಹಲವು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದವರು.ಓದುಗರಿಗೆ ಹುಚ್ಚಮ್ಮನ ಪಾತ್ರ ಕಾಡುವಂತಿದೆ.

ದಯಾನಂದ ಅವರು ಮೊದಲು ದ್ವಿತೀಯ ದರ್ಜೆಯ ಸಹಾಯಕ, ನಂತರ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಕೆ.ಎ.ಎಸ್ ಪಾಸಾಗಿ ಅಧಿಕಾರದ ಚುಕ್ಕಾಣಿ ಹಿಡಿದವರು.ಹಾಗಾಗಿ ತಳಮಟ್ಟದ ಸಮಸ್ಯೆ ಗಳಿಂದ ಮೇಲ ಸ್ತರದ ವಿಷಯಗಳನ್ನು ಅರಿತ ಕಾರಣ ಎಂಥ ಸಮಸ್ಯೆ, ಸವಾಲು ಬಂದರು ಸಮರ್ಥವಾಗಿ ನಿಭಾಯಿಸಲು ಸಾದ್ಯವಾದದ್ದು. ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿ ಪದೋನ್ನತಿ ಪಡೆಯುವವರೆಗೆ ಅವರು ಕೈಗೊಂಡ ಹಲವು ಯೋಜನೆ, ಕಾರ್ಯಕ್ರಮಗಳು, ವಿವಿಧ ಇಲಾಖೆಯಲ್ಲಿ ಅವರು ಮೂಡಿಸಿದ ಛಾಪನ್ನು, ಅವರು ಪಟ್ಟ ಪರಿಶ್ರಮ ವನ್ನು, ಇಟ್ಟಹೆಜ್ಜೆ- ತೊಟ್ಟ ನಿಲುವಿನ ಕುರಿತು ವಿವರವಾಗಿ ದಾಖಲಿಸಿದ್ದಾರೆ.

ನಕ್ಸಲ್ ರ ಕುರಿತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿನ ಗೊಂದಲ, ಆಡಳಿತದಲ್ಲಿ ತಂತ್ರಜ್ಞಾನ ಬಳಕೆ, ಚುನಾವಣಾ ಸಿದ್ದತೆಯಲ್ಲಿ ತೋರುವ ಉತ್ಸಾಹ, ಶಿವಮೊಗ್ಗೆಯಲ್ಲಿ ಮತದಾನದ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಮಾಡಿದ ಪ್ರಯತ್ನ, ಸಹ್ಯಾದ್ರಿ ಉತ್ಸವ ಯಶಸ್ವಿಯಾಗಿ ಪೂರೈಸಿದ್ದು ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರು ಕ್ರಿಯಾಶೀಲ ವಾಗಿ ತೊಡಗಿಸಿಕೊಂಡು ಬದಲಾವಣೆ ತಂದ ಪರಿ ಅನನ್ಯ ಹಾಗೆ ಗೆಜೆಟಿಯರ್, ಪತ್ರಗಾರ ಇಲಾಖೆ ಬಗ್ಗೆ ಇಂದಿಗೂ ಯಾರಿಗೂ ಅರಿಯದ ಆಡಳಿತ ಸಂಸ್ಥೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡ ಕಾರ್ಯ ಶ್ಲಾಘನೀಯ.ಹಾಗೆ ಕೃಷಿ ಬಗ್ಗೆ ಅವರಿಗಿರುವ ಕಾಳಜಿ, ರೈತ ಏನೆಲ್ಲಾ ಮಾಡಬಹುದು ಎಂಬುದನ್ನು ದುರ್ಗಪ್ಪ ಎಂಬ ಪಾತ್ರದ ಮೂಲಕ ಮಾದರಿ ವ್ಯಕಿಯನ್ನು ಪರಿಚಯಿಸಿದ್ದಾರೆ.

ಒಟ್ಟು ೩೬ ಲೇಖನಗಳ ಮೂಲಕ ತಮ್ಮ ಬದುಕು, ಸಾಧನೆ ಕುರಿತು ಹೇಳುವ ಅನುಭವ ಕಥನಗಳು ಪ್ರತಿಯೊಂದು ಮೈಲುಗಲ್ಲಾಗಿವೆ.ಇದು ಅವರ ಮೊದಲ ಚರಣ ಎಂದಾದರೆ ಮುಂದಿನ ಚರಣಗಳಲ್ಲಿ ಇನ್ನೂ ಹೆಚ್ಚಿನ ದೃಷ್ಟಾಂತ ದಾಖಲಾಗಲಿ, ಅವರ ಬದುಕಿನ ಎರಡನೆಯ ಇನ್ನಿಂಗ್ಸ್ ಬೇಗನೆ ಅಕ್ಷರರೂಪ ಪಡೆಯಲಿ. ಸಾಧಿಸಬೇಕೆಂಬ ಗ್ರಾಮೀಣ ಭಾಗದ ಅದರಲ್ಲೂ ಆರ್ಥಿಕ ಸಂಕಟದಿಂದ ತೊಳಲುವ ಮಕ್ಕಳಿಗೆ ಇವರ ಜೀವನ ಗಾತೆ ಸ್ಪೂರ್ತಿ ತುಂಬುತ್ತದೆ. ವಿಶೇಷವಾಗಿ ಆಡಳಿತದ ಚುಕ್ಕಾಣಿ ಹಿಡಿಯುವ ಕನಸು ಹೊತ್ತ ಸ್ಪರ್ಧಾರ್ಥಿಗಳಿಗೆ ಇದು ಪ್ರೇರಣಾದಾಯಕ ಹೊತ್ತಿಗೆಯೆ ಹೌದು.

ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಆಗುವ ಪರಿ,ತನ್ನ ಕಾರ್ಯಕ್ಷೇತ್ರದಲ್ಲಿ ಹೇಗೆಲ್ಲಾ ಸಾಧಿಸಬಹು, ಒಬ್ಬ ವ್ಯಕ್ತಿ ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆಯಿಂದ ಕೆಲಸ ಮಾಡಿದ್ದೆ ಆದರೆ ಯಶಸ್ಸು ಖಂಡಿತ ಎನ್ನುವುದು ಹಾದಿಗಲ್ಲು ತೋರಿಸಿಕೊಡುತ್ತದೆ.

‍ಲೇಖಕರು Admin

27 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading