ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.
ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.
ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.
ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.
ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.
ಸರಣಿ – 3
ಫೋಟೋ ಕೃಪೆ : ಪ್ರವೀಣ್ ಮೂರ್ತಿ
ಆ ಬೆಳಿಗ್ಗೆ ಮೆಲ್ಬೋರ್ನಿನಲ್ಲಿ ಏಳು ಡಿಗ್ರಿ ಚಳಿ ಇತ್ತು. ನೈನಾ ಮತ್ತು ಪ್ರವೀಣ್ ನಮ್ಮನ್ನು ಬೇಗ ಎಬ್ಬಿಸಿದರು. “ಬೇಗ ಸಿದ್ಧರಾಗಿ,” ಅಷ್ಟೇ ಹೇಳಿದರು. ಎಲ್ಲಿ ಹೋಗುತ್ತಿದ್ದೇವೆ ಎಂದು ಹೇಳಲಿಲ್ಲ. ಕಾರಿನ ಹಿಂಭಾಗದಲ್ಲಿ ಟವೆಲ್‌ಗಳು ಮಾತ್ರ ಕಾಣಿಸುತ್ತಿದ್ದವು.
ಒಳ್ಳೆಯ ಅಚ್ಚರಿಗಳಲ್ಲಿ ಜಾಗಕ್ಕಿಂತ, ಅಲ್ಲಿಗೆ ಹೋಗುವವರೆಗಿನ ಕುತೂಹಲವೇ ಹೆಚ್ಚು ಕೆಲಸ ಮಾಡುತ್ತದೆ. ನಗರ ಇನ್ನೂ ಸಂಪೂರ್ಣ ಎಚ್ಚರವಾಗಿರಲಿಲ್ಲ. ರಸ್ತೆಗಳ ಮೇಲೆ ಮಂಜು. ಕಾರಿನ ಗಾಜಿನ ಮೇಲೆ ನೀರಿನ ಹನಿಗಳು. ಹೊರಗೆ ಚಳಿ. ಒಳಗೆ ಬಿಸಿ ಗಾಳಿ. ಮೆಲ್ಬೋರ್ನಿನಿಂದ ಸುಮಾರು ಎರಡು ಗಂಟೆ ದಕ್ಷಿಣಕ್ಕೆ ಕಾರು ಸಾಗುತ್ತಿತ್ತು.
“ಇಷ್ಟು ಬೆಳಿಗ್ಗೆ ಎಲ್ಲಿಗೆ?” ಎಂದು ನಾನು ಮತ್ತೆ ಕೇಳಿದೆ.
ಪ್ರವೀಣ್ ನಕ್ಕ.
“ದೇಹಕ್ಕೆ ರಜೆ ಕೊಡೋ ಜಾಗ,” ಎಂದ.
Mornington Peninsula ತಲುಪುವಷ್ಟರಲ್ಲಿ ಬೆಳಕು ನಿಧಾನವಾಗಿ ಹರಡತೊಡಗಿತ್ತು. ಆದರೆ ಚಳಿ ಇನ್ನೂ ಕಚ್ಚುತ್ತಿತ್ತು. ಮರಗಳು. ಮಂಜು. ತಣ್ಣನೆಯ ಗಾಳಿ.

ಆ ಮೌನದ ಮಧ್ಯೆ ಏಕಾಏಕಿ ಬಿಸಿ ನೀರಿನ ಆವಿ ಕಾಣಿಸಿತು.
Peninsula Hot Springs.
ಮೊದಲ ನೋಟಕ್ಕೆ ಅದು ಪ್ರವಾಸಿ ತಾಣ ಅನ್ನಿಸಲಿಲ್ಲ. ಭೂಮಿ ಒಳಗಿನಿಂದ ಬಿಸಿ ಉಸಿರಾಡುತ್ತಿರುವ ಜಾಗದಂತೆ ಕಾಣಿಸಿತು.
ಈ ಜಾಗದ ಕಥೆ ಇನ್ನೂ ವಿಚಿತ್ರ.
1992ರಲ್ಲಿ Charles Davidson ಎಂಬ ಆಸ್ಟ್ರೇಲಿಯನ್ನೊಬ್ಬ ಜಪಾನಿನ Kusatsu Onsen ಎಂಬ ಬಿಸಿ ನೀರಿನ ಬುಗ್ಗೆಯ ಊರಲ್ಲಿ ಕುಳಿತಿದ್ದಾಗ ಅವನಿಗೆ ಒಂದು ಪ್ರಶ್ನೆ ಬಂತಂತೆ.
“ಇಂತಹ ಸಾಮೂಹಿಕ ಸ್ನಾನದ ಸಂಸ್ಕೃತಿ ಆಸ್ಟ್ರೇಲಿಯಾದಲ್ಲಿ ಯಾಕಿಲ್ಲ?”
ಕೆಲ ದೊಡ್ಡ ಕಲ್ಪನೆಗಳು ಸಭಾಂಗಣದಲ್ಲಿ ಹುಟ್ಟುವುದಿಲ್ಲ.
ಮೌನದಲ್ಲಿ ಹುಟ್ಟುತ್ತವೆ.
ಆಮೇಲೆ ಅವನು ಮತ್ತು ಅವನ ಸಹೋದರ Richard Davidson Mornington Peninsula ಯಲ್ಲಿ ಜಾಗ ಖರೀದಿಸಿದರು. ಒಂದೂವರೆ ವರ್ಷ ಭೂಮಿಯನ್ನು ಕೊರೆದರು. ಕೊನೆಗೆ 637 ಮೀಟರ್ ಆಳದಲ್ಲಿ ಬಿಸಿ ಖನಿಜಯುಕ್ತ ನೀರು ಸಿಕ್ಕಿತು.
ಸುಮಾರು 54 ಡಿಗ್ರಿ ಉಷ್ಣತೆ. ಆ ಕ್ಷಣದಲ್ಲಿ ನಾವು ಮುಳುಗಿದ್ದದ್ದು ಕೇವಲ ಬಿಸಿ ನೀರಿನಲ್ಲಿ ಅಲ್ಲ. ಭೂಮಿಯೊಳಗೆ ವರ್ಷಗಳ ಕಾಲ ಬಿಸಿಯಾಗಿದ್ದ ನೀರಿನಲ್ಲಿ. ಮೊದಲು ಕೊಳದೊಳಗೆ ಕಾಲಿಟ್ಟ ಕ್ಷಣ ಇನ್ನೂ ನೆನಪಿದೆ. ಹೊರಗೆ ಏಳು ಡಿಗ್ರಿ ಚಳಿ. ನೀರಿನೊಳಗೆ ಮಾತ್ರ ನಿಧಾನವಾಗಿ ಹರಡುವ ಬಿಸಿ. ಮುಖದ ಮೇಲೆ ತಣ್ಣನೆಯ ಗಾಳಿ. ಕುತ್ತಿಗೆಯ ಕೆಳಗೆ ಬಿಸಿ ನೀರು.
ದೇಹ ಕ್ಷಣಕಾಲ ಗೊಂದಲಕ್ಕೀಡಾಗುತ್ತದೆ.
ನಂತರ ನಿಧಾನವಾಗಿ ಶಾಂತವಾಗುತ್ತದೆ.
ಭುಜಗಳು ಸಡಿಲವಾಗುತ್ತವೆ. ಉಸಿರಾಟ ಆಳವಾಗುತ್ತದೆ. ಬೆನ್ನು ತನ್ನ ತೂಕವನ್ನು ಮರೆತಂತೆ ಅನ್ನಿಸುತ್ತದೆ.
ವೈದ್ಯನಾಗಿ ನಾನು magnesium, ರಕ್ತಸಂಚಾರ, ನರಮಂಡಲದ ವಿಶ್ರಾಂತಿ ಬಗ್ಗೆ ಯೋಚಿಸುತ್ತಿದ್ದೆ.
ದೇಹಕ್ಕೆ ಮಾತ್ರ ವಿವರಣೆ ಬೇಕಾಗಿರಲಿಲ್ಲ.
ಮಾನವ ಸಾವಿರಾರು ವರ್ಷಗಳಿಂದ ಬಿಸಿ ನೀರಿನ ಬುಗ್ಗೆಯ ಬಳಿ ವಿಶ್ರಾಂತಿ ಹುಡುಕುತ್ತಿದ್ದಾನೆ . ರೋಮನ್ನರು ಉಷ್ಣ ಸ್ನಾನಗೃಹಗಳನ್ನು ಕಟ್ಟಿದರು. ಜಪಾನಿನಲ್ಲಿ onsen ಸಂಸ್ಕೃತಿ ಬೆಳೆದಿತು. ಟರ್ಕಿಯಲ್ಲಿ hammam ಗಳು ಹುಟ್ಟಿದವು. ಹಿಮಾಚ್ಚಾದಿತ ದೇಶಗಳಲ್ಲಿ ಜನರು ಬಿಸಿ ನೀರಿನಿಂದ ನೇರವಾಗಿ ಹಿಮದಷ್ಟು ತಣ್ಣನೆಯ ನೀರಿಗೂ ಇಳಿಯುತ್ತಾರೆ!
ಮನುಷ್ಯ ಎಲ್ಲಿ ಬಿಸಿ ನೀರಿನ ಬುಗ್ಗೆ ಕಂಡನೋ, ಅಲ್ಲಿ ಚಿಕಿತ್ಸೆ ನಿಧಾನವಾಗಿ ಸಂಸ್ಕೃತಿಯಾಯಿತು. ಬಹುಶಃ ಬಿಸಿ ನೀರು ಐಷಾರಾಮಿ ಅಲ್ಲ. ನಾಗರಿಕತೆಗಿಂತ ಹಳೆಯ ಚಿಕಿತ್ಸೆ.
ಮೇಲಿನ ಬೆಟ್ಟದ ಕೊಳ ತಲುಪುವಷ್ಟರಲ್ಲಿ ಬೆಳಗಿನ ಬೆಳಕು ಸಂಪೂರ್ಣ ಹರಡಿತ್ತು. ದೂರದಲ್ಲಿ ಸಮುದ್ರ ಕಾಣುತ್ತಿತ್ತು. ಗಾಳಿ ಮುಖಕ್ಕೆ ತಾಗುತ್ತಿತ್ತು. ದೇಹ ನೀರಿನೊಳಗೆ ಮುಳುಗಿತ್ತು.
ಆ ಕೊಳವನ್ನು ಆ ಜಾಗದ ಅತಿ ಎತ್ತರದ ಸ್ಥಳದಲ್ಲಿ ಕಟ್ಟಿರುವುದಕ್ಕೂ ಒಂದು ಕಾರಣವಿದೆ ಎಂದು ಪ್ರವೀಣ್ ಹೇಳಿದ.
“ಭೂಮಿ ಮತ್ತು ಆಕಾಶದ ಮಧ್ಯೆ ತೇಲುವ ಅನುಭವ ಬರಬೇಕು ಅಂತ.”
ಆ ಮಾತು ಅಲ್ಲಿ ಸಂಪೂರ್ಣ ಸರಿಯಾಗಿಯೇ ಅನ್ನಿಸಿತು. ದೂರದವರೆಗೆ ಕಾಣುವ ಆಕಾಶವೂ ಕೆಲವೊಮ್ಮೆ ಮನಸ್ಸಿಗೆ ಚಿಕಿತ್ಸೆ ಕೊಡುತ್ತದೆ.

ಅಲ್ಲೇ ಒಂದು ದೊಡ್ಡ ಕಂಚಿನ ವೃತ್ತಾಕಾರದ ನಕ್ಷೆ ಇತ್ತು. Japan ಇಂದ Antarctica ವರೆಗೆ ಜಗತ್ತಿನ ಬಿಸಿ ನೀರಿನ ಬುಗ್ಗೆಯ ಸಂಸ್ಕೃತಿಗಳನ್ನು ಗುರುತಿಸಿದ್ದರು. Suddenly ಇದು spa ಅನ್ನಿಸಲಿಲ್ಲ.
ಸಾವಿರಾರು ವರ್ಷಗಳಿಂದ ಮನುಷ್ಯರು ಬಿಸಿ ನೀರಿನ ಬುಗ್ಗೆಯ ಸುತ್ತ ಕಟ್ಟಿಕೊಂಡಿರುವ ಜಾಗತಿಕ ನೆನಪಿನ ಭಾಗದಂತೆ ಕಾಣಿಸಿತು.
ಒಂದು ದೊಡ್ಡ ಕೊಳದ ಬಳಿ ಮತ್ತೊಂದು ವಿಚಿತ್ರ ದೃಶ್ಯ ಕಾಣಿಸಿತು.
ಒಬ್ಬ ಮಹಿಳೆ ವೇದಿಕೆಯ ಮೇಲೆ ನಿಂತು ಬಿಸಿ ನೀರಿನ ಯೋಗಾಭ್ಯಾಸ ಕಲಿಸುತ್ತಿದ್ದಳು. ನೀರಿನೊಳಗೆ ನಿಂತಿದ್ದವರು ಅವಳ ಸೂಚನೆಗಳಿಗೆ ತಕ್ಕಂತೆ ಕೈಕಾಲು ಚಾಚುತ್ತಿದ್ದರು. ಆವಿ ಮಧ್ಯೆ ಯೋಗ ತರಗತಿ ನಡೆಯುತ್ತಿತ್ತು.
ಆ ಕ್ಷಣದಲ್ಲಿ ನನಗೆ ಪಾಶ್ಚಾತ್ಯ ಸಮಾಜದ ಒಂದು ವಿಶೇಷ ಗುಣ ಅರ್ಥವಾಯಿತು. ಅವರು ವಿಶ್ರಾಂತಿಗೂ ಹೊಸ ರೂಪ ಕೊಡುತ್ತಾರೆ.
ನಮ್ಮಲ್ಲಿ ಬಿಸಿ ನೀರಿನಲ್ಲಿ ಕೂತರೆ ಐದು ನಿಮಿಷದಲ್ಲಿ ರಾಜಕೀಯ ಚರ್ಚೆ ಶುರುವಾಗಬಹುದು. ಇಲ್ಲಿ ಉಸಿರಾಟ ಹೇಗೆ ತೆಗೆದುಕೊಳ್ಳಬೇಕು ಎಂಬ ತರಗತಿ ಶುರುವಾಗುತ್ತದೆ.
ನಂತರ reflexology walk. ಚಿಕ್ಕ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನಡೆಯಬೇಕು. ಮೊದಲ ಎರಡು ಹೆಜ್ಜೆಗಳಲ್ಲಿ ಇದು ಆರೋಗ್ಯಾಭ್ಯಾಸದಂತೆ ಕಾಣುತ್ತದೆ.
ಮೂರನೇ ಹೆಜ್ಜೆಯ ನಂತರ ಮಾತ್ರ ನಿಜವಾದ ಅನುಭವ ಶುರುವಾಗುತ್ತದೆ.
“ಅಯ್ಯೋ!” ಎಂದು ರಂಜನಾ almost ಕಿರುಚಿದಳು. ನೈನಾ ಮಾತ್ರ ನಗುತ್ತಲೇ ನಡೆಯುತ್ತಿದ್ದಳು. ಬೇಸಿಗೆಯಲ್ಲಿ ರಜಾ ದಿನಗಳಲ್ಲಿ ಅಗ್ರಗೋಣದ ಕಲ್ಲು ರಸ್ತೆಯಲ್ಲಿ ಚಪ್ಪಲಿ ಇಲ್ಲದೆ ನಡೆದ ಬಾಲ್ಯದ ತರಬೇತಿ ಇಲ್ಲಿ ಉಪಯೋಗಕ್ಕೆ ಬಂದಿರಬಹುದು ಎಂದು ನನಗೆ ಅನುಮಾನ ಬಂತು.
ಅಲ್ಲೇ ಹಿಮದಷ್ಟು ತಣ್ಣನೆಯ ನೀರಿನ ಕೊಳಗಳೂ ಇದ್ದವು. ಜನರು ಬಿಸಿ ನೀರಿನಿಂದ ಹೊರಬಂದು ನೇರವಾಗಿ ತಣ್ಣನೆಯ ನೀರಿಗೆ ಇಳಿಯುತ್ತಿದ್ದರು.
ದೇಹಕ್ಕೆ ಒಮ್ಮೆಲೆ ಶಾಕ್ ಕೊಟ್ಟು ರಕ್ತಸಂಚಾರ ಚುರುಕುಗೊಳಿಸಲು. ಇಂದಿನ wellness industry ಇದಕ್ಕೆ ದೊಡ್ಡ ಹೆಸರು ಕೊಟ್ಟಿದೆ.
ನಮ್ಮ ಅಜ್ಜಿಯರು ಇದನ್ನೇ ಸರಳವಾಗಿ “ಬಿಸಿ-ತಣ್ಣೀರು ಬದಲಿಸಿ ಬಳಸು” ಎಂದು ಹೇಳುತ್ತಿದ್ದರು. ಕೊನೆಗೆ ನಾವು cave pool ಒಳಗೆ ಹೋದೆವು.
ಆ ಜಾಗ ಈ entire ಪ್ರಯಾಣದ ಹೃದಯವಾಗಿತ್ತು. ಗುಹೆಯಂತಿರುವ ಕಡಿಮೆ ಮೇಲ್ಛಾವಣಿ. ಮಂದ ಬೆಳಕು. ಖನಿಜದ ವಾಸನೆ. ಬಿಸಿ ನೀರಿನ ಮೇಲೆ ತೇಲುವ ಆವಿ. ಒಳಗೆ ಬಂದ ಕ್ಷಣ ಎಲ್ಲರ ಧ್ವನಿಯೂ ಸ್ವಯಂ ನಿಧಾನವಾಗುತ್ತದೆ. ಯಾರೂ “ಮೌನವಾಗಿರಿ” ಎಂದು ಹೇಳುವುದಿಲ್ಲ. ಆದರೂ ಜನರು ಪಿಸುಮಾತಿನಲ್ಲಿ ಮಾತ್ರ ಮಾತನಾಡುತ್ತಾರೆ.

ಗುಹೆಯೊಳಗೆ ನೀರು ಮಾತನಾಡುತ್ತಿತ್ತು.
ನಾವು ಕೇಳುತ್ತಿದ್ದೆವು.
ನೈನಾ ಮೌನವಾಗಿ ಕುಳಿತಿದ್ದಳು. ರಂಜನಾ ಕಣ್ಣು ಮುಚ್ಚಿಕೊಂಡಿದ್ದಳು. ಪ್ರವೀಣ್ ನೀರಿನೊಳಗೆ ನೆಮ್ಮದಿಯಾಗಿ ತೇಲುತ್ತಿದ್ದ. ನಾಲ್ವರು. ಫೋನ್ ಇಲ್ಲ. ತುರ್ತು ಇಲ್ಲ. ಮಾತುಕತೆ ಕೂಡ ಅಗತ್ಯವಿಲ್ಲ. ಕೆಲ ಸಂಬಂಧಗಳು ಮಾತಿನಿಂದ ಗಟ್ಟಿಯಾಗುವುದಿಲ್ಲ. ಒಟ್ಟಿಗೆ ಮೌನವಾಗಿ ಕುಳಿತುಕೊಳ್ಳುವ ಸಾಮರ್ಥ್ಯದಿಂದ ಗಟ್ಟಿಯಾಗುತ್ತವೆ.
ಈ ನೀರನ್ನು Charles Davidson ಒಮ್ಮೆ “ಪ್ರಕೃತಿಯ ಔಷಧಾಲಯ” ಎಂದು ಕರೆದಿದ್ದಾನೆ. ಚೆನ್ನಾಗಿ ನಿದ್ರೆ ಬರುತ್ತದೆ. ಸ್ನಾಯುಗಳು ಸಡಿಲವಾಗುತ್ತವೆ. ಮನಸ್ಸು ಶಾಂತವಾಗುತ್ತದೆ ಎಂದು ಜನರು ಹೇಳುತ್ತಾರೆ.
ಆ ಮಾತು ಅಲ್ಲಿ ಸಂಪೂರ್ಣ ಸತ್ಯವಾಗಿ ಅನ್ನಿಸಿತು.
ಯಾಕೆಂದರೆ ನಮ್ಮ ದೇಹ ಇನ್ನೂ ಹಳೆಯ ಜಗತ್ತಿನದ್ದೇ.
ಆದರೆ ನಮ್ಮ ನರಮಂಡಲ ಮಾತ್ರ ಮೊಬೈಲ್ ಸೂಚನೆಗಳ ನಡುವೆ ಬದುಕುತ್ತಿದೆ.
ಬಹುಶಃ ಅದಕ್ಕೇ ಬಿಸಿ ನೀರಿನಲ್ಲಿ ಕೆಲವು ನಿಮಿಷ ಮೌನವಾಗಿ ಕುಳಿತರೆ ದೇಹ ನಿಧಾನವಾಗಿ ಶಾಂತವಾಗುತ್ತದೆ.
ಹೊರಗೆ ಬಂದಾಗ ಮತ್ತೆ ಚಳಿ ತಾಗಿತು. ದೇಹದಿಂದ ಆವಿ ಎದ್ದಂತಿತ್ತು.
ಕೆಲ ಕ್ಷಣ ಗಾಳಿ ಮತ್ತು ಬಿಸಿ ನೀರಿನ ನಡುವೆ ದೇಹ ತನ್ನ ಗಡಿಗಳನ್ನು ಮರೆತಂತೆ ಅನ್ನಿಸಿತು. ಹಿಂತಿರುಗುವಾಗ ಕಾರಿನೊಳಗೆ ಹೆಚ್ಚು ಮಾತು ಇರಲಿಲ್ಲ.
ಬರುತ್ತಿದ್ದಾಗಿದ್ದ ಮೌನಕ್ಕೂ, ಹಿಂದಿರುಗುತ್ತಿದ್ದ ಮೌನಕ್ಕೂ ವ್ಯತ್ಯಾಸ ಇತ್ತು.ಹೊರಗೆ ಮಂಜು ಮತ್ತೆ ಗಾಜಿನ ಮೇಲೆ ಕುಳಿತಿತ್ತು. ಒಳಗೆ ದೇಹ ವಿಚಿತ್ರವಾಗಿ ಹಗುರವಾಗಿತ್ತು.
ಆ ರಾತ್ರಿ ಮಲಗಿದಾಗ ನನಗೆ ಒಂದು ವಿಚಾರ ಮತ್ತೆ ಮತ್ತೆ ನೆನಪಾಯಿತು. ಬಿಸಿ ನೀರಿನ ಬುಗ್ಗೆ ಮನರಂಜನೆ ಅಲ್ಲ. ನಾಗರಿಕತೆಗಿಂತ ಹಳೆಯ ಚಿಕಿತ್ಸೆ


.






0 Comments