ದ್ವಾರಕೆ ಎನ್ನುವ ಸ್ವರ್ಗದ ಬಾಗಿಲು…

ವಾಣಿ

ಡಿಸೆಂಬರ್ ತಿಂಗಳ ಅದೊಂದು ವಾರದಲ್ಲಿ ಕೆಲಸ ಬಹಳ ಹೆಚ್ಚಾಗಿತ್ತು. ಒಂದೇ ವಾರದಲ್ಲಿ ಮೂರು ನಾಲ್ಕು  ರಾಜ್ಯಗಳನ್ನು ತಿರುಗುವ  ಪರಿಸ್ಥಿತಿ. ಕೆಲಸ ಹೆಚ್ಚಾದಾಗ ನಮ್ಮ ಸಮಕ್ಕೂ ನಿಂತು ಕೆಲಸ ಮಾಡಿ, ನಮಗೂ ಸ್ವಲ್ಪ ಕೆಲಸ ಕಲಿಸಿ ಎಲ್ಲ ಕ್ರೆಡಿಟ್ ಅನ್ನು ನಮಗೆ ಕೊಡುವ ಮಹಾನುಭಾವ ನಮ್ಮ ಬಾಸ್.

ಈ ತರಹದ ಜನರೊಂದಿಗೆ ಕೆಲಸ ಮಾಡುವುದೇ ಒಂದು ಖುಷಿ.. ಸಾಕಾಗುವುದಿಲ್ಲ.. ಬೇಸರವಿಲ್ಲ.

ರಾಜ್‌ಕೋಟ್ ಎಂಬ ಊರಿನಲ್ಲಿ ನಾವು ನೋಡಬೇಕಿದ್ದ ಕೆಲಸವೊಂದು ಶುರುವಾಗಿತ್ತು. ತಕ್ಷಣವೇ ಹೊರಟೆವು. ರಾಜ್‌ಕೋಟ್ ಊರಿಗೆ ಬೆಂಗಳೂರಿಂದ ನೇರ ವಿಮಾನ ವಾರದಲ್ಲಿ 3 ದಿನ ಮಾತ್ರ. ನಾವು ಒಂದೇ ದಿನದಲ್ಲಿ ತಲುಪಬೇಕಿತ್ತು. ಹಾಗಾಗಿ ಮುಂಬೈಗೆ ಹೋದೆವು. ಮುಂಬೈಗೂ ಗುಜರಾತಿಗೆ ಬಹು ನಂಟು, ಅಲ್ಲಿಂದ ರಾಜ್‌ಕೋಟ್‌ಗೆ ಹೋದೆವು.

ಯಾವುದೋ ಕನೆಕ್ಟಿಂಗ್ ಫ್ಲೈಟ್ ಹಿಡಿದು ರಾತ್ರಿ ಬೆಂಗಳೂರಿನಿಂದ ಹೊರಟು ಮುಂಬೈಗೆ ತಲುಪಿದೆವು. ರಾತ್ರಿ 9 ಆಗಿತ್ತು. ಬಾಸ್ ಕೂಡ ಜೊತೆಗಿದ್ದರು. ಸ್ವಲ್ಪ ಮುಂಬೈ ಸುತ್ತೋಣ ಅನ್ನಿಸಿತು. ರಾತ್ರಿ 9 ಆದ ಮೇಲೆ ಏನು ತಾನೆ ತೆರೆದಿರುತ್ತದೆ. ಸರಿ ಯಾವುದಾದರೂ ಒಂದು ಬೀಚ್‌ಗಾದರೂ ಹೋಗೋಣ ಎಂದುಕೊಂಡೆ. ಮುಂಬೈನ ಟ್ರಾಫಿಕ್ ಎಷ್ಟೆಂದರೆ ಏರ್‌ರ್ಪೋರ್ಟ್‌ನಿಂದ ನಮ್ಮ ಹೋಟೆಲ್ 3km ದೂರದಲ್ಲಿತ್ತು. ಟ್ಯಾಕ್ಸಿ ಹಿಡಿದ ನಾವು ತಲುಪುವಷ್ಟರಲ್ಲಿ 10 ಗಂಟೆ ಆಗಿತ್ತು. ಸರಿ ಹೇಗೋ ತಲುಪಿದೆವಲ್ಲ ಎಂದುಕೊಂಡು ಗಡಿಬಿಡಿಯಲ್ಲಿ ಹೋಟೆಲ್‌ನಿಂದ ಹೊರಟೆ. ನೋಡಿದರೆ ನನ್ನ ಬಾಸ್ ಕೂಡ ಅಷ್ಟೇ ಗಡಿಬಿಡಿಯಲ್ಲಿ ಎಲ್ಲೋ ಹೊರಟಿದ್ದರು. ಇಬ್ಬರೂ ಮುಖ ಮುಖ ನೋಡಿಕೊಂಡು, ಮೊದಲಿಗೆ ನಾನೇ ಬಾಯಿಬಿಟ್ಟೆ, “ಹತ್ತಿರದ ಬೀಚ್  ಹೋಗೋಣ ಅಂತ ಹೊರಟಿದ್ದೇನೆ,” ಎಂದೆ. ತಕ್ಷಣವೇ ಅವರು, “ನಾನು ಕೂಡ ಅದನ್ನೇ ಹುಡುಕಿ ಹೊರಟಿದ್ದೇನೆ. ಮುಂಬೈನಲ್ಲಿ ಸ್ಟ್ರೀಟ್ ಫುಡ್ ಬಹಳ ಫೇಮಸ್. ಬೀಚ್ ತೀರದಲ್ಲಿ ಏನಾದರೂ ಸಿಗಬಹುದೇನೋ,” ಅಂದರು. ಕನಸಿನ ನಗರಿಯದು. ನಾವು ಊಟದ ಕನಸನ್ನು ಹೊತ್ತು ಹೊರಟಿದ್ದೆವು. ಮುಂಬೈನಿಂದ ರಾಜ್ ಕೋಟ್‌ಗೆ  ನಮ್ಮ ಫ್ಲೈಟ್ ಬೆಳಗಿನ ಜಾವ ಐದು ಗಂಟೆಗೆ ಇತ್ತು. ನಾವು ಹತ್ತಿರದ ಬೀಚಿನಲ್ಲಿ ತರ ತರಹದ ಪಾವ್ ಬಾಜಿ, ಕುಲ್ಫಿಗಳನ್ನೆಲ್ಲ ತಿಂದು ಹೋಟೆಲ್ ವಾಪಸ್ ಮುಟ್ಟುವಷ್ಟರಲ್ಲಿ ರಾತ್ರಿ 1 ಗಂಟೆ. ಬೆಳಗಿನ ಜಾವ ಮೂರುವರೆಗೆ ಎದ್ದು ಏರ್ಪೋರ್ಟ್  ತಲುಪಿ flight ಹಿಡಿದೆವು.

ಏರ್ ಇಂಡಿಯಾ ಫ್ಲೈಟ್. ನನಗೆ ಬಹಳ ಇಷ್ಟವಾದ ಫ್ಲೈಟ್ಗಳಲ್ಲಿ ಇದು ಮೊದಲನೆಯದು. ಅಗಲವಾದ ಆಸನಗಳು ಕಾಲು ಚಾಚುವಷ್ಟು ಜಾಗ ರುಚಿಕರವಾದ ಊಟ, ಸೀರೆಯಲ್ಲಿ ಓಡಾಡುವ ಗಗನಸಖಿಯರು.

ಐದೂವರೆಗೆ ರಾಜ್‌ಕೋಟ್‌ ಮುಟ್ಟಿದೆವು. ಪುಟ್ಟದಾದ ಸುಂದರವಾದ ಏರ್ಪೋರ್ಟ್. ಫ್ಲೈಟ್‌ ಇಳಿದ 20 ನಿಮಿಷದಲ್ಲಿ ಏರ್‌ಪೋರ್ಟ್‌ ಪೂರಾ ಖಾಲಿ! ಗೇಟುಗಳನ್ನೆಲ್ಲ ಬಂದು ಮಾಡಿದರು. ಇದೇನಪ್ಪಾ ವಿಚಿತ್ರ! ಎಂದುಕೊಂಡೆ. ಆಗ ಅಲ್ಲಿದ್ದವರು, “ಮುಂದಿನ ಫ್ಲೈಟ್ 9 ಗಂಟೆಗೆ ಇರುವುದು. ಅಲ್ಲಿ ತನಕ ಬೇರೇನೂ ಕೆಲಸವಿಲ್ಲ,” ಎಂದರು. ರಾಜ್‌ಕೋಟ್‌ನ ಸಹೋದ್ಯೋಗಿಗಳು ನಮ್ಮನ್ನು ಕರೆದುಕೊಂಡು ಹೋಗಲು ಬರಬೇಕಿತ್ತು. ಹೊತ್ತಲ್ಲದ ಹೊತ್ತಿನಲ್ಲಿ ನಾವು ತಲುಪಿದ್ದೆವು. “ಸಾಧ್ಯವಾದರೆ ಆರು ಗಂಟೆಗೆ ಬನ್ನಿ,” ಅಂತ ಅವರಿಗೆ ನಮ್ಮ ಬಾಸ್ ಹೇಳಿದ್ದರು. ಅವರು ಸರಿಯಾದ ಸಮಯಕ್ಕೆ ಬಂದರು. 

ಮುಂದಿನ ಕೆಲಸದ ಬಗ್ಗೆ ಮಾತಾಡುವ ಮೊದಲು ಮೊದಲಿಗೊಂದು ಬಿಸಿ ಬಿಸಿಯಾದ ಚಾಯ್ ಕುಡಿಯೋಣ ಎಂದು ಚಹಾ ಅಂಗಡಿಯೊಂದಕ್ಕೆ ಹೋದೆವು. ಅದ್ಭುತವಾದ ಚಾ. ಗುಜರಾತ್‌ನ ಹಾಲಿನ ರುಚಿಯ ಬೇರೆ. ಕೆಲಸಕ್ಕಾಗಿ ಎಲ್ಲಿ ಹೋಗಬೇಕು ಏನು ಮಾಡಬೇಕು ಎಂದೆಲ್ಲಾ ವಿಚಾರಿಸುತ್ತಾ ನಮ್ಮ ಬಾಸ್ ಇದ್ದಕ್ಕಿದ್ದ ಹಾಗೆ, “ದ್ವಾರಕ ಇಲ್ಲಿಂದ ಬಹಳ ದೂರ ಅಲ್ವಾ?” ಅಂತ ಕೇಳಿದರು. ಅದು ಅಲ್ಲಿಂದ ಸುಮಾರು 280 ಕಿಲೋಮೀಟರ್. ನಮ್ಮ ಕೆಲಸವಿದ್ದದ್ದು ಮೊರ್ಬಿ ಎಂಬ ಸಣ್ಣ ಊರಿನಲ್ಲಿ. ಇತ್ತೀಚಿಗೆ ಅಲ್ಲಿನ ಬ್ರಿಜ್  ಬಿದ್ದು 140 ಜನ ಜೀವ ಕಳೆದುಕೊಂಡು ದೊಡ್ಡ ಸುದ್ದಿಯಾಗಿತ್ತು. ನಾವು ಅದೇ ಬ್ರಿಡ್ಜ್ ದಾಟಿ ಕೆಲಸಗಳನ್ನೆಲ್ಲ ಮುಗಿಸಿಕೊಂಡವು. ಸಹೋದ್ಯೋಗಿಗಳು, “ಹೌದು ಸರ್ ದ್ವಾರಕೆ ಬಹಳ ದೂರ” ಎಂದರು. ನಾನು ಸುಮ್ಮನಿರಲಾರದೆ, “300 ಕಿಲೋಮೀಟರ್ ಅಂದರೆ ಸರಿಸುಮಾರು 5 ಗಂಟೆಗಳ ಪ್ರಯಾಣ. ಇವತ್ತು ದಿನವೆಲ್ಲ ಕೆಲಸ ಮುಗಿಸಿ ಸಾಯಂಕಾಲ ಟ್ರೈನು ಹತ್ತಿದರೆ ರಾತ್ರಿ ಅಲ್ಲಿ ತಲುಪುತ್ತೇವೆ. ಬೆಳಗಿನ ಜಾವ ದರ್ಶನ ಮುಗಿಸಿ ವಾಪಸ್ ಅಲ್ಲಿಂದಲೇ ಹೊರಟರಾಯಿತು,” ಎಂದು ಹೇಳಿದೆ. ತಟ್ಟನೆ ಹೊಳೆದಿದ್ದು ಜಾಮ್ ನಗರದ ಪೋರ್ಟ್‌ನಲ್ಲಿ ನಮ್ಮ ಮಷಿನ್ ಒಂದನ್ನು ಅಲ್ಲಿ ಕಸ್ಟಮೈಸ್‌ಗೊಳಿಸಿ ಬಳಸುತ್ತಿದ್ದರು. ಅದನ್ನು ಒಮ್ಮೆ ನೋಡಬೇಕೆಂದುಕೊಂಡಿದ್ದೆವು. ಮೊರ್ಬಿ ಕೆಲಸ ಮುಗಿಸಿ ಜಾಮ್‌ನಗರ್ ಕಡೆ ಹೊರಡೋಣ. ಜಾಮ್‌ನಗರ್ ಮೊರ್ಬಿ ಹಾಗೂ ದ್ವಾರಕೆಗೆ ಮಧ್ಯಕ್ಕೆ ಬರುತ್ತದೆ. ಎರಡೂ ಕೆಲಸಗಳು ಮುಗಿಯುತ್ತವೆ ಎಂದುಕೊಂಡು ಹೊರಟೆವು. ನಾವು ಈ ಸಲ ನೋಡ ಹೊರಟದ್ದು ಸೆರಾಮಿಕ್ ಟೈಲ್ಸ್‌ಗಳ ತಯಾರಿಕೆಯನ್ನು. ಎಷ್ಟು ಸುಂದರ ಬಣ್ಣ ಬಣ್ಣದ ಟೈಲುಗಳೆಂದರೆ ನೋಡಲೆರಡು ಕಣ್ಣು ಸಾಲದು. ನಮ್ಮ ಮಷೀನ್ಗಳು ಈ ಟೈಲ್ಸ್ ಫ್ಯಾಕ್ಟರಿಗಳ ಒಳಗೆ ಮಣ್ಣನ್ನು ಇಳಿಸುವ ಕೆಲಸಗಳನ್ನು ಮಾಡುತ್ತಿದ್ದವು. ಸುತ್ತಮುತ್ತಲಿನ ಭೂಮಿಯಲ್ಲೆಲ್ಲಾ, ತರಹ ತರಹದ  ಮಣ್ಣುಗಳು ದೊರೆಯುತ್ತದೆ. ಮಣ್ಣಿನ ತೇವಾಂಶ, ಗಟ್ಟಿತನ, ಬಣ್ಣವನ್ನು ಆಧರಿಸಿ ಅವುಗಳನ್ನು ವಿಂಗಡಿಸುತ್ತಾರೆ. ದೊಡ್ಡ ದೊಡ್ಡ ಟ್ರಕ್ ಗಳು ಇದನ್ನು ಹೊತ್ತು ತರುತ್ತವೆ.

ನೆನೆ ಹಾಕಿ ಕುದಿಸಿ ತಣ್ಣಗಾಗಿಸಿ ಬೇಕಾದ ಆಕಾರಕ್ಕೆ ತಂದು ಸುಂದರವಾದ ಚಿತ್ರಗಳನ್ನು ಬಿಡಿಸಿ ಬಣ್ಣ ಹಚ್ಚಿ ಟೈಲ್‌ಗಳನ್ನು ತಯಾರಿಸುತ್ತಾರೆ. ನಮ್ಮ ದೇಶದಲ್ಲಷ್ಟೇ ಅಲ್ಲ ಹೊರದೇಶಕ್ಕೂ ಇವುಗಳನ್ನು ರವಾನಿಸುತ್ತಾರೆ. 

ಈ ಕೆಲಸ ಮುಗಿಸಿ ಜಾಮ್‌ನಗರ್‌ಗೆ ಹೊರಟೆವು. ಅಲ್ಲಿ ಪುನಃ  ಪೋರ್ಟ್‌ನಲ್ಲಿ ಕೆಲಸ. ಇಲ್ಲಿ ಯೂರಿಯಾ ಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಾರೆ. ಸಾವಿರಾರು ಟನ್ ಯೂರಿಯ ನಮ್ಮ ದೇಶಕ್ಕೆ ಬರುತ್ತದೆ. ಅಂತರಾಷ್ಟ್ರೀಯ ವೆಸೆಲ್ ಒಂದು ಈ ಯೂರಿಯಾವನ್ನು ಹೊತ್ತು ತರುತ್ತದೆ. ಪೋರ್ಟಿನಿಂದ ಸುಮಾರು ದೂರದಲ್ಲಿ ಈ ವೆಸೆಲ್ಲನ್ನು ನಿಲ್ಲಿಸುತ್ತಾರೆ. ಇಂಟರ್ನ್ಯಾಷನಲ್ ವಾಟರ್ ರೂಲ್ಸ್. ಅಲ್ಲಿಂದ ಪೋರ್ಟ್ ತನಕ ಸ್ವಲ್ಪ ಚಿಕ್ಕದಾದ ಹಡಗುಗಳು ಹೋಗಿ ಯೂರಿಯಾವನ್ನು ಪೋರ್ಟ್ ತನಕ ಮುಟ್ಟಿಸುತ್ತದೆ. ಈ ಹಡಗುಗಳಿಂದ ಬಂದ ಸಾಮಗ್ರಿಗಳನ್ನು ನಮ್ಮ ಮೆಷಿನ್‌ಗಳು ತೆಗೆದು ಪೋರ್ಟನ ಒಳಗೆ ರಾಶಿ ಹಾಕುತ್ತವೆ. ಅಲ್ಲಿಂದ ಇದನ್ನು ಪ್ಯಾಕ್‌ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ರವಾನೆ ಮಾಡುತ್ತಾರೆ. ಇಲ್ಲಿಯ ಕೆಲಸ ಮುಗಿಸುವಷ್ಟರಲ್ಲಿ ಸಮಯ 5:00 ಆಗಿತ್ತು.

ನಮ್ಮ ರಾಜಕೋಟ್ ಸಹೋದ್ಯೋಗಿ ಗಳ ಸಹಾಯದಿಂದ ಗಾಡಿ ಒಂದು ಬಾಡಿಗೆಗೆ ಸಿಗಬಹುದಾ ಎಂದು ಕೇಳಿದೆವು. ಗಾಡಿ ಅವರಿಗೆ ಬೇಕಾದ್ದರಿಂದ ಇಲ್ಲ, ಇಲ್ಲ ಗಾಡಿ ಅವಶ್ಯಕತೆ ಇಲ್ಲ. ಒಳ್ಳೆಯ ಪ್ರೈವೇಟ್ ಬಸ್ಸುಗಳು ಹೋಗುತ್ತವೆ. ಇಲ್ಲಿ ಹತ್ತಿದರೆ ನಿಮ್ಮನ್ನು ನೇರವಾಗಿ ದ್ವಾರಕೆಗೆ ತಲುಪಿಸುತ್ತದೆ ಎಂದರು. ನಾನು ಸಂಶಯದಲ್ಲಿ, “ಬೇಡ ಗೌರ್ಮೆಂಟ್ ಬಸ್ ಗೆ ಹೋಗೋಣ,” ಎಂದೆ. ಅವರು, “ಇಲ್ಲ, ಇಲ್ಲ ಪ್ರೈವೇಟ್ ವೋಲ್ವೋ ಬಸ್ಸುಗಳಿವೆ. ಆ ರಸ್ತೆ ಕಾಮಗಾರಿ ಜಾರಿಯಲ್ಲಿದೆ. ಹಾಗಾಗಿ ವೋಲ್ವೋ ಬಸ್ಸಿನಲ್ಲಿ ಸಸ್ಪೆಕ್ಷನ್ ಚೆನ್ನಾಗಿರುತ್ತದೆ. ಅದರಲ್ಲಿ ಹೋಗಿ,” ಎಂದು ಹೇಳಿದರು. ನಮ್ಮನ್ನು ಬಸ್ ಸ್ಟಾಪ್ ನಲ್ಲಿ ಇಳಿಸಿ ಅವರು ಹಿಂತಿರುಗಿದರು. ನಾನು ಮತ್ತು ನಮ್ಮ ಬಾಸ್ ಇಬ್ಬರೇ. 6:00ಗೆ ಬಸ್ಸು ತಡವಾಗಿ ಹೋಗುತ್ತದೆ ಎಂದು ಗಡಿಬಿಡಿಯಿಂದ ಟಿಕೆಟ್ ತೊಗೊಂಡು ಕೂತೆವು. ಆರು ಆಯಿತು ಆರೂವರೆ ಆಯಿತು.. ಬಸ್‌ ದರ್ಶನವೇ ಇಲ್ಲ. ಆರುಮುಕ್ಕಾಲು ಸುಮಾರಿಗೆ ಒಂದು ಚಿಕ್ಕ ಟೆಂಪೋ ಟ್ರಾವೆಲರ್‌ಗಿಂತ ಚಿಕ್ಕದಾದ ಗಾಡಿಯೊಂದು ಬಂದಿತ್ತು.  ಸಕ್ಕರೆಯನ್ನು ಕಂಡ ಇರುವೆಯಂತೆ ಎಲ್ಲರೂ ಅದರೊಳಗೆ ಜಿಗಿದರು. ನಾವು ದೊಡ್ಡ ಲಗೇಜ್ ಗಳನ್ನು ಬೇರೆ ಇಟ್ಟುಕೊಂಡಿದ್ದವು. ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ನಿಂತೆವು. ಇದರಲ್ಲಿ ದ್ವಾರಕೆ ತನಕ ಹೋಗುವುದು ಹೇಗೆ? ಎಂದು ಗಾಬರಿಯಾಯಿತು. ಬಸ್ಸಿನವರ ಹತ್ತಿರ ಜಗಳಕ್ಕೆ ಬಿದ್ದೆವು. ಅವರು, “ಇಲ್ಲ, ಈ ಬಸ್ಸು ನಿಮ್ಮನ್ನು ದೊಡ್ಡ ಬಸ್ಸಿನ ಹತ್ತಿರ ಕರೆದುಕೊಂಡು ಹೋಗುತ್ತದೆ. ಆ ಬಸ್ಸು ನಿಮ್ಮನ್ನು ದ್ವಾರಕೆಗೆ ಮುಟ್ಟಿಸುತ್ತದೆ,” ಎಂದರು. ಅವರ ಮಾತು ನಂಬಿಕೊಂಡು ಆಟೋ ಹಿಡಿದು ಆ ದೊಡ್ಡ ಬಸ್ಸಿನ ಹತ್ತಿರ ಹೊರಟೆವು. ಅಲ್ಲಿ ಎಲ್ಲಿದೆ ನಮ್ಮ volvo ಬಸ್ ಎಂದು ಸುತ್ತಮುತ್ತ ಹುಡುಕಾಡಿದೆವು. 

ವೋಲ್ವೋ ಬಸ್ ಎಂದು ಯಾವುದೋ ಡಕೋಟ ಗಾಡಿಯನ್ನು ತೋರಿಸಿ ನಮ್ಮನ್ನೆಲ್ಲಾ ಅದಕ್ಕೆ ಹತ್ತಿಸಿದರು. “ಇದು ಯಾವ ಕಡೆಯಿಂದ ಓಲ್ವೋ ಬಸ್ಸು ಮಾರಾಯ?” ಎಂದು ಡ್ರೈವರ್ ನ ಕೇಳಿದರೆ ಅವನು, “ಇದು ವೋಲ್ವೋ ಬಸ್ಸೇ. ಸೆಕೆಂಡ್ ಹ್ಯಾಂಡಿ ನಲ್ಲಿ ಖರೀದಿಸಿದೆ 15 ವರ್ಷಗಳ ಕೆಳಗೆ,” ಅಂತ ಹೇಳಿದ! ನಗುವುದೋ ಅಳುವುದೋ ಗೊತ್ತಾಗಲಿಲ್ಲ.

ಬಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಸೀಟ್ ಅನ್ನು ಕಾಯ್ದಿರಿಸುತ್ತಾರೆ. ಟಿಕೆಟ್ ತೆಗೆದುಕೊಂಡರು ಕೂಡ ಗಂಡಸರಿಗೆ ಸೀಟ್ ಇರುವುದಿಲ್ಲ. ಅವರು ಡ್ರೈವರ್ ಪಕ್ಕದಲ್ಲಿ ಅಡ್ಜಸ್ಟ್ ಮಾಡಿ ಕೂಡಬೇಕು. ನನಗೆ ಸೀಟ್ ಸಿಕ್ಕಿತು. ನಮ್ಮ ಬಾಸ್ ಡ್ರೈವರ್‌ ಪಕ್ಕದಲ್ಲಿ ತೂರಿಕೊಂಡು ಕೂತಿದ್ದರು. ನನ್ನ ಪಕ್ಕದ ಸೀಟಿನ ಆಂಟಿಗೆ ಭಾರಿ ಸಂಕಟ. ಅವರ ಹರೆಯದ ಮಗಳು ನಿಂತುಕೊಂಡಿದ್ದಾಳೆ. ಅವಳನ್ನು ಕೂರಿಸಿಕೊಳ್ಳಬೇಕು ಎಂದು. ಇದ್ದ ಎರಡು ಸೀಟಿನಲ್ಲಿ ಆಂಟಿ ಒಂದೂವರೆ ಸೀಟನ್ನು ಆಕ್ರಮಿಸಿಕೊಂಡಿದ್ದರು. ಇನ್ನು ಮಿಕ್ಕ ಅರ್ಧ ಸೀಟಿನಲ್ಲಿ ನಾನು ಮುದುರಿ ಕೂತಿದ್ದೆ. ಕೊನೆಗೆ ಸಹವಾಸ ಸಾಕಾಗಿ, “ನಿಮ್ಮ ಮಗಳನ್ನೇ ಕೂರಿಸಿಕೊಳ್ಳಿ,” ಎಂದು ಧಾರಾಳವಾಗಿ ಸೀಟನ್ನು ಬಿಟ್ಟು ಕೊಟ್ಟೆ. ನಂತರ ಆ ಮಗಳನ್ನು ಮಾತಾಡಿಸಲು ಶುರು ಮಾಡಿದೆ. ಆ ಹುಡುಗಿ ಸುಮಾರು 21- 22 ವರ್ಷದವಳು. ಅವರ ಊರು ಯಾವುದೋ ಸಣ್ಣ ಹಳ್ಳಿಯಂತೆ. ಆ ಊರಿನಲ್ಲಿ ನಾಲ್ಕನೇ ತರಗತಿಯ ತನಕ ಮಾತ್ರ ಶಾಲೆ ಇರುವುದು. ಅದಾದ ನಂತರ ಓದುವುದಕ್ಕೆ ಈ ಹುಡುಗಿ ದಿನವೂ ಶಾಲೆಗೆ ಹೋಗಿಬರಲು ಬಸ್ಸಿನಲ್ಲಿ 80 ಕಿಲೋಮೀಟರ್   ಓಡಾಡುತ್ತಿದ್ದಳಂತೆ. ಇಷ್ಟೆಲ್ಲದರ ಮಧ್ಯೆ ಗ್ರಾಜುಯೇಷನ್ ಮುಗಿಸಿ ಈಗ ಆಕೆ ಶಿಕ್ಷಕಿ. ಪಾಠ ಹೇಳಿಕೊಡಲು ಕೂಡ ಅಷ್ಟೇ ದೂರ ಓಡಾಡಬೇಕು. “ಹೇಗಮ್ಮ ದಿನವೂ ಈ ಬಸ್ಸನ್ನು ಹಿಡಿದು ಇಷ್ಟೊಂದು ಸರ್ಕಸ್ ಮಾಡಿದೆ?” ಎಂದು ಕೇಳಿದೆ.  “ನಮ್ಮ ಇಡೀ ಊರಿನಲ್ಲಿ ನಾನೊಬ್ಬಳೇ ಇಂಗ್ಲಿಷ್ ಕಲಿತಿರುವುದು,” ಎಂದು ನಕ್ಕಳು. ಮುಂದಕ್ಕೆ ಓದುವ ಆಸೆ ಏನು ಇಲ್ಲ. ಅದಕ್ಕೆ ತಕ್ಷಣವೇ ಕೆಲಸಕ್ಕೆ ಸೇರಿಕೊಂಡೆ ಎಂದಳು. ಆ ಡಕೋಟ ಬಸ್ಸಿನಲ್ಲಿ ಆ ರಸ್ತೆ ಇಲ್ಲದ ರಸ್ತೆಯಲ್ಲಿ ತಿಣುಕಾಡುತ್ತಾ ಸಾಗುತ್ತಿತ್ತು. ಬಸ್ಸಿನಲ್ಲಿದ್ದ ಕಂಬಿಯೊಂದು ಕಿರ್‌ಗುಟ್ಟಿ ಬಸ್ಸಿನಲ್ಲಿರುವವರಿಗೆಲ್ಲ ಕಿರಿಕಿರಿ ಉಂಟುಮಾಡುತ್ತಿತ್ತು. ಯಾರೋ ಒಬ್ಬ ಅಸಾಮಿ ಕೋಪದಲ್ಲಿ ಎದ್ದು ಆ ಕಂಬಿಯನ್ನು ಕಿತ್ತು ಹೊರಕ್ಕೆ ಬಿಸಾಡಿ ಕೂತ. 

ನಮ್ಮ ಬಾಸ್‌ ಇದ್ದಕ್ಕಿದ್ದಂತೆ ಎದ್ದು ನಾನಿದ್ದಲ್ಲಿಗೆ ಬಂದರು. ಕರೆಂಟು ಹೊಡೆದ ಕಾಗೆಯಂತೆ ಬಿಳುಚಿಕೊಂಡಿದ್ದ ಅವರ ಮುಖ ನೋಡಿ ಗಾಬರಿಯಾಯಿತು. ಏನಾಯಿತು ಎಂದು ವಿಚಾರಿಸಿದೆ. ಅವರು ಕೂತಿದ್ದ ಸೀಟ್‌ ಎದುರಿಗೆ ಸಣ್ಣ ಮಗುವಿನೊಂದಿಗೆ ಬಂದಿದ್ದ ಕುಟುಂಬ ಕೂತಿತ್ತು. ಆ ಮಗು ಅಳುತ್ತಿತ್ತು. ಅದನ್ನು ಸಮಾಧಾನ ಪಡಿಸಲು ಡ್ರೈವರ್‌ ಇರುವವರ ಕಿವಿ ತೂತಾಗುವಷ್ಟು ಜೋರಾಗಿ ಹಾಡು ಹಾಕಿದ್ದ. ಆ ಹಾಡು ಸಾಲದೆಂಬಂತೆ ಆ ಮಗುವಿನ ಮನೆಯವರೆಲ್ಲ ಒಟ್ಟಾಗಿ ಹಾಡಲು ಶುರುಮಾಡಿದ್ದರು. ಅದನ್ನು ಕೇಳಲಾಗದೆ ನಮ್ಮ ಬಾಸ್‌ noise cancellation ear buds ಹಾಕಿಕೊಂಡು ಕೂತಿದ್ದರು. ಬಹುಶಃ samsung ನವರು ಈ ತರಹದ ಪರಿಸ್ಥಿತಿಯಲ್ಲಿ ಇಯರ್ buds ಗಳನ್ನು ಟೆಸ್ಟ್ ಮಾಡಿಲ್ಲವೇನೋ. ಯಾವ ನಾಯ್ಸ್ ಕ್ಯಾನ್ಸಲ್ಲೇಶನ್ ವರ್ಕ್ ಆಗಿರಲಿಲ್ಲ. 

ಈ ಬಸ್‌ನ ಪ್ರಯಾಣ ಸಾಕಾಗಿ ಮುಂದೆ ಎಲ್ಲಾದರೂ ಇಳಿದು ಹೇಗಾದರೂ ಗಾಡಿಮಾಡಿಕೊಂಡು ದ್ವಾರಕೆ ಸೇರೋಣ ಅಂತ ನಿರ್ಧಾರ ಮಾಡಿದೆವು. ಸಿಕ್ಕವರಿಗೆಲ್ಲ ಫೋನ್‌ ಮಾಡಿ ಗಾಡಿ ಅರೆಂಜ್‌ ಮಾಡಲು ಸಾಧ್ಯವೇ ಅಂತ ಬೇಡಾಡಿದೆವು. ನಮ್ಮ ಅದೃಷ್ಟಕ್ಕೆ ಕೊನೆಗೂ ಒಬ್ಬರು ಗಾಡಿಯನ್ನು ಕಳಿಸಿದರು. ಬಸ್‌ ನಿಲ್ಲುವುದನ್ನೇ ಕಾಯುತ್ತಿದ್ದು ಒಂದೇ ಬಸ್‌ನಿಂದ ಹೊರಕ್ಕೆ ಹಾರಿದೆವು. ಅಂತೂ ಗಾಡಿ ಬಂದು ದ್ವಾರಕೆಯತ್ತ ಹೊರಟೆವು. ನಾವಿಳಿದಲ್ಲಿಂದ ದ್ವಾರಕೆಗೆ ಮೂರು ಗಂಟೆಯ ಹಾದಿ ಕ್ರಮಿಸಬೇಕಿತ್ತು. ರಾತ್ರಿ ಏರುತ್ತಾ ಚಳಿ ಹೆಚ್ಚಾಗುತ್ತಿತ್ತು. ಸುಂದರವಾದ ಚಂದ್ರ ಭೂಮಿಯನ್ನೇ ಮುಟ್ಟುತ್ತಿರುವಂತೆ ಜೊತೆಗೆ ಸಾಗಿಬಂದ.  ಅಂತೂ ಇಂತೂ ಮಧ್ಯರಾತ್ರಿ ದ್ವಾರಕೆ ತಲುಪಿದೆವು. 

ಜರಾಸಂಧನ ಜೊತೆಯ ಯುದ್ಧದ ನಂತರ ಕೃಷ್ಣ ಮಥುರೆಯಿಂದ ದೂರವಿರಲು ನಿಶ್ಚಯಿಸಿ, ತನ್ನವರಿಗಾಗಿ ಹೊಸ ನಗರ ನಿರ್ಮಾಣಕ್ಕೆ ಮುಂದಾದ. ದೇವಶಿಲ್ಪಿ ವಿಶ್ವಕರ್ಮನಿಗೆ ಸಮುದ್ರ ತೀರದಲ್ಲಿ ನಗರ ನಿರ್ಮಿಸಲು ಕೇಳಿದನಂತೆ. ಹೀಗೆ ನಿರ್ಮಾಣವಾದ ದ್ವಾರಕೆಯಲ್ಲಿ ಮಥುರಾದಿಂದ ವಲಸೆ ಬಂದ ಯಾದವರು ನೆಲೆನಿಂತರು. ಇಲ್ಲಿರುವ ಕೃಷ್ಣನಿಗೆ ಅರ್ಪಿತವಾದ ದ್ವಾರಕಾಧೀಶ ದೇವಾಲಯವನ್ನು ಮೂಲತಃ ಸುಮಾರು 2,500 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

ಬೆಳಗಿನ ಜಾವದಲ್ಲೇ ದರ್ಶನ ಮಾಡಿಕೊಂಡು ಇಲ್ಲಿಂದ ಹೊರಡಬೇಕಿತ್ತು. ದೇವಸ್ಥಾನಕ್ಕೆ ಹೊರಟೆವು. ಕೃಷ್ಣ ಇಲ್ಲಿನ ರಾಜ. ರಾಜನ ಅಪ್ಪಣೆ ಇಲ್ಲದೆ ಎಲ್ಲೂ ಹೋಗಲಾಗುವುದಿಲ್ಲ.  ಅಪ್ಪಣೆ ಸಿಕ್ಕಿತು. ದೇವಸ್ಥಾನದ ಮುಂಭಾಗದಲ್ಲಿ ಮಹಾದ್ವಾರ, ದೇವಸ್ಥಾನದ ಗೋಡೆಗಳನ್ನು ನೋಡಿ ಆಶ್ಚರ್ಯ. ನಮ್ಮ ಬಟ್ಟೆಗಳಲ್ಲಿ ಕಟ್ ವರ್ಕ್ ಎಂಬ್ರಾಯ್ಡರಿ ಅಂತಾರಲ್ಲ ಅಂತಹದ್ದೇ ಕೆಲಸವನ್ನು ಯಾರೋ ಕಲ್ಲಿನಲ್ಲಿ ಮಾಡಿದ್ದರು. ಊಹೆಗೂ ಸಿಗದಷ್ಟು ವಿಶಿಷ್ಟವಾಗಿತ್ತು. ಕಲ್ಲಿನಲ್ಲಿ ಕಟ್ ವರ್ಕ್ ಮಾಡಬಹುದೆಂದು ಊಹಿಸಲು ಸಾಧ್ಯವಿಲ್ಲ. ಹಾಳೆ ಹಾಗೂ ಬಟ್ಟೆಯ ಮೇಲೆ ಮಾಡುವಷ್ಟಕ್ಕೆ ಸಾಕಾಗಿ ಹೋಗುತ್ತದೆ.

ಜನ ಕಡಿಮೆ ಇದ್ದರು. ಅದ್ಭುತವಾದ ದರ್ಶನ. ರಾಜ, ರಾಜನಾಗಿಯೇ ನಿಂತಿದ್ದ. ಪುಟ್ಟ ಕೃಷ್ಣನ ವಿಗ್ರಹ ಕಣ್ಣು ಕೋರೈಸುವ ಕಪ್ಪು. ಎರಡು ಸಲ ದರ್ಶನ ಮಾಡಿ ಹೊರಬಂದು ದೇವಸ್ಥಾನದ ಗೋಡೆ ಶಿಲ್ಪಕಲೆ ಕೆತ್ತನೆಯಲ್ಲಿ ಕಳೆದು ಹೋಗಿದ್ದೆ. ನನಗೇನು ಮುಂಚಿನಿಂದಲೂ ದೇವಸ್ಥಾನ ಅಂದರೆ ಅಷ್ಟೊಂದು ಹುಚ್ಚೆನಿಲ್ಲ. ಜನ ಜಾಸ್ತಿ ಇದ್ದರಂತೂ ಕಿರಿಕಿರಿ  ಆಗುತ್ತದೆ. ಆದರೆ ನಮ್ಮ ಬಾಸ್‌ಗೆ ಕೃಷ್ಣನ ಮೇಲೆ ಅತಿ ಮೋಹ. ಕೃ,ಷ್ಣನನ್ನು ನೋಡುತ್ತಾ ಕಳೆದುಹೋಗಿ 9:00ಗೆ online ಮೀಟಿಂಗ್ ಕೂಡ ಮರೆತುಬಿಟ್ಟಿದ್ದರು.  

8:00 ಆದರೂ ಈ ಮನುಷ್ಯ ಹೊರ ಬರುವ ಲಕ್ಷಣಗಳು ಕಾಣುತ್ತಿರಲಿಲ್ಲ. ದೇವಸ್ಥಾನದ ಹೊರಗೆ ಬಂದು ಮ್ಯಾಪನ್ನು ನೋಡಿದೆ ಭಾರತದ ಪಶ್ಚಿಮದ ತುತ್ತ ತುದಿಯಲ್ಲಿ ನಿಂತಿದ್ದೆ. ಏನೋ ವಿಚಿತ್ರವಾದ ಖುಷಿ. ಪಕ್ಕಕ್ಕೆ ಸಮುದ್ರ. ಭೂಮಿಯ ಕೊನೆಯಲ್ಲಿದ್ದೀನೇನೋ ಅನ್ನಿಸಿತು. ಕಾರು ಹತ್ತಿ ವಾಪಸ್ಸು ಹೊರಟವು. ಮಧ್ಯದಲ್ಲಿ ಯಾರೋ ಫೋನ್ ಮಾಡಿ ಅಲ್ಲೇ ಒಂದು ಜ್ಯೋತಿರ್ಲಿಂಗವು ಇದೆ ನೋಡಿ ಬನ್ನಿ ಅಂತ. ಸರಿ ಮೀಟಿಂಗ್ ಅಟೆಂಡ್ ಮಾಡುತ್ತಾ ಮಾಡುತ್ತಾ ಜ್ಯೋತಿರ್ಲಿಂಗವನ್ನೂ ನೋಡಿದೆವು ವಾಪಸ್ ಹೋಗುವ ರಸ್ತೆ ಉದ್ದಕ್ಕೂ ಉಪ್ಪು ಹಾಸು. ಉಪ್ಪು ತಯಾರಿಕೆಯ ಅಂಗಳ. ಬಿಳಿಯ ಮರುಭೂಮಿಯಂತೆ ಕಾಣುತ್ತಿತ್ತು. ನೀಲಾಕಾಶದ ಕೆಳಗೆ ಕಣ್ಣುಹಾಯಿಸಿದಷ್ಟು ದೂರ ಬಿಳಿಹರಳ ಹಾಸು.

 ನಾವು ಹೋಗಿದ್ದು ಚಳಿಗಾಲದಲ್ಲಿ. ಹಾಗಾಗಿ ವಲಸೆಹಕ್ಕಿಗಳು ಯಥೇಚ್ಛವಾಗಿ ಕಂಡವು . Flamingos ಬರವೇ ಇರಲಿಲ್ಲ. ಉಪ್ಪಿನ ಬಿಳಿಯ ಮೇಲೆ ಈ ಕೆಂಪು ಪಕ್ಷಿಗಳು ಬಹಳ ಸುಂದರವಾಗಿ ಕಂಡವು. ಇವುಗಳಲ್ಲದೆ ಇನ್ನೂ ಹಲವು ಹಕ್ಕಿಗಳು ಅಲ್ಲಿದ್ದವು. ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು. ದ್ವಾರಕಾಧೀಶನ ಸುಂದರ ವಿಗ್ರಹ, ಅದ್ಭುತ ಶಿಲ್ಪಕಲೆ, ಉಪ್ಪುಹರಳ ರಾಶಿ, ಹಕ್ಕಿಗಳ ನೆನಪಿನೊಂದಿಗೆ ಊರ ದಾರಿ ಹಿಡಿದೆವು.

‍ಲೇಖಕರು Admin

November 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: