ಆಡಳಿತದಲ್ಲಿ ತಾಯ್ತನ ಇರಬೇಕು: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅಭಿಮತ…

ಸಮಾಜದಲ್ಲಿನ ಸಮಸ್ಯೆಗಳು ಸರಿಹೋಗಬೇಕೆಂದರೆ ಆಡಳಿತದಲ್ಲೊಂದು ತಾಯ್ತನ ಬೇಕು. ಅದಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರುವಂತಾಗಬೇಕು ಎಂದು ಹಿರಿಯ ಲೇಖಕಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರು ಹೇಳಿದರು.

ಅವರು ಇಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದವರು ಆಯೋಜಿಸಿದ್ದ ಇಂದಿರಾ ರತ್ನ ಪ್ರಶಸ್ತಿ ಪ್ರದಾನ, ಕನ್ನಡ ರಾಜ್ಯೋತ್ಸವ ಮತ್ತು ಕವಿಗೋಷ್ಟಿ ಸಮಾರಂಭದಲ್ಲಿ ಇಂದಿರಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಕುರಿತು ನಮ್ಮ ಲೇಖಕಿಯರು ಚಿಂತಿಸಿ ಬರೆದು ಸರ್ಕಾರದ ಗಮನಕ್ಕೆ ತರಬೇಕು. ಚಿಕ್ಕಚಿಕ್ಕ ಮಕ್ಕಳನ್ನಿಟ್ಟುಕೊಂಡು ತಾಯಂದಿರು ಭಿಕ್ಷೆ ಬೇಡುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ಈ ಭಿಕ್ಷಾಟನೆ ಅನ್ನೋದೇ ಹೋಗಬೇಕು. ಇಂಥ ಶೋಷಿತ ಸಮುದಾಯಗಳ ಕುರಿತು ನಾವು ಬರೆದು ಸರ್ಕಾರವನ್ನು ಎಚ್ಚರಿಸಿ ಅವುಗಳನ್ನು ಸರಿಮಾಡುವಲ್ಲಿ ಶ್ರಮಿಸಬೇಕು.

ಈಗ ಬಣ್ಣಗಳ ಮೇಲೆ ರಾಜಕೀಯವಾಗುತ್ತಿದೆ. ಬಿಳಿಯ ಬಣ್ಣವೇ ಶ್ರೇಷ್ಠ ಎಂಬಂತಾಗಿದೆ. ಬಿಳಿಯ ಬಣ್ಣ ಶುಭ್ರತೆಯ ಸಂಕೇತ. ಇದನ್ನು ನಾವು ಅರಿಯಬೇಕು. ಕೌದಿಯಂತಹ ಬಣ್ಣಬಣ್ಣಗಳಿಂದ ತುಂಬಿದ ದೇಶ ನಮ್ಮದಾಗಬೇಕಿದೆ. ಇಂದಿರಾ ಮತ್ತು ರತ್ನ ಇಬ್ಬರು ತಂಗಿಯರ ಹೆಸರಿನಲ್ಲಿ ಒಬ್ಬ ಅಣ್ಣ ಪ್ರಶಸ್ತಿ ಇಟ್ಟಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ನನಗಾಯಿತು. ಯಾಕೆಂದ್ರೆ ಎಷ್ಟೋ ಕಡೆ ಅಣ್ಣತಮ್ಮಂದಿರು ಆಸ್ತಿಗಾಗಿ ಕೋರ್ಟು ಕಚೇರಿ ಅಂತೆಲ್ಲ ಹೋಗ್ತಾರೆ. ಇಂಥವರ ನಡುವ ತಂಗಿಯರ ಹೆಸರಲ್ಲಿ ಪ್ರಶಸ್ತಿ ಇಟ್ಟು ಅವರ ಹೆಸರು ಶಾಶ್ವತವಾಗಿರುವಂತೆ ನೋಡಿಕೊಂಡ ಅಣ್ಣನ ದೊಡ್ಡತನ ಇಲ್ಲಿದೆ. ನಾನು ಕೂಡ ನನ್ನ ಗತಿಸಿಹೋದ ತಂಗಿ ಕುಮುದಾ ನಾಯಕ್ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಲ್ಲಿ ಪ್ರಶಸ್ತಿ ಇಡುತ್ತೇನೆಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಯತ್ರಿ ಶಶಿಕಲಾ ವೀರಯ್ಯ ಸ್ವಾಮಿ ಅವರು, ಸಾಹಿತಿಗಳು ಯಾವಾಗಲೂ ವಿರೋಧ ಪಕ್ಷದ ನಾಯಕರ ಹಾಗಿರಬೇಕು. ಆಡಳಿತ ಪಕ್ಷದ ನ್ಯೂನತೆಗಳನ್ನು ಎತ್ತಿ ತೋರಿಸಿ ಅವರು ಸರಿದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು. ತಾಯಿತನ, ಸಾಮಾಜಿಕ ಪ್ರಜ್ಞೆ, ಸಮಾಜಮುಖಿಯಾದ ವಿಷಯಗಳನ್ನು ಎತ್ತಿ ಬರೆಯಬೇಕು ಎಂದರು.
ಕವಿತೆ ಬರೆಯುವುದು ಸುಲಭದ ಕೆಲಸವಲ್ಲ. ಅದರಲ್ಲಿ ನಮ್ಮನ್ನೂ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಕವಿತೆಗಳು ಹೊರಬರಲು ಸಾಧ್ಯ. ಕನ್ನಡ ಮಹಿಳಾ ಕವಿಗಳ ಸತ್ವ ನೋಡುವಾಗ ಮಹಿಳೆಯರ ಮೇಲಿನ ದೌರ್ಜನ್ಯ ಎದ್ದುಕಾಣುತ್ತದೆ. ಇದು ಎಲ್ಲ ನೆಲದಲ್ಲೂ ಆಗಿದೆ. ಗ್ರೀಕ್, ಜರ್ಮನ್, ರೋಮ್, ಪಂಜಾಬಿ ಕವಯತ್ರಿಯರನ್ನು ಉದಾಹರಿಸಿದರು.

ಪ್ರಾರಂಭದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕನ್ನಡ ಪರ ಚಟುವಟಿಕೆ, ಹೋರಾಟ ಮಾಡಿದವರಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಇಂದಿರಾ ರತ್ನ ಪ್ರಶಸ್ತಿ ಇಟ್ಟ ಅವರ ಅಣ್ಣ ತುಮಕೂರಿನ ರಾಜನ್ ಅವರ ಆಸೆಯಾಗಿತ್ತು. ಅದಕ್ಕಾಗಿ ನಾವು ಬಿ.ಟಿ.ಲಲಿತಾನಾಯಕ್ ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ಕನ್ನಡಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತ ಬಂದಿರುವವರು. ಲಂಬಾಣಿ ತಾಂಡ್ಯದಲ್ಲಿ ಹುಟ್ಟಿದ ಮಹಿಳೆ, ಕೇವಲ ಪ್ರೌಢಶಾಲೆಯವರೆಗೆ ಓದಿ, ಸಚಿವ ಸ್ಥಾನದವರೆಗೆ ಬೆಳೆದರು. ಲಂಕೇಶ ಪತ್ರಿಕೆ ಬಳಗಕ್ಕೆ ಸೇರಿದ ನಂತರ ದೊಡ್ಡ ಲೇಖಕಿಯಾಗಿಯೂ ಗುರುತಿಸಿಕೊಂಡರು. ಈ ಇಳಿವಯಸ್ಸಿನಲ್ಲೂ ಅನ್ಯಾಯ, ಶೋ಼ಷಣೆ ನಡದರೆ ಪ್ರತಿಭಟಿಸುವ ವ್ಯಕ್ತಿತ್ವ. ಅವರ ಜನಪರ ಚಿಂತನೆ ಮತ್ತು ಕಾಳಜಿಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪದ್ಮಿನಿ ನಾಗರಾಜ್, ಕೃಷ್ಣಾಬಾಯಿ ಹಾಗಲವಾಡಿ, ಸುಜಾತಾ ವಿಶ್ವನಾಥ್, ಸುಜಾತಾ ಕೆ, ವಿಶಾಲಾ ಆರಾಧ್ಯ, ರಾಶಜಶ್ರೀ ಕಿಶೋರ್, ಮುಂತಾದ ಕವಯತ್ರಿಯರು ತಮ್ಮ ಕವಿತೆಗಳನ್ನು ಓದಿದರು.

ಲೇಖಕಿಯರ ಸಂಘದ ಖಜಾಂಚಿ ಮಂಜುಳಾ ಶಿವಾನಂದ ಸ್ವಾಗತಿಸಿದರು, ಉಪಾಧ್ಯಕ್ಷೆ ಜಯಲಕ್ಷ್ಮೀ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಗುಣಸಾಗರಿ ನಾಗರಾಜ್ ವಂದಿಸಿದರು.

‍ಲೇಖಕರು Admin

November 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: