ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುನ್ನುಡಿ ಎಂಬ ಹೋಲ್ಡಾಲು

ಗಂಗಾರಾಂ ಚಂಡಾಲ ಅವರ ಸಂಕಲನದ ಕೃತಿ ‘ನೂರು ನುಡಿ ನೂರು ಭಾವ‘

ಇದು ಪ್ರಕಟಣೆಯ ಹಂತದಲ್ಲಿರುವ ಮುನ್ನುಡಿಗಳ ಸಂಕಲನ

ಈ ಕೃತಿಗೆ ಜಿ.ಪಿ.ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ.

-ಜಿ.ಪಿ.ಬಸವರಾಜು

ಮುನ್ನುಡಿ ಎಂಬುದೊಂದು ಅಲಂಕಾರವೇ ? ಬೆನ್ನುತಟ್ಟುವ, ಉತ್ತೇಜಿಸುವ, ಸ್ವಾಗತಿಸುವ, ವಿಮರ್ಶಿಸುವ, ಪರಿಚಯಿಸುವ, ಪ್ರವೇಶವನ್ನು ದೊರಕಿಸಿಕೊಡುವ ಬರಹವೇ? ಅರ್ಥವಿಸ್ತಾರ ಯಾವುದೇ ಇರಲಿ, ಪ್ರಕಟವಾಗುವ ಬಹುಪಾಲು ಸಾಹಿತ್ಯ ಕೃತಿಗಳು ಈ ಮುನ್ನುಡಿಯ ತೋರಣವನ್ನು ಕಟ್ಟಿಕೊಂಡೇ ಹೊರಬರುತ್ತವೆ. ಇದು ಇವತ್ತು ನಿನ್ನೆಯ ವಿದ್ಯಮಾನವಲ್ಲ. ಕಾಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿ. ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳಂತೂ ಮುನ್ನುಡಿಯ ಮಾತುಗಳಿಲ್ಲದೆ ಮುನ್ನಡೆದದ್ದೇ ಇಲ್ಲವೇನೋ ಎಂಬ ಭಾವವನ್ನು ಮೂಡಿಸುತ್ತವೆ.

ಕೃತಿಯನ್ನು ಕೈಗೆತ್ತಿಕೊಳ್ಳುವ ಮುನ್ನ ಈ ಮುನ್ನುಡಿಯ ಮೇಲೆ ಓದುಗ ಒಮ್ಮೆ ಕಣ್ಣಾಡಿಸಲಿ, ಕೃತಿಯ ಓದಿನ ಬಗ್ಗೆ ಉಮೇದು ಮೂಡಿಸಿಕೊಳ್ಳಲಿ ಎಂಬ ಕೃತಿಕಾರನ ಆಶಯದಿಂದಲೇ ಈ ಮುನ್ನುಡಿ ಎಂಬ ಪ್ರಕಾರ ಅವತಾರ ಎತ್ತಿರಬಹುದು. ಆದರೂ ಓದುಗರೆಂಬ ರಸಿಕರು ಈ ಮುನ್ನುಡಿಯನ್ನು ಓದುತ್ತಾರೆಂದು ಹೇಳಲಾಗದು. ಕೆಲವರಂತೆ ನಾನೂ ಕೃತಿಯನ್ನು ಓದುವ ಮೊದಲು ಮುನ್ನುಡಿಯನ್ನು ಓದುವುದಿಲ್ಲ. ಮುನ್ನುಡಿಯಲ್ಲಿ ಮೂಡಿರಬಹುದಾದ ಅಭಿಪ್ರಾಯಗಳು, ಸ್ಪಂದನಗಳು ನನ್ನ ಓದಿನ ಮೇಲೆ ಪರಿಣಾಮ ಬೀರಬಾರದೆಂಬುದು ಉದ್ದೇಶ. ತೆರೆದ ಮನಸ್ಸಿನಿಂದ ಕೃತಿಯನ್ನು ಓದಿ ನನ್ನ ತೀರ್ಮಾನಕ್ಕೆ ಬರಬೇಕೆಂಬ ಆಶಯವೇ ಇದ್ದಕ್ಕೆ ಕಾರಣ. ಕೃತಿಯನ್ನು ಮುಗಿಸಿ, ನನ್ನ ಅಭಿಪ್ರಾಯಗಳನ್ನು ರೂಪಿಸಿಕೊಂಡ ಮೇಲೆ ಮುನ್ನುಡಿಯನ್ನು ಅಥವಾ ಮೊದಲ ಮಾತನ್ನು ಅಥವಾ ಪ್ರವೇಶವೆಂಬ ಮಾತುಗಳನ್ನು ಓದಿ , ನನ್ನ ಅಭಿಪ್ರಯಾಗಳು ಎಲ್ಲಿ ನಿಲ್ಲುತ್ತವೆ ಎಂದು ತಾಳೆ ನೋಡುತ್ತೇನೆ.

ಹೊಸದಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸುವ ಎಳೆಯ ತಲೆಮಾರಿನವರನ್ನು ಸ್ವಾಗತಿಸುವುದು, ಅವರ ಕೃತಿಯನ್ನು ಪ್ರವೇಶಿಸುವುದಕ್ಕೆ ಅಗತ್ಯ ಮಾತುಗಳನ್ನು ಆಡುವುದು ಒಳ್ಳೆಯ ಕೆಲಸವೇ. ಆದರೆ ಎಲ್ಲ ಮುನ್ನುಡಿಗಳಿಗೂ ಈ ಕರ್ತವ್ಯ ಇರುವುದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕೃತಿಯ ಸ್ಥಾನಮಾನ, ಮಹತ್ವ, ಅದರ ನೆಲೆಬೆಲೆ, ಅದನ್ನು ಪರಿಭಾವಿಸಬೇಕಾದ ಕ್ರಮ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನೂ ಕೆಲವು ಮುನ್ನುಡಿಗಳು ಮಾಡಬೇಕಾಗುತ್ತದೆ; ಮಾಡುತ್ತಲೂ ಬಂದಿವೆ. ಇದು ಸದುದ್ದೇಶವೇ. ವಿಮರ್ಶೆ ಅಲ್ಲದಿದ್ದರೂ ವಿಮರ್ಶೆಯ ಕೆಲಸವನ್ನು ಇಂಥ ಮುನ್ನುಡಿಗಳು ಮಾಡುವುದೂ ಉಂಟು. ಆದರೆ ಕೆಲವು ಘಾಟಿ ಮುನ್ನುಡಿಕಾರರು ಕೃತಿಕಾರರನ್ನು ಹಣಿಯಲು, ತಮ್ಮ ಎದುರಾಳಿ ವಿಮರ್ಶಕರ ಮೇಲೆ ಬಾಣ ಪ್ರಯೋಗಿಸಲು ಈ ಮುನ್ನುಡಿ ಎಂಬ ವೇದಿಕೆಯನ್ನು ಬಳಸಿಕೊಳ್ಳುವುದುಂಟು. ಸಾಹಿತ್ಯ ಪ್ರಕಾರದ ಹೊಸ ಹುಟ್ಟಿನ ಸಂದರ್ಭದಲ್ಲಿ ಹಿಂದಿನ ಸಾಹಿತ್ಯ ಪ್ರಕಾರದ ಮೇಲೆ ಎರಗಿ ಹೊಸದನ್ನು ಸಮರ್ಥಿಸಿಕೊಳ್ಳುವ ಸನ್ನಿವೇಶಗಳನ್ನೂ ನಾವು ನೋಡಬಹುದು. 

ಇದೇನೂ ಆಗದೆ ಒಂದು ಕೃತಿಯನ್ನು ಅದು ಇರುವ ಹಾಗೇ ನೋಡಹೊರಟಾಗಲೂ ಕೆಲವು ಮುಖ್ಯ ಮತ್ತು ಅಗತ್ಯ ಚರ್ಚೆಗಳು ನಡೆಯುವುದುಂಟು. ಯಾವುದೇ ಸಾಹಿತ್ಯ ಕೃತಿ ಮೈತಳೆಯುವುದು ಕಾಲ ದೇಶಗಳ ಚೌಕಟ್ಟಿನಲ್ಲಿಯೇ. ಹೀಗಾಗಿ ಕಾಲ ಕಾಲಕ್ಕೆ ಪಲ್ಲಟಿಸುವ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ವಿದ್ಯಮಾನಗಳ ವಿಮರ್ಶೆಯೂ ಕೃತಿಯ ಹಿನ್ನೆಲೆಯಲ್ಲಿ ನಡೆಯುತ್ತವೆ. ಕೃತಿಕಾರನಿಗಾಗಲಿ, ಓದುಗನಿಗಾಗಲಿ ಇದರಿಂದ ತೊಂದರೆಯಾಗುವುದಿಲ್ಲ. ಅಗತ್ಯ ಭೂಮಿಕೆಯೊಂದು ಸಿದ್ಧವಾಗಿ ಕೃತಿಯ ಅರ್ಥ ವಿನ್ಯಾಸಗಳು, ಆಯಾಮಗಳು ತೆರೆದುಕೊಳ್ಳುತ್ತವೆ. ಇಂಥ ಮುನ್ನುಡಿಗಳು ಕೃತಿಯನ್ನು, ಅದು ಹುಟ್ಟಿದ ಸಾಂಸ್ಕೃತಿಕ ಸಂದರ್ಭವನ್ನು ಕಂಡುಕೊಳ್ಳಲು ಸಹಕಾರಿಯಾಗಿರುತ್ತವೆ. ಇನ್ನೊಂದು ನೆಲೆಯಲ್ಲಿ ಇಂಥ ಮುನ್ನುಡಿಗಳು ಬಹುಮುಖ್ಯ ಸಾಂಸ್ಕೃತಿಕ ವಿಮರ್ಶೆಗಳೂ ಆಗಿರುತ್ತವೆ.

ಮುನ್ನುಡಿ ಎಂಬ ಪ್ರಕಾರ ಕನ್ನಡದಲ್ಲಿ ಒಂದು ಪ್ರತ್ಯೇಕ ಪ್ರಕಾರವಾಗಿ ಬೆಳೆದುಬಂದಿಲ್ಲ. ಕೃತಿಯ ಜೊತೆಗೇ ಅದು ತಳುಕು ಹಾಕಿಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಮುನ್ನುಡಿಯನ್ನು ಬರೆದವರು ತಮ್ಮ ಮುನ್ನುಡಿಗಳನ್ನೇ ವಿಮರ್ಶೆಯಾಗಿ ಪ್ರಕಟಿಸಿರುವುದೂ ಉಂಟು. ಹೊಣೆಯರಿತ ಈ ಮಾದರಿಯ ಬರಹಗಳು ವಿಮರ್ಶೆಯೂ ಹೌದು. ಹಾಗಲ್ಲದ ಬರಹಗಳೂ ಸಾಂಸ್ಕೃತಿಕ ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗಿರುವುದೂ ಇದೆ.

ಬರಹಗಾರರು ತಮ್ಮ ಸಮಗ್ರ ಕೃತಿಯನ್ನು/ ಕೃತಿಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಮುನ್ನುಡಿಗಳನ್ನೂ ಸೇರಿಸಿಕೊಳ್ಳುತ್ತಾರೆ. ಪ್ರತ್ಯೇಕ ಮುನ್ನುಡಿಗಳನ್ನೇ ಸಂಕಲಿಸಿರುವುದು ಇದೆಯಾದರೂ ಅವುಗಳ ಸಂಖ್ಯೆ ಹೆಚ್ಚಿಲ್ಲ.

೨

ಕವಿತೆ, ಕತೆ, ಪ್ರಬಂಧ, ವಿಮರ್ಶೆ, ಹಾಸ್ಯ ಬರಹಳು ಹೀಗೆ ಭಿನ್ನ ಪ್ರಕಾರಗಳ ಆಂಥಾಲಜಿಗಳು ಕನ್ನಡದಲ್ಲಿ ಬಂದಿವೆ. ಆದರೆ ಮುನ್ನುಡಿಗಳ ಆಂಥಲಜಿಗಳು ಪ್ರಕಟವಾಗಿರುವುದು ನನ್ನ ಗಮನಕ್ಕಂತೂ ಬಂದಿಲ್ಲ. ಸ್ವತಃ ಕವಿಯಾಗಿರುವ ಗಂಗಾರಾಂ ಚಂಡಾಲ ಅವರು ಇಂಥದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ʼಮುನ್ನುಡಿಗಳೊಡನಾಟʼ ಆಂಥಾಲಜಿಯಾಗಿ, ಮುನ್ನುಡಿಗಳ ಜೊತೆಯಲ್ಲಿನ ಒಡನಾಟವಾಗಿ, ಆಟವಾಗಿ ಕುತೂಹಲವನ್ನು ಕೆರಳಿಸುತ್ತದೆ.

ಈ ಸಂಕಲನ ೧೯೫೮ರಲ್ಲಿ ಪ್ರಕಟವಾಗಿರುವ ವಿ.ಸೀ. ಅವರ ʼಹೆಜ್ಜೆಪಾಡುʼ ಕವನ ಸಂಕಲನದಿಂದ ಆರಂಭವಾಗುತ್ತದೆ. ಇದಕ್ಕೆ ವಿ.ಸೀ. ಅವರು ಬರೆದುಕೊಂಡಿರುವ ಮಾತುಗಳೇ ಮುನ್ನುಡಿಯಾಗಿವೆ. ೨೦೨೧ರಲ್ಲಿ ಪ್ರಕಟವಾದ ʼಮೀನು ಬೇಟೆಗೆ ನಿಂತ ದೋಣಿ ಸಾಲುʼ ಕವನ ಸಂಕಲನಕ್ಕೆ ಡಿ.ವಿ. ಪ್ರಹ್ಲಾದ್‌ ಅವರ ಮುನ್ನುಡಿಯೊಂದಿಗೆ ಈ ಸಂಕಲನ ಕೊನೆಗೊಳ್ಳುತ್ತದೆ. ಈ ಮುನ್ನುಡಿಗಳ ಆಯ್ಕೆಯಲ್ಲಿ ಗಂಗಾರಾಂ ಯಾವ ಮಾನದಂಡವನ್ನು ಇಟ್ಟುಕೊಂಡು ಮುನ್ನುಡಿಗಳನ್ನು ಆಯ್ಕೆಮಾಡಿದ್ದಾರೆಂಬುದು ನನಗೆ ತಿಳಿದಿಲ್ಲ. ಮುನ್ನುಡಿಗಳಷ್ಟನ್ನೆ ನನಗೆ ಕೊಟ್ಟು ನಾಲ್ಕು ಮಾತು ಹೇಳಲು ಕೋರಿರುವುದರಿಂದ ನನಗೆ ಈ ಮಾನದಂಡ ತಿಳಿಯುವುದು ಸಾಧ್ಯವಾಗಿಲ್ಲ.

ʼನಾಲ್ಕುಮಾತುʼ, ʼಮೊದಲಿಗೆʼ, ʼಬಿನ್ನಹʼ, ʼಅರಿಕೆʼ, ʼಓದುಗರೊಂದಿಗೆʼ ʼಪ್ರಸ್ತಾವನೆʼ ʼಪೀಠಿಕೆʼ- ಹೀಗೆ ಹಣೆಪಟ್ಟಿಗಳು ಬಹಳ ರೂಪದಲ್ಲಿದ್ದರೂ ಇವೆಲ್ಲವೂ ಮುನ್ನುಡಿಗಳೇ;  ಕೃತಿಯ ಪ್ರವೇಶಕ್ಕಿಂತ ಮೊದಲು ಆಡುವ ನುಡಿಗಳೇ. ಗಂಗಾರಾಂ ಈ ಚುಂಗನ್ನೇ ಹಿಡಿದು ಆಯ್ಕೆಮಾಡಿರುವಂತೆಯೂ ಇದೆ. ಕವಿತಾ ಸಂಕಲನಗಳಿಗೆ ಬರೆದ ಮುನ್ನುಡಿಯ ಮೇಲೆಯೇ ಗಂಗಾರಾಂ ಅವರ ಆಸಕ್ತಿ ಕೇಂದ್ರೀಕೃತವಾಗಿರುವುದರಿಂದ ಕಾವ್ಯವನ್ನು ಕುರಿತ ಮುನ್ನುಡಿಗಳೇ ಇಲ್ಲಿವೆ. ೧೯೫೮ರ ಮುನ್ನುಡಿ ಈ ಸಂಕಲನದ ಆರಂಭದಂತೆ ಕಂಡರೂ, ಮಧ್ಯ ೧೯೫೬ರ ಒಂದು ಮುನ್ನುಡಿಯೂ ಇಲ್ಲಿ ಸೇರಿದೆ. ಮುಂದೆ ೧೯೭೦, ೭೨, ೭೩, ೭೬,೭೯ರ ಮುನ್ನುಡಿಗಳು ಕಾಣಿಸಿಕೊಂಡಿವೆ. ಅಂದರೆ ನಡುವಿನ ವರ್ಷಗಳಲ್ಲಿ ಮುನ್ನುಡಿಗಳು ಬಂದಿಲ್ಲವೇ? ಬಂದಿದ್ದರೂ ಗಂಗಾರಾಂ ಗಮನಕ್ಕೆ ಬರಲಿಲ್ಲವೇ?

ಇಂಥ ಪ್ರಶ್ನೆಗಳನ್ನು ಬದಿಗೆ ಸರಿಸಿ, ನೇರವಾಗಿ ಈ ಆಂಥಾಲಜಿಯನ್ನು ಗಮನಿಸುವುದಾದರೆ, ಕನ್ನಡದಲ್ಲಿ ಪ್ರಕಟವಾಗಿರುವ ಬಹುಮುಖ್ಯವಾದ ಮುನ್ನುಡಿಗಳು ಇಲ್ಲಿ ಇವೆ ಎಂದು ಹೇಳಲು ಬರುವುದಿಲ್ಲ. ಕವಿ ಗೋಪಾಲಕೃಷ್ಣ ಅಡಿಗರ ಕವನ ಸಂಕಲನ ʼಭೂಮಿಗೀತʼಕ್ಕೆ ಅನಂತಮೂರ್ತಿ ಅವರು ಬರೆದ ಮುನ್ನುಡಿ ಅಡಿಗರ ಕಾವ್ಯವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಮುಖ್ಯವಾದದ್ದು ಎಂದು ಪರಿಗಣಿಸಲಾಗಿದೆ. ಹಾಗೆಯೇ ʼಅಕ್ಷರ ಹೊಸ ಕಾವ್ಯʼಕ್ಕೆ ಲಂಕೇಶರು ಬರೆದ ಪ್ರಸ್ತಾವನೆ ಕೂಡಾ ನವ್ಯ ಕಾವ್ಯದ ಮುಖ್ಯ ವಿಮರ್ಶೆಯೇ. ಹೀಗೆ ಇನ್ನೂ ಕೆಲವನ್ನು ಹೆಸರಿಸಬಹುದು. ಅಂಥವು ಈ ಸಂಕಲನದಲ್ಲಿಇಲ್ಲದಿರುವುದು ಒಂದು ಕೊರತೆಯಂತೆಯೇ ಕಾಣಿಸುತ್ತದೆ.

೧೯೫೬ರಲ್ಲಿ ಪ್ರಕಟವಾಗಿರುವ ʼನವ್ಯಧ್ವನಿʼ ಕವನ ಸಂಕಲನಕ್ಕೆ ವಿ.ಕೃ.ಗೋಕಾಕರು ಬರೆದಿರುವ ಪೀಠಿಕೆ ಕನ್ನಡದಲ್ಲಿ ಆರಂಭವಾದ ʼನವ್ಯʼ ಪಂಥದ ಬೇರುಗಳು ಎಲ್ಲಿವೆ ಎಂಬುದರ ಹುಡುಕಾಟವೂ ಆಗಿದೆ. ೧೯ನೇ ಶತಮಾನದ ಕೊನೆಯಲ್ಲಿ ಫ್ರಾನ್ಸ್‌ ನಲ್ಲಿ ಪ್ರತೀಕನಿಷ್ಠ (ಸಿಂಬಲಿಸ್ಟ್‌) ಕವಿಗಳ ಗುಂಪು ಬೆಳಕಿಗೆ ಬಂದುದು; ಮೆಲಾರ್ಮ್‌ನಂಥ ಪ್ರತಿಭಾವಂತ ಕವಿ ಯೂರೋಪಿಯನ್‌ ನವ್ಯಕಾವ್ಯದ ಹುಟ್ಟಿಗೆ ಕಾರಣವಾದದ್ದು; ಅವನ ಪ್ರಭಾವ ಇಂಗ್ಲೆಂಡಿನ ಮೇಲಾದದ್ದು; ಹಾಪ್‌ಕಿನ್ಸ್‌ ನಿಂದ ಡಿಲನ್‌ ಥಾಮಸ್‌ವರೆಗೆ ನವ್ಯಕಾವ್ಯದ ಅನೇಕ ಶೈಲಿಗಳು ಬೆಳೆದದ್ದು; ಮುಂದೆ ಔದ್ಯೋಗಿಕ ಕ್ರಾಂತಿ ಮತ್ತು ಜಾಗತಿಕ ಯುದ್ಧದಿಂದ ಹುಟ್ಟಿಕೊಂಡ ಹತಾಶೆ, ಭಗ್ನ ಕನಸು, ಅಸ್ತಿತ್ವದ ಹುಡುಕಾಟಗಳಿಂದಾಗಿ ರೂಪಿತವಾದ ನವ್ಯಕಾವ್ಯ; ಟಿ.ಎಸ್‌. ಎಲಿಯಟ್‌ನಂಥ ಕವಿ ಅನೇಕ ರಾಷ್ಟ್ರಗಳ ಕವಿಗಳ ಮೇಲೆ ಬೀರಿದ ಪರಿಣಾಮ; ಎಲಿಯಟ್‌ ಪರಿಣಾಮದ ನವ್ಯಕಾವ್ಯ ಭಾರತದ ಎಲ್ಲ ಭಾಗಗಳಲ್ಲಿ, ಬಹುಪಾಲು ಭಾರತೀಯ ಭಾಷೆಗಳಲ್ಲಿ ಅವತರಿಸಿದ್ದು -ಹೀಗೆ ಅನೇಕ ಅಂಶಗಳನ್ನು ಗೋಕಾಕ್‌ ಅವರ ಮುನ್ನುಡಿ ರೇಖಿಸುತ್ತದೆ. ʼನವ್ಯದ ತಂತ್ರ ಒಂದೇ. ಆದರೆ ಶೈಲಿ-ಛಂದಸ್ಸುಗಳ ವಿಚಾರದಲ್ಲಿ ಒಬ್ಬೊಬ್ಬ ಕವಿಯೂ ಭಿನ್ನʼ ಎಂಬ ಅಭಿಪ್ರಾಯವನ್ನೂ ಗೋಕಾಕ್‌ ದಾಖಲಿಸುತ್ತಾರೆ.

ಮುಂದೆ ೧೯೫೮ರಲ್ಲಿ ಪ್ರಕಟವಾದ  ವಿ.ಸೀ. ಅವರ ಮುನ್ನುಡಿ ಇದೇ ಅಂಶವನ್ನು ಇನ್ನಷ್ಟು ತಿಳಿಗೊಳಿಸುತ್ತದೆ. ಜೊತೆಗೆ ವಿ.ಸೀ. ರಷ್ಯಾದ ಮಹಾಕ್ರಾಂತಿಯ ಪರಿಣಾಮವಾಗಿ ಹುಟ್ಟಿಕೊಂಡ ಪ್ರಗತಿಶೀಲ ಸಾಹಿತ್ಯ ಭಾರತದಲ್ಲಿ ತಲೆ ಎತ್ತಿದರೂ, ಅದು ಆಳವಾಗಿ, ವಿಸ್ತಾರವಾಗಿ ಬೆಳೆಯದೇ ಹೋದದ್ದಕ್ಕೆ ನಮ್ಮಲ್ಲಿ ಆ ಬಗೆಯ ಆರ್ಥಿಕ ಆವರಣ ಇಲ್ಲದೇ ಹೋದದ್ದು ಕಾರಣವೆಂದು ವಿಶ್ಲೇಷಿಸುತ್ತಾರೆ.

ವಿ.ಸೀ. ಅವರಿಗೆ ನವ್ಯಕಾವ್ಯದ ಬಗ್ಗೆ ಗಂಭೀರ ತಕರಾರುಗಳು ಇದ್ದರೂ, ನವ್ಯದ ಲಯಗತಿ, ಶಿಲ್ಪಗತಿ ಇವರಿಗೆ ಆಕರ್ಷವಾಗಿಯೇ  ಕಂಡದ್ದನ್ನು ಬಿಚ್ಚುಮನಸ್ಸಿನಿಂದಲೇ ಹೇಳುತ್ತಾರೆ.

ತಮ್ಮ ಕಾವ್ಯದ ಬಗ್ಗೆ ಅಡ್ಡಮಾತುಗಳನ್ನು ಹೇಳಿದ ವಿಮರ್ಶಕರ ಅಭಿಪ್ರಾಯಗಳನ್ನು ಪ್ರಸ್ತಾಪಿಸಿ,  ತಮ್ಮ ಕವಿತೆಯನ್ನು ʼಸರಿಯಾಗಿ ಓದದೆ, ಅರ್ಥಮಾಡಿಕೊಳ್ಳದೆ ಅಹಂಕಾರ ಮತ್ತು ಅವಿವೇಕವನ್ನು ತೋರಿದ ಬಗ್ಗೆ ವಿ.ಸೀ. ಸಾತ್ವಿಕ ಕೋಪವನ್ನು ತೋರಿಸುತ್ತಾರೆ. ʼಕವಿತಾ ವಿಮರ್ಶೆಗೆ ಅರ್ಥಜ್ಞತೆ, ಹೃದಯಗ್ರಹಣ ಬೇಕೆಂಬುದು ಅತಿ ಪ್ರಾಥಮಿಕ ಅಂಶʼ ಎಂದೂ ಹೇಳುತ್ತಾರೆ.

ಮುನ್ನುಡಿ ಎಂಬುದು ಹೀಗೆ ತಮ್ಮ ಎದುರಾಳಿಗಳ ಮೇಲೆ  ಝಳಪಿಸುವ ಆಯುಧವೂ ಆಗಿರುವುದನ್ನು ಗಮನಿಸಬಹುದು.

೧೯೭೩ರಲ್ಲಿ ಪ್ರಕಟವಾದ ಶ್ರೀಕೃಷ್ಣ ಆಲನಹಳ್ಳಿ ಅವರ ಕವಿತಾ ಸಂಕಲನ ʼಮಣ್ಣಿನ ಹಾಡುʼಗೆ ಮುನ್ನುಡಿ ಬರೆದಿರುವ ಗೋಪಾಲಕೃಷ್ಣ ಅಡಿಗರು, ನವ್ಯಕಾವ್ಯದ  ಉದಯವನ್ನು ಹೇಳುವುದು ಹೀಗೆ: ʼಮನಸ್ಸಿನ ಕಲ್ಪನೆಯ ಮಟ್ಟದಲ್ಲೇ ಸಾರ್ಥಕ್ಯ ಪಡೆಯುತ್ತ ವಾಸ್ತವವನ್ನು ಕಡೆಗಣಿಸುತ್ತ ಬಂದಿರುವ ನಮ್ಮ ಕಾವ್ಯ ಹೀಗೆ ಮಣ್ಣಿನ ಹಾಡಾಗ ಬಯಸುತ್ತಿರುವುದು, ನಮ್ಮ ದೇಶದಲ್ಲಿ ಕನವರಿಕೆಯ ಯುಗ ಮುಗಿದು ನಿಜವಾದ ಕಸುಬುಗಾರಿಕೆಯ ಯುಗ ಆರಂಭವಾಗುತ್ತಿರುವುದರ ಸೂಚನೆಯೂ ಹೌದು.ʼ

ತಮ್ಮ ಹಿಂದಿನ ನವೋದಯ ಯುಗ, ʼಕನವರಿಕೆಯ ಯುಗʼ ಎನ್ನುವ ಟೀಕೆ ಇಲ್ಲಿರುವುದು ಕಾಣುತ್ತದೆ. ಅಡಿಗರು ಒತ್ತುನೀಡುವ ಇನ್ನೊಂದು ಅಂಶ- ʼಕಸುಬುಗಾರಿಕೆ.ʼ

ಕಸುಬುಗಾರಿಕೆ ಅಡಿಗರಿಗೆ ಮಾತ್ರವಲ್ಲ ನವ್ಯರಿಗೆಲ್ಲ ಎಷ್ಟು ಮುಖ್ಯವಾಗಿತ್ತು ಎಂಬುದು ಇದರಿಂದ ತಿಳಿಯುತ್ತದೆ. ಅಡಿಗರ ʼಕಸುಬುಗಾರಿಕೆʼಯಲ್ಲಿʼಕವಿಸಮಯಗಳಿಂದ ಮುಕ್ತವಾದ, ಬದುಕಿಗೆ ಹತ್ತಿರವಾದ-ಗಡುಸಾದ, ತ್ರಾಣವುಳ್ಳ ಭಾಷೆ, ಜೀವಂತ ಭಾಷೆಯಲ್ಲಿ ಅನುಭವವನ್ನು ಕೆತ್ತುವ ಕಡೆಯುವʼ ಕೌಶಲಗಳು, ಜೀವಧಾತುಗಳು ಸೇರಿವೆ. ಇದೇ ಮುನ್ನುಡಿಯಲ್ಲಿ ಅಡಿಗರು ಇನ್ನೊಂದು ಮಾತನ್ನೂ ಸೇರಿಸುತ್ತಾರೆ: ಸಂಗೀತದ ಗತಿಯಿಂದ ಸಂಪೂರ್ಣ ಮುಕ್ತಿಹೊಂದಿ ಕಾವ್ಯಕ್ಕೆ ಮಾತ್ರ ಸಲ್ಲುವ ವಿಶಿಷ್ಟ ಗತಿಯಲ್ಲಿ ನಡೆಯುವ ಕವನಗಳು…. ಕನ್ನಡ ಕಾವ್ಯದಲ್ಲಿ ಒಂದು ಹೊಸ ಘಾತ ಪಲ್ಲಟವನ್ನು ಸೂಚಿಸುತ್ತವೆ.

ಸಂಗೀತ ಗತಿಯಿಂದ ಸಂಪೂರ್ಣ ಮುಕ್ತವಾಗಬೇಕೆಂಬುದೇ ನವ್ಯಕಾವ್ಯದ ಮುಖ್ಯ ಕಾಳಜಿಯಾಗಿತ್ತು ಎಂಬುದರ ಜೊತೆಗೆ ನವೋದಯದ ಈ ಗುಣ ಕಾವ್ಯಕ್ಕೆ ಪೂರಕವಾಗಿಲ್ಲ ಎಂಬ ವಿಮರ್ಶೆಯೂ ಈ ಮಾತಿನಲ್ಲಿದೆ.

೧೯೭೦ರಲ್ಲಿ ಪ್ರಕಟವಾದ ಎಚ್‌.ಎಂ. ಚನ್ನಯ್ಯ ಅವರ ʼಆಮೆʼ ಕವನ ಸಂಕಲನಕ್ಕೆ ಮುನ್ನುಡಿಯನ್ನು ಜೋಡಿಸಿದ ಯು. ಆರ್‌. ಅನಂತಮೂರ್ತಿ ಅವರು, ನವ್ಯ ಸಾಹಿತ್ಯದಲ್ಲಿ ಇಷ್ಟೊಂದು ಕಾಮ ಯಾಕೆ?-ಎಂಬ ಪ್ರಶ್ನೆಯನ್ನು ಎತ್ತಿಕೊಂಡು, ʼಕೃತಕವಾದ ಜಾತಿಪದ್ಧತಿಗೆ ಅಂಟಿಕೊಂಡ ನಮ್ಮ ಸಮಾಜದಲ್ಲಿ, ಕಾಮದ ಬಗ್ಗೆ ಹೆಚ್ಚು ಸಂಕೋಚಗಳು ನಮ್ಮಲ್ಲಿರುವುದನ್ನು ತೋರಿಸುತ್ತದೆ. ಕಾಮ ಪ್ರೇಮಗಳ ವಿಷಯದಲ್ಲಿ ಅತ್ಯಂತ ವೈಯಕ್ತಿಕವಾದವನು ಮಾತ್ರ ಈ ಜಾತಿಭೇದಗಳನ್ನು ಧಿಕ್ಕರಿಸಿ ನಡೆದುಕೊಳ್ಳುತ್ತಾನೆ- ಎಂದು ಹೇಳುತ್ತಾರೆ. ಗದ್ಯಲಯಗಳನ್ನು ಬಳಸಿಕೊಳ್ಳುವಲ್ಲಿ ಚನ್ನಯ್ಯನವರು ಮಾಡಿರುವ ಪ್ರಯೋಗಗಳ ಕಡೆಗೆ ಗಮನ ಸೆಳೆಯುವ ಅನಂತಮೂರ್ತಿ ಅವರು, ನವ್ಯ ಕಾವ್ಯ ಹೇಗೆ ಗದ್ಯಲಯಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತಿದೆ ಎಂದು ಸೂಚಿಸುತ್ತಾರೆ. 

ಇವೆಲ್ಲ ಮಾತುಗಳೂ ಕಾವ್ಯದ ಭಾಷೆ, ಶೈಲಿ, ಲಯ, ಪ್ರತಿಮೆ, ಶಿಲ್ಪ, ಸಾವಯವ ಸ್ವರೂಪ, ಕಾವ್ಯದ ಕಸುಬುಗಾರಿಕೆ – ಇಂಥ ಅಂಶಗಳ ಸುತ್ತ ತಿರುಗುತ್ತಿವೆಯೇ ಹೊರತು ಅದರಾಚೆಗೆ ಹೋಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. (ಇಲ್ಲಿ ಕಾವ್ಯದ ಬಗೆಗೆ ಮಾತನಾಡುತ್ತಲೇ ಅನಂತಮೂರ್ತಿ ಅವರು, ಒಬ್ಬ ಸಮಾಜವಾದಿಯಾಗಿ, ನಮ್ಮಲ್ಲಿನ ಜಾತಿಪದ್ಧತಿಯ ಬಗೆಗೂ ಆಡಿರುವ ಮಾತುಗಳು ಮುಖ್ಯ ಎನಿಸುತ್ತದೆ.)

೧೯೮೦ ರಲ್ಲಿ ಚಂದ್ರಶೇಖರ ಕಂಬಾರರ ʼಆಯ್ದ ಕವಿತೆಗಳುʼ ಸಂಕಲನಕ್ಕೆ ಮುನ್ನುಡಿ ಬರೆದಿರುವ ಲಂಕೇಶ್‌ ಅವರು  ಆಡಿರುವ ಮಾತುಗಳನ್ನು ಗಮನಿಸಬಹುದಾಗಿದೆ : ʼನನಗನಿಸುವಂತೆ ವಿಮರ್ಶೆ ನಿಜಕ್ಕೂ ಉಪಯುಕ್ತವಾಗುವುದು ಕಾವ್ಯದ ಚರ್ಚೆಯ ಮೂಲಕ ಸಮಾಜ, ಭಾಷೆಯ ಬಗ್ಗೆ ಕಲಿಯಲೆಳಸುವ ವಿದ್ಯಾರ್ಥಿಗಳಿಗೆ : ಸ್ವತಃ ಕವಿಗೆ ಬೇಕಾಗಿರುವುದು ನೇರ ಸಾಮಾಜಿಕ, ರಾಜಕೀಯ ಅಭ್ಯಾಸಗಳು.ʼ

ಸ್ವತಃ ಅಡಿಗರು ಮತ್ತು ರಾಮಚಂದ್ರ ಶರ್ಮರು, ಹಾಡಾಗುವ ಅಂದರೆ ಗೇಯಗುಣವಿರುವ ಕವಿತೆಯನ್ನು ತಿರಸ್ಕರಿಸುವ ಸಂದರ್ಭದಲ್ಲಿ, ಇಡೀ ನವ್ಯ ಕಾವ್ಯವೇ ಗದ್ಯಲಯದ ಕಡೆಗೆ ಒಲವು ತೋರಿಸುತ್ತಿದ್ದ ಹೊತ್ತಿನಲ್ಲಿ ಲಂಕೇಶ್‌ ಅವರು, ಕಂಬಾರರ ಕಾವ್ಯಕ್ಕೆ ಬರೆದ ಇದೇ ಮುನ್ನುಡಿಯಲ್ಲಿ ಹೇಳುವ ಮಾತುಗಳನ್ನು ನೋಡಿ : ʼಶಿಷ್ಟರಾದ ಕವಿಗಳು ತಮ್ಮ ಸುತ್ತಣ ಬದುಕನ್ನು ತಾತ್ಸಾರ ಬೆರೆತ ವ್ಯಂಗ್ಯದಿಂದ ನೋಡುತ್ತ ತಮ್ಮ ಸೂಕ್ಷ್ಮ ಮನೋಭೂಮಿಕೆಯನ್ನು ತಾವೇ ಮೆಚ್ಚಿಕೊಳ್ಳುತ್ತಾರೆ. ಇವರ ಸ್ವಾಭಿಮಾನವೇ ಇವರ ಸ್ವಪ್ರೇಮವಾಗಿ ಇವರು ನೋಡುವ ಯಾವುದಕ್ಕೂ ಸ್ವಂತ ಜೀವವಾಗಲಿ, ವೈಚಿತ್ರ್ಯವಾಗಲಿ ಇರುವುದಿಲ್ಲ. ಕಂಬಾರರು ತಮ್ಮನ್ನು ತಾವು ಹಾಡಿನ ಮಟ್ಟುಗಳಿಗೆ ಮತ್ತು ಜನರ ನುಡಿಕಟ್ಟು ಮತ್ತು ಸ್ಪಂದನಸ್ತರಗಳಿಗೆ ಒಪ್ಪಿಸಿಕೊಳ್ಳುವುದರಿಂದ ಈ ಅಪಾಯದಿಂದ ಬಹಳ ಸಲ ಪಾರಾಗುತ್ತಾರೆ.ʼ

ಇದೇ ವರ್ಷ (೧೯೮೦) ಚನ್ನಣ್ಣ ವಾಲಿಕಾರರು ಪ್ರಕಟಿಸಿದ ʼಪ್ಯಾಂಥರ್ಸ್‌ ಪದ್ಯಗಳಿʼಗೆ ಮುನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು, ಇಂದು ನಾವು ನವ್ಯಕಾವ್ಯದ ಬಂಧವನ್ನು ಭೇದಿಸಿ ಹೊರಬರಬೇಕಾದದ್ದು ತುಂಬಾ ತುರ್ತಿನ ಕೆಲಸವಾಗಿದೆ. ನನಗನ್ನಿಸಿದಂತೆ ಸದ್ಯಕ್ಕೆ ನಮಗಿರುವ ಮಾರ್ಗವೆಂದರೆ ಹಾಡಿನ ಲಯಕ್ಕೆ ಹತ್ತಿರವಾಗುವುದು, ನವ್ಯ ಕಾವ್ಯದ ಕಬಂಧ ಬಾಹುಗಳಿಂದ ಕೊಡವಿಕೊಂಡು ಬಂಡಾಯ ಕವಿಗಳೂ ಜನರಿಗೆ ಹತ್ತಿರವಾದ ಅಥವಾ ಜನರಲ್ಲೇ ಇರುವ ರೂಪಗಳನ್ನು ರೂಪಾಂತರಿಸಿಕೊಳ್ಳಬೇಕಾಗಿದೆ. ತಮ್ಮ ಭಾವನೆಗಳಿಗೆ ಹಾಡಿನ ರೂಪಕೊಡುವ ಯಶಸ್ವೀ ಪ್ರಯತ್ನಗಳು ನಮ್ಮಲ್ಲಿ ಆಗಿವೆ. ಮತ್ತಷ್ಟು ಪ್ರಯೋಗಶೀಲ ಪ್ರಕ್ರಿಯೆಯಲ್ಲಿ ಬಂಡಾಯ ಕಾವ್ಯ ತನ್ನ ಬಂಧವನ್ನು ವಿಭಿನ್ನವಾಗಿಸಿಕೊಳ್ಳಬೇಕಾಗಿದೆʼ ಎಂದು ಹೇಳುತ್ತಾರೆ.

೧೯೭೬ರ ಹೊತ್ತಿಗೆ ನವ್ಯದ ಉಬ್ಬರ ಒಂದಿಷ್ಟು ಕಡಿಮೆಯಾದ ಹೊತ್ತಿನಲ್ಲಿ ಜಿ.ಎಸ್‌.ಶಿವರುದ್ರಪ್ಪನವರು,  ಶಾಮಸುಂದರ ಬಿದರಕುಂದಿ ಅವರ ಸಂಕಲನಕ್ಕೆ (ಅಲ್ಲಮ ಪ್ರಭುವಾದ ಮತ್ತು ಇತರ ಪದ್ಯಗಳು) ಬರೆದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು ಸಮಕಾಲೀನ ಕಾವ್ಯದಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸಲು ನೆರವಾಗಿವೆ. ಕಳೆದುಕೊಂಡದ್ದು, ಪಡೆದದ್ದು, ನಡೆದುಹೋದದ್ದು, ನಡೆಯಬೇಕಾದದ್ದು ಇತ್ಯಾದಿ ವಿಚಾರಗಳ ಚಿಂತನೆ ಇಲ್ಲಿರುವಂತೆ ಕಾಣುತ್ತದೆ. ಅವರ ಮಾತುಗಳು : “ ನವ್ಯತೆಯ ರಭಸದಲ್ಲಿ ಅವಿಚಾರಿತವಾಗಿ ಕಣ್ಣುಮುಚ್ಚಿಕೊಂಡ, ನವೋದಯದ ಎಷ್ಟೋ ಒಳ್ಳೆಯ ಅಂಶಗಳನ್ನು, ತನ್ನೊಳಗೆ ಸಮಾವೇಶ ಮಾಡಿಕೊಳ್ಳಬೇಕೆಂಬ ತಿಳಿವು ಮೆಲ್ಲನೆ ಮೂಡತೊಡಗಿದೆ. ಭಾಷೆಯ ಬಗ್ಗೆ ಇದ್ದ ಪ್ರಜ್ಞಾಪೂರ್ವಕವಾದ ತಾಂತ್ರಿಕ ಚಮತ್ಕಾರಗಳು ಹಿಂದೆಬಿದ್ದು, ಒತ್ತಿಕೊಂಡು ಬಂದ ಅನುಭವಕ್ಕೆ ಸಹಜವಾದ ಭಾಷೆಯನ್ನು ಬಳಸುವ ಪ್ರಯತ್ನಗಳು ಕಾಣಿಸಿಕೊಳ್ಳತೊಡಗಿವೆ….. ನಿಂತ ನೆಲದ ಮೇಲೆ ಬೇರೂರಿ, ತಾನು ಪಡೆದಷ್ಟು ಅನುಭವಗಳನ್ನು ಅರಳಿಸುವ ನಿಸರ್ಗ ಸಹಜವೆಂಬಂಥ ಕ್ರಿಯೆಗೆ ಹಿಂದಿರುಗುತ್ತಿರುವುದು, ಈ ಅನ್ವೇಷಣೆಯ ಕಾಲದ ಆರೋಗ್ಯವಂತಿಕೆಯ ಲಕ್ಷಣವಾಗಿದೆ.”

೧೯೮೩ ರಲ್ಲಿ ಪ್ರಕಟವಾದ ತಮ್ಮ ಕವನ ಸಂಕಲನ ʼಬತ್ತಲಾರದ ಗಂಗೆʼಯ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಅಡಿಗರು, (ಅಂದಿನ)  ಕಾವ್ಯಲೋಕದ ಪರಿಸರ, ವಾತಾವರಣ, ಪರಿಸ್ಥಿತಿಗಳನ್ನು ಪ್ರಸ್ತಾಪಿಸಿದ್ದಾರೆ. ಕಾವ್ಯದ ಬಗ್ಗೆ ಎಲ್ಲ ಕಾಲಕ್ಕೂ ಸಲ್ಲುವ ಮಾತುಗಳು, ಕಾಲಕಾಲಕ್ಕೆ ಬದಲಾಗುವ ಮಾತುಗಳ ಬಗ್ಗೆ ಕೆಲವು ಸಂಗತಿಗಳನ್ನು ಚರ್ಚಿಸಿದ್ದಾರೆ. ಕಾವ್ಯ ಎಲ್ಲಿ ಯಾಂತ್ರಿಕವಾಗುತ್ತದೆ ಎಂಬುದನ್ನೂ ಹೇಳಿದ್ದಾರೆ. ʼಇಂದಿನ ಉತ್ತಮ ಕಾವ್ಯವನ್ನು ಓದುತ್ತಿರುವಾಗಲೂ ಪಂಪ, ಕುಮಾರವ್ಯಾಸ, ಹರಿಹರ, ಮುಪ್ಪಿನ ಷಡಕ್ಷರಿ, ಪುರಂದರ ದಾಸ ಮುಂತಾದ ನಮ್ಮ ಪೂರ್ವಿಕ ಕವಿಗಳ ದನಿಮಾರ್ದನಿಗಳು ಒಳಗೊಳಗೆ ಮೊಳಗುತ್ತಿರುವ ಅನುಭವವೂ ಕಾವ್ಯದ ಸೂಕ್ಷ್ಮ ವಿದ್ಯಾರ್ಥಿಯ ಅರಿವಿಗೆ ಬರಬೇಕು.ʼ ಎಂದೂ ಹೇಳುತ್ತಾರೆ.

ಎಚ್‌.ಎಸ್‌. ಶಿವಪ್ರಕಾಶ್‌ ಅವರು ಶಂಕರ ಕಟಗಿ ಅವರ ʼಮುಸ್ಸಂಜೆ ನೆರಳಲ್ಲಿʼ ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಆಡಿರುವ ಮಾತುಗಳು : ಯಾವುದೇ ಕಾಲದ ಉತ್ಕೃಷ್ಟ ಕಾವ್ಯ ತನ್ನ ಕಾಲದ ಅತ್ಯುನ್ನತ ಮಾನವೀಯ ಮೌಲ್ಯಗಳೊಡನೆ ಸಂಬಂಧ ಏರ್ಪಡಿಸಿಕೊಳ್ಳಲೇಬೇಕು ಎಂದು ನನ್ನ ನಂಬಿಕೆ. ಆದರೆ ಮೌಲ್ಯಗಳು ನೇರವಾಗಿ ಕಾವ್ಯವಾಗುವುದಿಲ್ಲ. ಅವು ಎದೆಯ ಕುದಿಯಲ್ಲಿ, ಒಡಲ ಹಸಿವಲ್ಲಿ, ನಾನು, ನೀವು, ಅವರು, ಇವರು, ಕಾದಿ, ಕೂಡಿ, ಸತ್ತು, ಬಾಳುವ ಜಗತ್ತಿನ ಲಯ-ವಿಲಯಗಳಲ್ಲಿ ಒಂದಾಗಿ ಬಂದಾಗ, ತನ್ನಾತ್ಮಕ್ಕೆ ತಕ್ಕ ರೂಪವನ್ನು, ಭಾಷೆ, ಪ್ರತಿಮೆ, ಲಯಗಳಲ್ಲಿ ಪಡೆದುಕೊಂಡಾಗ ಮಾತ್ರ ಕವಿತೆಯಾಗಬಲ್ಲವು.ʼ

೧೯೯೦ ರ ಹೊತ್ತಿಗೆ ಗೋಪಾಲಕೃಷ್ಣ ಅಡಿಗರು ಪ್ರಕಟಿಸಿದ ʼಸುವರ್ಣ ಪುತ್ಥಳಿʼ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಜಿ. ರಾಜಶೇಖರ ಅವರು ಕವಿ ಅಡಿಗರ ರಾಜಕೀಯ ನಿಲುವುಗಳನ್ನು ಪ್ರಧಾನವಾಗಿಟ್ಟುಕೊಂಡು ಚರ್ಚೆ ನಡೆಸುತ್ತಾರೆ. “ ಕವಿಯೊಬ್ಬನ ರಾಜಕೀಯ ಧೋರಣೆ ಅವನ ಕಾವ್ಯದ ಮೇಲೂ ಪರಿಣಾಮ ಮಾಡುತ್ತದೆ ಎಂದು ಸಾಧಿಸುವುದು ಕಷ್ಟ. ಎಲಿಯಟ್‌ಗೆ ಆಗ ಇಂಗ್ಲೆಂಡಿನ ಬೌದ್ಧಿಕ ವಲಯಗಳಲ್ಲಿ ಮೇಲುಗೈ ಪಡೆದಿದ್ದ ಉದಾರವಾದಿ ಎಡಪಂಥೀಯ ನಿಲುವುಗಳ ಬಗ್ಗೆ ಚೂರೂ ವಿಶ್ವಾಸವಿರಲಿಲ್ಲ. ಅಷ್ಟೇ ಅಲ್ಲ, ಅವನಿಗೆ ಯಹೂದಿಗಳ ಬಗ್ಗೆ ತಿರಸ್ಕಾರವಿತ್ತು. ಯೂರೋಪಿನ ಕ್ರಿಶ್ಷಿಯನ್ನರಿಗೆ ಯಹೂದಿಗಳ ಬಗ್ಗೆ ಲಾಗಾಯ್ತಿನಿಂದಲೂ ಇರುವ ಭಾವನೆ ಅದು ಎಂದೂ ಅದನ್ನು ತಳ್ಳಿಹಾಕಲು ಆಗುವುದಿಲ್ಲ. ಯಾಕೆಂದರೆ ಎಲಿಯಟ್‌ ಎರಡು ಮಹಾಯುದ್ಧಗಳನ್ನು ಕಂಡವ. ಆದರೆ ಅವನ ಶ್ರೇಷ್ಠ ಕಾವ್ಯದ ಹಿನ್ನೆಲೆಯಲ್ಲಿ ಈ ಸಂಗತಿಗಳಿಗೆ ಮಹತ್ವವಿಲ್ಲ.”

ರಾಜಶೇಖರ ಕನ್ನಡದ ಉದಾಹರಣೆಗಳನ್ನೂ ತೆಗೆದುಕೊಳ್ಳುತ್ತಾ ಬರೆಯುತ್ತಾರೆ: ಬೇಂದ್ರೆ ತಮ್ಮ ಕೊನೆಗಾಲದಲ್ಲಿ ಸಾಯಿಬಾಬಾನ ಭಕ್ತರಾಗಿದ್ದರು ಎನ್ನುವುದು ಅವರ ʼಸಣ್ಣ ಸೋಮವಾರʼದಂತಹ ಪದ್ಯಗಳ ಓದಿಗೆ ಹೇಗೆ ಬಾಧಕವಾಗುವುದಿಲ್ಲವೊ ಹಾಗೆಯೇ, ಅಡಿಗರ ಪ್ರತಿಗಾಮೀ ರಾಜಕೀಯ, ಅವರ ಒಳ್ಳೆಯ ಕವಿತೆಗಳ ಓದಿಗೂ ಬಾಧಕವಾಗುವುದಿಲ್ಲ. ಅಂದರೆ ಸದ್ಯದ ರಾಜಕೀಯಕ್ಕೆ ಪ್ರತಿಕ್ರಿಯೆಯಾಗಿ ಅಡಿಗರು ಎತ್ತಿಹಿಡಿಯುವ ವ್ಯಕ್ತಿವಾದಕ್ಕೂ, ಅವರ ಶ್ರೇಷ್ಠ ಕಾವ್ಯದ ವ್ಯಕ್ತಿವಾದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಇಲ್ಲಿ ಇನ್ನೊಂದು ಮುನ್ನುಡಿಯ ಬಗೆಗೂ ಹೇಳಬೇಕು. ಇದು ಕೆ.ಬಾಲಗೋಪಾಲ್‌ (೧೯೯೧) ಅವರು ಎನ್‌.ಕೆ. ಅವರ ʼಲಾಲ್‌ ಬನೊ ಗುಲಾಮಿ ಚೋಡೊʼ ಕವನ ಸಂಕಲನಕ್ಕೆ ಬರೆದಿರುವ ಮುನ್ನುಡಿ. ಇಲ್ಲಿ ಕಮ್ಯುನಿಸ್ಟ್‌ ಪಕ್ಷಗಳ ಇತಿಹಾಸ, ಬೂರ್ಜ್ವಾ ರಾಷ್ಟ್ರೀಯವಾದ, ಕೆಥೋಲಿಕ್‌ ಚರ್ಚ್‌, ಆಂಗ್ಲಿಕನ್‌ ಚರ್ಚ್, ಆರ್‌ ಎಸ್‌ ಎಸ್‌, ಗೋಲ್ವಾಲ್ಕರ್‌, ಹೆಡ್ಗೆವಾರ್‌, ಪ್ರಾದೇಶಿಕ ರಾಷ್ಟ್ರೀಯವಾದ, ಕ್ರಾಂತಿಕಾರಿ ರಾಷ್ಟ್ರೀಯವಾದ, ವಹಾಬ್ಬಿ ಬಂಡಾಯ- ಹೀಗೆ ಎಲ್ಲೆಲ್ಲಿಯೋ ಸುತ್ತಿ ಎನ್‌.ಕೆ. ಕಾವ್ಯಕ್ಕೆ ಬರುವ ಹೊತ್ತಿಗೆ ಓದುಗ ಸುಸ್ತು ಹೊಡೆಯದೆ ಗತ್ಯಂತರವಿಲ್ಲ. 

ಮುನ್ನುಡಿ ಎನ್ನುವ ಪ್ರಕಾರಕ್ಕೆ ನಿರ್ದಿಷ್ಟವಾದ ಚೌಕಟ್ಟಿಲ್ಲ ಎಂಬುದು ನಿಜವಾದರೂ, ಸಮರ್ಥ ಲೇಖಕರು, ವಿಮರ್ಶಕರು ಈ ಮುನ್ನುಡಿಗಳಲ್ಲಿ ಎತ್ತಿರುವ ಚರ್ಚೆಗಳು, ಸಂವಾದಗಳು, ಅಭಿಪ್ರಾಯಗಳು, ಪ್ರಶ್ನೆಗಳು ಕಾವ್ಯದ ಅರ್ಥವನ್ನು ಹಿಗ್ಗಿಸಲು, ಅವುಗಳಿಗಿರುವ ಹೊಸ ಆಯಾಮಗಳನ್ನು ಗ್ರಹಿಸಲು ನೆರವಾಗಿವೆ. ಅಷ್ಟೇ ಅಲ್ಲ, ಕಾವ್ಯದ ದಿಕ್ಕು ದೆಸೆಗಳನ್ನು ಸೂಚ್ಯವಾಗಿಯಾದರೂ ನಿರ್ದೇಶಿಸಿವೆ.

ಕೆಲವು ಮುನ್ನುಡಿಗಳು ಎಲ್ಲವನ್ನೂ ತುಂಬುವ ಹೋಲ್ಡಾಲುಗಳಂತೆ ಕಾಣಿಸಿದರೂ, ಬಹುಪಾಲು ಮುನ್ನುಡಿಗಳು ಹಾಗಾಗದೆ ಸಾಹಿತ್ಯಾಭ್ಯಾಸಿಗಳಿಗೆ ಉಪಯುಕ್ತ ನೆರವನ್ನು ನೀಡಿವೆ. ಕೃತಿಕಾರನ ಪ್ರಯೋಗಶೀಲತೆ, ಸಾಧನೆಗಳ ಮೇಲೆ ಬೆಳಕು ಚೆಲ್ಲದೆ ಒಂದು ಕಾಲದ ಕಾವ್ಯದ ಮೇಲೆ, ಸಾಹಿತ್ಯದ ಮೇಲೆ, ʼಯುಗಧರ್ಮʼದ ಮೇಲೆ ಬೆಳಕುಬಿಟ್ಟು ಕಾವ್ಯದ ಮುನ್ನಡೆಗೆ ಕಾರಣವಾಗಿವೆ.

ದೊಡ್ಡ ಪ್ರಮಾಣದಲ್ಲಿ ಮುನ್ನುಡಿಗಳನ್ನು ಸಂಗ್ರಹಿಸಿ, ಜೋಡಿಸಿ ಪ್ರಕಟಿಸುತ್ತಿರುವ ಗಂಗಾರಾಂ ಚಂಡಾಳ ಅವರ ಆಸಕ್ತಿ, ಕ್ರಿಯಾಶೀಲತೆ ಮೆಚ್ಚುಗೆಗೆ ಅರ್ಹವಾಗಿವೆ. ಅವರಿಗೆ ಅಭಿನಂದನೆ.

‍ಲೇಖಕರು Admin

5 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading