ಹೊರಟೆ ಅಮೆರಿಕಾಕ್ಕೆ..

‘ಅವಧಿ’ಯ ಬರಹಗಾರರಾದ ಟಿ ಎಸ್ ಶ್ರವಣಕುಮಾರಿ ತಾವು ಕಂಡ ಅಮೆರಿಕಾವನ್ನು ಬೊಗಸೆಯಲ್ಲಿ ಹಿಡಿದುಕೊಟ್ಟಿದ್ದಾರೆ.

1

ಹೊರಡುವ ಮುನ್ನ..

ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ಕಿರಿಯ ಮಗಳು ಮೇಘ ಜೀವನ ಸಂಗಾತಿ ವಿಜಯ್‌ನೊಂದಿಗೆ ಬಾಳು ಕಟ್ಟಿಕೊಳ್ಳಲು ತೆರಳಿ ನಾಲ್ಕು ವರ್ಷಗಳಾಗಿದ್ದರೂ, ಅಲ್ಲಿಗೆ ಹೋಗುವಂಥ ಸಂದರ್ಭ ಒದಗಿ ಬಂದಿರಲಿಲ್ಲ.

ಏನೆಲ್ಲಾ ನೆಪಗಳು.. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮುಂದೆ ತಡೆಗೋಡೆಯಾಗಿ ನಿಂತಿದ್ದದ್ದು ನನ್ನ ಆರೋಗ್ಯ ಹಾಗೂ ಕಾಲಿನ ಸಮಸ್ಯೆ. ಕಳೆದ ಇಪ್ಪತ್ತೈದು ವರ್ಷಗಳಿಂದ ರೊಮಟಾಯ್ಡ್ ಸಂಧಿವಾತದಿಂದ ನರಳುತ್ತಿರುವ ನನ್ನ ಆರೋಗ್ಯ ಸದಾ ಸೂಕ್ಷ್ಮ. ಒಂದು ದಿನದಂತೆ ಇನ್ನೊಂದು ದಿನವಿರುವುದಿಲ್ಲ. ಸತತವಾದ ವ್ಯಾಯಾಮ ಮತ್ತು ಔಷದೋಪಚಾರದಿಂದ ಮನೆಪೂರ್ತಿ ನಿಭಾಯಿಸುತ್ತಿದ್ದರೂ, ಮನೆಯ ಮೆಟ್ಟಿಲಿಳಿದೆನೆಂದರೆ ಒಂದು ಸವಾರಿಯ ರಥ ಇರಲೇಬೇಕಾದ ಪರಿಸ್ಥಿತಿ ನನ್ನದು.

ನಾಲ್ಕು ದಿನ ಚೆನ್ನಾಗಿದ್ದೇನೆಂದುಕೊಂಡರೆ, ಇದ್ದಕ್ಕಿದ್ದಂತೆಯೇ ಯಾವುದೋ ಕೀಲು ನೋವು, ಕೈಯೋ, ಕಾಲೋ, ಕತ್ತೋ, ಭುಜವೋ ಮುರಿದೇ ಹೋಗಿದೆ ಎನ್ನುವಂಥ ನೋವು. ಒಮ್ಮೆ ಶುರುವಾದರೆ ಮತ್ತೆ ಸ್ವಲ್ಪ ಮಟ್ಟಿಗಿನ ಸುಸ್ಥಿತಿಗೆ ಬರಲು ಎಷ್ಟೋ ದಿನಗಳು.. ‘ಇರುವಲ್ಲಿ ನಿಭಾಯಿಸಲೇ ಇಷ್ಟೊಂದು ಪರದಾಡುವಾಗ, ಪರದೇಶದಲ್ಲಿ ನನ್ನ ಗತಿ ಏನು?’ ಎನ್ನುವುದು ನನ್ನ ಮುಂದಿನ ಉತ್ತರ ಕಾಣದ ಪ್ರಶ್ನೆಯಾಗಿತ್ತು.

ಇಷ್ಟಲ್ಲದೆ, ಒಂದೆರಡು ಬಾರಿ ಸಾವಿನ ಮನೆಯ ಬಾಗಿಲವರೆಗೆ ಎಳೆದುಕೊಂಡು ಹೋದ ಯಮದೂತರಿಗೆ ಕೈಕೊಟ್ಟು ಓಡಿ ಬಂದವಳಿಗೆ ‘ಅಲ್ಲೇನಾದರೂ ಆದರೆ ಗತಿಯೇನು? ಅಲ್ಲಿ ನೆಮ್ಮದಿಯಾಗಿರುವವರಿಗೆ ನಾನು ತೊಂದರೆ ಕೊಟ್ಟಂತಲ್ಲವೇ? ಹೊರ ದೇಶದವರು ಅಲ್ಲಿನ ಡಾಕ್ಟರುಗಳನ್ನು ಸುಲಭವಾಗಿ ಸಂಪರ್ಕಿಸುವಂತಿಲ್ಲ ಎನ್ನುವ ವಿಚಾರವೂ ಕಿರಿದಾದದ್ದೇನಲ್ಲ. ಸಾಯಬಯಸುವುದು, ನನ್ನ ದೇಶದಲ್ಲೇ, ನನ್ನ ಕರ್ನಾಟಕದ ಮಣ್ಣಿನಲ್ಲೇ ಎನ್ನುವುದು ನನ್ನ ಮಹತ್ವದ ಆಸೆ’.

ಇಷ್ಟೆಲ್ಲಾ ಗೋಜಲು ದಾರಗಳ ಗೂಡಾದ ಈ ವಿಷಯವನ್ನು, ಯಾವಾಗ ಈ ವಿಚಾರದ ಹಾವಿನ ಬುಟ್ಟಿಯ ಮುಚ್ಚಳ ಮೇಲೆತ್ತಿದರೂ, ಅಲ್ಲಿಯೇ ತಟ್ಟಿ ಮಲಗಿಸಿಬಿಡುತ್ತಿದ್ದೆ. ಮಗಳು ‘ಯಾವಾಗ ಬರುವೆಯೆಂದಾಗೆಲ್ಲಾ ನಿವೃತ್ತಿಯಾಗಲಿ, ಆಮೇಲೆ ಬರುತ್ತೇನೆ’ ಎಂದು ಆ ಮಾತಿಗೊಂದು ಕಾಲಮಿತಿಯನ್ನು ಕೊಟ್ಟು, ಸದ್ಯಕ್ಕೆ ಒಂದಷ್ಟು ಕಾಲಾವಕಾಶವನ್ನು ಕೊಂಡು ಮುಕ್ತಾಯ ಹಾಡುತ್ತಿದ್ದೆ.

ನಾನು ಚಿಕ್ಕಂದಿನಿಂದ ಜೊತೆಗೂಡಿ ಬೆಳೆದ ನನಗಿಂತ ಸ್ವಲ್ಪವೇ ಹಿರಿಯಳಾದ ನನ್ನ ಸಮೀಪದ ಬಂಧು ನಳಿನಿ ಅದೇ ಊರಿನಲ್ಲಿರುವ ತನ್ನ ಮಗನ ಮನೆಗೆ ಹೋದಾಗೆಲ್ಲಾ ನನ್ನ ಮಗಳನ್ನೂ ಭೇಟಿಯಾಗಿ ಬಂದು, ಆ ದೇಶದ, ಅಲ್ಲಿನ ಅನುಕೂಲತೆಗಳ ಮತ್ತು ನಾನು ಏಕೆ ಅಲ್ಲಿಗೆ ಹೋಗಬೇಕೆಂಬುದರ ಬಗ್ಗೆ ನನಗೆ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಾ, ನನ್ನಲ್ಲಿ ಹುತ್ತಗಟ್ಟಿದ್ದ ಗೆದ್ದಲು ಗೂಡುಗಳನ್ನು ಕೆಡವಿ ಅತ್ಯಂತ ಉತ್ತೇಜಕ ಮಾತುಗಳನ್ನು ಆಡಿ, ನಾನೂ ಅಲ್ಲಿಗೆ ಹೋಗಬಹುದೆಂಬ ಒಂದು ಸಣ್ಣ ಆಸೆಯ ಬೆಳಕನ್ನು ತೋರಿದ್ದನ್ನು ನಾನು ಇಲ್ಲಿ ಸ್ಮರಿಸಲೇಬೇಕು.

ಈ ಬರಹವನ್ನು ನಾನು ಪ್ರವಾಸಿ ಸಾಹಿತ್ಯವೆಂದು ಕರೆಯುವುದಿಲ್ಲ; ಇದೊಂದು ಅನುಭವ ಕಥನ ಅಮೆರಿಕದ ಪ್ರವಾಸಿ ತಾಣಗಳ ಬಗ್ಗೆ ಈ ಲೇಖನ ಹೆಚ್ಚಿನ ಮಾಹಿತಿ ನೀಡಲಾರದೇನೋ.. ಆದರೆ ಒಂದು ಮಿತಿಯಲ್ಲಿ ಪಡೆದುಕೊಂಡ, ನನ್ನ ಬೊಗಸೆಯಲ್ಲಿ ಕಂಡಂತ, ಅಮೆರಿಕದ ಒಂದು ಭಾಗದ ಅನುಭವಗಳು ನನ್ನಂತೆಯೇ ನೋವನ್ನು, ಅನಾರೋಗ್ಯವನ್ನು ಅನುಭವಿಸುತ್ತಿರುವವರಿಗೆ ಒಂದು ಹೊಸ ಬೆಳಕಾಗಿ ತೋರಿದರೆ, ನನ್ನ ಈ ಶ್ರಮ ಸಾರ್ಥಕ.. ‘ನನ್ನ ಕೈಯಲ್ಲಿ ಅಲ್ಲಿ ಹೇಗೆ ನಿಭಾಯಿಸಲು ಸಾಧ್ಯ?’ ಎನ್ನುವ ಒಂದು ನಿಶ್ಚಿತ ಅಭಿಪ್ರಾಯವನ್ನು ಇಟ್ಟುಕೊಂಡಿರುವ ಕೆಲವರಾದರೂ ನನ್ನ ಹಾಗೆ ನರಳುತ್ತಿರುವವರಿಗೆ ಅಭಯವನ್ನು ನೀಡಿ ‘ಇಂಥಹವರಿಗೇ ಸಾಧ್ಯವಾಗಿರುವಾಗ ನನಗೂ ಸಾಧ್ಯವಾಗಬಹುದು’ ಎನ್ನುವಂತಹ ಭರವಸೆಯನ್ನು ನೀಡಿ ದೇಶ ಸುತ್ತಲು ಉತ್ಸಾಹ ತುಂಬಿದರೆ ಧನ್ಯೋಸ್ಮಿ..

ಪ್ರಯಾಣದ ಪೂರ್ವ ಸಿದ್ಧತೆ

ಈ ಬರಹದ ಉದ್ದೇಶವನ್ನು ಮೊದಲೇ ತಿಳಿಸಿರುವುದರಿಂದ ಆರೋಗ್ಯದ, ಚಲನಶೀಲತೆಯ ತೊಂದರೆಯಿರುವವರು ತೆಗೆದುಕೊಳ್ಳಬಹುದಾದ ಕೆಲವು ಪೂರ್ವ ಸಿದ್ಧತೆಗಳ ಬಗ್ಗೆ ಇಲ್ಲಿ ನಾಲ್ಕು ಮಾತುಗಳು ಅವಶ್ಯ. ಪ್ರಯಾಣದ ಟಿಕೇಟುಗಳನ್ನು ಖರೀದಿಸುವಾಗ ಮರೆಯದೆ ‘ಗಾಲಿ ಕುರ್ಚಿಯ ಸಹಿತ’ ಎನ್ನುವುದನ್ನು ನಿಖರ ಪಡಿಸಿಕೊಳ್ಳಿ. ಸ್ಥೂಲವಾಗಿ ನಿಮ್ಮ ಆರೋಗ್ಯದ ಸಮಸ್ಯೆಗಳು, ಅವುಗಳ ಸ್ವರೂಪ, ಎದುರಿಸಬೇಕಾದಾಗ ಮಾಡಿಕೊಳ್ಳಬೇಕಾದ ಕೆಲವು ಪರಿಹಾರೋಪಾಯಗಳು.. ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಿ.

ಹೊರಡುವ ಮುನ್ನ ಖಂಡಿತವಾಗಿ ವೈದ್ಯರನ್ನು ಸಂಪರ್ಕಿಸಿ, ಪ್ರಯಾಣದ ಅವಧಿ, ಸದಾ ಕಾಡುವ ಅನಾರೋಗ್ಯವಲ್ಲದೆ, ಆಗಾಗ್ಗೆ ಎದುರಿಸುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು, ಅವಕ್ಕೆ ಸಂಬಂಧಪಟ್ಟ ಔಷಧಿಗಳ ಪಟ್ಟಿ, ಪ್ರವಾಸದ ಅವಧಿಗೆ ಸಾಕಾಗುವಷ್ಟು ಔಷಧಿಯ ದಾಸ್ತಾನು, ಇವೆಲ್ಲದರೊಂದಿಗೆ ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ವೈದ್ಯಕೀಯ ಮಾಹಿತಿ ಇವೆಲ್ಲವೂ ಪ್ರಯಾಣದ ಅತ್ಯಾವಶ್ಯಕ ಸಾಮಗ್ರಿಯಾಗಿರಲಿ.

ಸಾಧ್ಯವಿದ್ದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಬಹುದಾದ, ದೂರವಾಣಿ, ಈ-ಅಂಚೆ ಇವುಗಳ ವಿವರಗಳು ಜೊತೆಯಲ್ಲಿರಲಿ. ಪಯಣಕ್ಕೆ ಮುನ್ನ ವಿಮೆಯನ್ನು ಮಾಡಿಸುವುದು ಕಡ್ಡಾಯ. ಇಲ್ಲಿ ಮಾಡಿಸಿಕೊಳ್ಳುವುದಕ್ಕಿಂತ, ನಿಮ್ಮನ್ನು ಕರೆಸಿಕೊಳ್ಳುವವರು ವಿಮೆಯನ್ನು ತುಂಬಿದರೆ ಸ್ವಲ್ಪ ಮಟ್ಟಿಗೆ ಕಡಿಮೆಯಲ್ಲಿ ಕೆಲಸವಾಗುತ್ತದೆ.

ಅಲ್ಲದೆ ಅಲ್ಲಿ ತೆಗೆದುಕೊಳ್ಳುವ ವಿಮೆಯ ಹರಹು ಖಾಯಿಲೆಯ, ಅದನ್ನು ಒಪ್ಪಿಕೊಳ್ಳುವ ವೈದ್ಯಕೀಯ ಸಂಸ್ಥೆಯ ದೃಷ್ಟಿಯಿಂದ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಅಂತಹ ವಿಷಮ ಆರೋಗ್ಯದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದರೆ ಈ ವಿಮೆಯಿಂದ ಸ್ವಲ್ಪಮಟ್ಟಿಗೆ ಸಹಾಯವಾಗುತ್ತದೆ. ಇಲ್ಲಿನಂತೆ ಆರೋಗ್ಯದ ಸಮಸ್ಯೆಯನ್ನು ಔಷಧಿ ಅಂಗಡಿಯವನೊಂದಿಗೆ ಹೇಳಿ ಅಥವಾ ಯಾವುದಾದರೂ ಸಣ್ಣ-ಪುಟ್ಟ ವೈದ್ಯಾಲಯಗಳಿಗೆ ಸೀದಾ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಲ್ಲಿ ಸಾಧ್ಯವಿಲ್ಲ.

ಸಂಪೂರ್ಣ ವೈದ್ಯಕೀಯ ಮಾಹಿತಿಯಿಲ್ಲದೆ ಅಲ್ಲಿನ ಯಾವ ಡಾಕ್ಟರೂ ರೋಗಿಯನ್ನು ಮುಟ್ಟುವುದಿಲ್ಲ ಹಾಗೂ ವೈದ್ಯರ ಸೇವೆ ಅತ್ಯಂತ ತುಟ್ಟಿ. ಎಲ್ಲವೂ ಕ್ರಮಬದ್ಧವಾಗಿ, ಕಾನೂನು ಬದ್ಧವಾಗಿಯೇ ಇರಬೇಕಾಗುತ್ತದೆ. ಹಾಗಾಗಿ ಅತ್ಯಂತ ತುರ್ತು ಪರಿಸ್ಥಿತಿಯಿಲ್ಲದಿದ್ದಲ್ಲಿ ಅಲ್ಲಿನ ವೈದ್ಯರನ್ನು ಸಂಪರ್ಕಿಸುವುದನ್ನು ಯಾರೂ ಅಪೇಕ್ಷೆ ಪಡಲಾರರು.

ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಸಕ್ಕರೆಯ ಮಟ್ಟವನ್ನು ನೋಡಿಕೊಳ್ಳುವ ಸಾಧನ ಮತ್ತು ಅದಕ್ಕೆ ಬೇಕಾದ ಪರೀಕ್ಷಣಾ ಪಟ್ಟಿಗಳನ್ನು ಸಾಕಷ್ಟು ಇಟ್ಟುಕೊಳ್ಳುವುದು. ಅಂತೆಯೇ ರಕ್ತದೊತ್ತಡದಿಂದ ಬಳಲುತ್ತಿರುವವರು ಸಹಾ ಒತ್ತಡ ಪರೀಕ್ಷಣಾ ಮಾಪಕವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಉತ್ತಮ.

 

ತಮ್ಮ ದೇಶದ ವೈದ್ಯರ ಉಲ್ಲೇಖವಿಲ್ಲದೆ ಇಲ್ಲಿ ಯಾವ ಔಷಧಿಯನ್ನೂ ಕೊಳ್ಳಲು ಸಾಧ್ಯವಿಲ್ಲ. ಹೆಚ್ಚೆಂದರೆ, ನೋವು ನಿವಾರಕ ಕ್ರೀಂಗಳು, ಗಾಯವಾದರೆ ಹಚ್ಚಿಕೊಳ್ಳಬಹುದಾದ ರೋಗಾಣು ನಿರೋಧಕ ಮುಲಾಮು, ಗಾಯಕ್ಕೆ ಹಾಕಬಹುದಾದ ರೋಗ ನಿರೋಧಕ ಪಟ್ಟಿ ಇಂತವು ಸಿಗಬಹುದಷ್ಟೆ. ಇವಿಷ್ಟು ನನಗೆ ತಿಳಿದಂತೆ ಆರೋಗ್ಯದ ಬಗ್ಗೆ ಹೊರಡುವವರು ಮಾಡಿಕೊಳ್ಳಬೇಕಾದ ಪೂರ್ವಭಾವಿ ಸಿದ್ಧತೆ.

ವಿಮಾನ ನಿಲ್ದಾಣದಲ್ಲೇನೋ ಮುಂಗಟ್ಟೆಯಿಂದ ವಿಮಾನದವರೆಗೂ ಮತ್ತು ವಿಮಾನದಿಂದ ನಿಲ್ದಾಣದ ಮುಂಭಾಗದವರೆಗೂ ಗಾಲಿಕುರ್ಚಿಯ ಸಹಾಯ ದೊರೆಯುತ್ತದೆ. ಅಲ್ಲಿಂದ ಕಾರು ನಿಲ್ದಾಣಕ್ಕೆ ತಲುಪುವವರೆಗೆ ನಡೆಯಲು ಸಾಧ್ಯವಾಗುವುದಾದರೆ ತೊಂದರೆಯಿಲ್ಲ. ಇಲ್ಲಿನ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲೂ ಗಾಲಿಕುರ್ಚಿಯ ಸೌಲಭ್ಯ ದೊರೆಯುತ್ತದೆ.

ಕೆಲವೆಡೆ ಬ್ಯಾಟರಿ ಚಾಲಿತ ಕುರ್ಚಿಗಳು ಇದ್ದು, ಯಾರೂ ತಳ್ಳುವ ಅವಶ್ಯಕತೆ ಇಲ್ಲದೆ ಸುತ್ತಾಡಲು ಸಾಧ್ಯವಿದೆ. ಆದರೆ ಸರದಿಯಲ್ಲಿ ನಿಂತು ಕುರ್ಚಿಯನ್ನು ಪಡೆದುಕೊಂಡು ಹೋಗಲು ಬಹಳಷ್ಟು ಸಮಯ ವ್ಯಯವಾಗಿ ನೋಡಲು ಸಿಗುವ ಸಮಯದಲ್ಲಿ ಕಡಿತವಾಗುತ್ತದೆ.

ಸ್ವಲ್ಪವೂ ನಡೆಯಲು ಸಾಧ್ಯವಿಲ್ಲದವರು ಇಳಿದ ಕ್ಷಣದಿಂದ ಒಂದು ಗಾಲಿಕುರ್ಚಿಯ ವ್ಯವಸ್ಥೆ ಮಾಡಿಕೊಂಡಿರುವುದು ಒಳಿತು. ಓಡಾಡುವ ತೊಂದರೆಯಿರುವವರು ವಿಮಾನವಲ್ಲದೇ, ಕಾರಿಲ್ಲದೇ ಪಯಣಿಸುವಂತ ಸಂದರ್ಭ ಅಲ್ಲಿ ಇಲ್ಲದಿರುವುದರಿಂದ ಕಾರಿನ ಡಿಕ್ಕಿಯ ಒಂದು ಮೂಲೆಯನ್ನು ಗಾಲಿಕುರ್ಚಿಗಾಗಿ ಮೀಸಲಿಟ್ಟುಕೊಳ್ಳುವುದರಿಂದ ಬಹಳಷ್ಟು ಸಮಸ್ಯೆಗಳು ಎದುರಾಗುವುದಿಲ್ಲ.

ಅಂತೆಯೇ ವಿಮಾನದಲ್ಲೂ ನಮ್ಮದೇ ಗಾಲಿಕುರ್ಚಿಯನ್ನು ಪ್ರತ್ಯೇಕ ಶುಲ್ಕವಿಲ್ಲದೆ ತೆಗೆದುಕೊಂಡು ಹೋಗಬಹುದು. ಈ ರೀತಿ ಮಾಡುವುದರಿಂದ ಕಾರು ನಿಲ್ದಾಣದಿಂದ ವಿಮಾನ ನಿಲ್ದಾಣದ ಬಾಗಿಲಿಗೆ ಹಾಗೇ ತಿರುಗಿ ಬರುವಾಗ ವಿಮಾನ ನಿಲ್ದಾಣದಿಂದ ಕಾರು ನಿಲ್ದಾಣಕ್ಕೆ ಬರುವುದಕ್ಕೆ ಅನುಕೂಲವಾಗುತ್ತದೆ.

ಪಶ್ಚಿಮದೆಡೆಗೆ ಪಯಣ..

ಅಂತೂ ಧೈರ್ಯ ಮಾಡಿ 11ನೇ ಮೇ 2018ರಂದು ನಾನು, ನನ್ನ ಪತಿ, ಹಿರಿಯ ಮಗಳು ಸಿಂಧು, ಅಳಿಯ ಅಶ್ವಿನ್, ಮೊಮ್ಮಕ್ಕಳಾದ ಇಶಾನ್ ಮತ್ತು ಶ್ರಿಯಾ ಎಲ್ಲರೂ ಹೊರಡುವುದೆಂದು ನಿಗದಿಯಾಯಿತು.

ಮೊಮ್ಮಕ್ಕಳಿಗೆ ಶಾಲೆ ಆರಂಭವಾಗುವುದರೊಳಗೆ ಹಿರಿಮಗಳ ಕುಟುಂಬ ವಾಪಸ್ಸು ಬರುವುದು; ಅಲ್ಲಿನ ಶಾಲೆಯಲ್ಲಿ ವಾಕ್ ತರಬೇತುದಾರಳಾಗಿರುವ ನನ್ನ ಕಿರಿಯ ಮಗಳಿಗೆ ಆಗಸ್ಟ್ 14ರವರೆಗೆ ರಜೆ ಇರುವುದರಿಂದ ನಾವು ಆಗಸ್ಟ್ 11ರಂದು ಅಲ್ಲಿಂದ ಹಿಂತಿರುಗುವುದು ಎನ್ನುವ ಸ್ಥೂಲ ಕಾರ್ಯಕ್ರಮ ರೂಪಿಸಿಕೊಂಡು ಇಲ್ಲಿಂದ ಹೊರಟೆವು.

ವಿಮಾನದಲ್ಲಿ ಪ್ರಯಣಿಸುತ್ತಿರುವಾಗ ಕಿಟಕಿಯ ಹತ್ತಿರದ ಆಸನವನ್ನು ಬಯಸುವುದು ಸಹಜವಾದದ್ದು. ಆದರೆ ದೂರ ಪ್ರಯಾಣದಲ್ಲಿ, ಹರಯ ದಾಟಿದವರು ಓಡಾಡುವ ಹಾದಿಯ ಪಕ್ಕದ ಆಸನವನ್ನು ಕೋರಿಕೊಳ್ಳುವುದು ವಿವೇಕ.

ಒಂದೇ ಸಮನೆ ಗಂಟೆಗಟ್ಟಲೆ ಪಯಣಿಸುವಾಗ ಕುಳಿತೇ ಇದ್ದರೆ ಕಾಲು ಊತ ಬರುವ ಸಂಭವ ಹೆಚ್ಚು. ಹಾಗಾಗಿ ಗಂಟೆ, ಎರಡು ಗಂಟೆಗೊಮ್ಮೆ ಏನಾದರೂ ನೆಪವಿಟ್ಟುಕೊಂಡು ಎದ್ದು ಒಂದೆರಡು ನಿಮಿಷ ಓಡಾಡಿ ಬರುವುದು ಒಳ್ಳೆಯದು. ಕಿಟಕಿಯ ಪಕ್ಕ ಕುಳಿತರೆ ಪ್ರತಿಬಾರಿಯೂ ಪಕ್ಕದಲ್ಲಿರುವವರನ್ನು ಎಬ್ಬಿಸಲು ನಮಗೆ ಮುಜುಗರ; ಅವರಿಗೆ ಸಿಡಿಮಿಡಿ ಸಹಜ.

ಅಂತೆಯೇ ಪ್ರತಿಯೊಬ್ಬರ ಎದುರೂ ಮನರಂಜನೆಗಾಗಿ ಮತ್ತು ಪ್ರಯಾಣದ ವಿವರಗಳನ್ನು ಪ್ರಕಟಿಸಲು ಒಂದು ದೂರದರ್ಶನದಂತ ಪರದೆಯಿರುತ್ತದೆ. ಹಲವಾರು ಆಟಗಳು, ಹಲವು ಭಾಷೆಗಳ ಸಿನಿಮಾ, ಪಯಣದ ಮಾಹಿತಿ, ಸಂಗೀತ ಎಲ್ಲವೂ ಸಿಗುತ್ತದೆ. ಅದರಲ್ಲೇ ಮುಳುಗಿ ಹೋಗದೆ ಸಾಕಷ್ಟು ಸಮಯವನ್ನು ನಿದ್ರೆಗಾಗಿ ಮೀಸಲಿರಿಸಿದರೆ ಪ್ರಯಾಣದ ನಂತರದ ಜೆಟ್‌ಲಾಗ್ ಅಷ್ಟಾಗಿ ಕಾಡುವುದಿಲ್ಲ ಎನ್ನುವುದು ಅನುಭವಸ್ಥರ ಕಿವಿಮಾತು.

ನಾವು ಇಲ್ಲಿಂದ ಪಶ್ಚಿಮದ ಕಡೆಗೆ ಪ್ರಯಾಣಿಸುವುದರಿಂದ 36 ಗಂಟೆಗಳ ಪ್ರಯಾಣದ ನಂತರವೂ ಅದೇ ದಿನಾಂಕದಂದು ಅಮೆರಿಕ ತಲುಪುತ್ತೇವೆ. ಆ ಪ್ರಕಾರ ಭಾರತೀಯ ಕಾಲಮಾನದ ಬೆಳಗ್ಗೆ ಒಂಭತ್ತು ಗಂಟೆಗೆ ನಮ್ಮ ದೇಶವನ್ನು ಬಿಟ್ಟವರು, ಅಮೇರಿಕಾ ಕಾಲಮಾನದ ಅದೇ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣವನ್ನು ತಲುಪಿದೆವು. ಸಿಂಗಪೂರ್ ಏರ್ ಲೈನ್ಸ್‌ ಪಯಣ ಸುಖಕರವಾಗಿಯೇ ಇತ್ತು.

ಊಟದ ವಿಚಾರದಲ್ಲೂ ಹೆಚ್ಚಿನ ತೊಂದರೆಯಾಗಲಿಲ್ಲ. ಭಾರತೀಯ ಶೈಲಿಗೆ ಹತ್ತಿರದ ಊಟದ ಜೊತೆಗೆ ಧಾರಾಳವಾಗಿ ಕೊಡುತ್ತಿದ್ದ ಹಣ್ಣು, ಸಲಾಡ್, ಜ್ಯೂಸ್‌ಗಳು ನಮ್ಮನ್ನು ಹಿತವಾಗಿಯೇ ಇಟ್ಟಿತ್ತು.

ಇಮಿಗ್ರೇಷನ್ ಮುಗಿಸಿ ಹೊರಬರಲು ಸುಮಾರು ಒಂದೂವರೆ ಗಂಟೆ ಕಾಲ ತೆಗೆದುಕೊಂಡಿತು. ಗೊತ್ತಿಲ್ಲದೇ ತಂದಿದ್ದ ಜೀರಿಗೆ ಒಂದು ಸಣ್ಣ ಅವಾಂತರವನ್ನೇ ಸೃಷ್ಟಿಸಿದರೂ, ಏರ್ ಪೋರ್ಟ್ ಅಧಿಕಾರಿಗೆ ನಮ್ಮ ಪ್ರಾಮಾಣಿಕತೆಯ ಅರಿವಾಗಿ, ಅದನ್ನು ಮೂಲೆಗೆಸೆದು ನಮ್ಮನ್ನು ಬಿಟ್ಟುಕೊಟ್ಟ. ‘ಹೊರದೇಶಕ್ಕೆ ಪಯಣಿಸುವವರು ಅಲ್ಲಿಗೆ ತೆಗೆದುಕೊಂಡು ಹೋಗಬಹುದಾದ, ಬಾರದ ವಿಷಯದಲ್ಲಿ ಅತ್ಯಂತ ಜಾಗರೂಕತೆ ವಹಿಸುವುದು ಒಳ್ಳೆಯದು. ಮೊದಲೇ ತಿಳಿದುಕೊಂಡು ನಿಷೇಧಿತ ವಸ್ತುಗಳನ್ನು ಯಾವ ಕಾರಣಕ್ಕೂ ತೆಗೆದುಕೊಂಡು ಹೋಗದಿರುವುದು ಕ್ಷೇಮ. ನಮ್ಮ ಗ್ರಹಚಾರ ಕೆಟ್ಟಿದ್ದರೆ ನಾವು ತೆರುವ ದಂಡ ಬಲು ದುಬಾರಿಯಾದೀತು’ ಎನ್ನುವ ಮೊದಲ ಪಾಠವನ್ನು ಕಲಿತಿದ್ದಾಯಿತು.

ಏರ್ ಪೋರ್ಟಿನ ಹೊರಗೆ ಕಿರಿಯ ಮಗಳು, ಅಳಿಯ ನನಗೊಂದು ಗಾಲಿ ಕುರ್ಚಿಯನ್ನು ತಂದಿಟ್ಟುಕೊಂಡು ಸ್ವಾಗತಕ್ಕೆ ಕಾಯುತ್ತಾ ನಿಂತಿದ್ದರು. ಎರಡೂವರೆ ವರ್ಷದ ನಂತರ ನೋಡಿದ ಸಂತೋಷದ ಉಬ್ಬರ ಇಳಿದ ಮೇಲೆ ಅಲ್ಲಿಂದ ಹೊರಟು ಮುಕ್ಕಾಲು ಗಂಟೆ ದೂರದ ಅವರು ವಾಸಿಸುವ ಮಿಲ್ಪಿಟಾಸ್ ಊರಿಗೆ ಬಂದಿದ್ದಾಯಿತು. ಆ ದಿನ ನನ್ನ ಹಿರಿಮಗಳ ಮದುವೆಯ ವಾರ್ಷಿಕೋತ್ಸವ ಮತ್ತು ಮೊಮ್ಮಗಳ 5ನೇ ವರ್ಷದ ಹುಟ್ಟಿದ ಹಬ್ಬ.

ಮನೆಗೆ ಬಂದ ತಕ್ಷಣ ಅವುಗಳ ಸಂಭ್ರಮವನ್ನಾಚರಿಸಿಕೊಂಡು, ಹಿತವಾದ ಮನೆಯೂಟ ಮಾಡಿ ಮಲಗುವ ಹೊತ್ತಿಗೆ ಮಧ್ಯರಾತ್ರಿ ದಾಟಿತ್ತು. ಮರುದಿನದಿಂದ ನಮ್ಮೆದುರು ತೆರೆದುಕೊಳ್ಳುವ ಹೊಸ ಅನುಭವಗಳ ಅನಾವರಣಕ್ಕೆ ಮನಸ್ಸನ್ನು ಸಿದ್ಧಗೊಳಿಸುತ್ತಾ ಮಲಗಿದೆವು..

। ಇನ್ನುಳಿದದ್ದು ನಾಳೆಗೆ ।

‍ಲೇಖಕರು avadhi

October 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sarayu

    Nimma niroopana shaila bahala ishtavythu madam. Mundina kantugaligagi kayuttiruttene.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: