ಸೌಂದರ್ಯದ ಅಪರಾವತಾರ…

ನೂತನ ದೋಶೆಟ್ಟಿ

ಕೆಲವು ದಶಕಗಳ ಹಿಂದೆ ಅಲ್ಲಿಗೆ ಹೋಗುವುದು ಮುಜುಗರದ ಹಾಗೂ ಸಂಕೋಚದ ವಿಷಯವಾಗಿತ್ತು. ಒಂದು ದಶಕದ ಅನಂತರದಲ್ಲಿ ಚುಂಬಕದಂತೆ ಆಕರ್ಷಿಸುವ, ಹೆಮ್ಮೆಯ ತಾಣವಾದ ಅದು ಬಹು ಬೇಗನೇ ಅನಿವಾರ್ಯವಾಯಿತು. ಪಾಲಕರಿಗೆ ತಮ್ಮ ಹೆಣ್ಣುಮಕ್ಕಳ ಬಗ್ಗೆ ಆತಂಕ ತರುವ ಸ್ಥಳವಾದರೆ ಹರೆಯದ ಹುಡುಗಿಯರಿಗೆ ಸಂಭ್ರಮದ ಜೊತೆಗೆ ಬಾಯ್ ಫ್ರೆಂಡುಗಳೊಂದಿಗೆ ಕಾಲು ಕೀಳಲು ಸಂಚು ನಡೆಸಹುದಾದ ರೋಮಾಂಚಕ ತಾಣವಾಯಿತು. ಈಗಂತೂ ಅದು ನಿತ್ಯಕರ್ಮದಷ್ಟು ಸಹಜವಾಗಿದೆ. ಇದರ ಸ್ವೀಟ್ ಅಂಡ್ ಶಾರ್ಟ್ ಹೆಸರು ‘ಬ್ಯೂಟಿ ಪಾರ್ಲರ್’.

1980ರ ಸಂದರ್ಭ. ಆಗ ಹಳ್ಳಿಗಳಿಗೂ, ತಾಲ್ಲೂಕು ಕೇಂದ್ರಗಳಿಗೂ, ಸಣ್ಣ ಪಟ್ಟಣಗಳಿಗೂ ಬಹಳ ವ್ಯತ್ಯಾಸವಿರಲಿಲ್ಲ. ಹಳ್ಳಿಗಳಲ್ಲಿ ಬೆಳೆದದ್ದನ್ನು, ದೊರೆಯುವುದನ್ನು ಸಮೀಪದ ಪಟ್ಟಣಗಳಿಗೆ ತಂದು ಮಾರಿ, ಮನೆಯ ಹೆಚ್ಚುವರಿ ಅವಶ್ಯಕತೆಗಳಾದ ಬಟ್ಟೆಬರೆ, ಸಾಬೂನು ಮೊದಲಾದ ಕೆಲ ಸಾಮಾನುಗಳನ್ನು ಅಲ್ಲಿಂದ ಖರೀದಿಸಿಕೊಂಡು ಹೋಗುವುದರಷ್ಟಕ್ಕೆ ವ್ಯಾಪಾರ ವಹಿವಾಟು ಸೀಮಿತವಾಗಿದ್ದ ಕಾಲವದು. ಇರುವುದರಲ್ಲಿ ಸಂತೃಪ್ತಿ ಕಾಣುವುದು ಸಹಜವಾದ ಜಾಯಮಾನವಾಗಿತ್ತು. ಹಪಾಹಪಿ , ಅತೃಪ್ತಿ ಪದಗಳು ಇಲ್ಲಿ ಅಪರಿಚಿತವೇ ಆಗಿದ್ದವು.

ಹೀಗಿದ್ದ ಊರುಗಳಲ್ಲಿ ಸೌಂದರ್ಯ ಪ್ರಜ್ಞೆಯೂ ಸರಳವೇ ಆಗಿತ್ತು. ಕನಕಾಂಬರ, ಮಲ್ಲಿಗೆ, ಡೇರೆ, ಸುರಗಿ ಮೊದಲಾದ ಆಯಾ ಋತುಗಳಲ್ಲಿ ದೊರೆಯುತ್ತಿದ್ದ ಹೂವುಗಳನ್ನು. ಚೆನ್ನಾಗಿ ಎಣ್ಣೆ ಹಚ್ಚಿ ಬಾಚಿದ ತಲೆ ತುಂಬ ಹೆಂಗಸರು, ಮಕ್ಕಳಾದಿಯಾಗಿ ಮುಡಿದು ಸಂಭ್ರಮಿಸುವುದೇ ದೊಡ್ಡ ಸೌಂದರ್ಯ ಪ್ರಜ್ಞೆ. ಮಲ್ಲಿಗೆ ಹೂವಿನ ಋತುವಿನಲ್ಲಿ ಮೊಗ್ಗಿನ ಜಡೆ ಹೆಣೆದುಕೊಂಡು ಊರಿನಲ್ಲಿರುತ್ತಿದ್ದ ಏಕೈಕ ಫೋಟೊ ಸ್ಟುಡಿಯೋದಲ್ಲಿ ಫೋಟೊ ತೆಗೆಸಿಕೊಳ್ಳುವುದೂ ಈ ಪ್ರಜ್ಞೆಯ ಭಾಗವೇ. ಇದರ ಹೊರತಾಗಿ ಮನೆಯಲ್ಲಿ ಮಾಡುತ್ತಿದ್ದ ಕಪ್ಪನ್ನು ಕಣ್ಣಿಗೆ. ನಾಜೂಕಾಗಿ ತೀಡಿಕೊಳ್ಳುವುದು ಅಥವಾ ಆಗಷ್ಟೇ ಅಂಗಡಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕ ಕಾಜಲ್ ಡಬ್ಬಿಯನ್ನು ಕೊಂಡು ಮನೆಯ ಅಂಗಳ ಗುಡಿಸಲು ಇಡುತ್ತಿದ್ದ ಕಡ್ಡಿ ಕಸಬರಿಗೆಯಲ್ಲಿ ಗುಡಿಸಿ ಗುಡಿಸಿ ಚೂಪಾದ ಸಪೂರ ಕಡ್ಡಿಯ ತುದಿಯನ್ನು ಮುರಿದು ತೆಳುವಿನಲ್ಲಿ ತೆಳುವಾದ ಗೆರೆಯನ್ನು ಕಣ್ಣ ರೆಪ್ಪೆಗಳ ಎರಡೂ ಬದಿ ನಯವಾಗಿ ಹಚ್ಚಿಕೊಳ್ಳುವುದು. ಇವೆಲ್ಲ ದಿನವೂ ನಡೆಯುತ್ತಿದ್ದ ಕೆಲಸಗಳೇ ಅಲ್ಲ. ಇಷ್ಟು ಬಿಡುವಿನ ಸಮಯ ಆಗ ಮನೆಯ ಹೆಂಗಳೆಯರು, ಹರೆಯದ ಹೆಣ್ಣುಮಕ್ಕಳಿಗೆ ಸಿಗುತ್ತಿರಲಿಲ್ಲ. ಮನೆಯ ಒಳಗೆ, ಹೊರಗೆ, ಕೊಟ್ಟಿಗೆ, ದನಕರು, ರುಬ್ಬು, ತಿಕ್ಕು, ತೊಳಿ ಬಳಿಗಳಲ್ಲಿ ಬೆಳಗು ಬೈಗಾಗುವುದೇ ತಿಳಿಯುತ್ತಿರಲಿಲ್ಲ. ಮೈಮುರಿದು ದುಡಿದು, ಉಂಡು ಮಲಗಿದರೆ ಕಣ್ತುಂಬ ನಿದ್ದೆ. ಬಹುತೇಕ ಮನೆಗಳಲ್ಲಿ ಮನೆಗೆಲಸದವರ ಗೋಜಿರಲಿಲ್ಲ. ಎಲ್ಲರೂ ಸ್ವಾವಲಂಬಿಗಳೇ. ಶ್ರಾವಣ ಮಾಸದಲ್ಲಿ ಕುಂಕುಮದ ಮನೆಗಳಿಗೆ ಹೋಗುವಾಗ ವರ್ಷದ ಎಲ್ಲಾ ಸಂಭ್ರಮವನ್ನೂ ಆ ಒಂದು ತಿಂಗಳಲ್ಲಿ ಅನುಭವಿಸುವ ಅವಕಾಶ ಒದಗಿ ಬಂದು ಕಣ್ಣ ಕಪ್ಪು, ಶ್ರಿಂಗಾರ್ ಕುಂಕುಮದ ಕರಡಿಗೆ, ಪೌಡರ್, ಸ್ನೋ ಗಳು ಉಳ್ಳವರ ಮನೆಗಳಲ್ಲಿ ಕಪಾಟಿನಿಂದ ಹೊರಬರುತ್ತಿದ್ದವು.

ಕಾಲ ಹೀಗೆ ತಂಗಾಳಿಯಂತೆ ಹಗುರವಾಗಿ ಸಾಗುತ್ತಿದ್ದ ಹೊತ್ತಲ್ಲಿ ಕೆಲ ತಾಲೂಕು ಕೇಂದ್ರಗಳಲ್ಲಿ ‘ಬ್ಯೂಟಿ ಪಾರ್ಲರ್’ ಎಂಬ ಮಾಯಾಜಿಂಕೆ ಅವತರಿಸಿತು. ಆಧುನಿಕತೆಗೆ ಆಗಷ್ಟೇ ತೆರೆದುಕೊಳ್ಳಲು ಸಿದ್ಧವಾಗುತ್ತಿದ್ದ ಪುಟ್ಟ ಪಟ್ಟಣಗಳಲ್ಲಿ ಇದು 60-70ರ ದಶಕದ ಭಾಗ್ಯದ ಬಳೆಗಾರನ ಕೆಲಸಕ್ಕೆ ನೇಮಕಗೊಂಡಿತು. ಆ ಕಾಲದ ಬಳೆಗಾರ ಹೆಂಗಳೆಯರಿಗೆ ಬಳೆ ತೊಡಿಸುವ ನೆಪದಲ್ಲಿ ಪೌಡರ್, ಸ್ನೋ, ಹೇರ್ ಪಿನ್, ಬ್ರಾ, ಎಂಬ ಆಧುನಿಕತೆಯ ಬೀಜವನ್ನು ಬಿತ್ತಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಅವನ ಹಾಗೂ ಅವನ ಮಹಿಳಾ ಗ್ರಾಹಕರ ನಡುವೆ ಅಲಿಖಿತ ಗೌಪ್ಯ ಒಪ್ಪಂದದ ಕಾರಣ ಸನ್ನೆಗಳಲ್ಲೇ ಈ ಒಳ ವ್ಯವಹಾರಗಳನ್ನು ನಡೆಸುವಷ್ಟು ಚಾಣಾಕ್ಷತೆ ಅವರಿಬ್ಬರಿಗೂ ಇತ್ತು. ಮನೆಯ ದುಡಿಯುವ ಒಡೆಯನಿಗೆ ಇದರ ಮೂಗಾಳಿಯೂ ಹತ್ತುತ್ತಿರಲಿಲ್ಲ. ಸಕ್ಕರೆ ಡಬ್ಬಿ, ಕಾಪಿ ಪುಡಿ ಡಬ್ಬಿಗಳೆಂಬ ನವೀನ ಆಹಾರ ನಾಗರಿಕತೆಯಲ್ಲಿ ಹೆಂಗಳೆಯರ ಈ ಆಧುನಿಕತೆಯ ತುಡಿತಕ್ಕೆ ಬೇಕಾದ ಆಯವ್ಯಯ ಮರಿ ಹಾಕುತ್ತಿತ್ತು.

ಹೀಗೆ ಮೊದಲಿಟ್ಟ ಆಧುನಿಕತೆ ಸುಮಾರು 1985ರ ಆಸುಪಾಸಿನಲ್ಲಿ ಬ್ಯೂಟಿ ಪಾರ್ಲರ್‌ಗಳ ಚಿಕ್ಕ ಕೋಣೆಗಳಲ್ಲಿ ಉಸಿರಾಡ ಹತ್ತಿತು. ಆರಂಭದಲ್ಲಿ ಈ ಉಸಿರಾಟ ಕೋಣೆಯ ಹೊರಗೆ ಕೇಳಲಾರದಷ್ಟು ಮಂದವಾಗಿತ್ತು ಎನ್ನುವುದು ಈ ಕಾಲಘಟ್ಟದಲ್ಲಿ ನಗೆಯ ವಸ್ತುವಾದರೂ ಕಾಲದ ಸ್ಥಿತ್ಯಂತರಗಳು ಸಾಮಾಜಿಕ ಬದಲಾವಣೆಯ ಜೊತೆಜೊತೆಗೆ ಆರ್ಥಿಕ ಅಭಿವೃದ್ಧಿಗೂ ಹೇಗೆ ತೆರೆದುಕೊಂಡವು ಎಂಬುದಕ್ಕೆ ಇದು ಉದಾಹರಣೆಯೂ ಆಗಿದೆ.

ಇದೇ ಹೊತ್ತಿಗೆ ಸಿನಿಮಾ ತನ್ನ ಪ್ರಭಾವಲಯವನ್ನು ಸಾಮಾಜಿಕ, ಧಾರ್ಮಿಕ, ರಾಷ್ಟ್ರೀಯ ಭಾವೈಕ್ಯತೆಯಂಥ ವಿಷಯಗಳಿಂದ ವಿಮುಖಗೊಳಿಸಿ ಯುವಜನರ ನಾಡಿಮಿಡಿತವನ್ನು ಸೆರೆಹಿಡಿಯಲಾರಂಭಿಸಿತ್ತು. ಅಲ್ಲಿ ಸೃಷ್ಟಿಯಾದ ನಟ-ನಟಿಯರ ಪ್ರೇಮ, ಪ್ರಣಯಗಳಂಥ ಮಧುರ ಭಾವಗಳು, ಆಂಗ್ರಿ ಯಂಗ್ ಮ್ಯಾನ್ ಮಾದರಿಗಳು ಯುವಲೋಕವನ್ನು ತಲ್ಲಣಗೊಳಿಸಿದವು. ಈ ಹಿಂದಿನ ಸಿನಿಮಾಗಳಲ್ಲಿ ಇರುತ್ತಿದ್ದ ಲಜ್ಜೆ, ನಾಚಿಕೆಯನ್ನು ಪರಸ್ಪರರ ಆಕರ್ಷಣೆ ಆಕ್ರಮಿಸಿಕೊಂಡಿತು. ಒಬ್ಬರನ್ನೊಬ್ಬರು ಆಕರ್ಷಿಸಲು ಅಂದವಾಗಿ ಕಾಣಬೇಕು, ಚಂದದ ಉಡುಗೆ ತೊಡಬೇಕು ಎಂಬ ಪಾಠಗಳನ್ನು ಬೆಳ್ಳಿತೆರೆಯ ಮೇಲೆ ನೋಡಿ ಆನಂದಿಸಿದ ಯುವಜನತೆ ಅದನ್ನು ಶಾಲೆ-ಕಾಲೇಜುಗಳ ಆವರಣಗಳಲ್ಲಿ, ಪಾರ್ಕುಗಳಲ್ಲಿ, ಲೈಬ್ರರಿಗಳಲ್ಲಿ ಸ್ವತಃ ಅಭಿನಯಿಸಿತು. ಹೆಣ್ಣು- ಗಂಡಿನ ಸೆಳೆತಕ್ಕೆ ವೇದಿಕೆ ನಿರ್ಮಿಸಿದ ಸಿನಿಮಾಗಳು ಪರೋಕ್ಷವಾಗಿ ಬ್ಯೂಟಿಪಾರ್ಲರ್ ಉದ್ದಿಮೆ ಬೆಳೆಯಲು ನೆರವಾದವು ಎಂದರೆ ತಪ್ಪಿಲ್ಲ. 90ರ ದಶಕದಿಂದ ಬ್ಯೂಟಿ ಪಾರ್ಲರ್‌ಗಳು ಸಣ್ಣ ಊರು, ಪಟ್ಟಣ, ತಾಲೂಕುಗಳೆನ್ನದೆ ನಾಯಿಕೊಡೆಗಳಂತೆ ಬೆಳೆದಿದ್ದು ಮಾತ್ರವಲ್ಲ, ಅದುವರೆಗೂ ಬ್ಯೂಟಿಪಾರ್ಲರ್‌ಗಳ ಬಗ್ಗೆ ಹೆಂಗಳೆಯರಿಗೆ ಇದ್ದ ಮುಜುಗರದ ಸ್ಥಾನದಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಬೆಳೆಸಿ, ಅಂದ-ಚಂದ, ಒನಪು-ಒಯ್ಯಾರವನ್ನು ಕಲಿಸಿದವು. ಬಿಚ್ಚೋಲೆ ಗೌರಮ್ಮಂದಿರಂತಿದ್ದ ಮಹಿಳೆಯರಿಗೆ ಸೆರಗು ಇಳಿಬಿಟ್ಟು ನಡೆಯಲು ಕಲಿಸಿದವು.

90ರ ದಶಕ, ನಮ್ಮ ದೇಶ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಸಿದ್ಧವಾಗುತ್ತಿದ್ದ ಕಾಲ. ವಿದೇಶಿ ವ್ಯಾಮೋಹದ ಕಾಲವೂ ಹೌದು. ಅದುವರೆಗೆ ಆರ್ಥಿಕವಾಗಿ ಬಲಾಢ್ಯರಾಗಿದ್ದ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ವಿದೇಶಿ ಪ್ರವಾಸ, ವಿದೇಶದಲ್ಲಿ ಓದು ಮಧ್ಯಮ ವರ್ಗದವರಿಗೂ ದೊರೆಯುವಂತಾದದ್ದು ಭಾರತದ ಮದುವೆ ಮಾರುಕಟ್ಟೆಯನ್ನು ಚುರುಕುಗೊಳಿಸಿತು. ವಿದೇಶದಲ್ಲಿ ಉದ್ಯೋಗದಲ್ಲಿರುವ ಗಂಡುಗಳ ಬೆನ್ನಿಗೆ ಹೆಣ್ಣು ಹೆತ್ತವರ ಸಾಲು ಹನುಮಂತನ ಬಾಲದಂತೆ ಬೆಳೆಯಿತು. ಈ ಬೆಳವಣಿಗೆ ಮದುವೆ ಹೆಣ್ಣಿಗೆ ಕೆಲವು ಅರ್ಹತೆಗಳನ್ನು ಹೇರಿತು. ಅವುಗಳಲ್ಲಿ ಮುಖ್ಯವಾದವು ಬಿಳಿ ಬಣ್ಣ, ಸಪೂರ ದೇಹ, ಅಲೆ ಕೂದಲು, ಸುಂದರ ತ್ವಚೆ ಮೊದಲಾದ ದೈಹಿಕ ಅರ್ಹತೆಗಳು. ಇವುಗಳಲ್ಲಿ ಕೆಲವು ದೈವದತ್ತವಾಗಿ ಕೆಲವರಿಗೆ ದೊರಕಿದ್ದರೆ ಅನೇಕ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‌ಗಳಲ್ಲಿ ದಂತದ ಬೊಂಬೆಗಳಂತೆ ಸಿದ್ಧಪಡಿಸಿ ವಿದೇಶದಲ್ಲಿರುವ ಮದುವೆ ಗಂಡುಗಳೆದುರು ಪ್ರದರ್ಶನಕ್ಕೆ ಇಟ್ಟರು. ವಿದೇಶದ ಏಭೋಗ-ಐಸಿರಿಯನ್ನು ಕೇಳಿ, ಚಲನಚಿತ್ರಗಳ ಮೂಲಕ ನೋಡಿ ದಂಗಾಗಿದ್ದ ಹೆಣ್ಣುಗಳು ಪಾಲಕರ ಆಜ್ಞೆಯನ್ನು ಶಿರಸಾವಹಿಸಿ ಮದುವೆ ಮಾರುಕಟ್ಟೆಯಲ್ಲಿ ತಮ್ಮನ್ನು ಬಲಿಪಶುಗಳಾಗಿಸಿಕೊಂಡರು. ಇದು ಭಾರತದ ಮದುವೆ ಮಾರುಕಟ್ಟೆಯನ್ನು ವಿಸ್ತರಿಸಿತು. ಈ ನಂತರದಲ್ಲಿ ಇದುವರೆಗೂ ಹೆಮ್ಮೆಯ, ಘನತೆಯ ಸಂಕೇತವಾಗಿದ್ದ ಬ್ಯೂಟಿಪಾರ್ಲರ್‌ಗಳು ಆಡಂಬರದ, ಅಪಹಾಸ್ಯದ ದ್ಯೋತಕವಾದವು. ಬ್ಯೂಟಿಪಾರ್ಲರ್‌ಗೆ ಹೋಗುವ ಹೆಂಗಳೆಯರ ಚಿತ್ರ – ವಿಚಿತ್ರ ಜೋಕುಗಳು ಜಗತ್ತನ್ನೇ ಸುತ್ತಿದವು. ಆದರೂ ಉದ್ಯಮ ವಿಸ್ತರಿಸುತ್ತಲೇ ಹೋಯಿತು. ಪುರುಷರ ಬ್ಯೂಟಿ ಪಾರ್ಲರ್‌ಗಳೂ ತಲೆ ಎತ್ತಿ ಬಹುಬೇಗ ಸರ್ವವ್ಯಾಪಿಯಾದವು. ಫೇಶಿಯಲ್, ಹೇರ್ ಡೈ, ಐ ಬ್ರೋ, ವ್ಯಾಕ್ಸಿಂಗ್ ಮೊದಲಾದ ಮಹಿಳೆಯರಿಗೆ ಮೀಸಲಾಗಿದ್ದ ಫ್ಯಾಷನ್ ಪ್ರಪಂಚ ಲಿಂಗ ಬೇಧವನ್ನು ಮರೆಯಿತು.

1990ರ ನಂತರದ ಒಂದು ದಶಕ ಭಾರತದ ಮಟ್ಟಿಗೆ ಸುವರ್ಣ ಕಾಲ. ಇದೇ ಹೊತ್ತಿಗೆ ಟಿವಿ ಹಾಗೂ ಜಾಹಿರಾತು ಉದ್ಯಮಗಳು ಅಗಾಧವಾಗಿ ಬೆಳೆದವು. ಇಲ್ಲೆಲ್ಲ ಬ್ಯೂಟಿ ಪಾರ್ಲರ್ ಉದ್ಯಮ ತಾನೇತಾನಾಗಿ ಒಳಹೊಕ್ಕು ನೆಲೆಗೊಂಡಿತು. ಇದುವರೆಗೂ ಐಬ್ರೋ, ಹೇರ್ ಕಟ್, ವ್ಯಾಕ್ಸಿಂಗ್, ಫೇಶಿಯಲ್ ಎಂಬ ನಾಲ್ಕಾರು ಸೀಮಿತ ಸೇವೆಗಳನ್ನು ನೀಡುತ್ತಿದ್ದ ಬ್ಯೂಟಿಪಾರ್ಲರಿನ ಸ್ವರೂಪವೇ ಬದಲಾಯಿತು. ಮುಖದೊಂದಿಗೆ ಕೈ, ಕಾಲು, ದೇಹದ ಅಂಗಾಂಗಗಳನ್ನು ಅಂದಗಾಣಿಸುವ ದೊಡ್ಡ ಉದ್ಯಮವಾಗಿ ಬದಲಾಯಿತು. ಇದು ತಾನು ಬದಲಾಗುವುದರೊಂದಿಗೆ ಸಾಬೂನು, ಸುಗಂಧ ದ್ರವ್ಯ, ಜಾಹೀರಾತು, ಮಾಡೆಲಿಂಗ್, ಆಭರಣ, ಮನರಂಜನಾ ಉದ್ಯಮ ಮೊದಲಾದವನ್ನು ಅಗಾಧವಾಗಿ ಬೆಳೆಸಿದ್ದಲ್ಲದೇ ಮದುವೆ, ಗ್ರಹಪ್ರವೇಶ, ಬಸಿರು – ಬಾಣಂತನ, ಹುಟ್ಟಿದ ಹಬ್ಬ, ಚೌಲ ಮೊದಲಾದ ಖಾಸಗಿ ಕಾರ್ಯಕ್ರಮಗಳಿಗೂ ತಾರಾ ಪಟ್ಟವನ್ನು ತಂದಿತು. ಈ ಎಲ್ಲ ಸಾಮಾಜಿಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿ ಬ್ಯೂಟಿಪಾರ್ಲರ್ ಸೇರಿಕೊಂಡಿತು.

ಒಂದು ಕ್ರಾಂತಿಯನ್ನೇ ಈ ಬ್ಯೂಟಿ ಪಾರ್ಲರ್ ಮಾಡಿತಲ್ಲ! ಅದುವರೆಗೂ ಸೌಂದರ್ಯಪ್ರಜ್ಞೆ ಎನ್ನುವುದು ಮನೆಯೊಡತಿಯ ಸ್ವತ್ತಾಗಿತ್ತು. ಮನೆಯ ಕೆಲಸದವಳು ಮಾಸಲು ಸೀರೆ, ಕೆದರಿದ ಕೂದಲು, ಎಣ್ಣೆ ಬಸಿಯುವ ಮುಖದೊಂದಿಗೆ ಕೆಲಸಕ್ಕೆ ಬಂದರೆನೇ ಮನೆಯೊಡತಿಗೆ ಹಿತ. ಹಾಗಿದ್ದ ಮನೆಕೆಲಸದವಳು ಬ್ಯೂಟಿ ಪಾರ್ಲರ್‌ನಲ್ಲಿ ತನ್ನ ಹುಬ್ಬನ್ನು ನೀಟಾಗಿ ತೀಡಿಕೊಂಡು. ತುಟಿಗೆ ಲಿಪ್ಸ್ಟಿಕ್ ಮೆತ್ತಿ, ಕೂದಲನ್ನು ಎತ್ತಿ ಮುಡಿ ಕಟ್ಟಿ ಕ್ಲಿಪ್ ನಲ್ಲಿ ಬಂಧಿಸಿ ದಿನವಿಡೀ ಒಂದು ಕೂದಲೂ ಕೊಂಕದಂತೆ ಬಾಚಿ, ಘಂ ಎನ್ನುವ ಪಾಂಡ್ಸ್ ಪೌಡರ್ ಪೂಸಿಕೊಂಡು ಮನೆಕೆಲಸಕ್ಕೆ ಬರಲು ಆರಂಭಿಸಿದಾಗ ಕಕ್ಕಾಬಿಕ್ಕಿಯಾದ ಮನೆಯೊಡತಿಗೆ ಅವಳಿಗೆ ಹೆಚ್ಚುವರಿ ಕೆಲಸ ಹೇಳಲೂ ಭಯವಾಗುತ್ತಿತ್ತು. ಒಳಗೊಳಗೆ ತನ್ನ ಸಮಕ್ಕೆ ನಿಂತಳಲ್ಲ ಎಂಬ ಹೇಳಲಾರದ ಸಂಕಟ ಬೇರೆ. ಅನ್ನುವಂತಿಲ್ಲ ಅನುಭವಿಸುವಂತಿಲ್ಲ ಎಂಬ ಇಬ್ಬದಿಯಲ್ಲಿ ಎಷ್ಟೋ ಮನೆಯೊಡತಿಯರು ಬೆಂದು ಹೋದರು. ಶಹರಗಳಲ್ಲಂತೂ ಮನೆಗೆಲಸದವರ ಅನುಕೂಲದಂತೆ ಮನೆಯೊಡತಿ ಬದಲಾಗುವುದು ಅನಿವಾರ್ಯವಾಯಿತು. ಇದಕ್ಕೆ ಪರೋಕ್ಷವಾದ ಒಂದು ಕಾರಣ ಈ ವರ್ಗದ ಜನರಲ್ಲಿ ಬ್ಯೂಟಿ ಪಾರ್ಲರ್ ಬಿತ್ತಿದ ಆತ್ಮವಿಶ್ವಾಸದ ಬೀಜ.

ಇಂದು ಈ ಬ್ಯೂಟಿ ಉದ್ಯಮ ಕೋಟಿಗಳಲ್ಲಿ ತೂಗುತ್ತದೆ. 60 ರ ದಶಕದಲ್ಲಿ ಭಾಗ್ಯದ ಬಳೆಗಾರ ಸದ್ದಿಲ್ಲದೆ ಬಿತ್ತಿದ ಸೌಂದರ್ಯ ಪ್ರಜ್ಞೆಯ ಬೀಜ ಭಾರತದಲ್ಲಿ ಹೆಮ್ಮರವಾಗಿ ಬೆಳೆದಿದ್ದು ಒಂದು ಅಂಕಿ ಅಂಶದ ಪ್ರಕಾರ 2025ರ ಹೊತ್ತಿಗೆ ಅದರ ಬೆಲೆ 30 ಬಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ. ಇದಕ್ಕೆ ಬೆಂಬಲವಾಗಿ ನಿಲ್ಲುವ ಸಾಬೂನು, ಸುಗಂಧ ದ್ರವ್ಯಗಳೇ ಮೊದಲಾದ ಉದ್ಯಮವೂ ಬೃಹತ್ತಾಗಿ ಬೆಳೆದಿದೆ. ಹಾಗೆ ನೋಡಿದರೆ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಬ್ಯೂಟಿ ಪಾರ್ಲರ್ ವಿಷಯದಲ್ಲಿ ಸತ್ಯವೇ ಆಯಿತಲ್ಲ! ಬ್ಯೂಟಿಪಾರ್ಲರ್‌ಗಳನ್ನು ನಡೆಸುವವಳು ಹಾಗೂ ಗ್ರಾಹಕಳು ಎಂಬೀ ಇಬ್ಬರು ಮಹಿಳೆಯರು ಇಂದು ಪ್ರಪಂಚದಾದ್ಯಂತ ಪುರುಷರು ಅನೇಕ ಉದ್ಯಮಗಳನ್ನು ಕಟ್ಟಿ, ಬೆಳೆಸಲು ಕಾರಣೀಭೂತರಾಗಿದ್ದಾರೆ.

2020ರಲ್ಲಿ ಕೊರೊನಾ ಜಗತ್ತನ್ನು ಆಕ್ರಮಿಸಿಕೊಳ್ಳುವವರೆಗೆ ಈ ಉದ್ಯಮದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಮಾಸ್ಕ್ ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿಂದ ಬ್ಯೂಟಿ ಪಾರ್ಲರ್‌ಗಳಿಗೆ ಗರ ಬಡಿಯಿತು. ತುಟಿಗಳ ರಂಗು, ಮಾದಕ ಮುಖಗಳು ಮಾಸ್ಕ್ ಅಡಿಯಲ್ಲಿ ಅನಾಥವಾದವು. ಉಳಿದ ಉದ್ಯಮಗಳಂತೆ ಬ್ಯೂಟಿ ಉದ್ಯಮವೂ ಸೊರಗಿತು. ಆದರೆ ಸೋತು ಕೈಚೆಲ್ಲುವ ಜಾಯಮಾನ ಈ ಉದ್ಯಮದ್ದಲ್ಲ. ಅದಕ್ಕಾಗಿ ತರಹೇವಾರಿ ಮಾಸ್ಕುಗಳನ್ನೇ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕೊರೊನಾ ಅಲೆ ಮತ್ತೆ ಬಂದರೆ, ಮುಖ ಮುಚ್ಚುವ ಮಾಸ್ಕಿನಲ್ಲೇ ಧರಿಸುವವರ ಸೌಂದರ್ಯವನ್ನು ಸೂರೆ ಮಾಡಬಲ್ಲದು ಈ ಬ್ಯೂಟಿ ಉದ್ಯಮ.

ಈ ಮಾತು, ಭಾಗ್ಯದ ಬಳೆಗಾರನ ಕೈಯಲ್ಲಿ ಕದ್ದುಮುಚ್ಚಿ ಸೌಂದರ್ಯವರ್ಧಕಗಳನ್ನು ತರಿಸಿ ಘಮ್ಮೆಂದು ಮತ್ತೇರುವಂತೆ ಪೂಸಿ ಅನಂದಿಸುತ್ತಿದ್ದ ಆ ಕಾಲದ ಹೆಣ್ಣುಗಳಿಗೂ ಈ 21ನೇ ಶತಮಾನದ ಎರಡನೇ ದಶಕದ ಈ ಕಾಲದ ಗ್ರಾಹಕಪ್ರೇಮಿ ಯುಗದ ಅತ್ಯಂತ ಮುಂದುವರೆದ ಹೆಣ್ಣುಗಳಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂಬುದನ್ನು ಧ್ವನಿಸುತ್ತಿರುವುದೇ ಸೋಜಿಗ!

ಬ್ಯೂಟಿ ಈಸ್ ನಾಟ್ ಸ್ಕಿನ್ ಡೀಪ್ ಎಂಬ ಮಾತು ಕೊರೊನಾಘಾತದ ನಂತರದಲ್ಲಿ ಜನರಿಗೆ ಅಲ್ಪ ಮಟ್ಟಿಗಾದರೂ ಅರಿವಾಗಿದೆ. ಆದರೆ ಈ ಅರಿವು ಈಗಾಗಲೇ ದೈತ್ಯವಾಗಿ ಬೆಳೆದು ನಿಂತಿರುವ ಉದ್ದಿಮೆಗಳಿಗೆ ಮರ್ಮಾಘಾತವನ್ನೇ ಮಾಡುತ್ತಿತ್ತೇನೋ. ಅಷ್ಲರಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿ ಉದ್ದಿಮೆ ಇನ್ನಷ್ಟು ಹೊಸ ಆಲೋಚನೆಗಳೊಂದಿಗೆ ಮುನ್ನಡೆದಿದೆ.

‍ಲೇಖಕರು Admin

November 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: