ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಂಗೀತಂ – ಕಮಲ್ ಬೆಸೆದ ಆ ಎರಡು ಬೆಳ್ಳಿಬೆರಗು

-ಗೊರೂರು ಶಿವೇಶ್

1989ರ ಏಪ್ರಿಲ್ ತಿಂಗಳ ಬಿರುಬಿಸಿಲಿನ ಒಂದು ಬೆಳಗಿನ ಆಟ. ಹಾಸನದ ‘ಸಹ್ಯಾದ್ರಿ’ ಚಿತ್ರಮಂದಿರದೊಳಗೆ ಕಂಡ ಆ ದೃಶ್ಯಾವಳಿ ಇಂದಿಗೂ ಹಸಿರಾಗಿದೆ; ತೆರೆಯ ಮೇಲೆ ಮೂಡಿದ್ದು ‘ಅಪೂರ್ವ ಸಹೋದರರ್ಗಳ್’ (ಕನ್ನಡದಲ್ಲಿ ‘ಅಪೂರ್ವ ಸಹೋದರರು’).

ಆ ಕಾಲಘಟ್ಟದಲ್ಲಿ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದ ಜನಪ್ರಿಯ ಸೂತ್ರವೆಂದರೆ ಹೆತ್ತವರನ್ನು ಕೊಂದ ಪಾತಕಿಗಳ ಮೇಲೆ ಮಕ್ಕಳು ಬೆಳೆದು ಸೇಡು ತೀರಿಸಿಕೊಳ್ಳುವುದು. ಕನ್ನಡದಲ್ಲೂ ಶಂಕರ್ ಗುರು, ಪ್ರತಿಧ್ವನಿ, ಬಂಗಾರದ ಗುಡಿ, ಸಹೋದರರ ಸವಾಲ್ ಮುಂತಾದ ಸಾಲು ಸಾಲು ಚಿತ್ರಗಳು ಬಂದಿದ್ದವು. ಆದರೆ, ಅದೇ ಹಳೆಯ ಸೇಡಿನ ಕಥಾವಸ್ತುವನ್ನು ಇಟ್ಟುಕೊಂಡು ‘ಅಪೂರ್ವ ಸಹೋದರರು’ ಸೃಷ್ಟಿಸಿದ ಸಂಚಲನವೇ ಬೇರೆ. ಅದುವರೆಗೂ ಜನಪ್ರಿಯ ಹಾಸ್ಯನಟರಾಗಿದ್ದ ತಾಯ್ ನಾಗೇಶ್ ಮತ್ತು ಅಂದಿನ ಆ್ಯಕ್ಷನ್ ನಾಯಕ ಜೈಶಂಕರ್ ಕ್ರೂರ ಖಳನಟರಾಗಿ ಎದುರಾಗಿದ್ದು ಚಿತ್ರಕ್ಕೊಂದು ಅನಿರೀಕ್ಷಿತ ತಿರುವು ನೀಡಿತ್ತು.

ಆದರೆ, ಎಲ್ಲಕ್ಕಿಂತ ಮಿಗಿಲಾಗಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದು ಕಮಲ್ ಹಾಸನ್ ಅವರ ಆ ಕುಬ್ಜ ‘ಅಪ್ಪು’ವಿನ ಪಾತ್ರ. ತಮ್ಮ ಸಹಜ ಎತ್ತರಕ್ಕಿಂತ ಅರ್ಧದಷ್ಟು ಕುಳ್ಳಾಗಿ ಅವರು ತೆರೆಯ ಮೇಲೆ ಕಾಣಿಸಿಕೊಂಡಾಗ, ತಂತ್ರಜ್ಞಾನ ಇಷ್ಟೊಂದು ಮುಂದುವರಿಯದ ಆ ದಿನಗಳಲ್ಲಿ ಗೆಳೆಯರ ಬಳಗದಲ್ಲಿ ಅದೇ ದೊಡ್ಡ ಚರ್ಚೆಯ ವಿಷಯವಾಗಿತ್ತು. ಕುಳ್ಳ ಅಪ್ಪು ಮಾಡುವ ಒಂದೊಂದು ಕರಾರುವಾಕ್ ಕೊಲೆಗಳು ಆತನ ಸಹೋದರನ ಮೇಲೆಯೇ ಅನುಮಾನ ತರುವಂತೆ ಹೆಣೆದಿದ್ದ ಚಿತ್ರಕಥೆ ಅದ್ಭುತ. ಅದರ ನಡುವೆಯೇ ಬರುವ ತನಿಖಾಧಿಕಾರಿಯ ಪತ್ತೇದಾರಿ ಐಡಿಯಾಗಳು ಮತ್ತು ತನ್ನ ಬಾಸ್‌ನ ಬುದ್ಧಿಮತ್ತೆಯನ್ನು ಆರಾಧನಾ ಭಾವದಿಂದ ನೋಡುವ ಸಹಾಯಕನ ಸನ್ನಿವೇಶಗಳು ನಗೆಯ ಹೊನಲನ್ನೇ ಹರಿಸುತ್ತಿದ್ದವು. ನವರಸಗಳ ಸಮತೋಲಿತ ಮಿಶ್ರಣವೇ ಆ ಚಿತ್ರದ ಅಭೂತಪೂರ್ವ ಯಶಸ್ಸಿನ ಗುಟ್ಟು.

ಆದರೆ, ಕಮಲ್ ಹಾಸನ್ ಅವರ ಕಲಾ ಪ್ರತಿಭೆಯ ಪರಾಕಾಷ್ಠೆಯನ್ನು ಸಾರುವ ಎರಡು ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ:

ಸರ್ಕಸ್ ಕಂಪನಿಯ ಮಾಲೀಕನ ಮಗಳಿಗೆ ಅಪ್ಪುವಿನ ಮೇಲೆ ಇನ್ನಿಲ್ಲದ ವಾತ್ಸಲ್ಯ. ಅವಳ ಕಾಳಜಿಯನ್ನೇ ‘ಪ್ರೀತಿ’ ಎಂದು ನಂಬಿಸುವ ಗೆಳೆಯರ ಮಾತಿಗೆ ಮರುಳಾಗುವ ಅಪ್ಪು, ಅವಳ ಕರೆಯಂತೆ ಮುಸ್ಸಂಜೆಯ ಕನಸುಗಳೊಂದಿಗೆ ಹೊಸ ಉಡುಪು ತೊಟ್ಟು ಸಬ್ ರಿಜಿಸ್ಟ್ರಾರ್ ಕಚೇರಿಗೆ ಧಾವಿಸುತ್ತಾನೆ. ಆದರೆ ಅಲ್ಲಿ ಹೋದಾಗ ತಿಳಿಯುತ್ತದೆ—ತಂದೆಯ ವಿರೋಧ ಕಟ್ಟಿಕೊಂಡು ಬೇರೊಬ್ಬನೊಂದಿಗೆ ಪ್ರೇಮವಿವಾಹವಾಗುತ್ತಿರುವ ಅವಳು, ಕೇವಲ ಸಾಕ್ಷಿ ಸಹಿಗಾಗಿ ಈತನನ್ನು ಕರೆಸಿದ್ದಾಳೆಂದು! ಆ ಕ್ಷಣದಲ್ಲಿ ಕಮಲ್ ಮುಖದಲ್ಲಿ ಅರಳುವ ಮುಗ್ಧ ಆಸೆ ಒಡೆದು, ನಿರಾಸೆ ಮತ್ತು ಭ್ರಮನಿರಸನ ಆವರಿಸುವ ಆ ಕ್ಲೋಸ್-ಅಪ್ ಭಾವಾಭಿನಯ ಪ್ರೇಕ್ಷಕರ ಎದೆ ಕಲಕುತ್ತದೆ.

ಇನ್ನು ಎರಡನೆಯದು, ಈ ಮದುವೆಯ ಸುದ್ಧಿ ತಿಳಿದ ಸರ್ಕಸ್ ಮಾಲೀಕ ಆಕ್ರೋಶದಿಂದ ಬಂದೂಕೆತ್ತಿ, “ಅಪ್ಪು, ನಿನ್ನನ್ನು ಅಷ್ಟೊಂದು ನಂಬಿದ್ದೆ, ನನಗೆ ದ್ರೋಹ ಬಗೆದೆ” ಎಂದು ಹಲುಬಿದಾಗ, ಅಪ್ಪುವಿನ ತಾಯಿ ಅಸಹಾಯಕಳಾಗಿ, “ಹುಡುಗ ವಿದ್ಯಾವಂತ, ಸುಂದರ; ಅದೇ ನಮ್ಮ ಅಪ್ಪುವಿನಂಥ ಕುರೂಪಿ, ಕುಳ್ಳನಾಗಿದ್ದರೆ ನಿಮ್ಮ ಕೋಪಕ್ಕೆ ಅರ್ಥವಿರುತ್ತಿತ್ತು” ಎಂದುಬಿಡುತ್ತಾಳೆ. ಹೆತ್ತ ತಾಯಿಯ ಬಾಯಿಂದಲೇ ಬಂದ ಆ ಮಾತು ಅಪ್ಪುವನ್ನು ನೇಣಿನ ಕುಣಿಕೆಗೆ ತಳ್ಳುತ್ತದೆ. ಆತನನ್ನು ರಕ್ಷಿಸಿ ತಾಯಿ ಪ್ರಶ್ನಿಸಿದಾಗ, ಕಂಬನಿ ಮಿಡಿಯುತ್ತಾ ಆತ ಹೇಳುವ ಮಾತು: “ಜಗತ್ತು ನನ್ನನ್ನು ಕುಳ್ಳ, ಕುರೂಪಿ ಎಂದು ಎಷ್ಟಾದರೂ ಹೀಯಾಳಿಸಲಿ, ನನಗೆ ನೋವಾಗುತ್ತಿರಲಿಲ್ಲ ಅಮ್ಮಾ… ಆದರೆ ಅದೇ ಮಾತನ್ನು ನನ್ನ ಹೆತ್ತ ತಾಯಿಯೇ ಆಡಿದಾಗ ಎದೆ ಒಡೆದುಹೋಯಿತು.”

ಮುಖವನ್ನು ಪ್ರೊಸ್ತೆಟಿಕ್ ತಂತ್ರಜ್ಞಾನದಲ್ಲಿ ಕೊಂಚ ಬದಲಾಯಿಸಿಕೊಂಡಿದ್ದರೂ, ಆ ಕಣ್ಣುಗಳಲ್ಲಿ ಕಮಲ್ ಮಿಡಿಸಿದ ಭಾವನೆಗಳು ಸಾರ್ವಕಾಲಿಕ. ಮುಂದೆ ಇದೇ ಚಿತ್ರ ‘ಅಪ್ಪು ರಾಜಾ’ ಹೆಸರಿನಲ್ಲಿ ಹಿಂದಿಯಲ್ಲೂ ಹೊಸ ಇತಿಹಾಸ ಬರೆಯಿತು.

ಕೆಲವು ದಿನಗಳ ಹಿಂದೆ ಮಂಡ್ಯದ ಭಿಕ್ಷುಕಿಯೊಬ್ಬಳ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾದ ಸುದ್ದಿ ಟಿವಿಯಲ್ಲಿ ಪ್ರಸಾರವಾದಾಗ, ನನ್ನ ಮನಸ್ಸು ಥಟ್ಟನೆ ನಾಲ್ಕು ದಶಕಗಳ ಹಿಂದಿನ ಮತ್ತೊಂದು ಮೇರುಕೃತಿ ‘ಪುಷ್ಪಕ ವಿಮಾನ’ದತ್ತ (1987) ಓಡಿತು.

ಚಿತ್ರದಲ್ಲಿ ನಿರುದ್ಯೋಗಿ ಯುವಕನೊಬ್ಬ ರಸ್ತೆಯಲ್ಲಿ ಎದುರಾಗುವ ಭಿಕ್ಷುಕನನ್ನು ರೇಗಿಸಲು ತನ್ನ ಜೇಬಿನಲ್ಲಿದ್ದ ನಾಣ್ಯವನ್ನು ತೋರಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಆ ಭಿಕ್ಷುಕ ತನ್ನ ಜೇಬು, ಬಟ್ಟೆಯ ಮಡಿಕೆ, ಚೀಲಗಳಿಂದ ಕಂತೆ ಕಂತೆ ನೋಟುಗಳನ್ನು ಪ್ರದರ್ಶಿಸುತ್ತಾ ಹೋದಾಗ ನಾಯಕ ಪೆಚ್ಚಾಗುವ ದೃಶ್ಯ ಭಾರತೀಯ ಚಿತ್ರರಂಗ ಕಂಡ ಅದ್ಭುತ ವಿಡಂಬನೆ. ಚಿತ್ರದ ಅಂತ್ಯದಲ್ಲಿ ಅದೇ ಭಿಕ್ಷುಕ ಅನಾಥವಾಗಿ ಮೃತಪಟ್ಟಾಗ, ಆತನ ಚೀಲದಿಂದ ಗಾಳಿಯಲ್ಲಿ ತೂರಿಹೋಗುವ ನೋಟುಗಳನ್ನು ಹೆಕ್ಕಲು ಜನ ಮುಗಿಬೀಳುವ ದೃಶ್ಯ ಜೀವನದ ಕ್ಷಣಿಕತೆ ಮತ್ತು ವ್ಯರ್ಥ ಆಸೆಯನ್ನು ಒಂದೇ ಒಂದು ಸಂಭಾಷಣೆಯೂ ಇಲ್ಲದೆ ಕಣ್ಣಿಗೆ ಕಟ್ಟುತ್ತದೆ.

‘ಪುಷ್ಪಕ ವಿಮಾನ’ ಕೇವಲ ಒಂದು ಮೂಕಿ ಚಿತ್ರವಾಗಿರಲಿಲ್ಲ; ಅದೊಂದು ಗಡಿಯಿಲ್ಲದ ಸಾರ್ವತ್ರಿಕ ಭಾಷೆಯ ದೃಶ್ಯ ಕಾವ್ಯ. ಶೃಂಗಾರಂ ನಾಗರಾಜ್ ಅವರ ನಿರ್ಮಾಣ, ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ ನಡೆದ ಚಿತ್ರೀಕರಣ ಹಾಗೂ ತಾರಾಗಣದಿಂದಾಗಿ ಇದು ಕನ್ನಡ ಚಿತ್ರವೆಂದೇ ಸೆನ್ಸಾರ್ ಮನ್ನಣೆ ಪಡೆಯಿತು. ಎಲ್. ವೈದ್ಯನಾಥನ್ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿತ್ತು. ಐಷಾರಾಮಿ ಹೋಟೆಲ್ ಕೋಣೆ, ಮೋಡಿಮಾಡುವ ಜಾದೂಗಾರನ ಮಗಳು (ಅಮಲಾ), ಸಾಕ್ಷ್ಯವೇ ಉಳಿಯಬಾರದೆಂದು ಮಂಜುಗಡ್ಡೆಯ ಚಾಕುವಿನಿಂದ ಕೊಲೆ ಮಾಡಲು ಬರುವ ಸುಪಾರಿ ಕಿಲ್ಲರ್‌ನ ವಿಚಿತ್ರ ಕಸರತ್ತುಗಳು… ಇವೆಲ್ಲವೂ ಗಂಭೀರ ಸನ್ನಿವೇಶದಲ್ಲೂ ನಗೆಯುಕ್ಕಿಸುತ್ತವೆ. ಕೊನೆಯಲ್ಲಿ ಪ್ರೇಯಸಿಯ ವಿಳಾಸವಿರುವ ಕಾಗದದ ಚೂರು ಚರಂಡಿ ಪಾಲಾಗುವ ಆ ವಿಷಾದಮಯ ಮುಕ್ತಾಯ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರೂರಿಸುತ್ತದೆ.

ಈ ಎರಡೂ ಅಪ್ರತಿಮ ಕಲಾಕೃತಿಗಳ ಹಿಂದಿದ್ದ ದ್ರಷ್ಟಾರ—ದೃಶ್ಯ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್.

‘ಮಾಯಾಬಜಾರ್’ ಮತ್ತು ‘ಪಾತಾಳ ಭೈರವಿ’ಯಂತಹ ಪೌರಾಣಿಕ ಕ್ಲಾಸಿಕ್‌ಗಳಿಗೆ ಕೆ.ವಿ. ರೆಡ್ಡಿಯವರ ಗರಡಿಯಲ್ಲಿ ಪಳಗಿದ್ದ ಸಿಂಗೀತಂ ಅವರ ಸಿನಿಮೀಯ ಪ್ರತಿಭೆ ಅನನ್ಯ. ಕನ್ನಡದ ಮೊಟ್ಟಮೊದಲ ಸ್ವರ್ಣಕಮಲ ವಿಜೇತ ‘ಸಂಸ್ಕಾರ’ ಚಿತ್ರದ ಅಧಿಕೃತ ನಿರ್ದೇಶನದ ಕೀರ್ತಿ ಪಟ್ಟಾಭಿರಾಮ ರೆಡ್ಡಿಯವರಿಗೆ ಸಂದಿದ್ದರೂ, ತೆರೆಯ ಮರೆಯಲ್ಲಿ ನಿಂತು ತಾಂತ್ರಿಕವಾಗಿ ಇಡೀ ಚಿತ್ರವನ್ನು ಮುನ್ನಡೆಸಿದ್ದು ಇದೇ ಸಿಂಗೀತಂ.

ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಮರೆಯಲಾಗದ್ದು. ಡಾ. ರಾಜ್‌ಕುಮಾರ್ ಅವರ ಭಾಗ್ಯದ ಲಕ್ಷ್ಮಿ ಬಾರಮ್ಮ, ಎರಡು ನಕ್ಷತ್ರಗಳು, ಆನಂದ ಭೈರವಿ, ಹಾಲು ಜೇನು ಹಾಗೂ ಶಿವರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಸಸ್ಪೆನ್ಸ್ ಥ್ರಿಲ್ಲರ್ ಸಂಯುಕ್ತ ಇಂದಿಗೂ ಕನ್ನಡಿಗರ ನೆನಪಿನಲ್ಲಿ ಹಸಿರಾಗಿವೆ. ಕಮಲ್ ಹಾಸನ್ ಅವರ ಜತೆಗೂಡಿ ಅವರು ಕಟ್ಟಿಕೊಟ್ಟ ಸೊಮ್ಮೊಕಡದಿ ಸೊಕೊಕಡದಿ, ಅಪೂರ್ವ ಸಹೋದರರ್ಗಳ್, ಮೈಕೆಲ್ ಮದನ ಕಾಮರಾಜನ್ ಮತ್ತು ಪುಷ್ಪಕ ವಿಮಾನ ಚಿತ್ರಗಳು ಭಾರತೀಯ ಚಿತ್ರರಂಗದ ಅಪರೂಪದ ರತ್ನಗಳು. ತಮ್ಮ ಇಳಿ ವಯಸ್ಸಿನಲ್ಲೂ ಕಲೆಯ ಹಸಿವನ್ನು ಜೀವಂತವಾಗಿರಿಸಿಕೊಂಡು, ಇತ್ತೀಚೆಗೆ ಸಂಪೂರ್ಣ ಸಂಗೀತ-ಹಾಡುಗಳ ಮೂಲಕವೇ ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರುವ ‘ಸಿಂಗೀತಂ’ ಚಿತ್ರವನ್ನು ರೂಪಿಸಿ ಸದ್ದು ಮಾಡಿದ್ದರು.

ಮಾತೇ ಬಂಡವಾಳವಾಗಿರುವ ಇಂದಿನ ಸಿನಿಮಾ ಜಗತ್ತಿನಲ್ಲಿ, ಕೇವಲ ಭಾವಾಭಿನಯ, ನವರಸ ಮತ್ತು ಮೌನದ ಅಗಾಧ ಶಕ್ತಿಯಿಂದಲೇ ಜಗತ್ತನ್ನೇ ಗೆದ್ದ ಸಿಂಗೀತಂ ಶ್ರೀನಿವಾಸರಾವ್ ಭಾರತೀಯ ಸಿನೆಮಾ ಇತಿಹಾಸ ಕಂಡ ಅಪ್ರತಿಮ ಮೇರು ನಿರ್ದೇಶಕ. ಸಾರ್ಥಕ ಬದುಕು ನಡೆಸಿ ಅಮರವಾದ ಆ ಚೇತನಕ್ಕೆ ಭಾವಪೂರ್ಣ ನಮನಗಳು.

‍ಲೇಖಕರು Admin

5 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading