ನೋಡಲೇಬೇಕಾದ ಸಿನಿಮಾ..

 

 

 

 

ಜ್ಯೋತಿ ಎ

 

 

 

 

 

ಬಹಳ ದಿನಗಳ ನಂತರ ನಿನ್ನೆ ಮಗನ ಶಿಫಾರಸ್ಸಿನ ಮೇರೆಗೊಂದು ಹಿಂದಿ ಸಿನಿಮಾ ನೋಡಿದೆವು. ಹೆಸರು Newton. ಇದು ಹಿಂದಿ ಹೇರಿಕೆಯಂತೂ ಅಲ್ಲವೇ ಅಲ್ಲ!  😉

ಒಂದು ಗಹನವಾದ ವಿಷಯವನ್ನು ಕೇಂದ್ರವಾಗಿಸಿಕೊಂಡು ಸರಳವಾಗಿ ಹೆಣೆದಿರುವ ಚಿತ್ರ Newton ನಮ್ಮನ್ನು ಸುಮಾರು ಎರಡು ಗಂಟೆ ಸರಾಗವಾಗಿ ತನ್ನಲ್ಲಿ ತಲ್ಲೀನವಾಗುವಂತೆ ಮಾಡಿಬಿಡುತ್ತದೆ. ನಂತರವೂ ಚಿತ್ರವನ್ನು ಸರಿಯಾಗಿ ಅರ್ಥೈಸಿಕೊಂಡರೆ ನಮ್ಮನ್ನು ಗಂಭೀರ ಚಿಂತೆ-ಚಿಂತನೆಗಳಿಗೆ ಒಳಪಡಿಸದೇ ಇರದು.

ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಅಡಿಪಾಯವಾಗಿರುವ ನಮ್ಮ ಸಾರ್ವತ್ರಿಕ ಚುನಾವಣೆಗಳ ಇಂದಿನ ವಸ್ತುಸ್ಥಿತಿಯನ್ನು Newton ಸಿನಿಮಾದಲ್ಲಿ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಇದಕ್ಕಾಗಿ ನಕ್ಸಲ್ ಚಟುವಟಿಕೆಯ ಅರಣ್ಯಪ್ರದೇಶದ ಸಂದರ್ಭವನ್ನು ಬಳಕೆ ಮಾಡಿಕೊಳ್ಳುವ ನಿರ್ದೇಶಕ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಚುನಾವಣಾ ಪ್ರಜಾತಂತ್ರ ವಹಿಸುತ್ತಿರುವ ಪಾತ್ರದ ಬಗ್ಗೆ ಸಾಂಕೇತಿಕವಾಗಿ ವಿಶ್ಲೇಷಿಸುತ್ತಾರೆ. ಹಾಗೆಂದು ಎಲ್ಲೂ ಈ ಚಿತ್ರ ಚುನಾವಣೆಗಳ ಪರ-ವಿರೋಧ, ಪ್ರಭುತ್ವದ ಪರ-ವಿರೋಧ ತೀರ್ಪು ನೀಡುವಂತೆ ತೋರುವುದಿಲ್ಲವಾದರೂ ಸಂದೇಶವನ್ನು ಮಾತ್ರ ಸ್ಪಷ್ಟವಾಗಿ ಸಂವಹನ ಮಾಡಲಾಗುತ್ತದೆ.

ಚಿತ್ತೀಸ್‌ಗಢದಂತಹ ಮಾವೋವಾದಿ ಚಟುವಟಿಕೆಯ ಪ್ರದೇಶಗಳಲ್ಲಿ ಆದಿವಾಸಿಗಳ ಆತಂಕವನ್ನು, ಅವರ ಬಡತನವನ್ನು, ಅನಕ್ಷರತೆ-ಅಜ್ಞಾನ-ಅಮಾಯಕತೆಗಳನ್ನು, ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ಅರಣ್ಯಸಂಪತ್ತನ್ನು ಲೂಟಿಮಾಡುತ್ತ ಶೋಷಣೆಗೊಳಪಡಿಸಿರುವ ಪ್ರಭುತ್ವದ ಕರಾಳ ಮುಖವನ್ನು Newton ಚಿತ್ರದಲ್ಲಿ ಕಾಣಬಹುದು. ಸರ್ಕಾರಿ ಶಾಲೆ ಎಂದು ಹೆಸರಿರುವ ಮುರುಕಲು, ಪಾಳು ಬಿದ್ದ ಕಟ್ಟಡವೊಂದನ್ನು ಚುನಾವಣಾ ಮತಗಟ್ಟೆಗೆ ಆಯ್ಕೆ ಮಾಡಿಕೊಳ್ಳುವ ನಿರ್ದೇಶಕ ಆದಿವಾಸಿಗಳ ಬದುಕಿಗೆ ಪ್ರಭುತ್ವ ನೀಡಿರುವ ಮರ್ಯಾದೆಯನ್ನು ಬಿಂಬಿಸುತ್ತಾರೆ.

ಇಡೀ ಚಿತ್ರ ನಕ್ಸಲ್ ಪ್ರದೇಶದ ಒಂದು ಬೂತ್‌ನಲ್ಲಿ ಒಂದು ದಿನದ ಚುನಾವಣೆ ಪ್ರಕ್ರಿಯೆಯಲ್ಲಿರುವುದು ವಿಶೇಷ. ಹಾಡುಗಳಿಲ್ಲದ, ಅಸಭ್ಯ-ಅಸಹ್ಯ ತೋರ್ಪಡಿಕೆಗಳಿಲ್ಲದ, ಕೇವಲ ಕಥಾವಸ್ತು-ಹಂದರ, ಮನಮುಟ್ಟುವ ಸಂಭಾಷಣೆಗಳು ಮತ್ತು ಅಭಿನಯದಿಂದ ಮನಸೂರೆಗೊಳ್ಳುವ Newton ದೇಶದ ಚುನಾವಣೆಗಳ ಕಡುವಿಡಂಬನೆಯಾಗಿದೆ.

ಆದಿವಾಸಿ ಶಾಲಾ ಶಿಕ್ಷಕಿಯ ಪಾತ್ರ ಹೇಳಿ ಮಾಡಿಸಿದಂತಿದೆ. ಆಕೆಯ ಸಂಭಾಷಣೆ ಚುಟುಕಾಗಿಯೂ ಅತ್ಯಂತ ಪರಿಣಾಮಕಾರಿಯೂ ಅಗಿದ್ದು, ಆದಿವಾಸಿ ಜನಸಮುದಾಯದ ವಕ್ತಾರೆಯಾಗುತ್ತಾಳೆ ಅವಳು. “ನಾನು ನಿರಾಶಾವಾದಿಯಲ್ಲ, ಆದಿವಾಸಿ” ಎನ್ನುವ ಆಕೆ ಇಡೀ ಚಿತ್ರಕ್ಕೆ ಬಹುಶಃ ಆಶಾವಾದದ ಮೆರುಗನ್ನು ನೀಡುತ್ತಾಳೆ. ಚಿತ್ರದ ತುಂಬಾ ಅನೇಕ ರಾಜಕೀಯ ಕುತಂತ್ರಗಳನ್ನು ವಿಡಂಬನಾತ್ಮಕವಾಗಿ ಸೇರಿಸಲಾಗಿದೆ. ಆದಿವಾಸಿ ಮಕ್ಕಳ ಮೇಲೆ ಹಿಂದಿ ಹೇರಿಕೆ, ರಾಮಾಯಣದ ಪುಷ್ಪಕವಿಮಾನ, ಇತ್ಯಾದಿಗಳು. ಧನದಾಹಿ ತಂದೆಯ ಒತ್ತಾಯಕ್ಕೆ ಮಣಿಯದೆ ಬಾಲ್ಯವಿವಾಹವನ್ನು ಧಿಕ್ಕರಿಸುವ ನಾಯಕನಟನ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡಲಾಗುತ್ತದೆ.

ಪ್ರಜಾತಂತ್ರದ ಭಾಗವಾದ ಚುನಾವಣೆ ನಡೆಸಿಯೇ ತೀರಬೇಕೆಂಬ ನಾಯಕನಟನ ಕರ್ತವ್ಯಪ್ರಜ್ಞೆ ಮತ್ತು ಆಶಯಕ್ಕೆ ವ್ಯತಿರಿಕ್ತವಾಗಿ ಮಾವೋವಾದಿಗಳ ಕರೆಗೆ ಸ್ಪಂದಿಸುವ ಸೇನಾನಾಯಕ ಚುನಾವಣೆಗಳನ್ನು ತಡೆಗಟ್ಟುವ ಯತ್ನದಲ್ಲಿರುವಾಗ ಬೂತ್ ಹೊರಗೆ ಗುಂಡಿನ ಸದ್ದು ಕೇಳಿ ಎಲ್ಲರೂ ಗಾಬರಿಯಾಗುವರು. ಆಗ ಆದಿವಾಸಿ ಶಿಕ್ಷಕಿ ನೋವಿನಿಂದ ದಿಟ್ಟತನದಿಂದ ಹೇಳುತ್ತಾಳೆ, “ನಾವು ಇದರೊಂದಿಗೇ ಬೆಳೆದೆವರು.”

ನಮ್ಮ ಸಂಪದ್ಭರಿತ ಅರಣ್ಯ ಪ್ರದೇಶಗಳು ಬಹುರಾಷ್ಟ್ರೀಯ ಗಣಿಗಾರಿಕಾ ಕಂಪನಿಗಳ ಕಪಿಮುಷ್ಟಿಗೆ ಹೋಗುವ ಮುನ್ನ ಪ್ರಭುತ್ವದ ಪಾಲುದಾರಿಕೆಯನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ನಕ್ಸಲ್ ಪ್ಯಾಕೇಜ್ ಎಂಬುದು ಜನರ ಅಭಿವೃದ್ಧಿಯ ಕಡೆ ವ್ಯಯಿಸುವ ಬದಲು ಹೇಗೆ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ದುರ್ಬಳಕೆ ಮಾಡುತ್ತಾ ಜನರ ಬಡತನವನ್ನು ಶಾಶ್ವತಗೊಳಿಸಲಾಗುತ್ತದೆ ಎಂದು ಸೂಚ್ಯವಾಗಿ ತೋರಿಸಲಾಗಿದೆ.

ಶೋಷಿತ ಜನರ ಆತಂಕಗಳನ್ನು, ಬದುಕುವ ಕನಸುಗಳನ್ನು ಬಂದೂಕಿನ ನಳಿಕೆಯ ಮೂಲಕ ಹತ್ತಿಕ್ಕುವ ಸೇನೆಯ ಯತ್ನವೇ ನಮ್ಮ ಚುನಾವಣಾ ಪ್ರಜಾತಂತ್ರವನ್ನು ವಿಫಲಗೊಳಿಸುತ್ತಿದೆ ಎಂಬುದನ್ನೂ Newton ಸೂಚಿಸುತ್ತದೆ.

ಒಟ್ಟಾರೆ Newton ನಮ್ಮ ಪ್ರಜ್ಞೆಯನ್ನು ಎಚ್ಚರಿಸುವ, ನಮ್ಮೊಳಗೆ ಗದ್ದಲ ಹುಟ್ಟಿಸುವ ಗದ್ದಲರಹಿತ ಗೊಂದಲರಹಿತ ನೋಡಲೇಬೇಕಾದ ಸಿನಿಮಾ.

‍ಲೇಖಕರು avadhi

October 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: