‘ಏನ್ರೀ, ದಾರಿ ತಪ್ಪಿ ಬಂದ್ರಾ ಹೆಂಗೇ?’ ಎಂದೆ..

5

 ಯಾನದಲ್ಲಿ

ಸುಳ್ಯದ ಪ್ರವಾಸಿಮಂದಿರದಲ್ಲಿ ಮಲಗಿದ್ದ ನನಗೆ ನಸುಕಿನಲ್ಲೇ ಎಚ್ಚರವಾಗಿತ್ತು. ಮನೆಯಲ್ಲಾದರೆ ಏನಾದರೂ ಕೆಲಸವಿದ್ದಾಗ ಬಿಟ್ಟರೆ ಉಳಿದ ದಿನಗಳಲ್ಲಿ ನಾನು ತಡವಾಗಿಯೇ ಏಳುವದು. ಅರ್ಧರಾತ್ರಿಯ ತನಕ ಓದುತ್ತಲೋ, ಬರೆಯುತ್ತಲೋ ಇರುವ ಕಾರಣವನ್ನು ನಾನು ಆ ನನ್ನ ಆಲಸಿತನಕ್ಕೆ ಕೊಟ್ಟುಕೊಳ್ಳುತ್ತೇನೆ. ಆದರೆ ಊರು ಬಿಟ್ಟು ಹೊರಗಡೆ ಬಂದಾಗ ಮಾತ್ರ ನಾನು ಆಲರ್ಟ್ ಆಗಿರುತ್ತೇನೆ. ಅವತ್ತು ಕೂಡ ನಾನೇ ಬೇಗ ಎಚ್ಚರಾದದ್ದು ಅಂದುಕೊಂಡು ಎದ್ದರೆ ಪಕ್ಕದಲ್ಲಿ ಮಲಗಿದ್ದ ಸ್ವಾಮಿ ಕಾಣಲಿಲ್ಲ. ಅವರಾಗಲೇ ಎದ್ದು ಹೋಗಿದ್ದರು. ಆಚೆ ರೂಮಿನಲ್ಲಿದ್ದ ಸೈಕಲ್ ಯಾನದ ಸ್ನೇಹಿತರೂ ಕಾಣಲಿಲ್ಲ. ಎಲಾ ಇವರಾ! ಎಂದುಕೊಳ್ಳುತ್ತ ಹೊರಗೆ ಬಂದು ನೋಡಿದೆ. ಆ ಮುಂಜಾವಿನ ವಾತಾವರಣ ಪ್ರಶಾಂತವಾಗಿತ್ತು.

ಹಿಂದಿನ ದಿನ ತಡರಾತ್ರಿಯಲ್ಲಿ ಬಂದು ಆ ಪ್ರವಾಸಿಮಂದಿರ ತಲುಪಿದ್ದೆ. ಆ ಅರೆಬರೆ ಬೆಳಕಿನಲ್ಲಿ ಅಲ್ಲಿನ ಪರಿಸರವನ್ನ ಗಮನಿಸಲು ಹೇಗೆ ಸಾಧ್ಯ? ಸಾಕಷ್ಟು ಎತ್ತರದ ಗುಡ್ಡದ ನೆತ್ತಿಯ ಮೇಲಿದ್ದ ಹಳೆಯ ಶೈಲಿಯ ಆ ಪ್ರವಾಸಿಮಂದಿರದ ಸುತ್ತ ಮಾವು ಮುಂತಾದ ಮರಗಳಿದ್ದವು. ಕೆಳಗಿದ್ದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸದ್ದು ಅಲ್ಲಿನ ನೀರವತೆಯನ್ನ ಆಗಾಗ್ಗೆ ಕದಡುತ್ತಿತ್ತು. ಇನ್ನೂ ಸೂರ್ಯ ದಿಗಂತದಂಚಲ್ಲಿ ಕಾಣಿಸಿಕೊಂಡಿರದಿರುವದಕ್ಕೆ ಸಣ್ಣಗೆ ಚಳಿಯೆನ್ನಿಸುತ್ತಿತ್ತು. ಯಾರೂ ಕಾಣದ್ದಕ್ಕೆ ಎಲ್ಲ ಸೇರಿ ಊರು ಸುತ್ತಲು ಹೋಗಿರಬೇಕು, ಅವರು ವಾಪಸ್ಸಾಗುವದರ ಮೊದಲು ಬೆಳಗಿನ ಪ್ರಾತ:ವಿಧಿ ಮುಗಿಸಿಕೊಳ್ಳೋಣ ಎಂದು ಅತ್ತ ಸಾಗಿದೆ.

ಸ್ವಲ್ಪ ಹೊತ್ತಿನಲ್ಲಿ ವಾಪಸ್ಸು ಬಂದ ಸ್ವಾಮಿ ಮತ್ತು ಅವರ ತಂಡದವರು ಕಚಪಚ ಎಂದುಕೊಳ್ಳುತ್ತ ಬಂದರು. ‘ ‘ಏನ್ರೀ, ನಿದ್ದೆ ಹ್ಯಾಗೆ ಬಂತು? ಗಡದ್ದಾಗಿ ನಿದ್ದೆ ಹೊಡಿತೀದ್ರಾ, ಹಾಗಾಗಿ ಎಬ್ಬಿಸಲಿಲ್ಲ’ ಎನ್ನುತ್ತ ತಾವೆಲ್ಲ ಇವತ್ತು ಸಾಗಬೇಕಾದ ದಾರಿಯಗುಂಟ ಒಂದಿಷ್ಟು ದೂರ ಹೋಗಿಬಂದೆವು ಎಂದರು.

ಸ್ವಾಮಿಯವರ ಗಡಬಿಡಿಯ ಬೆನ್ನಲ್ಲೇ ಅವತ್ತಿನ ಯಾನದ ಪೂರ್ವತಯ್ಯಾರಿಗಳು ನಡೆದವು. ಒಬ್ಬರಾದ ನಂತರ ಒಬ್ಬರಂತೆ ಎಲ್ಲರೂ ಸ್ನಾನ ಮುಗಿಸಿ ಸಜ್ಜಾದರು. ಕೆಳಗಿನ ಪೇಟೆಗೆ ನಡೆದುಹೋಗಿ ಹೊಟೆಲ್ ಒಂದರಲ್ಲಿ ತಿಂಡಿ ತಿಂದು ಮತ್ತೆ ವಾಪಸ್ಸು ಬಂದು ಸಣ್ಣ ಸಭೆ ನಡೆಸಿದರು.

ನಮ್ಮೂರಿಗೆ ಬಂದಾಗ ಬೈಸಿಕಲ್ ತಂಡದಲ್ಲಿದ್ದವರ ಪರಿಚಯ ಅರೆಬರೆಯಾಗಿತ್ತು. ಅಲ್ಲದೇ ಆಗ ನಾಲ್ವರಿದ್ದವರು ಈಗ ಐದು ಜನರಾಗಿದ್ದರು. ಬೆಂಗಳೂರಿನ ವಿಜಯಕುಮಾರ್ ಎನ್ನುವವರು ತೀರ್ಥಹಳ್ಳಿಯಲ್ಲಿ ತಂಡದ ಜೊತೆಗೂಡಿದ್ದರು. ಮತ್ತೊಮ್ಮೆ ಎಲ್ಲರ ಜೊತೆ ಪರಿಚಯದ ವಿನಿಮಯವಾಯಿತು.

ನನಗೆ ಈ ಪರಿಚಯವೆಂದರೆ ಒಂದು ಪ್ರಶ್ನಾರ್ಥಕ ಚಿನ್ಹೆ ಎದುರಾಗುತ್ತದೆ. ನಾವು ಎಷ್ಟೇ ಪರಿಚಯಿಸಿಕೊಂಡರೂ ಯಾವುದನ್ನು ಹೇಳಬೇಕಾಗಿತ್ತೋ ಅದೊಂದನ್ನು ಉಳಿಸಿಕೊಂಡು ಉಳಿದದ್ದನ್ನೆಲ್ಲ ಗಳುಹುತ್ತೇವೆನೋ? ಎಷ್ಟೇ ವಿವರವಾಗಿ, ವಿಸ್ತೃತವಾಗಿ ಪರಿಚಯಿಸಿಕೊಂಡರೂ ಅವರಿಗೆ ನಾನು, ನನಗೆ ಅವರು ಮತ್ತಷ್ಟು ಅಪರಿಚಿತರಾಗಿ ಉಳಿದುಬಿಡುತ್ತೇವೆನೋ ಎನ್ನುವ ಅನುಮಾನ ಕಾಡುತ್ತದೆ.

ನನ್ನ ಇಂಥ ತಲೆಹರಟೆ ಯೋಚನಾಕ್ರಮದಿಂದಾಗಿಯೇ ನನಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಿರುತ್ತವೆ. ಏನೇ ಇರಲಿ, ಅವತ್ತು ಆ ಎಲ್ಲ ಸವಾರರಲ್ಲೂ ಲವಲವಿಕೆಯಿತ್ತು. ಅಷ್ಟು ದೂರದಿಂದ ಬೈಸಿಕಲ್ ಪೆಡಲ್ ತುಳಿಯುತ್ತ ಬಂದಿದ್ದರೂ ಆಯಾಸವಾಗದ ಚೈತನ್ಯ ಅವರಲ್ಲಿದ್ದಂತೆ ಕಂಡಿತು. ತುಂಬಾ ಚೇತೋಹಾರಿಯಾಗಿಯೇ ಅವತ್ತಿನ ಪಯಣದ ತಯ್ಯಾರಿ ನಡೆಸಿದ್ದರು.

ಅವತ್ತು ಮಂಗಳವಾರ. ಸುಳ್ಯದಿಂದ ಸುಮಾರು 60 ಕಿಮೀ.ಗೂ ಹೆಚ್ಚಿನ ದೂರ ಭಾಗಮಂಡಲ ಅಂದಿನ ಕೊನೆಯ ನಿಲ್ದಾಣ. ಹೋಗಬೇಕಾದ ಮಾರ್ಗದ ಕುರಿತು ಮತ್ತೊಮ್ಮೆ ವಿವರಿಸಿದ ಸ್ವಾಮಿ ಹೊರಡಲು ಸೂಚನೆಯಿತ್ತರು. ಅಷ್ಟರಲ್ಲಾಗಲೇ ತಮ್ಮ ಬೈಸಿಕಲ್‍ಗಳಿಗೆ ತಮ್ಮ ಸಾಮಗ್ರಿಗಳನ್ನು ಹೇರಿದ್ದ ಸವಾರರೆಲ್ಲ ಒಬ್ಬೊಬ್ಬರಾಗಿ ಪೆಡಲ್ ತುಳಿಯುತ್ತ, ಆ ಇಳಿಜಾರಿನ ರಸ್ತೆಯಲ್ಲಿ ಸಾಗಿಹೋದರು. ನಾನು ಸ್ವಾಮಿಯವರ ಸ್ಕಾರ್ಫಿಯೋ ಹತ್ತಿಕೂತೆ.

ಅವತ್ತು 2017 ಜನವರಿ 10. ಆ ಬೈಸಿಕಲ್ ಯಾನದಲ್ಲಿ ಪಾಲ್ಗೊಳ್ಳುತ್ತಿರುವದೇ ನನಗೆ ಆ ಕ್ಷಣಕ್ಕೆ ರೋಮಾಂಚನ ತಂದಿತ್ತು. ನನ್ನ ಹಲವು ತಾಪತ್ರಯ, ಕೆಲಸಗಳ ನಡುವೆ ಇಂಥದೊಂದು ಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನನಗೆ ಖೇದವಾಗುತ್ತಿತ್ತು.  ಅಲ್ಲದೇ ನನ್ನಿಂದ ಸಾವಿರಾರು ಕಿಮೀ.ಗಳಷ್ಟು ದೂರ ಬೈಸಿಕಲ್ ತುಳಿದುಕೊಂಡು ಸಾಗಲು ದೈಹಿಕ ಸಾಮರ್ಥ್ಯ, ಸಮಯ, ಸಂಯಮ ಮುಂತಾದ ಕಾರಣಗಳಿಂದ ಸಾಧ್ಯವಾಗದು ಎನ್ನುವದು ಖಚಿತವಾಗಿ ನನಗೆ ತಿಳಿದಿತ್ತು. ಆ ಎಲ್ಲ ಬೇಸರ ಕಳೆದು, ಹೊಸದೊಂದು ಅನುಭವ ನನ್ನ ಸೀಮಿತ ಬದುಕಿನಲ್ಲಿ ಪ್ರಾಪ್ತವಾಗುತ್ತಿರುವದು ನಿಜಕ್ಕೂ ಆ ಬೆಳಗಿನಲ್ಲಿ ಖುಷಿ ಹುಟ್ಟಿಸಿತು.

ನಾನು ಸ್ವಾಮಿಯವರ ತಂಡ ಸಿದ್ದಾಪುರಕ್ಕೆ ಬಂದಾಗ ಅವರೊಂದಿಗೆ ಕೆಲವು ಕಾಲ ಕಳೆದಿದ್ದರೂ ಬೈಸಿಕಲ್ ಯಾನದ ಅವರ ವ್ಯವಸ್ಥೆಗಳು ನನಗೆ ತಿಳಿದಿರಲಿಲ್ಲ. ಅದರ ಬಗ್ಗೆಯೂ ನನಗೆ ಕುತೂಹಲವಿತ್ತು. ಬೈಸಿಕಲ್ ಸವಾರರು ಸಾಗಿದಂತೆಲ್ಲ ಸ್ವಾಮಿಯವರ ಸ್ಕಾರ್ಪಿಯೋ ಜೀಪ್  ಮತ್ತು ಡಾ|ರಜನಿಯವರ ಅಲ್ಟೋ ಕಾರ್ ಅನುಸರಿಸುತ್ತಿತ್ತು. ಒಂದಷ್ಟು ದೂರ ಸ್ವಾಮಿ ಸವಾರರೊಂದಿಗೆ ಸಾಗಿ, ನಂತರ ನಾಲ್ಕಾರು ಕಿಮೀ. ಮುಂದೆ ಹೋಗಿ ಕಾದಿರುತ್ತಿದ್ದರು. ಆ ತನಕ ಹಿಂದಿನಿಂದ ಬರುತ್ತಿದ್ದ ರಜನಿ ನಂತರ ಮುಂದೆ ಹೋಗಿ ಒಂದಷ್ಟು ದೂರದಲ್ಲಿ ನಿಂತು ಕಾದಿರುತ್ತಿದ್ದರು. ಎಲ್ಲ ಸವಾರರು ದಾಟಿದ ನಂತರ ಮತ್ತೆ ಸ್ವಾಮಿಯವರ ವಾಹನ ಮುಂದಕ್ಕೆ ಹೋಗುತ್ತಿತ್ತು. ‘ಈ ಕ್ರಮ ಯಾಕೆ?’ ಎಂದು ಸ್ವಾಮಿಯವರನ್ನು ಪ್ರಶ್ನಿಸುವ ಮೂಲಕ ಆ ತಿರುಗಾಟದ ನಮ್ಮಿಬ್ಬರ ಚರ್ಚೆ, ವಾಗ್ವಾದ, ಪ್ರಶ್ನಾವಳಿಗಳಿಗೆ ನಾಂದಿ ಹಾಡಿದೆ.

‘ಅಲ್ರೀ, ರಸ್ತೆ ಮಧ್ಯೆ ಸೈಕಲ್ ಸವಾರರಿಗೆ ಏನಾದರೂ ತೊಂದರೆಯಾದರೆ, ಸೈಕಲ್‍ನ ಸಮಸ್ಯೆ ಕಂಡುಬಂದರೆ ಏನ್ಮಾಡೋದು? ತಕ್ಷಣ ಅವರಿಗೆ ಸಹಾಯ ಮಾಡೋಕಾಗತ್ತೆ. ಅವರ ಮೊಬೈಲ್ ನಲ್ಲಿ ನಮಗೆ ಕರೆ ಮಾಡಿ ನಾವು ಬರೋದಕ್ಕಿಂತ ಇದು ಸರಿ ಅಂತಾ ಈ ಕ್ರಮ. ಎಲ್ಲಾ ಕಡೆ ಮೊಬೈಲ್ ಕನೆಕ್ಟ್ ಆಗೊಲ್ಲ ಬೇರೆ. ಅಲ್ದೇ ರಸ್ತೆ ಕವಲೊಡೆಯುವಲ್ಲಿ ಸವಾರರಿಗೆ ಗೊಂದಲವಾಗಬಾರ್ದಲ್ಲ.. ‘ಎಂದು ತಮ್ಮ ಪ್ಲಾನ್ ಕುರಿತಾಗಿ ಸಂಕ್ಷಿಪ್ತವಾಗಿ ವಿವರಿಸಿದರು. ನನಗೂ ಒಳ್ಳೇ ಯೋಜನೆ ಅನ್ನಿಸಿತು.

ಬೆಳಿಗ್ಗೆ ಪೊಗದಸ್ತಾಗಿ ತಿಂಡಿ ತಿಂದು ಸ್ವಾಮಿಯವರ ಜೀಪ್ ಹತ್ತಿ ಕೂತ ನನಗೆ ಆರಾಮಾಗಿ ಎದುರಿನಲ್ಲಿರುವ ಹೆದ್ದಾರಿಯಲ್ಲೇ ಹೋಗೋದಲ್ವಾ? ಅನ್ನಿಸಿ ಖುಷಿಯಾಗಿತ್ತು. ಸುಳ್ಯದಿಂದ ಐದಾರು ಕಿಮೀ. ಬೆಂಗಳೂರು ಹೆದ್ದಾರಿಯಲ್ಲಿ ಬಂದ ನಂತರ ಏಕಾಏಕಿ ಸ್ವಾಮಿ ತಮ್ಮ ವಾಹನವನ್ನ  ಬಲಗಡೆ ಹೊರಳಿಸಿದರು.  ಅವರು ಯೋಚಿಸಿಕೊಂಡ ದಾರಿಯ ಬಗ್ಗೆ ತಿಳಿದಿಲ್ಲದ ನಾನು ಸೀದಾ ಈ ಹೈವೇನಲ್ಲಿ ಗುಂಯ್ ಅಂತಾ ಹೋಗೋದು ಅಂದುಕೊಂಡಿದ್ದೆ. ಒಂದಷ್ಟು ದೂರ ಹೋದ ನಂತರ ಆ ಕಿರಿದಾದ, ಟಾರ್ ಹಾಕಿದ್ದರೂ ಲಾಚಾರೆದ್ದು ಹೋದ ರಸ್ತೆಯನ್ನು ನೋಡಿದವ ‘ ಏನ್ರೀ, ದಾರಿ ತಪ್ಪಿ ಬಂದ್ರಾ ಹೆಂಗೇ?’ ಎಂದೆ.

ನನಗೆ ಸ್ವಾಮಿಯವರನ್ನ ಸಿಟ್ಟಿಗೆಬ್ಬಿಸುವದು ಮತ್ತು ಕಿರಿಕ್ಕಾಗಿ ಮಾತಾಡಿ ಅವರಿಂದ ಇನ್ನಷ್ಟು ನನಗೆ ಹೊಸದಾದ ವಿಷಯಗಳನ್ನು ತೆಗೆಯುವದೆಂದರೆ ಯಾವಾಗಲೂ ಖುಷಿ. ‘ಅಲ್ರೀ, ಬೆಳಿಗ್ಗೆ ನೀವು ಗೊರಕೆ ಹೋಡೀತಿದ್ರೀ. ನಾವು ಬಂದು ಈ ರೂಟ್ ನೋಡಿ ಹೋಗಿದ್ವೀ. ನಮ್ಮ ಉದ್ದೇಶ ಆರಾಮಾಗಿ ಹೈವೇನಲ್ಲಿ ಹೋಗೋದಲ್ಲ: ಪ್ರಕೃತಿಯನ್ನ, ಪರಿಸರವನ್ನ, ಕಾಡನ್ನ, ಬದಲಾಗುತ್ತಿರುವ ನಾಡನ್ನ, ಆಮೂಲಕ ಜನಜೀವನವನ್ನ ಕಾಣುತ್ತ ಹೋಗುವದು. ಅದಕ್ಕೆ ಹೆಚ್ಚೆಚ್ಚು ಒಳದಾರಿಗಳನ್ನ ಹುಡುಕಿ ಹೋಗೋದು. ಎಲ್ಲ ಕಡೆ ಸಾಧ್ಯವಾಗಲ್ಲ. ಸಿಗೋ ಕಡೆ ಪಡೆದುಕೊಳ್ಳೋದು’ ಎಂದು ಹತ್ತು ನಿಮಿಷದ ವ್ಯಾಖ್ಯಾನ ಕೊಟ್ಟರು. ಸ್ವಾಮಿಯವರ ಅಷ್ಟು ಮಾತು ನಿಜಕ್ಕೂ ನನ್ನಂಥವನ ಜೀವಮಾನದ ಅನುಭವದ ಮಾತುಗಳಾಗಬಹುದೇನೋ?

ಹೊರಳಿದ್ದೇ, ಅತಿ ಕಿರಿದಾದ ದಾರಿ (ರಸ್ತೆಯಲ್ಲ). ಹಠಾತ್ತನೆ ಇಳಿಜಾರು. ತಟ್ಟನೆ ಏರು. ಮಲೆನಾಡಿನಲ್ಲಿ ಬದುಕಿದವರಿಗೆ ದಿನನಿತ್ಯದ ಓಡಾಟದ ಜೊತೆಗೆ ಬದುಕಿನ ಅನುಭವವೂ ಅದೇ ಅಲ್ಲವೇ? ಅಡಕೆ, ಭತ್ತ, ಕಾಳು ಮೆಣಸು ಎಲ್ಲವುಗಳ ದರದ ಏರಿಳಿತವೂ ದಿನಾ ಓಡಾಡುವ ರಸ್ತೆ ಅಥವಾ ದಾರಿಗಳಂತೇ. ಮೇಲೆ ಎತ್ತರದ ಗುಡ್ಡಗಳು, ಕೆಳಗೆ ಇಳಿಜಾರು. ಸಹಜವಾದ ಕಾಡೆಂಬುದೇ ಇಲ್ಲ. ನನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕಾಣುವ ಅಕೆಸಿಯಾ, ಸಾಗುವಾನಿ ನೆಡುತೋಪನ್ನು ನೆನಪಿಸುವ ರಬ್ಬರ್ ಮರಗಳ ತೋಪು. ನಾವೆಲ್ಲೋ ಈಚೆ ಗುಡ್ಡದ ಅಂಚಿನಲ್ಲಿ ಸಾಗುತ್ತಿದ್ದರೆ ನಡುವಿನ ಕಣಿವೆಯಾಚೆಯ ಎದುರಿನ ಆ ಎತ್ತರದ ಗುಡ್ಡದ ತುದಿಯಲ್ಲೂ ಕಾಣುವ ತೆಂಗು ಮತ್ತು ವಸತಿಯಿರಬಹುದಾದ ಕುರುಹುಗಳು; ಅಂದರೆ ಆ ಎತ್ತರದಲ್ಲೂ ಮನುಷ್ಯ ಬದುಕಬಲ್ಲ ಅವಕಾಶ ಇರುವ ಸಾಧ್ಯತೆ ಕಾಣಿಸಿತು. [ಪ್ರಾಯಷಃ ಇದು ಅಧ್ಯಯನಕ್ಕೆ ಅಗತ್ಯವಾದ ವಿಷಯ ಎನ್ನುವದು ನನ್ನ ಅನಿಸಿಕೆ]

ಆ ಬೆಳಗು ನಿಧಾನಕ್ಕೆ ಮಧ್ಯಾಹ್ನವಾಗುತ್ತಿತ್ತು. ಎರಡೂ ಪಕ್ಕದ ರಬ್ಬರ್ ತೋಟಗಳಲ್ಲಿ ಒಂದಿಷ್ಟು ಜನರು ಏನೇನೋ ಸಾಮಗ್ರಿ ಹಿಡಿದು ಓಡಾಡುತ್ತಿದ್ದರು. ನಾವು ಸಾಗುವ ರಸ್ತೆಯಲ್ಲಿ ಎದುರಾಗುವ ಸಣ್ಣ, ಸಣ್ಣ ಬಸ್ ಸ್ಟಾಪ್‍ಗಳಲ್ಲಿ ಶಾಲೆಗೆ ಹೊರಟ ಮಕ್ಕಳು, ಕಾಲೇಜಿಗೆ ಹೊರಟ ಯುವಕ,ಯುವತಿಯರು, ಯಾವುದೋ ಕೆಲಸಕ್ಕೋ,ನೆಂಟರ ಮನೆಗೋ ಹೊರಟ ಹೆಂಗಸರು,ಗಂಡಸರು ಎಲ್ಲರೂ ಕಾಣಿಸಿಕೊಳ್ಳುತ್ತಿದ್ದರು. ಅವನ್ನೆಲ್ಲ ನೋಡುತ್ತಿರುವಂತೆಯೇ ಅಲ್ಲೊಂಥರ ಏಕತಾನತೆ ಇರುವಂತೆ ಅನ್ನಿಸಿತು. ನಮ್ಮೂರ ಕಡೆ ಬರೇ ಅಡಕೆ ತೋಟಗಳು; ಯಾವನಾದ್ರೂ ಹೊಸಬ ಅಲ್ಲಿಗೆ ಬಂದರೆ ಅವನಿಗೆ ಅಲ್ಲಿನ ಹಸಿರು, ಅದೇ ಗುಡ್ಡ, ಕಾಡು, ತೋಟ ಇವನ್ನೆಲ್ಲ ನೋಡಿ ಅಲರ್ಜಿ ಶುರುವಾಗಿಬಿಡಬಹುದು. ಒಂದೇ ನಮೂನೆಯ ಪ್ರಕೃತಿ ಚಿತ್ರಣಗಳು.

ಇಲ್ಲೂ ಹಾಗೇ, ಅದೇ ಕಾಡನ್ನೆಲ್ಲ ಬೋಳಿಸಿ, ನೆಟ್ಟು ಬೆಳಿಸಿದ ರಬ್ಬರ್, ಅದರ ಹಾಲು ತೆಗೆಯುವ ಕೂಲಿಗಳು, ತಮ್ಮ ಸುತ್ತಲೂ ಇಂಥದೊಂದು ಅನೈಸರ್ಗಿಕ, ಕೇವಲ ಹಣ ಸಂಪಾದನೆಯ ವಿದ್ಯಮಾನಗಳು ನಡೆಯುತ್ತಿದ್ದರೂ ಇವರೆಲ್ಲ ಸಹಿಸಿಕೊಂಡಿದ್ದು ಹೇಗೆ? ಅನ್ನಿಸಿತು. ಮರುಕ್ಷಣ ನಮ್ಮೂರಿನ ನನ್ನನ್ನು ಸೇರಿದಂತೆ ಅಡಕೆ ಬೆಳೆಗಾರರ ನೆನಪಾಗಿ ಆ ಯೋಚನೆಯನ್ನು ಕೈ ಬಿಟ್ಟು ಸ್ವಾಮಿ ಜೊತೆ ಮಾತಿಗಿಳಿದೆ.

ಸ್ವಾಮಿ ನನಗೆ ತಾವು ಸಾಗಿಬಂದ ಬೆಳಗಾವಿಯಿಂದ ಸುಳ್ಯದವರೆಗಿನ ಅನುಭವಗಳನ್ನು ನನ್ನೊಂದಿಗೆ ಜೀಪ್ ಚಲಾಯಿಸುತ್ತಲೇ ಹಂಚಿಕೊಳ್ಳುತ್ತಿದ್ದರು. ಬೆಳಗಾವಿಯಿಂದ ಹೊರಟ ಅವರು ಖಾನಾಪುರ, ದಾಂಡೇಲಿ,ಯಲ್ಲಾಪುರ, ಶಿರಸಿ ಮೂಲಕ ದೇವಿಮನೆ ಘಾಟ್ ಇಳಿದು, ಬಡಾಳ್ ಘಾಟ್ ಹತ್ತಿ ಸಿದ್ದಾಪುರಕ್ಕೆ ಬಂದು, ಅಲ್ಲಿಂದ ಜೋಗ್, ಕಾರ್ಗಲ್, ಹೊನ್ನೆಮರಡು, ಸಾಗರ, ಹೊಸನಗರ, ತೀರ್ಥಹಳ್ಳಿ, ಮೂಡಿಗೆರೆ, ಸಕಲೇಶಪುರಕ್ಕೆ ಬಂದು, ಬಿಸಿಲೆ ಘಾಟ್ ಇಳಿದು, ಕುಕ್ಕೆ ಸುಬ್ರಹ್ಮಣ್ಯ ತಲುಪಿದ್ದರು.

ಅಲ್ಲಿಂದ ಸುಳ್ಯಕ್ಕೆ ಬರುವವರೆಗಿನ ಅನುಭವಗಳನ್ನು ಚೂರು ಚೂರಾಗಿ ಹೇಳುತ್ತ, ನಡುನಡುವೆ ಹಠಾತ್ತಾಗಿ ಎದುರಾಗುವ ಇಳುಕಲಿನಲ್ಲಿ, ಮತ್ತಷ್ಟು ಪೋರ್ಸ ಆಗಿ ಎಕ್ಷಿಲೇಟರ್ ಒತ್ತಬೇಕಾದ ಏರಿನಲ್ಲಿ ಮಾತು ನಿಲ್ಲಿಸುತ್ತಿದ್ದರು. ಆ ದಾರಿಯಲ್ಲಿ ಅಚಾನಕ್ಕಾಗಿ ಕೆಲವೊಂದು ಮೋಟಾರ್ ಬೈಕ್‍ಗಳು, ಜೀಪ್‍ಗಳೂ  ಎದುರಾಗುತ್ತಿದ್ದರಿಂದ ಹುಶಾರಾಗಿ ಜೀಪ್ ಚಲಾಯಿಸುವದೂ ಅನಿವಾರ್ಯವಾಗಿತ್ತು. ಅವರ ಮಾತುಗಳನ್ನ ಕೇಳುತ್ತಿದ್ದ ನನಗೆ ಇಡೀ ಯಾನದುದ್ದಕ್ಕೂ ಅವರ ಜೊತೆಗಿರಬೇಕು ಅನ್ನಿಸಿತು. ಆದರೆ ಅಂದುಕೊಂಡದ್ದೆಲ್ಲ ಸಾಧ್ಯವಾಗಬೇಕಲ್ಲ.

ಸೈಕಲ್ ತುಳಿಯುತ್ತಿದ್ದ ಸವಾರರ ಪರಿಸ್ಥಿತಿ ಪ್ರಾಯಶ: ನಮಗಿಂತ ಭಿನ್ನವಾಗಿತ್ತು. ಆ ಕಿರುರಸ್ತೆಯ ಎದೆಮಟ್ಟದ ಏರನ್ನು ಸೈಕಲ್ ತಳ್ಳಿಕೊಂಡೇ ಹತ್ತಬೇಕಿತ್ತು. ಹತ್ತಿದನಂತರದ ಇಳಿಜಾರಿನಲ್ಲಿ ಬ್ರೇಕ್ ಒತ್ತಿಕೊಂಡೇ ಸೈಕಲ್ ಇಳಿಸಬೇಕಿತ್ತು. ಏರು ಹತ್ತಿದ ಸುಸ್ತು ಕಡಿಮೆ ಮಾಡುವ ಇಳಿಜಾರಿನಲ್ಲೂ ಅದನ್ನು ಅನುಭವಿಸಲಾಗದೇ ಕ್ಷಣಾರ್ಧದಲ್ಲಿ ಮತ್ತೆ ಏರುವ ಪಾಡು ಅವರದ್ದಾಗಿತ್ತು. ಹಾಗೂ, ಹೀಗೂ ಅವನ್ನೆಲ್ಲ ದಾಟಿಕೊಂಡು ರಸ್ತೆಪಕ್ಕದ ಅಂಗಡಿಯೊಂದರ ಬಳಿ ಅವರೆಲ್ಲ ನಿಂತೇಬಿಟ್ಟರು.

। ನಾವು ನಿಂತ ಸ್ಥಳ ಅನೆಟ್ಟಿ ।

‍ಲೇಖಕರು avadhi

October 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: