‘ತುಂಬೆ ಹೂ’ವಿನ ಹೂಕಣಿವೆ

ಗಿರಿಜಾ ಶಾಸ್ತ್ರಿ 

ಪ್ರೀತಿಯ ಸುಮಿತ್ರಾ ಅವರೇ,

ನೀವು ನನ್ನ ಗೆಳತಿ ಮಮತಾ ಅವರ ಮೂಲಕ ಕಳುಹಿಸಿದ “ತುಂಬೆ ಹೂ” ತಲಪಿತು. ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಪ್ರೀತಿಯನ್ನು ಹೂವಿನ ಮೂಲಕವಲ್ಲದೇ ಇನ್ಯಾವುದರ ಮೂಲಕ ಅನನ್ಯವಾಗಿ ವ್ಯಕ್ತಪಡಿಸಲು ಸಾಧ್ಯ, ಅಲ್ಲವೇ?

ಸೋಫಾದಲ್ಲಿ ಒಂದೇ ಆಸನದಲ್ಲಿ ಕುಳಿತು ಒಮ್ಮಗೆ ನಿಮ್ಮ ಕವಿತೆಗಳನ್ನು ಓದಿ ಮುಗಿಸಿದೆ.. ಕವಿತೆಗಳನ್ನು ಹೀಗೆ ಒಂದೇ ಸಿಟ್ಟಿಂಗ್ ನಲ್ಲಿ ಓದಲು ಸಾಧ್ಯವಾಗುವುದು ಕೂಡ ಆ ಕವಿತೆಗಳಿಗಿರುವ ಗುಣಾತ್ಮಕ ಅಂಶವನ್ನೇ ಹೇಳುತ್ತದೆ.

ನಿಮ್ಮ ಕವಿತೆಗಳನ್ನು ಓದಿ ಕೆಳಗಿಟ್ಟ ಕೂಡಲೇ ನನಗೆ ಒಂದು ಪುಷ್ಪ ಪ್ರದರ್ಶನದ ಪ್ರದಕ್ಷಿಣೆ ಮಾಡಿಬಂದ ಅನುಭವವಾಯಿತು. ಈ ಪ್ರದರ್ಶನ ನಮ್ಮ ಬೆಂಗಳೂರಿನ ಲಾಲ್ಬಾಗಿನ ಹೂಗಳ ಪ್ರದರ್ಶನವಲ್ಲ. ಅಲ್ಲಿ ಒಂದು ರೀತಿಯ ವ್ಯವಸ್ಥೆಯಿರುತ್ತದೆ. ವ್ಯವಸ್ಥೆಯೆಂದ ಕೂಡಲೇ ಅದು ಕೃತಕವಾದದ್ದೂ ಅಲ್ಲವೇ?

ಇಲ್ಲಿ ಪ್ರಕೃತಿ ಒಂದು ರೀತಿ ಯಾದೃಚ್ಛಿಕವಾಗಿ ಹೂಗಳನ್ನು ಚೆಲ್ಲಿದ್ದಾಳೆ. ಇದೊಂದು ಹೂವಿನ ಜಾತ್ರೆ, ಹೂವಿನ ತೇರು. ಈ ಜಾತ್ರೆಗೆ ಒಂದು ವ್ಯವಸ್ಥೆಯಿಲ್ಲ, ಕ್ರಮವಿಲ್ಲ. ಕಾಡು ಕೂಡ ಇದೇ ರೀತಿಯ ಒಂದು  ಆದ ತಾಣವೇ ಅಲ್ಲವೇ? ಆ ಹೂಕಾಡಿನ ದರ್ಶನವನ್ನು ಮಾಡಿಸಿದ್ದೀರಿ. ತಮ್ಮಷ್ಟಕ್ಕೆ ತಾವು ಅರಳುವ ಉದುರುವ ಇವುಗಳ ಸೂಕ್ಷ್ಮ ಪ್ರಕ್ರಿಯೆಗಳನ್ನು ವಸ್ತುವಿಷ್ಠ ದೂರದಿಂದ ಕಂಡಿರಿಸಿದ್ದೀರಿ. ಅವು ಇವೆ ಅದಕ್ಕಾಗಿ ಇವೆ ಎನ್ನುವುದು ನಿಜವಾದರೂ ಅವುಗಳನ್ನು ಹೀಗೆ ನೋಡವುದಿದೆಯಲ್ಲಾ ಅದಕ್ಕೆ ವಿಶೇಷ ಕಣ್ಣುಗಳಿರಬೇಕು.

“ಯಾರೂ ತುಳಿಯದ ಹಾದಿಯ ಬದಿಯಲಿ ಮೌನದೊಳಿರುವ ಈ ಚೆಲುವೆಯರ” ಸರಳತನ ಮುಗ್ಧತೆ ಕೂಡ ಮಹತ್ವದ ಅನುಭವಕ್ಕೆ, ಅನುಭಾವಕ್ಕೆ ದಾರಿ ಮಾಡಿಕೊಡಬಲ್ಲದು. ಈ ಹೂವುಗಳಿಗೆ ಮಹತ್ವಾಕಂಕ್ಷೆಗಳಿಲ್ಲ. ಈ ಕಾರಣಕ್ಕೇ ಈ ಕಿರುಹಣತೆUಳು ಕವಿತೆಳಾಗಿವೆ ಎಂದು ಎಚ್. ಎಸ್. ಆರ್ ಹೇಳಿರುವುದು ನಿಮಗೆ ಮತ್ತು ನಿಮ್ಮ ಕವಿತೆಗಳಿಗೆ ಕೊಟ್ಟಿರುವ ಕಾಂಪ್ಲಿಮೆಂಟ್ ಆಗಿದೆ. ಅದಕ್ಕೇ ಅವು ಪಟ್ಟಣಕ್ಕೆ ಬಂದು ಲಾಲ್ಬಾಗಿನೊಳಗೆ ಪ್ರದರ್ಶನದ ಭಾಗವಾಗಲು ಲಾಬಿ ಮಾಡುವುದಿಲ್ಲ ಜಿ. ಎಸ್ ಎಸ್ ಅವರ ‘ಹಣತೆ’ ಪದ್ಯ ನೆನಪಿಗೆ ಬರುತ್ತದೆ. ಅದರಲ್ಲಿ ಅಹಂಕಾರ ಕಳೆದುಕೊಂಡ ನಮ್ರತೆಯೇ ಈ ಹೂಗಳಿಗೂ ಇದೆ.

ಈ ಕವಿತೆಗಳನ್ನು ಓದಿ ಎಷ್ಟು ಆಪ್ಯಾಯಮಾವೆಂದರೆ ಹೂಕಾಡಿನೊಳಗೆ ಹೊಕ್ಕು ಶಕ್ತಿಹ್ರಾಸವಾಗುತ್ತಿರುವ ಚೈತನ್ಯಯವನ್ನು ರೀಚಾರ್ಜ್ ಮಾಡಿಕೊಂಡಂತಾಗುತ್ತದೆ. ಇಲ್ಲಿರುವವರೆಲ್ಲಾ ಹೂಹುಚ್ಚಿಯರೇ, ಹೆಣ್ಣಿನ ಆತ್ಯಂತಿಕ ಪ್ರತೀಕಗಳು. ಪ್ರಕೃತಿ ಕೂಡ ಒಬ್ಬ ದೊಡ್ಡ ಹುಚ್ಚಿಯೇ. ಅವಳಿಗೆ ವೈವಿಧ್ಯತೆಯ ಹುಚ್ಚು. ಅವಳ ಮೇಲೆ ಎಸಗುವ ಅನ್ಯಾಯಕ್ಕೆ ಅವಳು ಭೂಕಂಪವಾಗಿಯೋ, ಸುನಾಮಿಯಾಗಿಯೋ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ. ಆದರೆ ನಮ್ಮ ಅಮ್ಮಚ್ಚಿ, ಅಕ್ಕು ಇವರಿಗೆಲ್ಲ ಅದು ಸಾಧ್ಯವಿಲ್ಲ. ಏಕೆಂದರೆ ಅವರ ಮೇಲೆ ಒಂದು ವ್ಯವಸ್ಥೆಯ ‘ದಂಡ’ ತಲತಲಾಂತರದಿಂದ ಜಾಗರೂಕ ಚಲಾಯಿಸುತ್ತಿದೆಯಲ್ಲಾ?

photo: ಕೆ ಎಸ್ ರಾಜಾರಾಂ

ಪ್ರಕೃತಿಯ ಹುಚ್ಚನ್ನು ಗಮನಿಸಲು ವಿಶೇಷ ಕಣ್ಣುಗಳಿರಬೇಕು ಎಂದೆ, ಇದು ನಿಮ್ಮ ‘ಹೂ ಹಸಿರಿನ ಮಾತು’ ಓದಿದಾಗಲೇ ನನಗೆ ವೇದ್ಯವಾಗಿತ್ತು. ತಮಿಳಿನ ‘ಕುರಿಂಜಿ’ ಹೂವನ್ನು ಕನ್ನಡಕ್ಕೆ ಹೇಗೆ ಅನುವಾದಿಸಬೇಕೆಂದು ತಿಳಿಯದೇ ಬಹಳ ದಿನ ಒದ್ದಾಡಿದ್ದೆ. ಹೂವಿಗೆ ಭಾಷಾಂತರದ ಅಗತ್ಯವಿಲ್ಲ, ಹಾಗೆಯೇ ಅವು ನೀಡುವ ಅನುಭಕ್ಕೂ ಎನ್ನುವಂತೆ, ಕುರಿಂಜಿ ಎಲ್ಲಾ ಭಾಷೆಯಲ್ಲಿಯೂ ಕುರಿಂಜಿಯೇ. ಅದಕ್ಕೆ ಅದೇ ಉಪಮೆ ಎನ್ನುವಂತೆ, ಹನ್ನೆರೆಡು ವರ್ಷಗಳಿಗೊಮ್ಮೆ ಅರಳುವ ಈ ಅಪರೂಪದ ಸುಂದರಿಯ ಬಗ್ಗೆ ನೀವೊಮ್ಮೆ ಹೇಳಿದ್ದಿರಿ. ಎಷ್ಟೆಲ್ಲಾ ಹೂವಿನ ಕತೆಗಳಿವೆ ಇಲ್ಲಿ ಸುಮಿತ್ರಾ! ಹೂಗಳೊಂದಿಗೆ ನಿಮ್ಮ ತನ್ಮಯತೆ ಮತ್ತು ಎಚ್ಚರ ಬೆರಗು ಹುಟ್ಟಿಸುವಂತಹದ್ದು.

“ಡೈಸಿ ಹೂ ಅರಳುತ್ತದೆ. ಹೇಗೆಂದರೆ, ತನ್ನ ಬುಡದಲ್ಲಿರುವ ಮಂಜಿನ ಹನಿಗಳು ಸೂರ್ಯನ ಶಾಖಕ್ಕೆ ಕರಗಬಾರದು ಎನ್ನುವಂತೆ ತನ್ನ ದಳಗಳನ್ನು ಅರಳಿಸಿ ಆ ಮಂಜಿನ ಪುಟ್ಟ ಹನಿಗಳನ್ನು ರಕ್ಷಿಸುತ್ತಿದೆಯೋ” ಎನ್ನುವಂತೆ ಆಂಗ್ಲ ಕವಿಯೊಬ್ಬನಿಗೆ ಕಾಣುತ್ತದೆ ಎಂದು ಬಿ. ಎಂ. ಹೆಗ್ಡೆಯವರು ಒಮ್ಮೆ ಹೇಳುತ್ತಿದ್ದರು. ಕವಿಯ ಕಲ್ಪನೆ ಎಷ್ಟು ಅದ್ಭುತ ನೋಡಿ. ಪ್ರಕೃತಿಯಲ್ಲಿರುವ ಪೊರೆಯುವ, ಕಾಯುವ ಗುಣವನ್ನು ಎಷ್ಟು ಚೆನ್ನಾಗಿ ಆ ಕವಿ ಹೇಳುತ್ತಾನೆ. ಅದಲ್ಲದೇ ‘ಡಾಫೊಡಿಲ್ಸ್’ ಗಳನ್ನು ಹೊರತುಪಡಿಸಿ ವಡ್ರ್ಸ್ವರ್ತ್ನನ್ನು ನೆನೆಯುವುದು ಸಾಧ್ಯವೇ?

ನೀವು ಮಲೆನಾಡ ಹೆಣ್ಣಾದುದರಿಂದಲೋ ಏನೋ ಆ ಹುಚ್ಚು ಹಿಡಿಸುವ ಮೋಹಕ ಹೂಗಳೊಡನೆ ಚಂದವಾಗಿ ಮಾತನಾಡಲು ಸಾಧ್ಯವಾಗಿದೆ. ನಿಮ್ಮ ಬಗ್ಗೆ ಅಸೂಯೆಯಾಗುತ್ತದೆ. ನಿಮ್ಮ ಕವಿತೆಗಳ ಓದು ಹೂ ಕಣಿವೆಯನ್ನೊಮ್ಮೆ (Velley of Flowers ) ನೋಡಲೇಬೇಕೆಂಬ ನನ್ನ ಹುಚ್ಚನ್ನು ತೀವ್ರಗೊಳಿಸಿದೆ. ಈಗ ನಾನೂ ಹೂಹುಚ್ಚಿಯಾಗಿದ್ದೇನೆ

‍ಲೇಖಕರು avadhi

October 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ahalya Ballal

    ಪರಿಚಯವೇ ಇಷ್ಟು ಲವಲವಿಕೆಯಿಂದಿರಬೇಕಾದ್ರೆ …… 🙂

    ಅಭಿನಂದನೆ ಇಬ್ಬರಿಗೂ!

    ಪ್ರತಿಕ್ರಿಯೆ
  2. ಹೇಮಾ

    ಅಬ್ಬಾ!!! ಹೂವಿನ ಪರಿಮಳವನ್ನು ಅದರ ಅಂದ ಚೆಂದವನ್ನು ತೆರೆದಿಟ್ಟ ಇಬ್ಬರಿಗೂ ಅಭಿನಂದನೆಗಳು ( ಮೇಡಂ)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: